ಪದ್ಯ ೪೧: ದುರ್ಯೋಧನನ ಸೈನ್ಯದಲ್ಲಿ ಯಾರು ನಾಶ ಹೊಂದಿದರು?

ಕುದುರೆ ರಾವ್ತರು ಜೋದಸಂತತಿ
ಮದಗಜವ್ರಜವತಿರಥಾವಳಿ
ಪದಚರರು ಚತುರಂಗಬಲವೊಂದುಳಿಯದಿದರೊಳಗೆ
ಪದದಲೇ ಕೌರವನೃಪ್ತೈ ಜಾ
ರಿದನು ಕುಂತೀಸುತರು ಬಹಳಾ
ಭ್ಯುದಯರಾದರು ವೀರನಾರಾಯಣನ ಕರುಣದಲಿ (ಗದಾ ಪರ್ವ, ೨ ಸಂಧಿ, ೪೧ ಪದ್ಯ)

ತಾತ್ಪರ್ಯ:
ಕುದುರೆಗಳು, ರಾವುತರು, ಆನೆಗಳು, ಜೋದರು, ರಥಗಳು, ಕಾಲಾಳುಗಳು, ಈ ಚತುರಂಗ ಬಲದಲ್ಲಿ ಒಂದೂ ಉಳಿದಿರಲಿಲ್ಲ. ದುರ್ಯೋಧನನು ಕಾಲು ನಡೆಯಿಂದಲೇ ಜಾರಿ ತಪ್ಪಿಸಿಕೊಂಡು ಹೋದನು. ವೀರನಾರಾಯಣನ ಕರುಣೆಯಿಂದ ಪಾಂಡವರ ಅಭ್ಯುದಯ ಅತಿಶಯವಾಗಿ ಶೋಭಿಸಿತು.

ಅರ್ಥ:
ಕುದುರೆ: ಅಶ್ವ; ರಾವ್ತರು: ಕುದುರೆಸವಾರ; ಜೋದ: ಆನೆ ಸವಾರ; ಸಂತತಿ: ವಂಶ; ಮದ: ಅಮಲು, ಮತ್ತು; ಗಜ: ಆನೆ; ವ್ರಜ: ಗುಂಪು; ರಥಾವಳಿ: ರಥಗಳ ಗುಂಪು; ಪದಚರ: ಕಾಲಾಳು; ಚತುರಂಗಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಉಳಿ: ಮಿಕ್ಕ; ಪದ: ಪಾದ; ನೃಪತಿ: ರಾಜ; ಅಭ್ಯುದಯ: ಏಳಿಗೆ; ಕರುಣ: ದಯೆ;

ಪದವಿಂಗಡಣೆ:
ಕುದುರೆ +ರಾವ್ತರು +ಜೋದ+ಸಂತತಿ
ಮದ+ಗಜವ್ರಜವ್+ಅತಿ+ರಥಾವಳಿ
ಪದಚರರು+ ಚತುರಂಗಬಲವ್+ಒಂದುಳಿಯದ್+ಇದರೊಳಗೆ
ಪದದಲೇ +ಕೌರವ+ನೃಪತಿ+ ಜಾ
ರಿದನು +ಕುಂತೀಸುತರು +ಬಹಳ
ಅಭ್ಯುದಯರಾದರು +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಯುದ್ಧದಲ್ಲಿ ನಾಶವಾದುದು – ಕುದುರೆ, ರಾವ್ತರು, ಜೋದ, ಮದಗಜವ್ರಜ, ರಥಾವಳಿ, ಪದಚರರು, ಚತುರಂಗಬಲ

ಪದ್ಯ ೨೦: ಯುದ್ಧಕ್ಕೆಲ್ಲರು ಹೇಗೆ ಸಿದ್ಧರಾದರು?

ಬಿಗುಹನೇರಿಸಿ ಮತ್ತೆ ತುರಗಾ
ಳಿಗಳ ಬಿಗಿದರು ರಾವುತರು ಹೊರ
ಜಿಗಳ ಜೋಡಿಸಿ ಜೋದರಾಯತವಾಯ್ತು ಕರಿಗಲಲಿ
ಬಿಗಿದು ಕೀಲಚ್ಚುಗಳ ರಥಿಕಾ
ಳಿಗಳು ಮೇಳೈಸಿದರು ಕೈದುವ
ನುಗಿದು ಕಾಲಾಳೆದ್ದು ನಿಂದುದು ಕದನಕನುವಾಗಿ (ದ್ರೋಣ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಹಲ್ಲಣ, ಹೊರಜಿಗಳ ಸಹಾಯದಿಂದ ರಾವುತರು ಜೋದರು ಕುದುರೆ ಆನೆಗಳನ್ನು ಯುದ್ಧಕ್ಕಣಿಮಾಡಿದರು. ಕೀಲುಗಳನ್ನು ಹಾಕಿ ರಥಿಕರು, ಸಿದ್ಧರಾದರು. ಆಯುಧಗಳನ್ನು ಹಿಡಿದ ಕಾಲಾಳುಗಳು ಯುದ್ಧಕ್ಕನುವಾಗಿ ನಿಂತರು.

ಅರ್ಥ:
ಬಿಗುಹು: ಬಿಗಿ; ಏರು: ಹೆಚ್ಚಾಗು; ಮತ್ತೆ: ಪುನಃ; ತುರಗಾಳಿ: ಕುದುರೆಗಳ ಸಾಲು; ಬಿಗಿ: ಭದ್ರವಾಗಿರುವುದು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಹೊರಜೆ: ಹಗ್ಗ; ಜೋಡಿಸು: ಕೂಡಿಸು; ಜೋಧ: ಸೈನಿಕ; ಆಯತ: ಉಚಿತವಾದ ಕ್ರಮ, ನೆಲೆ; ಕರಿ: ಆನೆ; ಕೀಲು: ಅಗುಳಿ, ಬೆಣೆ; ಅಚ್ಚು: ಪಡಿಯಚ್ಚಿನಲ್ಲಿ ಎರಕಹೊಯ್ದು ತೆಗೆದ ಪ್ರತಿರೂಪ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಆಳಿ: ಸಾಲು; ಮೇಳೈಸು: ಸೇರು, ಜೊತೆಯಾಗು; ಕೈದು: ಆಯುಧ, ಶಸ್ತ್ರ; ಉಗಿ: ಹೊರಹಾಕು; ಕಾಲಾಳು: ಸೈನಿಕ; ಎದ್ದು: ಮೇಲೇಳು; ನಿಂದು: ನಿಲ್ಲು; ಕದನ: ಯುದ್ಧ; ಅನುವು: ಸೊಗಸು, ರೀತಿ;

ಪದವಿಂಗಡಣೆ:
ಬಿಗುಹನೇರಿಸಿ +ಮತ್ತೆ +ತುರಗಾ
ಳಿಗಳ +ಬಿಗಿದರು +ರಾವುತರು +ಹೊರ
ಜಿಗಳ +ಜೋಡಿಸಿ +ಜೋದರಾಯತವಾಯ್ತು +ಕರಿಗಳಲಿ
ಬಿಗಿದು +ಕೀಲಚ್ಚುಗಳ+ ರಥಿಕಾ
ಳಿಗಳು +ಮೇಳೈಸಿದರು +ಕೈದುವನ್
ಉಗಿದು +ಕಾಲಾಳೆದ್ದು +ನಿಂದುದು +ಕದನಕ್+ಅನುವಾಗಿ

ಅಚ್ಚರಿ:
(೧) ತುರಗಾಳಿ, ರಥಿಕಾಳಿ – ಪ್ರಾಸ ಪದಗಳು

ಪದ್ಯ ೨೬: ಸುಪ್ರದೀಪ ಗಜದ ಮೇಲೆ ಯಾವ ರೀತಿ ಬಾಣವನ್ನು ಸುರಿಸಿದರು?

ಮರಳಿ ಮತ್ತೆ ಮಹಾರಥರು ಸಂ
ವರಿಸಿಕೊಂಡುದು ಸರಳ ಮಳೆಗಳ
ಸುರಿದರಾನೆಯ ಮೇಲೆ ಜೋದರ ಕೋಲ ಮನ್ನಿಸದೆ
ಗಿರಿಯ ಮುತ್ತಿದ ಮಿಂಚುಬುಳುವಿನ
ಹೊರಳಿಯಂತಿರೆ ಹೊನ್ನ ಬರಹದ
ಸರಳು ಮೆರೆದವು ಕರೆದರದುಭುತ ಕಣೆಯ ಸರಿವಳೆಯ (ದ್ರೋಣ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಮಹಾರಥರೆಲ್ಲರೂ ಸಾವರಿಸಿಕೊಂಡು ಅದರ ಮೇಲೆ ಬಾಣಗಳ ಮಳೆಯನ್ನೇ ಕರೆದರು. ಬಂಗಾರದ ರೇಖೆಯುಳ್ಳ ಆ ಬಾಣಗಳು ಬೆಟ್ಟವನ್ನು ಮುತ್ತಿದ ಮಿಂಚುಹುಳುಗಳಂತೆ ಕಂಡವು. ಅದ್ಭುತವಾದ ಶರವರ್ಷವನ್ನು ಸುಪ್ರತೀಕ ಗಜದ ಮೇಲೆ ಸುರಿದರು.

ಅರ್ಥ:
ಮರಳು: ಹಿಂದಿರುಗು; ಮತ್ತೆ: ಪುನಃ; ಮಹಾರಥ: ಪರಾಕ್ರಮಿ; ಸಂವರಿಸು: ಗುಂಪುಗೂಡು, ಸಜ್ಜುಮಾಡು; ಸರಳ: ಬಾಣ; ಮಳೆ: ವರ್ಶ; ಸುರಿ: ವರ್ಷಿಸು; ಆನೆ: ಗಜ; ಜೋದ: ಯೋಧ; ಕೋಲ: ಬಾಣ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ಗಿರಿ: ಬೆಟ್ಟ; ಮುತ್ತು: ಆವರಿಸು; ಮಿಂಚುಬುಳು: ಮಿಂಚುಹುಳು; ಹೊರಳು: ತಿರುವು, ಬಾಗು; ಹೊನ್ನ: ಚಿನ್ನ; ಬರಹ: ಬರವಣಿಗೆ; ಸರಳು: ಬಾಣ; ಮೆರೆ: ಹೊಳೆ, ಪ್ರಕಾಶಿಸು; ಅದುಭುತ: ಆಶ್ಚರ್ಯ; ಕಣೆ: ಬಾಣ; ಸರಿವಳೆ: ವರ್ಷ;

ಪದವಿಂಗಡಣೆ:
ಮರಳಿ+ ಮತ್ತೆ +ಮಹಾರಥರು +ಸಂ
ವರಿಸಿಕೊಂಡುದು+ ಸರಳ +ಮಳೆಗಳ
ಸುರಿದರ್+ಆನೆಯ+ ಮೇಲೆ +ಜೋದರ +ಕೋಲ +ಮನ್ನಿಸದೆ
ಗಿರಿಯ +ಮುತ್ತಿದ+ ಮಿಂಚುಬುಳುವಿನ
ಹೊರಳಿಯಂತಿರೆ+ ಹೊನ್ನ +ಬರಹದ
ಸರಳು +ಮೆರೆದವು +ಕರೆದರ್+ಅದುಭುತ+ ಕಣೆಯ+ ಸರಿವಳೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಿರಿಯ ಮುತ್ತಿದ ಮಿಂಚುಬುಳುವಿನ ಹೊರಳಿಯಂತಿರೆ ಹೊನ್ನ ಬರಹದ
ಸರಳು ಮೆರೆದವು
(೨) ಕೋಲ, ಕಣೆ, ಸರಳು – ಸಮಾನಾರ್ಥಕ ಪದ

ಪದ್ಯ ೮೦: ಯೊಧರ ಪ್ರಾಣಗಳು ಎಲ್ಲಿ ಹಾರಿದವು?

ತಿರುಹಿ ಬಿಸುಟವು ಕಾಲುಗಾಹಿನ
ತುರಗವನು ಮುಂಬಾರೆಕಾರರ
ಶಿರವನೈದಾರೇಳನಡಸಿದವಣಲ ಹೊಳಲಿನೊಳು
ಅರರೆ ಪಟ್ಟೆಯ ಲೌಡಿ ಖಂಡೆಯ
ದುರವಣೆಯ ಹೊಯಿಲಿನೊಳು ರಿಪುಗಜ
ವುರುಳಿದವು ತೆರಳಿದವು ಜೋದರ ಜೀವವಂಬರಕೆ (ಭೀಷ್ಮ ಪರ್ವ, ೪ ಸಂಧಿ, ೮೦ ಪದ್ಯ)

ತಾತ್ಪರ್ಯ:
ಕಾವಲಿಗಿದ್ದ ಕುದುರೆಗಳನ್ನು ಎತ್ತಿ ಎಸೆದವು, ಆನೆಗಳನ್ನು ಹಿಡಿಯಲು ಬಂದ ಕಂಬಿಗಳನ್ನು ಹಿಡಿದ ಐದಾರು ಜನ ಯೋಧರನ್ನು ತೆಗೆದೆಸೆದು ಹೆಣಗಳಲ್ಲಿ ಕೂಡಿಸಿದವು. ಲೌಡಿ, ಖಂಡೆಯ ಪಟ್ಟೆಗಳ ಹೊಡೆತಕ್ಕೆ ವೈರಿ ಸೈನ್ಯದ ಆನೆಗಳು ಉರುಳಿದವು. ಯೋಧರ ಪ್ರಾಣಗಳು ಆಕಾಶಕ್ಕೆ ಹಾರಿದವು.

ಅರ್ಥ:
ತಿರುಹು: ತಿರುಗಿಸು, ಸುತ್ತಿಸು; ಬಿಸುಟು: ಹೊರಹಾಕು; ಕಾಲುಗಾಹಿ: ಬೆಂಗಾವಲು; ತುರಗ: ಕುದುರೆ; ಮುಂಬಾರೆಕಾರ: ಮುಂದಿನ ಸರದಿಯವ; ಶಿರ: ತಲೆ; ಐದು: ಬಂದು ಸೇರು; ಅಡಸು: ಮುತ್ತು, ಆಕ್ರಮಿಸು; ಹೊಳಲು: ಪ್ರಕಾಶ; ಅರರೆ: ಆಶ್ಚರ್ಯದ ಸಂಕೇತ; ಪಟ್ಟೆ: ಲೋಹದ ಪಟ್ಟಿ; ಲೌಡಿ: ಕಬ್ಬಿಣದ ಆಯುಧ; ಖಂಡೆಯ: ಕತ್ತಿ; ಉರವಣೆ: ಒಂದು ಬಗೆಯ ಕಬ್ಬಿಣದ ಆಯುಧ; ಹೊಯಿಲು: ಏಟು, ಹೊಡೆತ; ರಿಪು: ವೈರಿ; ಗಜ: ಆನೆ; ಉರುಳು: ಕೆಳಕ್ಕೆ ಬೀಳು; ತೆರಳು: ಹೋಗು, ನಡೆ; ಜೋದ: ಆನೆಯ ಮೇಲೆ ಕೂತು ಹೋರಾಡುವ ಯೋಧ; ಅಂಬರ: ಆಗಸ; ಜೀವ: ಪ್ರಾಣ;

ಪದವಿಂಗಡಣೆ:
ತಿರುಹಿ +ಬಿಸುಟವು +ಕಾಲುಗಾಹಿನ
ತುರಗವನು +ಮುಂಬಾರೆಕಾರರ
ಶಿರವನ್+ಐದಾರೇಳನ್+ಅಡಸಿದವಣಲ+ ಹೊಳಲಿನೊಳು
ಅರರೆ+ ಪಟ್ಟೆಯ +ಲೌಡಿ +ಖಂಡೆಯದ್
ಉರವಣೆಯ +ಹೊಯಿಲಿನೊಳು +ರಿಪು+ಗಜವ್
ಉರುಳಿದವು +ತೆರಳಿದವು+ ಜೋದರ +ಜೀವವ್+ಅಂಬರಕೆ

ಅಚ್ಚರಿ:
(೧) ಸತ್ತರು ಎಂದು ಹೇಳಲು – ತೆರಳಿದವು ಜೋದರ ಜೀವವಂಬರಕೆ

ಪದ್ಯ ೩೨: ಓಲಗದ ವೈಭವ ಯಾರ ವೈಭವಕ್ಕಿಂತ ಹೆಚ್ಚಿತ್ತು?

ಧರಣಿಪತಿ ಕೇಳೊಂದು ಹರಿಯಂ
ತರವಿಶಾಲ ಮಹಾ ಸಭಾವಿ
ಸ್ತರಣವದರಲಿ ತೆರಹ ಕಾಣೆನು ತೀವಿತಸನಿಪರು
ಹೊರಗೆ ರಥಿಕರು ರಾಹುತರು ಜೋ
ದರು ಪದಾತಿಗಳಿದ್ದುದಂದಿನ
ಸಿರಿ ಸುರೇಂದ್ರನ ಪಾಡಿಗೈಮಡಿ ಹತ್ತುಮಡಿಯೆಂದ (ಸಭಾ ಪರ್ವ, ೧೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಆ ಒಂದು ಕ್ರೋಶದ ವಿಸ್ತಾರವಾದ ಜಾಗದಲ್ಲಿ ಖಾಲಿಯಾಗಿದ್ದ ಒಂದು ಜಾಗವೇ ಇರಲಿಲ್ಲ. ಎಲ್ಲಾ ಜಾಗದಲ್ಲು ರಾಜರು ಸೇರಿದ್ದರು. ಹೊರಗಡೆ ಚತುರಂಗ ಸೈನ್ಯಗಳು ಕೂಡಿದ್ದವು. ಆ ದಿನದ ಸಭಾ ವೈಭವವು, ದೇವೇಂದ್ರನ ಓಲಗದ ವೈಭವಕ್ಕೆ ಐದು ಮಡಿಯೇಕೆ ಹತ್ತು ಮಡಿ ಹೆಚ್ಚು ಎನ್ನುವಂತ್ತಿತ್ತು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಕೇಳು: ಆಲಿಸು; ಹರದಾರಿ: ಕ್ರೋಶ; ವಿಶಾಲ: ವಿಸ್ತರ, ಅಗಲವಾದ; ಮಹಾ: ದೊಡ್ಡ; ಸಭೆ: ಓಲಗ; ವಿಸ್ತರಣ: ವಿಶಾಲ; ತೆರಹು: ತೆರವಾದ, ಖಾಲಿ; ಕಾಣು: ನೋಡು; ತೀವಿ: ದಟ್ಟ; ಅವನಿಪ: ರಾಜ; ಹೊರಗೆ: ಆಚೆ; ರಥಿಕ: ರಥವನ್ನು ಓಡಿಸುವವ; ರಾಹುತ: ಕುದುರೆ ಓಡಿಸುವವ; ಜೋದ: ಯೋಧ; ಪದಾತಿ: ಕಲಾಳು; ಸಿರಿ: ಐಶ್ವರ್ಯ; ದೇವೆಂದ್ರ: ಇಂದ್ರ, ಸುರಪತಿ; ಪಾಡು: ಸ್ಥಿತಿ; ಐಮಡಿ: ಐದು ಬಾರಿ ಹೆಚ್ಚು; ಹತ್ತು: ದಶ;

ಪದವಿಂಗಡಣೆ:
ಧರಣಿಪತಿ +ಕೇಳ್+ಒಂದು +ಹರಿಯಂ
ತರ+ವಿಶಾಲ +ಮಹಾ +ಸಭಾ+ವಿ
ಸ್ತರಣವ್+ಅದರಲಿ +ತೆರಹ +ಕಾಣೆನು +ತೀವಿತ್+ಅವನಿಪರು
ಹೊರಗೆ +ರಥಿಕರು +ರಾಹುತರು +ಜೋ
ದರು +ಪದಾತಿಗಳ್+ಇದ್ದುದ್+ಅಂದಿನ
ಸಿರಿ+ ಸುರೇಂದ್ರನ +ಪಾಡಿಗ್+ಐಮಡಿ+ ಹತ್ತುಮಡಿಯೆಂದ

ಅಚ್ಚರಿ:
(೧) ಧರಣಿಪತಿ, ಅವನಿಪ – ಸಮನಾರ್ಥಕ ಪದ
(೨) ಐಮಡಿ, ಹತ್ತುಮಡಿ – ಪದಗಳ ಬಳಕೆ
(೩) ಚತುರಂಗ ಸೈನ್ಯದ ಅಂಗ – ರಥಿಕ, ರಾಹುತ, ಜೋದ, ಪದಾತಿ

ಪದ್ಯ ೧೦೧: ಯೋಧನ ಲಕ್ಷಣಗಳೇನು?

ಹೆಬ್ಬಲವನೊಡೆದುಳಿಸಿ ಭೂಮಿಯ
ನಿಬ್ಬಗೆಯ ಮಾಡಿಸುತ ಗಜಹಯ
ದೊಬ್ಬುಳಿಯ ಹರೆಗಡಿದು ಕಾದಿಸುತಾನೆಗಳ ಮೇಲೆ
ಬೊಬ್ಬಿರಿದು ಶರ ಮಳೆಯ ಸುರಿಸುರಿ
ದುಬ್ಬರದ ಬವರದೊಳಗಹಿತರಿ
ಗುಬ್ಬಸವನೆಸಗುವನೆ ಜೋದನು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೦೧ ಪದ್ಯ)

ತಾತ್ಪರ್ಯ:
ಯೋಧನ ಲಕ್ಷಣವನ್ನು ವಿದುರ ಇಲ್ಲಿ ತಿಳಿಸಿದ್ದಾರೆ. ಮಹಾ ಸೈನ್ಯವನ್ನು ಹೊಡೆದು, ತನ್ನ ಆನೆಯ ಬಲದಿಂದ ಇಬ್ಬಾಗ ಮಾಡುತ್ತಾ, ವಿರೋಧಿಗಳ ಆನೆ ಕುದುರೆಗಳ ಗುಂಪನ್ನು ಕಡಿದು, ಆನೆಗಳ ಗುಂಪಿನ ಮೇಲೆ ಬಾಣಗಳ ಮಳೆಗರೆಯುತ್ತಾ ಯುದ್ಧದಲ್ಲಿ ಶತ್ರುಗಳಿಗೆ ಕಷ್ಟಗಳನ್ನು ಉಂಟುಮಾಡುವವನೆ ಯೋಧನೆಂದು ಕರೆಸಿಕೊಳ್ಳುತ್ತಾನೆ ಎಂದು ವಿದುರ ತಿಳಿಸಿದ.

ಅರ್ಥ:
ಹೆಬ್ಬಲ: ದೊಡ್ಡ ಸೈನ್ಯ; ಒಡೆದು: ಸೀಳು, ಬಿರಿ, ಚೂರು ಮಾಡು; ಭೂಮಿ: ಧರಿತ್ರಿ; ಇಬ್ಬಗೆ: ಇರಡು ಭಾಗ; ಗಜ: ಆನೆ; ಹಯ: ಕುದುರೆ; ಒಬ್ಬುಳಿ: ಗುಂಪು, ಸಮೂಹ; ಹರೆ: ಚೆದುರು, ಹರಿ; ಕಡಿ: ಸೀಳು; ಕಾದಿ: ಹೋರಾಡು; ಆನೆ: ಕರಿ; ಬೊಬ್ಬಿರಿ: ಕೂಗು, ಅರಚು, ಉದ್ಘೋಷಿಸು; ಶರ: ಬಾಣ; ಮಳೆ: ವರ್ಷ; ಸುರಿ: ಬೀಳು; ಉಬ್ಬರ:ಅತಿಶಯ, ಹೆಚ್ಚಳ; ಬವರ:ಕಾಳಗ, ಯುದ್ಧ; ಅಹಿತರು: ಶತ್ರುಗಳು; ಉಬ್ಬಸ: ಕಷ್ಟ, ಸಂಕಟ; ಎಸಗು: ಉಂಟುಮಾಡು; ಜೋದ: ಯೋಧ;ರಾಯ: ರಾಜ;

ಪದವಿಂಗಡಣೆ:
ಹೆಬ್ಬಲವನ್+ಒಡೆದುಳಿಸಿ+ ಭೂಮಿಯನ್
ಇಬ್ಬಗೆಯ +ಮಾಡಿಸುತ +ಗಜ+ಹಯದ್
ಒಬ್ಬುಳಿಯ +ಹರೆಗಡಿದು+ ಕಾದಿಸುತ+ಆನೆಗಳ +ಮೇಲೆ
ಬೊಬ್ಬಿರಿದು +ಶರ +ಮಳೆಯ +ಸುರಿಸುರಿದ್
ಉಬ್ಬರದ +ಬವರದೊಳಗ್+ಅಹಿತರಿಗ್
ಉಬ್ಬಸವನ್+ಎಸಗುವನೆ +ಜೋದನು +ರಾಯ +ಕೇಳೆಂದ

ಅಚ್ಚರಿ:
(೧) ಗಜ, ಆನೆ – ಸಮನಾರ್ಥಕ ಪದ
(೨) ಉಬ್ಬರ, ಉಬ್ಬಸ – ಪದಗಳ ಬಳಕೆ