ಪದ್ಯ ೫೫: ಕೌರವನ ಆಗಮನ ಹೇಗಿತ್ತು?

ನೆಗಹಿದವು ಕೈದೀವಿಗೆಯ ಸಾ
ಲುಗಳು ಹೊಂದಂಡಿಗೆಯ ದೂವಾ
ರಿಗಳು ವೆಂಠಣಿಸಿದರು ಸೀಗುರಿ ಮೊಗವ ಮೋಹಿದವು
ಉಗಿದ ಕಡಿತಲೆ ಮುಸುಕಿದವು ಚೌ
ರಿಗಳ ಡೊಂಕಣಿ ತುರುಗಿದವು ಮೌ
ಳಿಗಳ ಮಸ್ತಕದವರು ನೆಲನುಗ್ಗಡಿಸಲೈತಂದ (ದ್ರೋಣ ಪರ್ವ, ೮ ಸಂಧಿ, ೫೫ ಪದ್ಯ)

ತಾತ್ಪರ್ಯ:
ಕೌರವನು ಬರುವಾಗ ಕೈದೀವಿಗೆಗಳ ಸಾಲು ಸಾಲೇ ಬರುತ್ತಿತ್ತು. ಬಂಗಾರದ ಪಲ್ಲಕ್ಕಿಯನ್ನು ಹೊರುವವರು ನಡೆದರು. ಸೀಗುರಿಗಳು ಕಾಣಿಸಿದವು. ಸೆಳೆದ ಕತ್ತಿ ಡೊಂಕಣಿಗಳು ದೊರೆಗೆ ರಕ್ಷಣೆ ಕೊಡುತ್ತಿದ್ದವು. ತಲೆಯ ಮೇಲೆ ಕೈಯೆತ್ತಿ ಅವನ ಬಿರುದುಗಳನ್ನು ಉಚ್ಚ ಧ್ವನಿಯಲ್ಲಿ ಘೋಷಿಸುತ್ತಿದ್ದರು.

ಅರ್ಥ:
ನೆಗಹು: ಮೇಲೆತ್ತು; ದೀವಿಗೆ: ಸೊಡರು, ದೀಪಿಕೆ; ಸಾಲು: ಆವಳಿ; ಹೊಂದು: ದೂವಾರಿ: ಹೊರುವವನು; ವೆಂಠಣಿಸು: ಮುತ್ತಿಗೆ ಹಾಕು; ಸೀಗುರಿ: ಚಾಮರ; ಮೊಗ: ಮುಖ; ಮೋಹ: ಮೈ ಮರೆಯುವಿಕೆ ಎಚ್ಚರ ತಪ್ಪುವಿಕೆ; ಉಗಿ: ಹೊರಹಾಕು; ಕಡಿ: ತುಂಡುಮಾಡು, ತರಿ; ತಲೆ: ಶಿರ; ಮುಸುಕು: ಹೊದಿಕೆ; ಯೋನಿ; ಚೌರಿ: ಚೌರಿಯ ಕೂದಲು; ಡೊಂಕಣಿ: ಈಟಿ; ತುರುಗು: ಸಂದಣಿ, ದಟ್ಟಣೆ; ಮೌಳಿ: ಶಿರ; ಮಸ್ತಕ: ಶಿರ; ನೆಲ: ಭೂಮಿ; ಉಗ್ಗಡಿಸು: ಸಾರು, ಘೋಷಿಸು; ಅಂಡಲೆ: ಕಾಡು;

ಪದವಿಂಗಡಣೆ:
ನೆಗಹಿದವು +ಕೈದೀವಿಗೆಯ +ಸಾ
ಲುಗಳು +ಹೊಂದಂಡಿಗೆಯ+ ದೂವಾ
ರಿಗಳು +ವೆಂಠಣಿಸಿದರು +ಸೀಗುರಿ +ಮೊಗವ +ಮೋಹಿದವು
ಉಗಿದ +ಕಡಿತಲೆ +ಮುಸುಕಿದವು +ಚೌ
ರಿಗಳ +ಡೊಂಕಣಿ +ತುರುಗಿದವು +ಮೌ
ಳಿಗಳ +ಮಸ್ತಕದವರು +ನೆಲನ್+ಉಗ್ಗಡಿಸಲ್+ಐತಂದ

ಅಚ್ಚರಿ:
(೧) ಸಾಲುಗಳು, ದುವಾರಿಗಳು – ಪ್ರಾಸ ಪದಗಳು

ಪದ್ಯ ೪೭: ಯಮನ ಸ್ವಾಗತಕ್ಕೆ ಯಾವ ತೋರಣ ಕಟ್ಟಲಾಯಿತು?

ಹೆಣನ ಹೋಳಿನ ಸಿಡಿದಡಗು ಡೊಂ
ಕಣಿಯೊಳೆಸೆದುವು ಕಾಲನಾರೋ
ಗಣೆಗೆ ಮಿಗೆ ಪಡಿಸಣವ ನೋಡದೆ ಮಾಣವೆಂಬಂತೆ
ಕುಣಿವ ಕುಂತಾಗ್ರದಲಿ ಜೋಲುವ
ಹಿಣಿಲುಗರುಳೊಪ್ಪಿದವು ಜವನೀ
ರಣಕೆ ಬರೆ ಕಟ್ಟಿದವು ಗುಡಿ ತೋರಣವನೆಂಬಂತೆ (ಭೀಷ್ಮ ಪರ್ವ, ೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಡೊಂಕಣಿಗಳಲ್ಲಿ ಹೆಣಗಳಿಂದ ಹಾರಿದ ಮಾಂಸದ ತುಂಡುಗಳು, ಯಮನ ಊಟಕ್ಕೆ ಈ ಅಡಿಗೆ ಸರಿಯಾಗಿದೆಯೇ ಎಂದು ಪರೀಕ್ಷೆಗೆ ಒಳಗಾದಂತೆ ತೋರುತ್ತಿದ್ದವು, ಯಮನು ಈ ರಣರಂಗಕ್ಕೆ ಬಂದಿರುವುದರಿಂದ ಅವನ ಸ್ವಾಗತಕ್ಕಾಗಿ ಕಟ್ಟಿದ ತೋರಣಗಳೆಂಬಂತೆ ಕುಂತಗಳ ತುದಿಯಲ್ಲಿ ಕರುಳುಗಳ ಹಿಣೀಲು ಕಾಣುತ್ತಿದ್ದವು.

ಅರ್ಥ:
ಹೆಣ: ಜೀವವಿಲ್ಲದ ಶರೀರ; ಹೋಳು: ತುಂಡು; ಸಿಡಿ: ಹಾರು; ಅಡಗು: ಮಾಂಸ; ಡೊಂಕಣಿ: ಈಟಿ; ಎಸೆ: ತೋರು; ಕಾಲ: ಯಮ; ಆರೋಗಣೆ: ಊಟ, ಭೋಜನ; ಮಿಗೆ: ಅಧಿಕ; ಪಡಿಸಣ: ಯಜಮಾನರು ಊಟ ಮಾಡಿದ ಸ್ಥಳದಲ್ಲಿಯೇ ಕುಳಿತು ಅವನು ಬಿಟ್ಟ ಆಹಾರವನ್ನು ಊಟ ಮಾಡುವಿಕೆ; ನೋಡು: ವೀಕ್ಷಿಸು; ಮಾಣು: ಸುಮ್ಮನಿರು; ಕುಣಿ: ನರ್ತಿಸು; ಕುಂತ: ಈಟಿ, ಭರ್ಜಿ; ಅಗ್ರ: ಮುಂಭಾಗ; ಜೋಲು: ತೂಗಾಡು; ಹಿಣಿಲು: ಹೆರಳು, ಜಡೆ; ಕರುಳು: ಪಚನಾಂಗ; ಒಪ್ಪು: ಸಮ್ಮತಿ; ಜವ: ಯಮ; ರಣ: ಯುದ್ಧಭೂಮಿ; ಬರೆ: ಆಗಮನ; ಕಟ್ಟು: ನಿರ್ಮಿಸು; ಗುಡಿ: ಆಲಯ; ತೊರಣ: ಹೊರಬಾಗಿಲು ಅಲಂಕಾರ;

ಪದವಿಂಗಡಣೆ:
ಹೆಣನ +ಹೋಳಿನ +ಸಿಡಿದ್+ ಅಡಗು +ಡೊಂ
ಕಣಿಯೊಳ್+ಎಸೆದುವು+ ಕಾಲನ್+ಆರೋ
ಗಣೆಗೆ +ಮಿಗೆ +ಪಡಿಸಣವ +ನೋಡದೆ +ಮಾಣವೆಂಬಂತೆ
ಕುಣಿವ+ ಕುಂತ+ಅಗ್ರದಲಿ+ ಜೋಲುವ
ಹಿಣಿಲು+ ಕರುಳೊಪ್ಪಿದವು+ ಜವನ್+ಈ
ರಣಕೆ +ಬರೆ +ಕಟ್ಟಿದವು +ಗುಡಿ +ತೋರಣವನ್+ಎಂಬಂತೆ

ಅಚ್ಚರಿ:
(೧) ಕಾಲ, ಜವ – ಸಮನಾರ್ಥಕ ಪದ
(೨) ಕರುಳನ್ನು ತೋರಣಕ್ಕೆ ಹೋಲಿಸುವ ಕಲ್ಪನೆ – ಕುಣಿವ ಕುಂತಾಗ್ರದಲಿ ಜೋಲುವ
ಹಿಣಿಲುಗರುಳೊಪ್ಪಿದವು ಜವನೀ ರಣಕೆ ಬರೆ ಕಟ್ಟಿದವು ಗುಡಿ ತೋರಣವನೆಂಬಂತೆ

ಪದ್ಯ ೪೧: ಡೊಂಕಣಿಯ ಸೈನಿಕರು ಹೇಗೆ ಸಿದ್ಧರಾದರು?

ತಲೆಯ ಖಡ್ಡಣಿಗೆಯ ಸುರಂಗದ
ಪಳಿಯ ಸೀರೆಯ ಭಾಳಭೂತಿಯ
ಬಳಿಯ ಚೌರಿಯ ಝಗೆಯ ಸಬಳದ ಕಾಲ ತೊಡರುಗಳ
ಉಲಿವ ಬಿರುದಿನ ಕಹಳೆಗಳ ಕಳ
ಕಳಿಕೆ ಮಿಗೆ ನಿಶ್ಶಂಕಮಲ್ಲರು
ಕಳನೊಳಗೆ ತಲೆದೋರಿದರು ಡೊಂಕಣಿಯ ಪಟುಭಟರು (ಭೀಷ್ಮ ಪರ್ವ, ೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ತಲೆಗೆ ಶಿರಸ್ತ್ರಾಣವನ್ನು ತೊಟ್ಟು, ಉತ್ತಮ ವಸ್ತ್ರವನ್ನು ಧರಿಸಿ ಹಣೆಗೆ ವಿಭೂತಿಯಿಟ್ಟು, ಬಿಳಿಯ ಚೌರಿಗಳನ್ನು ಧರಿಸಿ, ಕಾಲಿಗೆ ಬಿರುದಿನ ಪೆಂಡೆಯಗಳನ್ನು ಕಟ್ಟಿ, ಕಹಳೆಗಳು ಅವರ ಪರಾಕ್ರಮವನ್ನು ಸಾರುತ್ತಿರಲು, ಡೊಂಕಣಿಯ ಯೋಧರು ಯುದ್ಧಕ್ಕೆ ಸನ್ನದ್ಧರಾದರು.

ಅರ್ಥ:
ತಲೆ: ಶಿರ; ಖಡ್ಡ: ದಿಟ್ಟತನ; ಸುರಂಗ: ಒಳ್ಳೆಯ ಬಣ್ಣ; ಪಳಿ: ಅತಿಶಯಿಸು; ಸೀರೆ: ಬಟ್ಟೆ; ಭಾಳ: ಹಣೆ; ಭೂತಿ: ವಿಭೂತಿ; ಬಿಳಿ: ಸಿತವರ್ಣ; ಚೌರಿ: ಚೌರಿಯ ಕೂದಲು; ಝಗೆ: ಹೊಳಪು; ಸಬಳ: ಈಟಿ, ಭರ್ಜಿ; ಕಾಲ: ಸಮಯ; ತೊಡರು: ಬಿರುದಿನ ಸಂಕೇತವಾಗಿ ಧರಿಸುವ ಕಾಲ ಬಳೆ; ಉಲಿ: ಶಬ್ದ; ಬಿರುದು: ಪ್ರಸಿದ್ಧಿ, ಪ್ರಖ್ಯಾತಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಕಳಕಳಿ: ಉತ್ಸಾಹ; ಮಿಗೆ: ಅಧಿಕ; ನಿಶ್ಶಂಕ: ನಿರ್ಭಯ; ಮಲ್ಲರು: ಪರಾಕ್ರಮಿ; ಕಳ: ರಣರಂಗ; ತೋರು: ಗೋಚರಿಸು; ಪಟುಭಟ: ಪರಾಕ್ರಮಿ;

ಪದವಿಂಗಡಣೆ:
ತಲೆಯ +ಖಡ್ಡಣಿಗೆಯ +ಸುರಂಗದ
ಪಳಿಯ +ಸೀರೆಯ +ಭಾಳ+ಭೂತಿಯ
ಬಳಿಯ +ಚೌರಿಯ +ಝಗೆಯ +ಸಬಳದ +ಕಾಲ +ತೊಡರುಗಳ
ಉಲಿವ +ಬಿರುದಿನ+ ಕಹಳೆಗಳ +ಕಳ
ಕಳಿಕೆ+ ಮಿಗೆ +ನಿಶ್ಶಂಕಮಲ್ಲರು
ಕಳನೊಳಗೆ+ ತಲೆದೋರಿದರು +ಡೊಂಕಣಿಯ +ಪಟುಭಟರು

ಅಚ್ಚರಿ:
(೧) ಡೊಂಕಣಿಯ ಸೈನ್ಯದ ಚಿತ್ರಣ – ತಲೆಯ ಖಡ್ಡಣಿಗೆಯ ಸುರಂಗದ ಪಳಿಯ ಸೀರೆಯ ಭಾಳಭೂತಿಯ
ಬಳಿಯ ಚೌರಿಯ ಝಗೆಯ ಸಬಳದ ಕಾಲ ತೊಡರುಗಳ
(೨) ಪಳಿ, ಬಳಿ, ಕಳಕಳಿ – ಪ್ರಾಸ ಪದಗಳು

ಪದ್ಯ ೪೦: ವೀರರನ್ನು ಹೇಗೆ ಹುರುದುಂಬಿಸುತ್ತಿದ್ದರು?

ಕುಣಿವ ತೊಡರಿನ ಪೆಂಡೆಯದ ಡೊಂ
ಕಣಿಯ ಬಿರುದರ ನೂಕುನೂಕೆನೆ
ಹಿಣಿಲ ಬಾವುಲಿಗಾರರಾವೆಡೆ ಭಾಷೆಯತಿಬಲರು
ಹೊಣಕೆಯಿದಲೇ ಹಿಂದ ಹಾರದಿ
ರಣಕಿಸುವ ಮಾತಿಲ್ಲ ದಿವಿಜರ
ಗಣಿಕೆಯರು ಬಯಸುವರು ನೂಕುವದೆಂದು ಸಾರಿದರು (ಭೀಷ್ಮ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಾಲಿಗೆ ಬಿರುದಿನ ಖಡ್ಗವನ್ನು ಕಟ್ಟಿದವರನ್ನು ಡೊಂಕಣಿಯವರನ್ನು ಯುದ್ಧಕ್ಕೆ ಕಳಿಸು ಎಂದಪ್ಪಣೆಯಾಯಿತು. ಹಿಣಿಲು ಬಾವಲಿ ಹಾಕಿದ ಮಾತಿನ ವೀರರೆಲ್ಲಿ? ಮುನ್ನುಗ್ಗುವ ಸಮಯವಿದು, ಹಿಂದಿನವರನ್ನು ಬಯಸಬೇಡಿ, ನಿಮ್ಮನ್ನು ಅಣಕಿಸುತ್ತಿಲ್ಲ ಅಪ್ಸರ ಸ್ತ್ರೀಯರು ನಿಮ್ಮ ಸಂಗವನ್ನು ಬಯಸುತ್ತಿದ್ದಾರೆ ಮುನ್ನುಗ್ಗಿರಿ ಎಂದು ರಣಡಂಗುರವನ್ನು ಸಾರಿದರು.

ಅರ್ಥ:
ಕುಣಿ: ನರ್ತಿಸು; ತೊಡರು: ಬಿರುದಿನ ಸಂಕೇತವಾಗಿ ಧರಿಸುವ ಕಾಲ ಬಳೆ; ಪೆಂಡೆಯ: ಕಾಲಿನ ಖಡ್ಗ; ಡೊಂಕಣಿ: ಈಟಿ; ಬಿರುದು: ಗೌರವಸೂಚಕ ಪದ; ನೂಕು: ತಳ್ಳು; ಹಿಣಿಲು: ಹೆರಳು, ಜಡೆ; ಬಾವುಲಿ: ಒಂದು ಬಗೆಯ ಕಿವಿಯಾಭರಣ; ಭಾಷೆ: ಮಾತು; ಅತಿಬಲ: ಪರಾಕ್ರಮಿ; ಹೊಣಕೆ: ಜೊತೆ, ಜೋಡಿ; ಹಿಂದ: ಹಿಂಭಾಗ; ಹಾರು: ಎದುರುನೋಡು; ಅಣಕಿಸು: ಹಂಗಿಸು; ಮಾತು: ವಾಣಿ; ದಿವಿಜ: ದೇವತೆ; ಗಣಿಕೆ: ವೇಶ್ಯೆ; ದಿವಿಜರಗಣಿಕೆ: ಅಪ್ಸರೆ; ಬಯಸು: ಆಸೆಪಡು; ಸಾರು: ಹರಡು;

ಪದವಿಂಗಡಣೆ:
ಕುಣಿವ +ತೊಡರಿನ+ ಪೆಂಡೆಯದ+ ಡೊಂ
ಕಣಿಯ +ಬಿರುದರ +ನೂಕುನೂಕ್+ಎನೆ
ಹಿಣಿಲ +ಬಾವುಲಿಗಾರರ್+ಆವೆಡೆ +ಭಾಷೆ+ಅತಿಬಲರು
ಹೊಣಕೆಯಿದಲೇ +ಹಿಂದ +ಹಾರದಿರ್
ಅಣಕಿಸುವ +ಮಾತಿಲ್ಲ +ದಿವಿಜರ
ಗಣಿಕೆಯರು +ಬಯಸುವರು +ನೂಕುವದೆಂದು +ಸಾರಿದರು

ಅಚ್ಚರಿ:
(೧) ವೀರಸ್ವರ್ಗ ಲಭಿಸುವುದು ಎಂದು ಹೇಳುವ ಪರಿ – ಹಿಂದ ಹಾರದಿರಣಕಿಸುವ ಮಾತಿಲ್ಲ ದಿವಿಜರ
ಗಣಿಕೆಯರು ಬಯಸುವರು ನೂಕುವದೆಂದು ಸಾರಿದರು

ಪದ್ಯ ೧೦: ಪಾಂಡವರ ಸೈನ್ಯದ ಮುಂಚೂಣಿ ವೀರರು ಯಾರು?

ಡೊಂಕಣಿಯ ಹೊದರುಗಳಲೆಡಬಲ
ವಂಕದಾನೆಯ ಥಟ್ಟುಗಳ ನಿ
ಶ್ಶಂಕಮಲ್ಲನು ದ್ರುಪದನೀತ ವಿರಾಟನೃಪನೀತ
ಮುಂಕುಡಿಯ ನಾಯಕರಿವರು ಪತಿ
ಯಂಕಕಾರರು ಇವರ ಬಳಿಯಲಿ
ಬಿಂಕದೆರಡಕ್ಷೋಣಿ ಬಲವದೆ ರಾಯ ನೋಡೆಂದ (ಭೀಷ್ಮ ಪರ್ವ, ೨ ಸಂಧಿ, ೧೦ ಪದ್ಯ)

ತಾತ್ಪರ್ಯ:
ಈಟಿಯ ಪೊದೆಗಳು, ಎಡಬಲದಲ್ಲಿ ಆನೆಯ ಸೈನ್ಯಗಳು, ಇವುಗಳ ನಡುವಿರುವವನು ದ್ರುಪದ, ಇವನು ವಿರಾಟ, ಇವರ ಬಳಿ ಎರಡು ಅಕ್ಷೋಹಿಣಿ ಸೈನ್ಯಗಳಿವೆ. ಇವರು ಪಾಂಡವರ ಮುಂಚೂಣೀಯ ವೀರರು ಎಂದು ಭೀಷ್ಮನು ಪಾಂಡವರ ಸೈನ್ಯದ ಬಗ್ಗೆ ವಿವರಿಸಿದರು.

ಅರ್ಥ:
ಡೊಂಕಣಿ: ಈಟಿ; ಹೊದರು: ಪೊದೆ, ಹಿಂಡಲು; ಎಡಬಲ: ಅಕ್ಕಪಕ್ಕ; ಅಂಕ: ಗುರುತು, ಯುದ್ಧ; ಆನೆ: ಗಜ; ಥಟ್ಟು: ಪಕ್ಕ, ಕಡೆ; ಶ್ಶಂಕ: ಅನುಮಾನ; ಮಲ್ಲ: ಪರಾಕ್ರಮಿ; ನೃಪ: ರಾಜ; ಮುಂಕುಡಿ: ಸೈನ್ಯದ ಮುಂಭಾಗ; ನಾಯಕ: ಒಡೆಯ; ಬಳಿ: ಹತ್ತಿರ; ಬಿಂಕ:ಗರ್ವ, ಜಂಬ; ಬಲ: ಸೈನ್ಯ; ರಾಯ: ರಾಜ; ನೋಡು: ವೀಕ್ಷಿಸು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ;

ಪದವಿಂಗಡಣೆ:
ಡೊಂಕಣಿಯ +ಹೊದರುಗಳಲ್+ಎಡಬಲವ್
ಅಂಕದ್+ಆನೆಯ +ಥಟ್ಟುಗಳ+ ನಿ
ಶ್ಶಂಕ+ಮಲ್ಲನು +ದ್ರುಪದನ್+ಈತ +ವಿರಾಟ+ನೃಪನ್+ಈತ
ಮುಂಕುಡಿಯ +ನಾಯಕರ್+ಇವರು +ಪತಿ
ಯಂಕಕಾರರು+ ಇವರ+ ಬಳಿಯಲಿ
ಬಿಂಕದ್+ಎರಡಕ್ಷೋಣಿ +ಬಲವದೆ +ರಾಯ +ನೋಡೆಂದ

ಅಚ್ಚರಿ:
(೧) ನೃಪ, ರಾಯ – ಸಮನಾರ್ಥಕ ಪದ

ಪದ್ಯ ೨೭: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೪?

ಕಾಲಯವನನುಪಾಯದಿಂದವೆ
ಬೀಳಿಸಿದೆ ಮಾಗಧನನಾ ಪರಿ
ಸೀಳಿಸಿದೆ ಭೀಷ್ಮಾದಿಗಳ ಸೋಲಿಸಿದೆ ಸಾಮದಲಿ
ಡಾಳನತಿ ಡೊಂಕಣಿಯ ಠಕ್ಕಿನ
ಠೌಳಿಕಾರನು ನಿನ್ನ ಮಾಯೆಯ
ಹೇಳಲಮ್ಮೆನು ಕೃಷ್ಣ ಕರುಣಿಸು ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಕೃಷ್ಣ ನೀನು ಕಾಲಯವನನ್ನು ಉಪಾಯದಿಂದ ಕೊಲ್ಲಿಸಿದೆ, ಜರಾಸಂಧನನ್ನು ಹೇಗೆ ಸೀಳಿಸಿದೆಯೆಂದು ನಾನೇ ನೋಡಿದ್ದೇನೆ. ಭೀಷ್ಮ, ದ್ರೋಣರನ್ನು ಸಾಮೋಪಾಯದಿಂದ ಕೊಲ್ಲಿಸಿದೆ ಎಂದು ನಾನು ತಿಳಿದಿರವೆ, ನೀನು ವಂಚಕ, ಮಹಾ ಮೋಸಗಾರ, ವಕ್ರಮಾರ್ಗದ ಠಕ್ಕಿನವನು, ನಿನ್ನ ಮಾಯೆಯನ್ನು ವರ್ಣಿಸಲು ಮಾತುಗಳಿಲ್ಲ. ದಯವಿಟ್ಟು ಕೃಷ್ಣ ಕರ್ಣನು ಯಾರೆಂದು ತಿಳಿಸು.

ಅರ್ಥ:
ಉಪಾಯ: ಯುಕ್ತಿ; ಬೀಳಿಸು: ಅಳಿ, ಕೊಲ್ಲು; ಮಾಗಧ: ಜರಾಸಂಧ; ಸೀಳಿಸು: ಕತ್ತರಿಸು; ಸೋಲಿಸು: ಪರಾಭವ; ಸಾಮ: ಒಡಂ ಬಡಿಕೆ, ಕಾರ್ಯ ಸಾಧನೆಯ ಚತುರೋಪಾಯಗಳಲ್ಲಿ ಒಂದು; ಡಾಳ: ಮೋಸ; ಡೊಂಕಣಿ: ಈಟಿ; ಠಕ್ಕು:ಮೋಸ; ಠೌಳಿ:ಮೋಸ, ವಂಚನೆ; ಮಾಯ:ಗಾರುಡಿ, ಇಂದ್ರಜಾಲ, ಮೋಸ; ಹೇಳು: ತಿಳಿಸು; ಕರುಣಿಸು: ದಯಪಾಲಿಸು;

ಪದವಿಂಗಡಣೆ:
ಕಾಲಯವನನ್+ಉಪಾಯದಿಂದವೆ
ಬೀಳಿಸಿದೆ+ ಮಾಗಧನನ್+ಆ+ ಪರಿ
ಸೀಳಿಸಿದೆ +ಭೀಷ್ಮಾದಿಗಳ +ಸೋಲಿಸಿದೆ +ಸಾಮದಲಿ
ಡಾಳನತಿ+ ಡೊಂಕಣಿಯ +ಠಕ್ಕಿನ
ಠೌಳಿಕಾರನು+ ನಿನ್ನ +ಮಾಯೆಯ
ಹೇಳಲಮ್ಮೆನು+ ಕೃಷ್ಣ+ ಕರುಣಿಸು +ಕರ್ಣನಾರೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೃಷ್ಣ ಕರುಣಿಸು ಕರ್ಣನಾರೆಂದ
(೨) ಕೃಷ್ಣನನ್ನು ಮೋಸಗಾರ ಎಂದು ಹೇಳುವ ಬಗೆ – ಡಾಳನತಿ ಡೊಂಕಣಿಯ ಠಕ್ಕಿನ
ಠೌಳಿಕಾರನು

ಪದ್ಯ ೧೦: ಕರ್ಣನು ಯಾರನ್ನು ತನ್ನ ಬಾಣಗಳಿಂದ ಸಂಹರಿಸಿದನು?

ಸಾಲ ಝಲ್ಲರಿಗಳ ಪತಾಕಾ
ಜಾಲವನು ಚಾಮರವ ಗೋವಳಿ
ಗೋಲ ಡೊಂಕಣಿಯೊಡ್ಡನೆತ್ತಿದ ಸಿಂಧ ಸೀಗುರಿಯ
ಧೂಳಿಪಟಮಾದಿದನು ಮಿಡುಕು
ಳ್ಳಾಳಕೊಂದನು ಗಜರಥಾಶ್ವದ
ಮಾಲೆಯನು ಮುತ್ತಿದುದು ಕರ್ಣನ ಶಿಳಿಮುಖವ್ರಾತ (ಕರ್ಣ ಪರ್ವ, ೨೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕರ್ಣನು ಮತ್ತೆ ಬಾಣಗಳಿಂದ ಝಲ್ಲರಿಗಳು ಪತಾಕೆಗಳು, ಚಾಮರಗಳು, ಕುದುರೆ ಆನೆಗಲನ್ನು ಬಳಸುವ ಕೋಲುಗಳನ್ನು ಕಡಿದು, ಡೊಂಕಣಿ ಹಿಡಿದ ಭಟರ ಸೇನೆಯನ್ನು ಧೂಳಿಪಟ ಮಾಡಿದನು. ವೀರರನ್ನು ಸಂಹರಿಸಿದನು. ಆನೆ ಕುದುರೆಗಳ ಮಾಲೆಯನ್ನು ಕರ್ಣನ ಶಿಳೀಮುಖಗಳು ಮುತ್ತಿದವು.

ಅರ್ಥ:
ಸಾಲ: ಕಡ, ಉದ್ದರಿ, ಪ್ರಾಕಾರ; ಝಲ್ಲರಿ: ಜಾಲರಿ, ಕುಚ್ಚು, ಗೊಂಡೆ; ಪತಾಕ: ಬಾವುಟ; ಜಾಲ: ಸಮೂಹ; ಕಪಟ; ಚಾಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ಗೋವಳಿಗೋಲ: ಪತಾಕೆ, ಚಾಮರ, ಅಲಂಕಾರದ ವಸ್ತು; ಡೊಂಕಣಿ: ಈಟಿ; ಸಿಂಧ: ಬಾವುಟ; ಸೀಗುರಿ: ಚಾಮರ, ಚವರಿ; ಧೂಳಿಪಟ: ನಾಶವಾಗುವಿಕೆ, ಹಾಳಾಗುವಿಕೆ; ಮಿಡುಕು: ಅಲುಗು, ಕದಲು; ಕೊಂದು: ಕೊಲ್ಲು; ಗಜ: ಆನೆ; ರಥ: ಬಂಡಿ; ಅಶ್ವ: ಕುದುರೆ; ಮಾಲೆ: ಹಾರ; ಮುತ್ತು: ಆವರಿಸು; ಶಿಳಿಮುಖ: ಬಾಣ; ವ್ರಾತ: ಗುಂಪು;

ಪದವಿಂಗಡಣೆ:
ಸಾಲ +ಝಲ್ಲರಿಗಳ +ಪತಾಕಾ
ಜಾಲವನು +ಚಾಮರವ+ ಗೋವಳಿ
ಗೋಲ+ ಡೊಂಕಣಿಯೊಡ್ಡನ್+ಎತ್ತಿದ +ಸಿಂಧ +ಸೀಗುರಿಯ
ಧೂಳಿಪಟ+ಮಾಡಿದನು +ಮಿಡುಕು
ಳ್ಳಾಳ+ಕೊಂದನು +ಗಜರಥಾಶ್ವದ
ಮಾಲೆಯನು +ಮುತ್ತಿದುದು +ಕರ್ಣನ +ಶಿಳಿಮುಖವ್ರಾತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಜರಥಾಶ್ವದ ಮಾಲೆಯನು ಮುತ್ತಿದುದು ಕರ್ಣನ ಶಿಳಿಮುಖವ್ರಾತ

ಪದ್ಯ ೧೬: ಸೇನಾ ನಾಯಕರು ಏನನ್ನು ವೀಕ್ಷಿಸಿದರು?

ಹಿಣಿಲ ಹಾಹೆಯ ಬಿರುದುಗಳ ಡಾ
ವಣಿಯ ನಾಯಕವಾಡಿಗಳ ಸಂ
ದಣಿಯ ಸುಕರದ ಕೈದುಗಳ ವರವೀರ ನೂಪುರದ
ಕುಣಿವ ಸುಭಟರ ಪಳರವದ ಡೊಂ
ಕಣಿಯ ಖೇಟಕ ಖಡ್ಗ ಬಲು ಬಿಲು
ಗಣೆಯ ತಿಳಿವೊಡಸಂಖ್ಯೆಯಹ ಕಾಲಾಳ ನೋಡಿದರು (ಉದ್ಯೋಗ ಪರ್ವ, ೧೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಜೋಡಿಸಿ ಹಣೆದ ಬಿರುದಿನ ಪೆಂಡೆಗಳು, ದಾವಣಿಯನ್ನು ಹಿಡಿದ ನಾಯಕರ ಗುಂಪುಗಳು, ಕೈಯಲ್ಲಿ ಹಿಡಿದ ಆಯುಧಗಳು, ವೀರನೂಪುರಗಳನ್ನು ಧರಿಸಿ ಕುಣಿಯುವ ಯೋಧರು, ಹಿಡಿದ ಧ್ವಜಗಳು, ಡೊಂಕಣಿ, ಖಡ್ಗ ಮೊದಲಾದ ಆಯುಧಗಳನ್ನು ಬಿಲ್ಲುಬಾಣಗಳನ್ನು ಹಿಡಿದ ಕಾಲಾಳುಗಳನ್ನು ಸೇನಾ ನಾಯಕರಿಗೆ ತೋರಿದರು.

ಅರ್ಥ:
ಹಿಣಿಲು: ಹೆರಳು, ಜಡೆ; ಹಾಹೆ: ಗೊಂಬೆ, ಪುತ್ತಳಿ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಡಾವಣಿ:ಹಗ್ಗ, ದಾವಣಿ; ನಾಯಕ: ಒಡೆಯ; ವಾಡಿ:ಬಿಡಾರ; ಸಂದಣಿ: ಗುಂಪು; ಸುಕರ:ಸುಲಭವಾದುದು; ಕೈದು:ಕತ್ತಿ; ವರ: ಶ್ರೇಷ್ಠ; ವೀರ: ಶೂರ; ನೂಪುರ: ಕಾಲಿನ ಗೆಜ್ಜೆ, ಕಾಲಂದುಗೆ; ಕುಣಿ: ನರ್ತಿಸು; ಸುಭಟ: ಒಳ್ಳೆಯ ಸೈನಿಕ; ಪಳಹರ: ಬಾವುಟ; ಡೊಂಕಣಿ: ಈಟಿ; ಖೇಟಕ: ಗುರಾಣಿ; ಖಡ್ಗ: ಕತ್ತಿ, ಕರವಾಳ; ಬಲು: ಬಹಳ; ಬಿಲು: ಬಿಲ್ಲು, ಚಾಪ; ಬಿಲುಗಣೆ: ಬಿಲ್ಲು ಬಾಣ; ಅಸಂಖ್ಯ: ಲೆಕ್ಕವಿಲ್ಲದ; ಕಾಲಾಳು: ಸೈನ್ಯ; ನೋಡು: ವೀಕ್ಷಿಸು;

ಪದವಿಂಗಡಣೆ:
ಹಿಣಿಲ +ಹಾಹೆಯ +ಬಿರುದುಗಳ +ಡಾ
ವಣಿಯ +ನಾಯಕ+ವಾಡಿಗಳ +ಸಂ
ದಣಿಯ +ಸುಕರದ +ಕೈದುಗಳ +ವರವೀರ +ನೂಪುರದ
ಕುಣಿವ +ಸುಭಟರ +ಪಳರವದ +ಡೊಂ
ಕಣಿಯ +ಖೇಟಕ +ಖಡ್ಗ +ಬಲು+ ಬಿಲು
ಗಣೆಯ +ತಿಳಿವೊಡ್+ಅಸಂಖ್ಯೆಯಹ+ ಕಾಲಾಳ +ನೋಡಿದರು

ಅಚ್ಚರಿ:
(೧) ಡಾವಣಿ, ಸಂದಣಿ, ಡೊಂಕಣಿ, ಕುಣಿ – ಪ್ರಾಸ ಪದಗಳು
(೨) ಖೇಟಕ, ಖಡ್ಗ – ಖ ಕಾರದ ಜೋಡಿ ಪದ
(೩) ಸುಕರ, ಸುಭಟ – ೩, ೪, ಸಾಲಿನ ೨ನೇ ಪದ ಸು ಅಕ್ಷರದಿಂದ ಪ್ರಾರಂಭ

ಪದ್ಯ ೩೭: ಕೌರವ ಸೈನ್ಯವು ಹೇಗೆ ಮುನ್ನುಗ್ಗಿತು?

ಸೆಳೆವ ಸಿಂಧವ ಕವಿವ ಹೀಲಿಯ
ವಳಯ ತೋಮರ ಚಮರ ಡೊಂಕಣಿ
ಗಳ ವಿಡಾಯಿಯಲಮಮ ಕೆತ್ತುದು ಗಗನವಳ್ಳಿರಿಯೆ
ಸುಳಿಯಲನಿಲಂಗಿಲ್ಲ ಪಥ ಕೈ
ಹೊಳಕಬಾರದು ರವಿಗೆ ನೆಲನೀ
ದಳವನಾನುವಡರಿದೆನಲು ಜೋಡಿಸಿತು ಕುರುಸೇನೆ (ವಿರಾಟ ಪರ್ವ, ೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಹಾರಾಡುವ ಬಾವುಟಗಳು, ನವಿಲುಗರಿಗಳ ಆಕೃತಿ, ತೋಮರ, ಡೊಂಕಣಿ ಮೊದಲಾದ ಆಯುಧಗಳು, ಚಾಮರ್ಗಳು ಇವುಗಳು ಒತ್ತಾಗಿರಲು ಗಾಳಿಗೆ ಹೋಗಲು ಜಾವಗಿಲ್ಲದಂತಾಯಿತು. ಸೂರ್ಯನ ಬೆಳಕು ಭೂಮಿಯನ್ನು ಮುಟ್ಟಲಿಲ್ಲ. ಇದಕ್ಕೆದುರಾರು ಎಂಬಂತಹ ಸೈನ್ಯ ಮುಂದುವರೆಯಿತು.

ಅರ್ಥ:
ಸೆಳೆ:ಎಳೆತ,ಆಕರ್ಷಿಸು; ಸಿಂಧವ: ಬಾವುಟ; ಹೀಲಿ: ನವಿಲುಗರಿ;ವಳಯ: ಸುತ್ತುವರೆದ; ಕವಿ: ದಾಳಿಮಾಡು, ದಟ್ಟವಾಗು; ತೋಮರ: ಈಟಿಯಂತಹ ಒಂದು ಬಗೆಯ ಆಯುಧ; ಚಮರ: ಚಾಮರ; ಡೊಂಕಣಿ: ಈಟಿ; ವಿಡಾಯಿ:ಶಕ್ತಿ, ತೋರಿಕೆ; ಅಮಮ: ಅಬ್ಬಬ್ಬ; ಕೆತ್ತು: ನಡುಕ, ಸ್ಪಂದನ; ಗಗನ: ಆಗಸ; ಅಳ್ಳಿರಿ: ನಡುಗಿಸು, ಚುಚ್ಚು; ಸುಳಿ:ಜಲಾವರ್ತ ; ಪಥ: ದಾರಿ; ಹೊಳಕು: ಕಾಣಿಸಿಕೊಳ್ಳು; ರವಿ: ಭಾನು; ನೆಲ: ಭೂಮಿ; ದಳ: ಸೈನ್ಯ; ಜೋಡಿಸು: ಕೂಡಿಸು;ಆನಿಲ: ಗಾಳಿ

ಪದವಿಂಗಡಣೆ:
ಸೆಳೆವ +ಸಿಂಧವ +ಕವಿವ +ಹೀಲಿಯ
ವಳಯ +ತೋಮರ +ಚಮರ +ಡೊಂಕಣಿ
ಗಳ +ವಿಡಾಯಿಯಲ್+ಅಮಮ +ಕೆತ್ತುದು +ಗಗನವ್+ಅಳ್ಳಿರಿಯೆ
ಸುಳಿಯಲ್+ಅನಿಲಂಗ್+ಇಲ್ಲ+ ಪಥ+ ಕೈ
ಹೊಳಕಬಾರದು +ರವಿಗೆ+ ನೆಲನ್+ಈ
ದಳವನ್+ಆನುವಡರಿದ್+ಎನಲು +ಜೋಡಿಸಿತು +ಕುರುಸೇನೆ

ಅಚ್ಚರಿ:
(೧) ಆಶ್ಚರ್ಯವನ್ನು ಸೂಚಿಸುವ ಪದ – ಅಮಮ
(೨) ಸೈನ್ಯದ ಗಾತ್ರ ಮತ್ತು ದಟ್ಟತೆಯನ್ನು ವಿವರಿಸಲು – ಗಾಳಿಯೂ ತೂರಲು ಜಾಗವಿಲ್ಲ ಎಂದು ಹೇಳಲು – ಸುಳಿಯಲನಿಲಂಗಿಲ್ಲ ಪಥ, ಕೈ ಹೊಳಕಬಾರದು ರವಿಗೆ ನೆಲ;

ಪದ್ಯ ೩೫: ಸೇನೆಯ ಪಯಣ ಹೇಗೆ ಗೋಚರಿಸಿತು?

ಪಳಹರದ ಪಲ್ಲವದ ಪಸರದ
ಪಳಿಯ ಪಟ್ಟಿಯ ತೋಮರದ ಹೊಳೆ
ಹೊಳೆವ ಚಮರದ ಸೀಗುರಿಯ ಡೊಂಕಣಿಯ ತಿಂಥಿಣಿಯ
ಬಿಳುಗೊಡೆಯ ಝಲ್ಲರಿಯ ಜೋಡಿಗ
ಳೊಳಗೆ ಗಗನವು ತೀವಿತೆನೆ ಹೆ
ಕ್ಕಳಿಸಿ ನಡೆದುದು ಸೇನೆ ಪಯಣದ ಮೇಲೆ ಪಯಣದಲಿ (ವಿರಾಟ ಪರ್ವ, ೫ ಸಂಧಿ, ೩೫ ಪದ್ಯ)

ತಾತ್ಪರ್ಯ:
ಸೇನೆಯು ಮುನ್ನಡೆಯುವಾಗ ಧ್ವಜಗಳ ಮೇಲೆದ್ದವು, ಅಲ್ಲಲ್ಲಿ ಬಟ್ಟೆಯ ಪಟ್ಟಿಗಳು, ತೋಮರಗಳು, ಹೊಳೆಯುವ ಚಾಮರಗಳು, ಆಯುಧಗಳು, ಶ್ವೇತಛತ್ರಿಗಳು, ಝಲ್ಲರಿಗಳಿಂದ ಆಕಾಶವು ತುಂಬಿತೋ ಎನ್ನುವಂತಿರಲು ಸೇನೆಯು ಪಯಾನ ಮಾಡಿತು.

ಅರ್ಥ:
ಪಳಹರ: ಬಾವುಟ, ಧ್ವಜ; ಪಲ್ಲವ: ಚಿಗುರು, ಮೊಳಕೆ; ಪಸರ:ಸಮೂಹ; ಪಳಿ: ವಸ್ತ್ರವಿಶೇಷ; ಪಟ್ಟಿ: ಉದ್ದ ಹೆಚ್ಚಾಗಿ ಅಗಲ ಕಿರಿದಾಗಿರುವ ಬಟ್ಟೆ; ತೋಮರ: ಈಟಿ; ಹೊಳೆ: ಕಾಂತಿ; ಚಮರ:ಚಾಮರ; ಸೀಗುರಿ:ಚಾಮರ , ಚವರಿ; ತಿಂಥಿಣಿ: ಸಮೂಹ; ಡೊಂಕಣಿ: ಈಟಿ; ಬಿಳುಗೊಡೆ: ಬಿಳಿಯ ಛತ್ರಿ; ಝಲ್ಲರಿ: ಚರ್ಮವಾದ್ಯ; ಜೋಡಿ: ಜೊತೆ; ಗಗನ: ಆಗಸ; ತೀವು: ಅಪ್ಪಳಿಸು; ಹೆಕ್ಕಳ: ಹೆಚ್ಚು, ಅತಿಶಯ; ಸೇನೆ: ಸೈನ್ಯ; ಪಯಣ: ಪ್ರಯಾಣ, ಪ್ರಸ್ಥಾನ;

ಪದವಿಂಗಡಣೆ:
ಪಳಹರದ +ಪಲ್ಲವದ +ಪಸರದ
ಪಳಿಯ +ಪಟ್ಟಿಯ +ತೋಮರದ+ ಹೊಳೆ
ಹೊಳೆವ+ ಚಮರದ+ ಸೀಗುರಿಯ +ಡೊಂಕಣಿಯ+ ತಿಂಥಿಣಿಯ
ಬಿಳುಗೊಡೆಯ+ ಝಲ್ಲರಿಯ +ಜೋಡಿಗಳ್
ಒಳಗೆ+ ಗಗನವು+ ತೀವಿತೆನೆ+ ಹೆ
ಕ್ಕಳಿಸಿ +ನಡೆದುದು +ಸೇನೆ +ಪಯಣದ+ ಮೇಲೆ +ಪಯಣದಲಿ (ವಿರಾಟ ಪರ್ವ, ೫ ಸಂಧಿ, ೩೫ ಪದ್ಯ)

ಅಚ್ಚರಿ:
(೧) ‘ಪ’ ಕಾರದ ಜೋಡಿ ಪದಗಳು – ಪಳಹರದ ಪಲ್ಲವದ ಪಸರದ ಪಳಿಯ ಪಟ್ಟಿಯ
(೨) ಡೊಂಕಣಿ, ತಿಂಥಿಣಿ – ಪ್ರಾಸ ಪದಗಳು
(೩) ದೂರದ ಪ್ರಯಾಣ ಮಾಡಿದರು ಎಂದು ಹೇಳಲು – ‘ಪಯಣದ ಮೇಲೆ ಪಯಣ’ ಪದದ ಬಳಕೆ