ಪದ್ಯ ೧೭: ಚಂದ್ರನು ಹೇಗೆ ಹೊಳೆದನು?

ವಿರಹಿಜನದೆದೆಗಿಚ್ಚು ಮನುಮಥ
ನರಸುತನದಭಿಷೇಕಘಟ ತಾ
ವರೆಯ ಕಗ್ಗೊಲೆಕಾರನುತ್ಪಳವನ ವಿದೂಷಕನು
ಹರನ ಹಗೆಯಡ್ಡಣ ವಿಳಾಸಿನಿ
ಯರ ಮನೋರಥಫಲವೆನಲು ಮಿಗೆ
ಮೆರೆದನುದಯಾಚಲದ ಚಾವಡಿಯಲಿ ಸುಧಾಸೂತಿ (ದ್ರೋಣ ಪರ್ವ, ೧೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ವಿರಹಿಜನಗಳ ಎದೆಗಿಚ್ಚು, ಮನ್ಮಥನ ಪಟ್ಟಾಭಿಷೇಕಕ್ಕೆ (ನೀರು ತುಂಬಿದ) ಘಟ, ಕಮಲಗಳ ಕಗ್ಗೊಲೆಗಾರ, ಕುಮುದವನಕ್ಕೆ ವಿದೂಷಕ (ಚಂದ್ರ ಕುಮುದಗಳ ಪ್ರೀತಿಗೆ ಸಹಕಾರಿ), ಮನ್ಮಥನ ಗುರಾಣಿ, ವಿಲಾಸಿನಿಯರ ಮನೋರಥ ಫಲ ಎನ್ನುವಂತೆ ಚಂದ್ರನು ಉದಯಪರ್ವತದ ಚಾವಡಿಯಲ್ಲಿ ಹೊಳೆದನು.

ಅರ್ಥ:
ವಿರಹಿ:ವಿಯೋಗಿ; ಜನ: ಮನುಷ್ಯ; ಕಿಚ್ಚು: ಬೆಂಕಿ, ಅಗ್ನಿ; ಮನುಮಥ: ಕಾಮದೇವ; ಅರಸು: ರಾಜ; ಅಭಿಷೇಕ: ಮಂಗಳಸ್ನಾನ; ಘಟ: ದೇಹ; ತಾವರೆ: ಕಮಲ; ಕಗ್ಗೊಲೆ: ಸಾಯಿಸು; ಉತ್ಪಳ: ಕನ್ನೈದಿಲೆ; ವಿದೂಷಕ: ಹಾಸ್ಯದ, ತಮಾಷೆಯ; ಹರ: ಶಂಕರ; ಹಗೆ: ವೈರತ್ವ; ಅಡ್ಡಣ: ನಡುವೆ; ವಿಳಾಸಿನಿ: ಒಯ್ಯಾರಿ, ಬೆಡಗಿ; ಮನೋರಥ: ಆಸೆ, ಬಯಕೆ; ಫಲ: ಪ್ರಯೋಜನ; ಮಿಗೆ: ಹೆಚ್ಚು; ಮೆರೆ: ಹೊಳೆ, ಪ್ರಕಾಶಿಸು; ಉದಯಾಚಲ: ಪೂರ್ವದ ಬೆಟ್ಟ; ಚಾವಡಿ: ಸಭಾಸ್ಥಾನ; ಸುಧಾಸೂತಿ: ಕ್ಷೀರಸಾಗರದಲ್ಲಿ ಹುಟ್ಟಿದವನು, ಚಂದ್ರ;

ಪದವಿಂಗಡಣೆ:
ವಿರಹಿಜನದ್+ಎದೆ+ಕಿಚ್ಚು +ಮನುಮಥನ್
ಅರಸುತನದ್+ಅಭಿಷೇಕ+ಘಟ+ ತಾ
ವರೆಯ +ಕಗ್ಗೊಲೆಕಾರನ್+ಉತ್ಪಳವನ +ವಿದೂಷಕನು
ಹರನ+ ಹಗೆ+ಅಡ್ಡಣ +ವಿಳಾಸಿನಿ
ಯರ +ಮನೋರಥಫಲವ್+ಎನಲು +ಮಿಗೆ
ಮೆರೆದನ್+ಉದಯಾಚಲದ +ಚಾವಡಿಯಲಿ +ಸುಧಾಸೂತಿ

ಅಚ್ಚರಿ:
(೧) ಚಂದ್ರನನ್ನು ಹಲವು ರೀತಿಯಲ್ಲಿ ಕರೆದಿರುವ ಪರಿ – ವಿರಹಿಜನದೆದೆಗಿಚ್ಚು, ವಿಳಾಸಿನಿಯರ, ತಾವರೆಯ ಕಗ್ಗೊಲೆಕಾರನುತ್ಪಳವನ ವಿದೂಷಕನು ಮನೋರಥಫಲ

ಪದ್ಯ ೮: ಮೂರನೆಯ ದಿನದ ಯುದ್ಧವು ಹೇಗೆ ಆರಂಭವಾಯಿತು?

ದಿನವೆರಡು ಹಿಂದಾದುದಿದು ಮೂ
ರನೆಯ ದಿವಸದ ಬಹಳ ವಿಗ್ರಹ
ದನುವನಾಲಿಸು ರಾಯ ಜನಮೇಜಯ ಮಹೀಪಾಲ
ದಿನಪನುದಯಾಚಲದ ಚಾವಡಿ
ವನೆಗೆ ಬರೆ ಬಲವೆರಡು ಗಳ ಗ
ರ್ಜನದಿ ಬಂದೊಡ್ಡಿದವು ಕಳನೊಳು ಖತಿಯ ಪಡಪಿನಲಿ (ಭೀಷ್ಮ ಪರ್ವ, ೬ ಸಂಧಿ, ೮ ಪದ್ಯ)

ತಾತ್ಪರ್ಯ:
ವೈಶಂಪಾಯನರು ತಮ್ಮ ಭಾರತದ ಕಥೆಯನ್ನು ಮುಂದುವರೆಸುತ್ತಾ, ಎರಡು ದಿನಗಳ ಯುದ್ಧವಾಯಿತು, ಮೂರನೆಯ ದಿನದ ಯುದ್ಧದ ಬಗೆಯನ್ನು ರಾಜ ಜನಮೇಜಯ ಕೇಳು, ಸೂರ್ಯನು ಪೂರ್ವ ಪರ್ವತದ ಓಲಗಕ್ಕೆ ಬರಲು, ಎರಡು ಸೈನ್ಯಗಳೂ ಗರ್ಜಿಸುತ್ತಾ ಬಂದು ರಣರಂಗದಲ್ಲಿ ವ್ಯೂಹಗಳನ್ನೊಡ್ಡಿದವು.

ಅರ್ಥ:
ದಿನ: ದಿವಸ; ಹಿಂದೆ: ಮುಗಿದ; ಬಹಳ: ತುಂಬ; ವಿಗ್ರಹ: ಯುದ್ಧ; ಅನುವು: ಸೊಗಸು; ಆಲಿಸು: ಕೇಳು; ರಾಯ: ರಾಜ; ಮಹೀಪಾಲ: ರಾಜ; ದಿನಪ: ಸೂರ್ಯ; ಉದಯ: ಹುಟ್ಟು; ಅಚಲ: ಬೆಟ್ಟ; ಚಾವಡಿ: ಸಭಾಸ್ಥಾನ, ಓಲಗ; ಬರೆ: ಆಗಮಿಸು; ಬಲ: ಸೈನ್ಯ; ಗಳ: ಕಂಠ, ಕೊರಳು; ಗರ್ಜನ: ಕೂಗು; ಒಡ್ಡು: ತೋರು; ಕಳ: ರಣರಂಗ; ಖತಿ: ಕೋಪ; ಪಡಪು: ಠೀವಿ;

ಪದವಿಂಗಡಣೆ:
ದಿನವ್+ಎರಡು +ಹಿಂದಾದುದ್+ಇದು +ಮೂ
ರನೆಯ +ದಿವಸದ +ಬಹಳ +ವಿಗ್ರಹದ್
ಅನುವನ್+ಆಲಿಸು+ ರಾಯ +ಜನಮೇಜಯ +ಮಹೀಪಾಲ
ದಿನಪನ್+ಉದಯಾಚಲದ +ಚಾವಡಿ
ವನೆಗೆ+ ಬರೆ +ಬಲವೆರಡು +ಗಳ+ ಗ
ರ್ಜನದಿ +ಬಂದೊಡ್ಡಿದವು +ಕಳನೊಳು +ಖತಿಯ +ಪಡಪಿನಲಿ

ಅಚ್ಚರಿ:
(೧) ದಿನವು ಪ್ರಾರಂಭವಾಯಿತು ಎಂದು ಹೇಳಲು – ದಿನಪನುದಯಾಚಲದ ಚಾವಡಿವನೆಗೆ ಬರೆ
(೨) ಸೈನ್ಯವು ಬಂದ ಪರಿ – ಬಲವೆರಡು ಗಳ ಗರ್ಜನದಿ ಬಂದೊಡ್ಡಿದವು ಕಳನೊಳು ಖತಿಯ ಪಡಪಿನಲಿ
(೩) ದಿನ, ದಿವಸ; ರಾಯ, ಮಹೀಪಾಲ – ಸಮನಾರ್ಥಕ ಪದ

ಪದ್ಯ ೨೯: ದುರ್ಯೋಧನನು ಯಾವುದರ ತಯಾರಿ ಮಾಡಿದನು?

ಅರಸನುಪ್ಪವಡಿಸಿದನವನೀ
ಶ್ವರ ವಿಹಿತ ಸತ್ಕರ್ಮವನು ವಿ
ಸ್ತರಿಸಿದನು ಚಾವಡಿಗೆ ಬಂದನು ಹರುಷದುಬ್ಬಿನಲಿ
ಚರರನಟ್ಟಿದನಖಿಳ ಧರಣೀ
ಶ್ವರ ನಿಕಾಯಕೆ ಸಕಲ ಸುಭಟರ
ಬರಿಸಿದನು ತರಿಸಿದನು ಪಟ್ಟಕೆ ಬೇಹವಸ್ತುಗಳ (ಭೀಷ್ಮ ಪರ್ವ, ೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೌರವನು ಎದ್ದು, ರಾಜರು ಮಾಡಬೇಕಾದ ಸತ್ಕರ್ಮಗಳನ್ನು ಮಾಡಿ, ಓಲಗದ ಚಾವಡಿಗೆ ಬಂದು, ಸಮಸ್ತರಾಜರ ಬಳಿಗೂ ದೂತರನ್ನು ಕಳಿಸಿ ಅವರನ್ನು ಬರಮಾಡಿಕೊಂಡನು. ಸೇನಾಧಿಪತ್ಯದ ಪಟ್ಟಕಟ್ಟಲು ಅವಶ್ಯಕವಾದ ವಸ್ತುಗಳನ್ನು ತರಿಸಿದನು.

ಅರ್ಥ:
ಅರಸ: ರಾಜ; ಉಪ್ಪವಡಿಸು: ಮೇಲೇಳು; ಅವನೀಶ್ವರ: ರಾಜ; ವಿಹಿತ: ಯೋಗ್ಯ; ಸತ್ಕರ್ಮ: ಒಳ್ಳೆಯ ಕೆಲಸ; ವಿಸ್ತರಿಸು: ಹರಡು; ಚಾವಡಿ: ಓಲಗಶಾಲೆ, ಸಭಾಸ್ಥಾನ; ಬಂದು: ಆಗಮಿಸು; ಹರುಷ: ಸಂತಸ; ಉಬ್ಬು: ಅಧಿಕ; ಚರರು: ದೂತರು; ಅಟ್ಟು: ಕಳಿಸು; ಧರಣೀಶ್ವರ: ರಾಜ; ನಿಕಾಯ: ಗುಂಪು; ಸಕಲ: ಎಲ್ಲಾ; ಸುಭಟ: ಪರಾಕ್ರಮಿ; ಬರಿಸು: ಕರೆ, ಬರಹೇಳು; ತರಿಸು: ಕೊಂಡು ಬಾ; ಪಟ್ಟ: ಸ್ಥಾನ, ಗೌರವ; ಬೇಹ: ಬೇಕಾದ; ವಸ್ತು: ಸಾಮಗ್ರಿ;

ಪದವಿಂಗಡಣೆ:
ಅರಸನ್+ಉಪ್ಪವಡಿಸಿದನ್+ಅವನೀ
ಶ್ವರ +ವಿಹಿತ +ಸತ್ಕರ್ಮವನು +ವಿ
ಸ್ತರಿಸಿದನು +ಚಾವಡಿಗೆ +ಬಂದನು +ಹರುಷದುಬ್ಬಿನಲಿ
ಚರರನ್+ಅಟ್ಟಿದನ್+ಅಖಿಳ +ಧರಣೀ
ಶ್ವರ +ನಿಕಾಯಕೆ +ಸಕಲ +ಸುಭಟರ
ಬರಿಸಿದನು +ತರಿಸಿದನು +ಪಟ್ಟಕೆ +ಬೇಹ+ವಸ್ತುಗಳ

ಅಚ್ಚರಿ:
(೧) ಅವನೀಶ್ವರ, ಧರಣೀಶ್ವರ – ಸಮನಾರ್ಥಕ ಪದ
(೨) ಬರಿಸಿದನು, ತರಿಸಿದನು – ಪ್ರಾಸ ಪದಗಳು

ಪದ್ಯ ೫೯: ದ್ರೌಪದಿಯು ಹೇಗೆ ಕುಳಿತುಕೊಂಡಳು?

ಭಾವನವರರ್ತಿಯಲಿ ಜಲಕೇ
ಳೀವಿನೋದಕೆ ಬಂದು ಗಂಧ
ರ್ವಾವಳಿಯ ಕೇಳಿಯಲಿ ಚಿತ್ತೈಸಿದರಲಾಯೆನುತ
ದೇವಿಯರು ನಸುನಗುತ ಚಿತ್ತದ
ಚಾವಡಿಯಲೋಲೈಸಿಕೊಂಡರು
ಭೂವಳಯದೇಕಾಧಿಪತ್ಯದ ಸೌಖ್ಯ ಸಂಪದವ (ಅರಣ್ಯ ಪರ್ವ, ೨೦ ಸಂಧಿ, ೫೯ ಪದ್ಯ)

ತಾತ್ಪರ್ಯ:
ಕೌರವರ ಪರಾಭವವನ್ನು ಕೇಳಿದ ದ್ರೌಪದಿಯು, ಭಾವನವರು ಜಲಕ್ರೀಡೆಯ ವಿನೋದವನ್ನು ಸವೆಯಲು ಬಂದು, ಇಲ್ಲಿ ಗಂಧರ್ವರ ಕ್ರೀಡೆಯಲ್ಲಿ ದಯಮಾಡಿಸಿದರು ಎಂದು ನಸುನಕ್ಕು ಮನದ ಓಲಗದಲ್ಲಿ ಏಕಚಕ್ರಾಧಿಪತ್ಯದ ಪದವಿಯಲ್ಲಿ ಕುಳಿತುಕೊಂಡಳು.

ಅರ್ಥ:
ಭಾವ: ಗಂಡನ ಅಣ್ಣ; ಅರ್ತಿ: ಸಂತೋಷ; ಜಲಕೇಳಿ: ಜಲಕ್ರೀಡೆ; ವಿನೋದ: ವಿಹಾರ, ಸಂತಸ; ಆವಳಿ: ಸಾಲು, ಗುಂಪು; ಕೇಳಿ: ವಿನೋದ, ಕ್ರೀಡೆ; ಚಿತ್ತೈಸು: ಬೇಡಿಕೊಳ್ಳು; ದೇವಿ: ಸ್ತ್ರಿ: ನಗು: ಸಂತಸ; ಚಿತ್ತ: ಮನಸ್ಸು; ಚಾವಡಿ: ಸಭಾಸ್ಥಾನ; ಓಲೈಸು: ಸೇವೆಮಾಡು, ಉಪಚರಿಸು; ಭೂವಳಯ: ಜಗತ್ತು, ಭೂಮಂಡಲ; ಏಕಾಧಿಪತ್ಯ: ಒಬ್ಬನ ಆಳ್ವಿಕೆ; ಸೌಖ್ಯ: ಸುಖ, ನೆಮ್ಮದಿ; ಸಂಪದ: ಐಶ್ವರ್ಯ, ಸಂಪತ್ತು;

ಪದವಿಂಗಡಣೆ:
ಭಾವನವರ್+ಅರ್ತಿಯಲಿ +ಜಲಕೇ
ಳೀ+ವಿನೋದಕೆ+ ಬಂದು +ಗಂಧರ್ವ
ಆವಳಿಯ+ ಕೇಳಿಯಲಿ+ ಚಿತ್ತೈಸಿದರಲಾ+ಎನುತ
ದೇವಿಯರು +ನಸುನಗುತ +ಚಿತ್ತದ
ಚಾವಡಿಯಲ್+ಓಲೈಸಿಕೊಂಡರು
ಭೂವಳಯದ್+ಏಕಾಧಿಪತ್ಯದ+ ಸೌಖ್ಯ +ಸಂಪದವ

ಅಚ್ಚರಿ:
(೧) ಮನಸ್ಸಿನಲ್ಲಿ ಸಂತೋಷಪಟ್ಟಲು ಎಂದು ಹೇಳುವ ಪರಿ – ದೇವಿಯರು ನಸುನಗುತ ಚಿತ್ತದ
ಚಾವಡಿಯಲೋಲೈಸಿಕೊಂಡರು ಭೂವಳಯದೇಕಾಧಿಪತ್ಯದ ಸೌಖ್ಯ ಸಂಪದವ

ಪದ್ಯ ೧೯: ಪಾಂಡವರಿರುವ ಪ್ರದೇಶವನ್ನು ಹೇಗೆ ಗುರುತಿಸಬಹುದು?

ಅತ್ತ ಹಿಮಗಿರಿ ಮೇರೆ ಭಾವಿಸ
ಲಿತ್ತ ಮೂರು ಸಮುದ್ರ ಗಡಿಯಿಂ
ದಿತ್ತ ನಾನಾ ದೇಶವೆಂಬಿವು ಬರದ ಬೇಗೆಯಲಿ
ಹೊತ್ತಿ ಹೊಗೆದವು ಮಧ್ಯದೇಶದ
ಲುತ್ತಮದ ಸಿರಿಫಲದ ಬೆಳಸುಗ
ಳೊತ್ತೆಯಿದು ಪಾಂಡವರ ಚಾವಡಿಯೆಂದನಾ ದ್ರೋಣ (ವಿರಾಟ ಪರ್ವ, ೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಉತ್ತರದ ಹಿಮಾಲಯದಿಂದ ದಕ್ಷಿಣದ ಮೂರು ಸಮುದ್ರದ ತಡಿಯಿಂದ ಒಳಗೆ ಇರುವ ದೇಶಗಳು ಬರದ ಬೇಗೆಯಿಂದ ಹೊತ್ತಿ ಉರಿಯುತ್ತಿವೆ. ಆದರೆ ಮಧ್ಯದೇಶದಲ್ಲಿ ಮಳೆ ಬೆಳೆ ಉತ್ತಮವಾಗಿದೆ ಎಂದರೆ ಅದೇ ಪಾಂಡವರಿರುವ ಸ್ಥಾನ, ಎಂದು ದ್ರೋಣರು ತಿಳಿಸಿದರು.

ಅರ್ಥ:
ಅತ್ತ: ಅಲ್ಲಿ; ಹಿಮಗಿರಿ: ಹಿಮಾಲಯ; ಗಿರಿ: ಬೆಟ್ಟ; ಹಿಮ: ಮಂಜು; ಮೇರೆ:ಎಲ್ಲೆ, ಗಡಿ; ಭಾವಿಸು:ತಿಳಿ; ಮೂರು: ತ್ರಿ; ಸಮುದ್ರ: ಸಾಗರ; ಗಡಿ: ಎಲ್ಲೆ; ನಾನಾ: ಹಲವಾರು; ದೇಶ: ರಾಷ್ತ್ರ; ಬರ: ಕ್ಷಾಮ; ಬೇಗೆ: ಉರಿ; ಹೊತ್ತು: ಜ್ವಲಿಸು; ಹೊಗೆ: ಧೂಮ; ಮಧ್ಯ: ನಡು; ಉತ್ತಮ: ಶ್ರೇಷ್ಠ; ಸಿರಿ: ಐಶ್ವರ್ಯ; ಫಲ: ಹಣ್ಣು; ಬೆಳಸು: ಬೆಳೆ; ಚಾವಡಿ:ಆಶ್ರಯಸ್ಥಾನ;

ಪದವಿಂಗಡಣೆ:
ಅತ್ತ +ಹಿಮಗಿರಿ +ಮೇರೆ +ಭಾವಿಸಲ್
ಇತ್ತ +ಮೂರು +ಸಮುದ್ರ +ಗಡಿಯಿಂದ್
ಇತ್ತ +ನಾನಾ +ದೇಶ+ವೆಂಬ+ಇವು +ಬರದ+ ಬೇಗೆಯಲಿ
ಹೊತ್ತಿ +ಹೊಗೆದವು +ಮಧ್ಯ+ದೇಶದಲ್
ಉತ್ತಮದ +ಸಿರಿಫಲದ +ಬೆಳಸುಗಳ್
ಒತ್ತೆ+ಯಿದು +ಪಾಂಡವರ+ ಚಾವಡಿ+ಯೆಂದನಾ +ದ್ರೋಣ

ಅಚ್ಚರಿ:
(೧) ಅತ್ತ, ಇತ್ತ – ಪ್ರಾಸ ಪದಗಳು
(೨) ಭಾರತದ ನಕ್ಷೆಯನ್ನು ನೀಡುವ ಪದ್ಯ – ಅತ್ತ ಹಿಮಗಿರಿ ಇತ್ತ ಮೂರು ಸಮುದ್ರ ಗಡಿ
(೩) ಜೋಡಿ ಪದಗಳು – “ಬ” – ಬರದ ಬೇಗೆಯಲಿ; “ಹ” – ಹೊತ್ತಿ ಹೊಗೆದವು;