ಪದ್ಯ ೩೭: ಸೈಂಧವನ ಮೇಲೆ ಯಾವ ಬಾಣ ಪ್ರಯೋಗಿಸಲು ಕೃಷ್ಣನು ಹೇಳಿದನು?

ಹೊಲಬುದಪ್ಪಿದ ತಳಪಟದ ಹೆ
ಬ್ಬುಲಿಯವೊಲು ನಿನ್ನಾತ ಸಿಲುಕಿದ
ನಿಲುಕಿ ನೋಡಿದನೆಲ್ಲಿ ತೋರರ್ಜುನನನೆನಗೆನುತ
ಉಲಿಯೆ ಸೈಂಧವನಿತ್ತ ಪಾರ್ಥನ
ಮುಳಿದು ಜರೆದನು ಕೃಷ್ಣನಹಿತನ
ತಲೆಗೆ ಹರಹಿಡಿವಂಬ ತೊಡು ತೊಡು ಬೇಗ ಮಾಡೆಂದ (ದ್ರೋಣ ಪರ್ವ, ೧೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ದಾರಿತಪ್ಪಿ ಕಾಡಿನಿಂದ ಮೈದಾನಕ್ಕೆ ಬಂದ ಹೆಬ್ಬುಲಿಯಂತೆ ಸೈಂಧವನು ಕಾಲನ್ನೂರಿ ನಿಲುಕಿ ನೋಡಿ, ಎಲ್ಲಿದ್ದಾನೆ ಅರ್ಜುನನನ್ನು ನನಗೆ ತೋರಿಸಿ ಎಂದು ಅಣುಕಿಸಲು, ಕೃಷ್ಣನು ಅರ್ಜುನನನ್ನು ಜರೆದು ಸೈಂಧವನ ತಲೆಗೆ ಶಿವನು ಕೊಟ್ಟ ಪಾಶುಪತಾಸ್ತ್ರವನ್ನು ಪ್ರಯೋಗಿಸು, ಬೇಗ ಮಾಡು ಎಂದು ಹೇಳಿದನು.

ಅರ್ಥ:
ಹೊಲಬು: ದಾರಿ, ಪಥ, ಮಾರ್ಗ; ತಪ್ಪು: ಸರಿಯಿಲ್ಲದ್ದು; ತಳಪಟ: ಸೈನ್ಯ, ಯುದ್ಧ ಬಯಲು; ಹೆಬ್ಬುಲಿ: ದೊಡ್ಡಹುಲಿ; ಸಿಲುಕು: ಬಂಧನಕ್ಕೊಳಗಾದುದು; ನಿಲುಕು: ಕೈಚಾಚಿ ಹಿಡಿ, ಎಟುಕಿಸಿಕೊಳ್ಳು; ನೋಡು: ವೀಕ್ಷಿಸು; ತೋರು: ಗೋಚರಿಸು; ಉಲಿ: ಶಬ್ದ; ಮುಳಿ: ಸಿಟ್ಟು, ಕೋಪ; ಜರೆ: ಬಯ್ಯು; ಅಹಿತ: ವೈರಿ; ತಲೆ: ಶಿರ; ಹರಹು: ವಿಸ್ತಾರ, ವೈಶಾಲ್ಯ; ತೊಡು: ಧರಿಸು; ಬೇಗ: ತ್ವರಿತ;

ಪದವಿಂಗಡಣೆ:
ಹೊಲಬು+ತಪ್ಪಿದ +ತಳಪಟದ +ಹೆ
ಬ್ಬುಲಿಯವೊಲು +ನಿನ್ನಾತ+ ಸಿಲುಕಿದ
ನಿಲುಕಿ+ ನೋಡಿದನ್+ಎಲ್ಲಿ +ತೋರ್+ಅರ್ಜುನನನ್+ಎನಗೆನುತ
ಉಲಿಯೆ +ಸೈಂಧವನ್+ಇತ್ತ +ಪಾರ್ಥನ
ಮುಳಿದು +ಜರೆದನು +ಕೃಷ್ಣನ್+ಅಹಿತನ
ತಲೆಗೆ +ಹರಹಿಡಿವ್+ಅಂಬ +ತೊಡು +ತೊಡು +ಬೇಗ +ಮಾಡೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹೊಲಬುದಪ್ಪಿದ ತಳಪಟದ ಹೆಬ್ಬುಲಿಯವೊಲು
(೨) ಪಾಶುಪತಾಸ್ತ್ರ ಎಂದು ಹೇಳಲು – ಹರಹಿಡಿವಂಬ ಪದದ ಬಳಕೆ

ಪದ್ಯ ೮: ಭೀಮನ ಸೈನ್ಯವು ಹೇಗೆ ಮುಂದುವರೆಯಿತು?

ಕೆಲಕೆ ಹೊಳೆದವು ಕಡುಗುದುರೆ ನೆಲ
ನಳುಕೆ ನಡೆದವು ದಂತಿ ದೆಸೆಗಳ
ಹೊಲಿಗೆ ಹರಿಯದೆ ಮಾಣವೆನೆ ಹೊಕ್ಕವು ರಥಾನೀಕ
ತಳಪಟದ ತುಂಬಿತ್ತು ಪಯದಳ
ವುಲಿವ ಕಹಳೆಯ ಚಂಬುಕನ ಕಳ
ಕಳಿಕೆ ಮಿಗೆ ಕೈಕೊಂಡುದನಿಲಕುಮಾರಕನ ಸೇನೆ (ದ್ರೋಣ ಪರ್ವ, ೧೨ ಸಂಧಿ, ೮ ಪದ್ಯ)

ತಾತ್ಪರ್ಯ:
ಪಕ್ಕದಲ್ಲಿ ಕುದುರೆಗಳು ಶೋಭಿಸಿದವು ಆನೆಗಳು ನೆಲವು ಅಳುಕುವಂತೆ ಮುಂದುವರೆದವು. ಭೂಮಿಯ ಹೊಲಿಗೆ ಹರಿಯುವುದೆಂಬಂತೆ ರಥಗಲು ಹರಿದವು. ಯುದ್ಧರಂಗವನ್ನು ಕಾಲುದಳ ತುಂಬಿತು, ಚಂಬುಕ ಕಹಳೆಗಳು ಮೊರೆದವು. ಭೀಮನ ಸೈನ್ಯವು ಮಹಾಶಬ್ದ ಮಾಡುತ್ತಾ ಹೊರಟಿತು.

ಅರ್ಥ:
ಕೆಲ: ಪಕ್ಕ; ಹೊಳೆ: ಪ್ರಕಾಶಿಸು; ಕಡು: ಬಹಳ; ಕುದುರೆ: ಅಶ್ವ; ನೆಲ: ಭುಮಿ; ಅಳುಕು: ನಡುಗು; ನಡೆ: ಚಲಿಸು; ದಂತಿ: ಆನೆ; ದೆಸೆ: ದಿಕ್ಕು; ಹೊಲಿ:ಹೆಣೆ; ಹರಿ: ಸೀಳು; ಮಾಣು: ನಿಲ್ಲಿಸು; ಹೊಕ್ಕು: ಸೇರು; ರಥ: ಬಂಡಿ; ಅನೀಕ: ಗುಂಪು, ಸೈನ್ಯ; ತಳಪಟ: ಸೋಲು; ತುಂಬು: ಭರ್ತಿ; ಪಯದಳ: ಕಾಲಾಳು, ಸೈನಿಕ; ಉಲಿ: ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಚಂಬಕ: ಕಹಳೆ ವಾದ್ಯ; ಕಳಕಳಿ:ಆಸ್ಥೆ, ಆಸಕ್ತಿ; ಮಿಗೆ: ಹೆಚ್ಚು; ಅನಿಲಕುಮಾರ: ವಾಯು ಪುತ್ರ (ಭೀಮ); ಸೇನೆ: ಸೈನ್ಯ;

ಪದವಿಂಗಡಣೆ:
ಕೆಲಕೆ +ಹೊಳೆದವು +ಕಡು+ಕುದುರೆ +ನೆಲನ್
ಅಳುಕೆ +ನಡೆದವು +ದಂತಿ +ದೆಸೆಗಳ
ಹೊಲಿಗೆ +ಹರಿಯದೆ +ಮಾಣವ್+ಎನೆ +ಹೊಕ್ಕವು +ರಥಾನೀಕ
ತಳಪಟದ +ತುಂಬಿತ್ತು +ಪಯದಳ
ವುಲಿವ+ ಕಹಳೆಯ +ಚಂಬುಕನ +ಕಳ
ಕಳಿಕೆ +ಮಿಗೆ +ಕೈಕೊಂಡುದ್+ಅನಿಲಕುಮಾರಕನ+ ಸೇನೆ

ಅಚ್ಚರಿ:
(೧) ರೂಪಕದ ಪ್ರಯೋಗ – ದಂತಿ ದೆಸೆಗಳ ಹೊಲಿಗೆ ಹರಿಯದೆ ಮಾಣವೆನೆ ಹೊಕ್ಕವು ರಥಾನೀಕ

ಪದ್ಯ ೭೦: ಭೀಮನ ಆಕ್ರಮಣ ಹೇಗಿತ್ತು?

ತೆತ್ತಿಗರ ಬರಹೇಳು ಭೀಮಂ
ಗೆತ್ತಣದು ಜಯವೆನುತ ಸುಭಟರು
ಮುತ್ತಿಕೊಂಡರು ಮುಸುಕಿದರು ಮೆತ್ತಿದರು ಸರಳುಗಳ
ಕತ್ತಲೆಯ ಹೇರಾಸಿ ಸೂರ್ಯನ
ನೊತ್ತಿ ತಹ ದಿನವಾಯ್ತಲಾ ಎನು
ತತ್ತಲಿತ್ತಲು ಮುರಿದು ತಳಪಟ ಮಾಡಿದನು ಭೀಮ (ದ್ರೋಣ ಪರ್ವ, ೨ ಸಂಧಿ, ೭೦ ಪದ್ಯ
)

ತಾತ್ಪರ್ಯ:
ಭೀಮನನ್ನು ರಕ್ಷಿಸಿಕೊಳ್ಳುವವರನ್ನು ಕರೆಯಿರಿ, ಅವನಿಗೆ ಜಯವು ಎಲ್ಲಿಂದ ಬರುತ್ತದೆ ಎಂದು ಕೂಗುತ್ತಾ ಕೌರವ ಸೈನ್ಯದವರು ಎಲ್ಲಾ ದಡೆಗಳಿಂದಲೂ ಅವನನ್ನು ಬಾಣಗಳಿಂದ ಹೊಡೆದರು. ಎಂತಹ ದಿನವಿದು ಕತ್ತಲೆಯ ರಾಶಿ ಸೂರ್ಯನನ್ನು ಬೆಂಬತ್ತುವ ಹಾಗಾಯಿತೇ ಎಂದು ಭೀಮನು ತನ್ನನ್ನು ಸುತ್ತುವರೆದಿದ್ದ ಸೈನ್ಯವನ್ನು ಕೊಂದು ರಣರಂಗವನ್ನು ತಳಪಟ ಮಾಡಿದನು.

ಅರ್ಥ:
ತೆತ್ತು: ಮೋಸ, ವಂಚನೆ; ಬರಹೇಳು: ಆಗಮಿಸು; ಜಯ: ಗೆಲುವು; ಸುಭಟ: ಪರಾಕ್ರಮಿ; ಮುತ್ತು: ಆವರಿಸು; ಮುಸುಕು: ಹೊದಿಕೆ; ಮೆತ್ತು: ಬಳಿ, ಲೇಪಿಸು; ಸರಳು: ಬಾಣ; ಕತ್ತಲೆ: ಅಂಧಕಾರ; ಹೇರು: ಹೊರೆ, ಭಾರ; ಸೂರ್ಯ: ರವಿ; ಒತ್ತು: ಮುತ್ತು; ತಹ: ಒಪ್ಪಂದ; ದಿನ: ವಾರ; ಮುರಿ: ಸೀಳು; ತಳಪಟ: ಅಂಗಾತವಾಗಿ ಬೀಳು; ಸೋಲು;

ಪದವಿಂಗಡಣೆ:
ತೆತ್ತಿಗರ +ಬರಹೇಳು +ಭೀಮಂಗ್
ಎತ್ತಣದು +ಜಯವೆನುತ +ಸುಭಟರು
ಮುತ್ತಿಕೊಂಡರು +ಮುಸುಕಿದರು +ಮೆತ್ತಿದರು+ ಸರಳುಗಳ
ಕತ್ತಲೆಯ +ಹೇರಾಸಿ +ಸೂರ್ಯನನ್
ಒತ್ತಿ +ತಹ +ದಿನವಾಯ್ತಲಾ +ಎನುತ್
ಅತ್ತಲಿತ್ತಲು +ಮುರಿದು +ತಳಪಟ +ಮಾಡಿದನು +ಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕತ್ತಲೆಯ ಹೇರಾಸಿ ಸೂರ್ಯನನೊತ್ತಿ ತಹ ದಿನವಾಯ್ತಲಾ
(೨) ಮ ಕಾರದ ತ್ರಿವಳಿ ಪದ – ಮುತ್ತಿಕೊಂಡರು ಮುಸುಕಿದರು ಮೆತ್ತಿದರು

ಪದ್ಯ ೫೮: ಪಾಂಡವ ಸೈನ್ಯದ ಸ್ಥಿತಿ ಹೇಗಿತ್ತು?

ಕೂಡೆ ತಳಪಟವಾಯ್ತು ಸುಭಟರ
ಜೋಡಿ ಜರಿದುದು ಕೌರವೇಂದ್ರಗೆ
ಖೋಡಿಯುಂಟೇ ದ್ರೋಣ ಕೇಣವ ಬಿಟ್ಟು ಕಾದುವರೆ
ಖೇಡತನ ಬಿಗುಹಾಯ್ತು ಮೆಯ್ಯಲಿ
ಮೂಡಿದವು ಹೊಗರಂಬುಗಳು ತೆಗೆ
ದೋಡಿದವು ತೆಕ್ಕೆಯಲಿ ಪಾಂಡವ ನೃಪ ಮಹಾರಥರು (ದ್ರೋಣ ಪರ್ವ, ೨ ಸಂಧಿ, ೫೮ ಪದ್ಯ
)

ತಾತ್ಪರ್ಯ:
ಇದ್ದಕ್ಕಿದ್ದಹಾಗೆ ರಣರಂಗವು ಸಮತಟ್ಟಾಯಿತು. ವೀರರು ಜಾರಿಹೋದರು. ದ್ರೋಣನು ನಿರ್ದಾಕ್ಷಿಣ್ಯದಿಂದ ಯುದ್ಧಮಾಡಿದರೆ, ಕೌರವನಿಗೆ ಕೇಡುಂಟಾದೀತೇ? ಪಾಂಡವ ವೀರರು ಬೆದರಿದರು. ಅವರ ಮೈಯಲ್ಲಿ ಬಾಣಗಳು ಒಟ್ಟೊಟ್ಟಾಗಿ ನಾಟಿದವು. ಪಾಂಡವ ಸೈನ್ಯದ ಮಹಾರಥರು ಯುದ್ಧವನ್ನು ಬಿಟ್ಟು ಓಡಿದರು.

ಅರ್ಥ:
ಕೂಡು: ಸೇರು; ತಳಪಟ: ಸೋಲು, ಅಂಗಾತ ಬೀಳು; ಸುಭಟ: ಪರಾಕ್ರಮಿ; ಖೋಡಿ: ದುರುಳ, ಕೊರತೆ; ಕೇಣ: ಹೊಟ್ಟೆಕಿಚ್ಚು, ಮತ್ಸರ; ಕಾದು: ಹೋರಾಡು; ಖೇಡ: ಹೆದರಿದವನು, ಭಯಗ್ರಸ್ತ; ಬಿಗು: ಗಟ್ಟಿ; ಮೈಯ್ಯು: ತನು, ದೇಹ; ಮೂಡು: ಉದಯಿಸು; ಹೊಗರು: ಕಾಂತಿ, ಪ್ರಕಾಶ; ಅಂಬು: ಬಾಣ; ತೆಗೆ: ಹೊರತರು; ಓಡು: ಧಾವಿಸು; ತೆಕ್ಕೆ: ಅಪ್ಪುಗೆ, ಆಲಿಂಗನ; ನೃಪ: ರಾಜ; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಕೂಡೆ +ತಳಪಟವಾಯ್ತು +ಸುಭಟರ
ಜೋಡಿ +ಜರಿದುದು +ಕೌರವೇಂದ್ರಗೆ
ಖೋಡಿಯುಂಟೇ +ದ್ರೋಣ +ಕೇಣವ+ ಬಿಟ್ಟು +ಕಾದುವರೆ
ಖೇಡತನ+ ಬಿಗುಹಾಯ್ತು +ಮೆಯ್ಯಲಿ
ಮೂಡಿದವು +ಹೊಗರ್+ಅಂಬುಗಳು+ ತೆಗೆದ್
ಓಡಿದವು +ತೆಕ್ಕೆಯಲಿ +ಪಾಂಡವ +ನೃಪ +ಮಹಾರಥರು

ಅಚ್ಚರಿ:
(೧) ದ್ರೋಣನ ಹಿರಿಮೆ – ಕೌರವೇಂದ್ರಗೆ ಖೋಡಿಯುಂಟೇ ದ್ರೋಣ ಕೇಣವ ಬಿಟ್ಟು ಕಾದುವರೆ

ಪದ್ಯ ೨೭: ಚತುರಂಗ ಸೈನ್ಯವು ಯುದ್ಧರಂಗವನ್ನು ಹೇಗೆ ಆವರಿಸಿತು?

ಉಲಿದು ಸೂಠಿಯೊಳೇರಿದರು ವೆ
ಗ್ಗಳೆಯ ರಾತ್ವರು ಗಜರಿ ಮಸ್ತಕ
ಹಿಳಿಯಲಂಕುಶವಿಕ್ಕಿ ಬಿಟ್ಟರು ಸೊಕ್ಕಿದಾನೆಗಳ
ತಳಪಟವ ತುಂಬಿದವು ತೇರುಗ
ಳಿಳೆ ಜಡಿಯೆ ಕಾಲಾಳು ಹೊಕ್ಕೊಡೆ
ಗಲಿಸಿ ಹೊಯ್ದರು ಚೂಣಿಯರೆದುದು ಕಳನ ಚೌಕದಲಿ (ದ್ರೋಣ ಪರ್ವ, ೨ ಸಂಧಿ, ೨೭ ಪದ್ಯ
)

ತಾತ್ಪರ್ಯ:
ರಾವುತರು ಕೂಗಿ ಕುದುರೆಗಳನ್ನು ಏರಿದರು. ಅಂಕುಶವಿಟ್ಟು ಗದರಿಸಿ ಜೋದರು ಆನೆಗಳನ್ನು ಮುಂದಕ್ಕೆ ಬಿಟ್ಟರು. ಸಮತಟ್ಟಾದ ನೆಲದಲ್ಲಿ ತೇರುಗಳು ತುಂಬಿದವು. ಕಾಲಾಳುಗಳು ಒಬ್ಬರೊಡನೊಬ್ಬರು ಬೆರೆಸಿ ಶತ್ರು ಸಂಹಾರ ಮಾಡಿದರು.

ಅರ್ಥ:
ಉಲಿ: ಶಬ್ದ; ಸೂಠಿ: ವೇಗ; ಏರು: ಹೆಚ್ಚಾಗು; ವೆಗ್ಗಳ: ಹೆಚ್ಚು, ಆಧಿಕ್ಯ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಗಜರು: ಬೆದರಿಸು; ಮಸ್ತಕ: ಶಿರ; ಹಿಳಿ: ಹಿಸುಕಿ ರಸವನ್ನು ತೆಗೆ, ಹಿಂಡು; ಅಂಕುಶ: ಹಿಡಿತ, ಹತೋಟಿ; ಬಿಡು: ತೊರೆ; ಸೊಕ್ಕು: ಅಹಂಕಾರ; ಆನೆ: ಗಜ; ತಳಪಟ: ಅಂಗಾತವಾಗಿ ಬೀಳು; ಸೋಲು; ತುಂಬು: ಭರ್ತಿ; ತೇರು: ಬಂಡಿ; ಇಳೆ: ಭೂಮಿ; ಜಡಿ: ಬೆದರಿಕೆ, ಹೆದರಿಕೆ; ಕಾಲಾಳು: ಸೈನಿಕ; ಹೊಕ್ಕು: ಸೇರು; ಹೊಯ್ದು: ಹೊಡೆ; ಚೂಣಿ: ಮುಂದಿನ ಸಾಲು; ಅರೆ: ನುಣ್ಣಗೆ ಮಾಡು, ತೇಯು; ಕಳ: ರಣರಂಗ; ಚೌಕ: ಬಯಲು, ಕಣ, ರಂಗ;

ಪದವಿಂಗಡಣೆ:
ಉಲಿದು +ಸೂಠಿಯೊಳ್+ಏರಿದರು +ವೆ
ಗ್ಗಳೆಯ +ರಾವ್ತರು+ ಗಜರಿ +ಮಸ್ತಕ
ಹಿಳಿಯಲ್+ಅಂಕುಶವ್+ಇಕ್ಕಿ +ಬಿಟ್ಟರು +ಸೊಕ್ಕಿದ್+ಆನೆಗಳ
ತಳಪಟವ +ತುಂಬಿದವು+ ತೇರುಗಳ್
ಇಳೆ +ಜಡಿಯೆ +ಕಾಲಾಳು +ಹೊಕ್ಕೊಡೆಗ್
ಅಲಿಸಿ +ಹೊಯ್ದರು +ಚೂಣಿ+ಅರೆದುದು +ಕಳನ +ಚೌಕದಲಿ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತಳಪಟವ ತುಂಬಿದವು ತೇರುಗಳಿಳೆ

ಪದ್ಯ ೨೭: ಖಡ್ಗದ ಯೋಧರು ಹೇಗೆ ಹೋರಾಡಿದರು?

ಬಲಸಮುದ್ರದ ಬುದ್ಬುದಂಗಳೊ
ತಿಳಿಯಲರಿದೆನೆ ಹರಿಗೆ ಮುಸುಕಿತು
ಬಳಿಯ ಚೌರಿಗಳುಲಿವ ಘಂಟೆಯ ಬಿರುದಿನುಬ್ಬಟೆಯ
ತಳಪಟದೊಳೌಕಿದರು ತೊಡೆಸಂ
ಕಲೆಯ ತೊಲಗದ ಕಂಭದಪ್ರತಿ
ಬಲರು ಹಾಣಾಹಾಣಿಯಲಿ ಹೊಯಿದಾಡಿದರು ಕಡುಗಿ (ಭೀಷ್ಮ ಪರ್ವ, ೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಖಡ್ಗದಿಂದ ಕಾದುವ ಯೋಧರ ಕೈಗಲಲ್ಲಿದ್ದ ಗುರಾಣಿಗಳು ಸೈನ್ಯ ಸಮುದ್ರದ ನೀರುಗುಳ್ಳೆಗಳಂತೆ ಕಾಣಿಸಿದವು. ವೀರರು ಧರಿಸಿದ ಚೌರಿ, ಗಂಟೆ, ಬಿರುದಿನ ಮಾಲೆಗಳೊಡನೆ ಕಾಲುಗಳನ್ನೂ ಕಂಭದಂತೆ ದೃಢವಾಗಿ ನಿಲ್ಲಿಸಿ, ಆಕ್ರಮಣಕ್ಕೆ ಬೆದರದೆ ಇದಿರೊಡ್ಡಿ ನಿಂತು ಕಾದಿದರು.

ಅರ್ಥ:
ಬಲ: ಶಕ್ತಿ, ಪೂರ್ವ ; ಸಮುದ್ರ: ಸಾಗರ; ಬುದ್ಬುದ: ನೀರಿನ ಮೇಲಣ ಗುಳ್ಳೆ, ಬೊಬ್ಬುಳಿ; ತಿಳಿ: ಅರಿವು; ಅರಿ: ತಿಳಿ; ಹರಿ: ಓಡು, ಧಾವಿಸು; ಮುಸುಕು: ಹೊದಿಕೆ; ಬಿಳಿ: ಸಿತ; ಚೌರಿ: ಚಾಮರ; ಉಲಿವ: ಧ್ವನಿ; ಘಂಟೆ: ಘಣಘಣ ಎಂದು ಶಬ್ದ ಮಾಡುವ ಸಾಧನ; ಬಿರು: ಗಟ್ಟಿಯಾದುದು; ಉಬ್ಬಟೆ: ಅತಿಶಯ; ತಳಪಟ: ಸೋಲು; ಔಕು: ಒತ್ತು, ಹಿಸುಕು; ತೊಡೆ: ಊರು; ಸಂಕಲೆ: ಬ್ಬಿಣದ ಸರಪಣಿ, ಬಂಧನ; ತೊಲಗು: ದೂರವಾಗು; ಕಂಭ: ಸ್ಥಂಭ; ಪ್ರತಿ:ವಿರುದ್ಧ, ಎದುರು; ಬಲರು: ಪರಾಕ್ರಮಿ; ಹಾಣಾಹಣಿ: ಹಣೆ ಹಣೆಯ ಯುದ್ಧ; ಹೊಯಿದಾಡು: ಹೋರಾಡು; ಕಡುಗು: ಉತ್ಸಾಹಗೊಳ್ಳು, ವೇಗವಾಗು;

ಪದವಿಂಗಡಣೆ:
ಬಲಸಮುದ್ರದ+ ಬುದ್ಬುದಂಗಳೊ
ತಿಳಿಯಲ್+ಅರಿದೆನೆ +ಹರಿಗೆ +ಮುಸುಕಿತು
ಬಳಿಯ +ಚೌರಿಗಳ್+ಉಲಿವ +ಘಂಟೆಯ +ಬಿರುದಿನ್+ಉಬ್ಬಟೆಯ
ತಳಪಟದೊಳ್+ಔಕಿದರು +ತೊಡೆ+ಸಂ
ಕಲೆಯ +ತೊಲಗದ+ ಕಂಭದ+ಪ್ರತಿ
ಬಲರು+ ಹಾಣಾಹಾಣಿಯಲಿ +ಹೊಯಿದಾಡಿದರು +ಕಡುಗಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಲಸಮುದ್ರದ ಬುದ್ಬುದಂಗಳೊ ತಿಳಿಯಲರಿದೆನೆ

ಪದ್ಯ ೭: ಕೃಷ್ಣನೇಕೆ ಅರ್ಜುನನನ್ನು ಜರೆದನು?

ನಿಲಿಸಿದನು ಫಲುಗುಣನ ರಥವನು
ತಳಪಟದೊಳೇನೈ ಮಹಾರಥ
ರಳವಿಗೊಡ್ಡಿದೆ ನಿನ್ನೊಳುಂಟೇ ಕೈಮನದ ಕಡುಹು
ಲುಳಿಯ ಬಿಲುವಿದ್ಯಾಚಮತ್ಕೃತಿ
ಯಳವು ಗರುಡಿಯೊಳಲ್ಲದೀ ರಿಪು
ಬಲಕೆ ತೋರಿಸಬಹುದೆ ಹೇಳೆಂದರ್ಜುನನ ಜರೆದ (ಭೀಷ್ಮ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅರ್ಜುನನ ರಥವನ್ನು ಸಮತಟ್ಟಾದ ಭೂಮಿಯಲ್ಲಿ ನಿಲಿಸಿ, ಇದೋ ಯುದ್ಧಕ್ಕೆ ಮಹಾರಥರು ನಿನಗೆದುರಾಗಿ ನಿಂತಿದ್ದಾರೆ, ನಿನ್ನ ದೇಹ ಮನಸ್ಸುಗಳ ಬಲವು ಅವರೆನ್ನೆದುರಿಸುವಷ್ಟು ಸಮರ್ಥವಾಗಿದೆಯೇ? ನಿನ್ನ ಧನುರ್ವಿದ್ಯೆಯ ಚಮತ್ಕಾರ ವೇಗಗಳು ಬರಿಯ ಗರುಡಿಯ ಮನೆಗೇ ಸೀಮಿತವೋ, ಇವರಿಗೂ ಅದನ್ನು ತೋರಿಸಬಲ್ಲೆಯೋ ಎಂದು ಜರೆದನು.

ಅರ್ಥ:
ನಿಲಿಸು: ತಡೆ; ಫಲುಗುಣ: ಅರ್ಜುನ; ರಥ: ಬಂಡಿ; ತಳಪಟ: ಅಂಗಾತವಾಗಿ ಬೀಳು; ಮಹಾರಥರು: ಪರಾಕ್ರಮಿಗಳು; ಅಳವಿ: ಯುದ್ಧ, ಯೋಗ್ಯತೆ; ಅಳವು: ಶಕ್ತಿ; ಕೈ: ಹಸ್ತ; ಮನ: ಮನಸ್ಸು; ಕಡುಹು: ಸಾಹಸ, ಹುರುಪು; ಲುಳಿ: ರಭಸ, ವೇಗ; ಬಿಲು: ಚಾಪ; ಚಮತ್ಕೃತಿ: ವಿಸ್ಮಯ; ಗರುಡಿ: ವ್ಯಾಯಾಮ ಶಾಲೆ; ರಿಪುಬಲ: ವೈರಿಯ ಸೈನ್ಯ; ಬಲ: ಶಕ್ತಿ; ತೋರಿಸು: ಗೋಚರಿಸು; ಜರಿ: ಬಯ್ಯುವಿಕೆ, ನಿಂದಿಸು;

ಪದವಿಂಗಡಣೆ:
ನಿಲಿಸಿದನು +ಫಲುಗುಣನ +ರಥವನು
ತಳಪಟದೊಳ್+ಏನೈ +ಮಹಾರಥರ್
ಅಳವಿಗೊಡ್ಡಿದೆ+ ನಿನ್ನೊಳುಂಟೇ+ ಕೈಮನದ +ಕಡುಹು
ಲುಳಿಯ +ಬಿಲುವಿದ್ಯಾ+ಚಮತ್ಕೃತಿ
ಅಳವು +ಗರುಡಿಯೊಳಲ್ಲದ್+ಈ+ ರಿಪು
ಬಲಕೆ +ತೋರಿಸಬಹುದೆ +ಹೇಳೆಂದ್+ಅರ್ಜುನನ +ಜರೆದ

ಅಚ್ಚರಿ:
(೧) ಅರ್ಜುನನನ್ನು ಉತ್ತೇಜಿಸುವ ಪರಿ – ಮಹಾರಥರಳವಿಗೊಡ್ಡಿದೆ ನಿನ್ನೊಳುಂಟೇ ಕೈಮನದ ಕಡುಹು; ಲುಳಿಯ ಬಿಲುವಿದ್ಯಾಚಮತ್ಕೃತಿ ಯಳವು ಗರುಡಿಯೊಳಲ್ಲದೀ ರಿಪುಬಲಕೆ ತೋರಿಸಬಹುದೆ

ಪದ್ಯ ೧೦: ಭೀಮನು ಕಾಡಿನ ಮಧ್ಯಭಾಗಕ್ಕೆ ಹೇಗೆ ಬಂದನು?

ಹುಲಿ ಕರಡಿ ಕಾಡಾನೆ ಸಿಂಹಾ
ವಳಿಗಳೀತನ ದನಿಗೆ ಯೋಜನ
ವಳೆಯದಲಿ ಹಾಯ್ದೋಡಿದವು ನೋಡುತ್ತ ಮುರಿಮುರಿದು
ಹಳುವ ತಳಪಟವಾಯ್ತು ದಿಗ್ಗಜ
ತುಳಿದ ಬಾಳೆಯ ವನದವೊಲು ವೆ
ಗ್ಗಳೆಯನೈ ಕಲಿಭೀಮ ಬಂದನು ವನದ ಮಧ್ಯದಲಿ (ಅರಣ್ಯ ಪರ್ವ, ೧೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಮನ ಜೋರಾದ ಕೂಗಿಗೆ ಒಂದು ಯೋಜನ ವಲಯದಲ್ಲಿದ್ದ ಹುಲಿ, ಕರಡಿ, ಕಾಡಾನೆ, ಸಿಂಹ ಮುಂತಾದ ಕಾಡು ಪ್ರಾಣಿಗಳು ಹಿಂದಿರುಗಿ ನೋಡುತ್ತಾ ಓಡಿ ಹೋದವು. ಭೀಮನ ತುಳಿತಕ್ಕೆ ಕಾಡು ಕಡಿದ ಬಾಳೆಯ ತೋಟದಂತೆ ಬಯಲಾಗಿ ಕಾಣುತ್ತಿತ್ತು. ಹೀಗೆ ಮಹಾಪರಾಕ್ರಮಿಯಾದ ಭೀಮನು ಕಾಡಿನ ಮಧ್ಯಕ್ಕೆ ಬಂದನು.

ಅರ್ಥ:
ಹುಲಿ: ವ್ಯಾಘ್ರ; ಆನೆ: ಕರಿ, ಗಜ; ಕಾಡು: ಅರಣ್ಯ; ಸಿಂಹ: ಕೇಸರಿ; ಆವಳಿ: ಗುಂಪು; ದನಿ: ಧ್ವನಿ, ಶಬ್ದ; ಯೋಜನ: ಅಳತೆಯ ಪ್ರಮಾಣ; ಹಾಯು: ದಾಟು; ಓಡು: ಶೀಘ್ರವಾಗಿ ಚಲಿಸು; ನೋಡು: ವೀಕ್ಷಿಸು; ಮುರಿ: ಸೀಳು; ಹಳುವ: ಕಾಡು; ತಳಪಟ: ಅಂಗಾತವಾಗಿ ಬೀಳು, ಸೋಲು; ದಿಗ್ಗಜ: ಉದ್ದಾಮ ವ್ಯಕ್ತಿ, ಶ್ರೇಷ್ಠ; ತುಳಿ: ಮೆಟ್ಟು; ಬಾಳೆ: ಕದಳಿ; ವನ: ಕಾಡು; ವೆಗ್ಗಳ: ಶ್ರೇಷ್ಠತೆ, ಹಿರಿಮೆ; ಕಲಿ: ಶೂರ; ಬಂದನು: ಆಗಮಿಸು; ವನ: ಕಾಡು; ಮಧ್ಯ; ನಡುಭಾಗ;

ಪದವಿಂಗಡಣೆ:
ಹುಲಿ +ಕರಡಿ +ಕಾಡಾನೆ +ಸಿಂಹಾ
ವಳಿಗಳ್+ಈತನ +ದನಿಗೆ +ಯೋಜನ
ವಳೆಯದಲಿ+ ಹಾಯ್ದ್+ಓಡಿದವು +ನೋಡುತ್ತ +ಮುರಿಮುರಿದು
ಹಳುವ +ತಳಪಟವಾಯ್ತು +ದಿಗ್ಗಜ
ತುಳಿದ +ಬಾಳೆಯ +ವನದವೊಲು +ವೆ
ಗ್ಗಳೆಯನೈ+ ಕಲಿ+ಭೀಮ +ಬಂದನು +ವನದ +ಮಧ್ಯದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಳುವ ತಳಪಟವಾಯ್ತು ದಿಗ್ಗಜತುಳಿದ ಬಾಳೆಯ ವನದವೊಲು
(೨) ಕಾಡು, ಹಳುವ, ವನ – ಸಮನಾರ್ಥಕ ಪದಗಳು

ಪದ್ಯ ೧೯: ಭೀಮನು ರಣರಂಗವನ್ನು ಹೇಗೆ ಸಮತಲವನ್ನಾಗಿ ಮಾಡಿದನು?

ಬಲನೆಡನ ಗದೆ ಖಡುಗದಲಿ ರಿಪು
ಜಲನಿಧಿಯನೀಸಾಡಿದನು ಹೆ
ಬ್ಬಲದ ಹೆಬ್ಬೆಳೆ ಸಾಲಕೊಯ್ಲಿನ ಮೆದೆಗಳೊಟ್ಟಲಲಿ
ತಳಕುಗಳ ವರ ರಥ ಹಯದ ಹೊಸ
ಮೆಳೆಯ ಕಡಿತದ ಕರಿಘಟಾಳಿಯ
ಬಲುಮೊರಡಿಗಳ ಸವರಿ ತಳಪಟಮಾಡಿದನು ಭೀಮ (ಕರ್ಣ ಪರ್ವ, ೧೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಭೀಮನು ಬಲಗೈಯಲ್ಲಿ ಗದೆಯನ್ನೂ ಎಡಗೈಯಲ್ಲಿ ಖಡ್ಗವನ್ನೂ ಹಿಡಿದು ವೈರಿ ಸೈನ್ಯ ಸಾಗರವನ್ನು ಈಜಿದನು. ದೊಡ್ಡ ಸೈನ್ಯವನ್ನು ಸಾಲಾಗಿ ಕೊಯ್ದು ಮೆದೆಗಳಾಗಿ ಒಟ್ಟಿದನು. ರಥಗಳಿಗೆ ಕಟ್ಟಿದ್ದ ಕುದುರೆಗಳ ಮೆಳೆಯನ್ನು ಕಡಿದು, ಆನೆಗಳೆಂಬ ಮೊರಡಿಗಳನ್ನು ಸವರಿ ರಣರಂಗವನ್ನು ಸಮತಲ ಮಾಡಿದನು.

ಅರ್ಥ:
ಬಲ: ದಕ್ಷಿಣ ಪಾರ್ಶ್ವ; ಎಡ: ವಾಮಭಾಗ; ಗದೆ: ಮುದ್ಗರ; ಖಡುಗ: ಕತ್ತಿ; ರಿಪು: ವೈರಿ; ಜಲನಿಧಿ: ಸಾಗರ; ಈಸಾಡು: ಈಜು; ಹೆಬ್ಬಲ: ಹಿರಿದಾದ ಸೈನ್ಯ; ಹೆಬ್ಬೆಳೆ: ದೊಡ್ಡ ಬೆಳೆ, ಫಲವತ್ತಾದ ಬೆಳೆ; ಸಾಲ:ಪ್ರಾಕಾರ; ಕೋಯ್ಲು: ಕೊಯ್ಯುವಿಕೆ ಕಟಾವು; ಮೆದೆ: ಹುಲ್ಲಿನ ರಾಶಿ; ಒಟ್ಟು: ರಾಶಿ, ಗುಂಪು, ಕೂಡಿಸು; ತಳಕು: ಹೊಳಪು, ಕಾಂತಿ; ವರ: ಶ್ರೇಷ್ಠ; ರಥ: ಬಂಡಿ; ಹಯ: ಕುದುರೆ; ಹೊಸ: ನವೀನ; ಮಳೆ: ವರ್ಷ; ಕಡಿತ: ಸೀಳು; ಕರಿಘಟೆ: ಆನೆಗಳ ಗುಂಪು; ಮೊರಡಿ: ದಿಣ್ಣೆ, ಗುಡ್ಡ; ಬಲು: ಬಹಳ; ಸವರು: ನಾಶಗೊಳಿಸು, ಧ್ವಂಸ ಮಾಡು; ತಳಪಟ: ಅಂಗಾತವಾಗಿ ಬೀಳು; ಸೋಲು, ನೆಲಸಮ;

ಪದವಿಂಗಡಣೆ:
ಬಲನ್+ಎಡನ+ ಗದೆ+ ಖಡುಗದಲಿ +ರಿಪು
ಜಲನಿಧಿಯನ್+ಈಸಾಡಿದನು +ಹೆ
ಬ್ಬಲದ +ಹೆಬ್ಬೆಳೆ +ಸಾಲಕೊಯ್ಲಿನ+ ಮೆದೆಗಳ್+ಒಟ್ಟಲಲಿ
ತಳಕುಗಳ+ ವರ+ ರಥ +ಹಯದ +ಹೊಸ
ಮೆಳೆಯ +ಕಡಿತದ +ಕರಿಘಟಾಳಿಯ
ಬಲುಮೊರಡಿಗಳ+ ಸವರಿ+ ತಳಪಟ+ಮಾಡಿದನು +ಭೀಮ

ಅಚ್ಚರಿ:
(೧) ಹ ಕಾರದ ಜೋಡಿ ಪದ – ಹೆಬ್ಬಲದ ಹೆಬ್ಬೆಳೆ; ಹಯದ ಹೊಸಮೆಳೆಯ

ಪದ್ಯ ೨೧: ಮನುಷ್ಯನ ಆಯುಷ್ಯವನ್ನು ಯಾರು ಅಳಿಯುತ್ತಾರೆ?

ತಳಪಟದೊಳಾಯುಷ್ಯ ರಾಶಿಯ
ನಳೆವ ಕೊಳಗವು ಸೂರ್ಯನೆಂಬುದ
ತಿಳಿದಹೋ ರಾತ್ರಿಗಳ ಸಂಖ್ಯೆಯ ಸಲುಗೆಯಂಕಿಪುದು
ಬಳಸುವುದು ಸನ್ಮಾರ್ಗದೊಳು ಮುಂ
ಕೊಳಿಸುವುದು ಸದ್ಧರ್ಮದಲಿ ಕಳ
ವಳಿಸದಿರು ಷಡ್ವರ್ಗದೊಳು ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೂಮಿಯ ಮೇಲೆ ಒಬ್ಬನ ಆಯುಷ್ಯವನ್ನು (ಕಣದಲ್ಲಿ ಕಾಳಿನರಾಶಿಯ ಹಾಗೆ) ಅಳೆಯುವ ಕೊಳಗವೇ ಸೂರ್ಯ. ಇದನ್ನರಿತು ಪ್ರತಿ ಹಗಲುರಾತ್ರಿಗಳನ್ನು ಲೆಕ್ಕಿಸಿ ಸನ್ಮಾರ್ಗದಲ್ಲಿ ನಡೆಯಬೇಕು. ಸದ್ಧರ್ಮವನ್ನು ಆಚರಿಸಬೇಕು ಮತ್ತು ಅರಿಷಡ್ವರ್ಗಗಳಿಗೊಳಗಾಗಿ ಕಳವಡಿಸಬೇಡ ಎಂದು ಸನತ್ಸುಜಾತರು ರಾಜನಿಗೆ ಹೇಳಿದರು.

ಅರ್ಥ:
ತಳಪಟ:ಅಂಗಾತವಾಗಿ ಬೀಳು, ಸೋಲು; ಆಯುಷ್ಯ: ಜೀವಿತದ ಅವಧಿ; ರಾಶಿ: ಮೇಷ, ವೃಷಭ ಮೊದಲಾದ ಹನ್ನೆರಡು ವಿಭಾಗಗಳು; ಅಳೆ: ಅಳತೆ ಮಾಡು; ಕೊಳಗ: ಒಂದು ಅಳತೆ, ನಾಲ್ಕು ಬಳ್ಳಗಳ ಅಳತೆಯ ಪಾತ್ರೆ; ಸೂರ್ಯ: ರವಿ, ಭಾನು; ತಿಳಿ: ಅರ್ಥೈಸು; ಅಹೋರಾತ್ರಿ: ಹಗಲು ಇರುಳು; ಸಲುಗೆ:ಸದರ, ಅತಿ ಪರಿಚಯ; ಅಂಕಿ:ತೋರಿಸುವ ಚಿಹ್ನೆ; ಬಳಸು: ಉಪಯೋಗಿಸು; ಅನ್ಮಾರ್ಗ: ಒಳ್ಳೆಯ ದಾರಿ; ಮುಂಕೊಳಿಸು: ಮುಂದಕ್ಕೆ; ಸದ್ಧರ್ಮ: ಒಳ್ಳೆಯ ನಡತೆ; ಕಳವಳಿಸು: ಚಿಂತೆ; ಷಡ್ವರ್ಗ: ಕಾಮ, ಕ್ರೋಧ ಲೋಭ ಮೋಹ ಮದ ಮಾತ್ಸರ್ಯ ಎಂಬ ಆರುರೀತಿಯ ನಡವಳಿಕೆ; ಭೂಪಾಲ: ರಾಜ;

ಪದವಿಂಗಡಣೆ:
ತಳಪಟದೊಳ್+ಆಯುಷ್ಯ +ರಾಶಿಯನ್
ಅಳೆವ +ಕೊಳಗವು +ಸೂರ್ಯನ್+ಎಂಬುದ
ತಿಳಿದ್+ಅಹೋ+ ರಾತ್ರಿಗಳ+ ಸಂಖ್ಯೆಯ +ಸಲುಗೆಯಂಕಿಪುದು
ಬಳಸುವುದು +ಸನ್ಮಾರ್ಗದೊಳು +ಮುಂ
ಕೊಳಿಸುವುದು +ಸದ್ಧರ್ಮದಲಿ +ಕಳ
ವಳಿಸದಿರು +ಷಡ್ವರ್ಗದೊಳು +ಭೂಪಾಲ +ಕೇಳೆಂದ

ಅಚ್ಚರಿ:
(೧) ಅಂಕಿಪುದು, ಬಳಸುವುದು, ಮುಂಕೊಳಿಸುವುದು – ‘ದು’ ಅಕ್ಷರದಿಂದ ಕೊನೆಗೊಳ್ಳುವ ಪದಗಳ ಬಳಕೆ
(೨) ಸೂರ್ಯನಿಗೆ ಬೇರೆ ಆಯಾಮ ನೀಡಿದ ಕಲ್ಪನೆ – ತಳಪಟದೊಳಾಯುಷ್ಯ ರಾಶಿಯ
ನಳೆವ ಕೊಳಗವು ಸೂರ್ಯ