ಪದ್ಯ ೫೩: ಮೋಸದ ಜೂಜಿನ ಫಲವೇನಾಯಿತು?

ಬಿದ್ದನೈ ನಿನ್ನಾತನಿನ್ನೇ
ನೆದ್ದರೈ ದಾಯಿಗರು ಜೂಜನು
ಗೆದ್ದುದಕೆ ಫಲ ಬಂದುದೇ ಸಂಧಾನದಲಿ ಛಲವ
ಹೊದ್ದಿತಕೆ ಹುಲಿಸಾಯ್ತೆ ಬಲುವಗೆ
ಬಿದ್ದಿನೆಂದುಳುಹಿದನೆ ಪವನಜ
ನುದ್ದುರುಟುತನಕೇನನೆಂಬೆನು ಭೂಪ ಕೇಳೆಂದ (ಗದಾ ಪರ್ವ, ೭ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಲೈ ರಾಜ, ನಿನ್ನ ಮಗನು ಬಿದ್ದನು, ದಾಯಾದಿಗಳು ಜಯಶಾಲಿಗಳಾದರು. ಮೋಸದ ಜೂಜನ್ನು ಗೆದ್ದುದಕ್ಕೆ ಫಲ ದೊರೆಯಿತೇ! ಸಂಧಾನವನ್ನು ಮುರಿದುದಕ್ಕೆ ಹುಲಿಸಾಯಿತೇ? ಶತ್ರುವು ತೊಡೆ ಮುರಿದು ಬಿದ್ದನೆಂದು ಭೀಮನು ಅಷ್ಟಕ್ಕೆ ಸುಮ್ಮನೆ ಬಿಟ್ಟನೇ? ಅವನ ಒರಟುತನವನ್ನು ವರ್ಣಿಸಲು ಶಬ್ದಗಳೆಲ್ಲಿವೆ? ಎಂದು ಧೃತರಾಷ್ಟ್ರನನ್ನು ಕೇಳಿದನು.

ಅರ್ಥ:
ಬಿದ್ದು: ಬೀಳು, ಎರಗು; ನಿನ್ನಾತ: ನಿನ್ನ ಮಗ; ಎದ್ದು: ಮೇಲೇಳು; ದಾಯಿಗ: ದಾಯಾದಿ; ಜೂಜು: ಸಟ್ಟ, ಪಗಡೆ; ಗೆದ್ದು: ಜಯಿಸು; ಫಲ: ಪ್ರಯೋಜನ; ಸಂಧಾನ: ಸೇರಿಸುವುದು, ಹೊಂದಿಸುವುದು; ಛಲ: ದೃಢ ನಿಶ್ಚಯ; ಹೊದ್ದು: ಹೊಡೆ; ಬಲು: ಶಕ್ತಿ; ಬಿದ್ದ: ಬೀಳು; ಉಳುಹು: ಬಿಡು; ಪವನಜ: ಭೀಮ; ಉದ್ದುರುತು: ನಯವಿಲ್ಲದ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಬಿದ್ದನೈ +ನಿನ್ನಾತನ್+ಇನ್ನೇನ್
ಎದ್ದರೈ+ ದಾಯಿಗರು +ಜೂಜನು
ಗೆದ್ದುದಕೆ +ಫಲ +ಬಂದುದೇ +ಸಂಧಾನದಲಿ +ಛಲವ
ಹೊದ್ದಿತಕೆ +ಹುಲಿಸಾಯ್ತೆ +ಬಲುವಗೆ
ಬಿದ್ದಿನೆಂದ್+ಉಳುಹಿದನೆ +ಪವನಜನ್
ಉದ್ದುರುಟುತನಕ್+ಏನನೆಂಬೆನು +ಭೂಪ +ಕೇಳೆಂದ

ಅಚ್ಚರಿ:
(೧) ಮೋಸದ ಪ್ರತಿಫಲ – ಜೂಜನು ಗೆದ್ದುದಕೆ ಫಲ ಬಂದುದೇ

ಪದ್ಯ ೧೧: ದುರ್ಯೋಧನನನ್ನು ಹೇಗೆ ಹುರಿದುಂಬಿಸಿದರು?

ರಾಯ ಹದುಳಿಸು ಹದುಳಿಸಕಟಾ
ದಾಯಿಗರಿಗೆಡೆಗೊಟ್ಟೆಲಾ ನಿ
ರ್ದಾಯದಲಿ ನೆಲ ಹೋಯ್ತು ಭೀಮನ ಭಾಷೆ ಸಂದುದಲಾ
ವಾಯುಜನ ಜಠರದಲಿ ತೆಗೆಯಾ
ಜೀಯ ನಿನ್ನನುಜರನು ಪಾರ್ಥನ
ಬಾಯಲುಗಿ ಸೂತಜನನೆಮ್ದರು ಜರೆದು ಕುರುಪತಿಯ (ಶಲ್ಯ ಪರ್ವ, ೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೃಪ ಅಶ್ವತ್ಥಾಮರು, ಅರಸ, ಎಚ್ಚೆತ್ತುಕೋ, ದಾಯಾದಿಗಳಿಗೆ ನೆಲವನ್ನಾಕ್ರಮಿಸಲು ದಾರಿಯಾಯಿತು. ರಾಜ್ಯವು ಅವರಿಗೆ ಸೇರುವುದು ಖಂಡಿತ. ಭೀಮನು ತನ್ನ ಪ್ರತಿಜ್ಞೆಯನ್ನು ಪೂರೈಸಿಕೊಂಡನು. ಏಳು ನಿನ್ನ ತಮ್ಮಂದಿರನ್ನು ಭೀಮನ ಹೊಟ್ಟೆಯಿಂದಲೂ, ಕರ್ಣನನ್ನು ಅರ್ಜುನನ ಬಾಯಿಂದಲೂ ಹೊರಕ್ಕೆ ತೆಗೆ ಎಂದು ಕೌರವನನ್ನು ಹುರಿದುಂಬಿಸಿದರು.

ಅರ್ಥ:
ರಾಯ: ರಾಜ; ಹದುಳಿಸು: ಸಮಾಧಾನ ಗೊಳ್ಳು; ಅಕಟಾ: ಅಯ್ಯೋ; ದಾಯಿಗರಿ: ದಾಯಾದಿ; ಎಡೆ: ಅವಕಾಶ; ನಿರ್ದಾಯದ: ಅಖಂಡ; ನೆಲ: ಭೂಮಿ; ಹೋಯ್ತು: ಕಳಚು; ಭಾಷೆ: ನುಡಿ; ಸಂದು: ಅವಕಾಶ; ವಾಯುಜ: ಭೀಮ; ಜಠರ: ಹೊಟ್ಟೆ; ತೆಗೆ: ಹೊರತರು; ಜೀಯ: ಒಡೆಯ; ಅನುಜ: ತಮ್ಮ; ಜರೆ: ತೆಗಳು; ಉಗಿ: ಹೊರಹಾಕು; ಸೂತ: ಸಾರಥಿ;

ಪದವಿಂಗಡಣೆ:
ರಾಯ +ಹದುಳಿಸು +ಹದುಳಿಸ್+ಅಕಟಾ
ದಾಯಿಗರಿಗ್+ಎಡೆಗೊಟ್ಟೆಲಾ +ನಿ
ರ್ದಾಯದಲಿ +ನೆಲ +ಹೋಯ್ತು +ಭೀಮನ +ಭಾಷೆ +ಸಂದುದಲಾ
ವಾಯುಜನ +ಜಠರದಲಿ+ ತೆಗೆಯಾ
ಜೀಯ +ನಿನ್ನನುಜರನು+ ಪಾರ್ಥನ
ಬಾಯಲ್+ಉಗಿ +ಸೂತಜನನ್+ಎಂದರು+ ಜರೆದು+ ಕುರುಪತಿಯ

ಅಚ್ಚರಿ:
(೧) ಭೀಮ, ವಾಯುಜ – ಭೀಮನನ್ನು ಕರೆದ ಪರಿ
(೨) ರಾಯ, ಕುರುಪತಿ – ಪದ್ಯದ ಮೊದಲ ಮತ್ತು ಕೊನೆ ಪದ, ದುರ್ಯೋಧನನನ್ನು ಕರೆಯುವ ಪರಿ
(೩) ವಾಯುಜ, ನಿನ್ನನುಜ, ಸೂತಜ – ಪದಗಳ ಬಳಕೆ

ಪದ್ಯ ೧೨: ಕರ್ಣನು ಏನೆಂದು ಗುಡುಗಿದನು?

ರಾಯನಾವೆಡೆ ಕೌರವೇಂದ್ರನ
ದಾಯಿಗನ ಬರಹೇಳು ಹಿಂದಣು
ಪಾಯ ಕೊಳ್ಳದು ನಿಮ್ಮ ಭೀಷ್ಮದ್ರೋಣರಾವಲ್ಲ
ಕಾಯಿದೆವು ಕೈಮುಗಿದನಾದರೆ
ಸಾಯಬಲ್ಲರೆ ತಿರುವನೊದೆಯಲಿ
ಸಾಯಕದ ಹಿಳುಕೆನುತ ಬಿಟ್ಟನು ಸೂಠಿಯಲಿ ರಥವ (ಕರ್ಣ ಪರ್ವ, ೧೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ನಿಮ್ಮ ದೊರೆ ಯುಧಿಷ್ಠಿರನೆಲ್ಲಿದ್ದಾನೆ, ಕೌರವನ ದಾಯಾದಿಯಾದ ಅವನನ್ನು ಬರಹೇಳು, ಗೆಲ್ಲಲು ಈ ಹಿಂದೆ ಮಾಡಿದ ಕುತಂತ್ರ ಉಪಾಯಗಳು ಈಗ ನಡೆಯುವುದಿಲ್ಲ, ನಾವೇನು ಭೀಷ್ಮ ದ್ರೋಣರಲ್ಲ. ಅವನು ಕೈಮುಗಿದು ಶರಣಾಗತನಾದರೆ ಕಾಯುತ್ತೇವೆ, ಸಾವನ್ನು ಬಯಸಿದರೆ ಬಾಣವನ್ನು ಬಿಲ್ಲಲ್ಲಿ ಹೂಡಿ ಬಿಡಲಿ ಎನ್ನುತ್ತಾ ವೇಗದಿಂದ ರಥವನ್ನು ಬಿಟ್ಟನು.

ಅರ್ಥ:
ರಾಯ: ದೊರೆ, ರಾಜ; ಆವೆಡೆ: ಎಲ್ಲಿ; ದಾಯಿಗ: ದಾಯಾದಿ; ಬರಹೇಳು: ಆಗಮಿಸು; ಹಿಂದಣ: ಹಿಂದಿನ, ಪುರಾತನ; ಉಪಾಯ: ಯುಕ್ತಿ; ಕೊಳ್ಳದು: ಈಗ ನಡೆಯದು; ಕಾಯು: ತಾಳು, ನಿಧಾನಿಸು; ಕೈಮುಗಿ: ನಮಸ್ಕರಿಸು, ಶರಣಾಗು; ಸಾಯ: ಸಾವು; ತಿರು: ಬಿಲ್ಲಿನ ಹಗ್ಗ, ಹೆದೆ; ಒದೆ: ನೂಕು, ತಳ್ಳು; ಸಾಯಕ: ಬಾಣ, ಶರ; ಹಿಳುಕು: ಬಾಣದ ಹಿಂಭಾಗ; ಬಿಡು: ಹೊರಹಾಕು; ಸೂಠಿ: ವೇಗ, ಚುರುಕುತನ; ರಥ: ಬಂಡಿ;

ಪದವಿಂಗಡಣೆ:
ರಾಯನ್+ಆವೆಡೆ +ಕೌರವೇಂದ್ರನ
ದಾಯಿಗನ +ಬರಹೇಳು +ಹಿಂದಣ
ಉಪಾಯ +ಕೊಳ್ಳದು +ನಿಮ್ಮ +ಭೀಷ್ಮ+ದ್ರೋಣರಾವಲ್ಲ
ಕಾಯಿದೆವು+ ಕೈಮುಗಿದನಾದರೆ
ಸಾಯಬಲ್ಲರೆ+ ತಿರುವನ್+ಒದೆಯಲಿ
ಸಾಯಕದ+ ಹಿಳುಕೆನುತ +ಬಿಟ್ಟನು +ಸೂಠಿಯಲಿ +ರಥವ

ಅಚ್ಚರಿ:
(೧) ಕ ಕಾರದ ಜೋಡಿ ಪದ – ಕಾಯಿದೆವು ಕೈಮುಗಿದನಾದರೆ
(೨) ಸಾಯ – ಪದದ ಬಳಕೆ, ಸಾಯಬಲ್ಲರೆ, ಸಾಯಕ