ಪದ್ಯ ೬೨: ದುರ್ಯೋಧನನೇಕೆ ಭಯಗೊಂಡನು?

ಏನ ಹೇಳುವೆನವನಿಪನ ಮದ
ದಾನೆ ಮುರಿದವು ಭೀಮಸೇನನೊ
ವೈನತೇಯನೊ ಕರಿಗಳೋ ಕಾಳೋರಗನ ದಳವೊ
ಮಾನನಿಧಿ ಮುರಿವಡೆದನೈ ವೈ
ರಾನುಬಂಧದ ಬೇಗುದಿಯ ದು
ಮ್ಮಾನ ದಳವೇರಿದುದು ಹೇರಿತು ಭೀತಿ ಭೂಪತಿಗೆ (ಗದಾ ಪರ್ವ, ೧ ಸಂಧಿ, ೬೨ ಪದ್ಯ)

ತಾತ್ಪರ್ಯ:
ಭೀಮನು ಗರುಡ, ಆನೆಗಳು ಕೃಷ್ಣ ಸರ್ಪಗಳು, ಯಾವಾಗ ಆನೆಗಳು ಮುರಿದುಬಿದ್ದವೋ, ಕೌರವನು ಪರಾಜಿತನಾದನು. ಪಾಂಡವ ವೈರ್ದ ಕುದಿತದ ದುಃಖವು ಹೆಚ್ಚಿ, ಭಯವು ಆವರಿಸಿತು.

ಅರ್ಥ:
ಹೇಳು: ತಿಳಿಸು; ಅವನಿಪ: ರಾಜ; ಮದ: ಅಮಲು; ಆನೆ: ಗಜ; ಮುರಿ: ಸೀಳು; ವೈನತೇಯ: ಗರುಡ; ಕರಿ: ಆನೆ; ಕಾಳೋರಗ: ಕೃಷ್ಣ ಸರ್ಪ; ದಳ: ಸೈನ್ಯ; ಮಾನನಿಧಿ: ಮಾನವನ್ನೇ ಐಶ್ವರ್ಯವಾಗಿಸಿಕೊಂಡವ (ದುರ್ಯೋಧನ); ಮುರಿ: ಸೀಳು; ವೈರ: ಶತ್ರು; ಅನುಬಂಧ: ಸಂಬಂಧ, ವಿಶೇಷ ಪ್ರೀತಿ; ಬೇಗುದಿ: ತೀವ್ರವಾದ ಬೇಗೆ, ಅತ್ಯುಷ್ಣ; ದುಮ್ಮಾನ: ದುಃಖ; ಏರು: ಹೆಚ್ಚಾಗು; ಹೇರು: ಹೊರೆ, ಭಾರ; ಭೂಪತಿ: ರಾಜ;

ಪದವಿಂಗಡಣೆ:
ಏನ +ಹೇಳುವೆನ್+ಅವನಿಪನ+ ಮದ
ದಾನೆ +ಮುರಿದವು +ಭೀಮಸೇನನೊ
ವೈನತೇಯನೊ +ಕರಿಗಳೋ +ಕಾಳೋರಗನ+ ದಳವೊ
ಮಾನನಿಧಿ+ ಮುರಿವಡೆದನೈ +ವೈರ
ಅನುಬಂಧದ +ಬೇಗುದಿಯ+ ದು
ಮ್ಮಾನ +ದಳವೇರಿದುದು +ಹೇರಿತು +ಭೀತಿ +ಭೂಪತಿಗೆ

ಅಚ್ಚರಿ:
(೧) ಹೋಲಿಸುವ ಪರಿ – ಭೀಮಸೇನನೊ ವೈನತೇಯನೊ ಕರಿಗಳೋ ಕಾಳೋರಗನ ದಳವೊ

ಪದ್ಯ ೮: ಕೌರವರ ಜೊತೆಗೆ ಯಾವ ದೇಶದ ಸೈನಿಕರು ಸೇರಿದರು?

ಪಡಿಬಲಕೆ ಹೊಕ್ಕುದು ತ್ರಿಗರ್ತರ
ಗಡಣ ಕೃಪ ಕೃತವರ್ಮರಿಗೆ ಸಂ
ಗಡಿಗನಶ್ವತ್ಥಾಮನೀ ಹೇರಾಳ ದಳಸಹಿತ
ಕೊಡಹಿದರು ಪಾಂಡವಬಲವನವ
ಗಡಿಸಿದರು ಪವಮಾನಜನನ
ಕ್ಕುಡಿಸಿ ಬೆಬ್ಬಳೆವೋಯ್ತು ಭೀಮನ ಭಾರಣೆಯ ಭಟರು (ಶಲ್ಯ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಅವರ ಬೆಂಬಲಕ್ಕೆ ತ್ರಿಗರ್ತ ದೇಶದ ಸೈನಿಕರ ಬಲವು ನುಗ್ಗಿತು. ಅಶ್ವತ್ಥಾಮನು ಕೃಪ ಕೃತವರ್ಮರ ಸಂಗಡಿಗನಲ್ಲವೇ ಎಂದು ನುಗ್ಗಿ ಪಾಂಡವ ಬಲವನ್ನು ತಡೆದು ಭೀಮನನ್ನು ನಿಲ್ಲಿಸಿದರು. ಭೀಮನ ಪರಾಕ್ರಮಿಗಳು ಕಳವಳಗೊಂಡರು.

ಅರ್ಥ:
ಪಡಿಬಲ: ವೈರಿಸೈನ್ಯ; ಹೊಕ್ಕು: ಸೇರು; ತ್ರಿಗರ್ತ: ದೇಶದ ಹೆಸರು; ಗಡಣ: ಗುಂಪು; ಸಂಗಡಿ: ಜೊತೆಗಾರ; ಹೇರಾಳ: ದೊಡ್ಡ, ವಿಶೇಷ; ದಳ: ಸೈನ್ಯ; ಸಹಿತ: ಜೊತೆ; ಕೊಡಹು: ಚೆಲ್ಲು; ಬಲ: ಸೈನ್ಯ; ಅವಗಡಿಸು: ಕಡೆಗಣಿಸು; ಪವಮಾನಜ: ಭೀಮ; ಅಕ್ಕುಡರ್: ಸತ್ವಶಾಲಿ; ಬೆಬ್ಬಳೆ: ಸೋಜಿಗ, ಗಾಬರಿ; ಭಾರಣೆ: ಮಹಿಮೆ, ಗೌರವ; ಭಟ: ಸೈನಿಕ;

ಪದವಿಂಗಡಣೆ:
ಪಡಿಬಲಕೆ +ಹೊಕ್ಕುದು +ತ್ರಿಗರ್ತರ
ಗಡಣ+ ಕೃಪ +ಕೃತವರ್ಮರಿಗೆ+ ಸಂ
ಗಡಿಗನ್+ಅಶ್ವತ್ಥಾಮನ್+ಈ+ ಹೇರಾಳ +ದಳಸಹಿತ
ಕೊಡಹಿದರು +ಪಾಂಡವಬಲವನ್+ಅವ
ಗಡಿಸಿದರು +ಪವಮಾನಜನನ್
ಅಕ್ಕುಡಿಸಿ +ಬೆಬ್ಬಳೆವೋಯ್ತು +ಭೀಮನ +ಭಾರಣೆಯ +ಭಟರು

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭೀಮನ ಭಾರಣೆಯ ಭಟರು

ಪದ್ಯ ೪: ಭೀಮಾರ್ಜುನರನ್ನು ಕೃಷ್ಣನು ಹೇಗೆ ಪತಿಕರಿಸಿದನು?

ತೆಗೆಸು ದಳವನು ಸಾಕು ಬರಿದೇ
ಹೊಗಳುತಿಹೆ ನೀ ನಮ್ಮನೀ ಕಾ
ಳೆಗದೊಳಳಿದುದು ಹಗೆಯೊಳೇಳಕ್ಷೋಹಿಣೀ ಸೇನೆ
ಬಗೆಯದಿರಿದರು ಭೀಮಪಾರ್ಥರು
ಜಗದೊಳದ್ಭುತ ವೀರರಿವರೆಂ
ದಗಧರನು ಪತಿಕರಿಸಿದನು ಪವನಜನ ಫಲುಗುಣನ (ದ್ರೋಣ ಪರ್ವ, ೧೫ ಸಂಧಿ, ೪ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ ನಿನ್ನ ಸೈನ್ಯವನ್ನು ಪಾಳೆಯಕ್ಕೆ ಕಳಿಸು, ನಮ್ಮನ್ನು ಸುಮ್ಮನೆ ಹೊಗಳುತ್ತಿರುವೆ, ಇಂದಿನ ಕಾಳಗದಲ್ಲಿ ಕೌರವರ ಏಳು ಅಕ್ಷೋಹಿಣಿ ಸೇನೆ ಮಡಿಯಿತು. ಭೀಮಾರ್ಜುನರು ಶತ್ರುಗಳನ್ನು ಲೆಕ್ಕಿಸದೆ ಸಂಹರಿಸಿದರು. ಲೋಕದಲ್ಲಿ ಇವರು ಅದ್ಭುತ ವೀರರು ಎಂದು ಭೀಮಾರ್ಜುನರನ್ನು ಹೊಗಳಿ ಅನುಗ್ರಹಿಸಿದನು.

ಅರ್ಥ:
ತೆಗೆ: ಹೊರತರು, ಕಳಿಸು; ದಳ: ಸೈನ್ಯ; ಸಾಕು: ನಿಲ್ಲಿಸು; ಬರಿ: ಕೇವಲ; ಹೊಗಳು: ಪ್ರಶಂಶಿಸು; ಕಾಳೆಗ: ಯುದ್ಧ; ಇಳಿ: ಕೆಳಕ್ಕೆ ಬಾ; ಹಗೆ: ವೈರಿ; ಅಳಿ: ನಾಶ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಸೇನೆ: ಸೈನ್ಯ; ಬಗೆ: ತಿಳಿ; ಇರಿ: ಚುಚ್ಚು; ಜಗ: ಪ್ರಪಂಚ; ಅದ್ಭುತ: ಆಶ್ಚರ್ಯ; ವೀರ: ಪರಾಕ್ರಮಿ; ಅಗಧರ: ಬೆಟ್ಟವನ್ನು ಹೊತ್ತವ (ಕೃಷ್ಣ); ಪತಿಕರಿಸು: ಅನುಗ್ರಹಿಸು; ಪವನಜ: ವಾಯುಪುತ್ರ (ಭೀಮ);

ಪದವಿಂಗಡಣೆ:
ತೆಗೆಸು +ದಳವನು +ಸಾಕು +ಬರಿದೇ
ಹೊಗಳುತಿಹೆ +ನೀ +ನಮ್ಮನ್+ಈ+ ಕಾ
ಳೆಗದೊಳ್+ಅಳಿದುದು +ಹಗೆಯೊಳ್+ಏಳ್+ಅಕ್ಷೋಹಿಣೀ +ಸೇನೆ
ಬಗೆಯದ್+ಇರಿದರು +ಭೀಮ+ಪಾರ್ಥರು
ಜಗದೊಳ್+ಅದ್ಭುತ +ವೀರರ್+ಇವರೆಂದ್
ಅಗಧರನು +ಪತಿಕರಿಸಿದನು +ಪವನಜನ +ಫಲುಗುಣನ

ಅಚ್ಚರಿ:
(೧) ಭೀಮಾರ್ಜುನರನ್ನು ಹೊಗಳುವ ಪರಿ – ಭೀಮಪಾರ್ಥರು ಜಗದೊಳದ್ಭುತ ವೀರರಿವರೆಂ
ದಗಧರನು ಪತಿಕರಿಸಿದನು
(೨) ಭೀಮ ಪಾರ್ಥ, ಪವನಜ ಫಲುಗುಣ – ಭೀಮಾರ್ಜುನರನ್ನು ಕರೆದ ಪರಿ

ಪದ್ಯ ೧: ಧರ್ಮಜನು ಯಾರ ಪಾದವನ್ನು ಅಪ್ಪಿಕೊಂಡನು?

ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣಾರ್ಜುನರು ಬರೆ ಭೂ
ಪಾಲನಂದಿದಿರಾಗಿ ಬಂದನು ಸಕಲ ದಳಸಹಿತ
ಹೇಳಲರಿಯೆನು ಹರುಷದುದಯವ
ನಾಲಿ ಹೂಳಿದವಶ್ರುಜಲದಲಿ
ಮೇಲುವಾಯ್ದಪ್ಪಿದನ ದೇವನು ಪಾದಪಂಕಜವ (ದ್ರೋಣ ಪರ್ವ, ೧೫ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ್ ಕೇಳು, ಕೃಷ್ಣಾರ್ಜುನರು ವಿಜಯಶಾಲಿಗಳಾಗಿ ಹಿಂದಿರುಗಿ ಬರುತ್ತಿರಲು, ಧರ್ಮಜನು ಸಮಸ್ತ ಸೈನ್ಯದೊಡನೆ ಇದಿರಾಗಿ ಬಂದನು. ಅವನಿಗಾದ ಸಂತೋಷವನ್ನು ಹೇಳಲು ಸಾಧ್ಯವಿಲ್ಲ. ಕಣ್ತುಂಬಾ ಆನಂದಾಶ್ರುಗಳು ತುಂಬಿದ್ದವು. ಬೇಗನೆ ಬಂದು ಶ್ರೀಕೃಷ್ಣನ ಪಾದ ಕಮಲಗಳನ್ನು ಅಪ್ಪಿಕೊಂಡನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಬರೆ: ಕೇವಲ; ಭೂಪಾಲ: ರಾಜ; ಇದಿರು: ಎದುರು; ಬಂದು: ಆಗಮಿಸು; ಸಕಲ: ಎಲ್ಲಾ; ದಳ: ಸೈನ್ಯ; ಸಹಿತ: ಜೊತೆ; ಅರಿ: ತಿಳಿ; ಹರುಷ: ಸಂತಸ; ಉದಯ: ಜನನ, ಹೊರತರು; ಆಲಿ: ಕಣ್ಣು; ಹೂಳು: ಮುಳುಗಿಸು; ಅಶ್ರು: ಕಣ್ಣೀರು; ಜಲ: ನೀರು; ದೇವ: ಭಗವಂತ; ಪಾದ: ಚರಣ; ಪಂಕಜ: ಪದ್ಮ; ಮೇಲ್ವಾಯಿ: ಮೇಲೆ ಬೀಳು;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ +ಕೃಷ್ಣಾರ್ಜುನರು +ಬರೆ +ಭೂ
ಪಾಲನಂದ್+ಇದಿರಾಗಿ+ ಬಂದನು +ಸಕಲ +ದಳ+ಸಹಿತ
ಹೇಳಲ್+ಅರಿಯೆನು +ಹರುಷದ್+ಉದಯವನ್
ಆಲಿ+ ಹೂಳಿದವ್+ಅಶ್ರು+ಜಲದಲಿ
ಮೇಲುವಾಯ್ದ್+ಅಪ್ಪಿದನ +ದೇವನು +ಪಾದ+ಪಂಕಜವ

ಅಚ್ಚರಿ:
(೧) ಸಂತಸವನ್ನು ವರ್ಣಿಸುವ ಪರಿ – ಹರುಷದುದಯವ ನಾಲಿ ಹೂಳಿದವಶ್ರುಜಲದಲಿ
(೨) ಧರಿತ್ರೀಪಾಲ, ಭೂಪಾಲ – ಸಮಾನಾರ್ಥಕ ಪದ

ಪದ್ಯ ೨೨: ಧರ್ಮಜನು ಕರ್ಣನ ವೀರತನದ ಬಗ್ಗೆ ಹೇಗೆ ನುಡಿದನು?

ಏನ ಹೇಳುವೆನೆನ್ನ ದಳದಲಿ
ತಾನು ಭೀಮನ ಥಟ್ಟಿನಲಿ ಬಳಿ
ಕೀ ನಕುಲ ಸಹದೇವ ಸಾತ್ಯಕಿ ದ್ರುಪದರೊಡ್ಡಿನಲಿ
ಮಾನನಿಧಿ ರಾಧೇಯನತ್ತಲು
ತಾನೆ ತನುಮಯವಾಯ್ತು ಪಾಂಡವ
ಸೇನ ಬಡ ಸಾಹಸಿಕರೆಣೆಯೇ ಸೂತತನಯಂಗೆ (ಕರ್ಣ ಪರ್ವ, ೧೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅರ್ಜುನ ನಾನು ಏನೆಂದು ಹೇಳಲಿ, ನನ್ನ ಸೇನೆಯ ಜೊತೆ, ಭೀಮನ ಸೈನ್ಯದೆದುರು, ಸಹದೇವ, ಸಾತ್ಯಕಿ ದ್ರುಪದರ ದಳಗಳ ವಿರುದ್ಧ, ಎಲ್ಲಿ ನೋಡಿದರೂ ಅಲ್ಲಿ ಕರ್ಣನೇ ಕಾಣುತ್ತಿದ್ದನು, ಪಾಂಡವ ಸೇನೆಯ ಅಲ್ಪ ವೀರರು ಅವನಿಗೆ ಸರಿಸಮಾನರೇ ಎಂದು ಕರ್ಣನ ಪರಾಕ್ರಮವನ್ನು ಅರ್ಜುನನೆದುರು ಧರ್ಮಜನು ಹೇಳಿದ.

ಅರ್ಥ:
ಹೇಳು: ತಿಳಿಸು; ದಳ: ಸೈನ್ಯ; ಥಟ್ಟು: ಗುಂಪು; ಬಳಿಕ: ನಂತರ; ಒಡ್ಡು: ಸೈನ್ಯ, ಪಡೆ; ಮಾನ: ಮರ್ಯಾದೆ, ಗೌರವ; ನಿಧಿ: ಸಂಪತ್ತು; ರಾಧೇಯ: ಕರ್ಣ; ತನು: ದೇಹ; ಮಯ: ತುಂಬು; ಬಡ: ದುರ್ಬಲ; ಸಾಹಸಿಕ: ಪರಾಕ್ರಮಿ; ಎಣೆ: ಸಮಾನ; ಸೂತ: ರಥವನ್ನು ಓಡಿಸುವವ; ತನಯ: ಮಗ;

ಪದವಿಂಗಡಣೆ:
ಏನ +ಹೇಳುವೆನ್+ಎನ್ನ +ದಳದಲಿ
ತಾನು +ಭೀಮನ +ಥಟ್ಟಿನಲಿ +ಬಳಿ
ಕೀ+ ನಕುಲ +ಸಹದೇವ+ ಸಾತ್ಯಕಿ+ ದ್ರುಪದರ್+ಒಡ್ಡಿನಲಿ
ಮಾನನಿಧಿ +ರಾಧೇಯನ್+ಅತ್ತಲು
ತಾನೆ +ತನುಮಯವಾಯ್ತು +ಪಾಂಡವ
ಸೇನ+ ಬಡ+ ಸಾಹಸಿಕರ್+ಎಣೆಯೇ +ಸೂತತನಯಂಗೆ

ಅಚ್ಚರಿ:
(೧) ಸೂತತನಯ, ಮಾನನಿಧಿ, ರಾಧೇಯ – ಕರ್ಣನಿಗೆ ಬಳಸಿದ ಪದಗಳು
(೨) ದಳ, ಥಟ್ಟು, ಒಡ್ಡು – ಸಾಮ್ಯಾರ್ಥ ಪದಗಳು