ಪದ್ಯ ೧೨: ಭೀಮನ ಹೊಡೆತದ ಪ್ರಭಾವ ಹೇಗಿತ್ತು?

ಅಳಿದುದೈನೂರಾನೆ ಸಾವಿರ
ಬಲುಗುದುರೆ ರಥ ಮೂರು ಸಾವಿರ
ನೆಲಕೆ ಕೈವರ್ತಿಸಿತು ಭೀಮನ ಹೊಯ್ಲ ಹೋರಟೆಗೆ
ಬಿಲುಹರಿಗೆ ಸಬಳದ ಪದಾತಿಯ
ತಲೆಯ ತೊಡಸಿದನೆಂಟು ಲಕ್ಕವ
ನುಳಿದ ಬಲವೋಲೈಸುತಿರ್ದುದು ಘನ ಪಲಾಯನವ (ಶಲ್ಯ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಐನೂರು ಆನೆಗಳು, ಸಾವಿರ ಕುದುರೆಗಳು, ಮೂರು ಸಾವಿರ ರಥಗಳು ಭೀಮನ ಹೊಡೆತಕ್ಕೆ ಸಿಕ್ಕಿ ನೆಲಕ್ಕೆ ಬಿದ್ದವು. ಬಿಲ್ಲು, ಹರಿಗೆ ಸಬಳಗಳನ್ನು ಹಿಡಿದ ಎಂಟು ಲಕ್ಷ ಸೈನಿಕರನ್ನು ಸಂಹರಿಸಿದನು. ಉಳಿದವರು ಯುದ್ಧದಿಂದ ಪಲಾಯನ ಮಾಡಿದರು.

ಅರ್ಥ:
ಅಳಿ: ನಾಶ; ಸಾವಿರ: ಸಹಸ್ರ; ಬಲು: ಸೈನ್ಯ; ಕುದುರೆ: ಅಶ್ವ; ರಥ: ಬಂಡಿ; ನೆಲ: ಭೂಮಿ; ವರ್ತಿಸು: ಚಲಿಸು; ಹೊಯ್ಲು: ಏಟು, ಹೊಡೆತ; ಹೋರಟೆ: ಕಾಳಗ, ಯುದ್ಧ; ಬಿಲು: ಬಿಲ್ಲು, ಚಾಪ; ಸಬಳ: ಈಟಿ; ಪದಾತಿ: ಕಾಲಾಳು, ಸೈನಿಕ; ತಲೆ: ಶಿರ; ತೊಡಸು: ಸಿಕ್ಕಿಸು; ಲಕ್ಕ: ಲಕ್ಷ; ಉಳಿದ: ಮಿಕ್ಕ; ಬಲ: ಸೈನ್ಯ; ಓಲೈಸು: ಪ್ರೀತಿಸು; ಘನ: ಶ್ರೇಷ್ಠ; ಪಲಾಯನ: ಹಿಂದಿರುಗು, ಪರಾರಿ;

ಪದವಿಂಗಡಣೆ:
ಅಳಿದುದ್+ಐನೂರ್+ಆನೆ +ಸಾವಿರ
ಬಲು+ಕುದುರೆ +ರಥ +ಮೂರು +ಸಾವಿರ
ನೆಲಕೆ+ ಕೈವರ್ತಿಸಿತು +ಭೀಮನ +ಹೊಯ್ಲ +ಹೋರಟೆಗೆ
ಬಿಲುಹರಿಗೆ +ಸಬಳದ+ ಪದಾತಿಯ
ತಲೆಯ +ತೊಡಸಿದನ್+ಎಂಟು +ಲಕ್ಕವನ್
ಉಳಿದ +ಬಲವ್+ಓಲೈಸುತಿರ್ದುದು +ಘನ +ಪಲಾಯನವ

ಅಚ್ಚರಿ:
(೧) ಓಡಿದರು ಎಂದು ಹೇಳುವ ಪರಿ – ಉಳಿದ ಬಲವೋಲೈಸುತಿರ್ದುದು ಘನ ಪಲಾಯನವ

ಪದ್ಯ ೨೦: ರಾಜರು ಯಾರನ್ನು ಮತ್ತೆ ಯುದ್ದಕ್ಕೆ ಕರೆದರು?

ಶರಣು ಹೊಕ್ಕುದು ಬಂದು ಮಕುಟದ
ಗರುವರವನೀಪಾಲಕರು ಮೋ
ಹರಕೆ ತೋರ್ಪಟ್ಟವರು ಭಾರಿಯ ಬಿರುದಿನತಿಬಳರು
ದುರುಳ ದೈತ್ಯನ ಬಾಧೆ ಘನ ಪರಿ
ಹರಿಸಲರಿಯವು ಕರ್ಣ ನೀನೇ
ಮರಳಿ ಸೇನೆಯ ರಕ್ಷಿಸೆಂದುದು ನಿಖಿಳಪರಿವಾರ (ದ್ರೋಣ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಕುಟವನ್ನು ಹೊತ್ತ ಮಾನನಿಧಿಗಳಾದ ರಾಜರು, ಸೈನ್ಯದಲ್ಲಿ ಮಹಾವೀರರೆಂದು ಪ್ರಸಿದ್ಧರಾದವರು, ದೊಡ್ಡ ದೊಡ್ಡ ಬಿರುದುಗಳನ್ನುಳ್ಳ ಅತಿ ಬಲರು ಬಂದು, ಈ ದುಷ್ಟದೈತ್ಯನ ಬಾಧೆ ಬಹಳ ಭಯಂಕರವಾಗಿದೆ. ನಮ್ಮಿಂದ ಇದನ್ನು ತಪ್ಪಿಸಲು ಸಾಧ್ಯವಿಲ್ಲ, ಕರ್ಣ ಈ ಸೈನ್ಯವನ್ನು ರಕ್ಷಿತು, ಮತ್ತೆ ಯುದ್ಧಮಾಡು ಎಂದು ಬೇಡಿಕೊಂಡರು.

ಅರ್ಥ:
ಶರಣು: ಆಶ್ರಯ, ವಂದನೆ; ಹೊಕ್ಕು: ಸೇರು; ಬಂದು: ಆಗಮಿಸು; ಮಕುಟ: ಕಿರೀಟ; ಗರುವ: ಶ್ರೇಷ್ಠ; ಅವನೀಪಾಲ: ರಾಜ; ಮೋಹರ: ಯುದ್ಧ; ತೋರು: ಗೋಚರಿಸು; ಭಾರಿ: ದೊಡ್ಡ; ಬಿರುದು: ಗೌರವ ಸೂಚಕ ಪದ; ಅತಿಬಳ: ಪರಾಕ್ರಮಿ; ದುರುಳ: ದುಷ್ಟ; ದೈತ್ಯ: ರಾಕ್ಷಸ; ಬಾಧೆ: ನೋವು, ವೇದನೆ; ಘನ: ದೊಡ್ಡ; ಪರಿಹರಿಸು: ನಿವಾರಿಸು; ಅರಿ: ತಿಳಿ; ಮರಳು: ಹಿಂದಿರುಗು; ಸೇನೆ: ಸೈನ್ಯ; ರಕ್ಷಿಸು: ಕಾಪಾಡು; ನಿಖಿಳ: ಎಲ್ಲಾ; ಪರಿವಾರ: ಬಂಧುಜನ, ಪರಿಜನ;

ಪದವಿಂಗಡಣೆ:
ಶರಣು+ ಹೊಕ್ಕುದು +ಬಂದು +ಮಕುಟದ
ಗರುವರ್+ಅವನೀಪಾಲಕರು +ಮೋ
ಹರಕೆ +ತೋರ್ಪಟ್ಟವರು +ಭಾರಿಯ +ಬಿರುದಿನ್+ಅತಿಬಳರು
ದುರುಳ +ದೈತ್ಯನ +ಬಾಧೆ +ಘನ +ಪರಿ
ಹರಿಸಲ್+ಅರಿಯವು +ಕರ್ಣ +ನೀನೇ
ಮರಳಿ +ಸೇನೆಯ +ರಕ್ಷಿಸೆಂದುದು +ನಿಖಿಳ+ಪರಿವಾರ

ಅಚ್ಚರಿ:
(೧) ಪರಾಕ್ರಮಿಗಳೆಂದು ಹೇಳಲು – ಮಕುಟದ ಗರುವರವನೀಪಾಲಕರು

ಪದ್ಯ ೧: ನಾಲ್ಕನೇ ದಿನದ ಯುದ್ಧವು ಹೇಗೆ ಪ್ರಾರಂಭವಾಯಿತು?

ಕೇಳು ಜನಮೇಜಯ ಧರಿತ್ರೀ
ಪಾಲ ದಿನ ಮೂರಾಯ್ತು ಭೀಷ್ಮನ
ಕಾಳೆಗದೊಳಲ್ಲಿಂದ ಮೇಲಣ ಕಥನಕೌತುಕವ
ಆಲಿಸುವದೈ ಮೂಡಣದ್ರಿಯ
ಮೇಲೆ ಕೆಂಪೆಸೆಯಿತ್ತು ಘನನಿ
ಸ್ಸಾಳವೊದರಿದವೈ ನೃಪಾಲರ ಕಟಕವೆರಡರಲಿ (ಭೀಷ್ಮ ಪರ್ವ, ೭ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಹೀಗೆ ಯುದ್ಧವು ಮೂರನೇ ದಿನಕ್ಕೆ ತಲುಪಿತು. ಮುಂದಿನ ಕಥೆಯು ಬಹು ರೋಚಕವಾಗಿದೆ, ಸೂರ್ಯನು ಪೂರ್ವ ದಿಕ್ಕಿನ ಬೆಟ್ಟದಿಂದ ಹೊರಹೊಮ್ಮಲು ಕೆಂಬೆಳಕು ಮೂಡಿತು, ಆಗ ಎರಡು ಸೈನ್ಯಗಳಲ್ಲೂ ರಣವಾದ್ಯಗಳಾದ ನಿಸ್ಸಾಳ ಮುಂತಾದವು ಮೊಳಗಿದವು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಕಾಳೆಗ: ಯುದ್ಧ; ಮೇಲಣ: ಮುಂದಿನ; ಕೌತುಕ: ಆಶ್ಚರ್ಯ; ಆಲಿಸು: ಕೇಳು; ಮೂಡಣ: ಪೂರ್ವ; ಅದ್ರಿ: ಬೆಟ್ಟ; ಕೆಂಪೆಸೆ: ಕೆಂಪಾದ ಬಣ್ಣವು ತೋರಿತು; ಘನ: ಶ್ರೇಷ್ಠ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಒದರು: ಗರ್ಜಿಸು; ನೃಪಾಲ: ರಾಜ; ಕಟಕ: ಯುದ್ಧ;

ಪದವಿಂಗಡಣೆ:
ಕೇಳು +ಜನಮೇಜಯ+ ಧರಿತ್ರೀ
ಪಾಲ +ದಿನ +ಮೂರಾಯ್ತು +ಭೀಷ್ಮನ
ಕಾಳೆಗದೊಳ್+ಅಲ್ಲಿಂದ +ಮೇಲಣ+ ಕಥನ+ಕೌತುಕವ
ಆಲಿಸುವದೈ +ಮೂಡಣ್+ಅದ್ರಿಯ
ಮೇಲೆ +ಕೆಂಪೆಸೆಯಿತ್ತು+ ಘನ+ನಿ
ಸ್ಸಾಳವ್+ಒದರಿದವೈ+ ನೃಪಾಲರ+ ಕಟಕವ್+ಎರಡರಲಿ

ಅಚ್ಚರಿ:
(೧) ಸೂರ್ಯೋದಯವಾಯಿತು ಎಂದು ಹೇಳುವ ಪರಿ – ಮೂಡಣದ್ರಿಯ ಮೇಲೆ ಕೆಂಪೆಸೆಯಿತ್ತು
(೨) ಕಾಳೆಗ, ಕಟಕ – ಸಮನಾರ್ಥಕ ಪದ

ಪದ್ಯ ೪೮:ಯಾವ ರಾಜರನ್ನು ಭೀಷ್ಮನು ವರ್ಣಿಸಲಿಲ್ಲ ಎಂದು ಶಿಶುಪಾಲ ಹೇಳಿದ?

ಘನನಲಾ ಭಗದತ್ತ ಕಾಂಭೋ
ಜನು ಪದಸ್ಥನಲಾ ವಿರಾಟನ
ತನುಜನೀ ಪಾಂಚಾಲ ಕೇಕಯರೀ ಮಹೀಭುಜರು
ವಿನುತರಲ್ಲಾ ದಂತವಕ್ರನು
ನಿನಗೆ ಕಿರುಕುಳನೇ ಜರಾಸಂ
ಧನ ಸುತನ ನೀನೇಕೆ ಬಣ್ಣಿಸೆ ಭೀಷ್ಮ ಕೇಳೆಂದ (ಸಭಾ ಪರ್ವ, ೧೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ಭಗದತ್ತ ಹೆಚ್ಚಿನವನು, ಕಾಂಭೂಜನು ಉನ್ನತವ್ಯಕ್ತಿ, ವಿರಾಟನಮಗ, ಪಾಂಚಾಲ, ದ್ರುಪದ, ಕೇಕಯ, ದಂತವಕ್ರ ಇವರೆಲ್ಲರೂ ನಿನಗೆ ಚಿಲ್ಲರೆಯವರಾಗಿ ಕಾಣಿಸಿದರೇ? ಹೋಗಲಿ ಜರಾಸಂಧನ ಮಗ ಸಹದೇವನನ್ನೇಕೆ ಹೊಗಳಲಿಲ್ಲ ಎಂದು ಭೀಷ್ಮನನ್ನು ಶಿಶುಪಾಲನು ಕೇಳಿದನು.

ಅರ್ಥ:
ಘನ: ಶ್ರೇಷ್ಠ; ತನುಜ: ಮಗ; ಮಹೀ: ಭೂಮಿ; ಮಹೀಭುಜ: ಪರಾಕ್ರಮಿ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ಕಿರುಕುಳ: ತೊಂದರೆ; ಸುತ: ಮಗ; ಬಣ್ಣಿಸು: ವರ್ಣಿಸು; ಹೇಳು: ತಿಳಿಸು;

ಪದವಿಂಗಡಣೆ:
ಘನನಲಾ +ಭಗದತ್ತ+ ಕಾಂಭೋ
ಜನು +ಪದಸ್ಥನಲ್+ಆ +ವಿರಾಟನ
ತನುಜನ್+ಈ+ ಪಾಂಚಾಲ +ಕೇಕಯರ್+ಈ+ ಮಹೀಭುಜರು
ವಿನುತರಲ್ಲಾ +ದಂತವಕ್ರನು
ನಿನಗೆ+ ಕಿರುಕುಳನೇ+ ಜರಾಸಂ
ಧನ+ ಸುತನ+ ನೀನೇಕೆ+ ಬಣ್ಣಿಸೆ+ ಭೀಷ್ಮ +ಕೇಳೆಂದ

ಅಚ್ಚರಿ:
(೧) ಘನ, ಪದಸ್ಥಲ, ಮಹೀಭುಜ, ವಿನುತ – ಶ್ರೇಷ್ಠರು ಎಂದು ಅರ್ಥೈಸುವ ಪದಗಳ ಬಳಕೆ

ಪದ್ಯ ೧೯: ಕೃಷ್ಣನು ಹೇಗೆ ಪರತರವಸ್ತುವೆಂದೆನಿಸುವನು?

ಸಂಗಿಯೆನಿಸನು ಜಗವ ಹುಟ್ಟಿಸಿ
ನುಂಗಿದೊಡೆ ನಿಷ್ಕರುಣಿಯೆನಿಸನು
ಅಂಗರಕ್ಷೆಯ ಮಾಡಿ ಮೋಹಿತನಲ್ಲ ಮೂಜಗಕೆ
ಜಂಗಮ ಸ್ಥಾವರಕೆ ಚೈತ
ನ್ಯಾಂಗನುತ್ತಮ ಘನಕೆ ಘನನಣು
ಮಿಂಗೆ ತಾನಣುವೆನಿಪ ಪರತರವಸ್ತು ನೋಡೆಂದ (ಉದ್ಯೋಗ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕೃಷ್ಣನು ಜಗತ್ತನ್ನು ಸೃಷ್ಠಿಸಿದ ಮಾತ್ರಕ್ಕೆ ಅವನು ಸಂಗವುಳ್ಳವನೆಂದು ಹೇಳಲಾಗದು, ಪ್ರಳಯಕಾಲದಲ್ಲಿ ಜಗತ್ತನ್ನು ಸಂಹಾರ ಮಾಡಿದಕ್ಕೆ ಅವನನ್ನು ನಿಷ್ಕರುಣಿಯೆಂದೂ ಹೇಳಲಾಗದು, ಹಾಗೆಯೇ ಜಗವನ್ನು ಪಾಲಿಸುವನಾದುದರಿಂದ ಅವನನ್ನು ಮೋಹಿತನೆನಿಸಲಾಗದು. ಎಲ್ಲಾ ಚಲಿಸುವ, ಚಲಿಸದ ವಸ್ತುಗಳ ಚೈತನ್ಯ ಸ್ವರೂಪನು ಇವನೇ. ಇವನು ಮಹತ್ತಾದುದಕ್ಕಿಂತ ಹೆಚ್ಚಿನವನು, ಅಣುವಿಗೆ ಇವನು ಅಣುವು ಮತ್ತು ಈತ ಎಲ್ಲಕಿಂದ ಹೆಚ್ಚಿನ ಪರಬ್ರಹ್ಮ ಸ್ವರೂಪನು ಎಂದು ವಿದುರ ಕೃಷ್ಣನ ವರ್ಣನೆಯನ್ನು ಮಾಡಿದನು.

ಅರ್ಥ:
ಸಂಗಿ: ಒಡನಾಡಿ, ಸೇರಿದುದು; ಜಗ: ಜಗತ್ತು, ಪ್ರಪಂಚ; ಹುಟ್ಟು: ಸೃಷ್ಟಿಸು; ನುಂಗು: ಕಬಳಿಸು, ಒಳಸೇರಿಸು; ನಿಷ್ಕರುಣಿ: ಕರುಣೆಯಿಲ್ಲದವ; ರಕ್ಷೆ: ಕಾಪಾಡು; ಅಂಗ: ಭಾಗ; ಮೋಹ: ಇಷ್ಟ, ಆಸೆ; ಮೂಜಗ: ಮೂರು ಜಗತ್ತು; ಜಂಗಮ: ಚಲಿಸುವ; ಸ್ಥಾವರ: ಚಲಿಸದ; ಚೈತನ್ಯ: ಜೀವದ ಲಕ್ಷಣ; ಉತ್ತಮ: ಶ್ರೇಷ್ಠ; ಘನ: ಹಿರಿಯ, ಶ್ರೇಷ್ಠ; ಅಣು: ಅತ್ಯಂತ ಸೂಕ್ಷ್ಮವಾದ ಕಣ; ಪರತರ: ಶ್ರೇಷ್ಠ; ವಸ್ತು: ಪದಾರ್ಥ, ದ್ರವ್ಯ;

ಪದವಿಂಗಡಣೆ:
ಸಂಗಿಯೆನಿಸನು+ ಜಗವ+ ಹುಟ್ಟಿಸಿ
ನುಂಗಿದೊಡೆ +ನಿಷ್ಕರುಣಿ+ಯೆನಿಸನು
ಅಂಗರಕ್ಷೆಯ +ಮಾಡಿ +ಮೋಹಿತನಲ್ಲ+ ಮೂಜಗಕೆ
ಜಂಗಮ +ಸ್ಥಾವರಕೆ +ಚೈತನ್ಯ
ಅಂಗನ್+ಉತ್ತಮ +ಘನಕೆ +ಘನನ್+ಅಣು
ಮಿಂಗೆ +ತಾನ್+ಅಣುವೆನಿಪ +ಪರತರವಸ್ತು+ ನೋಡೆಂದ

ಅಚ್ಚರಿ:
(೧) ಸಂಗಿ, ನುಂಗಿ – ಪ್ರಾಸ ಪದ
(೨) ಜಂಗಮ, ಸ್ಥಾವರ – ವಿರುದ್ಧ ಪದಗಳು
(೩) ‘ಮ’ ಕಾರದ ತ್ರಿವಳಿ ಪದ – ಮಾಡಿ ಮೋಹಿತನಲ್ಲ ಮೂಜಗಕೆ

ಪದ್ಯ ೪೬: ಊರ ಜನರು ರಾತ್ರಿಯಲ್ಲಿ ಯಾರನ್ನು ನೋಡಿದರು?

ಊರ ಹೊರವಳಯದಲಿದೇನು ಮ
ಹಾ ರಭಸವಿರುಳೆನುತ ಹರಿದುದು
ಪೌರಜನ ಝೋಂಪಿಸುವ ಕೈದೀವಿಗೆಯ ಬೆಳಗಿನಲಿ
ಆರಿವಳು ತಾನೆನುತ ಕಂಡುದು
ದೂರದಲಿ ದಾನವಿಯವಳ ಘ
ನೋರುಗಳ ಸೋಗಿಲಲಿ ಕೈದೊಟ್ಟಿಲ ಕುಮಾರಕನ (ಸಭಾ ಪರ್ವ, ೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ಊರಹೊರಗೆ ಈ ಜೋರಾದ ಶಬ್ದವನ್ನು ಕೇಳಿದ ಊರಜನರು, ಇದೇನಾಯಿತು ಈ ನಡುರಾತ್ರಿಯಲಿ ಎಂದು ನೋಡಲು ಕೈದೀವಿಗೆಗಳನ್ನು ಹಿಡಿದು ಜರೆಯಿದ್ದಲ್ಲಿಗೆ ಬಂದರು. ದೂರದಲ್ಲಿ ರಾಕ್ಷಸಿಯು ಅವಳ ತೊಡೆಗಳ ಮೇಲೆ ಮಗುವನ್ನು ಕೈದೊಟ್ಟಲಿನಲ್ಲಿಟ್ಟುಕೊಂಡದ್ದು ಅವರಿಗೆ ಕಾಣಿಸಿತು.

ಅರ್ಥ:
ಊರು: ಪುರ; ಹೊರವಳಯ: ಹೊರಗಡೆ; ಮಹಾ: ಬಹಳ, ಹೆಚ್ಚು; ರಭಸ: ಜೋರಾದ ಶಬ್ದ; ಇರುಳು: ರಾತ್ರಿ; ಹರಿ: ಪಸರಿಸು, ಹರಡು; ಪೌರಜನ; ಊರಜನ; ಝೋಂಪಿಸು: ಮೈಮರೆ, ಎಚ್ಚರತಪ್ಪು; ದೀವಿಗೆ: ದೀಪ; ಬೆಳಕು: ಪ್ರಭೆ, ಪ್ರಕಾಶ; ಕಂಡು: ನೋಡು; ದೂರ: ಬಹಳ ಅಂತರ; ದಾನವಿ: ರಾಕ್ಷಸಿ; ಘನ:ಗಟ್ಟಿಯಾದುದು; ಉರು: ಅತಿದೊಡ್ಡ; ತೊಟ್ಟಿಲು: ಮಕ್ಕಳು ಮಲಗುವ ಜಾಗ; ಕುಮಾರ: ಮಗು;

ಪದವಿಂಗಡಣೆ:
ಊರ +ಹೊರವಳಯದಲ್+ಇದೇನು+ ಮ
ಹಾ +ರಭಸವ್+ಇರುಳ್+ಎನುತ+ ಹರಿದುದು
ಪೌರಜನ+ ಝೋಂಪಿಸುವ +ಕೈದೀವಿಗೆಯ+ ಬೆಳಗಿನಲಿ
ಆರಿವಳು +ತಾನ್+ಎನುತ+ ಕಂಡುದು
ದೂರದಲಿ+ ದಾನವಿಯವಳ+ ಘನ
ಉರುಗಳ+ ಸೋಗಿಲಲಿ+ ಕೈದೊಟ್ಟಿಲ+ ಕುಮಾರಕನ

ಅಚ್ಚರಿ:
(೧) ಊರ, ಪೌರ – ಸಮನಾರ್ಥಕ ಪದ
(೨) ಘನ, ಮಹಾ, ಉರು – ಹೆಚ್ಚು ಎನ್ನುವ ಅರ್ಥವನ್ನು ಕೊಡುವ ಪದ

ಪದ್ಯ ೨೫: ಧರ್ಮರಾಯನು ಕೃಷ್ಣನಿಗೆ ಯಾವ ಪ್ರಶ್ನೆಯನ್ನು ಕೇಳಿದನು?

ಈಸು ಘನವೇ ಕೃಷ್ಣ ಯಾಗ
ದ್ವೇಷಿಗಳು ಪಿರಿದಾಗಲೆವಗಿ
ಸ್ನೈಸಲೇ ವರರಾಜಸೂಯಾಧ್ವರಕೆ ಸಂನ್ಯಾಸ
ಈಸು ದೈತ್ಯರು ನಿನ್ನ ಕೈಯಲಿ
ಘಾಸಿಯಾದರು ಮಗಧನೊಬ್ಬನು
ಮೀಸಲಳಿಯನು ಗಡ ಮಹಾದೇವೆಂದನಾ ಭೂಪ (ಸಭಾ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಧರ್ಮರಾಯನು ಆಶ್ಚರ್ಯಚಕಿತನಾಗಿ, “ಕೃಷ್ಣ, ಜರಾಸಂಧನು ಅಷ್ಟು ಬಲಶಾಲಿಯೆ? ಯಾಗಕ್ಕೆ ಇಂತಹವರು ಹೆಚ್ಚಾದರೆ, ಯಾಗಕ್ಕೆ ವಿರೋಧವೇ ಹೆಚ್ಚಾಗಿ, ನಾವು ಯಾಗವನ್ನು ಕೈಬಿಡುವ ಹಾಗೆಯೆ, ಆದರೆ ಇಷ್ಟು ರಾಕ್ಷಸರನ್ನು ನೀನು ಸಂಹರಿಸಿದ ಬಳಿಕ ಜರಾಸಂಧನನ್ನು ನೀನು ವಧಿಸಲಾಗದಿರುವುದಾದರು ಹೇಗೆ ಶಿವಾ ಶಿವಾ” ಎಂದು ಧರ್ಮರಾಯನು ಹೇಳಿದನು.

ಅರ್ಥ:
ಈಸು: ಇಷ್ಟು; ಘನ: ಶ್ರೇಷ್ಠ; ಯಾಗ: ಕ್ರತು; ದ್ವೇಷ: ಅಸೂಯೆ; ಪಿರಿ: ಹಿರಿದು; ಐಸಲೇ: ಅಲ್ಲವೆ; ವರ: ಶ್ರೇಷ್ಠ; ಸಂನ್ಯಾಸ: ವಿರಕ್ತ, ಎಲ್ಲವನ್ನು ತ್ಯಜಿಸಿದವ; ದೈತ್ಯ: ರಾಕ್ಷಸ; ಕೈ: ಹಸ್ತ, ಕರ; ಘಾಸಿ: ವಿಘ್ನ; ಮೀಸಲು:ಮುಡಿಪು; ಗಡ:ಅಲ್ಲವೆ; ಭೂಪ: ರಾಜ;

ಪದವಿಂಗಡಣೆ:
ಈಸು +ಘನವೇ +ಕೃಷ್ಣ +ಯಾಗ
ದ್ವೇಷಿಗಳು +ಪಿರಿದಾಗಲ್+ಎವಗಿಸ್
ಎನ್+ಐಸಲೇ +ವರ+ರಾಜಸೂಯಾಧ್ವರಕೆ+ ಸಂನ್ಯಾಸ
ಈಸು +ದೈತ್ಯರು +ನಿನ್ನ +ಕೈಯಲಿ
ಘಾಸಿಯಾದರು +ಮಗಧನ್+ ಒಬ್ಬನು
ಮೀಸಲ್+ಅಳಿಯನು +ಗಡ +ಮಹಾದೇವೆಂದನಾ +ಭೂಪ

ಅಚ್ಚರಿ:
(೧) ಈಸು – ೧, ೪ ಸಾಲಿನ ಮೊದಲ ಪದ
(೨) ಘಾಸಿ, ಘನ – “ಘ” ಕಾರದ ಪದಗಳ ಬಳಕೆ
(೩) ಘನ, ವರ – ಸಮನಾರ್ಥಕ ಪದ

ಪದ್ಯ ೪೧: ಅಂಗಾರವರ್ಮನು ಹೇಳಿದ ಶಾಸ್ತ್ರದ ಸಾರವೇನು?

ಮುನಿಯದಿರು ಕಲಿಪಾರ್ಥ ನಿನ್ನಯ
ಘನತರದ ವಿಕ್ರಮಕೆ ದಿವಿಜರು
ದನುಜ ಭುಜಗರು ನೆರೆಯರುಳಿದೀ ನರರ ಪಾಡೇನು
ಅನುಪಮಾನ ಕ್ಷತ್ರವಹ್ನಿಗೆ
ವಿನುತವಿಮಲ ಬ್ರಹ್ಮತೇಜೋ
ಘನಸಮೀರ ಸಹಾಯವಾಗಲಸಾಧ್ಯವೇನೆಂದ (ಆದಿ ಪರ್ವ, ೧೧ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅಂಗಾರವರ್ಮನು ಅರ್ಜುನನಿಗ ಹೀಗೆ ಹೇಳಿದನು, ಪಾರ್ಥ ಕೋಪಿಸಿಕೊಳ್ಳಬೇಡ, ನಿನ್ನಯ ಪರಾಕ್ರಮಕೆ ದಿವಿಜರು, ರಾಕ್ಷಸರು, ನಾಗರು, ಯಾರು ಸರಿಸಮಾನರಲ್ಲ, ಹೀಗಿರುವಾಗ ಸಾಮಾನ್ಯ ಮನುಷ್ಯರ ಪಾಡೇನು? ಸರಿಸಾಟಿಯಿಲ್ಲದ, ಉಪಮಾನವಿಲ್ಲದ ಈ ಕ್ಷಾತ್ರತೇಜಸ್ಸೆಂಬ ಅಗ್ನಿಗೆ ನಿರ್ಮಲವಾದ ಬ್ರಹ್ಮತೇಜಸ್ಸೆಂಬ ವಾಯುವು ಸೇರಿದರೆ ನಿಮಗೆ ಅಸಾಧ್ಯಯಾವುದು ಇಲ್ಲ.

ಅರ್ಥ:
ಮುನಿಯದಿರು: ಕೋಪಗೊಳ್ಳಬೇಡ; ಕಲಿ: ವೀರ; ಪಾರ್ಥ: ಅರ್ಜುನ; ಘನ: ಗಟ್ಟಿ, ಶ್ರೇಷ್ಠ; ವಿಕ್ರಮ: ಪರಾಕ್ರಮ, ಶೌರ್ಯ; ದಿವಿಜ: ದೇವತೆ; ದನುಜ: ರಾಕ್ಷಸ; ಭುಜಗ: ಹಾವು; ನೆರೆ: ಪಕ್ಕ, ಪಾರ್ಶ್ವ; ನರ: ಮನುಷ್ಯ; ಪಾಡು: ಕಥೆ; ಅನುಪಮ: ಉತ್ಕೃಷ್ಟವಾದ; ಕ್ಷತ್ರ: ಕ್ಷತ್ರಿಯ; ವಹ್ನಿ: ಅಗ್ನಿ; ವಿನುತ: ಶ್ರೇಷ್ಠವಾದ; ವಿಮಲ: ಶುದ್ಧ, ನಿರ್ಮಲ; ಬ್ರಹ್ಮ: ತತ್ತ್ವಜ್ಞಾನ; ತೇಜಸ್ಸು: ಕಾಂತಿ; ಸಮೀರ: ಗಾಳಿ, ವಾಯು; ಸಹಾಯ: ನೆರವು; ಅಸಾಧ್ಯ: ಸಾಧ್ಯವಿಲ್ಲದು;

ಪದವಿಂಗಡನೆ:
ಮುನಿಯದಿರು+ ಕಲಿ+ಪಾರ್ಥ +ನಿನ್ನಯ
ಘನತರದ+ ವಿಕ್ರಮಕೆ+ ದಿವಿಜರು
ದನುಜ +ಭುಜಗರು+ ನೆರೆಯರ್+ಉಳಿದ್+ಈ+ ನರರ+ ಪಾಡೇನು
ಅನುಪಮಾನ +ಕ್ಷತ್ರ+ವಹ್ನಿಗೆ
ವಿನುತ+ವಿಮಲ +ಬ್ರಹ್ಮ+ತೇಜೋ
ಘನ+ಸಮೀರ +ಸಹಾಯವಾಗಲ್+ಅಸಾಧ್ಯ+ವೇನೆಂದ

ಅಚ್ಚರಿ:
(೧) ಘನ – ೨, ೬ ಸಾಲಿನ ಮೊದಲ ಪದ
(೨) ದಿವಿಜ, ದನುಜ, ಭುಜಗ – ಜ ಕಾರ ಹೊಂದಿರುವ ಪದಗಳು
(೩) ವಿಕ್ರಮ, ಕಲಿ – ಸಮಾನಾರ್ಥಕ ಪದ

ಪದ್ಯ ೬೬: ಅರಗಿನ ಮನೆ ಕಾರ್ಯಕ್ಕೆ ಯಾರನ್ನು ನೇಮಿಸಿದನು?

ಜನಕನನು ಬೀಳ್ಕೊಂಡು ಕೌರವ
ಜನಪ ತನ್ನರಮನೆಯ ಸಚಿವರೊ
ಳನುಪಮಿತ ವಿಶ್ವಾಸ ಸೂಚಕನನು ಪುರೋಚನನ
ನೆನೆದ ಕೌರವ ರಾಜಕಾರ್ಯದ
ಘನವನರುಹಿ ಸಮಗ್ರ ಧನ ಸಾ
ಧನವ ಜೋಡಿಸಿಕೊಟ್ಟು ಕಳುಹಿದನವನ ಗುಪ್ತದಲಿ (ಆದಿ ಪರ್ವ, ೮ ಸಂಧಿ, ೬೬ ಪದ್ಯ)

ತಾತ್ಪರ್ಯ:
ತಂದೆಯ ಬೆಂಬಲ ಸಿಕ್ಕ ಮೇಲೆ, ದುರ್ಯೋಧನನು ತಂದೆಯನ್ನು ಬೀಳ್ಕೊಟ್ಟು, ತನ್ನ ಅರಮನೆಯ ಅತ್ಯಂತ ಆಪ್ತ ಸಚಿವರನಾದ ಪುರೋಚನನನ್ನು ಈ ಕಾರ್ಯಕ್ಕೆ ನೇಮಿಸಿ, ಮಾಡಬೇಕಾದ ಅತ್ಯಂತ ಘನ,ಭಯಂಕರವಾದ ರಾಜಕಾರ್ಯವನ್ನು ವಿವರಿಸಿ, ಅದಕ್ಕೆ ಅಗತ್ಯವಾದ ಧನವನ್ನು, ಸಾಧನಗಳನ್ನು ಜೋಡಿಸಿಕೊಟ್ಟು ಅತ್ಯಂತ ಗುಪ್ತ ರೀತಿಯಲ್ಲಿ ಕಳುಹಿಸಿದನು.

ಅರ್ಥ:
ಜನಕ: ತಂದೆ; ಜನಪ: ರಾಜ; ಅರಮನೆ: ಆಲಯ; ಸಚಿವ: ಮಂತ್ರಿ; ಅನುಪಮ: ಅಸಮಾನ; ವಿಶ್ವಾಸ: ನಂಬಿಕೆ, ಭರವಸೆ; ಸೂಚಕ: ಸುಳಿವು, ಸೂಚನೆ; ನೆನೆ: ಜ್ಞಾಪಿಸಿಕೊ; ಕಾರ್ಯ: ಕೆಲಸ; ಘನ: ಭಾರ; ಅರುಹಿ: ತಿಳಿಸಿ; ಸಮಗ್ರ: ಸಕಲ; ಧನ:ದುಡ್ಡು; ಸಾಧನ: ಸಾಮಗ್ರಿ, ಉಪಕರಣ; ಜೋಡಿಸು: ಹೊಂದಿಸು;

ಪದವಿಂಗಡನೆ:
ಜನಕನನು+ ಬೀಳ್ಕೊಂಡು +ಕೌರವ
ಜನಪ+ ತನ್ನ್+ಅರಮನೆಯ+ ಸಚಿವರೊಳ್
ಅನುಪಮಿತ +ವಿಶ್ವಾಸ+ ಸೂಚಕನನು+ ಪುರೋಚನನ
ನೆನೆದ +ಕೌರವ+ ರಾಜ+ಕಾರ್ಯದ
ಘನವನ್+ಅರುಹಿ+ ಸಮಗ್ರ+ ಧನ+ ಸಾ
ಧನವ +ಜೋಡಿಸಿ+ಕೊಟ್ಟು +ಕಳುಹಿದನ್+ಅವನ +ಗುಪ್ತದಲಿ

ಅಚ್ಚರಿ:
(೧) ಜನಕ, ಜನಪ – ‘ಜನ’ ಪದದಿಂದ ಕೂಡಿರುವ ೧, ೨ ಸಾಲಿನ ಮೊದಲ ಪದಗಳು
(೨) ಪುರೋಚನನ ವಿವರಣೆ: ಅನುಪಮ, ಅಮಿತ ವಿಶ್ವಾಸ, ಸೂಚಕ
(೩) ಘನವ, ಧನವ – “ನವ” ಪದದಿಂದ ಕೊನೆಗೊಳ್ಳುವ, ೫, ೬ ಸಾಲಿನ ಮೊದಲ ಪದಗಳು