ಪದ್ಯ ೨೮: ಊರ್ವಶಿಯು ಅರ್ಜುನನನ್ನು ಹೇಗೆ ಬೈದಳು?

ಮರೆಯ ಮಾತಂತಿರಲಿ ಸಾಕದ
ಮರೆದು ಕಳೆ ಮಾನಿನಿಯರಿಚ್ಛೆಯ
ನರಿಯದವನು ಸುರೇಂದ್ರನಾಗಲಿ ಚಂದ್ರನಾಗಿರಲಿ
ಕುರಿಕಣಾ ಫಡ ಖೂಳ ನೀನೆಂ
ತರಿವೆಯೆನೆ ನಡನಡುಗಿ ಕೈಮುಗಿ
ದೆರಗಿ ಮಗುಳೀಮಾತನೆಂದನು ಪಾರ್ಥ ಕೈಮುಗಿದು (ಅರಣ್ಯ ಪರ್ವ, ೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ವಿಷಯವನ್ನು ಮುಚ್ಚಿ ಆಡುವ ಮಾತುಗಳನ್ನು ಮರೆತು ಬಿಡು, ಯುವತಿಯರ ಇಚ್ಛೆಯನ್ನು ಅರ್ಥಮಾಡಿಕೊಳ್ಳದವನು ಇಂದ್ರನೇ ಆಗಿರಲಿ, ಚಂದ್ರನೇ ಆಗಿರಲಿ ಅವನೊಬ್ಬ ಕುರಿ. ಕೋಪಗೊಂಡ ಊರ್ವಶಿ ಅರ್ಜುನನಿಗೆ, ನೀಚಾ, ನೀನು ಇದನ್ನು ತಿಳಿದುಕೊಳ್ಳಲು ಅಸಾಧ್ಯ ಎಂದು ಹೇಳಲು, ಅರ್ಜುನನು ಹೆದರಿ ನಡುಗುತ್ತಾ ಕೈಮುಗಿದು ನಮಸ್ಕರಿಸಿ ಹೀಗೆ ಹೇಳಿದನು.

ಅರ್ಥ:
ಮರೆ: ನೆನಪಿನಿಂದ ದೂರ ಮಾಡು; ಮಾತು: ವಾಣಿ, ನುಡಿ; ಸಾಕು: ಕೊನೆ, ಅಂತ್ಯ; ಕಳೆ: ತೊರೆ, ಹೋಗಲಾಡಿಸು; ಮಾನಿನಿ: ಹೆಣ್ಣು; ಇಚ್ಛೆ: ಆಸೆ; ಅರಿ: ತಿಳಿ; ಸುರೇಂದ್ರ: ಇಂದ್ರ; ಚಂದ್ರ: ಶಶಿ; ಕುರಿ: ಮೇಷ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಖೂಳ: ದುಷ್ಟ; ನಡನಡುಗು: ಹೆದರು; ಕೈಮುಗಿ: ಹಸ್ತಗಳನ್ನು ಜೋಡಿಸಿ; ಎರಗು: ನಮಸ್ಕರಿಸು; ಮಗುಳು:ಪುನಃ, ಮತ್ತೆ; ಮಾತು: ನುಡಿ;

ಪದವಿಂಗಡಣೆ:
ಮರೆಯ +ಮಾತಂತಿರಲಿ +ಸಾಕದ
ಮರೆದು +ಕಳೆ +ಮಾನಿನಿಯರ್+ಇಚ್ಛೆಯನ್
ಅರಿಯದವನು+ ಸುರೇಂದ್ರನಾಗಲಿ+ ಚಂದ್ರನಾಗಿರಲಿ
ಕುರಿ+ಕಣಾ +ಫಡ+ ಖೂಳ +ನೀನೆಂತ್
ಅರಿವೆ+ಎನೆ +ನಡನಡುಗಿ +ಕೈಮುಗಿದ್
ಎರಗಿ+ ಮಗುಳ್+ಈ+ಮಾತನ್+ಎಂದನು +ಪಾರ್ಥ +ಕೈಮುಗಿದು

ಅಚ್ಚರಿ:
(೧) ಕೈಮುಗಿ – ೫, ೬ ಸಾಲಿನ ಕೊನೆ ಪದ
(೨) ಅರ್ಜುನನನ್ನು ಬೈದ ಪರಿ – ಮಾನಿನಿಯರಿಚ್ಛೆಯನರಿಯದವನು ಸುರೇಂದ್ರನಾಗಲಿ ಚಂದ್ರನಾಗಿರಲಿ ಕುರಿಕಣಾ ಫಡ ಖೂಳ ನೀನೆಂತರಿವೆ

ಪದ್ಯ ೨೮: ಘಟೋತ್ಕಚನ ಆಗಮನ ಹೇಗಿತ್ತು?

ಕಾರಿರುಳ ಪಟ್ಟಣಕೆ ಚಂದ್ರನ
ತೋರಣವ ಬಿಗಿದಂತೆ ದಾಡೆಗ
ಳೋರಣದ ಹೊಳಹುಗಳ ಹೊಗರಿಡುವೊಡಲ ಕಪ್ಪುಗಳ
ಭಾರಿ ದೇಹನು ಭಟಭಯಂಕರ
ತೋರಹತ್ತನು ದೈತ್ಯಕುಲ ಪರಿ
ವಾರ ಬಹಳದಿ ಬಂದು ಕಂಡನು ಕಲಿ ಘಟೋತ್ಕಚನು (ಉದ್ಯೋಗ ಪರ್ವ, ೧೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಕಪ್ಪಾದ ರಾತ್ರಿಯ ಪಟ್ಟಣಕ್ಕೆ ಚಂದ್ರನು ತೋರಣವನ್ನು ಕಟ್ಟಿದರೋ ಎಂಬಂತೆ ಕಪ್ಪು ದೇಹ, ಹೊಳೆವ ದಾಡೆ ಹಲ್ಲುಗಳು, ಭಾರಿದೇಹ, ತೋರ ಹಸ್ತ, ಭಟರಿಗೆ ಭಯಂಕರನಾದ ಘಟೋತ್ಕಚನು ಬಂದು ಪಾಂಡವರನ್ನು ಕಂಡನು.

ಅರ್ಥ:
ಇರುಳು: ರಾತ್ರಿ; ಕಾರಿರುಳು: ಕಾಳರಾತ್ರಿ; ಪಟ್ಟಣ: ಊರು; ಚಂದ್ರ: ಶಶಿ; ತೋರಣ: ಹೊರಬಾಗಿಲು , ಅಲಂಕಾರಕ್ಕಾಗಿ ಬಾಗಿಲಲ್ಲಿ ಕಟ್ಟುವ ತಳಿರು; ಬಿಗಿ: ಕಟ್ಟು; ದಾಡೆ: ದವಡೆ, ದಂತ; ಓರಣ: ಕ್ರಮ, ಸಾಲು, ಅಚ್ಚುಕಟ್ಟು; ಹೊಳಹು: ಪ್ರಕಾಶ, ಕಾಂತಿ; ಹೊಗರು: ಕಾಂತಿ, ಪ್ರಕಾಶ, ಹೆಚ್ಚಳ; ಕಪ್ಪು: ಕರಿ; ಭಾರಿ: ದೊಡ್ಡ; ದೇಹ: ತನು, ಕಾಯ; ಭಟ: ಶೂರ, ಪರಾಕ್ರಮಿ; ಭಯಂಕರ: ಸಾಹಸಿ, ಗಟ್ಟಿಗ; ತೋರು: ಗೋಚರಿಸು; ದೈತ್ಯ: ರಾಕ್ಷಸ; ಕುಲ: ವಂಶ; ಪರಿವಾರ: ಪರಿಜನ, ಕುಟುಂಬ; ಬಹಳ: ತುಂಬ; ಬಂದು: ಆಗಮಿಸಿ; ಕಂಡು: ನೋಡು; ಕಲಿ: ಶೂರ;

ಪದವಿಂಗಡಣೆ:
ಕಾರಿರುಳ+ ಪಟ್ಟಣಕೆ+ ಚಂದ್ರನ
ತೋರಣವ +ಬಿಗಿದಂತೆ +ದಾಡೆಗಳ್
ಓರಣದ +ಹೊಳಹುಗಳ+ ಹೊಗರಿಡುವ್+ಒಡಲ +ಕಪ್ಪುಗಳ
ಭಾರಿ +ದೇಹನು +ಭಟಭಯಂಕರ
ತೋರಹತ್ತನು +ದೈತ್ಯಕುಲ+ ಪರಿ
ವಾರ +ಬಹಳದಿ+ ಬಂದು +ಕಂಡನು +ಕಲಿ +ಘಟೋತ್ಕಚನು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾರಿರುಳ ಪಟ್ಟಣಕೆ ಚಂದ್ರನ ತೋರಣವ ಬಿಗಿದಂತೆ
(೨) ಘಟೋತ್ಕಚನ ವಿವರಣೆ – ದಾಡೆಗಳೋರಣದ ಹೊಳಹುಗಳ ಹೊಗರಿಡುವೊಡಲ ಕಪ್ಪುಗಳ
ಭಾರಿ ದೇಹನು ಭಟಭಯಂಕರ ತೋರಹತ್ತನು

ಪದ್ಯ ೩೪: ದುರ್ಯೋಧನನ ಆಸ್ಥಾನ ಹೇಗೆ ಚೆಲುವಾಯಿತು?

ಮಿಸುಪ ತಮ್ಮ ಮುಖೇಂದುವನು ಸೈ
ರಿಸದ ಚಂದ್ರನ ಕಿತ್ತು ನಭದಲಿ
ಬಿಸುಟು ಬೇರ್ಗಳ ಹಿಡಿದರೋ ಹೇಳೆನಲು ಸಭೆಯೊಳಗೆ
ಶಶಿವದನೆಯರ ಕೈಯ ಸೀಗುರಿ
ವೆಸೆದವಿಕ್ಕೆಲದಲಿ ಸುಯೋಧನ
ವಸುಮತೀಶನ ವೈಭವದಲಾಸ್ಥಾನ ಚೆಲುವಾಯ್ತು (ಉದ್ಯೋಗ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹೊಳೆವ ತಮ್ಮ ಮುಖದ ಚಂದ್ರನನ್ನು ಸೈರಿಸದ ಚಂದ್ರನನ್ನು ಕಿತ್ತು ಆಗಸದಲ್ಲಿ ತ್ಯಜಿಸಿ ಬೇರೆಯ ಚಂದ್ರನನ್ನು ಹಿಡಿದರೋ ಎನ್ನುವಂತೆ ಸಭೆಯ ಎರಡು ಕಡೆಯಲ್ಲೂ ಸುಂದರಿಯರು ತಮ್ಮ ಕೈಯಲ್ಲಿ ಚಾಮರವನ್ನು ಹಿಡಿದು ಬೀಸುತ್ತಿರಲು ದುರ್ಯೋಧನ ದರ್ಬಾರಿನ ವೈಭವವು ಸುಂದರವಾಗಿ ತೋರುತ್ತಿತ್ತು.

ಅರ್ಥ:
ಮಿಸುಪ: ಹೊಳೆವ, ಸುಂದರವಾದ; ತಮ್ಮ: ಅವರ; ಮುಖ: ಆನನ; ಇಂದು: ಚಂದ್ರ; ಸೈರಿಸು: ತಾಳು, ಸಹಿಸು; ಚಂದ್ರ: ಶಶಿ, ಇಂದು; ಕಿತ್ತು: ಸೀಳಿ; ನಭ: ಆಗಸ; ಬಿಸುಟು: ಬಿಸಾಕು, ಎಸೆ; ಬೇರ್ಗಳ: ಬೇರೆ; ಹಿಡಿ: ಬಂಧನ, ಸೆರೆ; ಹೇಳು: ತಿಳಿಸು; ಸಭೆ: ದರ್ಬಾರು; ಶಶಿ: ಚಂದ್ರ; ವದನ: ಮುಖ; ಶಶಿವದನೆ: ಸುಂದರಿ; ಕೈ: ಹಸ್ತ, ಕರ; ಸೀಗುರಿ: ಚಾಮರ; ಎಸೆ:ಶೋಭಿಸು; ಇಕ್ಕೆಲ:ಎರಡೂ ಕಡೆ; ವಸುಮತಿ: ಭೂಮಿ; ಈಶ: ಒಡೆಯ; ವೈಭವ: ಐಶ್ವರ್ಯ; ಚೆಲುವು: ಸುಂದರ;

ಪದವಿಂಗಡಣೆ:
ಮಿಸುಪ+ ತಮ್ಮ +ಮುಖ+ಇಂದುವನು +ಸೈ
ರಿಸದ+ ಚಂದ್ರನ+ ಕಿತ್ತು +ನಭದಲಿ
ಬಿಸುಟು +ಬೇರ್ಗಳ +ಹಿಡಿದರೋ+ ಹೇಳ್+ಎನಲು+ ಸಭೆಯೊಳಗೆ
ಶಶಿವದನೆಯರ+ ಕೈಯ +ಸೀಗುರಿವ್
ಎಸೆದವ್+ಇಕ್ಕೆಲದಲಿ +ಸುಯೋಧನ
ವಸುಮತೀಶನ+ ವೈಭವದಲ್+ಆಸ್ಥಾನ +ಚೆಲುವಾಯ್ತು

ಅಚ್ಚರಿ:
(೧) ಆಗಸದ ಚಂದ್ರನಿಗಿಂತ ಸುಂದರಿಯರ ಮುಖಾರವಿಂದ ಚೆಲುವಾಗಿತ್ತು ಎಂಬ ಉಪಮಾನದ ಕಲ್ಪನೆ
(೨) ಶಶಿ, ಇಂದು, ಚಂದ್ರ – ಸಮನಾರ್ಥಕ ಪದ