ಪದ್ಯ ೮: ಕುರುಸೇನೆಯು ಹೇಗೆ ಯುದ್ಧವನ್ನು ಮಾಡಿತು?

ಸುತ್ತುವಲಗೆಯ ಮೇಲೆ ಕಣೆಗಳ
ತೆತ್ತಿಸಿದರೀಚಿನಲಿ ಸಬಳಿಗ
ರೆತ್ತಿದರು ರಾವುತರು ಕೀಲಿಸಿದರು ರಥಧ್ವಜವ
ಮುತ್ತಿದವು ಗಜಸೇನೆ ಪಾರ್ಥನ
ತೆತ್ತಿಗರ ಬರಹೇಳು ವೇಢೆಯ
ಕಿತ್ತು ಮಗುಚುವರಾರೆನುತ ಮುಸುಕಿತ್ತು ಕುರುಸೇನೆ (ಗದಾ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಸುತ್ತು ಗುರಾಣಿಗಳ ಮೇಲೆ ಬಾಣಗಳನ್ನು ಬಿಟ್ಟರು. ಈಟಿಗಳಿಂದ ಇರಿದರು. ರಾವುತರು ರಥಧ್ವಜವನ್ನು ಹೊಡೆದರು. ಆನೆಗಳ ಸೇನೆ ಮುತ್ತಿತು. ಈ ಮುತ್ತಿಗೆಯನ್ನು ಬಿಡಿಸಿ ಅರ್ಜುನನನ್ನು ರಕ್ಷಿಸುವವರಿದ್ದರೆ ಕರೆ ಎಂದು ಕುರುಸೇನೆ ಆರ್ಭಟಿಸಿತು.

ಅರ್ಥ:
ಹಲಗೆ: ಒಂದು ಬಗೆಯ ಗುರಾಣಿ; ಸುತ್ತು: ಬಳಸು; ಕಣೆ: ಬಾಣ; ತೆತ್ತಿಸು: ಜೋಡಿಸು, ಕೂಡಿಸು; ಈಚೆ: ಹೊರಗೆ; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಎತ್ತು: ಮೇಲೆ ತರು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕೀಲಿಸು: ಜೋಡಿಸು; ರಥ: ಬಂಡಿ; ಧ್ವಜ: ಬಾವುಟ; ಮುತ್ತು: ಆವರಿಸು; ಗಜ: ಆನೆ; ಸೇನೆ: ಸೈನ್ಯ; ಬರಹೇಳು: ಆಗಮಿಸು; ವೇಢೆಯ: ಹಯಮಂಡಲ; ಕಿತ್ತು: ಕತ್ತರಿಸು; ಮಗುಚು: ಹಿಂದಿರುಗು, ಮರಳು; ಮುಸುಕು: ಹೊದಿಕೆ;

ಪದವಿಂಗಡಣೆ:
ಸುತ್ತು+ಹಲಗೆಯ +ಮೇಲೆ +ಕಣೆಗಳ
ತೆತ್ತಿಸಿದರ್+ಈಚಿನಲಿ +ಸಬಳಿಗರ್
ಎತ್ತಿದರು +ರಾವುತರು +ಕೀಲಿಸಿದರು +ರಥ+ಧ್ವಜವ
ಮುತ್ತಿದವು +ಗಜಸೇನೆ +ಪಾರ್ಥನ
ತೆತ್ತಿಗರ +ಬರಹೇಳು +ವೇಢೆಯ
ಕಿತ್ತು +ಮಗುಚುವರಾರ್+ಎನುತ +ಮುಸುಕಿತ್ತು +ಕುರುಸೇನೆ

ಅಚ್ಚರಿ:
(೧) ಹಲಗೆ, ಕಣೆ, ಸಬಳಿ – ಆಯುಧಗಳ ಹೆಸರು

ಪದ್ಯ ೪೯: ಭೂಮಿಯು ಯಾವುದರಿಂದ ತುಂಬಿ ಹೋಯಿತು?

ಹಯಕೆ ಹಯ ರಥ ರಥಕೆ ಪಯದಳ
ಪಯದಳಕೆ ಗಜಸೇನೆ ಗಜಸೇ
ನೆಯಲಿ ಭಾಷೆಯ ಭಟರು ಭಾಷೆಯ ಭಾರ ಗಡಣದಲಿ
ನಿಯತ ಚಾತುರ್ಬಲವೆರಡು ನಿ
ರ್ಭಯದಲೊದಗಿತು ಮಕುಟಮಸ್ತಕ
ಮಯ ಮಹೀತಳವೆನಲು ಹಳಚಿದು ಹೊಯ್ದುದುಭಯಬಲ (ದ್ರೋಣ ಪರ್ವ, ೧೫ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕುದುರೆಗಳು ಕುದುರೆಗಳನ್ನು, ರಥಗಳು ರಥಗಳನ್ನು, ಕಾಲಾಳುಗಳು ಕಾಲಾಳುಗಳನ್ನು ಗಜಸೈನ್ಯವು ಗಜಸೈನ್ಯವನ್ನು ಶಪಥಮಾಡಿದವರು ಶಪಥಮಾಡಿದವರನ್ನು ಹೀಗೆ ಎರಡು ಕಡೆಯ ಸೈನ್ಯಗಳೂ ಪರಸ್ಪರವಾಗಿ ಹೊಯ್ದು ಹೋರಾಡಿದವು. ರಾಜರ ಕಿರೀಟಗಳಿಂದ ಭೂಮಿ ತುಂಬಿ ಹೋಯಿತು.

ಅರ್ಥ:
ಹಯ: ಕುದುರೆ; ರಥ: ಬಂಡಿ; ಪಯದಳ: ಸೈನಿಕ; ಗಜ: ಆನೆ; ಸೇನೆ: ಸೈನ್ಯ; ಭಾಷೆ: ನುಡಿ, ಶಪಥ; ಭಟ: ಪರಾಕ್ರಮಿ; ಭಾರ: ಹೊರೆ; ಗಡಣ: ಗುಂಪು; ನಿಯತ: ನಿಶ್ಚಿತವಾದ, ಸ್ಥಿರವಾದ; ಚಾತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ನಿರ್ಭಯ: ನಿರ್ಭೀತಿ, ಧೈರ್ಯ; ಒದಗು: ಲಭ್ಯ, ದೊರೆತುದು; ಮಕುಟ: ಕಿರೀಟ; ಮಸ್ತಕ: ಶಿರ; ಮಹೀತಳ: ಭೂಮಿ; ಹಳಚು: ತಾಗು, ಬಡಿ; ಹೊಯ್ದು: ಹೊಡೆ; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಹಯಕೆ +ಹಯ +ರಥ+ ರಥಕೆ +ಪಯದಳ
ಪಯದಳಕೆ +ಗಜಸೇನೆ +ಗಜಸೇ
ನೆಯಲಿ +ಭಾಷೆಯ +ಭಟರು +ಭಾಷೆಯ+ ಭಾರ +ಗಡಣದಲಿ
ನಿಯತ +ಚಾತುರ್ಬಲವ್+ಎರಡು +ನಿ
ರ್ಭಯದಲ್+ಒದಗಿತು+ ಮಕುಟ+ಮಸ್ತಕ
ಮಯ +ಮಹೀತಳವೆನಲು +ಹಳಚಿದು+ ಹೊಯ್ದುದ್+ಉಭಯಬಲ

ಅಚ್ಚರಿ:
(೧) ಜೋಡಿ ಪದಗಳ ಬಳಕೆ – ಹಯಕೆ ಹಯ ರಥ ರಥಕೆ ಪಯದಳ ಪಯದಳಕೆ ಗಜಸೇನೆ ಗಜಸೇನೆಯಲಿ ಭಾಷೆಯ ಭಟರು ಭಾಷೆಯ

ಪದ್ಯ ೭೨: ಕೊಂಗ, ನೇಪಾಳದ ರಾವುತರು ಹೇಗೆ ಯುದ್ಧ ಮಾಡಿದರು?

ಲಾಳ ಕೊಂಗ ಕಳಿಂಗ ವರನೇ
ಪಾಳಕದ ರಾವುತರು ರಣಭೇ
ತಾಳರಣಲೊಳಗಡಗಿದದು ಕುರುಪಾಂಡುಸೈನ್ಯದೊಳು
ಹೇಳಲಳವಲ್ಲುಭಯದಲಿ ಹೇ
ರಾಳ ಕಾಳೆಗ ಹಿರಿದು ಕಿರಿದೆನೆ
ಹೇಳುವೆನು ಬವರಕ್ಕೆ ಬಂದುದು ಮತ್ತಗಜಸೇನೆ (ಭೀಷ್ಮ ಪರ್ವ, ೪ ಸಂಧಿ, ೭೨ ಪದ್ಯ)

ತಾತ್ಪರ್ಯ:
ಲಾಳ, ಕೊಂಗ, ಕಳಿಂಗ, ನೇಪಾಳದ ರಾವುತರು ಭೇತಾಳಗಳಂತೆ ಯುದ್ಧಮಾಡಿ ಸತ್ತು ಹೆಣದ ರಾಶಿಗಳಲ್ಲಿ ಅಡಗಿದರು. ಯುದ್ಧ ಹೇಗಿತ್ತು, ಎಷ್ಟು ಜನರು ಸತ್ತರು ಎಂದು ಹೇಳಲಾಗುವುದಿಲ್ಲ. ಇಂತಹ ಘೋರವಾದ ಮಹಾಕಾಲಗವೇ ಚಿಕ್ಕದನ್ನಿಸುವ ಹಾಗೆ ಕುದುರೆಗಾಳಗದ ಹಿಂದೆ ಆನೆಗಳ ದಂಡು ಬಂದಿತು.

ಅರ್ಥ:
ಲಾಳ: ಕುದುರೆ, ಎತ್ತುಗಳ ಪಾದಗಳಿಗೆ ರಕ್ಷಣೆ ಗಾಗಿ ಹಾಕುವ ಕಬ್ಬಿಣದ ಸಾಧನ; ಪಾಲಕ: ರಕ್ಷಕ; ವರ: ಶ್ರೇಷ್ಠ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಭೇತಾಳ: ಭೂತ; ರಣ: ಯುದ್ಧ; ಅಡಗು: ಅವಿತುಕೊಳ್ಳು; ಉಭಯ: ಇಬ್ಬರು; ಹೇರಾಳ: ದೊಡ್ಡ, ವಿಶೇಷ; ಕಾಳೆಗ: ಯುದ್ಧ; ಹಿರಿ: ದೊಡ್ಡ; ಕಿರಿದು: ಚಿಕ್ಕ; ಬವರ: ಕಾಳಗ, ಯುದ್ಧ; ಬಂದು: ಆಗಮಿಸು; ಗಜ: ಕರಿ, ಆನೆ; ಸೇನೆ: ಸೈನ್ಯ;

ಪದವಿಂಗಡಣೆ:
ಲಾಳ +ಕೊಂಗ +ಕಳಿಂಗ +ವರ+ನೇ
ಪಾಳಕದ +ರಾವುತರು +ರಣ+ಭೇ
ತಾಳ+ರಣಲೊಳಗ್ +ಅಡಗಿದದು +ಕುರು+ಪಾಂಡು+ಸೈನ್ಯದೊಳು
ಹೇಳಲ್+ಅಳವಲ್+ಉಭಯದಲಿ +ಹೇ
ರಾಳ +ಕಾಳೆಗ +ಹಿರಿದು+ ಕಿರಿದೆನೆ
ಹೇಳುವೆನು +ಬವರಕ್ಕೆ +ಬಂದುದು +ಮತ್ತ+ಗಜಸೇನೆ

ಅಚ್ಚರಿ:
(೧) ೪ ಪ್ರದೇಶ ಹೆಸರನ್ನು ಹೇಳುವ ಪರಿ – ಲಾಳ ಕೊಂಗ ಕಳಿಂಗ ವರನೇಪಾಳಕದ
(೨) ಉಪಮಾನದ ಪ್ರಯೋಗ – ರಾವುತರು ರಣಭೇತಾಳರಣಲೊಳಗಡಗಿದದು ಕುರುಪಾಂಡುಸೈನ್ಯದೊಳು

ಪದ್ಯ ೧೮: ಭೀಮನನ್ನು ಎದುರಿಸಲು ಯಾರು ಎದುರಾದರು?

ಹಿಂಡೊಡೆದು ಗಜಸೇನೆ ಮುಮ್ಮುಳಿ
ಗೊಂಡು ಮುರಿದುದು ಮುಳಿದು ಭೀಮನ
ಗಂಡುಗೆಡಿಸುವರಿಲ್ಲ ಕೌರವ ದಳದ ಸುಭಟರಲಿ
ಅಂಡುಗೊಂಡುದು ಬಿರುದುಗಿರುದಿನ
ಗಂಡರಕಟಕಟೆನುತ ನಿಜ ಕೋ
ದಂಡವನು ದನಿಮಾಡುತಶ್ವತ್ಥಾಮನಿದಿರಾದ (ಕರ್ಣ ಪರ್ವ, ೧೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮೂವತ್ತು ಸಾವಿರ ಗಜಪಡೆಯನ್ನು ಸೀಳಿ, ಚೆಲ್ಲಾಪಿಲ್ಲಿಯಾಗುವಂತೆ ಮಾಡಿ ಪರಾಕ್ರಮವನ್ನು ಮೆರೆದ ಭೀಮನನ್ನು ನೋಡಿದ ಅಶ್ವತ್ಥಾಮನು, ಗಜಸೇನೆಯು ಹಿಂಡೊಡೆದು ಮೂರು ಬಾರಿ ತಿರುಗಿ ಮುರಿದುಹೋಯಿತು. ಕೌರವನ ಸೇನೆಯ ಸುಭಟರಲ್ಲಿ ಭೀಮನ ಪರಾಕ್ರಮವನ್ನು ತಗ್ಗಿಸುವವರಾರೂ ಇಲ್ಲ, ಈ ಬಿರುದು ಗಿರುದುಗಳುಳ್ಳ ಪರಾಕ್ರಮಿಗಳು ಬೆನ್ನು ತೋರಿಸಿ ಓಡಿಹೋದರು ಎಂದುಕೊಂಡು ತನ್ನ ಬಿಲ್ಲನ್ನು ಹಿಡಿದು ಅಶ್ವತ್ಥಾಮನು ಭೀಮನಿಗೆ ಎದುರಾದನು.

ಅರ್ಥ:
ಹಿಂಡು: ಗುಂಪು; ಒಡೆದು: ಸೀಳು, ಬಿರುಕು; ಗಜ: ಆನೆ; ಸೇನೆ: ಸೈನ್ಯ; ಮುಮ್ಮುಳಿ: ರೂಪಗೆಟ್ಟು ನಾಶವಾಗು; ಮುರಿ: ಸೀಳು; ಮುಳಿ: ಸಿಟ್ಟು, ಕೋಪ; ಗಂಡುಗೆಡಿಸು: ಎದುರಿಸು; ದಳ: ಸೈನ್ಯ; ಸುಭಟ: ಶ್ರೇಷ್ಠವಾದ ಸೈನಿಕರು, ಪರಾಕ್ರಮಿ; ಅಂಡುಗೊಂಡು: ಬೆನ್ನುತೋರಿಸು; ಬಿರುದು: ಗೌರವಸೂಚಕ ಪದ; ಗಂಡರು: ಶೂರರು; ಅಕಟ: ಅಯ್ಯೋ; ನಿಜ: ದಿಟ, ನೈಜ; ಕೋದಂಡ: ಬಿಲ್ಲು; ದನಿ: ಶಬ್ದ; ಇದಿರು: ಎದುರು;

ಪದವಿಂಗಡಣೆ:
ಹಿಂಡು+ಒಡೆದು +ಗಜಸೇನೆ+ ಮುಮ್ಮುಳಿ
ಗೊಂಡು +ಮುರಿದುದು +ಮುಳಿದು +ಭೀಮನ
ಗಂಡುಗೆಡಿಸುವರಿಲ್ಲ+ ಕೌರವ+ ದಳದ+ ಸುಭಟರಲಿ
ಅಂಡುಗೊಂಡುದು +ಬಿರುದುಗಿರುದಿನ
ಗಂಡರ್+ಅಕಟಕಟ+ಎನುತ +ನಿಜ +ಕೋ
ದಂಡವನು +ದನಿಮಾಡುತ್+ಅಶ್ವತ್ಥಾಮನ್+ಇದಿರಾದ

ಅಚ್ಚರಿ:
(೧) ಆಡು ಭಾಷೆಯ ಪ್ರಯೋಗ – ಬಿರುದುಗಿರುದು, ಅಂಡುಗೊಂಡು
(೨) ಮ ಕಾರದ ಸಾಲು ಪದಗಳು – ಮುಮ್ಮುಳಿಗೊಂಡು ಮುರಿದುದು ಮುಳಿದು