ಪದ್ಯ ೪೬: ಕೊಪ್ಪರಿಗೆಯನ್ನು ಎಷ್ಟು ದಿನ ರಕ್ಷಿಸಲು ವ್ಯಾಸರು ಹೇಳಿದರು?

ಚಿಂತೆಯಿಲ್ಲದೆ ನೂರುದಿನ ಪರಿ
ಯಂತ ರಕ್ಷಿಸು ಬಳಿಕ ನಿನ್ನಯ
ಸಂತತಿಯ ಸಾಮರ್ಥ್ಯವನು ಗಾಂಧಾರಿ ನೋಡೆಂದು
ಕಂತುಪಿತ ಸನ್ನಿಭನು ಸತಿಯನು
ಸಂತವಿಸಿ ಮರಳಿದನು ಧರಣೀ
ಕಾಂತ ಕೇಳೈ ಬನದೊಳಿತ್ತಲು ಭೀಮನುದ್ಭವವ (ಆದಿ ಪರ್ವ, ೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅಯ್ಯೋ ಮರುಳೇ, ಗಾಂಧಾರಿ, ನೀನು ಚಿಂತೆ ಮಾಡದೇ ನೂರು ದಿನಗಳ ಕಾಲ ಈ ಕೊಪ್ಪರಿಗಳನ್ನು ರಕ್ಷಿಸು ಆಮೇಲೆ ನಿನ್ನ ಮಕ್ಕಳ ಸಾಮರ್ಥ್ಯವನ್ನು ನೋಡು ಎಂದು ಹೇಳಿ ವಿಷ್ಣು ಸದೃಶನಾದ ವೇದವ್ಯಾಸರು ಗಾಂಧಾರಿಯನ್ನು ಸಂತೈಸಿ ಹಿಂದಿರುಗಿ ಹೋದನು. ಇತ್ತ ರಾಜ ಜನಮೇಜಯ ಕಾಡಿನಲ್ಲಿ ಭೀಮನ ಆಗಮನವನ್ನು ಕೇಳು ಎಂದು ವೈಶಂಪಾಯನರು ಕಥೆಯನ್ನು ಮುಂದುವರೆಸಿದರು.

ಅರ್ಥ:
ಚಿಂತೆ: ಯೋಚನೆ; ನೂರು: ಶತ; ದಿನ: ವಾರ; ಪರಿಯಂತ: ಅಲ್ಲಿಯವರೆಗೆ; ರಕ್ಷಿಸು: ಕಾಪಾಡು; ಬಳಿಕ: ನಂತರ; ಸಂತತಿ: ವಂಶ; ಸಾಮರ್ಥ್ಯ: ಶಕ್ತಿ; ನೋಡು: ವೀಕ್ಷಿಸು; ಕಂತುಪಿತ: ವಿಷ್ಣು; ಸನ್ನಿಭ: ಸದೃಶ; ಸತಿ: ಹೆಣ್ಣು; ಸಂತವಿಸು: ಸಮಾಧಾನ ಪಡಿಸು; ಮರಳು: ಹಿಂದಿರುಗು; ಧರಣೀಕಾಂತ: ರಾಜ; ಕೇಳು: ಆಲಿಸು; ಬನ: ಕಾಡು; ಉದ್ಭವ: ಹುಟ್ಟು;

ಪದವಿಂಗಡಣೆ:
ಚಿಂತೆಯಿಲ್ಲದೆ+ ನೂರುದಿನ+ ಪರಿ
ಯಂತ +ರಕ್ಷಿಸು +ಬಳಿಕ +ನಿನ್ನಯ
ಸಂತತಿಯ +ಸಾಮರ್ಥ್ಯವನು +ಗಾಂಧಾರಿ +ನೋಡೆಂದು
ಕಂತುಪಿತ +ಸನ್ನಿಭನು +ಸತಿಯನು
ಸಂತವಿಸಿ +ಮರಳಿದನು +ಧರಣೀ
ಕಾಂತ +ಕೇಳೈ +ಬನದೊಳ್+ಇತ್ತಲು +ಭೀಮನ್+ಉದ್ಭವವ

ಅಚ್ಚರಿ:
(೧) ವ್ಯಾಸರನ್ನು ಕಂತುಪಿತ ಸನ್ನಿಭ ಎಂದು ಕರೆದಿರುವುದು
(೨) ಜನಮೇಜಯನನ್ನು ಧರಣೀಕಾಂತ ಎಂದು ಕರೆದಿರುವುದು

ಪದ್ಯ ೩: ಯೋಜನಗಂಧಿಯು ಯಾರನ್ನು ಕರೆದಳು?

ಮರುಗಿ ಯೋಜನಗಂಧಿ ಚಿಂತೆಯ
ಸೆರೆಗೆ ಸಿಲುಕಿದಳೊಂದು ರಾತ್ರಿಯೊ
ಳರಿದು ನೆನೆದಳು ಪೂರ್ವಸೂಚಿತ ಪುತ್ರ ಭಾಷಿತವ
ಮುರಿದ ಭರತಾನ್ವಯದ ಬೆಸುಗೆಯ
ತೆರನು ತೋರಿತೆ ಪುಣ್ಯವೆನುತೆ
ಚ್ಚರಿತು ನುಡಿದಳು ಮಗನೆ ವೇದವ್ಯಾಸ ಬಹುದೆಂದು (ಆದಿ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಯೋಜನಗಂಧಿಯು ಚಿಂತೆಯ ಬಂದಿಯಾಗಿ ದುಃಖಿಸಿದಳು, ಒಂದಾನೊಂದು ರಾತ್ರಿ ತನ್ನ ಮಗ ವೇದವ್ಯಾಸರು ಕೊಟ್ಟ ಭಾಷೆಯು ನೆನಪಿಗೆ ಬಂತು. ಮುರಿಯುವ ಹಂತದಲ್ಲಿದ್ದ ಭರತವಮ್ಶವನ್ನು ಬೆಸೆಯುವ ಮಾರ್ಗವು ನನಗೆ ತಿಳಿಯಿತು. ಇದು ನನ್ನ ಪುಣ್ಯವೆಂದು ಯೊಚಿಸಿ ಮಗನೇ ವೇದವ್ಯಾಸ ಬಾ ಎಂದಳು.

ಅರ್ಥ:
ಮರುಗು: ತಳಮಳ, ಸಂಕಟ; ಚಿಂತೆ: ಯೋಚನೆ; ಸೆರೆ: ಬಂಧನ; ಸಿಲುಕು: ಸೆರೆಯಾದ ವಸ್ತು, ಬಂಧನಕ್ಕೊಳಗಾದುದು; ರಾತ್ರಿ: ಇರುಳು; ಅರಿ: ತಿಳಿ; ನೆನೆ: ಜ್ಞಾಪಿಸು; ಪೂರ್ವ: ಹಿಂದೆ; ಸೂಚಿತ: ತಿಳಿಸಿದ; ಪುತ್ರ: ಮಗ; ಭಾಷಿತ: ನುಡಿ; ಮುರಿ: ಸೀಳು; ಅನ್ವಯ: ಕುಲ; ಬೆಸುಗೆ: ಒಂದಾಗು; ಪುಣ್ಯ: ಸದಾಚಾರ; ಎಚ್ಚರ: ಗಮನ; ನುಡಿ: ಮಾತು; ಮಗ: ಸುತ; ಬಹುದು: ಬರಬೇಕು, ಆಗಮಿಸು;

ಪದವಿಂಗಡಣೆ:
ಮರುಗಿ +ಯೋಜನಗಂಧಿ +ಚಿಂತೆಯ
ಸೆರೆಗೆ +ಸಿಲುಕಿದಳ್+ಒಂದು +ರಾತ್ರಿಯೊಳ್
ಅರಿದು +ನೆನೆದಳು +ಪೂರ್ವಸೂಚಿತ +ಪುತ್ರ+ ಭಾಷಿತವ
ಮುರಿದ +ಭರತ+ಅನ್ವಯದ +ಬೆಸುಗೆಯ
ತೆರನು +ತೋರಿತೆ +ಪುಣ್ಯವೆನುತ್
ಎಚ್ಚರಿತು +ನುಡಿದಳು +ಮಗನೆ +ವೇದವ್ಯಾಸ +ಬಹುದೆಂದು

ಅಚ್ಚರಿ:
(೧) ರೂಪಕದ ಪ್ರಯೋಗ – ಯೋಜನಗಂಧಿ ಚಿಂತೆಯ ಸೆರೆಗೆ ಸಿಲುಕಿದಳ್

ಪದ್ಯ ೪೮: ಕರ್ಣಾದಿಗಳು ತಮ್ಮ ಪ್ರಾಣವನ್ನು ಯಾರಿಗೆ ಮಾರಿದ್ದರು?

ಮುನಿದು ಮಾಡುವುದೇನು ಕೃಷ್ಣನ
ನೆನಹು ಘನ ನಮ್ಮಸುವ ನಾವೀ
ಜನಪತಿಗೆ ಮಾರಿದೆವು ನಮಗೀ ಚಿಂತೆಯೇಕೆನುತ
ಇನಸುತಾದಿಗಳಿದ್ದರಿತ್ತಲು
ಮನದ ಹರುಷದ ಹರಹಿನಲಿ ಪಾ
ರ್ಥನ ರಥವ ತಿರುಹಿದನು ಗದುಗಿನ ವೀರನಾರಯಣ (ದ್ರೋಣ ಪರ್ವ, ೧೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಾವು ಸಿಟ್ಟಾಗಿ ಏನುಮಾಡಲು ಸಾಧ್ಯ. ಕೃಷ್ಣನ ಸಂಕಲ್ಪವು ಅಭೇದ್ಯ, ನಾವೋ ನಮ್ಮ ಪ್ರಾಣಗಳನ್ನು ಕೌರವನಿಗೆ ಮಾರಿಕೊಂಡಿದ್ದೇವೆ. ಚಿಂತಿಸಿ ಏನು ಪ್ರಯೋಜನ ಎಂದು ಕರ್ಣನೇ ಮೊದಲಾದವರು ವಿಷಾದದ ಕಡಲಿನಲ್ಲಿದ್ದರು. ಇತ್ತ ಗದುಗಿನ ವೀರನಾರಯಣನು ಅರ್ಜುನನ ರಥವನ್ನು ಹಿಂದಿರುಗಿಸಿದನು.

ಅರ್ಥ:
ಮುನಿ: ಕೋಪ, ಸಿಟ್ಟು; ನೆನಹು: ನೆನಪು; ಘನ: ದೊಡ್ಡ; ಅಸು: ಪ್ರಾಣ; ಜನಪ: ರಾಜ; ಮಾರು: ವಿಕ್ರಯಿಸು; ಚಿಂತೆ: ಯೋಚನೆ; ಇನ: ಸೂರ್ಯ; ಸುತ: ಮಗ; ಆದಿ: ಮೊದಲಾದ; ಮನ: ಮನಸ್ಸು; ಹರುಷ: ಸಂತಸ; ಹರಹು: ವಿಸ್ತಾರ, ವೈಶಾಲ್ಯ; ತಿರುಹು: ಹಿಂದಿರುಗಿಸು;

ಪದವಿಂಗಡಣೆ:
ಮುನಿದು +ಮಾಡುವುದೇನು +ಕೃಷ್ಣನ
ನೆನಹು +ಘನ +ನಮ್ಮ್+ಅಸುವ +ನಾವ್+ಈ+
ಜನಪತಿಗೆ +ಮಾರಿದೆವು +ನಮಗೀ +ಚಿಂತೆ+ಏಕೆನುತ
ಇನಸುತಾದಿಗಳಿದ್ದರ್+ಇತ್ತಲು
ಮನದ +ಹರುಷದ +ಹರಹಿನಲಿ+ ಪಾ
ರ್ಥನ +ರಥವ +ತಿರುಹಿದನು+ ಗದುಗಿನ+ ವೀರನಾರಯಣ

ಅಚ್ಚರಿ:
(೧) ಕೃಷ್ಣನ ಸಂತಸ ಮತ್ತು ಕಾರ್ಯ – ಮನದ ಹರುಷದ ಹರಹಿನಲಿ ಪಾರ್ಥನ ರಥವ ತಿರುಹಿದನು ಗದುಗಿನ ವೀರನಾರಯಣ

ಪದ್ಯ ೩೪: ವ್ಯೂಹವನ್ನು ಭೇದಿಸಲು ಯಾರು ಮುಂದಾದರು?

ಹೊಗಲು ಬಲ್ಲನು ಹೊಕ್ಕವೊಲು ಹೆರ
ದೆಗೆಯಲರಿಯನು ವೀರ ಪಾರ್ಥನ
ಮಗನು ಮತ್ತಯ್ದನೆಯ ಸುಭಟರ ಕಾಣೆ ನಾನೆನುತ
ಅಗಿವ ಚಿಂತೆಯೊಳರಸ ಕದನದ
ದುಗುಡ ಭಾರದಲಿರಲು ಮುಂಗೈ
ನಿಗಳವನು ತಿರುಹುತ್ತ ನಸುನಗುತೆದ್ದನಭಿಮನ್ಯು (ದ್ರೋಣ ಪರ್ವ, ೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಈ ವ್ಯೂಹವನ್ನು ಹೊಗಬಲ್ಲನು, ಹೊಕ್ಕಮೇಲೆ ಹಿಂದಿರುಗಲು ಅವನಿಗೆ ತಿಳಿಯದು. ಐದನೆಯ ಇನ್ನೊಬ್ಬನನ್ನು ನಾನು ಕಾಣೆ ಎಂದು ಅರಸನು ಯುದ್ಧದ ದುಃಖದ ಭಾರದಲ್ಲಿರಲು, ಅಭಿಮನ್ಯುವು ತನ್ನ ಮುಂಗೈಯ ಕಡಗವನ್ನು ತಿರುಗಿಸುತ್ತಾ ಮೇಲೆದ್ದನು.

ಅರ್ಥ:
ಹೊಗು: ತೆರಳು; ಬಲ್ಲ: ತಿಳಿದ; ಹೊಕ್ಕು: ಸೇರು; ಹೆರದೆಗೆ: ಹಿಂದಿರುಗು; ಅರಿ: ತಿಳಿ; ವೀರ: ಪರಾಕ್ರಮಿ; ಮಗ: ಪುತ್ರ; ಸುಭಟ: ಪರಾಕ್ರಮಿ; ಕಾಣು: ತೋರು; ಅಗಿ: ಆವರಿಸು, ಜಗಿ; ಚಿಂತೆ: ಯೋಚನೆ; ಅರಸ: ರಾಜ; ಕದನ: ಯುದ್ಧ; ದುಗುಡ: ದುಃಖ; ಭಾರ: ಹೊರೆ, ತೂಕ; ಮುಂಗೈ: ಹಸ್ತ; ನಿಗಳ: ತೋಡ, ಕೈಯಲ್ಲಿ ಧರಿಸುವ ಒಂದು ಬಗೆಯ ಆಭರಣ; ತಿರುಹು: ತಿರುಗಿಸು; ನಸುನಗು: ಹರ್ಷ, ಸಂತೋಷ; ಎದ್ದು: ಮೇಲೇಳು;

ಪದವಿಂಗಡಣೆ:
ಹೊಗಲು +ಬಲ್ಲನು +ಹೊಕ್ಕವೊಲು+ ಹೆರ
ದೆಗೆಯಲ್+ಅರಿಯನು +ವೀರ +ಪಾರ್ಥನ
ಮಗನು +ಮತ್ತ್+ಐದನೆಯ +ಸುಭಟರ +ಕಾಣೆ +ನಾನೆನುತ
ಅಗಿವ +ಚಿಂತೆಯೊಳ್+ ಅರಸ+ ಕದನದ
ದುಗುಡ +ಭಾರದಲಿರಲು +ಮುಂಗೈ
ನಿಗಳವನು +ತಿರುಹುತ್ತ+ ನಸುನಗುತ್+ಎದ್ದನ್+ಅಭಿಮನ್ಯು

ಅಚ್ಚರಿ:
(೧) ಬಲ್ಲನು, ಅರಿಯನು – ವಿರುದ್ಧ ಪದಗಳು
(೨) ಅಭಿಮನ್ಯುವಿನ ಠೀವಿ – ಮುಂಗೈ ನಿಗಳವನು ತಿರುಹುತ್ತ ನಸುನಗುತೆದ್ದನಭಿಮನ್ಯು
(೩) ಅತೀವ ಯೋಚನೆಯನ್ನು ಚಿತ್ರಿಸುವ ಪರಿ – ಅಗಿವ ಚಿಂತೆಯೊಳರಸ ಕದನದದುಗುಡ ಭಾರದಲಿರಲು

ಪದ್ಯ ೨೩: ವಿರಾಟನೇಕೆ ಅವಿವೇಕನಾದ?

ಈಕೆ ಯಾರಿವರಾರೊ ನಾಟ್ಯ
ವ್ಯಾಕರಣ ಪಂಡಿತ ಬೃಹನ್ನಳೆ
ಯೀಕೆಗೇನಹನರಿಯಬಾರದು ಕಾಲು ಕೀಲುಗಳ
ಏಕೆ ನಮಗೀ ಚಿಂತೆಯೆನುತವಿ
ವೇಕಿಯಿರೆ ಬಳಿಕಿತ್ತ ಪುರದೊಳು
ನೂಕು ನೂಕಾಯಿತ್ತು ನೋಡುವ ನೆರವಿಯುತ್ತರನ (ವಿರಾಟ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ವಿರಾಟನು ಇವಳ ಮಾತುಗಳನ್ನು ಕೇಳಿ, ಇವಳು ಯಾರು, ಸನ್ಯಾಸಿ ಯಾರು, ನಾಟ್ಯ ವಿಶಾರದನಾದ ಬೃಹನ್ನಳೆ ಯಾರು, ಇವಳಿಗೆ ಬೃಹನ್ನಳೆ, ಸನ್ಯಾಸಿ ಏನಾಗಬೇಕು ಇದರ ಆಳ ಅಡಿಯನ್ನು ತಿಳಿಯುವುದಕ್ಕೆ ವಿರಾಟನು ಚಿಂತಿಸಲೇಯಿಲ್ಲ, ನಮಗೇಕೆ ಅವರ ಚಿಂತೆೆ ಎನ್ನುತ್ತಾ ಅವಿವೇಕತನವನ್ನು ಪ್ರದರ್ಶಿಸಿದ. ಇತ್ತ ಮತ್ಸ್ಯಪುರದಲ್ಲಿ ಉತ್ತರನನ್ನು ನೋಡಲು ಜನರ ನುಕುನುಗ್ಗಲು ಆರಂಭವಾಯಿತು.

ಅರ್ಥ:
ನಾಟ್ಯ: ನರ್ತನ; ವ್ಯಾಕರಣ: ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ; ಪಂಡಿತ: ವಿದ್ವಾಂಸ; ಅರಿ: ತಿಳಿ; ಕಾಲು ಕೀಲು: ಅಡಿ, ಆಳ; ಚಿಂತೆ: ಯೋಚನೆ; ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಬಳಿಕ: ನಂತಾ; ಪುರ: ಊರು; ನೂಕು: ತಳ್ಳು; ನೋಡು: ವೀಕ್ಷಿಸು; ನೆರ: ಒತ್ತಾಸೆ, ಸಹಾಯ, ಬೆಂಬಲ;

ಪದವಿಂಗಡಣೆ:
ಈಕೆ +ಯಾರ್+ಇವರಾರೊ+ ನಾಟ್ಯ
ವ್ಯಾಕರಣ+ ಪಂಡಿತ +ಬೃಹನ್ನಳೆ
ಯೀಕೆಗ್+ಏನಹನ್+ಅರಿಯಬಾರದು+ ಕಾಲು+ ಕೀಲುಗಳ
ಏಕೆ +ನಮಗೀ +ಚಿಂತೆಯೆನುವ್+ಅವಿ
ವೇಕಿಯಿರೆ +ಬಳಿಕಿತ್ತ+ ಪುರದೊಳು
ನೂಕು +ನೂಕಾಯಿತ್ತು +ನೋಡುವ +ನೆರವಿಯುತ್ತರನ

ಅಚ್ಚರಿ:
(೧)ನ ಕಾರದ ಸಾಲು ಪದ – ನೂಕು ನೂಕಾಯಿತ್ತು ನೋಡುವ ನೆರವಿಯುತ್ತರನ
(೨) ಬೃಹನ್ನಳೆಯನ್ನು ಕರೆಯುವ ಪರಿ – ನಾಟ್ಯ ವ್ಯಾಕರಣ ಪಂಡಿತ

ಪದ್ಯ ೧೦೪: ಜನರು ಯಾವ ರೀತಿ ಮಾತನಾಡುತ್ತಿದ್ದರು?

ಈಕೆಗೋಸುಗವಳಿದನಕಟವಿ
ವೇಕಿ ಕೀಚಕನೆಂದು ಕೆಲಬರಿ
ದೇಕೆ ನಮಗೀ ಚಿಂತೆ ಶಿವ ಶಿವಯೆಂದು ಕೆಲಕೆಲರು
ನೂಕಿ ಕವಿದುದು ಮಂದಿ ಮಧ್ಯದೊ
ಳೀಕೆ ಮೆಲ್ಲನೆ ಬರುತಲಾ ಲೋ
ಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ (ವಿರಾಟ ಪರ್ವ, ೩ ಸಂಧಿ, ೧೦೪ ಪದ್ಯ)

ತಾತ್ಪರ್ಯ:
ಅವಿವೇಕಿಯಾದ ಕೀಚಕನು ಇವಳಿಗಾಗಿ ಸತ್ತ ಎಂದು ಕೆಲವರೆಂದರು. ನಮಗೇಕಿದ್ದೀತು ಇದರ ಚಿಂತೆ ಶಿವ ಶಿವಾ ಎಂದು ಕೆಲವರೆಂದರು. ಕುತೂಹಲದಿಂದ ಜನರು ಬೀದಿಯ ಇಕ್ಕೆಲದಲ್ಲೂ ನಿಂತು ನೋಡುತ್ತಿರಲು ದ್ರೌಪದಿಯು ನಿಧಾನವಾಗಿ ನಡೆಯುತ್ತಾ ಬಂದು ಬಾಣಸಿನ ಮನೆಯ ಬಾಗಿಲಲ್ಲಿ ಲೋಕೈಕವೀರನಾದ ಭೀಮನನ್ನು ನೋಡಿದಳು.

ಅರ್ಥ:
ಅಳಿ: ನಾಶ, ಸಾವು; ಅಕಟ: ಅಯ್ಯೋ; ಅವಿವೇಕಿ: ವಿವೇಚನೆ ಇಲ್ಲದೆ; ಕೆಲಬರು: ಸ್ವಲ್ಪ ಜನ; ಚಿಂತೆ: ಕಳವಳ, ಯೋಚನೆ; ನೂಕು: ತಳ್ಳು; ಕವಿದು: ಆವರಿಸು; ಮಂದಿ: ಜನ; ಮಧ್ಯ: ನಡುವೆ; ಮೆಲ್ಲನೆ: ನಿಧಾನ; ಬರುತ: ಆಗಮನ; ಲೋಕ: ಜಗತ್ತು; ವೀರ: ಶೂರ; ಬಾಣಸಿಗ: ಅಡುಗೆ; ಬಾಗಿಲು: ಕದನ;

ಪದವಿಂಗಡಣೆ:
ಈಕೆಗೋಸುಗವ್+ಅಳಿದನ್+ಅಕಟ+ಅವಿ
ವೇಕಿ +ಕೀಚಕನೆಂದು+ ಕೆಲಬರ್
ಇದೇಕೆ +ನಮಗೀ +ಚಿಂತೆ +ಶಿವ +ಶಿವಯೆಂದು +ಕೆಲಕೆಲರು
ನೂಕಿ +ಕವಿದುದು +ಮಂದಿ +ಮಧ್ಯದೊಳ್
ಈಕೆ +ಮೆಲ್ಲನೆ +ಬರುತಲಾ +ಲೋ
ಕೈಕ +ವೀರನ +ಕಂಡಳಾ +ಬಾಣಸಿನ +ಬಾಗಿಲಲಿ

ಅಚ್ಚರಿ:
(೧) ಭೀಮನನ್ನು ಹೊಗಳುವ ಪರಿ – ಲೋಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ

ಪದ್ಯ ೨೦: ಋಷಿಗಳ ನಡತೆ ಹೇಗಿರಬೇಕು?

ಶಾಂತಿಯೇ ಮನೆ ನಿಮ್ಮ ಚರಣದ
ಚಿಂತೆಯೇ ಮನೆವಾರ್ತೆ ವರವೇ
ದಾಂತ ತತ್ವ ರಹಸ್ಯ ಮನನಾದಿಗಳು ಸರ್ವಸ್ವ
ದಾಂತಿಯೇ ಸುಖಭೋಗ ಮಾಯಾ
ಶ್ರಾಂತಿಯೇ ಮಹಾತ್ಮೈಯಿವು ಋಷಿ
ಸಂತತಿಗೆ ವರ್ತನವಲೇ ವೈದಿಕ ವಿಧಾನದಲಿ (ಅರಣ್ಯ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಶಾಂತಿಯು ನಮಗೆ ಮನೆಯಿದ್ದಂತೆ, ನಿಮ್ಮ ಪಾದ ಸ್ಮರಣೆಯೇ ನಮ್ಮ ಮನೆಗೆಲಸ, ವೇದಾಂತ ತತ್ತ್ವಗಳ ರಹಸ್ಯಗಳನ್ನು ಮನನ ಮಾಡುವುದೇ ನಮಗೆ ಸರ್ವಸ್ವ. ದಯೆಯೇ ಸುಖ ಭೋಗ, ಇಂದ್ರಿಯ ನಿಗ್ರಹವನ್ನು ದಣಿಸುವುದೇ ನಮಗೆ ಮಹಾತ್ಮೆ, ವೈದಿಕ ವಿಧಾನದಲ್ಲಿ ಋಷಿಗಳು ಹೀಗೆ ವರ್ತಿಸಬೇಕೆಂಬುದನ್ನು ನೀವು ಅರಿತಿರುವಿರಿ ಎಂದು ಒಬ್ಬ ಋಷಿವರ್ಯರು ತಿಳಿಸಿದರು.

ಅರ್ಥ:
ಶಾಂತಿ: ನೆಮ್ಮದಿ, ಚಿತ್ತಸ್ವಾಸ್ಥ್ಯ; ಮನೆ: ಆಲಯ; ಚರಣ: ಪಾದ; ಚಿಂತೆ: ಯೋಚನೆ; ವಾರ್ತೆ: ಸುದ್ದಿ, ಸಮಾಚಾರ; ವರ: ಶ್ರೇಷ್ಠ; ವೇದಾಂತ: ಉಪನಿಷತ್ತುಗಳು; ತತ್ವ: ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ; ರಹಸ್ಯ: ಗೋಪ್ಯ, ಮರ್ಮ; ಮನ: ಮನಸ್ಸು; ಆದಿ: ಮುಂತಾದ; ಸರ್ವಸ್ವ: ಎಲ್ಲಾ; ದಾಂತಿ: ಇಂದ್ರಿಯ ನಿಗ್ರಹ, ಸಂಯಮ; ಸುಖ: ಸಂತಸ, ನೆಮ್ಮದಿ; ಭೋಗ: ಸುಖವನ್ನು ಅನುಭವಿಸುವುದು; ಮಯಾ: ಗಾರುಡಿ, ಇಂದ್ರಜಾಲ; ಶ್ರಾಂತಿ: ಆಯಾಸ, ಬಳಲಿಕೆ; ಮಹಾತ್ಮೆ: ಹಿರಿಮೆ; ಋಷಿ: ಮುನಿ; ಸಂತತಿ: ಕುಲ; ವರ್ತನ: ನಡತೆ, ನಡವಳಿಕೆ; ವಿಧಾನ: ರೀತಿ, ಬಗೆ; ವೈದಿಕ: ವೇದಗಳನ್ನು ಬಲ್ಲವನು; ಮನನ: ಮನಸ್ಸಿನಲ್ಲಿ ಮಾಡುವ ಚಿಂತನೆ;

ಪದವಿಂಗಡಣೆ:
ಶಾಂತಿಯೇ +ಮನೆ +ನಿಮ್ಮ +ಚರಣದ
ಚಿಂತೆಯೇ +ಮನೆವಾರ್ತೆ +ವರ+ವೇ
ದಾಂತ +ತತ್ವ +ರಹಸ್ಯ +ಮನನ್+ಆದಿಗಳು ಸರ್ವಸ್ವ
ದಾಂತಿಯೇ +ಸುಖ+ಭೋಗ +ಮಾಯಾ
ಶ್ರಾಂತಿಯೇ +ಮಹಾತ್ಮೈ+ಇವು +ಋಷಿ
ಸಂತತಿಗೆ +ವರ್ತನವಲೇ+ ವೈದಿಕ+ ವಿಧಾನದಲಿ

ಅಚ್ಚರಿ:
(೧) ಶಾಂತಿ, ದಾಂತಿ, ಶ್ರಾಂತಿ – ಪ್ರಾಸ ಪದಗಳು

ಪದ್ಯ ೪೦: ಸೈನ್ಯದಲ್ಲಿ ಯಾವ ಭಾವನೆ ಮೂಡಿದ್ದವು?

ಮೊದಲಲೆರಡೊಡ್ಡಿನಲಿ ಸುಮ್ಮಾ
ನದ ಸಘಾಡವ ದಂಡೆನೀಗಳು
ತುದಿಗೆ ಬರೆವರೆ ಕಂಡೆನಿವರವರೆರಡು ಥಟ್ಟಿನಲಿ
ತುದಿವೆರಳ ಕಂಬನಿಯ ಬಳಸಿದ
ಬೆದರುಗಳ ಕುಕ್ಕುಳಿಸಿದುತ್ಸಾ
ಹದ ವಿಘಾತಿಯ ನಟ್ಟ ಚಿಂತೆಯನರಸ ಕೇಳೆಂದ (ಕರ್ಣ ಪರ್ವ, ೨೬ ಸಂಧಿ, ೪೦ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ, ಕರ್ಣಾರ್ಜುನರ ಕಾಳಗ ಆರಂಭವಾದಗ ಎರಡು ಸೈನ್ಯಗಳಲ್ಲೂ ಸಂತಸ, ಸಂಭ್ರಮಗಳು ಕಾಣಿಸುತ್ತಿದ್ದವು. ಈಗಲೋ ಎರಡು ಸೈನ್ಯದಲ್ಲಿ ಬೆದರಿಕೆ, ಕಂಬನಿ, ಸಂತಸದ ಕುಸಿತ, ದುಗುಡ, ಯಾವುದೋ ತೊಂದರೆ, ಚಿಂತೆಗಳು ಅವರ ಮನಸ್ಸಿನಲ್ಲಿ ಕಂಡುಬರುತ್ತಿವೆ.

ಅರ್ಥ:
ಮೊದಲು: ಆದಿ; ಒಡ್ಡು: ಸೈನ್ಯ, ಗುಂಪು; ಸುಮ್ಮಾನ:ಸಂತೋಷ, ಹಿಗ್ಗು; ಸಘಾಡ: ರಭಸ, ವೇಗ; ಕಂಡು: ನೋಡು; ತುದಿ: ಅಗ್ರ, ಮುಂದೆ; ಬರೆವರೆ: ಬಂದರೆ; ತುದಿವೆರಳು: ಬೆರಳ ಕೊನೆ; ಕಂಬನಿ: ಕಣ್ಣೀರು; ಬಳಸು: ಆವರಿಸುವಿಕೆ; ಬೆದರು: ಭಯ, ಅಂಜಿಕೆ; ಕುಕ್ಕುಳಿಸು: ಕುದಿ, ತಳಮಳಿಸು; ಉತ್ಸಾಹ: ಶಕ್ತಿ, ಬಲ; ವಿಘಾತಿ: ಹೊಡೆತ, ವಿರೋಧ; ನಟ್ಟ: ನಡು, ಒಳಹೋಕು; ಚಿಂತೆ: ಯೋಚನೆ; ಅರಸ; ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮೊದಲಲ್+ಎರಡ್+ಒಡ್ಡಿನಲಿ+ ಸುಮ್ಮಾ
ನದ +ಸಘಾಡವ +ದಂಡೆನ್+ಈಗಳು
ತುದಿಗೆ+ ಬರೆವರೆ+ ಕಂಡೆನ್+ಇವರ್+ಅವರ್+ಎರಡು+ ಥಟ್ಟಿನಲಿ
ತುದಿವೆರಳ+ ಕಂಬನಿಯ +ಬಳಸಿದ
ಬೆದರುಗಳ +ಕುಕ್ಕುಳಿಸಿದ್+ಉತ್ಸಾ
ಹದ+ ವಿಘಾತಿಯ +ನಟ್ಟ+ ಚಿಂತೆಯನ್+ಅರಸ+ ಕೇಳೆಂದ

ಅಚ್ಚರಿ:
(೧) ಸುಮ್ಮಾನ, ಬೆದರು, ಉತ್ಸಾಹ, ವಿಘಾತ, ಚಿಂತೆ – ಭಾವನೆಗಳನ್ನು ವರ್ಣಿಸುವ ಪದಗಳು

ಪದ್ಯ ೭: ನೀತಿಯನ್ನು ತಿಳಿದವರು ಹೇಗೆ ಚಿಂತಿಸುತ್ತಾರೆ?

ತನ್ನ ಕಾರಿಯ ಕಾರಣವನುಳಿ
ದನ್ನಿಗರ ಚಿಂತೆಯನು ಮಾಡುವು
ದುನ್ನತಿಕೆ ತಾನಲ್ಲ ನೀತಿಜ್ಞರಿಗೆ ಭಾವಿಸಲು
ಮನ್ನಿಸುವುದಾತ್ಮನನು ಮಿಕ್ಕುದ
ನನ್ಯರಿಗೆ ಮಾಡುವುದದಲ್ಲದೆ
ತನ್ನ ತಾ ಮರೆದಿಹುದು ಮತವಲ್ಲೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ನೀತಿಯನ್ನು ತಿಳಿದವರು ತಾನು ಯಾರು ಹೀಗೆ ತಾನಿರಲು ಕಾರಣವೇನು ಎಂದು ಚಿಂತಿಸುವುದನ್ನು ಬಿಟ್ಟು, ಬೇರೆಯವರನ್ನೇ ಕುರಿತು ಚಿಂತಿಸುವುದು ಸರಿಯಲ್ಲ. ಆದ್ದರಿಂದ ಅವರಿಗೆ ಹೆಗ್ಗಳಿಕೆ ಬರುವುದಿಲ್ಲ. ಆತ್ಮ ವಿಚಾರವನ್ನು ಮೊದಲು ಮಾಡಿ ವ್ಯವಹಾರದಲ್ಲಿ ಅನ್ಯ ವಿಷಯವನ್ನು ಗಮನಿಸಬೇಕು. ತಾನು ಯಾರೆಂದು ಮರೆತು ವರ್ತಿಸುವುದು ನನಗೆ ಒಪ್ಪಿಗೆಯಿಲ್ಲ ಎಂದು ವಿದುರ ಹೇಳಿದ.

ಅರ್ಥ:
ಕಾರಿಯ: ಕಾರ್ಯ; ಕಾರಣ: ಉದ್ದೇಶ, ನಿಮಿತ್ತ; ಉಳಿದು: ಮಿಕ್ಕ; ಚಿಂತೆ: ಯೋಚನೆ; ಮಾಡು: ನಡೆದುಕೊಳ್ಳು; ಉನ್ನತಿ: ಮೇಲ್ಮೆ, ಹಿರಿಮೆ; ನೀತಿ: ಮಾರ್ಗ ದರ್ಶನ; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಮನ್ನಿಸು: ಗೌರವಿಸು; ಆತ್ಮ:ಜೀವ ; ಮಿಕ್ಕು: ಉಳಿದ; ಅನ್ಯ: ಉಳಿದ; ಮರೆ: ನೆನಪಿನಿಂದ ದೂರ ಮಾಡು; ಮತ:ಅಭಿಪ್ರಾಯ, ಆಶಯ;

ಪದವಿಂಗಡಣೆ:
ತನ್ನ +ಕಾರಿಯ +ಕಾರಣವನ್+ ಉಳಿದ್
ಅನ್ನಿಗರ+ ಚಿಂತೆಯನು +ಮಾಡುವುದ್
ಉನ್ನತಿಕೆ+ ತಾನಲ್ಲ+ ನೀತಿಜ್ಞರಿಗೆ +ಭಾವಿಸಲು
ಮನ್ನಿಸುವುದ್+ಆತ್ಮನನು +ಮಿಕ್ಕುದನ್
ಅನ್ಯರಿಗೆ +ಮಾಡುವುದದ್+ಅಲ್ಲದೆ
ತನ್ನ+ ತಾ +ಮರೆದಿಹುದು +ಮತವಲ್ಲೆಂದನಾ+ ವಿದುರ

ಅಚ್ಚರಿ:
(೧) ಜೋಡಿ ಪದಗಳ ಬಳಕೆ – ‘ಕ’- ಕಾರಿಯ ಕಾರಣ; ‘ಮ’- ಮರೆದಿಹುದು ಮತವಲ್ಲೆಂದ