ಪದ್ಯ ೧೬: ದ್ರೋಣನು ಧೃಷ್ಟದ್ಯುಮ್ನನಿಗೆ ಏನೆಂದು ಹೇಳಿದನು?

ಎನ್ನು ಮತ್ತೊಮ್ಮೆನ್ನು ತನ್ನಾ
ಣೆನ್ನು ಗೆಲವೇ ನಮಗೆ ನಿಂದರೆ
ನಿನ್ನ ಸಮ್ಮುಖದಲಿ ಮಹಾದೇವಹುದು ಬಳಿಕೇನು
ತನ್ನಲುಂಟೇ ಖರೆಯತನ ಬರಿ
ದೆನ್ನನಿವನಿದ ಹಲವು ಬಾರಿಯ
ಮುನ್ನ ಬಲ್ಲೈ ನೀನೆನುತ ಸಾರಥಿಯ ಕೈವೊಯ್ದ (ದ್ರೋಣ ಪರ್ವ, ೧೮ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎಲ್ಲಿ ಇನ್ನೊಮ್ಮೆ ಆ ಮಾತನ್ನಾಡು, ನನ್ನಾಣೆ ಅದೇ ಮಾತನ್ನು ಹೇಳು, ನಿನ್ನೆದುರಿಗೆ ನಾನು ನಿಂತರೆ ಗೆಲ್ಲುವೆಯೋ, ಸಾರಥಿ, ಇವನು ಈ ಮಾತನ್ನು ಸುಮ್ಮನೇ ಆಡುತ್ತಿಲ್ಲ, ಈ ವಿಷಯವನ್ನು ನೀನು ಈ ಮೊದಲು ಹಲವು ಬಾರಿ ನೋಡಿರುವೆ ಎಂದು ದ್ರೋಣನು ನುಡಿದನು.

ಅರ್ಥ:
ಮತ್ತೊಮ್ಮೆ: ಪುನಃ; ಆಣೆ: ಪ್ರಮಾಣ; ಗೆಲುವು: ಜಯ; ನಿಂದು: ನಿಲ್ಲು; ಸಮ್ಮುಖ: ಎದುರು; ಬಳಿಕ: ನಂತರ; ಖರೆ: ನಿಜ; ಬರಿ: ಕೇವಲ; ಹಲವು: ಬಹಳ; ಬಾರಿ: ಸಲ, ಸರದಿ; ಮುನ್ನ: ಮೊದಲು; ಬಲ್ಲೆ: ತಿಳಿ; ಸಾರಥಿ: ಸೂತ;

ಪದವಿಂಗಡಣೆ:
ಎನ್ನು +ಮತ್ತೊಮ್ಮ್+ಎನ್ನು +ತನ್ನಾಣ್
ಎನ್ನು +ಗೆಲವೇ +ನಮಗೆ +ನಿಂದರೆ
ನಿನ್ನ +ಸಮ್ಮುಖದಲಿ +ಮಹಾದೇವ್+ಅಹುದು +ಬಳಿಕೇನು
ತನ್ನಲ್+ಉಂಟೇ +ಖರೆಯತನ +ಬರಿದ್
ಎನ್ನನ್+ಇವನಿದ+ ಹಲವು+ ಬಾರಿಯ
ಮುನ್ನ +ಬಲ್ಲೈ +ನೀನೆನುತ +ಸಾರಥಿಯ +ಕೈವೊಯ್ದ

ಅಚ್ಚರಿ:
(೧) ಹಂಗಿಸುವ ಪರಿ – ಗೆಲವೇ ನಮಗೆ ನಿಂದರೆ ನಿನ್ನ ಸುಮ್ಮುಖದಲಿ ಮಹಾದೇವಹುದು ಬಳಿಕೇನು