ಪದ್ಯ ೧೯: ಮಂತ್ರಾಸ್ತ್ರದ ಅಧಿದೇವತೆಗಳು ಏನು ಮಾಡಿದರು?

ಉಗಿದು ಮಂತ್ರಾಸ್ತ್ರವನು ತಿರುವಿಂ
ದುಗುಳಿಚಿದಡಾ ಭೂತದಂಘ್ರಿಗೆ
ಮುಗಿದ ಕೈಗಳಲೆರಗಿದರು ಶಸ್ತ್ರಾಧಿದೇವಿಯರು
ಉಗಿದನೊರೆಯಲಡಾಯುಧವನು
ಬ್ಬೆಗದಲಪ್ಪಳಿಸಿದಡೆ ಕಯ್ಯಿಂ
ಜಗುಳ್ದು ಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ (ಗದಾ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಆಗ ಅಶ್ವತ್ಥಾಮನು ದಿವ್ಯಾಸ್ತ್ರಗಳನ್ನು ಪ್ರಯೋಗಿಸಲು, ಆ ಅಸ್ತ್ರಗಳ ಮಂತ್ರಾಭಿಮಾನ ದೇವಿಯರು ಕೈ ಮುಗಿದು ಭೂತಕ್ಕೆ ನಮಸ್ಕರಿಸಿದರು. ಒರೆಯಿಂದ ಖಡ್ಗವನ್ನು ಹಿರಿದು ಉದ್ವೇಗದಿಂದ ಅಪ್ಪಳಿಸಿದರೆ ಕತ್ತಿಯು ಕೈಜಾರಿ ಕೆಳಕ್ಕೆ ಬಿದ್ದಿತು.

ಅರ್ಥ:
ಉಗಿ: ಹೊರಹಾಕು; ಅಸ್ತ್ರ: ಶಸ್ತ್ರ; ತಿರುಗು: ಬಿಲ್ಲಿನ ಹಗ್ಗ, ಹೆದೆ, ಮೌರ್ವಿ, ಸುತ್ತು; ಉಗುಳು: ಹೊರಹಾಕು; ಭೂತ: ದೆವ್ವ; ಅಂಘ್ರಿ: ಪಾದ; ಮುಗಿದ: ಜೋಡಿಸಿದ; ಕೈ: ಹಸ್ತ; ಎರಗು: ಬಾಗು, ನಮಸ್ಕರಿಸು; ಅಧಿದೇವತೆ: ಮುಖ್ಯವಾದ ದೇವತೆ; ಒರೆ: ಶೋಧಿಸಿ ನೋಡು, ಹೇಳು; ಆಯುಧ: ಶಸ್ತ್ರ; ಉಬ್ಬೆ: ರಭಸ; ಅಪ್ಪಳಿಸು: ತಾಗು; ಕಯ್ಯ್: ಹಸ್ತ; ಜಗುಳು: ಜಾರು; ಬಿದ್ದು: ಕುಸಿ; ಝಂಕೆ: ಆರ್ಭಟ; ಅದ್ದು: ತೋಯು, ಮುಳುಗು; ಭಯ: ಹೆದರಿಕೆ; ಝಾಡಿ: ಕಾಂತಿ;

ಪದವಿಂಗಡಣೆ:
ಉಗಿದು +ಮಂತ್ರಾಸ್ತ್ರವನು+ ತಿರುವಿಂದ್
ಉಗುಳಿಚಿದಡ್+ಆ+ ಭೂತದ್+ಅಂಘ್ರಿಗೆ
ಮುಗಿದ +ಕೈಗಳಲ್+ಎರಗಿದರು +ಶಸ್ತ್ರ+ಅಧಿದೇವಿಯರು
ಉಗಿದನ್+ಒರೆಯಲಡ್+ಆಯುಧವನ್
ಉಬ್ಬೆಗದಲ್+ಅಪ್ಪಳಿಸಿದಡೆ+ ಕಯ್ಯಿಂ
ಜಗುಳ್ದು+ ಬಿದ್ದುದು+ ಝಂಕೆ+ಅದ್ದುದು+ ಭಯದ +ಝಾಡಿಯಲಿ

ಅಚ್ಚರಿ:
(೧) ಉಗಿ – ೧,೨, ೪ ಸಾಲಿನ ಮೊದಲ ಪದ
(೨) ಮಂತ್ರಾಸ್ತ್ರವು ನಿಷ್ಪ್ರಯೋಜಕವಾಯಿತು ಎಂದು ಹೇಳಲು – ಭೂತದಂಘ್ರಿಗೆ
ಮುಗಿದ ಕೈಗಳಲೆರಗಿದರು ಶಸ್ತ್ರಾಧಿದೇವಿಯರು
(೩) ಬ, ಝ ಕಾರದ ಪದ ರಚನೆ – ಬಿದ್ದುದು ಝಂಕೆಯದ್ದುದು ಭಯದ ಝಾಡಿಯಲಿ

ಪದ್ಯ ೬೪: ಶಿಶುಪಾಲನ ರಾಜರು ಏಕೆ ಭಯಭೀತರಾದರು?

ಝಂಕೆಮಿಗೆ ಹೊರವಂಟುದೆಡಬಲ
ವಂಕದಲಿ ಯದುಸೇನೆ ಪಾಂಡವ
ರಂಕೆಯಲಿ ದಳ ಜೋಡಿಸಿತು ಝಳಪಿಸುವ ಕೈದುಗಳ
ಮುಂಕುಡಿಯ ಮೋಹರದ ದಳನಿ
ಶ್ಶಂಕೆಯಲಿ ಜೋಡಿಸಿತು ಭೂಪರ
ಬಿಂಕ ಬೀತುದು ಭೀತಿ ಹೂತುದು ಹುದುಗಿತಾಟೋಪ (ಸಭಾ ಪರ್ವ, ೧೧ ಸಂಧಿ, ೬೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಎಡಬಲಗಳಲ್ಲಿ ಯಾದವ ಸೈನ್ಯವು ಅಬ್ಬರಿಸುತ್ತಾ ಹೊರಟಿತು. ಪಾಂಡವರ ಅಪ್ಪಣೆಯಂತೆ ಅವರ ಸೈನ್ಯ ಸಿದ್ಧವಾಯಿತು. ಮುಂಚೂಣಿಯ ಸೈನ್ಯಗಳು ಭಯರಹಿತವಾಗಿ ಮುನ್ನುಗ್ಗಿದವು. ಶಿಶುಪಾಲನೊಡನೆ ಇದ್ದ ರಾಜರ ಅಬ್ಬರ ಕಡಿಮೆಯಾಗಿ ಭೀತಿಯು ಅವರನ್ನಾವರಿಸಿತು.

ಅರ್ಥ:
ಝಂಕೆ: ಆರ್ಭಟ, ಗರ್ಜನೆ; ಮಿಗೆ: ಅಧಿಕ; ಹೊರವಂಟು: ತೆರಳು; ಎಡಬಲ: ಅಕ್ಕಪಕ್ಕ; ವಂಕ: ಗುಂಪು; ಸೇನೆ: ಸೈನ್ಯ; ಅಂಕೆ: ಅಪ್ಪಣೆ; ದಳ: ಸೈನ್ಯ; ಜೋಡಿಸು: ಕೂಡಿಸು; ಝಳ: ಶೆಕೆ, ತಾಪ; ಕೈದು: ಕತ್ತಿ; ಮುಂಕುಡಿ: ಮುಂದಿರುವ, ಅಗ್ರ; ಕುಡಿ: ತುದಿ; ಮೋಹರ: ಯುದ್ಧದ; ನಿಶ್ಶಂಕೆ: ನಿಸ್ಸಂಶಯ; ಭೂಪ: ರಾಜ; ಬಿಂಕ: ಗರ್ವ, ಜಂಬ; ಬೀತು: ಕಡಿಮೆಯಾಗು; ಭೀತಿ: ಭಯ, ಹೆದರಿಕೆ; ಹೂತು: ಅಡಗು; ಹುದುಗು: ಸೇರು, ಕೂಡು; ಆಟೋಪ: ಆಡಂಬರ;

ಪದವಿಂಗಡಣೆ:
ಝಂಕೆಮಿಗೆ +ಹೊರವಂಟುದ್+ಎಡಬಲ
ವಂಕದಲಿ +ಯದುಸೇನೆ+ ಪಾಂಡವರ್
ಅಂಕೆಯಲಿ +ದಳ +ಜೋಡಿಸಿತು+ ಝಳಪಿಸುವ+ ಕೈದುಗಳ
ಮುಂಕುಡಿಯ +ಮೋಹರದ +ದಳನಿ
ಶ್ಶಂಕೆಯಲಿ +ಜೋಡಿಸಿತು +ಭೂಪರ
ಬಿಂಕ+ ಬೀತುದು+ ಭೀತಿ+ ಹೂತುದು +ಹುದುಗಿತ್+ಆಟೋಪ

ಅಚ್ಚರಿ:
(೧) ಬ ಕಾರದ ಸಾಲು ಪದ – ಭೂಪರ ಬಿಂಕ ಬೀತುದು ಭೀತಿ
(೨) ಹ ಕಾರದ ಜೋಡಿ ಪದ – ಹೂತುದು ಹುದುಗಿತಾಟೋಪ
(೩) ಝಂಕೆ, ಅಂಕೆ, ಶಂಕೆ – ಪ್ರಾಸ ಪದಗಳು

ಪದ್ಯ ೧೪: ಸಾತ್ಯಕಿಯು ಯಾವುದನ್ನು ಲೆಕ್ಕಿಸುವುದಿಲ್ಲ?

ಮುಂಕಣಿಯಲಿಟ್ಟಣಿಸಿದರು ಭಾ
ರಂಕದಾಳುಗಳೆಂಟು ಸಾವಿರ
ಬಿಂಕದತಿರಥರೆಂಟು ಕೋಟಿ ತುರಂಗ ಪಾಯದಳ
ಶಂಕಿಸುವನೇ ಬಳಿಕ ಯದುಕುಲ
ದಂಕಕಾರನು ನಿಂದನನಿಬರಿ
ಗಂಕ ಝಂಕೆಯನೇನನೆಂಬೆನು ಸಾತ್ಯಕಿಯ ಮನದ (ಕರ್ಣ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಸೈನ್ಯದ ಮುಂಚೂಣಿಯಲ್ಲಿ ಎಂಟು ಸಾವಿರ ಅತಿರಥರು, ಎಂಟು ಕೋಟಿ ರಾವುತರು, ಕಾಲಾಳುಗಳು ಮಹಾಸಮರಕ್ಕೆ ಬಂದರು. ಯಾದವನಾದ ಸಾತ್ಯಕಿಯು ಇದನ್ನೆಲ್ಲಾ ಲೆಕ್ಕಿಸುವವನೇ? ಸಾತ್ಯಕಿಯ ಮಹೋತ್ಸಾಹವನ್ನು ಏನೆಂದು ಹೇಳಲಿ ಎಂದು ವೈಶಂಪಾಯನರು ಜನಮೇಜಯ ರಾಜನಿಗೆ ಹೇಳುತ್ತಿದ್ದರು.

ಅರ್ಥ:
ಮುಂಕಣಿ: ಮುಂಚೂಣಿ; ಅಣಿ: ಸಿದ್ಧತೆ; ಅಣಸು: ಬಾಣದ ಹಿಳುಕು;ಭಾರಂಕ: ಮಹಾಯುದ್ಧ; ಆಳು: ಸೈನ್ಯ; ಸಾವಿರ: ಸಹಸ್ರ; ಬಿಂಕ: ಗರ್ವ, ಜಂಬ; ಅತಿರಥ: ಪರಾಕ್ರಮಿ; ತುರಂಗ: ಕುದುರೆ; ಪಾಯದಳ: ಸೈನ್ಯ, ಕಾಲಾಳು; ಶಂಕಿಸು: ಅನುಮಾನಿಸು; ಬಳಿಕ: ನಂತರ; ಅಂಕ: ಯುದ್ಧ; ಅಂಕಕಾರ: ಯೋಧ, ಪರಾಕ್ರಮಿ; ನಿಂದನು: ನಿಲ್ಲು; ಅನಿಬರು:ಆಷ್ಟು ಜನ; ಝಂಕೆ: ಆರ್ಭಟ, ಗದರಿಕೆ; ಮನ: ಮನಸ್ಸು;

ಪದವಿಂಗಡಣೆ:
ಮುಂಕಣಿಯಲ್+ಇಟ್ಟಣಿಸಿದರು +ಭಾ
ರಂಕದ್+ಆಳುಗಳ್+ಎಂಟು +ಸಾವಿರ
ಬಿಂಕದ್+ಅತಿರಥರ್+ಎಂಟು +ಕೋಟಿ +ತುರಂಗ+ ಪಾಯದಳ
ಶಂಕಿಸುವನೇ +ಬಳಿಕ+ ಯದುಕುಲದ್
ಅಂಕಕಾರನು +ನಿಂದನ್+ಅನಿಬರಿಗ್
ಅಂಕ +ಝಂಕೆಯನ್+ಏನನೆಂಬೆನು +ಸಾತ್ಯಕಿಯ +ಮನದ

ಅಚ್ಚರಿ:
(೧) ಅಂಕ – ೨, ೫, ೬ ಸಾಲಿನ ಮೊದಲ ಪದ
(೨) ಅಂಕ, ಬಿಂಕ – ಪ್ರಾಸ ಪದ

ಪದ್ಯ ೯೧: ಜರಾಸಂಧ ಭೀಮರು ಕಾಳಗಕ್ಕೆ ಹೇಗೆ ಸಿದ್ಧರಾದರು?

ಅಂಕಕಿಬ್ಬರು ಭಟರು ತಿಲಕಾ
ಲಂಕರಣ ಶೋಭೆಯಲಿ ರಣನಿ
ಶ್ಶಂಕರನುವಾದರು ಸುಕರ್ಪುರ ವೀಳೆಯಂಗೊಂಡು
ಬಿಂಕದುಬ್ಬಿನ ರೋಮ ಪುಳಕದ
ಮುಂಕುಡಿಯ ಸುಮ್ಮಾನದಂಕೆಯ
ಝಂಕೆಗಳ ಭರ ಭುಲ್ಲವಿಸಿದುದು ಭೀಮ ಮಾಗಧರ (ಸಭಾ ಪರ್ವ, ೨ ಸಂಧಿ, ೯೧ ಪದ್ಯ)

ತಾತ್ಪರ್ಯ:
ಯುದ್ಧದ ರಂಗಕ್ಕೆ ಇಬ್ಬರು ಯೋಧರು ಹಣೆಗೆ ತಿಲಕವನ್ನಿಟ್ಟು ಅಲಂಕಾರ ಮಾಡಿಕೊಂಡರು. ಆ ಯುದ್ಧದ ವೇಷದಲ್ಲಿ ಶೋಭಿಸುತ್ತಿದ್ದ ಇಬ್ಬರು ಕರ್ಪುರವೀಳೆಯನ್ನು ಮೆಲ್ಲುತ್ತಾ ಸಿದ್ಧರಾದರು. ಯುದ್ಧದಲ್ಲಿ ತಮಗೆ ಜಯ ಎಂದು ನಂಬಿದ್ದರು, ಇಬ್ಬರಿಗೂ ಸೋಲಿನ ಅನುಮಾನವೇ ಇಲ್ಲ. ತಮ್ಮ ಶಕ್ತಿಯನ್ನು ಕುರಿತು ಆತ್ಮವಿಶ್ವಾಸದಿಂದ ಇಬ್ಬರೂ ರೋಮಾಂಚನಗೊಂಡಿದ್ದರು. ಗೆಲುವಿನ ಸಂತೋಷವನ್ನು ಮಿತಿಯಲ್ಲಿಟ್ಟುಕೊಂಡು ಗರ್ಜಿಸಿದರು.

ಅರ್ಥ:
ಅಂಕ: ಯುದ್ಧ; ಭಟ: ಯೋಧ; ತಿಲಕ: ಹಣೆ ಮೇಲಿಡುವ ಬೊಟ್ಟು; ಅಲಂಕರಣ: ಶೃಂಗರಿಸು; ಶೋಭೆ: ಹೊಳಪು, ಚೆಲುವು; ರಣ: ಯುದ್ಧ; ನಿಶ್ಶಂಕ: ನಿಸ್ಸಂದೇಹ; ಅನು: ತಯಾರು; ಕರ್ಪುರ: ಸುಗಂಧ ದ್ರವ್ಯ; ವೀಳೆ: ಎಲೆ; ಬಿಂಕ:ಸೊಕ್ಕು, ಠೀವಿ; ಉಬ್ಬು: ಹಿಗ್ಗು, ಗರ್ವಿಸು; ರೋಮ: ಕೂದಲು; ಪುಳಕ: ರೋಮಾಂಚನ; ಮುಂಕಣಿ: ಮುಂದುವರೆ; ಸುಮ್ಮಾನ: ಅಹಂಕಾರ, ಗರ್ವ; ಝಂಕೆ: ಕೂಗು, ಧ್ವನಿ; ಭರ:ಹೆಚ್ಚಳ, ವೇಗ; ಭುಲ್ಲವಿಸು: ಹುಮ್ಮಸ್ಸಿನಿಂದ ಕೂಡಿರು;

ಪದವಿಂಗಡಣೆ:
ಅಂಕಕ್+ಇಬ್ಬರು +ಭಟರು +ತಿಲಕ
ಅಲಂಕರಣ+ ಶೋಭೆಯಲಿ +ರಣ+ನಿ
ಶ್ಶಂಕರ್+ಅನುವಾದರು +ಸುಕರ್ಪುರ +ವೀಳೆಯಂಗೊಂಡು
ಬಿಂಕದ್+ಉಬ್ಬಿನ +ರೋಮ +ಪುಳಕ
ಮುಂಕುಡಿಯ +ಸುಮ್ಮಾನದ್+ಅಂಕೆಯ
ಝಂಕೆಗಳ+ ಭರ+ ಭುಲ್ಲವಿಸಿದುದು +ಭೀಮ +ಮಾಗಧರ

ಅಚ್ಚರಿ:
(೧) ಯೋಧರ ಸಿದ್ಧತೆ: ಬಿಂಕದುಬ್ಬಿನ ರೋಮ ಪುಳಕದ ಮುಂಕುಡಿಯ ಸುಮ್ಮಾನದಂಕೆಯ ಝಂಕೆಗಳ ಭರ ಭುಲ್ಲವಿಸಿದುದು
(೨) “ಭ” ಕಾರದ ಪದಗಳು – ಭರ ಭುಲ್ಲವಿಸಿದುದು ಭೀಮ
(೩) ಅಂಕ, ಬಿಂಕ; ಅಂಕೆ, ಝಂಕೆ – ಪ್ರಾಸ ಪದ – ೧, ೪ ಸಾಲು; ೫, ೬ ಸಾಲು