ಪದ್ಯ ೧೬: ಸಂಜಯನು ನಡೆಯುವ ಮನುಷ್ಯನನ್ನು ಯಾರೊಂದಿಗೆ ಹೋಲಿಸಿದನು?

ಹೇಳುವಡೆ ಕುರುಪತಿಯನೇ ನೆರೆ
ಹೋಲುವನು ಗದೆ ಹೆಗಲಲದೆ ಮೇ
ಲಾಳ ಕಾಣೆನು ಚಮರ ಚಾಹಿಯ ಗಜಹಯಾವಳಿಯ
ಹೋಲುವುದು ಜನವೊಬ್ಬರೊಬ್ಬರ
ನಾಳೊಳೊಬ್ಬನೊ ಮೇಣು ಕುರು ಭೂ
ಪಾಲಕನೊ ನೋಡುವೆನೆನುತ ಸಂಜಯನು ನಡೆತಂದ (ಗದಾ ಪರ್ವ, ೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಅವನನ್ನು ನೋಡಿದ ಸಂಜಯನು, ಅವನು ದುರ್ಯೋಧನನನ್ನೇ ಹೋಲುತ್ತಾನೆ. ಹೆಗಲಲ್ಲಿ ಗದೆಯಿದೆ. ಪರಿವಾರವೂ ಇಲ್ಲ, ಛತ್ರ ಚಾಮರ ಆನೆ ಕುದುರೆಗಳೂ ಇಲ್ಲ. ಒಬ್ಬನನ್ನು ಹೋಲುವವನು ಮತ್ತೊಬ್ಬನಿರುತ್ತಾನೆ. ಇವನೇನು ಒಬ್ಬ ಸಾಮಾನ್ಯ ಯೋಧನೋ ಅಥವ ರಾಜನಾದ ದುರ್ಯೋಧನನೋ? ನೋಡುತ್ತೇನೆ ಎಂದು ಯೋಚಿಸೆ ಅವನ ಬಳಿಗೆ ಹೆಜ್ಜೆ ಹಾಕಿದನು.

ಅರ್ಥ:
ಹೇಳು: ತಿಳಿಸು; ನೆರೆ: ಸಮೀಪ, ಹತ್ತಿರ; ಹೋಲು: ಎಣೆಯಾಗು, ಸದೃಶವಾಗು; ಗದೆ: ಮುದ್ಗರ; ಹೆಗಲು: ಬಾಹು; ಮೇಲಾಳು: ಶೂರ; ಕಾಣು: ತೋರು; ಚಮರ: ಚಾಮರ; ಚಾಹಿ: ಚಾಮರ ಬೀಸುವವ; ಗಜ: ಆನೆ; ಹಯ: ಕುದುರೆ; ಆವಳಿ: ಸಾಲು, ಗುಂಪು; ಜನ: ಮನುಷ್ಯ, ಗುಂಪು; ಆಳು: ಸೇವಕ; ಮೇಣು: ಅಥವ; ಭೂಪಾಲಕ: ರಾಜ; ನಡೆ: ಚಲಿಸು;

ಪದವಿಂಗಡಣೆ:
ಹೇಳುವಡೆ +ಕುರುಪತಿಯನೇ +ನೆರೆ
ಹೋಲುವನು +ಗದೆ +ಹೆಗಲಲದೆ+ ಮೇ
ಲಾಳ +ಕಾಣೆನು +ಚಮರ +ಚಾಹಿಯ +ಗಜ+ಹಯಾವಳಿಯ
ಹೋಲುವುದು+ ಜನವ್+ಒಬ್ಬರೊಬ್ಬರನ್
ಆಳೊಳ್+ಒಬ್ಬನೊ +ಮೇಣು+ ಕುರು+ ಭೂ
ಪಾಲಕನೊ+ ನೋಡುವೆನೆನುತ+ ಸಂಜಯನು+ ನಡೆತಂದ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ಕುರುಪತಿ, ಭೂಪಾಲಕ
(೨) ದುರ್ಯೋಧನನು ಕಂಡ ಪರಿ – ಕುರುಪತಿಯನೇ ನೆರೆ ಹೋಲುವನು ಗದೆ ಹೆಗಲಲದೆ ಮೇಲಾಳ ಕಾಣೆನು ಚಮರ ಚಾಹಿಯ ಗಜಹಯಾವಳಿಯ
(೩) ಹೋಲು – ೨, ೪ ಸಾಲಿನ ಮೊದಲ ಪದ

ಪದ್ಯ ೨: ಸಂಜಯನು ಯಾರನ್ನು ಪ್ರಶ್ನಿಸಿದನು?

ವಂದಿಗಳ ನಿಸ್ಸಾಳಬಡಿಕರ
ಮಂದಿ ಹಡಪಿಗ ಚಾಹಿ ಸೂತರ
ಸಂದಣಿಗಳೌಷಧಿಕ ಹಯಗಜಸಂವಿಧಾಯಕರು
ನಿಂದುದದಸಂಖ್ಯಾತವಿನಿಬರ
ನಂದು ಸಂಜಯ ಕರೆದು ಕೇಳಿದ
ನಿಂದುಕುಲಸಂಭವನ ಕಂಡಿರೆ ಕೌರವೇಶ್ವರನ (ಗದಾ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಹೊಗಳುಭಟ್ಟರು, ಭೇರಿ ಹೊಡೆಯುವವರು, ಹಡಪಿಗರು, ಸೂತರ ಗುಂಪುನಿಲ್ಲಿದ್ದವರು, ಚಾಮರ ಬೀಸುವವರು, ಔಷಧಿಯನ್ನು ಕೊಡುವವರು, ಆನೆ, ಕುದುರೆಯ ಮೇಲ್ವಿಚಾರಣೆಯನ್ನು ಮಾಡುವವರು ಅಸಂಖ್ಯಾತ ಸಂಖ್ಯೆಯಲ್ಲಿದ್ದರು. ಅವರೆಲ್ಲರನ್ನೂ ಸಂಜಯನು ಚಂದ್ರವಂಶ ಸಂಭೂತ ದುರ್ಯೋಧನನ್ನು ಕಂಡಿರಾ ಎಂದು ಪ್ರಶ್ನಿಸಿದನು.

ಅರ್ಥ:
ವಂದಿ: ಹೊಗಳುಭಟ್ಟ; ನಿಸ್ಸಾಳ: ಚರ್ಮವಾದ್ಯ; ಬಡಿಕರ: ಹೊಡೆಯುವವ; ಮಂದಿ: ಜನ; ಹಡಪಿಗ: ಚೀಲವನ್ನಿಟ್ಟುಕೊಂಡಿರುವವ; ಚಾಹಿ: ಚಾಮರ ಬೀಸುವವ; ಸೂತ: ಸಾರಥಿ; ಸಂದಣಿ: ಗುಂಪು; ಔಷಧಿಕ: ವೈದ್ಯ, ಔಷಧಿ ಕೊಡುವವ; ಹಯ: ಕುದುರೆ; ಗಜ: ಆನೆ; ಸಂವಿಧಾಯಕ: ವಿದ್ಯುಕ್ತವಾದುದು, ನಿರ್ಧರಿಸುವ; ನಿಂದು: ನಿಲ್ಲು; ಅಸಂಖ್ಯಾತ: ಲೆಕ್ಕವಿಲ್ಲದಷ್ಟು; ಇನಿಬರು: ಇಷ್ಟು ಜನ; ಕರೆದು: ಬರೆಮಾಡು; ಕೇಳು: ಆಲಿಸು; ಇಂದು: ಚಂದ್ರ; ಕುಲ: ವಂಶ; ಸಂಭವ: ಹುಟ್ಟು; ಕಂಡಿರೆ: ನೋಡಿದಿರೆ;

ಪದವಿಂಗಡಣೆ:
ವಂದಿಗಳ+ ನಿಸ್ಸಾಳ+ಬಡಿಕರ
ಮಂದಿ +ಹಡಪಿಗ +ಚಾಹಿ +ಸೂತರ
ಸಂದಣಿಗಳ್+ಔಷಧಿಕ +ಹಯ+ಗಜ+ಸಂವಿಧಾಯಕರು
ನಿಂದುದದ್+ಅಸಂಖ್ಯಾತವ್+ಇನಿಬರನ್
ಅಂದು +ಸಂಜಯ +ಕರೆದು +ಕೇಳಿದನ್
ಇಂದುಕುಲ+ಸಂಭವನ +ಕಂಡಿರೆ +ಕೌರವೇಶ್ವರನ

ಅಚ್ಚರಿ:
(೧) ಯುದ್ಧದಲ್ಲಿರುವ ಮಂದಿ – ವಂದಿ, ನಿಸ್ಸಾಳ ಬಡಿಕ, ಹಡಪಿಗ, ಚಾಹಿ, ಸೂತ, ಔಷಧಿಕ
(೨) ದುರ್ಯೋಧನನನ್ನು ಕರೆದ ಪರಿ – ಇಂದುಕುಲಸಂಭವನ ಕಂಡಿರೆ

ಪದ್ಯ ೮: ಕರ್ಣನ ಮರಣದ ಜ್ವರೆ ಯಾರ ಮೇಲೆ ಪ್ರಭಾವ ಬೀರಿತು?

ಸಿಡಿದು ಕರ್ಣನ ತಲೆ ಧರಿತ್ರಿಗೆ
ಕೆಡೆಯೆ ಧೊಪ್ಪನೆ ಮೂರ್ಛೆಯಲಿ ನೃಪ
ಕೆಡೆದು ಕಣ್ಮುಚ್ಚಿದನು ಶೋಕಜ್ವರದ ಢಗೆ ಜಡಿಯೆ
ಹಡಪಿಗರು ಚಾಮರದ ಚಾಹಿಯ
ರೊಡನೆ ನೆಲಕುರುಳಿದರು ಸಾರಥಿ
ಕಡಿಯಣದ ಕುಡಿನೇಣ ಕೊಂಡನು ತಿರುಹಿದನು ರಥವ (ಶಲ್ಯ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಕರ್ಣನ ತಲೆಯು ಸಿಡಿದು ಭೂಮಿಗೆ ಬಿದ್ದೊಡನೆ, ದೊರೆಯು ಕಣ್ಮುಚ್ಚಿ, ಶೋಕಜ್ವರವೇರಲು, ಮೂರ್ಛಿತನಾದನು. ಹಡಪದವರು, ಚಾಮರದವರು ನೆಲಕ್ಕುರುಳಿದರು.

ಅರ್ಥ:
ಸಿಡಿ: ಸೀಳು; ತಲೆ: ಶಿರ; ಧರಿತ್ರಿ: ಭೂಮಿ; ಕೆಡೆ: ಬೀಳು, ಕುಸಿ; ಕಣ್ಣು: ನಯನ; ಮುಚ್ಚು: ಮರೆಮಾಡು, ಹೊದಿಸು; ಶೋಕ: ದುಃಖ; ಜ್ವರ: ಬೇನೆ, ತಾಪ; ಢಗೆ: ಕಾವು, ದಗೆ; ಜಡಿ: ಬೆದರಿಕೆ, ಹೆದರಿಕೆ; ಹಡಪ: ಎಲೆಯಡಿಕೆ ಚೀಲ; ಚಾಮರ: ಕುಂಚ; ಚಾಹಿ: ಚಾಮರ ಬೀಸುವವ; ನೆಲ: ಭೂಮಿ; ಉರುಳು: ಬೀಳು; ಸಾರಥಿ: ಸೂತ; ಕದಿ: ಸೀಲು; ನೇಣು: ಹಗ್ಗ, ಹುರಿ; ಕೊಂಡು: ಪಡೆದು; ತಿರುಹು: ಹಿಂದಿರುಗು; ರಥ: ಬಂಡಿ;

ಪದವಿಂಗಡಣೆ:
ಸಿಡಿದು +ಕರ್ಣನ +ತಲೆ +ಧರಿತ್ರಿಗೆ
ಕೆಡೆಯೆ +ಧೊಪ್ಪನೆ +ಮೂರ್ಛೆಯಲಿ +ನೃಪ
ಕೆಡೆದು +ಕಣ್ಮುಚ್ಚಿದನು +ಶೋಕ+ಜ್ವರದ +ಢಗೆ +ಜಡಿಯೆ
ಹಡಪಿಗರು +ಚಾಮರದ +ಚಾಹಿಯ
ರೊಡನೆ +ನೆಲಕುರುಳಿದರು +ಸಾರಥಿ
ಕಡಿಯಣದ +ಕುಡಿನೇಣ+ ಕೊಂಡನು +ತಿರುಹಿದನು +ರಥವ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಡಿಯಣದ ಕುಡಿನೇಣ ಕೊಂಡನು