ಪದ್ಯ ೨೩: ಮಗುವಿನ ಬಳಿ ಯಾರು ಬಂದರು?

ಕೆದರಿ ಕಾಲಲಿ ಮಳಲ ರಾಶಿಯ
ನೊದೆದು ಕೈಗಳ ಕೊಡಹಿ ಭೋಯೆಂ
ದೊದರುತಿರ್ದನು ಶಿಶುಗಳರಸನು ರವಿಯನೀಕ್ಷಿಸುತ
ಇದನು ಕಂಡನು ಸೂತನೊಬ್ಬನು
ಮುದದ ಮದದಲಿ ತನ್ನ ಮರೆದು
ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ (ಆದಿ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಆ ಮಗುವು ನದಿಯ ದಡದ ಮೇಲೆ ಮರಳಿನ ರಾಶಿಯನ್ನು ಕಾಲಲ್ಲಿ ಹೊಡೆಯುತ್ತಾ ಕೈಗಲನ್ನು ಕೊಡವುತ್ತಾ ಸೂರ್ಯನನ್ನೇ ನೋಡುತ್ತಾ ಜೊರಾಗಿ ಅಳುತ್ತಿತ್ತು. ಇದನ್ನು ನೋಡಿದ ಸಾರತಿಯನೊಬ್ಬನು ಸಂತೋಷಾತಿರೇಕದಿಂದ ಮೈಮರೆತು ಉಬ್ಬಿ, ಶಿವಶಿವಾ ಇದು ಎಲ್ಲಿಂದ ದೊರಕಿದ ನಿಧಿಯೆನ್ನುತ್ತಾ ಮಗುವಿನ ಬಳಿ ಬಂದನು.

ಅರ್ಥ:
ಕೆದರು: ಹರಡು; ಕಾಲು: ಪಾದ; ಮಳಲು: ಮರಳು; ರಾಶಿ: ಗುಂಪು; ಒದೆ: ನೂಕು; ಕೈ: ಹಸ್ತ; ಕೊಡಹು: ಅಲ್ಲಾಡಿಸು, ಕೊಡವು, ಜಾಡಿಸು ; ಒದರು: ಕಿರುಚು, ಗರ್ಜಿಸು; ಶಿಶು: ಮಗು; ಅರಸ: ರಾಜ; ರವಿ: ಸೂರ್ಯ; ಈಕ್ಷಿಸು: ನೋಡು; ಕಂಡು: ನೋಡು; ಸೂತ: ಸಾರಥಿ; ಮುದ: ಸಮ್ತಸ; ಮದ: ದರ್ಪ; ಮರೆ: ಎಚ್ಚರತಪ್ಪು; ಉಬ್ಬು: ಹಿಗ್ಗು, ಗರ್ವಿಸು; ನಿಧಿ: ಐಶ್ವರ್ಯ; ನಡೆ: ಚಲಿಸು;

ಪದವಿಂಗಡಣೆ:
ಕೆದರಿ +ಕಾಲಲಿ +ಮಳಲ +ರಾಶಿಯನ್
ಒದೆದು +ಕೈಗಳ +ಕೊಡಹಿ +ಭೋಯೆಂದ್
ಒದರುತಿರ್ದನು +ಶಿಶುಗಳ್+ಅರಸನು +ರವಿಯನ್+ಈಕ್ಷಿಸುತ
ಇದನು +ಕಂಡನು +ಸೂತನೊಬ್ಬನು
ಮುದದ +ಮದದಲಿ +ತನ್ನ+ ಮರೆದ್
ಉಬ್ಬಿದನ್+ಇದೆತ್ತಣ+ ನಿಧಿಯೊ +ಶಿವಶಿವಯೆಂದು +ನಡೆತಂದ

ಅಚ್ಚರಿ:
(೧) ಮಗುವನ್ನು ವರ್ಣಿಸುವ ಪರಿ – ಶಿಶುಗಳರಸನು, ಎತ್ತಣ ನಿಧಿಯೊ;

ಪದ್ಯ ೪೯: ಭೀಮನು ಯಾವ ಭಾಗಕ್ಕೆ ಹೊಡೆಯಲು ಯೋಚಿಸಿದನು?

ಕೊಡಹಿದನು ತನುಧೂಳಿಯನು ಧಾ
ರಿಡುವ ರುಧಿರವ ಸೆರಗಿನಲಿ ಸಲೆ
ತೊಡೆತೊಡೆದು ಕರ್ಪುರದ ಕವಳವನಣಲೊಳಳವಡಿಸಿ
ತೊಡೆಯ ಹೊಯ್ದಾರುವ ಮುರಾರಿಯ
ನೆಡೆಯುಡುಗದೀಕ್ಷಿಸುತ ದೂರಕೆ
ಸಿಡಿದ ಗದೆಯನು ತುಡುಕಿ ನೃಪತಿಯ ತೊಡೆಗೆ ಲಾಗಿಸಿದ (ಗದಾ ಪರ್ವ, ೭ ಸಂಧಿ, ೪೯ ಪದ್ಯ)

ತಾತ್ಪರ್ಯ:
ಭೀಮನು ಧೂಳಿಯನ್ನು ಕೊಡವಿಕೊಂಡು, ಧಾರಾಕಾರವಾಗಿ ಸುರಿಯುತ್ತಿದ್ದ ರಕ್ತವನ್ನು ಸೆರಗಿನಲ್ಲಿ ಒರೆಸಿಕೊಂಡು ಕರ್ಪೂರ ವೀಳೆಯವನ್ನು ಹಾಕಿಕೊಂಡನು. ಶ್ರೀಕೃಷ್ಣನು ಅಬ್ಬರಿಸುತ್ತಾ ತೊಡೆ ತಟ್ಟುವುದನ್ನು ಕಂಡು, ಭೀಮನು ದೂರಕ್ಕೆ ಹೋಗಿದ್ದ ಗದೆಯನ್ನು ಹಿಡಿದು ಕೌರವನ ತೊಡೆಗೆ ಹೊಡೆಯುವ ಲೆಕ್ಕಾಚಾರವನ್ನು ಹಾಕಿದನು.

ಅರ್ಥ:
ಕೊಡಹು: ಅಲ್ಲಾಡಿಸು, ಹೊರಹಾಕು; ತನು: ದೇಹ; ಧೂಳು: ಮಣ್ಣಿನ ಪುಡಿ; ಧಾರಿಡು: ಹೆಚ್ಚಾಗಿ ಹರಿದ; ರುಧಿರ: ರಕ್ತ; ಸೆರಗು: ಬಟ್ಟೆಯ ಅಂಚು; ಸಲೆ: ಒಂದೇ ಸಮನೆ; ತೊಡೆ: ಲೇಪಿಸು, ಬಳಿ, ಸವರು; ಕರ್ಪುರ: ಸುಗಂಧ ದ್ರವ್ಯ; ಕವಳ: ತುತ್ತು, ತಾಮ್ಬೂಲ; ಅಳವಡಿಸು: ಸರಿಮಾಡು, ಹೊಂದಿಸು; ತೊಡೆ: ಊರು, ಜಂಘೆ; ಹೊಯ್ದು: ಹೊಡೆ; ನೆಡೆ: ಗಮನ, ಚಲನೆ; ಈಕ್ಷಿಸು: ನೋಡು; ದೂರ: ಆಚೆ; ಸಿಡಿ: ಸ್ಫೋಟ, ಚಿಮ್ಮು; ಗದೆ: ಮುದ್ಗರ; ತುಡುಕು: ಹೋರಾಡು, ಸೆಣಸು; ನೃಪತಿ: ರಾಜ; ಲಾಗಿಸು: ಹೊಡೆ;

ಪದವಿಂಗಡಣೆ:
ಕೊಡಹಿದನು +ತನು+ಧೂಳಿಯನು +ಧಾ
ರಿಡುವ +ರುಧಿರವ +ಸೆರಗಿನಲಿ +ಸಲೆ
ತೊಡೆತೊಡೆದು +ಕರ್ಪುರದ +ಕವಳವನ್+ಅಣಲೊಳ್+ಅಳವಡಿಸಿ
ತೊಡೆಯ +ಹೊಯ್ದಾರುವ+ ಮುರಾರಿಯ
ನೆಡೆಯುಡುಗದ್+ಈಕ್ಷಿಸುತ +ದೂರಕೆ
ಸಿಡಿದ +ಗದೆಯನು +ತುಡುಕಿ +ನೃಪತಿಯ+ ತೊಡೆಗೆ +ಲಾಗಿಸಿದ

ಅಚ್ಚರಿ:
(೧) ತೊಡೆ ಪದದ ಬಳಕೆ – ತೊಡೆತೊಡೆದು, ತೊಡೆಯ, ತೊಡೆಗೆ

ಪದ್ಯ ೩೮: ರಣರಂಗದ ಚಿತ್ರಣ ಹೇಗಾಗಿತ್ತು?

ಉಡಿಯೆ ಮೋರೆಯ ಜೋಡು ಜೋದರ
ಕೊಡಹಿ ಹಾಯ್ದವು ದಂತಿಘಟೆ ಖುರ
ಕಡಿವಡಿಯೆ ಕುದುರೆಗಳು ಹಾಯ್ದವು ಹಾಯ್ಕಿ ರಾವುತರ
ಮಡಿಯೆ ಸಾರಥಿ ಮಗ್ಗಿದವು ರಥ
ನಡೆದು ಕಾದಿ ಮಹಾರಥರು ಮೆದೆ
ಗೆಡೆದುದುಳಿದ ಪದಾತಿಪತನವನರಿಯೆ ನಾನೆಂದ (ಗದಾ ಪರ್ವ, ೧ ಸಂಧಿ, ೩೮ ಪದ್ಯ)

ತಾತ್ಪರ್ಯ:
ಮುಖದ ಕವಚವು ಮುರಿಯಲು, ಆನೆಗಳು ಜೋದರನ್ನು ಕೆಳಕ್ಕೆ ಕೆಡವಿ ಓಡಿದವು. ಗೊರಸುಗಳು ಕತ್ತರಿಸಿದಾಗ ಕುದುರೆಗಳು ರಾವುತರನ್ನು ಕೆಡವಿ ಹೋದವು. ಸಾರಥಿಯು ಸಾಯಲು, ರಥಗಳು ನಿಂತವು. ಮಹಾರಥರು ಸತ್ತು ಮೆದೆಯಂತೆ ಬಿದ್ದರು. ಪದಾತಿಗಳೆಷ್ಟು ಮಂದಿ ಬಿದ್ದರೆಂದು ನಾನರಿಯೆ.

ಅರ್ಥ:
ಉಡಿ:ಸೊಂಟ; ಮೋರೆ: ಮುಖ; ಜೋಡು: ಜೊತೆ, ಜೋಡಿ; ಜೋದ: ಆನೆಮೇಲೆ ಕೂತು ಯುದ್ಧಮಾಡುವವ; ಕೊಡಹಿ: ಕೆಡವಿ; ಹಾಯ್ದು: ಹೊಡೆ; ದಂತಿಘಟೆ: ಆನೆಗಳ ಗುಂಪು; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಕದಿ: ಸೀಳು; ಕುದುರೆ: ಅಶ್ವ; ಹಾಯ್ದು: ಮೇಲೆಬೀಳು; ಹಾಯಿಕು: ಹಾಕು; ರಾವುತ: ಕುದುರೆಸವಾರ; ಮಡಿ: ಸಾವು; ಸಾರಥಿ: ಸೂತ; ಮಗ್ಗು: ಕುಂದು, ಕುಗ್ಗು; ರಥ: ಬಂಡಿ; ನಡೆ: ಚಲಿಸು; ಕಾದು: ಹೋರಾಡು; ಮಹಾರಥ: ಪರಾಕ್ರಮಿ; ಮೆದೆ: ಒಡ್ಡು, ಗುಂಪು; ಕೆಡೆ: ಬೀಳು, ಕುಸಿ; ಉಳಿದ: ಮಿಕ್ಕ; ಪದಾತಿ: ಕಾಲಾಳು; ಪತನ: ಬೀಳು; ಅರಿ: ತಿಳಿ;

ಪದವಿಂಗಡಣೆ:
ಉಡಿಯೆ+ ಮೋರೆಯ +ಜೋಡು +ಜೋದರ
ಕೊಡಹಿ +ಹಾಯ್ದವು +ದಂತಿಘಟೆ +ಖುರ
ಕಡಿವಡಿಯೆ +ಕುದುರೆಗಳು +ಹಾಯ್ದವು +ಹಾಯ್ಕಿ +ರಾವುತರ
ಮಡಿಯೆ +ಸಾರಥಿ +ಮಗ್ಗಿದವು +ರಥ
ನಡೆದು +ಕಾದಿ +ಮಹಾರಥರು +ಮೆದೆ
ಕೆಡೆದುದ್+ಉಳಿದ +ಪದಾತಿ+ಪತನವನ್+ಅರಿಯೆ +ನಾನೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ನಡೆದು ಕಾದಿ ಮಹಾರಥರು ಮೆದೆಗೆಡೆದುದುಳಿದ ಪದಾತಿ

ಪದ್ಯ ೩: ಸೈನಿಕರು ಹೇಗೆ ಘಟೋತ್ಕಚನನ್ನು ಆವರಿಸಿದರು?

ಎಡಬಲದಿ ಹಿಂದಿದಿರಿನಲಿ ಕೆಲ
ಕಡೆಯ ದಿಕ್ಕಿನೊಳೌಕಿದರು ಬಲು
ಗಡಲ ಕಡೆಹದ ಹಿರಿಯನಬುಧಿಯ ತೆರೆಗಲೊದೆವಂತೆ
ಕೊಡಹಿದರೆ ಕಟ್ಟಿರುಹೆಗಳು ಬೆಂ
ಬಿಡದೆ ಭುಜಗನನಳಿಸುವವೋ
ಲಡಸಿ ತಲೆಯೊತ್ತಿದರು ಬೀಳುವ ಹೆಣನನೊಡಮೆಟ್ಟಿ (ದ್ರೋಣ ಪರ್ವ, ೧೬ ಸಂಧಿ, ೩ ಪದ್ಯ)

ತಾತ್ಪರ್ಯ:
ಎಡಬಲ ಹಿಂದೆ ಮುಂದೆ ಉಳಿದ ದಿಕ್ಕುಗಲಲ್ಲಿ ನುಗ್ಗಿ ಮಂದರಪರ್ವತವನ್ನು ಸಮುದ್ರದ ತೆರೆಗಳು ಅಪ್ಪಳಿಸುವಮ್ತೆ ಸೈನಿಕರು ನುಗ್ಗಿದರು. ಅವರನ್ನು ದೂರಕ್ಕೆ ದಬ್ಬಿದರೆ, ಕಟ್ಟಿರುವೆಗಳು ಹಾವನ್ನು ಮುತ್ತಿಕೊಂಡಂತೆ ಬಿದ್ದ ಹೆಣಗಲನ್ನು ತುಳಿದು ಘಟೋತ್ಕಚನ ಮೇಲೆ ಹಾಯ್ದರು.

ಅರ್ಥ:
ಎಡಬಲ: ಅಕ್ಕಪಕ್ಕ; ಹಿಂದೆ: ಹಿಂಭಾಗ; ಇದಿರು: ಎದುರು; ದಿಕ್ಕು: ದಿಶ; ಔಕು: ಒತ್ತು; ಬಲು: ಬಹಳ; ಕಡಲ: ಸಾಗರ; ಗಿರಿ: ಬೆಟ್ಟ; ಅಬುಧಿ: ಸಾಗರ; ತೆರೆ: ಅಲೆ, ತರಂಗ; ಒದೆ: ತುಳಿ, ಮೆಟ್ಟು; ಕೊಡಹು: ಬೆನ್ನುಬಿಡು; ಭುಜ: ಬಾಹು; ಅಳಿಸು: ನಾಶ; ಅಡಸು: ಆಕ್ರಮಿಸು, ಮುತ್ತು; ತಲೆ: ಶಿರ; ಬೀಳು: ಬಾಗು; ಹೆಣ: ಜೀವವಿಲ್ಲದ ಶರೀರ; ಇರುಹೆ: ಇರುವೆ;

ಪದವಿಂಗಡಣೆ:
ಎಡಬಲದಿ +ಹಿಂದ್+ಇದಿರಿನಲಿ +ಕೆಲ
ಕಡೆಯ +ದಿಕ್ಕಿನೊಳ್+ಔಕಿದರು +ಬಲು
ಕಡಲ+ ಕಡೆಹದ +ಹಿರಿಯನ್+ಅಬುಧಿಯ +ತೆರೆಗಳ್+ಒದೆವಂತೆ
ಕೊಡಹಿದರೆ+ ಕಟ್ಟಿರುಹೆಗಳು +ಬೆಂ
ಬಿಡದೆ +ಭುಜಗನನ್+ಅಳಿಸುವವೋಲ್
ಅಡಸಿ +ತಲೆಯೊತ್ತಿದರು +ಬೀಳುವ +ಹೆಣನ್+ಒಡಮೆಟ್ಟಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಲುಗಡಲ ಕಡೆಹದ ಹಿರಿಯನಬುಧಿಯ ತೆರೆಗಲೊದೆವಂತೆ; ಕಟ್ಟಿರುಹೆಗಳು ಬೆಂಬಿಡದೆ ಭುಜಗನನಳಿಸುವವೋಲ್

ಪದ್ಯ ೧೧: ಕೃಷ್ಣನು ಅರ್ಜುನನಿಗೇಕೆ ಜರೆದನು?

ಕೊಡಹಿ ಕುಸುಕಿರಿದಡ್ಡಬೀಳಿಕಿ
ಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
ಹಿಡಿ ಮಹಾಸ್ತ್ರವ ನಿನ್ನ ಶಿಷ್ಯನ
ಕಡು ನಿರೋಧವ ನೋಡು ಫಲುಗುಣ
ನುಡಿಗೆ ತರಹಿಲ್ಲೆಂದು ಮುರರಿಪು ಜರೆದನರ್ಜುನನ (ದ್ರೋಣ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೂರಿಶ್ರವನು ಸಾತ್ಯಕಿಯ ಕೂದಲು ಹಿಡಿದು ಕೊಡವಿ, ನೆಲಕ್ಕೆ ಕುಕ್ಕಿ ಅಡ್ಡಗೆಡವಿ ಭೂಜದಿಂದ ಹೊಡೆದು ಕತ್ತಿಯಿಂದ ಕೊರಳನ್ನು ಕತ್ತರಿಸಲು ಮುಂಬರಿದನು. ಆಗ ಶ್ರೀಕೃಷ್ಣನು, ಅರ್ಜುನ ನಿನ್ನ ಶಿಷ್ಯನಾದ ಸಾತ್ಯಕಿ ಹೀನ ದುರ್ಗತಿಯನ್ನು ನೋಡು, ಚರ್ಚೆಗೆ ಸಮಯವಿಲ್ಲ ಎಂದು ಜರೆದನು.

ಅರ್ಥ:
ಕೊಡಹು: ಜಗ್ಗು, ಅಲ್ಲಾಡಿಸು; ಕುಸುಕಿರಿ: ಹೊಡೆ; ಬೀಳು: ಕುಸಿ; ಮಡ: ಹಿಮ್ಮಡಿ; ಉರೆ: ಅತಿಶಯವಾಗಿ; ಘಟ್ಟಿಸು: ಹೊಡೆ, ಅಪ್ಪಳಿಸು; ಕೃಪಾಣ: ಕತ್ತಿ, ಖಡ್ಗ; ಜಡಿ: ಬೆದರಿಕೆ; ಗಂಟಲು: ಕಂಠ; ಬಳಿಗೆ: ಹತ್ತಿರ; ಹೂಡು: ಅಣಿಗೊಳಿಸು; ಅರಿ: ಸೀಳು; ಕೊರಳು: ಗಂಟಲು; ಹಿಡಿ: ಗ್ರಹಿಸು; ಅಸ್ತ್ರ: ಶಸ್ತ್ರ; ಶಿಷ್ಯ: ವಿದ್ಯಾರ್ಥಿ; ಕಡು: ಬಹಳ; ನಿರೋಧ: ಪ್ರತಿಬಂಧ; ನೋಡು: ವೀಕ್ಷಿಸು; ನುಡಿ: ಮಾತು; ತರಹರಿಸು: ಸೈರಿಸು; ಮುರರಿಪು: ಕೃಷ್ಣ; ಜರೆ: ಬಯ್ಯು;

ಪದವಿಂಗಡಣೆ:
ಕೊಡಹಿ +ಕುಸುಕಿರಿದ್+ಅಡ್ಡಬೀಳಿಕಿ
ಮಡದಲ್+ಉರೆ +ಘಟ್ಟಿಸಿ +ಕೃಪಾಣವ
ಜಡಿದು +ಗಂಟಲ +ಬಳಿಗೆ +ಹೂಡಿದನ್+ಅರಿವುದಕೆ +ಕೊರಳ
ಹಿಡಿ +ಮಹಾಸ್ತ್ರವ +ನಿನ್ನ + ಶಿಷ್ಯನ
ಕಡು +ನಿರೋಧವ +ನೋಡು +ಫಲುಗುಣ
ನುಡಿಗೆ +ತರಹಿಲ್ಲೆಂದು +ಮುರರಿಪು+ ಜರೆದನ್+ಅರ್ಜುನನ

ಅಚ್ಚರಿ:
(೧) ಹೋರಾಟವನ್ನು ವಿವರಿಸುವ ಪರಿ – ಕೊಡಹಿ ಕುಸುಕಿರಿದಡ್ಡಬೀಳಿಕಿಮಡದಲುರೆ ಘಟ್ಟಿಸಿ ಕೃಪಾಣವ
ಜಡಿದು ಗಂಟಲ ಬಳಿಗೆ ಹೂಡಿದನರಿವುದಕೆ ಕೊರಳ
(೨) ಗಂಟಲ, ಕೊರಳು – ಸಮಾನಾರ್ಥಕ ಪದ

ಪದ್ಯ ೨೫: ಸುಪ್ರತೀಕಗಜದ ಆಕ್ರಮಣ ಹೇಗಿತ್ತು?

ಹಿಡಿಹಿಡಿಯಲೋಡಿದನು ದ್ರುಪದನು
ಸಿಡಿದು ಕೆಲಸಾರಿದನು ಪವನಜ
ನೊಡಲುಸುರ ಸಂಬಂಧವಳಿದುದು ಸಿಲುಕಿದನಿಬರಿಗೆ
ಒಡೆಮುರಿದು ಸಾತ್ಯಕಿಯ ರಥವನು
ತುಡುಕಿ ಹಾಯ್ಕಿತು ಭೀಮತನಯನ
ಕೊಡಹಿ ಬಿಸುಟುದು ಕೊಂದುದಗಣಿತ ಕರಿ ತುರಂಗಮವ (ದ್ರೋಣ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅದು ಹಿಡಿಯಲು ಬರುತ್ತಿದ್ದಮ್ತೆ ದ್ರುಪದನು ಓಡಿಹೋದನು. ಪಕ್ಕಕ್ಕೆ ಹಾರಿ ಭೀಮನು ಉಳಿದುಕೊಂಡನು, ಅದಕ್ಕೆ ಸಿಕ್ಕದವರ ದೇಹಕ್ಕೂ ಪ್ರಾಣಕ್ಕೂ ಸಂಬಂಧ ತಪ್ಪಿತು. ಸಾತ್ಯಕಿಯ ರಥವನ್ನು ಸುಪ್ರತೀಕವು ಒಡೆದುಹಾಕಿತು, ಘಟೋತ್ಕಚನನ್ನು ಕೊಡವಿ ಎಸೆಯಿತು. ಲೆಕ್ಕವಿಲ್ಲದಷ್ಟು ಆನೆ ಕುದುರೆಗಳನ್ನು ಕೊಂದಿತು.

ಅರ್ಥ:
ಹಿಡಿ: ಬಂಧಿಸು; ಓಡು: ಧಾವಿಸು; ಸಿಡಿ: ಚಿಮ್ಮು; ಕೆಲ: ಪಕ್ಕ, ಸ್ವಲ್ಪ; ಸಾರು: ಹರಡು; ಪವನಜ: ಭೀಮ; ಒಡಲು: ದೇಹ; ಸುರ: ದೇವತೆ; ಸಂಬಂಧ: ಸಂಪರ್ಕ, ಸಹವಾಸ; ಅಳಿ: ನಾಶ; ಸಿಲುಕು: ಬಂಧನಕ್ಕೊಳಗಾಗು; ಅನಿಬರು: ಅಷ್ಟುಜನ; ಒಡೆ: ಸೀಳು, ಬಿರಿ; ಮುರಿ: ಸೀಳು; ರಥ: ಬಂಡಿ; ತುಡುಕು: ಹೋರಾಡು, ಸೆಣಸು; ಹಾಯ್ಕು: ಇಡು, ಇರಿಸು; ತನಯ: ಮಗ; ಕೊಡಹಿ: ತಳ್ಳು; ಬಿಸುಟು: ಹೊರಹಾಕು; ಕೊಂದು: ಸಾಯಿಸು; ಅಗಣಿತ: ಅಸಂಖ್ಯಾತ; ಕರಿ: ಆನೆ; ತುರಂಗ: ಕುದುರೆ;

ಪದವಿಂಗಡಣೆ:
ಹಿಡಿಹಿಡಿಯಲ್+ಓಡಿದನು +ದ್ರುಪದನು
ಸಿಡಿದು +ಕೆಲ+ಸಾರಿದನು +ಪವನಜನ್
ಒಡಲ್+ಉಸುರ+ ಸಂಬಂಧವ್+ಅಳಿದುದು +ಸಿಲುಕಿದ್+ಅನಿಬರಿಗೆ
ಒಡೆಮುರಿದು+ ಸಾತ್ಯಕಿಯ+ ರಥವನು
ತುಡುಕಿ +ಹಾಯ್ಕಿತು +ಭೀಮ+ತನಯನ
ಕೊಡಹಿ+ ಬಿಸುಟುದು +ಕೊಂದುದ್+ಅಗಣಿತ +ಕರಿ +ತುರಂಗಮವ

ಅಚ್ಚರಿ:
(೧) ಸಾಯಿಸಿತು ಎಂದು ಹೇಳಲು – ಒಡಲುಸುರ ಸಂಬಂಧವಳಿದುದು ಸಿಲುಕಿದನಿಬರಿಗೆ

ಪದ್ಯ ೨೪: ಸುಪ್ರತೀಕ ಗಜವು ಯಾರನ್ನು ಕೊಡಹಿ ಹಾಕಿತು?

ಸೆಳೆವಿಡಿದು ತುರುಗಾಹಿ ಪಶು ಸಂ
ಕುಲವ ತೆವರುವವೋಲು ವಾಯಸ
ಕುಲವನೊಂದೇ ಗೂಗೆ ಹೊಯ್ದರೆಯಟ್ಟುವಂದದಲಿ
ಬಲುಕಣಿಗಳಿವದಿರನು ಕರಿ ಮುಂ
ಕೊಳಿಸಿ ಕೆಡಹಿತು ಯವನ ಕೌಸಲ
ಬಲವ ಕೈಕೆಯ ಮಗಧ ಭೂಪರ ಕೊಡಹಿ ಹಾಯಿಕಿತು (ದ್ರೋಣ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ದನಕಾಯುವವರು ಕೋಲಿನಿಂದ ದನಗಲನ್ನು ಹೊಡೆಯುವ ಹಾಗೆ, ಕಾಗೆಗಳ ಗುಂಪನ್ನು ಒಂದೇ ಒಂದು ಗೂಬೆ ಬೆನ್ನುಹತ್ತಿ ಘಾತಿಸುವಂತೆ, ಬಲವಂತರನ್ನು ಸುಪ್ರತೀಕ ಗಜವು ಹೊಡೆದು ಕೆಡಹಿತು. ಯವನ, ಕೋಸಲ,ಕೇಕೆಯ, ಮಾಗಧ ರಾಜರನ್ನು ಕೊಡವಿ ಹಾಕಿತು.

ಅರ್ಥ:
ಸೆಳೆ: ಎಳೆತ, ಸೆಳೆತ; ತುರು: ಆಕಳು; ಪಶು: ಪ್ರಾಣಿ; ಸಂಕುಲ: ಗುಂಪು; ತೆವರು: ಅಟ್ಟು, ಓಡಿಸು; ವಾಯಸ: ಕಾಗೆ; ಕುಲ: ವಂಶ; ಗೂಗೆ: ಗೂಬೆ; ಹೊಯ್ದು: ಹೊಡೆ; ಅಟ್ಟು: ಬೆನ್ನಟ್ಟುವಿಕೆ; ಬಲುಕಣಿ: ದೊಡ್ಡ ಹಗ್ಗ; ಇವದಿರು: ಇಷ್ಟು ಜನ; ಕರಿ: ಆನೆ; ಮುಂಕೊಳು: ಮುಂದೆ ಬಂದು; ಕೆಡಹು: ಬೀಳಿಸು; ಬಲ: ಸೈನ್ಯ; ಭೂಪ: ರಾಜ; ಕೊಡಹು: ಬೀಳಿಸು;

ಪದವಿಂಗಡಣೆ:
ಸೆಳೆವಿಡಿದು+ ತುರುಗಾಹಿ +ಪಶು +ಸಂ
ಕುಲವ +ತೆವರುವವೋಲು +ವಾಯಸ
ಕುಲವನ್+ಒಂದೇ +ಗೂಗೆ +ಹೊಯ್ದರೆ+ಅಟ್ಟುವಂದದಲಿ
ಬಲುಕಣಿಗಳ್+ಇವದಿರನು+ ಕರಿ+ ಮುಂ
ಕೊಳಿಸಿ +ಕೆಡಹಿತು +ಯವನ +ಕೌಸಲ
ಬಲವ +ಕೈಕೆಯ+ ಮಗಧ+ ಭೂಪರ+ ಕೊಡಹಿ +ಹಾಯಿಕಿತು

ಅಚ್ಚರಿ:
(೧) ಉಪಮಾನದ ಪ್ರಯೋಗ – ಸೆಳೆವಿಡಿದು ತುರುಗಾಹಿ ಪಶು ಸಂಕುಲವ ತೆವರುವವೋಲು; ವಾಯಸ
ಕುಲವನೊಂದೇ ಗೂಗೆ ಹೊಯ್ದರೆಯಟ್ಟುವಂದದಲಿ