ಪದ್ಯ ೨೬: ಕುರುಸೇನೆಯು ಶಲ್ಯನನ್ನು ಹೇಗೆ ಕೊಂಡಾಡಿತು?

ದಳಪತಿಯ ಸುಮ್ಮಾನಮುಖ ಬೆಳ
ಬೆಳಗುತದೆ ಗಂಗಾಕುಮಾರನ
ಕಳಶಜನ ರಾಧಾತನೂಜನ ರಂಗಭೂಮಿಯಿದು
ಕಳನನಿದನಾಕ್ರಮಿಸುವಡೆ ವೆ
ಗ್ಗಳೆಯ ಮಾದ್ರಮಹೀಶನಲ್ಲದೆ
ಕೆಲರಿಗೇನಹುದೆನುತ ಕೊಂಡಾಡಿತ್ತು ಕುರುಸೇನೆ (ಶಲ್ಯ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕುರುಸೇನೆಯು ಸೈನಿಕರು ಶಲ್ಯನನ್ನು ನೋಡಿ ಉತ್ಸಾಹಭರಿತರಾದರು. ಸೇನಾಧಿಪತಿಯ ಮುಖ ತೇಜಸ್ಸಿನಿಂದ ಹೊಳೆ ಹೊಳೆಯುತ್ತಿದೆ. ಭೀಷ್ಮ ದ್ರೋಣ ಕರ್ಣರು ಕಾದಿದ ರಣರಂಗವನ್ನಾಕ್ರಮಿಸಲು ಶಲ್ಯನಿಗಲ್ಲದೆ ಇನ್ನಾರಿಗೆ ಸಾಧ್ಯ ಎಂದು ಶಲ್ಯನನ್ನು ಕೊಂಡಾಡಿತು.

ಅರ್ಥ:
ದಳಪತಿ: ಸೇನಾಧಿಪತಿ; ಸುಮ್ಮಾನ: ಸಂತೋಷ, ಹಿಗ್ಗು; ಮುಖ: ಆನನ; ಬೆಳಗು: ಹೊಳಪು, ಕಾಂತಿ; ಕುಮಾರ: ಮುಗ; ಕಳಶಜ: ದ್ರೋಣ; ರಾಧಾತನೂಜ: ರಾಧೆಯ ಮಗ (ಕರ್ಣ); ಭೂಮಿ: ಇಳೆ; ಕಳ: ರಣರಂಗ; ಆಕ್ರಮಿಸು: ಮೇಲೆ ಬೀಳುವುದು; ವೆಗ್ಗಳೆ: ಶ್ರೇಷ್ಠ; ಮಹೀಶ: ರಾಜ; ಕೊಂಡಾಡು: ಹೊಗಳು

ಪದವಿಂಗಡಣೆ:
ದಳಪತಿಯ +ಸುಮ್ಮಾನ+ಮುಖ +ಬೆಳ
ಬೆಳಗುತದೆ+ ಗಂಗಾಕುಮಾರನ
ಕಳಶಜನ +ರಾಧಾ+ತನೂಜನ +ರಂಗ+ಭೂಮಿಯಿದು
ಕಳನನಿದನ್+ಆಕ್ರಮಿಸುವಡೆ +ವೆ
ಗ್ಗಳೆಯ +ಮಾದ್ರ+ಮಹೀಶನಲ್ಲದೆ
ಕೆಲರಿಗ್+ಏನಹುದೆನುತ +ಕೊಂಡಾಡಿತ್ತು +ಕುರುಸೇನೆ

ಅಚ್ಚರಿ:
(೧) ದ್ರೋಣರನ್ನು ಕಳಶಜ, ಕರ್ಣನನ್ನು ರಾಧಾತನೂಜ, ಭೀಷ್ಮರನ್ನು ಗಂಗಾಕುಮಾರ ಎಂದು ಕರೆದಿರುವುದು
(೨) ಕಳ, ರಂಗಭೂಮಿ – ರಣರಂಗವನ್ನು ಸೂಚಿಸುವ ಪದ

ಪದ್ಯ ೨೨: ಭೀಷ್ಮನಿಗೆ ತಲೆದಿಂಬನ್ನು ಅರ್ಜುನನು ಹೇಗೆ ಸಿದ್ಧಪಡಿಸಿದನು?

ಮಗನೆ ಕೇಳೈ ಪಾರ್ಥ ಕೂರಂ
ಬುಗಳ ಹಾಸಿಕೆ ಚೆಂದವಾಯಿತು
ಹೊಗರಲಗ ತಲೆಗಿಂಬ ರಚಿಸೆನೆ ಪಾರ್ಥ ಕೈಕೊಂಡು
ಬಿಗಿದ ಬಿಲುಗೊಂಡೆದ್ದು ಮಂಡಿಸಿ
ಹೊಗರ ಕವಲಂಬೈದನೆಚ್ಚನು
ನೆಗಹಿದನು ಮಸ್ತಕವನಾ ಗಂಗಾಕುಮಾರಕನ (ಭೀಷ್ಮ ಪರ್ವ, ೧೦ ಸಂಧಿ, ೨೨ ಪದ್ಯ)

ತಾತ್ಪರ್ಯ:
ಮಗು ಅರ್ಜುನ, ಬಾಣಗಳ ಹಾಸಿಗೆ ಚೆಂದವಾಗಿದೆ, ಆದರೆ ಬಾಣಗಳ ತಲೆದಿಂಬನ್ನು ಏರ್ಪಡಿಸು ಎಂದು ಭೀಷ್ಮನು ಹೇಳಲು, ಅರ್ಜುನನು ಎದ್ದು ಐದು ಬಾಣಗಳನ್ನು ನೆಲಕ್ಕೆ ನೆಟ್ಟು, ಭೀಷ್ಮನಿಗೆ ತಲೆದಿಂಬನ್ನು ಏರ್ಪಡಿಸಿದನು.

ಅರ್ಥ:
ಮಗ: ಸುತ; ಕೇಳು: ಆಲಿಸು; ಕೂರಂಬು: ಹರಿತವಾದ ಬಾಣ; ಹಾಸಿಕೆ: ಮಂಚ; ಚೆಂದ: ಸೊಗಸು; ಹೊಗರು: ಕಾಂತಿ; ಅಲಗು: ಆಯುಧಗಳ ಹರಿತವಾದ ಅಂಚು, ಖಡ್ಗ; ತಲೆ: ಶಿರ; ಇಂಬು: ಆಶ್ರಯ; ರಚಿಸು: ನಿರ್ಮಿಸು; ಕೈಕೊಂಡು: ಧರಿಸು; ಬಿಗಿ: ಒತ್ತು, ಅಮುಕು, ಗಟ್ಟಿ; ಮಂಡಿಸು: ಕೂಡು, ಬಾಗಿಸು; ಹೊಗರು: ಕಾಂತಿ, ಪ್ರಕಾಶ; ಕವಲು: ಟಿಸಿಲು, ಕವಲೊಡೆದ ಕೊಂಬೆ; ಎಚ್ಚು: ಬಾಣಪ್ರಯೋಗ ಮಾದು; ನೆಗಹು: ಮೇಲೆತ್ತು; ಮಸ್ತಕ: ತಲೆ; ಕುಮಾರ: ಮಗ; ಬಿಲು: ಬಿಲ್ಲು, ಚಾಪ;

ಪದವಿಂಗಡಣೆ:
ಮಗನೆ +ಕೇಳೈ +ಪಾರ್ಥ +ಕೂರಂ
ಬುಗಳ+ ಹಾಸಿಕೆ+ ಚೆಂದವಾಯಿತು
ಹೊಗರ್ +ಅಲಗ +ತಲೆಗ್+ಇಂಬ+ ರಚಿಸ್+ಎನೆ +ಪಾರ್ಥ +ಕೈಕೊಂಡು
ಬಿಗಿದ +ಬಿಲುಗೊಂಡ್+ಎದ್ದು +ಮಂಡಿಸಿ
ಹೊಗರ+ ಕವಲ್+ಅಂಬ್+ಐದನ್+ಎಚ್ಚನು
ನೆಗಹಿದನು +ಮಸ್ತಕವನ್+ಆ+ ಗಂಗಾ+ಕುಮಾರಕನ

ಅಚ್ಚರಿ:
(೧) ಬಾಣದ ಹಾಸಿಗೆಯನ್ನು ವರ್ಣಿಸುವ ಪರಿ – ಕೂರಂಬುಗಳ ಹಾಸಿಕೆ ಚೆಂದವಾಯಿತು

ಪದ್ಯ ೨೯: ಅರ್ಜುನನು ಯಾರೊಡನೆ ಯುದ್ಧಮಾಡಲು ಸಿದ್ಧನಾದನು?

ಬಲವನಾಯಕವೇ ವೃಥಾ ಹುಲು
ದಳದೊಳಗೆ ನಿಮ್ಮಗ್ಗಳಿಕೆ ಕೈ
ಯಳವ ಮನಗಲಿತನದಳವ ಬಿಲುಗಾರತನದಳವ
ಬಲಿಯಿರೇ ನಮ್ಮೊಡನೆ ಮೆಚ್ಚಿಸಿ
ಬಳಿಕ ಹಡೆಯಿರೆ ಬಿರುದನೆನುತವೆ
ಫಲುಗುಣನು ಕೈಯಿಕ್ಕಿದನು ಗಂಗಾಕುಮಾರನಲಿ (ಭೀಷ್ಮ ಪರ್ವ, ೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬಲವು ಅನಾಯಕವಾಯಿತೇ? ಸಾಧಾರಣ ಸೈನ್ಯದೆದುರಿನಲ್ಲಿ ನಿಮ್ಮ ಸತ್ವ, ಕೈಚಳಕ, ಕಲಿತನ, ಬಿಲುಗಾರತನಗಲನ್ನು ತೋರಿಸಿದಿರಿ ಅಷ್ಟೇ, ನಮ್ಮೊಡನೆ ಯುದ್ಧದಲ್ಲಿ ಗೆದ್ದು ನಿಮ್ಮ ಬಿರುದನ್ನು ಸಾರ್ಥಕ ಮಾಡಿಕೊಳ್ಳಿ ಎಂದು ಅರ್ಜುನನು ಭೀಷ್ಮನೊಡನೆ ಯುದ್ಧಮಾಡಲು ಸಿದ್ಧನಾದನು.

ಅರ್ಥ:
ಬಲ: ಶಕ್ತಿ, ಸೈನ್ಯ; ನಾಯಕ: ಒಡೆಯ; ಅನಾಯಕ: ನಾಯಕನಿಲ್ಲದ ಸ್ಥಿತಿ; ವೃಥಾ: ಸುಮ್ಮನೆ; ಹುಲು: ಕ್ಷುಲ್ಲಕ; ದಳ: ಸೈನ್ಯ; ಅಗ್ಗಳಿಕೆ: ಶ್ರೇಷ್ಠ; ಅಳವು: ಶಕ್ತಿ, ಸಾಮರ್ಥ್ಯ; ಮನ: ಮನಸ್ಸು; ಕಲಿ: ಶೂರ; ಬಿಲುಗಾರ: ಬಿಲ್ವಿದ್ಯಾ ಚತುರ; ಬಲಿ: ಗಟ್ಟಿ, ದೃಢ, ಶಕ್ತಿಶಾಲಿ; ಮೆಚ್ಚು: ಪ್ರಶಂಸೆ; ಬಳಿಕ: ನಂತರ; ಹಡೆ: ಸೈನ್ಯ, ದಂಡು; ಬಿರುದು: ಗೌರವ ಸೂಚಕ ಪದ; ಕೈಯಿಕ್ಕು: ಹೋರಾಡು; ಕುಮಾರ: ಮಗ;

ಪದವಿಂಗಡಣೆ:
ಬಲವ್+ಅನಾಯಕವೇ +ವೃಥಾ +ಹುಲು
ದಳದೊಳಗೆ+ ನಿಮ್ಮಗ್ಗಳಿಕೆ+ ಕೈ
ಅಳವ+ ಮನ+ಕಲಿತನದ್+ಅಳವ+ ಬಿಲುಗಾರತನದ್+ಅಳವ
ಬಲಿಯಿರೇ +ನಮ್ಮೊಡನೆ +ಮೆಚ್ಚಿಸಿ
ಬಳಿಕ+ ಹಡೆಯಿರೆ+ ಬಿರುದನ್+ಎನುತವೆ
ಫಲುಗುಣನು +ಕೈಯಿಕ್ಕಿದನು +ಗಂಗಾಕುಮಾರನಲಿ

ಅಚ್ಚರಿ:
(೧) ಅಳವ ಪದದ ಬಳಕೆ – ೩ ಸಾಲಿನಲ್ಲಿ ೩ ಬಾರಿ
(೨) ಭೀಷ್ಮನನ್ನು ಹಂಗಿಸುವ ಪರಿ – ಬಲವನಾಯಕವೇ ವೃಥಾ ಹುಲುದಳದೊಳಗೆ ನಿಮ್ಮಗ್ಗಳಿಕೆ

ಪದ್ಯ ೧೭: ಭೀಷ್ಮನು ಪಾಂಡವರನ್ನು ಹೇಗೆ ಬರೆಮಾಡಿಕೊಂಡನು?

ನಗುತ ಹರಿ ಗಂಗಾಕುಮಾರನ
ನೆಗಹಿದನು ಬಳಿಕಿವರು ರತುನಾ
ಳಿಗಳ ಕಾಣಿಕೆಯಿತ್ತು ಮೈಯಿಕ್ಕಿದವರು ಭಕುತಿಯಲಿ
ತೆಗೆದು ಬಿಗಿಯಪ್ಪಿದನು ಯಮಜಾ
ದಿಗಳ ಮನ್ನಿಸಿ ವೀಳೆಯವನಿ
ತ್ತೊಗುಮಿಗೆಯ ಹರುಷದಲಿ ಹೊಂಪುಳಿಯೋದನಾ ಭೀಷ್ಮ (ಭೀಷ್ಮ ಪರ್ವ, ೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ನಗುತ್ತಾ ಭೀಷ್ಮನನ್ನೆತ್ತಿದನು. ಬಳಿಕ ಪಾಂಡವರು ಭೀಷ್ಮನಿಗೆ ಉತ್ತಮ ರತ್ನಗಳನ್ನು ಕಾಣಿಕೆಯಾಗಿ ಕೊಟ್ಟು ಭಕ್ತಿಯಿಂದ ನಮಸ್ಕರಿಸಿದರು. ಭೀಷ್ಮನು ಅವರನ್ನು ಆಲಿಂಗಿಸಿಕೊಂಡು ವೀಳೇಯವನ್ನಿತ್ತು ಪುರಸ್ಕರಿಸಿ ಸಂತೋಷಗೊಂಡನು.

ಅರ್ಥ:
ನಗು: ಸಂತಸ; ಹರಿ: ಕೃಷ್ಣ; ಕುಮಾರ: ಪುತ್ರ, ಮಗ; ನೆಗಹು: ಮೇಲೆತ್ತು; ಬಳಿಕ: ನಂತರ; ರತುನಾಳಿ: ಬೆಲೆಬಾಳುವ ಮುತ್ತುಗಳು; ಕಾಣಿಕೆ: ಉಡುಗೊರೆ; ಮೈಯಿಕ್ಕು: ನಮಸ್ಕರಿಸು; ಭಕುತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ತೆಗೆ: ಹೊರತರು; ಅಪ್ಪು: ಆಲಿಂಗನ; ಯಮಜ: ಧರ್ಮಜ; ಮನ್ನಿಸು: ಗೌರವಿಸು; ವೀಳೆಯ: ಒಪ್ಪಿಗೆ ಕೊಡು, ಸನ್ಮಾನ ಮಾಡು; ಒಗುಮಿಗೆ: ಉತ್ಸಾಹ, ಸಂತೋಷ; ಹರುಷ: ಸಂತಸ; ಹೊಂಪುಳಿ: ಹಿಗ್ಗು, ಸಂತಸ;

ಪದವಿಂಗಡಣೆ:
ನಗುತ +ಹರಿ+ ಗಂಗಾಕುಮಾರನ
ನೆಗಹಿದನು +ಬಳಿಕಿವರು +ರತುನಾ
ಳಿಗಳ +ಕಾಣಿಕೆಯಿತ್ತು +ಮೈಯಿಕ್ಕಿದವರು +ಭಕುತಿಯಲಿ
ತೆಗೆದು +ಬಿಗಿ+ಅಪ್ಪಿದನು +ಯಮಜಾ
ದಿಗಳ+ ಮನ್ನಿಸಿ +ವೀಳೆಯವನಿತ್ತ್
ಒಗುಮಿಗೆಯ +ಹರುಷದಲಿ +ಹೊಂಪುಳಿಯೋದನಾ+ ಭೀಷ್ಮ

ಅಚ್ಚರಿ:
(೧) ನಗು, ಹರುಷ, ಹೊಂಪುಳಿ – ಸಾಮ್ಯಾರ್ಥ ಪದ

ಪದ್ಯ ೭: ಎರಡನೇ ದಿನದ ಯುದ್ಧವನ್ನು ಯಾರು ಗೆದ್ದರು?

ಬೀಳಲವನೀಪತಿಗಳತಿ ಹೀ
ಹಾಳಿಯಲಿ ಸಾತ್ಯಕಿ ಮುಳಿದು ಬಲು
ಗೋಲಿನಲಿ ಗಂಗಾಕುಮಾರನ ಸಾರಥಿಯನೆಸಲು
ಮೇಲುಗಾಳೆಗವವರ ಸೇರಿತು
ಸೋಲು ಕುರುಪತಿಗಾಯ್ತು ಕಿರಣದ
ಗೂಳಯವು ಪಡುವಣ ಸಮುದ್ರಕೆ ತೆಗೆಯಲಿನನಿಳಿದ (ಭೀಷ್ಮ ಪರ್ವ, ೬ ಸಂಧಿ, ೭ ಪದ್ಯ)

ತಾತ್ಪರ್ಯ:
ಹೀಗೆ ರಾಜರು ನೆಲಕ್ಕುರುಳಲು, ಸಾತ್ಯಕಿಯು ಕೋಪದಿಂದ ಭೀಷ್ಮನ ಸಾರಥಿಯನ್ನು ಕೊಂದನು. ಆ ದಿನ ಯುದ್ಧದಲ್ಲಿ ಪಾಂಡವರು ಗೆದ್ದರು; ದುರ್ಯೋಧನನಿಗೆ ಸೋಲಾಯಿತು, ಸೂರ್ಯಕಿರಣಗಳು ಪಶ್ಚಿಮ ಸಮುದ್ರಕ್ಕೆ ಗುಳೆ ಹೊರಟವು. ಆ ದಿನದ ಯುದ್ಧ ಮುಗಿಯಿತು.

ಅರ್ಥ:
ಬೀಳು: ಕುಗ್ಗು; ಅವನೀಪತಿ: ರಾಜ; ಹೀಹಾಳಿ: ತೆಗಳಿಕೆ, ಅವಹೇಳನ; ಮುಳಿ: ಸಿಟ್ಟು, ಕೋಪ; ಬಲು: ಬಹಳ; ಕೋಲು: ಬಾಣ; ಕುಮಾರ: ಮಗ; ಸಾರಥಿ: ಸೂತ; ಎಸು: ಬಾಣ ಪ್ರಯೋಗ ಮಾಡು; ಮೇಲು: ಎತ್ತರ; ಕಾಳೆಗ: ಯುದ್ಧ; ಸೇರು: ತಲುಪು, ಮುಟ್ಟು; ಸೋಲು: ಪರಾಭವ; ಕಿರಣ: ರಶ್ಮಿ, ಬೆಳಕಿನ ಕದಿರು;
ಗೂಳೆಯ: ಊರು ಬಿಟ್ಟು ವಲಸೆ ಹೋಗುವುದು; ಪಡುವಣ: ಪಶ್ಚಿಮ; ಸಮುದ್ರ: ಸಾಗರ; ತೆಗೆ: ಈಚೆಗೆ ತರು, ಹೊರತರು; ಇನ: ಸೂರ್ಯ; ಇಳಿ: ಕೆಳಕ್ಕೆ ಬರು;

ಪದವಿಂಗಡಣೆ:
ಬೀಳಲ್+ಅವನೀಪತಿಗಳ್+ಅತಿ+ ಹೀ
ಹಾಳಿಯಲಿ +ಸಾತ್ಯಕಿ +ಮುಳಿದು +ಬಲು
ಗೋಲಿನಲಿ +ಗಂಗಾಕುಮಾರನ+ ಸಾರಥಿಯನ್+ಎಸಲು
ಮೇಲುಗಾಳೆಗವ್+ಅವರ +ಸೇರಿತು
ಸೋಲು +ಕುರುಪತಿಗಾಯ್ತು +ಕಿರಣದ
ಗೂಳಯವು +ಪಡುವಣ+ ಸಮುದ್ರಕೆ +ತೆಗೆಯನ್+ಇನನ್+ಇಳಿದ

ಅಚ್ಚರಿ:
(೧) ಸೂರ್ಯಾಸ್ತವಾಯಿತು ಎಂದು ಹೇಳಲು – ಕಿರಣದ ಗೂಳಯವು ಪಡುವಣ ಸಮುದ್ರಕೆ ತೆಗೆಯಲಿನನಿಳಿದ

ಪದ್ಯ ೫: ಕೀಚಕನ ಮೇಲೆ ಕೌರವರ ಆಕ್ರಮಣ ಹೇಗಿತ್ತು?

ಎರಡು ಶರದಲಿ ಕರದ ಚಾಪವ
ತರಿದನಾ ರವಿಸೂನು ತುರಗವ
ವರ ರಥವ ಹುಡಿಮಾಡಿದನು ಗಂಗಾಕುಮಾರಕನು
ಶರತತಿಯಲವನುರವನುದರವ
ಬಿರಿಯ ಕೆತ್ತಿದ ದ್ರೋಣನಿದಿರಿನ
ಲಿರದೆ ಹಾಯ್ದನು ಕೀಚಕನು ಪರಿಭವನದ ಸೂರೆಯಲಿ (ಅರಣ್ಯ ಪರ್ವ, ೨೫ ಸಂಧಿ, ೫ ಪದ್ಯ)

ತಾತ್ಪರ್ಯ:
ಎರಡು ಬಾಣಗಳಿಂದ ಕರ್ಣನು ಕೀಚಕನ ಕೈಯಲ್ಲಿದ್ದ ಬಿಲ್ಲನ್ನು ಕತ್ತರಿಸಿದನು. ಭೀಷ್ಮನು ಕೀಚಕನ ರಥ ಮತ್ತು ಕುದುರೆಗಳನ್ನು ಪುಡಿ ಮಾಡಿದನು. ಕೀಚಕನ ಎದೆ ಹೊಟ್ಟೆಗಳನ್ನು ದ್ರೋಣನು ಬಾಣಗಳಿಂದ ಕೆತ್ತಿದನು. ಕೀಚಕನು ಎದುರಿನಲ್ಲಿರಲಾರದೆ ಪಲಾಯನ ಮಾಡಿದನು.

ಅರ್ಥ:
ಶರ: ಬಾಣ; ಕರ: ಹಸ್ತ; ಚಾಪ: ಬಿಲ್ಲು; ತರಿ: ಕಡಿ, ಕತ್ತರಿಸು; ರವಿಸೂನು: ಸೂರ್ಯನ ಮಗ (ಕರ್ಣ); ತುರಗ: ಕುದುರೆ; ವರ: ಶ್ರೇಷ್ಠ; ರಥ: ಬಂಡಿ; ಹುಡಿಮಾಡು: ಪುಡಿಮಾಡು; ಗಂಗಾಕುಮಾರ: ಭೀಷ್ಮ; ಶರ: ಬಾಣ; ತತಿ: ಗುಂಪು, ರಾಶಿ; ಉರು: ಎದೆ, ಉದರ: ಹೊಟ್ಟೆ; ಬಿರಿ: ಒಡೆ, ಬಿರುಕುಂಟಾಗು; ಕೆತ್ತು: ಕತ್ತರಿಸು; ಇದಿರು: ಎದುರು; ಹಾಯ್ದು: ಚಾಚು, ತೆರಳು; ಪರಿಭವ: ಸೋಲು; ಪರಿಭವನ: ವೈರಿಯ ಮನೆ; ಸೂರು: ಮನೆಯ ಮೇಲ್ಛಾವಣಿ; ಸೂರೆ: ಲೂಟಿ;

ಪದವಿಂಗಡಣೆ:
ಎರಡು +ಶರದಲಿ +ಕರದ +ಚಾಪವ
ತರಿದನ್+ಆ+ ರವಿಸೂನು +ತುರಗವ
ವರ +ರಥವ +ಹುಡಿಮಾಡಿದನು+ ಗಂಗಾಕುಮಾರಕನು
ಶರತತಿಯಲ್+ಅವನ್+ಉರವನ್+ಉದರವ
ಬಿರಿಯ +ಕೆತ್ತಿದ +ದ್ರೋಣನ್+ಇದಿರಿನಲ್
ಇರದೆ +ಹಾಯ್ದನು +ಕೀಚಕನು+ ಪರಿಭವನದ +ಸೂರೆಯಲಿ

ಅಚ್ಚರಿ:
(೧) ಕೀಚಕನ ಮೇಲಾದ ನೋವು – ಶರತತಿಯಲವನುರವನುದರವ ಬಿರಿಯ
(೨) ೪ ಸಾಲು ಒಂದೇ ಪದವಾಗಿರುವುದು – ಶರತತಿಯಲವನುರವನುದರವ