ಪದ್ಯ ೬: ಶೌನಕಾದಿ ಮುನಿಗಳಿಗೆ ಸೂತನು ಯಾವ ಕಥೆಯನ್ನು ಹೇಳಿದನು?

ಹೇಳು ಸಾಕೆಲೆ ಸೂತ ದುರಿತ
ವ್ಯಾಳ ವಿಷಜಾಂಗುಳಿಕವನು ನೀ
ಕೇಳಿದಂದದೊಳಂದು ಜನಮೇಜಯನ ಯಾಗದಲಿ
ಮೌಳಿಗಳಲಾನುವೆವು ನಿನ್ನಯ
ಹೇಳಿಕೆಯನೆನೆ ನಿಖಿಳ ಮುನಿಗಳ
ನೋಲಗಿಸುವೆನು ನಿಮ್ಮನುಜ್ಞೆಯಲೆಂದು ಕೈಮುಗಿದ (ಆದಿ ಪರ್ವ, ೨ ಸಂಧಿ, ೬ ಪದ್ಯ)

ತಾತ್ಪರ್ಯ:
ಸೂತನೆ, ಕರ್ಮಗಳಲ್ಲಿ ಇರಬಹುದಾದ ಪಾಪವೆಂಬ ಸರ್ಪವಿಷಕ್ಕೆ ಚಿಕಿತ್ಸೆಯಂತಿರುವ ಮಹಾಭಾರವನ್ನು ಜನಮೇಜಯನ ಯಾಗದಲ್ಲಿ ನೀನು ಕೇಳಿದಂತೆಯೇ ನಮಗೆ ಹೇಳು. ನಿನ್ನ ಮಾತುಗಳನ್ನು ನಾವು ತಲೆಯ ಮೇಲೆ ಹೊತ್ತುಕೊಳ್ಳುತ್ತೇವೆ ಎಂದು ಶೌನಕಾದಿಗಳು ಹೇಳಲು ಸೂತನು ಅವರಿಗೆ ವಂದಿಸಿ ನಿಮ್ಮ ಅಪ್ಪಣೆಯಂತೆ ನಿಮ್ಮ ಸೇವೆಯನ್ನು ಮಾಡುತ್ತೇನೆ ಎಂದು ಹೇಳಿದನು.

ಅರ್ಥ:
ಹೇಳು: ತಿಳಿಸು; ಸೂತ: ಪುರಾಣಗಳನ್ನು ಬೋಧಿಸಿದ ಒಬ್ಬ ಋಷಿಯ ಹೆಸರು; ದುರಿತ: ಪಾಪ, ಪಾತಕ; ವ್ಯಾಳ: ಹಾವು; ವಿಷ: ಗರಳ; ಯಾಗ: ಕ್ರತು; ಮೌಳಿ: ತಲೆ; ನಿಖಿಳ: ಎಲ್ಲಾ; ಮುನಿ: ಋಷಿ; ಅನುಜ್ಞೆ: ಒಪ್ಪಿಗೆ; ಕೈಮುಗಿ: ನಮಸ್ಕರಿಸು; ಓಲಗಿಸು: ಸೇವೆ ಮಾಡು; ಗುಳಿಕ: ಔಷಧಿ;

ಪದವಿಂಗಡಣೆ:
ಹೇಳು +ಸಾಕ್+ಎಲೆ +ಸೂತ +ದುರಿತ
ವ್ಯಾಳ +ವಿಷಜಾಂಗುಳಿಕವನು+ ನೀ
ಕೇಳಿದಂದದೊಳ್+ಅಂದು +ಜನಮೇಜಯನ+ ಯಾಗದಲಿ
ಮೌಳಿಗಳಲ್+ಆನುವೆವು +ನಿನ್ನಯ
ಹೇಳಿಕೆಯನ್+ಎನೆ +ನಿಖಿಳ +ಮುನಿಗಳನ್
ಓಲಗಿಸುವೆನು +ನಿಮ್ಮ್+ಅನುಜ್ಞೆಯಲೆಂದು +ಕೈಮುಗಿದ

ಅಚ್ಚರಿ:
(೧) ರೂಪಕದ ಪ್ರಯೋಗ – ದುರಿತವ್ಯಾಳ ವಿಷಜಾಂಗುಳಿಕವನು

ಪದ್ಯ ೪: ಜನಮೇಜಯ ಯಾವ ಕಥೆಯನ್ನು ಕೇಳಿದನು?

ಕೇಳಿದನು ಜನಮೇಜಯ ಕ್ಷಿತಿ
ಪಾಲಕನು ವರ ಸರ್ಪಯಜ್ಞ
ಸ್ಥೂಲ ಪಾಪವಿಘಾತಿಗೋಸುಗವೀ ಮಹಾಕಥೆಯ
ಕೇಳಿದೆನು ತಾನಲ್ಲಿ ಮುನಿಜನ
ಮೌಳಿ ಮಂಡಿತ ಚರಣಕಮಲ ವಿ
ಶಾಲ ವೇದವ್ಯಾಸಕೃತ ಭಾರತ ಕಥಾಮೃತವ (ಆದಿ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ಹಿಂದೆ ಜನಮೇಜಯರಾಜನು ಸರ್ಪಯಾಗವನ್ನು ಮಾಡಿ ತನಗೆ ಬಂದೊದಗಿದ ಪಾಪವನ್ನು ಕಳೆದುಕೊಳ್ಳುವುದಕ್ಕಾಗಿ ಈ ಕಥೆಯನ್ನು ಕೇಳಿದನು. ಮುನಿಜನರಿಂದ ವಂದಿತವಾದ ಪಾದಕಮಲಗಳನ್ನುಳ್ಳ, ವಿಶಾಲಬುದ್ಧಿಯಾದ ವೇದವ್ಯಾಸರಿಂದ ರಚಿತವಾದ ಭಾರತಕಥಾಮೃತವನ್ನು ನಾನು ಅಲ್ಲಿ ಕೇಳಿದೆನು.

ಅರ್ಥ:
ಕೇಳು: ಆಲಿಸು, ಬೇಡು; ಕ್ಷಿತಿಪಾಲ: ರಾಜ; ವರ: ಶ್ರೇಷ್ಠ; ಯಜ್ಞ: ಯಾಗ, ಕ್ರತು; ಸ್ಥೂಲ: ದೊಡ್ಡ; ಪಾಪ: ಪುಣ್ಯವಲ್ಲದ ಕಾರ್ಯ; ವಿಘಾತ: ನಾಶ, ಧ್ವಂಸ; ಮಹಾಕಥೆ: ದೊಡ್ಡ ವಿಚಾರ; ಮುನಿಜನ: ಋಷಿಗಳ ಗುಂಪು; ಮೌಳಿ: ಶ್ರೇಷ್ಠ; ಮಂಡಿತ: ಶೋಭೆಗೊಂಡ; ಚರಣ: ಪಾದ; ಕಮಲ: ತಾವರೆ; ವಿಶಾಲ: ದೊಡ್ಡ; ಕೃತ: ರಚಿತ; ಅಮೃತ: ಸುಧೆ;

ಪದವಿಂಗಡಣೆ:
ಕೇಳಿದನು +ಜನಮೇಜಯ +ಕ್ಷಿತಿ
ಪಾಲಕನು +ವರ +ಸರ್ಪ+ಯಜ್ಞ
ಸ್ಥೂಲ +ಪಾಪ+ವಿಘಾತಿಗ್+ಓಸುಗವ್+ಈ+ ಮಹಾಕಥೆಯ
ಕೇಳಿದೆನು +ತಾನಲ್ಲಿ+ ಮುನಿಜನ
ಮೌಳಿ +ಮಂಡಿತ +ಚರಣಕಮಲ +ವಿ
ಶಾಲ +ವೇದವ್ಯಾಸ+ಕೃತ +ಭಾರತ +ಕಥಾಮೃತವ

ಅಚ್ಚರಿ:
(೧) ಕೇಳಿದನು, ಕೇಳಿದೆನು – ಪದಗಳ ಬಳಕೆ
(೨) ಗೌರವ ಸೂಚಕ ಪದ – ಮುನಿಜನಮೌಳಿ ಮಂಡಿತ ಚರಣಕಮಲ ವಿಶಾಲ ವೇದವ್ಯಾಸಕೃತ

ಪದ್ಯ ೧: ಯಾವ ಜನರು ಧರ್ಮಜನನ್ನು ನೋಡಲು ಬಂದರು?

ಕೇಳು ಜನಮೇಜಯ ಧರಿತ್ರೀ
ಪಾಲ ಹಿಮಗಿರಿ ತೊಡಗಿ ಸಾಗರ
ವೇಲೆ ಪರಿಯಂತಖಿಳ ನಗರ ಗ್ರಾಮ ಪುರವರದ
ಮೇಲುವರ್ಣಪ್ರಮುಖವಾ ಚಾಂ
ಡಾಲರವಧಿ ಸಮಸ್ತ ಭೂಜನ
ಜಾಲ ಹಸ್ತಿನಪುರಿಗೆ ಬಂದುದು ಕಂಡುದವನಿಪನ (ಗದಾ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಹಿಮಗಿರಿಯಿಂದ ಸಮುದ್ರದವರೆಗಿರುವ ಎಲ್ಲಾ ನಗರಗಲ ಗ್ರಾಮಗಲ ಎಲ್ಲಾ ವರ್ಣಗಳ ಎಲ್ಲಾ ಜನರೂ ಹಸ್ತಿನಾಪುರಕ್ಕೆ ಬಂದು ಯುಧಿಷ್ಠಿರನನ್ನು ಕಂಡು ಕಾಣಿಕೆ ನೀಡಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಹಿಮಗಿರಿ: ಹಿಮಾಲಯ; ತೊಡಗು: ಒದಗು; ಸಾಗರ: ಸಮುದ್ರ; ಪರಿಯಂತ: ವರೆಗೂ; ನಗರ: ಪುರ; ಗ್ರಾಮ: ಹಳ್ಳಿ; ಪುರ: ಊರು; ವರ್ಣ: ಬಣ, ಪಂಗಡ; ಪ್ರಮುಖ: ಮುಖ್ಯ; ಅವಧಿ: ಕಾಲ; ಸಮಸ್ತ: ಎಲ್ಲಾ; ಭೂ: ಭೂಮಿ; ಜನ: ಗುಂಪು; ಜಾಲ: ಗುಂಪು; ಬಂದು: ಆಗಮಿಸು; ಅವನಿಪ: ರಾಜ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಹಿಮಗಿರಿ +ತೊಡಗಿ +ಸಾಗರ
ವೇಲೆ +ಪರಿಯಂತ್+ಅಖಿಳ +ನಗರ +ಗ್ರಾಮ +ಪುರವರದ
ಮೇಲುವರ್ಣನ+ಪ್ರಮುಖವಾ+ ಚಾಂ
ಡಾಲರ್+ಅವಧಿ +ಸಮಸ್ತ+ ಭೂಜನ
ಜಾಲ +ಹಸ್ತಿನಪುರಿಗೆ +ಬಂದುದು +ಕಂಡುದ್+ಅವನಿಪನ

ಅಚ್ಚರಿ:
(೧) ಧರಿತ್ರೀಪಾಲ, ಅವನಿಪ – ಸಮಾನಾರ್ಥಕ ಪದ
(೨) ಭಾರತದ ವಿಸ್ತಾರವನ್ನು ಹೇಳುವ ಪರಿ – ಹಿಮಗಿರಿ ತೊಡಗಿ ಸಾಗರವೇಲೆ ಪರಿಯಂತ

ಪದ್ಯ ೧: ಗಾಂಧಾರಿಯು ಕೃಷ್ಣನಿಗೆ ಯಾರನ್ನು ತೋರಿಸಲು ಕೇಳಿದಳು?

ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣನ ಕರೆದು ನಯದಲಿ
ಲೋಲಲೋಚನೆ ನುಡಿದಳಂತಸ್ತಾಪ ಶಿಖಿ ಜಡಿಯೆ
ಏಳು ತಂದೆ ಮುಕುಂದ ಕದನ
ವ್ಯಾಳವಿಷನಿರ್ದಗ್ಧಧರಣೀ
ಪಾಲವರ್ಗವ ತೋರಿಸೆಂದಳು ತರಳೆ ಕೈಮುಗಿದು (ಗದಾ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಗಾಂಧಾರಿಯು ಕೃಷ್ಣನನ್ನು ಕರೆದು ತನ್ನ ಮನಸ್ಸಿನ ದುಃಖವನ್ನು ಅವನೆದುರು ತೋಡಿಕೊಂಡಳು, ತಂದೆ ಕೃಷ್ಣಾ ಯುದ್ಧ ಸರ್ಪದ ವಿಷದ ಬೆಂಕಿಯಿಂದ ದಹಿಸಿದ ಮೃತರಾಜರನ್ನು ನನಗೆ ತೋರಿಸು ಎಂದು ಕೇಳಿದಳು.

ಅರ್ಥ:
ಧರಿತ್ರೀಪಾಲ: ರಾಜ; ಕರೆದು: ಬರೆಮಾಡು; ನಯ: ಪ್ರೀತಿ; ಲೋಲಲೋಚನೆ: ಅತ್ತಿತ್ತ ಅಲುಗಾಡುವ, ಪ್ರೀತಿ ಕಣ್ಣುಳ್ಳ; ನುಡಿ: ಮಾತಾಡು; ಅಂತಸ್ತಾಪ: ಮನಸ್ಸಿನ ದುಃಖ; ಶಿಖಿ: ಬೆಂಕಿ; ಜಡಿ: ಕೂಗು, ಧ್ವನಿಮಾಡು; ಏಳು: ಮೇಲೇಳು; ತಂದೆ: ಪಿತ; ಕದನ: ಯುದ್ಧ; ವ್ಯಾಳ: ಸರ್ಪ; ವಿಷ: ಗರಲ; ದಗ್ಧ: ದಹಿಸಿದುದು, ಸುಟ್ಟುದು; ಧರಣೀಪಾಲ: ರಾಜ; ವರ್ಗ: ಗುಂಪು; ತೋರಿಸು: ಕಾಣಿಸು; ತರಳೆ: ಹೆಣ್ಣು; ಕೈಮುಗಿದು: ನಮಸ್ಕೈರಿಸು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕೃಷ್ಣನ +ಕರೆದು +ನಯದಲಿ
ಲೋಲಲೋಚನೆ +ನುಡಿದಳ್+ಅಂತಸ್ತಾಪ+ಶಿಖಿ +ಜಡಿಯೆ
ಏಳು +ತಂದೆ +ಮುಕುಂದ +ಕದನ
ವ್ಯಾಳ+ವಿಷ+ನಿರ್ದಗ್ಧ+ಧರಣೀ
ಪಾಲ+ವರ್ಗವ +ತೋರಿಸೆಂದಳು +ತರಳೆ +ಕೈಮುಗಿದು

ಅಚ್ಚರಿ:
(೧) ಲೋಲಲೋಚನೆ, ತರಳೆ; ಧರಿತ್ರೀಪಾಲ, ಧರಣೀಪಾಲ – ಸಮಾನಾರ್ಥಕ ಪದ
(೨) ರೂಪಕದ ಪ್ರಯೋಗ – ಕದನ ವ್ಯಾಳವಿಷನಿರ್ದಗ್ಧಧರಣೀಪಾಲವರ್ಗವ ತೋರಿಸೆಂದಳು ತರಳೆ

ಪದ್ಯ ೭: ಜನಮೇಜಯ ರಾಜನಿಗೆ ಯಾವ ಪ್ರಶ್ನೆ ಕಾಡಿತು?

ಎಲೆಮುನೀಶ್ವರ ಪೂರ್ವದಲಿ ಯದು
ಬಲ ವಿಭಾಗದಲಿವರ ದೆಸೆಯಲಿ
ಹಲಧರನು ಕೃತವರ್ಮನಾ ಪಾಂಡವರಿಗಸುರಾರಿ
ಬಳಿಕ ಸಾತ್ಯಕಿಯೀ ಹಸುಗೆಯ
ಸ್ಖಲಿತವಿದರಲಿ ರಾಮನೀ ಕುರು
ಬಲವ ಬಿಟ್ಟನದೇಕೆನುತ ಜನಮೇಜಯನು ನುಡಿದ (ಗದಾ ಪರ್ವ, ೬ ಸಂಧಿ, ೭ ಪದ್ಯ)

ತಾತ್ಪರ್ಯ:
ಆಗ ಜನಮೇಜಯನು ವೈಶಂಪಾಯನ ಮುನೀಶ್ವರನೇ, ಈ ಹಿಂದೆ ಯಾದವ ಬಲವನ್ನು ಭಾಗಮಾಡಿದಾಗ ಪಾಂಡವರ ಕಡೆಗೆ ಶ್ರೀಕೃಷ್ಣನೂ ಸಾತ್ಯಕಿಯೂ ಬಂದರು. ಕೌರವನ ಕಡೆಗೆ ಬಲರಾಮನೂ, ಕೃತವರ್ಮನೂ ಹೋದರು. ಹೀಗಿದ್ದು ಬಲರಾಮನು ಕೌರವನ ಕಡೆಗೆ ನಿಂತು ಯುದ್ಧವನ್ನು ಮಾಡಲಿಲ್ಲವೇಕೆ ಎಂದು ಕೇಳಿದನು.

ಅರ್ಥ:
ಮುನಿ: ಋಷಿ; ಪೂರ್ವ: ಹಿಂದೆ; ಬಲ: ಸೈನ್ಯ, ಶಕ್ತಿ; ವಿಭಾಗ: ಪಾಲು; ದೆಸೆ: ದಿಕ್ಕು; ಹಲಧರ: ಬಲರಾಮ; ಅಸುರಾರಿ: ಕೃಷ್ಣ; ಬಳಿಕ: ನಂತರ; ಹಸುಗೆ: ವಿಭಾಗ; ಸ್ಖಲಿತ: ಜಾರಿಬಿದ್ದ; ಬಿಡು: ತೊರೆ; ನುಡಿ: ಮಾತಾಡು;

ಪದವಿಂಗಡಣೆ:
ಎಲೆ+ಮುನೀಶ್ವರ+ ಪೂರ್ವದಲಿ +ಯದು
ಬಲ +ವಿಭಾಗದಲ್+ಇವರ +ದೆಸೆಯಲಿ
ಹಲಧರನು +ಕೃತವರ್ಮನ್+ಆ+ ಪಾಂಡವರಿಗ್+ಅಸುರಾರಿ
ಬಳಿಕ +ಸಾತ್ಯಕಿ+ ಈ+ ಹಸುಗೆಯ
ಸ್ಖಲಿತವ್+ಇದರಲಿ +ರಾಮನ್+ಈ+ ಕುರು
ಬಲವ +ಬಿಟ್ಟನದೇಕ್+ಎನುತ +ಜನಮೇಜಯನು +ನುಡಿದ

ಅಚ್ಚರಿ:
(೧) ಕೃಷ್ಣನನ್ನು ಅಸುರಾರಿ, ಬಲರಾಮನನ್ನು ಹಲಧರ, ರಾಮ ಎಂದು ಕರೆದಿರುವುದು

ಪದ್ಯ ೧: ಸಂಜಯನು ಯಾವ ಮೂರು ರಥಗಳನ್ನು ನೋಡಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬರುತ ಕುರುಭೂ
ಪಾಲನರಕೆಯ ಭೀಮನವರಿವರಲ್ಲಲೇ ಎನುತ
ಮೇಲೆ ಹತ್ತಿರ ಬರಬರಲು ಸಮ
ಪಾಳಿಯಲಿ ರಥ ಮೂರರಲಿ ಕೃಪ
ಕೋಲ ಗುರುವಿನ ಮಗನಲಾ ಎನುತಲ್ಲಿಗೈತಂದ (ಗದಾ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಕೃಪಚಾರ್ಯ ಮುಂತಾದವರುಗಳನ್ನು ನೋಡಿ ಇವರು ಭೀಮನ ಕಡೆಯವರಲ್ಲವಲ್ಲ ಎಂದು ಬೆದರುತ್ತಾ ಹತ್ತಿರಕ್ಕೆ ಬಂದು ಮೂರೂ ರಥಗಳು ಒಂದೇ ಗತಿಯಲ್ಲಿ ಬರುವುದನ್ನೂ ಅದರಲ್ಲಿ ಕೃಪ ಅಶ್ವತ್ಥಾಮರಿರುವುದನ್ನು ಕಂಡು ಹತ್ತಿರಕ್ಕೆ ಬಂದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಬರುತ: ಆಗಮಿಸು; ಭೂಪಾಲ: ರಾಜ; ಅರಕೆ: ಕೊರತೆ, ನ್ಯೂನತೆ; ಹತ್ತಿರ: ಸಮೀಪ; ಸಮಪಾಳಿ: ಒಂದೇ ಗತಿ; ರಥ: ಬಂಡಿ; ಕೋಲ: ಬಾಣ; ಗುರು: ಆಚಾರ್ಯ; ಮಗ: ಸುತ; ಐತಂದ: ಬಂದುಸೇರು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಂಜಯ +ಬರುತ +ಕುರು+ಭೂ
ಪಾಲನ್+ಅರಕೆಯ +ಭೀಮನವರಿವರಲ್ಲಲೇ+ ಎನುತ
ಮೇಲೆ +ಹತ್ತಿರ +ಬರಬರಲು +ಸಮ
ಪಾಳಿಯಲಿ +ರಥ +ಮೂರರಲಿ +ಕೃಪ
ಕೋಲ +ಗುರುವಿನ +ಮಗನಲಾ +ಎನುತ್+ಅಲ್ಲಿಗ್+ಐತಂದ

ಅಚ್ಚರಿ:
(೧) ಧರಿತ್ರೀಪಾಲ, ಭೂಪಾಲ – ಸಮಾನಾರ್ಥಕ ಪದ

ಪದ್ಯ ೧: ದುರ್ಯೋಧನನ ಪರಿಸ್ಥಿತಿ ಹೇಗಿತ್ತು?

ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ಹೆಗಲ ಗದೆಯಲಿ
ಕಾಲುನಡೆಯಲಿ ಹಾಯ್ದನೇಕಾಂಗದಲಿ ಕಳನೊಳಗೆ
ಆಳ ಕಾಣೆನು ಛತ್ರ ಚಮರದ
ವೀಳೆಯದ ವಿಸ್ತಾರವಿಭವವ
ಬೀಳುಕೊಟ್ಟನು ನಡೆದನಿಂದ್ರದಿಶಾಭಿಮುಖವಾಗಿ (ಗದಾ ಪರ್ವ, ೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಕೌರವನು ಹೆಗಲಮೇಲೆ ಗದೆಯನ್ನಿಟ್ಟುಕೊಂಡು ಏಕಾಂಗಿಯಾಗಿ ರಣರಂಗದಲ್ಲಿ ಕಾಲು ನಡೆಯಿಂದ ಮುಂದುವರೆದನು. ಯಾವ ಪರಿವಾರದವರೂ ಅವನ ಸುತ್ತ ಕಾಣಲಿಲ್ಲ. ಛತ್ರ, ಚಾಮರ, ವೀಳೆಯ ಮೊದಲಾದ ವೈಭವಗಳಿಂದ ವಂಚಿತನಾಗಿ ಪೂರ್ವ ದಿಕ್ಕಿನ ಕಡೆಗೆ ನಡೆದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಹೆಗಲು: ಭುಜ; ಗದೆ: ಮುದ್ಗರ; ಕಾಲು: ಪಾದ; ನಡೆ: ಚಲಿಸು; ಹಾಯ್ದು: ಚಲಿಸು; ಏಕಾಂಗ: ಒಬ್ಬನೆ; ಕಳ: ಯುದ್ಧಭೂಮಿ; ಆಳ: ಸೇವಕ; ಕಾಣು: ತೋರು; ಛತ್ರ: ಕೊಡೆ; ಚಮರ: ಚಾಮರ; ವೀಳೆ: ತಾಂಬುಲ; ವಿಸ್ತಾರ: ಅಗಲ; ವಿಭವ: ಸಿರಿ, ಸಂಪತ್ತು; ಬೀಳುಕೊಡು: ತೆರಳು; ನಡೆ: ಚಲಿಸು; ಇಂದ್ರದಿಶ: ಪೂರ್ವದಿಕ್ಕು; ಅಭಿಮುಖ: ಎದುರು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕುರುಪತಿ +ಹೆಗಲ +ಗದೆಯಲಿ
ಕಾಲುನಡೆಯಲಿ +ಹಾಯ್ದನ್+ಏಕಾಂಗದಲಿ +ಕಳನೊಳಗೆ
ಆಳ +ಕಾಣೆನು +ಛತ್ರ +ಚಮರದ
ವೀಳೆಯದ +ವಿಸ್ತಾರ+ವಿಭವವ
ಬೀಳುಕೊಟ್ಟನು+ ನಡೆದನ್+ಇಂದ್ರ+ದಿಶ+ಅಭಿಮುಖವಾಗಿ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಕುರುಪತಿ ಹೆಗಲ ಗದೆಯಲಿ ಕಾಲುನಡೆಯಲಿ ಹಾಯ್ದನೇಕಾಂಗದಲಿ ಕಳನೊಳಗೆ
(೨) ವೈಭವ ವಿಲ್ಲದ ಸ್ಥಿತಿ – ವಿಸ್ತಾರವಿಭವವ ಬೀಳುಕೊಟ್ಟನು

ಪದ್ಯ ೪೦: ಕೃಷ್ಣನ ಹಿರಿಮೆ ಎಂತಹುದು?

ಆವನೊಬ್ಬನ ಮಧುರವಚನ ಕೃ
ಪಾವಲೋಕನದಿಂದ ಶತ ಜ
ನ್ಮಾವಳಿಯ ಘನ ದುರಿತವಹ್ನಿಯ ಝಳಕೆ ಕಡೆಯಹುದು
ದೇವರೀತನ ಲಲಿತವಚನಸು
ಧಾವಸೇಚನದಿಂದ ಭಟರುರೆ
ಜೀವಿಸುವುದೇನರಿದೆ ಕೇಳ್ ಜನಮೇಜಯಕ್ಷಿತಿಪ (ದ್ರೋಣ ಪರ್ವ, ೧೫ ಸಂಧಿ, ೪೦ ಪದ್ಯ)

ತಾತ್ಪರ್ಯ:
ಯಾರ ಮಧುರ ವಚನ, ಕೃಪಾದೃಷ್ಟಿಗಳಿಂದ ಅನೇಕ ಜನ್ಮಗಳಲ್ಲಿ ಗಳಿಸಿದ ಪಾಪದ ಭಯ ನಿವಾರಿತವಾಗುವುದೋ, ಅಮ್ತಹ ದೇವನ ಲಲಿತ ವಚನ ಸುಧೆಯ ಸಿಂಚನದಿಂದ ಯೋಧರು ಪುನರುಜ್ಜೀವಿಸುವುದೇನು ಆಶ್ಚರ್ಯ.

ಅರ್ಥ:
ಮಧುರ: ಸಿಹಿ; ವಚನ: ವಾಣಿ, ನುಡಿ; ಅವಲೋಕನ: ನೋಟ; ಕೃಪ: ದಯೆ; ಶತ: ನೂರು; ಜನ್ಮ: ಹುಟ್ಟು ಸಾವುಗಳ ಚಕ್ರ; ಆವಳಿ: ಗುಂಪು; ಘನ: ಶ್ರೇಷ್ಠ; ದುರಿತ: ಪಾಪ, ಪಾತಕ; ವಹ್ನಿ: ಬೆಂಕಿ; ಝಳ: ಪ್ರಕಾಶ; ಕಡೆ: ಕೊನೆ; ದೇವ: ಭಗವಮ್ತ; ಲಲಿತ: ಚೆಲುವು; ವಚನ: ಮಾತು; ಸುಧಾ: ಅಮೃತ; ಸೇಚನ: ಸಿಂಪಡಿಸು; ಭಟ: ಸೈನಿಅ; ಉರೆ: ಅತಿಶಯವಾಗಿ; ಅರಿ: ತಿಳಿ; ಕ್ಷಿತಿಪ: ರಾಜ;

ಪದವಿಂಗಡಣೆ:
ಆವನ್+ಒಬ್ಬನ +ಮಧುರವಚನ +ಕೃಪ
ಅವಲೋಕನದಿಂದ +ಶತ +ಜ
ನ್ಮಾವಳಿಯ +ಘನ +ದುರಿತ+ವಹ್ನಿಯ +ಝಳಕೆ +ಕಡೆಯಹುದು
ದೇವರ್+ಈತನ +ಲಲಿತ+ವಚನ+ಸು
ಧಾವ+ಸೇಚನದಿಂದ +ಭಟರ್+ಉರೆ
ಜೀವಿಸುವುದೇನ್+ಅರಿದೆ +ಕೇಳ್ +ಜನಮೇಜಯ+ಕ್ಷಿತಿಪ

ಅಚ್ಚರಿ:
(೧) ಕೃಷ್ಣನ ಹಿರಿಮೆ – ಆವನೊಬ್ಬನ ಮಧುರವಚನ ಕೃಪಾವಲೋಕನದಿಂದ ಶತ ಜನ್ಮಾವಳಿಯ ಘನ ದುರಿತವಹ್ನಿಯ ಝಳಕೆ ಕಡೆಯಹುದು

ಪದ್ಯ ೧: ದ್ರೋಣನು ಯಾರನ್ನು ಹುಡುಕುತ್ತಾ ಬಂದನು?

ಕೇಳು ಜನಮೇಜಯ ಧರಿತ್ರೀ
ಪಾಲ ಕಡುಗೋಪದಲಿ ಕಳಶಜ
ನಾಳ ಮೇಳೈಸಿದನು ನಿಜಮೋಹರವ ಹಿಂದಿಕ್ಕಿ
ಕಾಳೆಗದೊಳನಿಲಜನನರಸುತ
ಲೋಲುಪತಿ ಮಿಗೆ ಬರುತ ಭೀಮನ
ಕೋಲ ಕೋಳಾಹಳವನೀಕ್ಷಿಸುತಲ್ಲಿಗೈ ತಂದ (ದ್ರೋಣ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ದ್ರೋಣನು ಕಡುಕೋಪದಿಂದ ಸೈನಿಕರನ್ನು ಸೇರಿಸಿ, ಅಗ್ರಭಾಗದಲ್ಲಿ ತಾನು ಹೊರಟು ಭೀಮನನ್ನು ಹುಡುಕುತ್ತಾ ಬರುತ್ತಿರಲು, ಭ್ಮನ ಕಾಳಗದ ಬಾಣಗಳ ಕೋಲಾಹಲವನ್ನು ಕೇಳಿ ತಾ

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಪಾಲ: ಪೋಷಿಸುವ; ಕಡು: ಬಹಳ, ತುಂಬ; ಕೋಪ: ಖತಿ; ಕಳಶಜ: ದ್ರೋಣ; ಆಳ: ಗಾಢತೆ; ಮೇಳೈಸು: ಸೇರು, ಜೊತೆಯಾಗು; ಮೋಹರ: ಯುದ್ಧ; ಹಿಂದೆ: ಹಿಂಭಾಗ; ಕಾಳೆಗ: ಯುದ್ಧ; ಅನಿಲಜ: ವಾಯು ಪುತ್ರ (ಭೀಮ); ಅರಸು: ಹುಡುಕು; ಮಿಗೆ: ಅಧಿಕ; ಬರುತ: ಆಗಮಿಸು; ಕೋಲು: ಬಾಣ; ಕೋಳಾಹಲ: ಗೊಂದಲ; ಈಕ್ಷಿಸು: ನೋಡು; ತಂದ: ಬಂದ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕಡು+ಕೋಪದಲಿ +ಕಳಶಜನ್
ಆಳ +ಮೇಳೈಸಿದನು +ನಿಜ+ಮೋಹರವ +ಹಿಂದಿಕ್ಕಿ
ಕಾಳೆಗದೊಳ್+ಅನಿಲಜನನ್+ಅರಸುತ
ಲೋಲುಪತಿ +ಮಿಗೆ +ಬರುತ +ಭೀಮನ
ಕೋಲ +ಕೋಳಾಹಳವನ್+ಈಕ್ಷಿಸುತ್+ಅಲ್ಲಿಗೈ +ತಂದ

ಅಚ್ಚರಿ:
(೧) ಕಳಶಜ, ಅನಿಲಜ – ದ್ರೋಣ ಭೀಮರನ್ನು ಕರೆದ ಪರಿ

ಪದ್ಯ ೧: ಅರ್ಜುನನು ಆಯುಧಶಾಲೆಯಲ್ಲಿ ಯಾವ ಆಯುಧಗಳನ್ನು ತೆಗೆಸಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಫಲುಗುಣ ಹೊಕ್ಕನಾಯುಧ
ಶಾಲೆಯನು ತೆಗೆಸಿದನು ಧನು ಮೊದಲಾದ ಕೈದುಗಳ
ಸಾಲರಿದು ನಿಲಿಸಿದನು ನಿಶಿತ ಶ
ರಾಳಿ ಚಾಪ ಕೃಪಾಣ ಪರಶು ತ್ರಿ
ಶೂಲ ಮುದ್ಗರ ಚಕ್ರ ಸೆಲ್ಲೆಹ ಶಕುತಿ ತೋಮರವ (ದ್ರೋಣ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನು ಆಯುಧಶಾಲೆಯನ್ನು ಹೊಕ್ಕು, ಬಿಲ್ಲು ಮೊದಲಾದ ಎಲ್ಲಾ ಆಯುಧಗಳನ್ನು ತೆಗೆಸಿದನು. ಚೂಪಾದ ಬಾಣಗಳು, ಬಿಲ್ಲು, ಗಂಡುಗೊಡಲಿ, ತ್ರಿಶೂಲ, ಕತ್ತಿ, ಮುದ್ಗರ, ಚಕ್ರ, ಶಲ್ಯ, ಶಕ್ತಿ, ತೋಮರಗಳನ್ನು ವ್ಯವಸ್ಥಿತವಾಗಿ ನಿಲ್ಲಿಸಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಹೊಕ್ಕು: ಸೇರು; ಆಯುಧ: ಶಸ್ತ್ರ; ಶಾಲೆ: ಪಾಠಶಾಲೆ, ಆಲಯ; ತೆಗೆಸು: ಹೊರತರು; ಧನು: ಬಿಲ್ಲು; ಕೈದು: ಆಯುಧ, ಶಸ್ತ್ರ; ನಿಶಿತ: ಹರಿತವಾದುದು; ಶರಾಳಿ: ಬಾಣಗಳ ಗುಂಪು; ಚಾಪ: ಬಿಲ್ಲು; ಕೃಪಾಣ: ಕತ್ತಿ, ಖಡ್ಗ; ಪರಶು: ಕೊಡಲಿ, ಕುಠಾರ; ತ್ರಿಶೂಲ: ಮೂರು ಮೊನೆಗಳುಳ್ಳ ಆಯುಧ, ಪಿನಾಕ; ಮುದ್ಗರ: ಗದೆ; ಶಕುತಿ: ಶಕ್ತಿ, ಬಲ; ತೋಮರ: ಈಟಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಫಲುಗುಣ +ಹೊಕ್ಕನ್+ಆಯುಧ
ಶಾಲೆಯನು +ತೆಗೆಸಿದನು +ಧನು+ ಮೊದಲಾದ +ಕೈದುಗಳ
ಸಾಲರಿದು +ನಿಲಿಸಿದನು +ನಿಶಿತ +ಶ
ರಾಳಿ +ಚಾಪ +ಕೃಪಾಣ +ಪರಶು +ತ್ರಿ
ಶೂಲ +ಮುದ್ಗರ+ ಚಕ್ರ +ಸೆಲ್ಲೆಹ +ಶಕುತಿ +ತೋಮರವ

ಅಚ್ಚರಿ:
(೧) ಆಯುಧಗಳ ಹೆಸರು – ಶರಾಳಿ, ಚಾಪ, ಕೃಪಾಣ, ಪರಶು, ತ್ರಿಶೂಲ, ಮುದ್ಗರ, ಚಕ್ರ, ತೋಮರ