ಪದ್ಯ ೪೪: ವಿದ್ವಾಂಸರ ಮಹತ್ವವೇನು?

ತನ್ನ ಮನೆಯೊಳು ಮೂರ್ಖನತಿ ಸಂ
ಪನ್ನ ಪೂಜ್ಯನು ಭೂಮಿಪಾಲನು
ತನ್ನ ದೇಶದೊಳಧಿಕನೈ ಗ್ರಾಮದೊಳು ಧನಿ ಪೂಜ್ಯ
ಭಿನ್ನವಿಲ್ಲದೆ ಹೋದ ಠಾವಿನೊ
ಳನ್ಯರೆನಿಸದೆ ವಿಶ್ವದೊಳು ಸಂ
ಪನ್ನ ಪೂಜಾಪಾತ್ರರೈ ವಿದ್ವಾಂಸರುಗಳೆಂದ (ಉದ್ಯೋಗ ಪರ್ವ, ೪ ಸಂಧಿ, ೪೪ ಪದ್ಯ)

ತಾತ್ಪರ್ಯ:
ಮೂರ್ಖನಾಗಿದ್ದರೂ ಮನೆಯಲ್ಲಿ ಪೂಜಿಸಲ್ಪಡುತ್ತಾನೆ, ರಾಜನು ತನ್ನ ದೇಶದಲ್ಲಿ ಪ್ರಮುಖ, ಗ್ರಾಮದಲ್ಲಿ ಹಣವಂತನೇ ಶ್ರೇಷ್ಠ, ಆದರೆ ವಿದ್ವಾಂಸನು ವಿಶ್ವದಲ್ಲಿ ಎಲ್ಲಿ ಹೋದರೂ ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ವಿದ್ವಾಂಸರ ಮಹತ್ವವನ್ನು ಸನತ್ಸುಜಾತರು ತಿಳಿಸಿದರು.

ಅರ್ಥ:
ತನ್ನ: ಅವನ; ಮನೆ: ಆಲಯ, ಗೃಹ; ಮೂರ್ಖ: ಮೂಢ; ಸಂಪನ್ನ: ಶ್ರೇಷ್ಠವಾದ, ಅರ್ಹವಾದ; ಪೂಜ್ಯ: ಗೌರವಾನ್ವಿತ; ಭೂಮಿ: ಇಳೆ; ಭೂಮಿಪಾಲನು: ರಾಜ; ದೇಶ: ರಾಷ್ಟ್ರ; ಅಧಿಕ: ಹೆಚ್ಚು; ಗ್ರಾಮ: ಹಳ್ಳಿ, ಊರು; ಧನಿ: ಧನಿಕ, ಸಾಹುಕಾರ; ಭಿನ್ನ: ಚೂರು, ತುಂಡು, ವ್ಯತ್ಯಾಸ, ಭೇದ; ಠಾವು: ಎಡೆ, ಸ್ಥಳ, ತಾಣ; ಅನ್ಯರು: ಬೇರೆ; ವಿಶ್ವ: ಜಗತ್ತು; ಪಾತ್ರರು: ಭಾಗಿಯಾಗಿರುವಿಕೆ, ಸಕ್ರಿಯವಾಗಿರುವಿಕೆ; ವಿದ್ವಾಂಸ: ಕೋವಿದ;

ಪದವಿಂಗಡಣೆ:
ತನ್ನ +ಮನೆಯೊಳು +ಮೂರ್ಖನ್+ಅತಿ +ಸಂ
ಪನ್ನ +ಪೂಜ್ಯನು +ಭೂಮಿಪಾಲನು
ತನ್ನ +ದೇಶದೊಳ್+ಅಧಿಕನೈ +ಗ್ರಾಮದೊಳು +ಧನಿ +ಪೂಜ್ಯ
ಭಿನ್ನವಿಲ್ಲದೆ +ಹೋದ +ಠಾವಿನೊಳ್
ಅನ್ಯರ್+ಎನಿಸದೆ+ ವಿಶ್ವದೊಳು +ಸಂ
ಪನ್ನ +ಪೂಜಾಪಾತ್ರರೈ +ವಿದ್ವಾಂಸರುಗಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ತನ್ನ ಮನೆಯೊಳು ಮೂರ್ಖನತಿ ಸಂಪನ್ನ ಪೂಜ್ಯನು; ಭೂಮಿಪಾಲನು ತನ್ನ ದೇಶದೊಳಧಿಕನೈ; ಗ್ರಾಮದೊಳು ಧನಿ ಪೂಜ್ಯ;
(೨) ತನ್ನ, ಸಂಪನ್ನ, ಭಿನ್ನ – ಪ್ರಾಸ ಪದ
(೩) ಸಂಪನ್ನ – ೧, ೫ ಸಾಲಿನ ಕೊನೆಯ ಪದ

ಪದ್ಯ ೬೫: ಜರಾಸಂಧನು ತನ್ನ ಮನಸ್ಸಿನಲ್ಲಿ ಏನೆಂದು ಚಿಂತಿಸಿದನು?

ಆರಿವರು ದೇವತ್ರಯವೊ ಜಂ
ಭಾರಿ ಯಮ ಮಾರುತರೊ ರವಿರಜ
ನೀ ರಮಣ ಪವಕರೊ ಕಪಟಸ್ನಾತಕ ವ್ರತದ
ಧಾರುಣೀಶ್ವರರೊಳಗೆ ಧಿಟ್ಟರ
ದಾರು ತನ್ನೊಳು ತೊಡಕಿನಿಲುವವಿ
ಕಾರಿಗಳ ನಾ ಕಾಣೆನೆಂದನು ತನ್ನ ಮನದೊಳಗೆ (ಸಭಾ ಪರ್ವ, ೨ ಸಂಧಿ, ೬೫ ಪದ್ಯ)

ತಾತ್ಪರ್ಯ:
ಜರಾಸಂಧನು ಈ ಮೂವರನ್ನು ಕಂಡು ತನ್ನ ಮನಸ್ಸಿನಲ್ಲಿ, ಇವರಾರು, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರೋ, ದೇವತೆಗಳಾದ ಇಂದ್ರ, ಯಮ, ವಾಯು, ಸೂರ್ಯ, ಚಂದ್ರ, ಅಗ್ನಿಗಳೋ, ಇವರ ಸ್ನಾತಕವೇಷವು ಕಪಟವಾದದ್ದು, ಭೂಮಿಯಲ್ಲಿ ನನ್ನಮೇಲೆ ವಿರೋಧವನ್ನು ಸಾಧಿಸಿ ಯುದ್ಧಕ್ಕೆ ಬರುವ ಬುದ್ಧಿಹೀನರನ್ನು ನಾ ಕಾಣೆನೆಂದು ತನ್ನ ಮನಸ್ಸಿನಲ್ಲಿ ಚಿಂತಿಸಿದನು.

ಅರ್ಥ:
ಆರು: ಯಾರು; ದೇವ: ದೇವತೆಗಳು; ತ್ರಯ: ಮೂರು; ದೇವತ್ರಯ: ಬ್ರಹ್ಮ, ವಿಷ್ಣು, ಶಿವ; ಜಂಭಾರಿ: ಇಂದ್ರ (ತಾರಕಾಸುರನ ಪ್ರಧಾನಿ ಜಂಭನನ್ನು ಕೊಂದವ) ಮಾರುತ: ವಾಯು; ರವಿ: ಸೂರ್ಯ; ರಜನಿ: ರಾತ್ರಿ; ರಮಣ: ಮನೋಹರ; ರಜನೀರಮಣ: ಚಂದ್ರ; ಪಾವಕ: ಅಗ್ನಿ; ಕಪಟ: ಮೋಸ; ಸ್ನಾತಕ: ಗುರುಕುಲದಲ್ಲಿ ವಿದ್ಯಾರ್ಜನೆ ಮುಗಿಸಿ ಗೃಹಸ್ಥಾಶ್ರಮಕ್ಕೆ ಸೇರುವವನು; ಧಾರುಣಿ: ಭೂಮಿ; ಧಾರುಣೀಶ್ವರ: ರಾಜ; ಧಿಟ್ಟ: ಧೀರ; ತೊಡಕು: ವಿರೋಧ; ವಿಕಾರಿ: ಬುದ್ಧಿಹೀನ; ಮನ: ಮನಸ್ಸು;

ಪದವಿಂಗಡಣೆ:
ಆರಿವರು +ದೇವ+ತ್ರಯವೊ +ಜಂ
ಭಾರಿ +ಯಮ +ಮಾರುತರೊ +ರವಿ+ರಜ
ನೀ ರಮಣ +ಪವಕರೊ +ಕಪಟ+ಸ್ನಾತಕ+ ವ್ರತದ
ಧಾರುಣೀಶ್ವರರ್+ಒಳಗೆ +ಧಿಟ್ಟರದ್
ಆರು +ತನ್ನೊಳು +ತೊಡಕಿ+ನಿಲುವ+ವಿ
ಕಾರಿಗಳ+ ನಾ +ಕಾಣೆ+ನೆಂದನು +ತನ್ನ +ಮನದೊಳಗೆ

ಅಚ್ಚರಿ:
(೧) ಆರು – ೧, ೫ ಸಾಲಿನ ಮೊದಲ ಪದ
(೨) ತ್ರಯವೊ, ಮಾರುತರೊ, ಪಾವಕರೊ – ಪ್ರಾಸ ಪದಗಳು
(೩) ತನ್ನೊಳು, ನಾ, ತನ್ನ – ಸಾಮ್ಯಾರ್ಥವನ್ನು ನೀಡುವ ಪದ

ಪದ್ಯ ೫: ಭೀಮನ ಮಾತೃವಾತ್ಸಲ್ಯದ ನಿದರ್ಶನವೇನು?

ತಳಿರ ತರಿದೊಟ್ಟಿದನು ತರುವಿನ
ನೆಳಲೊಳಗೆ ವಿಶ್ರಮಿಸಿದರು ತನು
ಬಳಲಿಕೆಯ ಭಾರಣೆಯ ಕಡು ಜೋಡಿಸಿದ ಝೋಂಪಿನಲಿ
ಝಳಕೆ ಕಂದಿದ ಮೈಯ ಬಾಡಿದ
ಲಲಿತವದನದ ಮಾಸಿ ಕೆದರಿದ
ತಲೆಯೊಳಿರೆ ತನ್ನೈವರನು ಕಂಡಳಲಿದನು ಭೀಮ (ಆದಿ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ತನ್ನ ತಾಯಿ,ಸೋದರರನ್ನು ಹೊತ್ತು ಬಹಳ ಯೋಜನಗಳನ್ನು ಸಾಗಿದ ನಂತರ, ಎಲ್ಲರೂ ಬಳಲಿದ್ದರು. ಆಗ ಕಾಡಿನ ಮರದ ನೆರಳಲ್ಲಿ ಚಿಗುರಿದ ಮರದ ರಂಬೆಗಳನ್ನು ತಂದು ಹಾಸಿ, ಅದರಮೇಲೆ ಎಲ್ಲರು ಕುಳಿತು ವಿಶ್ರಮಿಸುತ್ತಾ, ಬಳಲಿದ ದೇಹದ ಆಯಾಸಕ್ಕೆ ಅವರೆಲ್ಲರೂ ನಿದ್ರೆಯ ಝೋಂಪಿನಲ್ಲಿ ಮಲಗಿದರು. ಅವರೆಲ್ಲರ ದೇಹವು ಬಿಸಿಲಿನ ತಾಪಕ್ಕೆ ಕಂದಿತ್ತು, ಮುಖವು ಬಾಡಿತ್ತು, ತಲೆಕೂದಲು ಕೆದರಿತ್ತು, ಸ್ಥಿತಿಯನ್ನು ಕಂಡು, ತನ್ನವರ ಸ್ಥಿತಿ ಹೀಗಿರುವುದನ್ನು ಕಂಡು ಭೀಮನು ದುಃಖಿಸಿದನು.

ಅರ್ಥ:
ತಳಿರು: ಚಿಗುರು; ತರಿ: ಕಡಿ, ಕತ್ತರಿಸು; ತರು: ಮರ; ನೆಳಲು: ನೆರಳು; ವಿಶ್ರಮ: ವಿಶ್ರಾಂತಿ, ವಿರಾಮ, ಶ್ರಮಪರಿಹಾರ; ತನು: ದೇಹ; ಬಳಲಿಕೆ: ಆಯಾಸ; ಭಾರಣೆ: ಭಾರ, ಹೊರೆ; ಕಡು: ತುಂಬ; ಜೋಡಿ: ಜೊತೆ; ಝೋಂಪು: ತೂಕಡಿಕೆ; ಝಳ: ಶಾಖ, ಉಷ್ಣತೆ; ಕಂದು: ಕಳೆಗುಂದು, ಬಣ್ಣಗೆಡು; ಮೈಯ: ದೇಹ; ಬಾಡು: ಸೊರಗು; ಲಲಿತ: ಚೆಲುವು, ಸೌಂದರ್ಯ; ವದನ: ಮುಖ; ಮಾಸು: ಮಲಿನವಾಗು, ಕಾಂತಿಗುಂದು; ಕೆದರು: ಚೆಲ್ಲಾಪಿಲ್ಲಿ, ಹರಡು; ತಲೆ: ಶಿರ; ಅಳಲು: ಅಳು, ಕೊರಗು;

ಪದವಿಂಗಡನೆ:
ತಳಿರ +ತರಿ+ದೊಟ್ಟಿದನು+ ತರುವಿನ
ನೆಳಲ್+ಒಳಗೆ+ ವಿಶ್ರಮಿಸಿದರು+ ತನು
ಬಳಲಿಕೆಯ+ ಭಾರಣೆಯ+ ಕಡು+ ಜೋಡಿಸಿದ+ ಝೋಂಪಿನಲಿ
ಝಳಕೆ+ ಕಂದಿದ+ ಮೈಯ +ಬಾಡಿದ
ಲಲಿತ+ವದನದ+ ಮಾಸಿ +ಕೆದರಿದ
ತಲೆ+ಯೊಳ್+ಇರೆ+ ತನ್ನ್+ಐವರನು+ ಕಂಡ್+ಅಳಲಿದನು+ ಭೀಮ

ಅಚ್ಚರಿ:
(೧) ಬಳಲಿದವರ ಲಕ್ಷಣ: ಝಳಕೆ ಕಂದಿದ ಮೈ, ಬಾಡಿದ ಲಲಿತ ವದನ, ಮಾಸಿ ಕೆದರಿದ ತಲೆ
(೨) “ತ” ಕಾರದ ಪದಗಳು: ತಳಿರ, ತರಿ, ತರು, ತನು, ತಲೆ, ತನ್ನ
(೩) ಮೈಯ್, ತನು – ಸಮಾನಾರ್ಥಕ ಪದ
(೪) “ಕ” ಕಾರದ ಪದಗಳು: ಕಡು, ಕಂದು, ಕಂಡ, ಕೆದರು