ಪದ್ಯ ೨೬: ಪುರದ ಸ್ತ್ರೀಯರು ಎತ್ತಕಡೆ ನಡೆದರು?

ತಿರುಗಿದರು ಬಳಿಕಿತ್ತಲೀ ಮೋ
ಹರದ ಕಾಂತಾಕೋಟಿ ಬಂದುದು
ಹರಳುಮುಳ್ಳುಗಳೊತ್ತು ಗಾಲಿನ ದೂರತರಪಥರ
ಉರಿಯ ಜಠರದ ಬಿಸಿಲ ಝಳದಲಿ
ಹುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬೀನೀನಿಕರ (ಗದಾ ಪರ್ವ, ೧೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಶ್ವತ್ಥಾಮಾದಿಯರು ದ್ವಾರಕಿಯತ್ತಹೋದರು. ಇತ್ತ ಹಸ್ತಿನಾ ಪುರವನ್ನು ಬಿಟ್ಟು ಬಂದ ಸ್ತ್ರೀ ಸಮುದಾಯವು ಕಲ್ಲು ಮುಳ್ಳುಗಳೊತ್ತುತ್ತಿದ್ದ ದೂರದಾರಿಯನ್ನು ಬಿಸಿಲ ಝಳದಲ್ಲಿ ನಡೆಯುತ್ತಾ ಬರುತ್ತಿತ್ತು. ಅವರ ಹೊಟ್ಟೆಗಳಲ್ಲಿ ಉರಿ ಬಿದ್ದಿತ್ತು. ಎರಡು ಕೆನ್ನೆಗಳೂ ಹರಿದುಹೋದಂತೆ ಕಪ್ಪಾಗಿದ್ದವು. ಅವೈರಳ ಅಶ್ರುಧಾರೆಗಳನ್ನು ಸುರಿಸುತ್ತಾ ಅವರು ರಣರಂಗದತ್ತ ನಡೆದರು.

ಅರ್ಥ:
ತಿರುಗು: ಮರಳು; ಬಳಿಕ: ನಂತರ; ಮೋಹರ: ಯುದ್ಧ, ಸೈನ್ಯ; ಕಾಂತ: ಹೆಣ್ಣು; ಕೋಟಿ: ಅಸಂಖ್ಯಾತ; ಬಂದು: ಆಗಮಿಸು; ಹರಳು: ಕಲ್ಲಿನ ಚೂರು, ನೊರಜು; ಮುಳ್ಳು: ಮೊನಚಾದುದು; ಗಾಲಿ: ಚಕ್ರ; ದೂರ: ಅಂತರ; ಪಥ: ದಾರಿ; ಉರಿ: ಬೆಂಕಿ; ಜಠರ: ಹೊಟ್ಟೆ; ಬಿಸಿಲು: ಸೂರ್ಯನ ತಾಪ; ಝಳ: ತಾಪ; ಹುರಿ: ಕಾಯಿಸು; ಕದಪು: ಕೆನ್ನೆ; ಸುರಿ: ಹರಿಸು; ನಯನಾಂಬು: ಕಣ್ಣೀರು; ರಾಜನಿತಂಬಿನಿ: ರಾಣಿ; ನಿತಂಬಿನಿ: ಹೆಣ್ಣು; ನಿಕರ: ಗುಂಪು; ನಿತಂಬ: ಸೊಂಟದ ಕೆಳಗಿನ ಹಿಂಭಾಗ, ಕಟಿ ಪ್ರದೇಶ;

ಪದವಿಂಗಡಣೆ:
ತಿರುಗಿದರು +ಬಳಿಕ್+ಇತ್ತಲೀ+ ಮೋ
ಹರದ +ಕಾಂತಾಕೋಟಿ +ಬಂದುದು
ಹರಳು+ಮುಳ್ಳುಗಳ್+ಒತ್ತು+ ಗಾಲಿನ +ದೂರತರ+ಪಥರ
ಉರಿಯ +ಜಠರದ +ಬಿಸಿಲ +ಝಳದಲಿ
ಹುರಿದ +ಕದಪುಗಳೆರಡು+ ಕಡೆಯಲಿ
ಸುರಿವ +ನಯನಾಂಬುಗಳ +ರಾಜನಿತಂಬೀನೀ+ನಿಕರ

ಅಚ್ಚರಿ:
(೧) ರಾಣಿಯರು ಎಂದು ಹೇಳಲು – ರಾಜನಿತಂಬೀನೀ ಪದ ಬಳಕೆ
(೨) ರಾಣಿಯರ ದುಃಖದ ಸ್ಥಿತಿ – ಉರಿಯ ಜಠರದ ಬಿಸಿಲ ಝಳದಲಿ ಹುರಿದ ಕದಪುಗಳೆರಡು ಕಡೆಯಲಿ
ಸುರಿವ ನಯನಾಂಬುಗಳ ರಾಜನಿತಂಬೀನೀನಿಕರ

ಪದ್ಯ ೧೧: ಭೀಮನ ಪರಾಕ್ರಮವು ಹೇಗಿತ್ತು?

ಗಜದಳದ ಘಾಡಿಕೆಗೆ ವಾಜಿ
ವ್ರಜದ ವೇಢೆಗೆ ಭೀಮನೇ ಗಜ
ಬಜಿಸುವನೆ ಹೊಡೆಸೆಂಡನಾಡಿದನಹಿತ ಮೋಹರವ
ಗುರಜು ಗುಲ್ಮದ ಕುಂಜರಾಶ್ವ
ವ್ರಜದ ಮೆಳೆಯೊಣಗಿದುದು ಪವಮಾ
ನಜ ಪರಾಕ್ರಮಶಿಖಿಯ ಝಳ ಝೊಂಪಿಸಿತು ನಿಮಿಷದಲಿ (ಶಲ್ಯ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಜದಳವು ಯುದ್ಧಕ್ಕೆ ಬಂದರೆ ಭೀಮನು ಹಿಂದೆಮುಂದೆ ನೋಡುವನೇ? ಆನೆ ಕುದುರೆಗಳನ್ನು ಹೊಡೆದು ಚೆಂಡಾಡಿದನು. ಆ ಸೇನೆಯ ಮಳೆಯು ಭೀಮನ ಪರಾಕ್ರಮದ ಅಗ್ನಿಯ ಝಳಕ್ಕೆ ಒಣಗಿ ಹೋಯಿತು.

ಅರ್ಥ:
ಗಜ: ಆನೆ; ದಳ: ಸೈನ್ಯ; ಘಾಡಿಸು: ವ್ಯಾಪಿಸು; ವಾಜಿ: ಕುದುರೆ; ವ್ರಜ: ಗುಂಪು; ವೇಡೆ: ಆಕ್ರಮಣ; ಗಜಬಜಿಸು: ಹಿಂದುಮುಂದು ನೋಡು, ಗೊಂದಲಕ್ಕೀಡಾಗು; ಹೊಡೆ: ಹೋರಾಡು; ಅಹಿತ: ವೈರಿ; ಸೆಂಡನಾಡು: ಚೆಂಡಾಡು; ಮೋಹರ: ಯುದ್ಧ; ಗುಜುರು: ಕೆದಕಿದ; ಗುಲ್ಮ: ಸೇನೆಯ ಒಂದು ಘಟಕ; ಕುಂಜರ: ಆನೆ; ಅಶ್ವ: ಕುದುರೆ; ವ್ರಜ: ಗುಂಪು; ಮೆಳೆ: ಗುಂಪು; ಒಣಗು: ಸತ್ವವಿಲ್ಲದ;ಪವಮಾನಜ: ಭೀಮ; ಪರಾಕ್ರಮ: ಶೌರ್ಯ; ಶಿಖಿ: ಬೆಂಕಿ; ಝಳ: ಕಾಂತಿ; ಝೊಂಪಿಸು: ಮೈಮರೆ; ನಿಮಿಷ: ಕ್ಷಣ ಮಾತ್ರ;

ಪದವಿಂಗಡಣೆ:
ಗಜದಳದ+ ಘಾಡಿಕೆಗೆ +ವಾಜಿ
ವ್ರಜದ +ವೇಢೆಗೆ +ಭೀಮನೇ +ಗಜ
ಬಜಿಸುವನೆ +ಹೊಡೆ+ಸೆಂಡನಾಡಿದನ್+ಅಹಿತ +ಮೋಹರವ
ಗುರಜು +ಗುಲ್ಮದ +ಕುಂಜರ+ಅಶ್ವ
ವ್ರಜದ +ಮೆಳೆ+ಒಣಗಿದುದು +ಪವಮಾ
ನಜ+ ಪರಾಕ್ರಮ+ಶಿಖಿಯ +ಝಳ +ಝೊಂಪಿಸಿತು +ನಿಮಿಷದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಕುಂಜರಾಶ್ವವ್ರಜದ ಮೆಳೆಯೊಣಗಿದುದು ಪವಮಾನಜ ಪರಾಕ್ರಮಶಿಖಿಯ ಝಳ ಝೊಂಪಿಸಿತು
(೨) ಘಾಡಿಕೆಗೆ, ವೇಢೆಗೆ – ಪದಗಳ ಬಳಕೆ
(೩) ಜೋಡಿ ಪದಗಳ ಬಳಕೆ – ಗುರಜು ಗುಲ್ಮದ; ಝಳ ಝೊಂಪಿಸಿತು

ಪದ್ಯ ೧೬: ನಾರಾಯಣಾಸ್ತ್ರವು ಹೇಗೆ ಝಗಮಗಿಸಿತು?

ಸರಳ ಚೂಳಿಯ ಝಳದೊಳಗೆ ಸಾ
ವಿರ ನಿದಾಘದ ಸೂರ್ಯರುಬ್ಬಟೆ
ಕರಗಿ ಹೋಯಿತು ಬಾಯಿಧಾರೆಯ ಕಿಡಿಯ ಧಾಳಿಯಲಿ
ಬರಸಿಡಿಲ ಶತಕೋಟಿ ಸೀದವು
ನಿರಿವೊಗರ ಕಬ್ಬೊಗೆಯ ಕಿಡಿಯಲಿ
ನೆರೆದವಂತ್ಯದ ಮೇಘವೆನೆ ಝಗಝಗಿಸಿತಮಳಾಸ್ತ್ರ (ದ್ರೋಣ ಪರ್ವ, ೧೯ ಸಂಧಿ, ೧೬ ಪದ್ಯ)

ತಾತ್ಪರ್ಯ:
ಆ ಅಸ್ತ್ರದ ಮುಂಭಾಗದ ಉರಿಯ ಝಳದಿಂದ ಸಾವಿರ ಸೂರ್ಯರ ಪ್ರಕಾಶ ಕರಗಿಹೋಯಿತೋ, ಬಾಯಧಾರೆಯ ಕಿಡಿಗಳ ದಾಳಿಯಿಂದ ನೂರುಕೋಟಿ ಬರಸಿಡಿಲು ಸುಟ್ಟು ಕರಿಕಾದವೋ, ಹಬ್ಬುತ್ತಿದ್ದ ಹೊಗೆಯು ಪ್ರಳಯ ಮೇಘಗಳು ನೆರೆದವೋ ಎಂಬಂತೆ ನಾರಾಯಣಾಸ್ತ್ರವು ಝಗಝಗಿಸಿತು.

ಅರ್ಥ:
ಸರಳು: ಬಾಣ; ಚೂಳಿ: ಆರಂಭ, ಸೈನ್ಯದ ಮುಂಭಾಗ; ಝಳ: ಕಾಂತಿ; ಸಾವಿರ: ಸಹಸ್ರ; ನಿದಾಘ: ಬೇಸಿಗೆ, ಸೆಖೆ; ಸೂರ್ಯ: ರವಿ; ಉಬ್ಬಟೆ: ಅಧಿಕ; ಕರಗು: ಕಡಿಮೆಯಾಗು; ಧಾರೆ: ವರ್ಷ; ಕಿಡಿ: ಬೆಂಕಿ; ಧಾಳಿ: ಲಗ್ಗೆ, ಮುತ್ತಿಗೆ; ಸಿಡಿಲು: ಅಶನಿ; ಶತ: ನೂರು; ಕೋಟಿ: ಅಸಂಖ್ಯಾತ; ಸೀದು: ಕರಕಲಾಗು; ನಿರಿ: ಕೊಲ್ಲು, ಸಾಯಿಸು; ಕಬ್ಬೊಗೆ: ಕರಿಯಾದ ಹೊಗೆ; ಕಿಡಿ: ಬೆಂಕಿ; ನೆರೆ: ಗುಂಪು; ಅಂತ್ಯ: ಕೊನೆ; ಮೇಘ: ಮೋಡ; ಝಗ: ಪ್ರಕಾಶ; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ಸರಳ +ಚೂಳಿಯ +ಝಳದೊಳಗೆ +ಸಾ
ವಿರ +ನಿದಾಘದ +ಸೂರ್ಯರ್+ಉಬ್ಬಟೆ
ಕರಗಿ +ಹೋಯಿತು +ಬಾಯಿಧಾರೆಯ+ ಕಿಡಿಯ+ ಧಾಳಿಯಲಿ
ಬರಸಿಡಿಲ +ಶತ+ಕೋಟಿ +ಸೀದವು
ನಿರಿವೊಗರ+ ಕಬ್ಬೊಗೆಯ +ಕಿಡಿಯಲಿ
ನೆರೆದವ್+ಅಂತ್ಯದ+ ಮೇಘವ್+ಎನೆ+ ಝಗಝಗಿಸಿತ್+ಅಮಳಾಸ್ತ್ರ

ಅಚ್ಚರಿ:
(೧) ರೂಪಕದ ಪ್ರಯೋಗ – ಸರಳ ಚೂಳಿಯ ಝಳದೊಳಗೆ ಸಾವಿರ ನಿದಾಘದ ಸೂರ್ಯರುಬ್ಬಟೆ
ಕರಗಿ ಹೋಯಿತು; ಬಾಯಿಧಾರೆಯ ಕಿಡಿಯ ಧಾಳಿಯಲಿ ಬರಸಿಡಿಲ ಶತಕೋಟಿ ಸೀದವು

ಪದ್ಯ ೧೫: ಜಕ್ಕವಕ್ಕಿಗಳೇಕೆ ಮರುಗುತಿರ್ದವು?

ನಳಿನದಳದೊಳಗಡಗಿದವು ನೈ
ದಿಲುಗಳಲಿ ತನಿ ಮೊರೆವ ತುಂಬಿಯ
ಕಳರವಕೆ ಬೆಚ್ಚಿದವು ಹೊಕ್ಕವು ಬಿಗಿದು ತಿಳಿಗೊಳನ
ಝಳಕೆ ಸೈರಿಸದೆಳಲತೆಯ ನೆಳ
ಲೊಳಗೆ ನಿಂದವು ಬೇಗೆ ಬಲುಹಿಂ
ದಳುಕಿ ಮಮ್ಮಲು ಮರುಗುತಿರ್ದವು ಜಕ್ಕವಕ್ಕಿಗಳು (ದ್ರೋಣ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಚಕ್ರವಾಕ ಪಕ್ಷಿಗಳು ತಾವರೆಯಲ್ಲಿ ಅಡಗಿ, ನೈದಿಲೆಯಲ್ಲಿ ಝೇಂಕರಿಸುವ ದುಂಬಿಗಳ ಸದ್ದನ್ನು ಕೇಳಿ ಬೆಚ್ಚಿದವು. ಬೆಳದಿಂಗಳ ಝಳವನ್ನು ಸೈರಿಸಲಾರದೆ ಎಳೆ ಬಳ್ಳಿಗಳ ನೆರಳಿನಲ್ಲಿ ನಿಂತು ತಾಪವನ್ನು ತಡೆಯಲಾರದೆ ಮಮ್ಮಲ ಮರುಗಿದವು.

ಅರ್ಥ:
ನಳಿನ: ಕಮಲ; ದಳ: ಎಲೆ, ರೇಕು, ಎಸಳು; ಅಡಗು: ಬಚ್ಚಿಟ್ಟುಕೊಳ್ಳು; ನೈದಿಲೆ: ಕುಮುದ; ತನಿ: ಚೆನ್ನಾಗಿ ಬೆಳೆದುದು; ಮೊರೆ: ಧ್ವನಿ ಮಾಡು, ಝೇಂಕರಿಸು; ತುಂಬಿ: ದುಂಬಿ, ಭ್ರಮರ; ಕಳರವ: ಮಧುರ ಧ್ವನಿ; ಬೆಚ್ಚು: ಭಯ, ಹೆದರಿಕೆ; ಹೊಕ್ಕು: ಸೇರು; ಬಗಿ: ಸೀಳುವಿಕೆ; ಕೊಳ: ನೀರಿನ ಹೊಂಡ, ಸರಸಿ; ಝಳ: ಕಾಂತಿ; ಸೈರಿಸು: ತಾಳು, ಸಹಿಸು; ಎಳೆ: ಚಿಕ್ಕದಾದ; ಲತೆ: ಬಳ್ಳಿ; ನೆಳಲು: ನೆರಳು; ನಿಂದವು: ನಿಲ್ಲು; ಬೇಗೆ: ಬೆಂಕಿ, ಕಿಚ್ಚು; ಬಲು: ಬಹಳ, ಹೆಚ್ಚು; ಅಳುಕು: ಹೆದರು; ಮರುಗು: ತಳಮಳ, ಸಂಕಟ; ಜಕ್ಕವಕ್ಕಿ: ಚಾತಕ ಪಕ್ಷಿ;

ಪದವಿಂಗಡಣೆ:
ನಳಿನ+ದಳದೊಳಗ್+ಅಡಗಿದವು +ನೈ
ದಿಲುಗಳಲಿ +ತನಿ +ಮೊರೆವ +ತುಂಬಿಯ
ಕಳರವಕೆ+ ಬೆಚ್ಚಿದವು +ಹೊಕ್ಕವು +ಬಿಗಿದು +ತಿಳಿ+ಕೊಳನ
ಝಳಕೆ +ಸೈರಿಸದ್+ಎಳಲತೆಯ +ನೆಳ
ಲೊಳಗೆ +ನಿಂದವು +ಬೇಗೆ +ಬಲುಹಿಂದ್
ಅಳುಕಿ +ಮಮ್ಮಲು +ಮರುಗುತಿರ್ದವು +ಜಕ್ಕವಕ್ಕಿಗಳು

ಅಚ್ಚರಿ:
(೧)

ಪದ್ಯ ೫೧: ಕರ್ಣನು ಯಾವ ಬಾಣವನ್ನು ಹೊರತೆಗೆದನು?

ತಳಿತ ಕಿಡಿಗಳ ಕೈದುವಿನ ಮೈ
ಝಳದ ಝಾಡಿಯೊಳುಭಯ ಬಲದ
ಗ್ಗಳದ ಹರುಷ ವಿಷಾದ ವಾರಿಧಿ ಕಾಲುಹೊಳೆಯಾಯ್ತು
ಬಿಳಿಯ ಚೌರಿಗಳೆಸೆಯೆ ಘಂಟಾ
ವಳಿಗಳಣಸಿನ ಹೊಗರನುಗುಳುವ
ಹೊಳೆವ ಧಾರೆಯ ಭಾರಿಶಕ್ತಿಯ ತೂಗಿದನು ಕರ್ಣ (ದ್ರೋಣ ಪರ್ವ, ೧೬ ಸಂಧಿ, ೫೧ ಪದ್ಯ)

ತಾತ್ಪರ್ಯ:
ಇಂದ್ರನು ಕೊಟ್ಟ ಶಕ್ತಿಯಿಂದುದುರುವ ಕಿಡಿಗಳಿಗೆ ಹೊಮ್ಮುವ ಉರಿಗೆ ಎರಡು ಬಲಗಳೂ ಹರ್ಷ ವಿಷಾದಗಳಿಗೊಳಗಾದವು. ಪಾಂಡವರು ವಿಷಾದಿಸಿದರೆ, ಕೌರವರು ಹರ್ಷಿಸಿದರು. ಆ ಶಕ್ತಿಗೆ ಬಿಳೀಯ ಚೌರಿಗಳನ್ನು ಕಟ್ಟಿತ್ತು. ಅಣಸುಗಳಿಗೆ ಗಂಟೆಗಳನ್ನು ಕಟ್ಟಿತ್ತು. ಅದರ ಅಲಗು ಥಳಥೈಸುತ್ತಿತ್ತು. ಕರ್ಣನು ಮಹಾಶಕ್ತಿಯನ್ನು ಕೈಯಲ್ಲಿ ಹಿಡಿದು ತೂಗಿದನು.

ಅರ್ಥ:
ತಳಿತ: ಚಿಗುರಿದ; ಕಿಡಿ: ಬೆಂಕಿ; ಕೈದು: ಆಯುಧ; ಮೈ: ತನು; ಝಳ: ಪ್ರಕಾಶ, ಕಾಂತಿ; ಝಾಡಿ: ಕಾಂತಿ; ಉಭಯ: ಎರಡು; ಬಲ: ಸೈನ್ಯ; ಅಗ್ಗಳ: ಶ್ರೇಷ್ಠ; ಹರುಷ: ಸಂತೋಷ; ವಿಷಾದ: ನಿರುತ್ಸಾಹ, ದುಃಖ; ವಾರಿಧಿ: ಸಾಗರ; ಕಾಲುಹೊಳೆ: ಕಾಲುನಡಿಗೆ, ದಾಟಬಹುದಾದ ಹೊಳೆ; ಬಿಳಿ: ಶ್ವೇತ; ಚೌರಿ: ಚೌರಿಯ ಕೂದಲು; ಎಸೆ: ತೋರು; ಆವಳಿ: ಗುಂಪು; ಅಣಸು: ಆಕ್ರಮಿಸು; ಹೊಗರು: ಪ್ರಕಾಶ; ಉಗುಳು: ಹೊರತರು; ಹೊಳೆ: ಪ್ರಕಾಶ; ಧಾರೆ: ಮಳೆ, ವರ್ಷ; ಭಾರಿ: ದೊಡ್ಡ; ಶಕ್ತಿ: ಬಲ; ತೂಗು: ಅಲ್ಲಾಡು;

ಪದವಿಂಗಡಣೆ:
ತಳಿತ +ಕಿಡಿಗಳ+ ಕೈದುವಿನ +ಮೈ
ಝಳದ +ಝಾಡಿಯೊಳ್+ಉಭಯ +ಬಲಗ್
ಅಗ್ಗಳದ +ಹರುಷ +ವಿಷಾದ +ವಾರಿಧಿ +ಕಾಲು+ಹೊಳೆಯಾಯ್ತು
ಬಿಳಿಯ +ಚೌರಿಗಳ್+ಎಸೆಯೆ +ಘಂಟಾ
ವಳಿಗಳ್+ಅಣಸಿನ +ಹೊಗರನ್+ಉಗುಳುವ
ಹೊಳೆವ +ಧಾರೆಯ +ಭಾರಿಶಕ್ತಿಯ +ತೂಗಿದನು +ಕರ್ಣ

ಅಚ್ಚರಿ:
(೧) ವಿರುದ್ಧ ಪದ – ಹರುಷ, ವಿಷಾದ
(೨) ಹೊಗರು, ಝಳ, ಝಾಡಿ, ಹೊಳೆ – ಸಾಮ್ಯಾರ್ಥ ಪದಗಳು

ಪದ್ಯ ೩೩: ಸುದರ್ಶನ ಚಕ್ರವು ಹೇಗೆ ಕಂಡಿತು?

ಹರಿದು ಹಬ್ಬುವ ಬಳ್ಳಿವೆಳಗಿನ
ಮುರಿವು ಮಂಡಳಿಸಿದುದು ಶತ ಸಾ
ವಿರ ದಿವಾಕರ ಬಿಂಬವೆಸೆದುದು ಝಳದ ಹೊಯಿಲಿನಲಿ
ಸುರ ನರೋರಗ ಜಗದ ಕಂಗಳ
ತೆರಹು ಕೆತ್ತವು ಬತ್ತಿದುದಧಿಯೊ
ಳುರಿಮಣಲು ಮಾಣಿಕವ ಹುರಿದುದು ಚಕ್ರದೊಷ್ಮೆಯಲಿ (ಭೀಷ್ಮ ಪರ್ವ, ೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಚಕ್ರವು ಬರುತ್ತಿರಲು ಅದರ ಬಳ್ಳಿಯಾಕಾರದ ಬೆಳಕು ಅದರ ಸುತ್ತಲೂ ವೃತ್ತಾಕಾರದಲ್ಲಿ ತೋರಿತು. ನೂರು ಸಹಸ್ರ ಸೂರ್ಯ ಬಿಂಬದ ಪ್ರಭೆ ಕಾಣಿಸಿತು. ಅದರ ಬಿಸಿಯ ಝಳ ಸುತ್ತಲೂ ಹಬ್ಬಿತು. ದೇವತೆಗಳು ಮನುಷ್ಯರು ರಾಕ್ಷಸರು ಆ ಕಾಂತಿಯನ್ನು ನೋಡಲಾಗದೆ ಕಣ್ಣುಮುಚ್ಚಿದರು. ಅದರ ಕಾವಿಗೆ ಸಮುದ್ರಗಳು ಬತ್ತಿ ಅದರ ತಲದಲ್ಲಿದ್ದ ಮುತ್ತುಗಳು ಹುರಿದು ಕಪ್ಪಾದವು.

ಅರ್ಥ:
ಹರಿ: ಚಲಿಸು; ಹಬ್ಬು: ಹರಡು, ವ್ಯಾಪಿಸು; ಬಳ್ಳಿ: ಹಬ್ಬಿ ಬೆಳೆಯುವ ಸಸ್ಯ, ಲತೆ; ಮುರಿ: ಸೀಳು; ಮಂಡಳಿಸು: ಸುತ್ತುವರಿ; ಶತ: ನೂರು; ಸಾವಿರ: ಸಹಸರ; ದಿವಾಕರ: ಸೂರ್ಯ; ಬಿಂಬ: ಆಕಾರ, ವಿಗ್ರಹ; ಎಸೆ: ಬಾಣ ಬಿಡು, ಹೊಡೆ; ಝಳ: ಪ್ರಕಾಶ, ಕಾಂತಿ; ಹೊಯಿಲು: ಏಟು, ಹೊಡೆತ; ಸುರ: ದೇವತೆ; ನರ: ಮನುಷ್ಯ; ಉರಗ: ಹಾವು; ಜಗ: ಜಗತ್ತು; ಕಂಗಳು: ಕಣ್ಣು; ತೆರಹು: ಬಿಚ್ಚು, ತೆರೆ; ಕೆತ್ತು: ನಡುಕ, ಸ್ಪಂದನ; ಬತ್ತು: ಒಣಗು, ಆರು; ಉದಧಿ: ಸಾಗರ; ಉರಿ: ಜ್ವಾಲೆ, ಸಂಕಟ; ಮಣಲು: ಮರಳು; ಮಾಣಿಕ: ಮಾಣಿಕ್ಯ; ಹುರಿ:ಹೊಲೆಯುವಿಕೆ, ನುಲಿಯುವಿಕೆ; ಚಕ್ರ: ಸುದರ್ಶನ; ಉಷ್ಮೆ: ಶಾಖ;

ಪದವಿಂಗಡಣೆ:
ಹರಿದು +ಹಬ್ಬುವ +ಬಳ್ಳಿವೆಳಗಿನ
ಮುರಿವು +ಮಂಡಳಿಸಿದುದು +ಶತ +ಸಾ
ವಿರ+ ದಿವಾಕರ+ ಬಿಂಬವೆಸೆದುದು+ ಝಳದ+ ಹೊಯಿಲಿನಲಿ
ಸುರ +ನರ+ಉರಗ+ ಜಗದ+ ಕಂಗಳ
ತೆರಹು +ಕೆತ್ತವು +ಬತ್ತಿದ್ +ಉದಧಿಯೊಳ್
ಉರಿ+ಮಣಲು +ಮಾಣಿಕವ+ ಹುರಿದುದು +ಚಕ್ರದ್+ಊಷ್ಮೆಯಲಿ

ಅಚ್ಚರಿ:
(೧) ಸುದರ್ಶನ ಚಕ್ರದ ಪ್ರಕಾಶ – ಶತ ಸಾವಿರ ದಿವಾಕರ ಬಿಂಬವೆಸೆದುದು ಝಳದ ಹೊಯಿಲಿನಲಿ

ಪದ್ಯ ೧೩: ಕೃಷ್ಣನು ಅಶ್ವತ್ಥಾಮನನ್ನು ಹೇಗೆ ವರ್ಣಿಸಿದನು?

ಕಳಶ ಸಿಂಧದ ಥಟ್ಟು ಸಮ್ಮುಖ
ದಳವಿಯಲಿ ವಿಕ್ರಮ ದವಾಗ್ನಿಯ
ಝಳದೊಳುರೆ ಕಾಹೇರಿದಾಲಿಯ ಬಿಗಿದ ಹುಬ್ಬುಗಳ
ಹಿಳುಕನವುಕಿದ ತುದಿವೆರಳ ನಡು
ಗಳದ ಕಪ್ಪಿನ ನೊಸಲ ನಯನದ
ಬಲುಭುಜನ ನೋಡಾತನಶ್ವತ್ಥಾಮ ನಿಸ್ಸೀಮ (ಭೀಷ್ಮ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕಲಶದ ಚಿಹ್ನೆಯುಳ್ಳ ಬಾವುಟಗಳನ್ನುಳ್ಳ, ಸೈನ್ಯ ಇದುರಿನಲ್ಲಿದೆ, ಅವನ ಪರಾಕ್ರಮವು ದಾವಾನಲದಂತಿದೆ, ಕಣ್ಣುಗಳು ಕಾದು ಕೆಂಪಾಗಿವೆ, ಹುಬ್ಬುಗಳು ಬಿಗಿದಿವೆ, ತುದಿ ಬೆರಳುಗಳು ಬಾಣವನ್ನು ಅವುಕಿ ಹಿಡಿದೆದೆ, ಹಣೆಗಣ್ಣನಾದ ಶಿವನಂತೆ ಮಹಾಭುಜನಾಗಿ, ಕೊರಳು ಕಪ್ಪಾಗಿರುವ ಅವನು ಮಹಾ ಪರಾಕ್ರಮಿ ಅಶ್ವತ್ಥಾಮನನ್ನು ನೋಡು ಎಂದು ಕೃಷ್ಣನು ತೋರಿಸಿದನು.

ಅರ್ಥ:
ಕಳಶ: ಕುಂಭ; ಸಿಂಧ: ಬಾವುಟ; ಥಟ್ಟು: ಪಕ್ಕ, ಕಡೆ, ಗುಂಪು; ಸಮ್ಮುಖ: ಎದುರು; ಅಳವಿ: ಯುದ್ಧ; ವಿಕ್ರಮ: ಶೂರ, ಸಾಹಸ; ದವಾಗ್ನಿ: ಜೋರಾದ ಬೆಂಕಿ; ಝಳ: ಪ್ರಕಾಶ, ಶಾಖ; ಉರೆ: ಹೆಚ್ಚು; ಕಾಹೇರು: ಉಷ್ಣತೆ ಹೆಚ್ಚಾಗು; ಆಲಿ: ಕಣ್ಣು; ಬಿಗಿ: ಕಟ್ಟು, ಬಂಧಿಸು; ಹುಬ್ಬು: ಕಣ್ಣಿನ ಮೇಲಿನ ರೋಮಾವಳಿ; ಹಿಳುಕು: ಬಾಣದ ಹಿಂಭಾಗ; ಅವುಕು: ನೂಕು, ಹಿಸುಕು; ತುದಿ: ಮುಂಭಾಗ; ವೆರಳು: ಬೆರಳು; ನಡು: ಮಧ್ಯ; ಗಳ: ಕಂಠ; ನೊಸಲು: ಹಣೆ; ನಯನ: ಕಣ್ಣು; ಬಲುಭುಜ: ಮಹಾಬಾಹು; ನೋಡು: ವೀಕ್ಷಿಸು; ನಿಸ್ಸೀಮ: ಅತಿಶೂರ, ಪರಾಕ್ರಮಿ;

ಪದವಿಂಗಡಣೆ:
ಕಳಶ +ಸಿಂಧದ +ಥಟ್ಟು +ಸಮ್ಮುಖದ್
ಅಳವಿಯಲಿ +ವಿಕ್ರಮ+ ದವಾಗ್ನಿಯ
ಝಳದೊಳ್+ಉರೆ+ ಕಾಹೇರಿದ್+ಆಲಿಯ +ಬಿಗಿದ+ ಹುಬ್ಬುಗಳ
ಹಿಳುಕನ್+ಅವುಕಿದ +ತುದಿವೆರಳ+ ನಡು
ಗಳದ +ಕಪ್ಪಿನ +ನೊಸಲ +ನಯನದ
ಬಲುಭುಜನ +ನೋಡ್+ಆತನ್+ಅಶ್ವತ್ಥಾಮ +ನಿಸ್ಸೀಮ

ಅಚ್ಚರಿ:
(೧) ಅಶ್ವತ್ಥಾಮನನ್ನು ಶಿವನಿಗೆ ಹೋಲಿಸುವ ಪರಿ – ನಡುಗಳದ ಕಪ್ಪಿನ ನೊಸಲ ನಯನದ
ಬಲುಭುಜನ ನೋಡಾತನಶ್ವತ್ಥಾಮ ನಿಸ್ಸೀಮ
(೨) ಆಲಿ, ನಯನ – ಸಮನಾರ್ಥಕ ಪದ

ಪದ್ಯ ೫೪: ಭೀಮನ ಮಾತನ್ನು ಕೇಳಿದ ದ್ರೌಪದಿಯ ಸ್ಥಿತಿ ಹೇಗಿತ್ತು?

ಕೇಳುತಿದ್ದಳು ಕೊರಳ ಸೆರೆ ಗೋ
ನಾಳಿಗೌಕಿತು ಬಿಕ್ಕಿ ಬಿಕ್ಕಿ ವಿ
ಶಾಲ ಲೊಚನೆ ನೆನೆದಳುನ್ನತ ನಯನವಾರಿಯಲಿ
ಶೂಲ ಮರುಮೊನೆಗೊಂಡವೊಲು ಸುಳಿ
ವಾಳೆ ಝಳತಾಗಿದವೊಲುದರ
ಜ್ವಾಲೆ ನೆತ್ತಿಯನೇರೆ ಮಿಡುಕಿದಳಬಲೆ ಬಿಸುಸುಯ್ದು (ವಿರಾಟ ಪರ್ವ, ೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭೀಮನ ಕಠೋರ ನುಡಿಗಳನ್ನು ಕೇಳುತ್ತಾ ದ್ರೌಪದಿಯ ಕೊರಳ ನರಗಳು ಕಂಠಕ್ಕೊತ್ತಿತು, ಆಕೆ ಬಿಕ್ಕಿ ಬಿಕ್ಕಿ ಅತ್ತಳು, ಶೂಲವು ಗಾಯದ ಮೇಲೆ ಚುಚ್ಚಿದಂತೆ, ಸುಳಿ ಬಾಳೆಗೆ ಉರಿಯುವ ಜ್ವಾಲೆ ತಾಗಿದಂತೆ ಆಯಿತು. ಹೊಟ್ಟೆಯಲ್ಲಿದ್ದ ಬೆಂಕಿಯು ನೆತ್ತಿಗೇರಿದಂತಾಗಿ ಅವಳು ಕಣ್ಣೀರಿನಿಂದ ತೊಯ್ದು ಹೋದಳು, ಮತ್ತೆ ಮತ್ತೆ ನಿಟ್ಟುಸಿರು ಬಿಟ್ಟು ಚಡಪಡಿಸಿದಳು.

ಅರ್ಥ:
ಕೇಳು: ಆಲಿಸು; ಕೊರಳು: ಗಂಟಲು; ಸೆರೆ: ಬಂಧಿಸು; ಗೋನಾಳಿ: ಕುತ್ತಿಗೆಯ ನಾಳ; ಔಕು: ಒತ್ತು; ಬಿಕ್ಕಿ: ಜೋರಾಗಿ; ವಿಶಾಲ: ದೊಡ್ಡ; ಲೋಚನ: ಕಣ್ಣು; ನೆನೆ: ಒದ್ದೆಯಾಗು; ಉನ್ನತ: ಹೆಚ್ಚು; ನಯನ: ಕಣ್ಣು; ವಾರಿ: ನೀರು; ಶೂಲ: ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ, ಈಟಿ; ಮರು: ಮತ್ತೆ, ಎರಡನೆಯ; ಮೊನೆ: ತುದಿ, ಕೊನೆ, ಹರಿತವಾದ; ಸುಳಿ: ಆವರಿಸು, ಮುತ್ತು, ತಿರುಗು; ವಾಳೆ: ಬಾಳೆ; ಝಳ: ಶಾಖ, ಉಷ್ಣತೆ; ಉದರ: ಹೊಟ್ಟೆ; ಜ್ವಾಲೆ: ಬೆಂಕಿ; ನೆತ್ತಿ: ತಲೆ, ಶಿರ; ಏರು: ಮೇಲೆ ಏಳು, ಹೆಚ್ಚಾಗು; ಮಿಡುಕು: ನಡುಕ, ಕಂಪನ, ತುಡಿತ; ಅಬಲೆ: ಹೆಣ್ಣು; ಬಿಸುಸುಯ್ದು: ನಿಟ್ಟುಸಿರು;

ಪದವಿಂಗಡಣೆ:
ಕೇಳುತಿದ್ದಳು +ಕೊರಳ+ ಸೆರೆ+ ಗೋ
ನಾಳಿಗ್+ಔಕಿತು +ಬಿಕ್ಕಿ +ಬಿಕ್ಕಿ +ವಿ
ಶಾಲ +ಲೊಚನೆ +ನೆನೆದಳ್+ಉನ್ನತ +ನಯನ+ವಾರಿಯಲಿ
ಶೂಲ+ ಮರುಮೊನೆಗೊಂಡವೊಲು+ ಸುಳಿ
ವಾಳೆ +ಝಳತಾಗಿದವೊಲ್+ಉದರ
ಜ್ವಾಲೆ +ನೆತ್ತಿಯನೇರೆ+ ಮಿಡುಕಿದಳ್+ಅಬಲೆ +ಬಿಸುಸುಯ್ದು

ಅಚ್ಚರಿ:
(೧) ಉಪಮಾನದ ಪ್ರಯೋಗ – ಶೂಲ ಮರುಮೊನೆಗೊಂಡವೊಲು; ಸುಳಿವಾಳೆ ಝಳತಾಗಿದವೊಲ್
(೨) ವಿಶಾಲಲೋಚನೆ, ಅಬಲೆ – ದ್ರೌಪದಿಯನ್ನು ಕರೆದ ಪರಿ
(೩) ಲೋಚನೆ, ನಯನ – ಸಮನಾರ್ಥಕ ಪದ

ಪದ್ಯ ೫೫: ಮನ್ಮಥನು ಯಾರ ಕೊಲೆಗೆ ಅಣಿಯಾದನು?

ಹಾಸಿದೆಳೆದಳಿರೊಣಗಿದುದು ಹೊಗೆ
ಸೂಸಿದುದು ಸುಯಿಲಿನಲಿ ಮೆಲ್ಲನೆ
ಬೀಸುತಿರೆ ಸುಳಿವಾಳೆಯೆಲೆ ಬಾಡಿದುದು ಝಳಹೊಯ್ದು
ಆ ಶಶಿಯ ಕೋಗಿಲೆಯ ತುಂಬಿಯ
ನಾ ಸರೋಜವ ಮಲ್ಲಿಗೆಯ ಕೈ
ವೀಸಿದನು ಕುಸುಮಾಸ್ತ್ರನಾ ಕೀಚಕನ ಕಗ್ಗೊಲೆಗೆ (ವಿರಾಟ ಪರ್ವ, ೨ ಸಂಧಿ, ೫೫ ಪದ್ಯ)

ತಾತ್ಪರ್ಯ:
ಹಾಸಿದ್ದ ಎಳೆಯ ಚಿಗುರು ಕೀಚಕನ ಮೈಯ ಬಿಸಿಗೆ ಒಣಗಿ ಹೋಯಿತು, ಅವನು ಉಸಿರು ಬಿಟ್ಟಾಗ ಹೊಗೆ ಹೊರಹೊಮ್ಮಿತು, ಸುಳಿ ಬಾಳೆಯೆಲೆಯಿಂದ ಬೀಸಿದರೆ ಅವನ ಮೈ ಝಳಕ್ಕೆ ಅದು ಬಾಡಿ ಹೋಯಿತು, ಚಂದ್ರ, ಕೋಗಿಲೆ, ದುಂಬಿ, ಕನ್ನೈದಿಲೆ, ಮಲ್ಲಿಗೆಗಳನ್ನು ಕೈಬೀಸಿ ಕರೆದು ಮನ್ಮಥನು ಕೀಚಕನ ಕಗ್ಗೊಲೆಗೆ ಅಣಿಯಾದನು.

ಅರ್ಥ:
ಹಾಸು: ಹರಡು; ಎಲೆ: ಪರ್ಣ; ಒಣಗು: ಬಾಡು; ಹೊಗೆ: ಧೂಮ; ಸೂಸು: ಹೊರಹೊಮ್ಮು; ಸುಯಿಲು: ನಿಟ್ಟುಸಿರು; ಮೆಲ್ಲನೆ: ನಿಧಾನ; ಬೀಸು: ಹರಹು; ಸುಳಿ: ಆವರಿಸು, ಮುತ್ತು; ಬಾಳೆ: ಕದಳಿ; ಝಳ: ಕಾಂತಿ; ಶಶಿ: ಚಂದ್ರ; ಕೋಗಿಲೆ: ಪಿಕ; ತುಂಬಿ: ದುಂಬಿ, ಜೇನು ನೋಣ; ಸರೋಜ: ಕಮಲ; ಕೈವೀಸು: ಕೈಬೀಸಿ ಕರೆ; ಕುಸುಮ: ಹೂವು; ಅಸ್ತ್ರ: ಶಸ್ತ್ರ, ಆಯುಧ; ಕಗ್ಗೊಲೆ: ಭೀಕರವಾದ ವಧೆ;

ಪದವಿಂಗಡಣೆ:
ಹಾಸಿದ್+ಎಳೆದಳಿರ್+ಒಣಗಿದುದು +ಹೊಗೆ
ಸೂಸಿದುದು +ಸುಯಿಲಿನಲಿ +ಮೆಲ್ಲನೆ
ಬೀಸುತಿರೆ+ ಸುಳಿ+ಬಾಳೆಯೆಲೆ +ಬಾಡಿದುದು +ಝಳಹೊಯ್ದು
ಆ +ಶಶಿಯ+ ಕೋಗಿಲೆಯ+ ತುಂಬಿಯನ್
ಆ+ ಸರೋಜವ+ ಮಲ್ಲಿಗೆಯ +ಕೈ
ವೀಸಿದನು +ಕುಸುಮಾಸ್ತ್ರನ್+ಆ+ ಕೀಚಕನ +ಕಗ್ಗೊಲೆಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಾಸಿದೆಳೆದಳಿರೊಣಗಿದುದು ಹೊಗೆಸೂಸಿದುದು ಸುಯಿಲಿನಲಿ ಮೆಲ್ಲನೆ
ಬೀಸುತಿರೆ ಸುಳಿವಾಳೆಯೆಲೆ ಬಾಡಿದುದು ಝಳಹೊಯ್ದು

ಪದ್ಯ ೪೧: ರಾಕ್ಷಸರು ಯಾವ ಅಸ್ತ್ರವನ್ನು ಪ್ರಯೋಗಿಸಿದರು?

ತೆರಳರವದಿರು ಹೂಡಿದರು ದ
ಳ್ಳುರಿಯ ಧಾರೆಯ ಪಾವಕಾಸ್ತ್ರವ
ನರಸ ಹೊಗೆದುದು ಭುವನ ಹೊಯ್ದುದು ಝಳಜಗತ್ರಯವ
ಸರಕುದೆಗೆದುದು ಸತ್ಯಲೋಕಕೆ
ಥರಥರದ ಜಗವಿಂದ್ರಸಾರಥಿ
ಜರಿದು ಜವಗುಂದಿದನು ಝಾಡಿಸುವನಲನುಬ್ಬೆಯಲಿ (ಅರಣ್ಯ ಪರ್ವ, ೧೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಯುದ್ಧದ ವೃತ್ತಾಂತವನ್ನು ಮುಂದುವರೆಸುತ್ತಾ, ರಾಕ್ಷಸರು ಅಷ್ಟಕ್ಕೇ ಸುಮ್ಮನೆ ಬಿಡಲಿಲ್ಲ, ಅಗ್ನೇಯಾಸ್ತ್ರವನ್ನು ಪ್ರಯೋಗಿಸಿದರು ಅದರ ಹೊಗೆ ಜಗತ್ತನ್ನೇ ತುಂಬಿತು. ಅದರ ತಾಪಕ್ಕೆ ಮೂರು ಲೋಕಗಳೂ ತಲ್ಲಣಗೊಂಡವು. ಅನೇಕ ಲೋಕಗಳು ತಮ್ಮ ಸರಕುಗಳೊಂದಿಗೆ ಸತ್ಯಲೋಕಕ್ಕೆ ಪ್ರಯಾಣ ಬೆಳೆಸಿದವು. ಇಂದ್ರನ ಸಾರಥಿ ಮಾತಲಿಯು ಆ ಬೆಂಕಿಯ ತಾಪಕ್ಕೆ ತರಹರಿಸಿ ರಥವ ವೇಗವನ್ನು ಕಡಿಮೆ ಮಾಡಿದನು

ಅರ್ಥ:
ತೆರಳು: ಹೋಗು, ನಡೆ; ಅವದಿರು: ಅವರು; ಹೂಡು: ಅಣಿಗೊಳಿಸು; ದಳ್ಳುರಿ: ದೊಡ್ಡಉರಿ; ಧಾರೆ: ಪ್ರವಾಹ; ಪಾವಕ: ಅಗ್ನಿ; ಅಸ್ತ್ರ: ಶಸ್ತ್ರ; ಅರಸ; ರಾಜ; ಹೊಗೆ: ಉಗುಳು ; ಭುವನ: ಭೂಮಿ; ಹೊಯ್ದು: ಹೊಡೆ; ಝಳ: ತಾಪ; ಜಗ: ಜಗತ್ತು; ತ್ರಯ: ಮೂರು; ಸರಕು: ಸಾಮಾನು, ಸಾಮಗ್ರಿ; ತೆಗೆ: ಹೊರತರು; ಸತ್ಯ: ದಿಟ; ಲೋಕ: ಜಗತ್ತು; ಥರಥರ: ಬಗೆಬಗೆ; ಸಾರಥಿ: ರಥವನ್ನು ಓಡಿಸುವವ; ಜರಿ: ಬಯ್ಯುವುದು, ಹಿಂಜರಿ, ತೆಗಳು; ಜವ: ವೇಗ, ರಭಸ; ಕುಂದು: ಕಡಿಮೆಯಾಗು; ಝಾಡಿ: ಕಾಂತಿ; ಅನಲ: ಬೆಂಕಿ; ಉಬ್ಬೆ: ಹೆಚ್ಚು;

ಪದವಿಂಗಡಣೆ:
ತೆರಳರ್+ಅವದಿರು +ಹೂಡಿದರು+ ದ
ಳ್ಳುರಿಯ +ಧಾರೆಯ+ ಪಾವಕ+ಅಸ್ತ್ರವನ್
ಅರಸ +ಹೊಗೆದುದು +ಭುವನ +ಹೊಯ್ದುದು +ಝಳ+ಜಗ+ತ್ರಯವ
ಸರಕು+ತೆಗೆದುದು +ಸತ್ಯಲೋಕಕೆ
ಥರಥರದ+ ಜಗವ್+ಇಂದ್ರ+ಸಾರಥಿ
ಜರಿದು +ಜವ+ಕುಂದಿದನು +ಝಾಡಿಸುವ್+ಅನಲನ್+ಉಬ್ಬೆಯಲಿ

ಅಚ್ಚರಿ:
(೧) ಆಗ್ನೇಯಾಸ್ತ್ರದ ಪ್ರಭಾವ – ದಳ್ಳುರಿಯ ಧಾರೆಯ ಪಾವಕಾಸ್ತ್ರವನರಸ ಹೊಗೆದುದು ಭುವನ ಹೊಯ್ದುದು ಝಳಜಗತ್ರಯವ