ಪದ್ಯ ೩೧: ದ್ರೋಣನು ತಲೆದೂಗಲು ಕಾರಣವೇನು?

ಅರಿಬಲದ ಥಟ್ಟಣೆಯ ಬಿರುಬಿನ
ಬರವನೀಕ್ಷಿಸಿ ಪೂತು ಪಾಂಚಾ
ಲರ ಸಘಾಡಿಕೆ ಸಾಹಸಿಕರೈ ಹಾ ಮಹಾದೇವ
ದೊರೆಯಲೇ ಬಳಿಕೇನು ಪಾಂಡವ
ರರಸಿಯಯ್ಯನು ದ್ರುಪದನಲ್ಲಾ
ಹರಯೆನುತ ಗಹಗಹಿಸಿ ತಲೆದೂಗಿದನು ಕಲಿದ್ರೋಣ (ದ್ರೋಣ ಪರ್ವ, ೧೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಶತ್ರು ಸೈನ್ಯದ ಆಗಮನದ ಬಿರುಸನ್ನು ನೋಡಿ, ದ್ರೋನನು ತಲೆದೂಗಿ ಗಹಗಹಿಸಿ ನಕ್ಕು, ಭಲೇ ಪಾಂಚಾಲರ ಜೋರನ್ನು ನೋಡು, ಶಿವ ಶಿವಾ ಇವರು ಮಹಾಸಾಹಸಿಗರು. ದ್ರುಪದನು ಎಷ್ಟೇ ಆಗಲಿ ದೊರೆ, ಮೇಲಾಗಿ ಪಾಂಡವರ ಮಾವ ಎಂದು ತಲೆದೂಗಿದನು.

ಅರ್ಥ:
ಅರಿ: ವೈರಿ; ಬಲ: ಸೈನ್ಯ; ಥಟ್ಟಣೆ: ಗುಂಪು; ಬಿರುಬು: ಆವೇಶ; ಬರವು: ಆಗಮನ; ಈಕ್ಷಿಸು: ನೋಡು; ಪೂತು: ಭಲೇ; ಸಘಾಡ: ರಭಸ; ಸಾಹಸ: ಪರಾಕ್ರಮ; ದೊರೆ: ರಾಜ; ಬಳಿಕ: ನಂತರ; ಅರಸಿ: ರಾಣಿ; ಅಯ್ಯ: ತಂದೆ; ಗಹಗಹಿಸು: ನಗು; ತೂಗು: ಅಲ್ಲಾಡಿಸು; ತಲೆದೂಗು: ಒಪ್ಪಿಗೆ ಸೂಚಿಸು; ಕಲಿ: ಶೂರ;

ಪದವಿಂಗಡಣೆ:
ಅರಿಬಲದ+ ಥಟ್ಟಣೆಯ +ಬಿರುಬಿನ
ಬರವನ್+ಈಕ್ಷಿಸಿ +ಪೂತು +ಪಾಂಚಾ
ಲರ +ಸಘಾಡಿಕೆ+ ಸಾಹಸಿಕರೈ +ಹಾ +ಮಹಾದೇವ
ದೊರೆ+ಅಲೇ +ಬಳಿಕೇನು+ ಪಾಂಡವರ್
ಅರಸಿ+ಅಯ್ಯನು +ದ್ರುಪದನಲ್ಲಾ
ಹರಯೆನುತ +ಗಹಗಹಿಸಿ+ ತಲೆದೂಗಿದನು +ಕಲಿದ್ರೋಣ

ಅಚ್ಚರಿ:
(೧) ಜೋಡಿ ಪದಗಳು – ಬಿರುಬಿನಬರವನೀಕ್ಷಿಸಿ; ಪೂತು ಪಾಂಚಾಲರ; ಸಘಾಡಿಕೆ ಸಾಹಸಿಕರೈ
(೨) ದ್ರುಪದನನ್ನು ಕರೆದ ಪರಿ – ಪಾಂಡವರರಸಿಯಯ್ಯನು

ಪದ್ಯ ೫೪: ತನ್ನೆರಡು ಕೈಗಳು ಹೋದ ಮೇಲೆ ಅಭಿಮನ್ಯುವು ಏನು ಹೇಳಿದನು?

ಸರಳು ನೆಡಲುಬ್ಬೆದ್ದು ಬೊಬ್ಬಿರಿ
ದುರವಣಿಸಿ ಬರೆ ದಿವ್ಯಶರದಲಿ
ಕರವೆರಡ ಹರಿಯೆಚ್ಚಡಾಗಳೆ ಕೆಡೆದವವನಿಯಲಿ
ಇರದೆ ಗಹಗಹಿಸಿದನು ಕೇಳಲೆ
ಮರುಳೆ ಸೂತಜ ಕೈಮುರಿಯೆ ಸಂ
ಗರದ ಸಿರಿ ಹಿಂಗುವಳೆ ತನ್ನನೆನುತ್ತ ಗರ್ಜಿಸಿದ (ದ್ರೋಣ ಪರ್ವ, ೬ ಸಂಧಿ, ೫೪ ಪದ್ಯ)

ತಾತ್ಪರ್ಯ:
ಮೈಯಲ್ಲಿ ಬಾಣಗಳು ನೆಟ್ಟರೂ ಅಭಿಮನ್ಯುವು ಉತ್ಸಾಹದಿಂದ ಉಬ್ಬಿ ಬೊಬ್ಬಿರಿದು ಕರ್ಣನ್ ಮೇಲೆ ಹೋರಾಡಲು ಹೋದನು. ಕರ್ಣನು ದಿವ್ಯ ಬಾಣಗಳಿಂದ ಅವನೆರಡು ಕೈಗಳನ್ನು ಕತ್ತರಿಸಲು ಅಭಿಮನ್ಯುವು ನೆಲಕ್ಕೆ ಬಿದ್ದು ಮೇಲೆದ್ದು ಗಹಗಹಿಸುತ್ತಾ ನಕ್ಕು, ಎಲವೋ ಮೂಢ ಕರ್ಣ, ನೀನು ನನ್ನ ಕೈಗಳನ್ನು ಕತ್ತರಿಸಿದರೆ, ಜಯಲಕ್ಷ್ಮೀ ನನ್ನನ್ನು ಬಿಡುವಳೇ ಎಂದು ಗರ್ಜಿಸಿದನು.

ಅರ್ಥ:
ಸರಳು: ಬಾಣ; ನೆಡು: ನೆಟ್ಟು, ಚುಚ್ಚು; ಉಬ್ಬೀದ್ದು: ಹೆಚ್ಚಾಗು; ಬೊಬ್ಬಿರಿ: ಗರ್ಜಿಸು; ಉರವಣಿಸು: ಆತುರಿಸು; ಬರೆ: ತೀಡು; ದಿವ್ಯ: ಶ್ರೇಷ್ಠ; ಶರ: ಬಾಣ; ಕರ: ಹಸ್ತ; ಹರಿ: ಕಡಿ; ಎಚ್ಚು: ಬಾಣ ಪ್ರಯೋಗ ಮಾಡು; ಕೆಡೆ: ಬೀಳು; ಅವನಿ: ಭೂಮಿ; ಗಹಗಹಿಸು: ನಗು; ಕೇಳು: ಆಲಿಸು; ಮರುಳ: ಮೂಢ; ಸೂತಜ: ಸೂತಪುತ್ರ (ಕರ್ಣ); ಕೈ: ಹಸ್ತ; ಮುರಿ: ಕಡಿ; ಸಂಗರ: ಯುದ್ಧ; ಸಿರಿ: ಐಶ್ವರ್ಯ; ಹಿಂಗು: ಬತ್ತು; ಗರ್ಜಿಸು: ಆರ್ಭಟ;

ಪದವಿಂಗಡಣೆ:
ಸರಳು +ನೆಡಲ್+ಉಬ್ಬೆದ್ದು +ಬೊಬ್ಬಿರಿದ್
ಉರವಣಿಸಿ +ಬರೆ +ದಿವ್ಯ+ಶರದಲಿ
ಕರವೆರಡ +ಹರಿ+ಎಚ್ಚಡ್+ಆಗಳೆ+ ಕೆಡೆದವ್+ಅವನಿಯಲಿ
ಇರದೆ +ಗಹಗಹಿಸಿದನು +ಕೇಳಲೆ
ಮರುಳೆ +ಸೂತಜ +ಕೈಮುರಿಯೆ+ ಸಂ
ಗರದ+ ಸಿರಿ+ ಹಿಂಗುವಳೆ +ತನ್ನನ್+ಎನುತ್ತ +ಗರ್ಜಿಸಿದ

ಅಚ್ಚರಿ:
(೧) ಜಯವು ನನ್ನದೇ ಎಂದು ಹೇಳುವ ಪರಿ – ಸಂಗರದ ಸಿರಿ ಹಿಂಗುವಳೆ ತನ್ನನೆನುತ್ತ ಗರ್ಜಿಸಿದ

ಪದ್ಯ ೧೬: ಭೀಷ್ಮರೇಕೆ ಗಹಗಹಿಸಿದರು?

ಆಳು ಕುದುರೆಯ ಬೀಯಮಾಡಿ ನೃ
ಪಾಲ ಮಾಡುವುದೇನು ದೊರೆಗಳು
ಕಾಳೆಗಕೆ ಮೈದೋರಬಾರದೆ ಭೀಮ ಫಲುಗುಣರು
ಚಾಳ ನೂಕಿಸಿ ಹೊತ್ತುಗಳೆವರು
ಹೇಳಿ ಫಲವೇನಿನ್ನು ರಣ ಹೀ
ಹಾಳಿ ತಮಗಿಲ್ಲೆಂದು ಗಹಗಹಿಸಿದನು ಕಲಿಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೧೬ ಪದ್ಯ)

ತಾತ್ಪರ್ಯ:
ಚತುರಂಗ ಸೈನ್ಯದ ಸಂಹಾರ ಮಾಡಿಸಿ, ದೊರೆಗಳು ಮಾಡುತ್ತಿರುವುದಾದರೂ ಏನು? ಭೀಮಾರ್ಜುನರು ಯುದ್ಧಕ್ಕೆ ಬರಬಾರದೇ? ಅವರು ಕ್ಷುಲ್ಲಕರನ್ನು ಮುಂದೂಡಿ ಹೊತ್ತು ಕಳೆಯುತ್ತಿದ್ದಾರಲ್ಲಾ, ಯುದ್ಧದ ಛಲ ಅವರಿಗಿಲ್ಲವೇ ಎಂದು ಭೀಷ್ಮನು ಗಹಗಹಿಸಿ ನಕ್ಕನು.

ಅರ್ಥ:
ಆಳು: ಸೈನಿಕ; ಕುದುರೆ: ಅಶ್ವ; ಬೀಯ: ವ್ಯಯ, ಹಾಳು; ನೃಪಾಲ: ರಾಜ; ದೊರೆ: ರಾಜ; ಕಾಳೆಗ: ಯುದ್ಧ; ಮೈದೋರು: ಕಾಣಿಸು, ಎದುರು ನಿಲ್ಲು; ಚಾಳ: ಪ್ರಯೋಜನವಿಲ್ಲದ, ಒಂದೇ ಬಗೆಯ ಮನೆಗಳ ಸಾಲು; ನೂಕು: ತಳ್ಳು; ಹೊತ್ತು: ಸಮಯ; ಕಳೆ: ವ್ಯಯಿಸು; ಹೇಳು: ತಿಳಿಸು; ಫಲ: ಪ್ರಯೋಜನ; ರಣ: ಯುದ್ಧ; ಹೀಹಾಳಿ: ತೆಗಳಿಕೆ; ಗಹಗಹಿಸು: ಗಟ್ಟಿಯಾಗಿ ನಗು; ಕಲಿ: ಶೂರ;

ಪದವಿಂಗಡಣೆ:
ಆಳು +ಕುದುರೆಯ +ಬೀಯಮಾಡಿ +ನೃ
ಪಾಲ +ಮಾಡುವುದೇನು +ದೊರೆಗಳು
ಕಾಳೆಗಕೆ +ಮೈದೋರಬಾರದೆ+ ಭೀಮ +ಫಲುಗುಣರು
ಚಾಳ +ನೂಕಿಸಿ +ಹೊತ್ತು+ಕಳೆವರು
ಹೇಳಿ +ಫಲವೇನಿನ್ನು +ರಣ +ಹೀ
ಹಾಳಿ +ತಮಗಿಲ್ಲೆಂದು +ಗಹಗಹಿಸಿದನು +ಕಲಿ+ಭೀಷ್ಮ

ಅಚ್ಚರಿ:
(೧) ರೂಪಕದ ಪ್ರಯೋಗ – ಚಾಳ ನೂಕಿಸಿ ಹೊತ್ತುಗಳೆವರು ಹೇಳಿ ಫಲವೇನಿನ್ನು

ಪದ್ಯ ೩೭: ಉತ್ತರನು ಅರ್ಜುನನಿಗೆ ಏನು ಹೇಳಿದ?

ಹೊಗರ ಹೊರಳಿಯ ಹೊಳೆವ ಬಾಯ್ಧಾ
ರೆಗಳತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹಗಹಿಸಿ
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆ ಶಸ್ತ್ರ ಸೀಮೆಯಲಿ (ವಿರಾಟ ಪರ್ವ, ೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಆಯುಧಗಳ ಅಲಗಿನ ಧಾರೆಗಳ ಕಾಂತಿಯ ಗುಚ್ಚಗಳು ಒಂದು ಕಡೆ ಥಳಥಳಿಸಿದರೆ, ಅದನ್ನು ನೋಡಿ ನಗುವಂತೆ ಬಂಗಾರದ ಹಿಡಿಕೆಗಳ ಕಾಂತಿಯು ಝಗಝಗಿಸಿತು. ಉತ್ತರನು ಕಣ್ಮುಚ್ಚಿ ಅರ್ಜುನನಿಗೆ ಕೈಮುಗಿದು ತಂದೆ ನನ್ನನ್ನು ಇಳಿಸಿಕೊಂಡು ಬಿಡು, ನಾನು ಶಸ್ತ್ರಗಳ ಸೀಮೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂದನು.

ಅರ್ಥ:
ಹೊಗರು: ಕಾಂತಿ, ಪ್ರಕಾಶ; ಹೊರಳಿ: ಗುಂಪು, ಸಮೂಹ; ಹೊಳೆ: ಪ್ರಕಾಶ; ಧಾರೆ: ಪ್ರವಾಹ; ತಳಪದ: ಕೆಳಗೆ, ಒಂದು ಬದಿ; ಕಾಂತಿ: ಪ್ರಕಾಶ; ಹೊನ್ನು: ಚಿನ್ನ; ಹೊನ್ನಾಯುಗ: ಬಂಗಾರದ ಹಿಡಿಕೆ; ಬಹಳ: ತುಂಬ; ಪ್ರಭೆ: ಕಾಂತಿ; ಶರ: ಬಾಣ; ಶರೌಘ: ಬಾಣಗಳ ಸಮೂಹ; ಶರೌಘಾನಲ: ಬಾಣಗಳ ಸಮೂಹದಿಂದ ಹುಟ್ಟಿದ ಬೆಂಕಿ; ಗಹಗಹಿಸು: ಗಟ್ಟಿಯಾಗಿ ನಗು; ಝಗಝಗಿಸು: ಹೊಳೆ, ಪ್ರಕಾಶಿಸು; ಕಣ್ಣು: ನಯನ; ಮುಚ್ಚು: ಮರೆಮಾಡು, ಹೊದಿಸು; ಕೈ: ಹಸ್ತ; ಕೈಮುಗಿ: ನಮಸ್ಕರಿಸು; ಸಾರಥಿ: ಸೂತ; ತೆಗೆದುಕೊ: ಹೊರತರು; ತಂದೆ: ಅಪ್ಪ, ಅಯ್ಯ; ಸಿಲುಕು: ಬಂಧನಕ್ಕೊಳಗಾದುದು; ಶಸ್ತ್ರ: ಆಯುಧ; ಸೀಮೆ: ಎಲ್ಲೆ, ಗಡಿ;

ಪದವಿಂಗಡಣೆ:
ಹೊಗರ+ ಹೊರಳಿಯ +ಹೊಳೆವ +ಬಾಯ್
ಧಾರೆಗಳ+ತಳಪದ+ ಕಾಂತಿ +ಹೊನ್ನಾ
ಯುಗದ +ಬಹಳ +ಪ್ರಭೆ +ಶರೌಘ+ಅನಲನ +ಗಹಗಹಿಸಿ
ಝಗಝಗಿಸೆ+ ಕಣ್ಮುಚ್ಚಿ +ಕೈಗಳ
ಮುಗಿದು +ಸಾರಥಿಗೆಂದನ್+ಎನ್ನನು
ತೆಗೆದುಕೊಳ್ಳೈ +ತಂದೆ +ಸಿಲುಕಿದೆ +ಶಸ್ತ್ರ +ಸೀಮೆಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಗರ ಹೊರಳಿಯ ಹೊಳೆವ
(೨) ಜೋಡಿ ಪದಗಳು – ಗಹಗಹಿಸಿ, ಝಗಝಗಿಸಿ

ಪದ್ಯ ೨: ಶಕುನಿ ಏಕೆ ಗಹಗಹಿಸಿದನು?

ತೆಗೆವೆನೇ ಸಾರಿಗಳ ನಿನ್ನೀ
ನಗೆಮೊಗದ ಸಿರಿ ಸೀದು ಕರಿಯಾ
ಯ್ತುಗುಳುತಿದೆ ನಿನ್ನನುಜರಿಂಗಿತ ರೋಷಪಾವಕನ
ಸೊಗಸು ಬೀಯದು ರಪಣವಿಲ್ಲದ
ಬೆಗಡು ನೋಯದು ಕ್ಷತ್ರಧರ್ಮದ
ತಗಹು ಸಾಯದು ನಿನಗೆನುತ ಗಹಗಹಿಸಿದನು ಶಕುನಿ (ಸಭಾ ಪರ್ವ, ೧೫ ಸಂಧಿ, ೨ ಪದ್ಯ)

ತಾತ್ಪರ್ಯ:
ಶಕುನಿಯು ಧರ್ಮರಾಯನ ಸ್ಥಿತಿಯನ್ನು ನೋಡಿ ಹಂಗಿಸುತ್ತಾ, ಎಲೈ ಧರ್ಮನಂದನ ನಿನ್ನ ನಗುಮುಖದ ಸೊಂಪು ಸೀದುಹೋಗಿ ಕಪ್ಪಾಗಿದೆ. ನಿನ್ನ ತಮ್ಮಂದಿರಿಗೆ ಬಂದಿರುವ ರೋಷಾಗ್ನಿಯ ಹೆಚ್ಚಳವೂ ಕಡಿಮೆಯಾಗಿಲ್ಲ. ಆದರೆ ಸಹಾಯವಿಲ್ಲದೆ ಭಯವು ಹೋಗುವುದಿಲ್ಲ. ನಿನಗಾದರೋ ಕ್ಷತ್ರಿಯಧರ್ಮದ ಸಂಗವು ಬಿಡುವುದಿಲ್ಲ. ಆದ್ದರಿಂದ ಈ ಪಗಡೆಕಾಯಿಯನ್ನು ತೆಗೆದಿಡಲೇ? ಎಂದು ಶಕುನಿಯು ವ್ಯಂಗವಾಗಿ ಧರ್ಮಜನನ್ನು ಕೇಳಿದನು.

ಅರ್ಥ:
ತೆಗೆ: ಈಚೆಗೆ ತರು, ಹೊರತರು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ನಗೆಮೊಗ: ಸಂತಸ; ಸಿರಿ: ಐಶ್ವರ್ಯ; ಸೀದು: ಸುಟ್ಟು ಕರಕಲಾಗು; ಕರಿ: ಕಪ್ಪು; ಉಗುಳು: ಹೊರಹಾಕು; ಅನುಜ: ಸಹೋದರ; ಇಂಗಿತ: ಆಶಯ, ಅಭಿಪ್ರಾಯ; ರೋಷ: ಕೋಪ; ಪಾವಕ: ಅಗ್ನಿ, ಬೆಂಕಿ; ಸೊಗಸು: ಚೆಲುವು; ಬೀಯ: ವ್ಯಯ, ಹಾಳು, ನಷ್ಟ; ರಪಣ: ಜೂಜಿನಲ್ಲಿ ಒಡ್ಡುವ ಪಣ, ಐಶ್ವರ್ಯ; ಬೆಗಡು:ಭಯ, ಅಂಜಿಕೆ, ಬೆರಗಾಗು; ನೋವು: ಬೇನೆ, ಶೂಲೆ; ಕ್ಷತ್ರ: ರಾಜ; ಧರ್ಮ: ಧಾರಣ ಮಾಡಿದುದು, ನಿಯಮ; ತಗಹು: ಅಡ್ಡಿ, ತಡೆ, ನಿರ್ಬಂಧ; ಸಾಯದು: ಮಡಿಯದು; ಗಹಗಹಿಸು: ಗಟ್ಟಿಯಾಗಿ ನಗು;

ಪದವಿಂಗಡಣೆ:
ತೆಗೆವೆನೇ+ ಸಾರಿಗಳ +ನಿನ್ನೀ
ನಗೆಮೊಗದ+ ಸಿರಿ+ ಸೀದು +ಕರಿಯಾಯ್ತ್
ಉಗುಳುತಿದೆ+ ನಿನ್+ಅನುಜರ್+ಇಂಗಿತ +ರೋಷ+ಪಾವಕನ
ಸೊಗಸು +ಬೀಯದು +ರಪಣವಿಲ್ಲದ
ಬೆಗಡು+ ನೋಯದು +ಕ್ಷತ್ರಧರ್ಮದ
ತಗಹು +ಸಾಯದು +ನಿನಗೆನುತ+ ಗಹಗಹಿಸಿದನು +ಶಕುನಿ

ಅಚ್ಚರಿ:
(೧) ಧರ್ಮಜನ ಮುಖವನ್ನು ಹೋಲಿಸುವ ಪರಿ – ನಿನ್ನೀ ನಗೆಮೊಗದ ಸಿರಿ ಸೀದು ಕರಿಯಾ
ಯ್ತುಗುಳುತಿದೆ
(೨) ಅನುಜರ ಕೋಪವನ್ನು ಹೇಳುವ ಪರಿ – ನಿನ್ನನುಜರಿಂಗಿತ ರೋಷಪಾವಕನ ಸೊಗಸು ಬೀಯದು

ಪದ್ಯ ೪೨: ಕೃಷ್ಣನ ಮಾತಿಗೆ ಅರ್ಜುನನ ಉತ್ತರವೇನು?

ಎನಲು ಗಹಗಹಿಸಿದನಿದಾರಿಗೆ
ಮನವ ಕದ್ದಾಡುದಿರಿ ನಿಜ ಶಿ
ಷ್ಯನಲಿ ನಾಟಕದಿಂದ್ರಜಾಲವೆ ನಿಮ್ಮ ಗರುಡಿಯಲಿ
ಎಮಗೆ ಶ್ರಮವುಂಟದುನಿಲಲಿಯೆ
ನ್ನನುಜರಗ್ರಜರರಿಯರೇ ನಿ
ಮ್ಮನುಪಮಿತ ಮಹಿಮಾವಲಂಬವನೆಂದನಾ ಪಾರ್ಥ (ಉದ್ಯೋಗ ಪರ್ವ, ೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕೃಷ್ಣನ ಮಾತನ್ನು ಕೇಳಿ ಅರ್ಜುನನು ನಗುತ್ತಾ, ಮನಸ್ಸಿನಲ್ಲಿದ್ದುದನ್ನು ಮುಚ್ಚಿಟ್ಟು ಯಾರಿಗೆ ಈ ಮಾತನ್ನು ಹೇಳುತ್ತಿರುವೆ? ನಿಮ್ಮ ಶಿಷ್ಯನಲ್ಲಿ ಇಂದ್ರಜಾಲ ನಾಟಕವಾಡುವ ಇಚ್ಛೆಯೇ ನಿಮಗೆ? ನಿಮ್ಮ ಗರುಡಿಯ ವರಸೆಗಳು ನಮಗೆ ಗೊತ್ತು. ನನ್ನ ಸೋದರರಿಗೆ ನಿಮ್ಮ ಅಪಾರ ಮಹಿಮೆಯು ಗೊತ್ತಿಲ್ಲವೇ ಎಂದು ಕೇಳಿದನು.

ಅರ್ಥ:
ಎನಲು: ಹೀಗೆ ಹೇಳಲು; ಗಹಗಹಿಸು: ನಕ್ಕು; ಮನ: ಮನಸ್ಸು; ಕದ್ದು: ದೋಚು, ಕಳ್ಳತನ ಮಾಡು; ಆಡು: ಆಟವಾಡು; ನಿಜ: ನೈಜ, ಸತ್ಯ; ಶಿಷ್ಯ: ವಿದ್ಯಾರ್ಥಿ; ನಾಟಕ: ನೈಜವಲ್ಲದ; ಇಂದ್ರಜಾಲ: ಮಾಯಾವಿದ್ಯೆ; ಗರುಡಿ: ವ್ಯಾಯಾಮಶಾಲೆ; ಶ್ರಮ: ಆಯಾಸ; ಅನುಜ: ತಮ್ಮ; ಅಗ್ರಜ: ಅಣ್ಣ; ಅರಿ: ತಿಳಿ; ಅನುಪಮಿತ: ಉಪಮಾತೀತ; ಮಹಿಮ: ಹಿರಿಮೆ ಯುಳ್ಳವನು; ಅವಲಂಬನ: ಆಧಾರ;

ಪದವಿಂಗಡಣೆ:
ಎನಲು +ಗಹಗಹಿಸಿದನ್+ಇದಾರಿಗೆ
ಮನವ +ಕದ್ದ್+ಆಡುದಿರಿ+ ನಿಜ+ ಶಿ
ಷ್ಯನಲಿ +ನಾಟಕದ್+ಇಂದ್ರಜಾಲವೆ +ನಿಮ್ಮ +ಗರುಡಿಯಲಿ
ಎಮಗೆ+ ಶ್ರಮವುಂಟದು+ನಿಲಲಿ+ಯೆನ್ನ
ಅನುಜರ್+ಅಗ್ರಜರ್+ಅರಿಯರೇ +ನಿಮ್ಮ್
ಅನುಪಮಿತ +ಮಹಿಮ +ಅವಲಂಬವನ್+ಎಂದನಾ+ ಪಾರ್ಥ