ಪದ್ಯ ೧೪: ಉಭಯ ಬಲದವರು ಭೀಮನನ್ನು ಹೇಗೆ ಹೊಗಳಿದರು?

ಗಗನದಲಿ ರಥ ಯೋಜನಾಂತಕೆ
ಚಿಗಿದು ಧರಣಿಯ ಮೇಲೆ ಬೀಳಲು
ನಗುತ ಕರಣವ ಹಾಯ್ಕಿ ಮಂಡಿಯೊಳಿರ್ದನಾ ದ್ರೋಣ
ಜಗದೊಳಾವಭ್ಯಾಸಿಯೋ ತಾ
ಳಿಗೆಯ ತಲ್ಲಣದೊಳಗೆ ನೆಗಹಿನ
ಸುಗಮ ಸಾಹಸನರರೆ ಮಝ ಭಾಪೆಂದುದುಭಯ ಬಲ (ದ್ರೋಣ ಪರ್ವ, ೧೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನು ಎಸೆದ ದ್ರೋಣನ ರಥವು ಒಮ್ದು ಯೋಜನದ ವರೆಗೆ ಹೋಗಿ ಭೂಮಿಯ ಮೇಲೆ ಬಿದ್ದಿತು. ದ್ರೋಣನು ಮಂಡಿ ಹಚ್ಚಿ ನಗುತ್ತಾ ಕುಳಿತಿದ್ದನು. ಉಭಯ ಬಲದವರೂ ಅದಾವ ಅಭ್ಯಾಸದಿಮ್ದ ರಥವನ್ನೆತ್ತಿ ಎಸೆಯುವ ಸಾಹಸ ಬಂದಿತೋ, ಭೀಮ ಭಲೇ ಎಂದು ಹೊಗಳಿದರು.

ಅರ್ಥ:
ಗಗನ: ಬಾನು, ಆಗಸ; ರಥ: ಬಂಡಿ; ಯೋಜನ: ಅಂತ: ಕೊನೆ; ಚಿಗಿ: ಬೆರಳುಗಳಿಂದ ಚಿಮ್ಮಿಸು; ಧರಣಿ: ಭೂಮಿ; ಬೀಳು: ಕುಸಿ; ನಗು: ಹರ್ಷ; ಕರಣ: ಕೆಲಸ; ಹಾಯ್ಕು: ಧರಿಸು, ತೊಡು; ಮಂಡಿ: ಮೊಳಕಾಲು, ಜಾನು; ಜಗ: ಪ್ರಪಂಚ; ಅಭ್ಯಾಸ: ವ್ಯಾಸಂಗ; ತಾಳಿಗೆ: ಗಂಟಲು; ತಲ್ಲಣ: ಅಂಜಿಕೆ, ಭಯ; ನೆಗಹು: ಮೇಲೆತ್ತು; ಸುಗಮ: ನಿರಾಯಾಸ; ಸಾಹಸ: ಪರಾಕ್ರಮ; ಅರರೆ: ಅಬ್ಬಾ; ಮಝ: ಭಲೇ; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಗಗನದಲಿ +ರಥ +ಯೋಜನಾಂತಕೆ
ಚಿಗಿದು +ಧರಣಿಯ +ಮೇಲೆ +ಬೀಳಲು
ನಗುತ +ಕರಣವ +ಹಾಯ್ಕಿ +ಮಂಡಿಯೊಳ್+ಇರ್ದನಾ +ದ್ರೋಣ
ಜಗದೊಳಾವ್+ಅಭ್ಯಾಸಿಯೋ +ತಾ
ಳಿಗೆಯ +ತಲ್ಲಣದೊಳಗೆ +ನೆಗಹಿನ
ಸುಗಮ +ಸಾಹಸನ್+ಅರರೆ +ಮಝ +ಭಾಪೆಂದುದ್+ಉಭಯ +ಬಲ

ಅಚ್ಚರಿ:
(೧)ಭೀಮನನ್ನು ಹೊಗಳಿದ ಪರಿ – ಜಗದೊಳಾವಭ್ಯಾಸಿಯೋ ತಾಳಿಗೆಯ ತಲ್ಲಣದೊಳಗೆ ನೆಗಹಿನ
ಸುಗಮ ಸಾಹಸನರರೆ ಮಝ

ಪದ್ಯ ೧೯: ಕರ್ಣನ ಮೇಲೆ ಆಕ್ರಮಣ ಮಾಡಲು ಅಶ್ವತ್ಥಾಮನು ಹೇಗೆ ಸಿದ್ಧನಾದನು?

ತೆಗೆದು ತಾಳಿಗೆಗಡಿತನಕ ನಾ
ಲಗೆಯ ಕೀಳ್ವೆನು ಮುನಿದು ತ
ನ್ನೋಲಗವ ತೆಗೆಸಲಿ ಕೌರವನು ನಿನಗೊಲಿದು ಪತಿಕರಿಸಿ
ಅಗಣಿತದ ಗರುವರನು ನಿಂದಿಸಿ
ನಗುವೆ ನಿನ್ನನು ಕೊಲುವೆನೆಂದಾ
ಳುಗಳ ದೇವನು ಸೆಳೆದನಶ್ವತ್ಥಾಮ ಖಂಡೆಯವ (ವಿರಾಟ ಪರ್ವ, ೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ನಿನ್ನ ಗಂಟಲಿನವರೆಗೆ ಇರಿದು ನಿನ್ನ ನಾಲಿಗೆಯನ್ನು ಕೀಳುತ್ತೇನೆ, ಔರವನು ನಿನ್ನನ್ನೇ ಮನ್ನಿಸಿ ನನ್ನನ್ನು ಓಲಗದಿಂದ ದೂರಮಾಡಲಿ, ಅತ್ಯಂತ ಮಾನ್ಯರನ್ನು ಅಲ್ಲಗಳೆಯುತ್ತಾ ನಗುವ ನಿನ್ನನ್ನು ಕೊಲ್ಲುತ್ತೇನೆ ಎಂದು ಮಹಾಸುಭಟನಾದ ಅಶ್ವತ್ಥಾಮನು ತನ್ನ ಕತ್ತಿಯನ್ನು ಸೆಳೆದನು.

ಅರ್ಥ:
ತೆಗೆ: ಹೊರತರು; ತಾಳಿಗೆ: ಗಂಟಲು; ಅಡಿ: ಕೆಳಭಾಗ; ನಾಲಗೆ: ಜಿಹ್ವೆ; ಕೀಳು: ಕತ್ತರಿಸು; ಮುನಿ: ಕೋಪಗೊಳ್ಳು; ಓಲಗ: ದರ್ಬಾರು; ಒಲಿ: ಪ್ರೀತಿಸು; ಪತಿಕರಿಸು: ಅನುಗ್ರಹಿಸು; ಅಗಣಿತ: ಅಸಂಖ್ಯಾತ; ಗರುವರು: ಶ್ರೇಷ್ಠರು; ನಿಂದಿಸು: ಅಪಮಾನಗೊಳಿಸು; ನಗು: ಹರ್ಷಿಸು; ಕೊಲು: ಸಾಯಿಸು; ಆಳು: ಸೈನಿಕರ; ದೇವ: ಒಡೆಯ; ಸೆಳೆ: ಜಗ್ಗು, ಎಳೆ; ಖಂಡೆಯ: ಕತ್ತಿ;

ಪದವಿಂಗಡಣೆ:
ತೆಗೆದು +ತಾಳಿಗೆಗ್+ಅಡಿತನಕ +ನಾ
ಲಗೆಯ +ಕೀಳ್ವೆನು +ಮುನಿದು +ತನ್
ಓಲಗವ +ತೆಗೆಸಲಿ +ಕೌರವನು +ನಿನಗೊಲಿದು +ಪತಿಕರಿಸಿ
ಅಗಣಿತದ +ಗರುವರನು +ನಿಂದಿಸಿ
ನಗುವೆ +ನಿನ್ನನು +ಕೊಲುವೆನೆಂದ್
ಆಳುಗಳ +ದೇವನು +ಸೆಳೆದನ್+ಅಶ್ವತ್ಥಾಮ +ಖಂಡೆಯವ

ಅಚ್ಚರಿ:
(೧) ಅಶ್ವತ್ಥಾಮನ ಕೋಪ – ತೆಗೆದು ತಾಳಿಗೆಗಡಿತನಕ ನಾಲಗೆಯ ಕೀಳ್ವೆನು
(೨) ಅಶ್ವತ್ಥಾಮನನು ಬಣ್ಣಿಸಿದ ಪರಿ – ಆಳುಗಳ ದೇವನು

ಪದ್ಯ ೬: ಉತ್ತರನೇಕೆ ಹೆದರಿದನು?

ಕಾಲಕೂಟದ ತೊರೆಯೊ ಮಾರಿಯ
ಗೂಳೆಯವೊ ಮೃತ್ಯುವಿನ ಗಂಟಲ
ತಾಳಿಗೆಯೊ ಭೈರವನ ಥಟ್ಟೋ ಜವನ ಜಂಗುಳಿಯೊ
ಕಾಲರುದ್ರನ ನೊಸಲ ವಹ್ನಿ
ಜ್ವಾಲೆಯೋ ಕೌರವನ ಸೇನಾ
ಜಾಲವೋ ಶಿವಯೆನುತ ಹೆದರಿದನಂದು ಸುಕುಮಾರ (ವಿರಾಟ ಪರ್ವ, ೭ ಸಂಧಿ, ೬ ಪದ್ಯ)

ತಾತ್ಪರ್ಯ:
ಉತ್ತರನು ಕೌರವರ ಸೈನ್ಯವನ್ನು ಕಂಡು ಇದೇನು ಕೌರವನ ಸೈನ್ಯವೋ ಅಥವ ಕಾಲಕೂಟದ ವಿಷದ ನದಿಯೋ, ಮಾರಿದೇವತೆಗಳು ಒಂದು ಜಾಗವನ್ನು ಬಿಟ್ಟು ಆಹಾರಕ್ಕಾಗಿ ಗುಳೇ ಹೊರಟ ರೀತಿಯಿದೆ, ಮೃತ್ಯುವಿನ ಗಂಟಲ ಕಿರುನಾಲಗೆಯೋ, ಭೈರವನ ಪರಿವಾರವೋ, ಯಮನ ಜಂಗುಲೀ, ಕಾಲರುದ್ರನ ಗಣೆಗಣ್ಣಿನ ಉರಿಯ ಜ್ವಾಲೆಯೋ ಎಂಬಂತೆ ಈ ಸೈನ್ಯವು ತೋರುತ್ತಿದೆ ಎಂದು ಚಿಂತಿಸಿ ಉತ್ತರನು ಹೆದರಿದನು.

ಅರ್ಥ:
ಕಾಲಕೂಟ: ವಿಷ, ಗರಳ; ತೊರೆ: ನದಿ; ಮಾರಿ: ಕ್ಷುದ್ರ ದೇವತೆ; ಗೂಳೆ: ಸಾಮೂಹಿಕವಾಗಿ ಊರು ಬಿಟ್ಟು ಹೋಗುವುದು; ಮೃತ್ಯು: ಸಾವು; ಗಂಟಲು: ಕಂಠ; ತಾಳಿಗೆ: ಕಿರುನಾಲಿಗೆ; ಥಟ್ಟು: ಗುಂಪು, ಸಮೂಹ; ಜಂಗುಳಿ: ಗುಂಪು; ನೊಸಲು: ಹಣೆ; ವಹ್ನಿ: ಅಗ್ನಿ; ಜ್ವಾಲೆ: ಬೆಂಕಿ; ಜಾಲ: ಗುಂಪು; ಹೆದರು: ಭಯಗೊಳ್ಳು; ಸುಕುಮಾರ: ಪುತ್ರ; ಜವ: ಯಮ;

ಪದವಿಂಗಡಣೆ:
ಕಾಲಕೂಟದ +ತೊರೆಯೊ +ಮಾರಿಯ
ಗೂಳೆಯವೊ +ಮೃತ್ಯುವಿನ+ ಗಂಟಲ
ತಾಳಿಗೆಯೊ +ಭೈರವನ+ ಥಟ್ಟೋ +ಜವನ+ ಜಂಗುಳಿಯೊ
ಕಾಲರುದ್ರನ+ ನೊಸಲ +ವಹ್ನಿ
ಜ್ವಾಲೆಯೋ +ಕೌರವನ +ಸೇನಾ
ಜಾಲವೋ +ಶಿವ+ಎನುತ +ಹೆದರಿದನ್+ಅಂದು +ಸುಕುಮಾರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾಲಕೂಟದ ತೊರೆಯೊ; ಮಾರಿಯಗೂಳೆಯವೊ; ಮೃತ್ಯುವಿನ ಗಂಟಲ
ತಾಳಿಗೆಯೊ; ಭೈರವನ ಥಟ್ಟೋ ಜವನ ಜಂಗುಳಿಯೊ

ಪದ್ಯ ೨೪: ಮುನಿಗಳು ಮರಣ ಸಮಯದಲ್ಲಿ ಯಾರನ್ನು ನೆನೆದರು?

ಹೇಳಲೇನದು ಮೃತ್ಯುವಿನ ಗೋ
ನಾಳಿಯೊಳಗಂದಿಳಿಯಲೊಲ್ಲದೆ
ಕಾಳು ಮಾಡಿದೆನೇ ಮುರಾರಿಯ ಭಜಿಸಿ ಭಕ್ತಿಯಲಿ
ಬಾಲಕನೊಳವಗುಣವನಕಟಾ
ತಾಲಬಹುದೇ ತಾಯೆ ಮೃತ್ಯುವೆ
ತಾಳಿಗೆಯ ತೆಗೆದೆನ್ನನೊಳಕೊಳ್ಲೆಂದು ಹಲುಬಿದೆನು (ಅರಣ್ಯ ಪರ್ವ, ೧೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಮಾರ್ಕಂಡೇಯ ಮುನಿಗಳು ವಿವರಿಸುತ್ತಾ, ಆಗ ನಾನು ಮರಣಕಾಲ ಬಂದಾಗ ಶ್ರೀ ಹರಿಯನ್ನು ಭಕ್ತಿಯಿಂದ ಭಜಿಸಿ ಮೃತ್ಯುವಿನ ಬಾಯಲ್ಲಿ ಸಿಕ್ಕಿದುದನ್ನು ಏಕಾದರೂ ತಪ್ಪಿಸ್ಕೊಂಡೆನೋ ಏನೋ ತಾಯೇ ಮೃತ್ಯುವೇ ನನ್ನಲ್ಲಿನ್ನು ಅವಗುಣವನ್ನು ಕಂಡು ಏಕೆ ಕುಪಿತಳಾದ ಈಗಲೂ ಬಾಯ್ತೆರೆದು ನನ್ನನ್ನು ನುಂಗು ಎಂದೆನು.

ಅರ್ಥ:
ಹೇಳು: ತಿಳಿಸು; ಮೃತ್ಯು: ಮರಣ; ಗೋನಾಳಿ: ಕುತ್ತಿಗೆಯ ನಾಳ; ಇಳಿ: ಕೆಳಕ್ಕೆ ಬೀಳು; ಒಲ್ಲದೆ: ಬಯಸದೆ; ಕಾಳು: ಕೆಟ್ಟದ್ದು, ಕೀಳಾದುದು; ಮಾಡು: ಆಚರಿಸು; ಭಜಿಸು: ಆರಾಧಿಸು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಬಾಲಕ: ಪುತ್ರ; ಅವಗುಣ: ದುರ್ಗುಣ, ದೋಷ; ಅಕಟ: ಅಯ್ಯೋ; ತಾಳು: ಸಹಿಸು; ತಾಯೆ: ಮಾತೆ; ಮೃತ್ಯು: ಸಾವು; ತಾಳು: ಹೊಂದು, ಪಡೆ; ತೆಗೆ: ಹೊರತರು; ಒಳಕೊಳ್ಳು: ಸೇರಿಸು; ಹಲುಬು: ದುಃಖಪಡು, ಬೇಡಿಕೋ;

ಪದವಿಂಗಡಣೆ:
ಹೇಳಲೇನ್+ಅದು+ ಮೃತ್ಯುವಿನ+ ಗೋ
ನಾಳಿಯೊಳಗ್+ಅಂದ್+ಇಳಿಯಲ್+ಒಲ್ಲದೆ
ಕಾಳು +ಮಾಡಿದೆನೇ +ಮುರಾರಿಯ +ಭಜಿಸಿ +ಭಕ್ತಿಯಲಿ
ಬಾಲಕನೊಳ್+ಅವಗುಣವನ್+ಅಕಟಾ
ತಾಳಬಹುದೇ +ತಾಯೆ +ಮೃತ್ಯುವೆ
ತಾಳಿಗೆಯ +ತೆಗೆದ್+ಎನ್ನನ್+ಒಳಕೊಳ್ಳೆಂದು +ಹಲುಬಿದೆನು

ಅಚ್ಚರಿ:
(೧) ಮೃತ್ಯುವನ್ನು ಆಹ್ವಾನಿಸುವ ಪರಿ – ಮೃತ್ಯುವೆ ತಾಳಿಗೆಯ ತೆಗೆದೆನ್ನನೊಳಕೊಳ್ಲೆಂದು ಹಲುಬಿದೆನು

ಪದ್ಯ ೨೦: ಭೀಮನು ಹೇಗೆ ಹನುಮನ ಬಾಲವನ್ನು ಎತ್ತಲು ಪ್ರಯತ್ನಿಸಿದನು?

ತೆಗೆದು ನಿಂದನು ಭೀಮ ಹೊಯ್ವ
ಳ್ಳೆಗಳ ತಲ್ಲಣವಡಗಲೊಳ ತಾ
ಳಿಗೆಗೆ ಕವಳವ ನೂಕಿದನು ಕರ್ಪುರದ ಹಳುಕುಗಳ
ಡಗೆ ಮರಳೆ ಮರುವಲಗೆ ಗೌಡೊ
ತ್ತುಗಳ ಬಲಿದವಯವದ ಸತ್ರಾ
ಣಿಗಳ ದೇವನು ಠಾವುರಿಯಲೊದಗಿದನು ಬಾಲದಲಿ (ಅರಣ್ಯ ಪರ್ವ, ೧೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭೀಮನು ಹಿಂದಕ್ಕೆ ಸರಿದು ತಾಂಬೂಲವನ್ನೂ, ಪಚ್ಚಕರ್ಪೂರವನ್ನೂ ಬಾಯಿಗೆ ಹಾಕಿಕೊಂಡು ತನ್ನಲ್ಲಾದ ತಲ್ಲಣವನ್ನು ಅಡಗಿಸಿಕೊಂಡನು. ಅವನಲ್ಲಿ ಧಗೆಯು ಮತ್ತೆ ಆವರಿಸಿತು. ಅವನು ಆವುಡೊತ್ತಿ ದೇಹವನ್ನು ಗಟ್ಟಿಮಾಡಿಕೊಂಡು ಠಾವುರಿಯಿಂದ ಬಾಲವನ್ನೆತ್ತಲು ಯತ್ನಿಸಿದನು.

ಅರ್ಥ:
ತೆಗೆ: ಹೊರತರು; ನಿಂದನು: ನಿಲ್ಲು; ಹೊಯ್ವಳ್ಳೆ: ತೇಕುತ್ತಿರುವ ಪಕ್ಕೆಗಳು; ತಲ್ಲಣ: ಅಂಜಿಕೆ, ಭಯ; ಅಡಗು: ಮುಚ್ಚು; ತಾಳಿಗೆ: ಗಂಟಲು; ಕವಳ: ಊಟ; ನೂಕು: ತಳ್ಳು; ಕರ್ಪುರ: ಹಳುಕು: ಚೂರು; ಡಗೆ: ಸೆಕೆ, ಕಾವು; ಮರಳು: ಹಿಂದಿರುಗು; ಮರು: ಮುಂದಿನ; ಗೌಡೊತ್ತು: ಜೋರಾಗಿ ಸರಿಸು; ಬಲಿದ: ಗಟ್ಟಿ; ಅವಯವ: ದೇಹದ ಒಂದು ಭಾಗ, ಅಂಗ; ಸತ್ರಾಣಿ: ಬಲಶಾಲಿ; ದೇವ: ಸುರ; ಠಾವುರಿ: ಒಂದು ಪಟ್ಟು; ಒದಗು: ಲಭ್ಯ, ದೊರೆತುದು; ಬಾಲ: ಪುಚ್ಛ;

ಪದವಿಂಗಡಣೆ:
ತೆಗೆದು+ ನಿಂದನು +ಭೀಮ +ಹೊಯ್ವ
ಳ್ಳೆಗಳ +ತಲ್ಲಣವ್+ಅಡಗಲ್+ಒಳ +ತಾ
ಳಿಗೆಗೆ +ಕವಳವ +ನೂಕಿದನು +ಕರ್ಪುರದ+ ಹಳುಕುಗಳ
ಡಗೆ+ ಮರಳೆ+ ಮರುವಲಗೆ+ ಗೌಡೊ
ತ್ತುಗಳ+ ಬಲಿದ್+ಅವಯವದ +ಸತ್ರಾ
ಣಿಗಳ +ದೇವನು +ಠಾವುರಿಯಲ್+ಒದಗಿದನು +ಬಾಲದಲಿ

ಅಚ್ಚರಿ:
(೧) ಭೀಮನನ್ನು ಸತ್ರಾಣಿಗಳ ದೇವನು ಎಂದು ಕರೆದಿರುವುದು
(೨) ತಿನ್ನುವುದನ್ನು ಚಿತ್ರಿಸಿರುವ ಪರಿ – ಭೀಮ ಹೊಯ್ವಳ್ಳೆಗಳ ತಲ್ಲಣವಡಗಲೊಳ ತಾ
ಳಿಗೆಗೆ ಕವಳವ ನೂಕಿದನು ಕರ್ಪುರದ ಹಳುಕುಗಳ

ಪದ್ಯ ೧: ಪಾಂಡವರು ಕಾಡಿನಲ್ಲಿ ಯಾವ ಪ್ರಾಣಿಗಳನ್ನು ನೋಡಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ಯಮಸುತ ಮುನಿಜನಂಗಳ
ಮೇಳದಲಿ ಹೊರವಂಟು ತನ್ನನುಜಾತರೊಡಗೂಡಿ
ತಾಳಿಗೆಯ ತಲ್ಲಣದ ಗಿರಿಗಳ
ಮೇಲೆ ಚರಿಸುತ ಬಂದು ವಿಪಿನ
ವ್ಯಾಳಗಜ ಶಾರ್ದೂಲ ಸಿಂಹಾದಿಗಳನೀಕ್ಷಿಸುತ (ಅರಣ್ಯ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಯುಧಿಷ್ಠಿರನು ತನ್ನ ತಮ್ಮಂದಿರು ದ್ರೌಪದಿ ಮತ್ತು ಮುನಿಗಳೊಡನೆ ಬಹು ಕಷ್ಟಕರವಾದ ಬೆಟ್ಟಗಳಲ್ಲಿ ಓಡಾಡುತ್ತಾ ಬಂದು ಕಾಡಿನಲ್ಲಿದ್ದ ಸರ್ಪ, ಆನೆ, ಹುಲಿ, ಸಿಂಹ ಮೊದಲಾದ ಪ್ರಾಣಿಗಳನ್ನು ನೋಡಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಸುತ: ಮಗ; ಮುನಿ: ಋಷಿ; ಜನ:
ಮನುಷ್ಯರ ಗುಂಪು; ಮೇಳ: ಗುಂಪು; ಹೊರವಂಟು: ಹೊರಟು; ಅನುಜ: ತಮ್ಮ; ಒಡಗೂಡು: ಜೊತೆ; ತಾಳಿಗೆ: ಗಂಟಲು; ತಲ್ಲಣ: ತಾಪ, ಸಂಕಟ; ಗಿರಿ: ಬೆಟ್ಟ; ಚರಿಸು: ಓಡಾಡು; ವಿಪಿನ: ಅರಣ್ಯ; ವ್ಯಾಳ: ಸರ್ಪ; ಗಜ: ಆನೆ; ಶಾರ್ದೂಲ: ಹುಲಿ; ಸಿಂಹ: ಕೇಸರಿ; ಈಕ್ಷಿಸು: ನೋಡು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಯಮಸುತ +ಮುನಿ+ಜನಂಗಳ
ಮೇಳದಲಿ+ ಹೊರವಂಟು+ ತನ್+ಅನುಜಾತರ್+ಒಡಗೂಡಿ
ತಾಳಿಗೆಯ +ತಲ್ಲಣದ+ ಗಿರಿಗಳ
ಮೇಲೆ +ಚರಿಸುತ+ ಬಂದು +ವಿಪಿನ
ವ್ಯಾಳ+ಗಜ+ ಶಾರ್ದೂಲ +ಸಿಂಹಾದಿಗಳನ್+ಈಕ್ಷಿಸುತ

ಅಚ್ಚರಿ:
(೧) ಕಷ್ಟಕರವಾದುದು ಎಂದು ಹೇಳಲು – ತಾಳಿಗೆಯ ತಲ್ಲಣದ ಗಿರಿಗಳ ಮೇಲೆ ಚರಿಸುತ

ಪದ್ಯ ೯೪: ದ್ರೌಪದಿಯು ತನ್ನ ಪ್ರಶ್ನೆಗೆ ಉತ್ತರವನ್ನು ಯಾರಿಂದ ನಿರೀಕ್ಷಿಸಿದಳು?

ಅಕಟ ಧರ್ಮಜ ಭೀಮ ಫಲುಗುಣ
ನಕುಲ ಸಹದೇವಾದ್ಯರಿರ ಬಾ
ಲಿಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ
ವಿಕಳರಾದಿರೆ ನಿಲ್ಲಿ ನೀವೀ
ಗಕುಟಿಲರಲಾ ಭೀಷ್ಮ ಗುರು ಬಾ
ಹ್ಲಿಕ ಕೃಪಾದಿಗಳುತ್ತರವ ಕೊಡಿಯೆಂದಳಬುಜಾಕ್ಷಿ (ಸಭಾ ಪರ್ವ, ೧೫ ಸಂಧಿ, ೯೪ ಪದ್ಯ)

ತಾತ್ಪರ್ಯ:
ದ್ರೌಪದಿಯು ತನ್ನ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ, ಅಯ್ಯೋ ಯುಧಿಷ್ಠಿರ, ಭೀಮ, ಅರ್ಜುನ, ನಕುಲ, ಸಹದೇವರೇ ನಿಮ್ಮ ಪತ್ನಿಯನ್ನು ಮರಣದ ಗಂಟಲಿಗೆ ಒಪ್ಪಿಸಿ ಕೊಟ್ಟಿರಾ? ಭ್ರಮೆಯಿಂದ ವಿವೇಚನೆಯನ್ನೇ ಕಳೆದುಕೊಂಡಿರಾ? ಹಾಗೆ ಆಗಲಿ, ಆದರೆ ಭೀಷ್ಮ, ದ್ರೋಣ, ಬಾಹ್ಲಿಕ, ಕೃಪನೇ ಮೊದಲಾದವರೇ ನನ್ನ ಪ್ರಶ್ನೆಗೆ ಉತ್ತರವನ್ನು ನೀಡಲಿ ಎಂದು ದ್ರೌಪದಿ ಕೇಳಿದಳು.

ಅರ್ಥ:
ಅಕಟ: ಅಯ್ಯೋ; ಆದಿ: ಮೊದಲಾಗಿ; ಬಾಲಕಿ: ಹೆಣ್ಣು; ಒಪ್ಪು: ಸಮ್ಮತಿ; ಕೊಡು: ನೀಡು; ಮೃತ್ಯು: ಸಾವು; ತಾಳಿಗೆ: ಗಂಟಲು; ವಿಕಳ: ಭ್ರಮೆ, ಭ್ರಾಂತಿ, ಖಿನ್ನತೆ; ಕುಟಿಲ: ಮೋಸ; ಉತ್ತರ: ಪರಿಹಾರ; ಕೊಡಿ: ನೀಡಿ; ಅಬುಜಾಕ್ಷಿ: ಕಮಲದ ಕಣ್ಣಿನವಳು, ಹೆಣ್ಣು (ದ್ರೌಪದಿ)

ಪದವಿಂಗಡಣೆ:
ಅಕಟ +ಧರ್ಮಜ +ಭೀಮ +ಫಲುಗುಣ
ನಕುಲ +ಸಹದೇವ+ಆದ್ಯರಿರ+ ಬಾ
ಲಿಕಿಯನ್+ಒಪ್ಪಿಸಿ +ಕೊಟ್ಟಿರೇ +ಮೃತ್ಯುವಿನ +ತಾಳಿಗೆಗೆ
ವಿಕಳರಾದಿರೆ+ ನಿಲ್ಲಿ+ ನೀವೀಗ್
ಅಕುಟಿಲರಲಾ +ಭೀಷ್ಮ +ಗುರು+ ಬಾ
ಹ್ಲಿಕ+ ಕೃಪಾದಿಗಳ್+ಉತ್ತರವ+ ಕೊಡಿ+ಎಂದಳ್+ಅಬುಜಾಕ್ಷಿ

ಅಚ್ಚರಿ:
(೧) ದ್ರೌಪದಿಯ ಸಂಕಟ – ಬಾಲಿಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ,
ವಿಕಳರಾದಿರೆ
(೨) ದ್ರೌಪದಿಯನ್ನು ಕರೆದ ಪರಿ – ಬಾಲಕಿ, ಅಬುಜಾಕ್ಷಿ

ಪದ್ಯ ೪೧: ಭೂಮಿಯನ್ನು ವರಾಹಾವತಾರದಲ್ಲಿ ಕೃಷ್ಣನು ಹೇಗೆ ರಕ್ಷಿಸಿದ?

ತೂಳಿದನು ದಂಡೆಯಲಿ ದೈತ್ಯನ
ಸೀಳಿದನು ದಿಕ್ಕರ ಫಣೀಂದ್ರರ
ಮೇಲೆ ಧರಣಿಯ ನಿಲಿಸಿದನು ಸಂತವಿಸಿದನು ಜಗವ
ಹೇಳಲಜ ರುದ್ರಾಮರೇಂದ್ರರ
ತಾಳಿಗೆಗಳೊಣಗಿದವು ಭಂಗಿ ಛ
ಡಾಳಿಸಿತಲಾ ಚೈದ್ಯ ಭೂಪತಿಗೆಂದನಾ ಭೀಷ್ಮ (ಸಭಾ ಪರ್ವ, ೧೦ ಸಂಧಿ, ೪೧ ಪದ್ಯ)

ತಾತ್ಪರ್ಯ:
ಹಿರಣ್ಯಾಕ್ಷನನ್ನು ಬೆನ್ನಟ್ಟಿ ಅವನನ್ನು ಸಂಹರಿಸಿದನು. ಆದಿಶೇಷ ಮತ್ತು ಅಷ್ಟದಿಗ್ಗಜರ ಮೇಲೆ ಭೂಮಿಯನ್ನು ನಿಲ್ಲಿಸಿ ಜಗತ್ತನ್ನು ಸಂತೋಷಪಡಿಸಿದನು. ಅವನ ಮಹಿಮೆಯನ್ನು ಹೇಳಲಿ ಹೋಗಿ ಬ್ರಹ್ಮ, ರುದ್ರ, ದೇವೇಂದ್ರರ ಗಂಟಲು ಒಣಗಿತು. ಶಿಶುಪಾಲನಿಗೆ ಭಂಗಿಯ ಮತ್ತು ಹೆಚ್ಚಾಗಿದೆ ಎಂದು ಭೀಷ್ಮರು ನುಡಿದರು.

ಅರ್ಥ:
ತೂಳು:ಬೆನ್ನಟ್ಟು, ಹಿಂಬಾಲಿಸು; ದಂಡೆ: ಹತ್ತಿರ, ಸಮೀಪ; ದೈತ್ಯ: ರಾಕ್ಷಸ; ಸೀಳು: ಕತ್ತರಿಸು; ದಿಕ್ಕರ: ದಿಕ್ಕಿನ ತಲೆ; ಫಣೀಂದ್ರ: ಆದಿಶೇಷ; ಮೇಲೆ: ತುದಿ, ಅಗ್ರಭಾಗ; ಧರಣಿ: ಭೂಮಿ; ನಿಲಿಸು: ಸ್ಥಾಪಿಸು; ಸಂತವಿಸು: ಸಂತೋಷಪಡು; ಜಗ: ಜಗತ್ತು; ಹೇಳು: ತಿಳಿಸು; ಅಜ: ಬ್ರಹ್ಮ; ರುದ್ರ: ಶಿವ; ಅಮರೇಂದ್ರ: ದೇವತೆಗಳ ರಾಜ, ಇಂದ್ರ; ತಾಳಿಗೆ: ಗಂಟಲು; ಒಣಗು: ಬರಡಾಗು; ಭಂಗಿ: ಬಾಗು, ತಿರುವು, ಮುರಿ; ಛಡಾಳಿಸು: ವಿರೋಧಿಸು, ಪ್ರತಿಭಟಿಸು; ಚೈದ್ಯ: ಶಿಶುಪಾಲ; ಭೂಪತಿ: ರಾಜ;

ಪದವಿಂಗಡಣೆ:
ತೂಳಿದನು +ದಂಡೆಯಲಿ +ದೈತ್ಯನ
ಸೀಳಿದನು +ದಿಕ್ಕರ +ಫಣೀಂದ್ರರ
ಮೇಲೆ +ಧರಣಿಯ +ನಿಲಿಸಿದನು +ಸಂತವಿಸಿದನು +ಜಗವ
ಹೇಳಲ್+ಅಜ +ರುದ್ರ+ಅಮರೇಂದ್ರರ
ತಾಳಿಗೆಗಳ್+ಒಣಗಿದವು +ಭಂಗಿ +ಛ
ಡಾಳಿಸಿತಲಾ +ಚೈದ್ಯ +ಭೂಪತಿಗೆಂದನಾ +ಭೀಷ್ಮ

ಅಚ್ಚರಿ:
(೧) ತೂಳಿ, ಸೀಳಿ, ತಾಳಿ, ಛಡಾಳಿ – ಪ್ರಾಸ ಪದಗಳು
(೨) ಆಯಾಸ ಗೊಂಡರು ಎಂದು ಹೇಳಲು – ತಾಳಿಗೆಗಳೊಣಗಿದವು

ಪದ್ಯ ೧: ಧರ್ಮಜನ ಅರ್ಜುನನ ಮಿಲನ ಹೇಗಾಯಿತು?

ಕೇಳು ಧೃತರಾಷ್ಟ್ರಾವನಿಪ ಭೂ
ಪಾಲನನು ಸಾಮದಲಿ ಮುರರಿಪು
ಬೋಳವಿಸಿ ಭಾವಜ್ಞ ನಂದಿಸಿದನು ಮನೋವ್ಯಥೆಯ
ಮೇಲುಸುರ ಬಿಕ್ಕುಳಿನ ಬಿಗುಹಿನ
ತಾಳಿಗೆಯ ನೀರುಗಳ ಮುಕ್ಕುಳಿ
ನಾಲಿಗಳ ನರನಾಥ ತೆಗೆದಪ್ಪಿದನು ಫಲುಗುಣನ (ಕರ್ಣ ಪರ್ವ, ೧೮ ಸಂಧಿ, ೧ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ವಿವರಿಸುತ್ತಾ, ಎಲೈ ರಾಜನೇ ಕೇಳು, ಭಾವಜ್ಞನಾದ ಕೃಷ್ಣನು ಸಾಮೋಪಾಯದಿಂದ ಧರ್ಮಜನ ಮನಸ್ಸಿನ ವ್ಯಥೆಯನ್ನು ಕಳೆದನು. ನಿಟ್ಟುಸಿರು ಬಿಡುತ್ತಾ, ಬಿಕ್ಕುಳಿಸುತ್ತಾ, ಗಂಟಲು ಕಟ್ಟಿ ಗದ್ಗದಿತನಾಗಿ ಕಣ್ಣೀರು ಸುರಿಸುತ್ತಾ ಧರ್ಮಜನು ಅರ್ಜುನನನ್ನು ಆಲಂಗಿಸಿದನು.

ಅರ್ಥ:
ಕೇಳು: ಆಲಿಸು ಅವನಿಪ: ರಾಜ; ಭೂಪಾಲ: ರಾಜ; ಸಾಮ: ಒಡಂಬಡಿಕೆ, ರಾಜಿ, ಶಾಂತಗೊಳಿಸು; ಮುರರಿಪು: ಕೃಷ್ಣ; ಬೋಳೈಸು: ಸಮಾಧಾನಪಡಿಸು; ಭಾವಜ್ಞ: ಜ್ಞಾನಿ; ನಂದಿಸು: ಶಮನಗೊಳಿಸು; ಮನೋವ್ಯಥೆ: ಮನಸ್ಸಿನ ಯಾತನೆ; ಮೇಲುಸುರ: ನಿಟ್ಟುಸಿರು; ಬಿಕ್ಕುಳು: ಬಿಕ್ಕು; ಬಿಗುಹು:ಗಟ್ಟಿ, ಕಷ್ಟ; ತಾಳಿಗೆ: ಗಂಟಲು; ಆಲಿ: ಕಣ್ಣು; ನೀರು: ಜಲ; ಮುಕ್ಕುಳಿ: ತುಂಬಿದ; ನರನಾಥ: ರಾಜ; ಅಪ್ಪು: ಅಪ್ಪುಗೆ, ಆಲಂಗಿಸು;

ಪದವಿಂಗಡಣೆ:
ಕೇಳು+ ಧೃತರಾಷ್ಟ್ರ+ಅವನಿಪ +ಭೂ
ಪಾಲನನು +ಸಾಮದಲಿ +ಮುರರಿಪು
ಬೋಳವಿಸಿ+ ಭಾವಜ್ಞ +ನಂದಿಸಿದನು +ಮನೋವ್ಯಥೆಯ
ಮೇಲುಸುರ +ಬಿಕ್ಕುಳಿನ+ ಬಿಗುಹಿನ
ತಾಳಿಗೆಯ +ನೀರುಗಳ +ಮುಕ್ಕುಳಿನ್
ಆಲಿಗಳ +ನರನಾಥ +ತೆಗೆದಪ್ಪಿದನು +ಫಲುಗುಣನ

ಅಚ್ಚರಿ:
(೧) ಅವನಿಪ, ಭೂಪಾಲ, ನರನಾಥ – ಸಮನಾರ್ಥಕ ಪದ
(೨) ದೂರಮಾಡಿದನು ಎಂದು ಹೇಳಲು ನಂದಿಸು ಪದದ ಬಳಕೆ
(೩) ಭಾವನೆಗಳು ಕೂಡಿ ಬಂದಾಗುವ ಚಿತ್ರಣ: ೩-೬ ಸಾಲು

ಪದ್ಯ ೬: ಉತ್ತರನ ಬಳಿ ಬಂದ ಗೋಪಾಲಕನು ಏನು ನಿವೇದಿಸಿದನು?

ಬೆಗಡು ಮುಸುಕಿದ ಮುಖದ ಭೀತಿಯ
ಢಗೆಯ ಹೊಯ್ಲಿನ ಹೃದಯ ತುದಿನಾ
ಲಗೆಯ ತೊದಳಿನ ನುಡಿಯ ಬೆರಗಿನ ಬರತ ತಾಳಿಗೆಯ
ಆಗಿವ ಹುಯ್ಯಲುಗಾರ ಬಹಳೋ
ಲಗಕೆ ಬಂದನು ನೃಪ ವಿರಾಟನ
ಮಗನ ಕಾಲಿಂಗೆರಗಿದನು ದೂರಿದನು ಕಳಕಳವ (ವಿರಾಟ ಪರ್ವ, ೬ ಸಂಧಿ, ೬ ಪದ್ಯ)

ತಾತ್ಪರ್ಯ:
ಗೋಪಾಲಕನು ಉತ್ತರನ ಆಸ್ಥಾನಕ್ಕೆ ಬಂದ. ಮುಖದಲ್ಲಿ ಭಯವು ಆವರಿಸಿದೆ. ಆ ಭೀತಿಯ ತಾಪದಿಂದ ಎದೆ ಹೊಡೆದುಕೊಳ್ಳುತ್ತ್ದಿದೆ; ತುದಿನಾಲಗೆಯಲ್ಲಿ ತೊದಲು ಮಾತು ಬರುತ್ತಿವೆ. ಅಂಗಳು ಒಣಗಿದೆ; ಭಯದಿಂದ ಉತ್ತರನ ಮುಂದೆ ಗೋಪಾಲಕನು ಮೊರೆಯಿಡುತ್ತಿದ್ದಾನೆ.

ಅರ್ಥ:
ಬೆಗಡು:ಭಯ, ಅಂಜಿಕೆ; ಮುಸುಕು: ಆವರಿಸು; ಮುಖ: ಆನನ; ಭೀತಿ: ಭಯ; ಢಗೆ: ಕಾವು, ದಗೆ; ಹೊಯ್ಲು: ಏಟು, ಹೊಡೆತ; ಹೃದಯ: ಎದೆ, ವಕ್ಷ; ತುದಿ: ಅಗ್ರ;ನಾಲಗೆ: ಜಿಹ್ವೆ; ತೊದಳು: ಸ್ವಷ್ಟವಾಗಿ ಮಾತಾಡದಿರುವುದು; ನುಡಿ: ಮಾತು; ಬೆರಗು: ಆಶ್ಚರ್ಯ; ಬರ: ಕ್ಷಾಮ; ಹುಯ್ಯಲು: ಪೆಟ್ಟು, ಹೊಡೆತ; ಬಹಳ: ತುಂಬ; ಓಲಗ: ದರ್ಬಾರು; ಬಂದನು: ಆಗಮಿಸಿದನು; ನೃಪ: ರಾಜ; ಮಗ: ಸುತ; ಕಾಲು: ಪಾದ; ಎರಗು: ನಮಸ್ಕರಿಸು; ದೂರು: ಮೊರೆ, ಅಹವಾಲು; ಕಳವಳ: ಚಿಂತೆ, ಗೊಂದಲ; ತಾಳಿಗೆ: ಗಂಟಲು;

ಪದವಿಂಗಡಣೆ:
ಬೆಗಡು+ ಮುಸುಕಿದ +ಮುಖದ +ಭೀತಿಯ
ಢಗೆಯ +ಹೊಯ್ಲಿನ +ಹೃದಯ +ತುದಿ+ನಾ
ಲಗೆಯ +ತೊದಳಿನ+ ನುಡಿಯ +ಬೆರಗಿನ +ಬರತ +ತಾಳಿಗೆಯ
ಆಗಿವ +ಹುಯ್ಯಲುಗಾರ+ ಬಹಳ
ಓಲಗಕೆ +ಬಂದನು +ನೃಪ +ವಿರಾಟನ
ಮಗನ +ಕಾಲಿಂಗ್+ಎರಗಿದನು +ದೂರಿದನು +ಕಳಕಳವ

ಅಚ್ಚರಿ:
(೧) ಬೆಗಡು, ಭೀತಿ – ಸಮನಾರ್ಥಕ ಪದ
(೨) ಹೆದರಿದ ಮನುಷ್ಯನ ಸ್ಥಿತಿಯನ್ನು ವರ್ಣಿಸುವ ಪದ್ಯ –
ಬೆಗಡು ಮುಸುಕಿದ ಮುಖ; ಭೀತಿಯ ಢಗೆಯ ಹೊಯ್ಲಿನ ಹೃದಯ; ತುದಿನಾಲಿಗೆಯ ತೊದಳಿನ ನುಡಿ; ಬೆರಗಿನ ಬರತ ತಾಳಿಗೆಯ