ಪದ್ಯ ೧೬: ಕೌರವರ ಪರಾಭವ ಹೇಗೆ ಕಂಡಿತು?

ಇಳಿದ ಕುದುರೆಗೆ ಬಿಸುಟ ರಥಸಂ
ಕುಳಕೆ ಹಾಯ್ಕಿದ ಟೆಕ್ಕೆಯಕೆ ಕೈ
ಬಳಿಚಿದಾಯುಧತತಿಗೆ ನೂಕಿದ ಜೋಡು ಸೀಸಕಕೆ
ಕಳಚಿದಾಭರಣಾತಪತ್ರಾ
ವಳಿಗೆ ಕಾಣೆನು ಕಡೆಯನೀ ಪರಿ
ಕೊಲೆಗೆ ಭಂಗಕೆ ನಿನ್ನ ಬಿರುದರು ಬಂದುದಿಲ್ಲೆಂದ (ದ್ರೋಣ ಪರ್ವ, ೧೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಇಳಿದ ಕುದುರೆಗಳಿಗೆ, ಬಿಟ್ಟೋಡಿದ ರಥಗಳಿಗೆ, ಕೆಳಗಿಳಿಸಿದ ಧ್ವಜಗಳಿಗೆ, ಕೈಯಿಂದ ಕೆಳಬಿದ್ದ ಆಯುಧಗಳಿಗೆ, ಸರಿಸಿ ಹಾಕಿದ ಕವಚ, ಸೀಸಕಗಳಿಗೆ, ಕಳಚಿಹಾಕಿದ ಆಭರನಗಳಿಗೆ, ಎಸೆದ ಕೊಡೆಗಳಿಗೆ ಲೆಕ್ಕವೇ ಇಲ್ಲ. ನಿನ್ನ ವೀರರು ಇಷ್ಟೊಂದು ಕೊಲೆಗೆ ಅಪಮಾನಕ್ಕೆ ಎಂದೂ ಸಿಕ್ಕಿರಲಿಲ್ಲ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಇಳಿ: ಕೆಳಕ್ಕೆ ಬಾ; ಕುದುರೆ: ಅಶ್ವ; ಬಿಸುಟು: ಹೊರಹಾಕು; ರಥ: ಬಂಡಿ; ಸಂಕುಳ: ಗುಂಪು; ಹಾಯ್ಕು: ಇಡು, ಇರಿಸು; ಟೆಕ್ಕೆ: ಬಾವುಟ, ಧ್ವಜ; ಕೈ: ಹಸ್ತ; ಆಯುಧ: ಶಸ್ತ್ರ; ತತಿ: ಗುಂಪು; ನೂಕು: ತಳ್ಳು; ಜೋಡು: ಜೊತೆ; ಸೀಸಕ: ಶಿರಸ್ತ್ರಾಣ; ಕಳಚು: ಬೇರ್ಪಡಿಸು, ಬೇರೆಮಾಡು; ಆಭರಣ: ಒಡವೆ; ಆತಪತ್ರ: ಕೊಡೆ, ಛತ್ರಿ; ಆವಳಿ: ಗುಂಪು; ಕಾಣು: ತೋರು; ಪರಿ: ರೀತಿ; ಕೊಲೆ:ಸಾವು; ಭಂಗ: ಮುರಿಯುವಿಕೆ; ಬಿರುದರು: ವೀರರು;

ಪದವಿಂಗಡಣೆ:
ಇಳಿದ +ಕುದುರೆಗೆ +ಬಿಸುಟ +ರಥ+ಸಂ
ಕುಳಕೆ +ಹಾಯ್ಕಿದ +ಟೆಕ್ಕೆಯಕೆ +ಕೈ
ಬಳಿಚಿದ್+ಆಯುಧ+ತತಿಗೆ +ನೂಕಿದ +ಜೋಡು +ಸೀಸಕಕೆ
ಕಳಚಿದ್+ಆಭರಣ+ಆತಪತ್ರ
ಆವಳಿಗೆ +ಕಾಣೆನು +ಕಡೆಯನೀ +ಪರಿ
ಕೊಲೆಗೆ +ಭಂಗಕೆ +ನಿನ್ನ +ಬಿರುದರು+ ಬಂದುದಿಲ್ಲೆಂದ

ಅಚ್ಚರಿ:
(೧) ವೀರರು ಎಂದು ಹೇಳಲು – ಬಿರುದರು ಪದದ ಬಳಕೆ
(೨) ಸಂಕುಳ, ತತಿ – ಸಾಮ್ಯಾರ್ಥ ಪದ

ಪದ್ಯ ೧೫: ಬ್ರಾಹ್ಮಣರನ್ನು ಯಾರು ಕೊಂದರು?

ವಿತತ ಸತ್ಯದ ವಿಷಯಭೇದ
ಸ್ಥಿತಿಯನರಿಯದ ಮುನಿಪ ವನಚರ
ತತಿಗೆ ಭೂಸುರಜನದ ಮಾರ್ಗವನರುಹಿದನು ಬಳಿಕ
ಅತಿ ದುರಾತ್ಮಕರವದಿರನಿಬರು
ಕ್ಷಿತಿಸುರರ ಕೊಂದಮಳ ಭೂಪ
ಪ್ರತತಿಯನು ಕೊಂಡೊಯ್ದರೆಲೆ ಕೌಂತೇಯ ಕೇಳೆಂದ (ಕರ್ಣ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಆ ಕೌಶಿಕ ಮುನಿಯು ಸತ್ಯದ ಸೂಕ್ಷ್ಮವನ್ನರಿಯದೆ ಮುನಿಯು ಬ್ರಾಹ್ಮಣರು ಹೋದ ಮಾರ್ಗವನ್ನು ತೋರಿಸಿದನು. ಆ ದುರಾತ್ಮರು ಬ್ರಾಹ್ಮಣರನ್ನು ಕೊಂದು ಅವರ ಆಭರಣಗಳನ್ನು ತೆಗೆದುಕೊಂಡು ಹೋದರು.

ಅರ್ಥ:
ವಿತತ: ಹರಡಿಕೊಂಡಿರುವ, ವಿಸ್ತಾರವಾದ; ಸತ್ಯ: ದಿಟ; ವಿಷಯ: ಇಂದ್ರಿಯ ಗೋಚರವಾಗುವ ಶಬ್ದ; ಭೇದ: ವ್ಯತ್ಯಾಸ; ಸ್ಥಿತಿ: ರೀತಿ; ಅರಿ: ತಿಳಿ; ಮುನಿ: ಋಷಿ; ವನಚರ: ಬೇಟೆಗಾರ; ತತಿ: ಗುಂಪು; ಭೂಸುರ: ಬ್ರಾಹ್ಮಣ; ಮಾರ್ಗ: ದಾರಿ; ಅರುಹು: ತಿಳಿಸು, ಹೇಳು; ಬಳಿಕ: ನಂತರ; ಅತಿ: ಬಹಳ; ದುರಾತ್ಮ: ದುಷ್ಟ; ಅನಿಬರು: ಅಷ್ಟು ಜನ; ಕ್ಷಿತಿಸುರ: ಬ್ರಾಹ್ಮಣ; ಕೊಂದು: ಸಾಯಿಸು; ಅಮಳ: ಪರಿಶುದ್ಧ; ಭೂಪ: ರಾಜ; ಪ್ರತತಿ: ಗುಂಪು; ಕೊಂಡು: ತೆಗೆದು; ಒಯ್ದು: ಹೋಗು; ಕೇಳು: ಆಲಿಸು; ಕೌಂತೇಯ: ಅರ್ಜುನ;

ಪದವಿಂಗಡಣೆ:
ವಿತತ +ಸತ್ಯದ +ವಿಷಯ+ಭೇದ
ಸ್ಥಿತಿಯನ್+ಅರಿಯದ +ಮುನಿಪ +ವನಚರ
ತತಿಗೆ+ ಭೂಸುರ+ಜನದ +ಮಾರ್ಗವನ್+ಅರುಹಿದನು +ಬಳಿಕ
ಅತಿ +ದುರಾತ್ಮಕರವದಿರ್+ಅನಿಬರು
ಕ್ಷಿತಿಸುರರ+ ಕೊಂದ್+ಅಮಳ +ಭೂಪ
ಪ್ರತತಿಯನು +ಕೊಂಡೊಯ್ದರ್+ಎಲೆ +ಕೌಂತೇಯ +ಕೇಳೆಂದ

ಅಚ್ಚರಿ:
(೧) ತತಿ, ಅತಿ, ಕ್ಷಿತಿ, ಪ್ರತತಿ, ಸ್ಥಿತಿ – ಪ್ರಾಸ ಪದಗಳು
(೨) ಭೂಸುರ, ಕ್ಷಿತಿಸುರ – ಸಮನಾರ್ಥಕ ಪದ
(೩) ಕ ಕಾರದ ತ್ರಿವಳಿ ಪದ – ಕೊಂಡೊಯ್ದರೆಲೆ ಕೌಂತೇಯ ಕೇಳೆಂದ

ಪದ್ಯ ೧೩: ದೂತರು ಗಾಂಧಾರಿಗೆ ಏನೆಂದು ಬಿನ್ನವಿಸಿದರು?

ದೇವಿ ಚಿತ್ತೈಸುವುದು ರಚಿಸಿದ
ದೇವಗಜ ಚಲುವಿಕೆಯನದನಿ
ನ್ನಾವ ಹೊಸ ಪರಮೇಷ್ಠಿಸೃಷ್ಟಿಯೊ ಹೊಗಳಲೆನೆನ್ನಳವೇ
ದೇವತತಿ ಗಗನದಲಿ ಧರೆಯ ಜ
ನಾವಳಿಗಳಿಂಬಿನಲಿ ನೆರೆದಿವೆ
ನೀವು ಬಿಜಯಂಗೈವುದೆನೆ ನಗುತೆದ್ದಳಂಬುಜಾಕ್ಷಿ (ಆದಿ ಪರ್ವ, ೨೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ದೂತರು ಗಾಂಧಾರಿಯ ಬಳಿ ಬಂದು, ದೇವಿ ಗಮನಿಸಿ, ಚಿತ್ರಿಕಾರರು ರಚಿಸಿದ ಐರಾವತವು ಚೆಲುವಿನಿಂದ ಕೂಡಿದ್ದು, ಇದು ಬ್ರಹ್ಮನ ನೂತನ ಸೃಷ್ಠಿಯಂತಿದೆ, ಅದರ ಅಂದವನ್ನು ಹೊಗಳಲು ಸಾಧ್ಯವಿಲ್ಲ. ಅದರ ಸುತ್ತ ಜನರು, ಆಗಸದಲ್ಲಿ ದೇವತೆಗಳು ಸೇರಿದ್ದಾರೆ, ನೀವು ವ್ರತಾಚರಣೆಗೆ ಬರಬೇಕು ಎಂದು ದೂತರು ಹೇಳಿದರು.

ಅರ್ಥ:
ದೇವಿ: ಸ್ತ್ರೀಯರಿಗೆ ಗೌರವ ಸೂಚಕ ಪದ; ಚಿತ್ತೈಸು: ಗಮನಿಸಿ; ರಚಿಸು: ನಿರ್ಮಿಸು; ದೇವಗಜ: ಐರಾವತ; ಚಲುವಿಕೆ: ಅಂದ, ಸೌಂದರ್ಯ; ಹೊಸ: ನವೀನ; ಪರಮೇಷ್ಠಿ: ಬ್ರಹ್ಮ; ಸೃಷ್ಟಿ: ಹುಟ್ಟು; ಹೊಗಳು: ಸ್ತುತಿ;ಅಳವು: ಸಾಧ್ಯವಾದುದು; ತತಿ: ಸಮೂಹ; ಗಗನ: ಆಗಸ; ಧರೆ: ಭೂಮಿ; ಜನಾವಳಿ: ಜನರ ಗುಂಪು; ಇಂಬು: ಆಶ್ರಯ; ನೆರೆದು: ಸೇರು; ಬಿಜಯಂಗೈಸು: ದಯಮಾಡಿಸು; ನಗು: ಸಂತೋಷ; ಅಂಬು: ನೀರು; ಅಂಬುಜ: ಕಮಲ; ಅಕ್ಷಿ: ಕಣ್ಣು;

ಪದವಿಂಗಡಣೆ:
ದೇವಿ+ ಚಿತ್ತೈಸುವುದು +ರಚಿಸಿದ
ದೇವಗಜ+ ಚಲುವಿಕೆಯನ್+ಅದನ್
ಇನ್ನಾವ +ಹೊಸ +ಪರಮೇಷ್ಠಿ+ಸೃಷ್ಟಿಯೊ +ಹೊಗಳಲ್+ಎನ್ನನ್+ ಅಳವೇ
ದೇವತತಿ+ ಗಗನದಲಿ+ ಧರೆಯ +ಜ
ನಾವಳಿಗಳ್+ಇಂಬಿನಲಿ+ ನೆರೆದಿವೆ
ನೀವು +ಬಿಜಯಂಗೈವುದ್+ಎನೆ+ ನಗುತ+ಎದ್ದಳ್+ಅಂಬುಜಾಕ್ಷಿ

ಅಚ್ಚರಿ:
(೧) ದೇವಿ, ದೇವ – ಸ್ತ್ರೀ ಪುಲ್ಲಿಂಗ ಶಬ್ದ – ೧, ೨ ಸಾಲಿನ ಮೊದಲ ಪದ
(೨) ತತಿ, ಆವಳಿ – ಸಮೂಹ ದ ಸಮನಾರ್ಥಕ ಪದ

ಪದ್ಯ ೫೧: ಶಿವನು ನಾರಾಯಣಿಗೆ ಹೇಗೆ ಇದು ವಿಧಿ ಸಮ್ಮತ ಎಂದು ವಿವರಿಸಿದನು?

ಶ್ರುತಿಗಳೆಂಬುದುಯೆಮ್ಮ ನುಡಿ ಸಂ
ಸೃತಿಗಳೆಮ್ಮಯ ಚೇಷ್ಟೆ ಧರ್ಮದ
ಗತಿ ವಿಚಾರಿಸಲೆಮ್ಮ ನೇಮವು ವಿಹಿತ ವಿಧಿಯೆಂದು
ಕ್ರತುಗಳೀ ಮನ್ವಾದಿಗಳು ಸುರ
ತತಿಗಳಬುಜಭವಾದಿ ದೇವ
ಪ್ರತತಿಯೆನ್ನಾಜ್ಞೆಯೊಳೆನುತಲಾ ಸತಿಗೆ ಶಿವ ನುಡಿದ (ಆದಿ ಪರ್ವ, ೧೬ ಸಂಧಿ, ೫೧ ಪದ್ಯ)

ತಾತ್ಪರ್ಯ:
ಭಯಭೀತಳಾದ ನಾರಾಯಣಿಗೆ ಶಿವನು ಅಭಯವನ್ನು ನೀಡುತ್ತಾ, ನನ್ನ ವಾಕ್ಯಗಳೆ ವೇದಗಳು, ಸಂಸಾರ ಚಕ್ರವು ನನ್ನ ಲೀಲೆ, ನಾನು ಸರಿಯಾದುದೆಂದು ವಿಧಿಸಿದುದೇ ಧರ್ಮದ ಆಚರಣೆ, ಯಜ್ಞಗಳು, ಮನುಗಳು, ದೇವತೆಗಳು, ಬ್ರಹ್ಮಾದಿಯಾಗಿ ಸಕಲ ದೇವವೃಂದವು ನನ್ನ ಆಜ್ಞೆಯೇ ಮೂಲ ಎಂದು ಶಿವನು ನಾರಾಯಣಿಗೆ ತಿಳಿಸಿದನು.

ಅರ್ಥ:
ಶ್ರುತಿ: ವೇದ; ನುಡಿ: ಮಾತು; ಸಂಸೃತಿ:ಸಂಸಾರ; ಚೇಷ್ಟೆ: ಲೀಲೆ; ಧರ್ಮ: ಧಾರಣವಾದ, ಒಳ್ಲೆಯ ನಡೆ; ಗತಿ: ವೇಗ; ವಿಚಾರ: ವಿಮರ್ಶೆ; ನೇಮ: ನಿಯಮ; ವಿಹಿತ: ಔಚಿತ್ಯಪೂರ್ಣ;ವಿಧಿ: ಆದೇಶ, ಆಜ್ಞೆ; ಕ್ರತು:ಯಾಗ, ಯಜ್ಞ; ಮನು: ಮಂತ್ರ; ಮನುಷ್ಯಕುಲದ ಮೂಲಪುರುಷ; ಸುರ: ದೇವತೆಗಳು; ತತಿ: ಗುಂಪು; ಅಬುಜಭವ: ಬ್ರಹ್ಮ; ಅಬುಜ: ಕಮಲ;ಆದಿ: ಮುಂತಾದ; ದೇವ: ಸುರರು; ಪ್ರತತಿ: ಗುಂಪು; ಆಜ್ಞೆ: ಆದೇಶ; ಸತಿ: ಗರತಿ, ಹೆಣ್ಣು;

ಪದವಿಂಗಡಣೆ:
ಶ್ರುತಿಗಳ್+ಎಂಬುದು+ಯೆಮ್ಮ +ನುಡಿ+ ಸಂ
ಸೃತಿಗಳ್+ಎಮ್ಮಯ+ ಚೇಷ್ಟೆ +ಧರ್ಮದ
ಗತಿ+ ವಿಚಾರಿಸಲ್+ಎಮ್ಮ +ನೇಮವು +ವಿಹಿತ+ ವಿಧಿಯೆಂದು
ಕ್ರತುಗಳ್+ಈ+ ಮನ್ವಾದಿಗಳು+ ಸುರ
ತತಿಗಳ್+ಅಬುಜಭವ+ಆದಿ+ ದೇವ
ಪ್ರತತಿ+ಯೆನ್+ಆಜ್ಞೆಯೊಳ್+ಎನುತಲಾ +ಸತಿಗೆ +ಶಿವ +ನುಡಿದ

ಅಚ್ಚರಿ:
(೧) ತತಿ, ಪ್ರತತಿ – ಸಮನಾರ್ಥಕ ಪದ (ಗುಂಪು), ೫, ೬ ಸಾಲಿನ ಮೊದಲ ಪದ
(೨) ಎಮ್ಮ – ಮೊದಲ ೩ ಸಾಲಿನಲ್ಲು ಬರುವ ಪದ
(೩) ಬ್ರಹ್ಮನನ್ನು ಅಬುಜಭವ ಎಂದು ವರ್ಣಿಸಿರುವುದು
(೪) ಸುರ, ದೇವ – ಸಮನಾರ್ಥಕ ಪದ, ೪,೫ ಸಾಲಿನ ಕೊನೆಯ ಪದಗಳು