ಪದ್ಯ ೫೦: ದುರ್ಯೋಧನನು ಕೌರವ ಸೇನೆಗೆ ಏನು ಹೇಳಿದ?

ಕಂಡನೀ ಶಲ್ಯಾರ್ಜುನರ ಕೋ
ದಂಡಸಾರಶ್ರುತಿರಹಸ್ಯದ
ದಂಡಿಯನು ಕುರುರಾಯ ಕೈವೀಸಿದನು ತನ್ನವರ
ಗಂಡುಗಲಿಗಳೊ ವೀರಸಿರಿಯುಳಿ
ಮಿಂಡರೋ ತನಿನಗೆಯ ಬಿರುದಿನ
ಭಂಡರೋ ನೀವಾರೆನುತ ಮೂದಲಿಸಿದನು ಭಟರ (ಶಲ್ಯ ಪರ್ವ, ೨ ಸಂಧಿ, ೫೦ ಪದ್ಯ)

ತಾತ್ಪರ್ಯ:
ಶಲ್ಯಾರ್ಜುನರ ಧನುರ್ವೇದ ರಹಸ್ಯದ ಘನತೆಯನ್ನು ಕಂಡು ಕೌರವನು ತನ್ನ ಸೇನೆಯ ವೀರರನ್ನು ಕರೆದು ನೀವೇನು ಗಂಡುಗಲಿಗಳೋ? ಪರಾಕ್ರಮ ಲಕ್ಷ್ಮಿಯು ಸಿಕ್ಕುವಳೆಂದು ಸುಮ್ಮನೆ ಕಾದು ನಿಮ್ತ ಜಾರರೋ? ಬಿರುದಗಳಿಂದ ಹೊಗಳಿಸಿಕೊಂಡು ನಕ್ಕು ಹಿಗ್ಗುವ ಭಂಡರೋ? ನೀವಾರು ಎಂದು ಮೂದಲಿಸಿದನು.

ಅರ್ಥ:
ಕಂಡು: ನೋಡು; ಕೋದಂಡ: ಬಿಲ್ಲು; ಸಾರ: ಸತ್ವ; ರಹಸ್ಯ: ಗುಟ್ಟು; ದಂಡಿ: ಘನತೆ, ಹಿರಿಮೆ; ಶ್ರುತಿ: ವೇದ; ಕೈವೀಸು: ಹಸ್ತವನ್ನು ಅಲ್ಲಾಡಿಸು; ಗಂಡುಗಲಿ: ಪರಾಕ್ರಮಿ; ವೀರ: ಶೂರ; ಸಿರಿ: ಐಶ್ವರ್ಯ; ಮಿಂಡ: ವೀರ, ಶೂರ; ತನಿ: ಚೆನ್ನಾಗಿ ಬೆಳೆದುದು; ನಗೆ: ಹರ್ಷ; ಬಿರುದು: ಗೌರವ ಸೂಚಕ ಪದ; ಭಂಡ: ನಾಚಿಕೆ, ಲಜ್ಜೆ; ಮೂದಲಿಸು: ಹಂಗಿಸು; ಭಟ: ಸೈನಿಕ;

ಪದವಿಂಗಡಣೆ:
ಕಂಡನ್+ಈ+ ಶಲ್ಯ+ಅರ್ಜುನರ +ಕೋ
ದಂಡ+ಸಾರ+ಶ್ರುತಿ+ರಹಸ್ಯದ
ದಂಡಿಯನು +ಕುರುರಾಯ +ಕೈವೀಸಿದನು +ತನ್ನವರ
ಗಂಡುಗಲಿಗಳೊ+ ವೀರಸಿರಿ+ಉಳಿ
ಮಿಂಡರೋ +ತನಿ+ನಗೆಯ +ಬಿರುದಿನ
ಭಂಡರೋ +ನೀವಾರೆನುತ+ ಮೂದಲಿಸಿದನು +ಭಟರ

ಅಚ್ಚರಿ:
(೧) ಕೋದಂಡ, ಮಿಂಡ, ಭಂಡ, ಕಂಡ – ಪ್ರಾಸ ಪದಗಳು

ಪದ್ಯ ೩೨: ದ್ರೋಣನು ಏನನ್ನು ತರಲು ಕೈಬೀಸಿದನು?

ತೆಗೆಸಿ ಚೂಣಿಯ ಬಲವ ದೀವ
ಟ್ಟಿಗರ ಕರೆ ಕರೆ ತೈಲಪೂರ್ಣದ
ತೊಗಲ ಕುನಿಕಿಲ ಬಂಡಿ ಕವಿಯಲಿ ಕೋಟಿ ಸಂಖ್ಯೆಯಲಿ
ಬಿಗಿದ ಮಳವೆಯನೆಣ್ಣೆಗೊಪ್ಪರಿ
ಗೆಗಳೊಳದ್ದಲಿ ಗಳೆಗಳಲಿ ಸೀ
ರೆಗಳ ಸುತ್ತಲಿಯೆಂದು ಕೈವೀಸಿದನು ಕಲಿ ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಮುಂಚೂಣಿಯ ಬಲವನ್ನು ತೆಗೆಸಿ, ದೀವಟಿಗೆಯವರನ್ನು ಕರೆಸು, ತೈಲ ತುಂಬಿದ ಚರ್ಮದ ಚೀಲಗಳ ಬಂಡಿಯು ಕ್ಟಿಗಟ್ಟಲೆ ಬರಲಿ, ಜೋಡಿಸಿ ಕಟ್ಟಿದ ಬಟ್ಟೆಗಳ ರಾಶಿಯನ್ನು ಎಣ್ಣೆಗೊಪ್ಪರಿಗೆಗಳಲ್ಲಿ ಅದ್ದಿ, ಗಳುಗಳಿಗೆ ತೈಲದ ಸೀರೆಗಳನ್ನು ಸುತ್ತಿ ಪಂಜುಗಳನ್ನು ಮಾಡಿರಿ ಎಂದು ದ್ರೋಣನು ಅಪ್ಪಣೆ ಮಾಡಿ ಕೈಬೀಸಿದನು.

ಅರ್ಥ:
ತೆಗೆಸು: ಹೊರತರು; ಚೂಣಿ: ಮುಂದಿನ ಸಾಲು, ಮುಂಭಾಗ; ಬಲ: ಶಕ್ತಿ, ಸೈನ್ಯ; ದೀವಟಿ: ಪಂಜು; ಕರೆ: ಬರೆಮಾಡು; ತೈಲ: ಎಣ್ಣೆ; ಪೂರ್ಣ: ತುಂಬ; ತೊಗಲು: ಚರ್ಮ, ತ್ವಕ್ಕು; ಕುನಿಕಿಲ: ಚೀಲ; ಬಂಡಿ: ರಥ; ಕವಿ: ಆವರಿಸು; ಕೋಟಿ: ಅಸಂಖ್ಯಾತ; ಸಂಖ್ಯೆ: ಎಣಿಕೆ; ಬಿಗಿ: ಗಟ್ಟಿ; ಮಳವೆ: ಮೂಟೆ, ಗಂಟು; ಅದ್ದು: ಒದ್ದೆ ಮಾಡು, ನೆನೆ; ಸೀರೆ: ಬಟ್ಟೆ, ವಸ್ತ್ರ; ಸುತ್ತು: ಆವರಿಸು; ಕೈವೀಸು: ಕೈಯನ್ನು ಅಲ್ಲಾಡಿಸು; ಕಲಿ: ಶೂರ;

ಪದವಿಂಗಡಣೆ:
ತೆಗೆಸಿ +ಚೂಣಿಯ +ಬಲವ +ದೀವ
ಟ್ಟಿಗರ+ ಕರೆ +ಕರೆ+ ತೈಲ+ಪೂರ್ಣದ
ತೊಗಲ +ಕುನಿಕಿಲ +ಬಂಡಿ +ಕವಿಯಲಿ +ಕೋಟಿ +ಸಂಖ್ಯೆಯಲಿ
ಬಿಗಿದ +ಮಳವೆಯನ್+ಎಣ್ಣೆಗ್+ಒಪ್ಪರಿ
ಗೆಗಳೊಳ್+ಅದ್ದಲಿ +ಗಳೆಗಳಲಿ +ಸೀ
ರೆಗಳ +ಸುತ್ತಲಿಯೆಂದು+ ಕೈವೀಸಿದನು +ಕಲಿ+ ದ್ರೋಣ

ಅಚ್ಚರಿ:
(೧) ದ್ರೋಣನ ಆಜ್ಞೆ – ಬಿಗಿದ ಮಳವೆಯನೆಣ್ಣೆಗೊಪ್ಪರಿಗೆಗಳೊಳದ್ದಲಿ ಗಳೆಗಳಲಿ ಸೀರೆಗಳ ಸುತ್ತಲಿಯೆಂದು

ಪದ್ಯ ೭: ಅಭಿಮನ್ಯುವನ್ನು ಯಾರು ಮುತ್ತಿದರು?

ಪಡೆಯ ತೆಗೆ ತರುವಲಿಯ ಕೊಲ್ಲದೆ
ಹಿಡಿಯೆನುತ ಬಿರುಸರಳ ತಿರುವಿನ
ಲಡಸಿ ಸೂತರಿಗರುಹಿ ಕೆಲಬಲದವರ ಕೈವೀಸಿ
ಕಡುಮನದ ಕೈಚಳಕಿಗರು ಮುಂ
ಗುಡಿಯಲೈತರೆ ರವಿಸುತಾದಿಗ
ಳೊಡನೊಡನೆ ಕೈಕೊಂಡರಿಂದ್ರಕುಮಾರ ನಂದನನ (ದ್ರೋಣ ಪರ್ವ, ೬ ಸಂಧಿ, ೭ ಪದ್ಯ)

ತಾತ್ಪರ್ಯ:
ಸೈನ್ಯವನ್ನು ಹಿಂದಿರುಗಲು ಹೇಳು, ಆ ಬಾಲಕನನ್ನು ಕೊಲ್ಲಬೇಡಿ ಅವನನ್ನು ಬಂಧಿಸಿ ಎಂದು ಕರ್ಣನೇ ಮೊದಲಾದವರು ಮಹಾ ಛಲದಿಂದ ಸೈನ್ಯಕ್ಕೆ ಸನ್ನೆ ಮಾಡಿ ಕಳಿಸಿ ಸಾರಥಿಗಳಿಗೆ ಹೇಳಿ ಅಭಿಮನ್ಯುವನ್ನು ಒಟ್ಟಾಗಿ ಮುತ್ತಿದರು.

ಅರ್ಥ:
ಪಡೆ: ಸೈನ್ಯ; ತೆಗೆ: ಹೊರತರು; ತರುವಲಿ: ಹುಡುಗ, ಬಾಲಕ; ಕೊಲ್ಲು: ಸಾಯಿಸು; ಹಿಡಿ: ಬಂಧಿಸು; ಬಿರು:ಗಟ್ಟಿಯಾದುದು; ಸರಳು: ಬಾಣ; ತಿರುವು: ತಿರುಗು, ಬಾಗು; ಅಡಸು: ಬಿಗಿಯಾಗಿ ಒತ್ತು, ಆಕ್ರಮಿಸು; ಸೂತ: ಸಾರಥಿ; ಅರುಹು: ತಿಳಿಸು, ಹೇಳು; ಕೆಲಬಲ: ಅಕ್ಕಪಕ್ಕ; ಕೈವೀಸು: ಸನ್ನೆ ಮಾಡು; ಕಡು: ವಿಶೇಷ, ಅಧಿಕ; ಮನ; ಮನಸ್ಸು; ಕೈಚಳಕ: ಚಾಣಕ್ಷತೆ; ಮುಂಗುಡು: ಮುಂದೆಬಂದು; ಐತರು: ಬಂದು ಸೇರು; ರವಿಸುತ: ಸೂರ್ಯನ ಮಗ (ಕರ್ಣ); ಆದಿ: ಮುಂತಾದ; ಒಡನೊಡನೆ: ಕೂಡಲೆ; ಕೈಕೊಂಡು: ವಹಿಸಿಕೊಳ್ಳು, ಸ್ವೀಕರಿಸು; ಕುಮಾರ: ಮಗ; ನಂದನ: ಮಗ;

ಪದವಿಂಗಡಣೆ:
ಪಡೆಯ +ತೆಗೆ +ತರುವಲಿಯ +ಕೊಲ್ಲದೆ
ಹಿಡಿ+ಎನುತ +ಬಿರುಸರಳ+ ತಿರುವಿನಲ್
ಅಡಸಿ+ ಸೂತರಿಗ್+ಅರುಹಿ +ಕೆಲಬಲದವರ +ಕೈವೀಸಿ
ಕಡುಮನದ +ಕೈಚಳಕಿಗರು+ ಮುಂ
ಗುಡಿಯಲ್+ಐತರೆ+ ರವಿಸುತಾದಿಗಳ್
ಒಡನೊಡನೆ +ಕೈಕೊಂಡರ್+ಇಂದ್ರಕುಮಾರ +ನಂದನನ

ಅಚ್ಚರಿ:
(೧) ಅಭಿಮನ್ಯುವನ್ನು ಇಂದ್ರಕುಮಾರ ನಂದನ, ತರುವಲಿ ಎಂದು ಕರೆದಿರುವುದು
(೨) ಸುತ, ಕುಮಾರ, ನಂದನ – ಸಮಾನಾರ್ಥಕ ಪದ
(೩) ಕೈಕೊಂಡು, ಕೈವೀಸಿ, ಕೈಚಳಕಿ – ಪದಗಳ ಬಳಕೆ

ಪದ್ಯ ೩೦: ದ್ರೊಣನು ಸಾರಥಿಗೆ ಏನೆಂದು ಹೇಳಿದನು?

ಬಿಲ್ಲನೊದರಿಸಿ ಕೆಲಬಲದ ಭಟ
ರೆಲ್ಲರಿಗೆ ಕೈವೀಸಿ ಚೌಪಟ
ಮಲ್ಲ ನುಡಿದನು ತನ್ನ ಸಾರಥಿಗಿತ್ತು ವೀಳೆಯವ
ಖುಲ್ಲ ರಿಪುಗಳ ಬಿಸುಟು ಹೊದರಿನ
ಹೊಳ್ಳುಗರನೊಡೆಹಾಯ್ಸಿ ಧರ್ಮಜ
ನೆಲ್ಲಿ ಮೋಹರದೆಗೆವನತ್ತಲೆ ರಥವ ಹರಿಸೆಂದ (ದ್ರೋಣ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ದ್ರೋಣನು ತನ್ನ ಬಿಲ್ಲನ್ನು ಮಿಡಿದು, ಸುತ್ತಲಿದ್ದವರನ್ನು ಕೈಬೀಸಿ ಕರೆದು, ಸಾರಥಿಗೆ ವೀಳೆಯನ್ನು ಕೊಟ್ಟು, ಕ್ಷುಲ್ಲಕರಾದ ಶತ್ರುಗಳನ್ನು ದೂರಕ್ಕೆಸೆದು, ಗುಂಪಾಗಿ ನಿಂತಿರುವ ಜೊಳ್ಳಾದವನನ್ನು ಬೀಳುವಂತೆ ಮಾಡಿ, ಧರ್ಮರಾಯನ ಸೇನೆಯತ್ತ ರಥವನ್ನು ನಡೆಸು ಎಂದು ಹೇಳಿದನು.

ಅರ್ಥ:
ಬಿಲ್ಲು: ಚಾಪ; ಒದರು: ಕೊಡಹು ; ಕೆಲಬಲ: ಅಕ್ಕಪಕ್ಕ; ಭಟ: ಸೈನಿಕ; ಕೈ: ಹಸ್ತ; ವೀಸು: ತೂಗುವಿಕೆ; ಚೌಪಟಮಲ್ಲ: ನಾಲ್ಕು ಕಡೆಗೂ ಕಾದಾಡುವ ವೀರ; ನುಡಿ: ಮಾತಾಡು; ಸಾರಥಿ: ಸೂತ; ವೀಳೆ: ತಾಂಬೂಲ; ಖುಲ್ಲ: ದುಷ್ಟ, ಅಲ್ಪವಾದ, ನೀಚ; ರಿಪು: ವೈರಿ; ಬಿಸುಟು: ಹೊರಹಾಕು; ಹೊದರು: ಪೊದೆ, ಹಿಂಡಲು; ಹೊಳ್ಳು: ಹುರುಳಿಲ್ಲದುದು, ಜೊಳ್ಳು; ಹಾಯಿಸು: ಓಡಿಸು; ಮೋಹರ: ಯುದ್ಧ; ಹರಿಸು: ಚಲಿಸು;

ಪದವಿಂಗಡಣೆ:
ಬಿಲ್ಲನ್+ಒದರಿಸಿ +ಕೆಲಬಲದ+ ಭಟ
ರೆಲ್ಲರಿಗೆ +ಕೈವೀಸಿ +ಚೌಪಟ
ಮಲ್ಲ +ನುಡಿದನು +ತನ್ನ +ಸಾರಥಿಗಿತ್ತು +ವೀಳೆಯವ
ಖುಲ್ಲ +ರಿಪುಗಳ +ಬಿಸುಟು +ಹೊದರಿನ
ಹೊಳ್ಳುಗರನ್+ಒಡೆಹಾಯ್ಸಿ +ಧರ್ಮಜ
ನೆಲ್ಲಿ +ಮೋಹರ+ತೆಗೆವನ್+ಅತ್ತಲೆ +ರಥವ +ಹರಿಸೆಂದ

ಅಚ್ಚರಿ:
(೧) ದ್ರೋಣರನ್ನು ಚೌಪಟಮಲ್ಲ ಎಂದು ಕರೆದಿರುವುದು
(೨) ಸಾರಥಿಗೆ ಕೊಟ್ಟ ಆಜ್ಞೆ – ಖುಲ್ಲ ರಿಪುಗಳ ಬಿಸುಟು ಹೊದರಿನ ಹೊಳ್ಳುಗರನೊಡೆಹಾಯ್ಸಿ

ಪದ್ಯ ೨೩: ದ್ರೋಣನು ಹೇಗೆ ಬೊಬ್ಬಿರಿದನು?

ಆರಿ ಬೊಬ್ಬಿರಿದಖಿಳ ಸೇನೆಯ
ಭೂರಿ ಭಟರಗ್ರದಲಿ ಕಟಕಾ
ಚಾರಿಯನು ಕೈವೀಸಿದನು ಬರಹೇಳು ಪವನಜನ
ವೀರನಾದಡೆ ದ್ರೆಯ ಹೊಗ ಹೇ
ಳಾರು ತಡೆದರೆ ತಡೆಯಿ ಹಿಡಿವೆನು
ಧೀರ ಕೌರವನಾಣೆನುತ ಬೊಬ್ಬಿರಿದನಾ ದ್ರೋಣ (ದ್ರೋಣ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಮಹಾಧ್ವನಿಯಿಂದ ಗರ್ಜಿಸಿ, ಸೈನ್ಯದ ಮುಂಭಾಗದಲ್ಲಿ ನಿಂತು ದ್ರೋಣನು ಕೈಬೀಸಿ ಭೀಮನನ್ನು ಬರಹೇಳು, ವೀರನಾದರೆ ಧರ್ಮಜನು ಯುದ್ಧಕ್ಕೆ ಬರಲಿ, ಯಾರು ಬೇಕಿದ್ದರೂ ತಡೆಯಬಹುದು, ಧೀರನಾದ ದುರ್ಯೋಧನನಾಣೆಯಾಗಿ ಯುಧಿಷ್ಠಿರನನ್ನು ಸೆರೆ ಹಿಡಿಯುತ್ತೇನೆ ಎಂದು ಬೊಬ್ಬಿರಿದನು.

ಅರ್ಥ:
ಆರು: ಗರ್ಜಿಸು; ಬೊಬ್ಬಿರಿ: ಜೋರಾಗಿ ಕೂಗು; ಸೇನೆ: ಸೈನ್ಯ; ಭೂರಿ: ಹೆಚ್ಚು, ಅಧಿಕ; ಭಟ: ಸೈನ್ಯ; ಅಗ್ರ: ಮುಂಭಾಗ; ಕಟಕ: ಗುಂಪು, ಸೈನ್ಯ; ಆಚಾರಿ:ಗುರು; ಕೈವೀಸು: ಕೈಯಾಡಿಸು; ಬರಹೇಳು: ಆಗಮಿಸು; ಪವನಜ: ಭೀಮ; ವೀರ: ಪರಾಕ್ರಮಿ; ದೊರೆ: ರಾಜ; ಹೊಗರು: ಕಾಂತಿ; ಹೇಳಾರು: ಹೇಳು: ತಿಳಿಸು; ತಡೆ: ನಿಲ್ಲಿಸು; ಹಿಡಿ: ಬಂಧಿಸು; ಧೀರ: ಪರಾಕ್ರಮಿ; ಆಣೆ: ಪ್ರಮಾಣ;

ಪದವಿಂಗಡಣೆ:
ಆರಿ +ಬೊಬ್ಬಿರಿದ್+ಅಖಿಳ +ಸೇನೆಯ
ಭೂರಿ +ಭಟರ್+ಅಗ್ರದಲಿ +ಕಟಕಾ
ಚಾರಿಯನು +ಕೈವೀಸಿದನು +ಬರಹೇಳು +ಪವನಜನ
ವೀರನಾದಡೆ +ದೊರೆಯ+ ಹೊಗ+ ಹೇಳ್
ಆರು +ತಡೆದರೆ +ತಡೆಯಿ +ಹಿಡಿವೆನು
ಧೀರ +ಕೌರವನಾಣೆನುತ +ಬೊಬ್ಬಿರಿದನಾ +ದ್ರೋಣ

ಅಚ್ಚರಿ:
(೧) ವೀರ, ಧೀರ – ಪ್ರಾಸ, ಸಮಾನಾರ್ಥಕ ಪದ;
(೨) ದ್ರೋಣನನ್ನು ಕಟಕಾಚಾರಿ ಎಂದು ಕರೆದಿರುವುದು

ಪದ್ಯ ೧೩: ಭೀಷ್ಮನನ್ನು ಎದುರಿಸಲು ಯಾರು ಎದುರಾದರು?

ಸೋಲ ಮಿಗಲೊಳಸರಿವ ಬಿರುದರ
ಬೀಳಗೆಡಹಿಸಿ ಕಪಿಯ ಹಳವಿಗೆ
ಗೋಲನೆತ್ತಿಸಿ ಕೆಲಬಲದ ಮನ್ನೆಯರ ಕೈವೀಸಿ
ಆಲಿಯಲಿ ಕಿಡಿ ಸೂಸೆ ಮೀಸೆಯ
ಮೇಲುದಿರುಹುತಲೌಡುಗಚ್ಚಿ ಕ
ರಾಳರೋಷ ಮಹೋಗ್ರವೀರನು ಪಾರ್ಥನಿದಿರಾದ (ಭೀಷ್ಮ ಪರ್ವ, ೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಸೋಲನ್ನು ತಪ್ಪಿಸಿಕೊಳ್ಳಲು ಹಿಂದೆ ಸರಿಯುತ್ತಿದ್ದ ವೀರರನ್ನು ತನ್ನವರಿಮ್ದ ಹೊಡೆದು ಕೆಡವಿಸಿ, ಕಪಿಧ್ವಜವನ್ನು ರಥಕ್ಕೆ ಕಟ್ಟಿಸಿ ಸುತ್ತಮುತ್ತಲಿದ್ದ ಸಾಮಂತರನ್ನು ಕೈಬೀಸಿ ಬರಲು ಸನ್ನೆ ಮಾಡಿ ಕಣ್ಣಲ್ಲಿ ಕಿಡಿಗೆದರಲು, ಮೀಸೆಯನ್ನು ಮೇಲಕ್ಕೆ ತಿರುವಿ, ಹಲ್ಲನ್ನು ಕಚುತ್ತಾ, ಮಹಾರೋಷಭರಿತನೂ ಭಯಂಕರನೂ ಆದ ವೀರ ಪಾರ್ಥನು ಭೀಷ್ಮನನ್ನು ಎದುರಿಸಿ ನಿಂತನು.

ಅರ್ಥ:
ಸೋಲು: ಪರಾಭವ; ಮಿಗಲು: ಹೆಚ್ಚಾಗಲು; ಒಳಸರಿ: ಹಿಂದೆ ಹೋಗು; ಬಿರುದು: ಗೌರವ ಸೂಚಕ ಹೆಸರು; ಬೀಳು: ಕೆಡೆ, ಕುಸಿ; ಕಪಿ: ಹನುಮಂತ; ಹಳವಿಗೆ: ಬಾವುಟ; ಗೋಲು: ಪಕ್ಕ, ಪಾರ್ಶ್ವ; ಎತ್ತು: ಮೇಲೇರು; ಕೆಲ: ಪಕ್ಕ, ಮಗ್ಗುಲು; ಬಲ: ಸೈನ್ಯ; ಮನ್ನೆಯ: ಮೆಚ್ಚಿನ; ಕೈ: ಹಸ್ತ; ವೀಸು: ತೂಗುವಿಕೆ; ಆಲಿ: ಕಣ್ಣು; ಕಿಡಿ: ಬೆಂಕಿ; ಸೂಸು: ಹರಡು; ಮೇಲು: ಮೇಲಕ್ಕೆ; ತಿರುಹು: ತಿರುಗಿಸು; ಔಡು: ಹಲ್ಲಿನಿಂದ ಕಚ್ಚು; ಕರಾಳ: ಭಯಂಕರ; ರೋಷ: ಕೋಪ; ಮಹೋಗ್ರ: ಬಹಳ ಪ್ರಚಂಡ, ಕೋಪಿಷ್ಠ; ವೀರ: ಪರಾಕ್ರಮಿ; ಇದಿರು: ಎದುರು;

ಪದವಿಂಗಡಣೆ:
ಸೋಲ+ ಮಿಗಲ್+ಒಳಸರಿವ +ಬಿರುದರ
ಬೀಳ+ಕೆಡಹಿಸಿ +ಕಪಿಯ +ಹಳವಿಗೆ
ಗೋಲನೆತ್ತಿಸಿ+ ಕೆಲಬಲದ+ ಮನ್ನೆಯರ +ಕೈವೀಸಿ
ಆಲಿಯಲಿ +ಕಿಡಿ +ಸೂಸೆ +ಮೀಸೆಯ
ಮೇಲು+ತಿರುಹುತಲ್+ಔಡುಗಚ್ಚಿ+ ಕ
ರಾಳರೋಷ+ ಮಹೋಗ್ರ+ವೀರನು+ ಪಾರ್ಥನ್+ಇದಿರಾದ

ಅಚ್ಚರಿ:
(೧) ಅರ್ಜುನನ ಚಿತ್ರಣ – ಆಲಿಯಲಿ ಕಿಡಿ ಸೂಸೆ ಮೀಸೆಯ ಮೇಲುದಿರುಹುತಲೌಡುಗಚ್ಚಿ ಕ
ರಾಳರೋಷ ಮಹೋಗ್ರವೀರನು ಪಾರ್ಥನಿದಿರಾದ

ಪದ್ಯ ೩೬: ಘಟೋತ್ಕಚನು ಪಾಂಡವರನ್ನು ಹೇಗೆ ದಾಟಿಸಿದನು?

ಹೊತ್ತನರಸನನರಸನನುಜರ
ನೆತ್ತಿದನು ನೃಪನರಸಿಯನು ಬಳಿ
ಕೆತ್ತಿ ಕೈವೀಸಿದನು ಭಟರಿಗೆ ತೋರಿ ಪರಿಜನವ
ಹೊತ್ತರನಿಬರನಸುರ ಭಟರೊ
ತ್ತೊತ್ತೆಯಾದುದು ಬೆನ್ನಿನಲಿ ಬಿಗಿ
ದೆತ್ತಿಹಾಯ್ದರು ಮುಗಿಲ ಥಟ್ಟಿನ ಪರಿಯ ಜೋಡಿನಲಿ (ಅರಣ್ಯ ಪರ್ವ, ೧೦ ಸಂಧಿ, ೩೬ ಪದ್ಯ)

ತಾತ್ಪರ್ಯ:
ಘಟೋತ್ಕಚನು ಧರ್ಮಜ, ಅವನ ತಮ್ಮಂದಿರು, ದ್ರೌಪದಿ ಇವರನ್ನು ಹೊತ್ತುಕೊಂಡು ತನ್ನ ಪರಿವಾರದವರಿಗೆ ಪಾಂಡವರ ಪರಿವಾರವನ್ನು ಕೈಬೀಸಿ ತೋರಿಸಿದನು. ಅವರು ಎಲ್ಲರನ್ನು ಹೊತ್ತು ಮೋಡಗಳ ಗುಂಪಿನಂತೆ ಆಕಾಶದಲ್ಲಿ ಗಮಿಸಿದರು.

ಅರ್ಥ:
ಹೊತ್ತು: ಹತ್ತಿಕೊಳ್ಳು; ಅರಸ: ರಾಜ; ಅನುಜ: ತಮ್ಮ; ಎತ್ತು: ಎತ್ತಿ ಹಿಡಿ; ನೃಪ: ರಾಜ; ಅರಸಿ: ರಾಣಿ; ಬಳಿಕ: ಅನಂತರ; ಕೈ: ಕರ, ಹಸ್ತ; ವೀಸು: ಒಗೆ, ಎಸೆ; ಭಟ: ಸೇವಕ, ಶೂರ; ತೋರು: ಕಾಣು, ದೃಷ್ಟಿಗೆ ಬೀಳು; ಪರಿಜನ: ಸುತ್ತಲಿನ ಜನ, ಪರಿವಾರ; ಅಸುರ: ರಾಕ್ಷಸ; ಒತ್ತು: ಮುತ್ತು; ಬೆನ್ನು: ಹಿಂಭಾಗ; ಬಿಗಿ: ಕಟ್ಟು; ಹಾಯ್ದು: ಮೇಲೆಬಿದ್ದು; ಮುಗಿಲು: ಆಗಸ; ಥಟ್ಟು: ಗುಂಪು, ಸೈನ್ಯ, ಪಡೆ; ಪರಿ: ರೀತಿ; ಜೋಡು: ಜೊತೆ; ಅನಿಬರು: ಅಷ್ಟುಜನ;

ಪದವಿಂಗಡಣೆ:
ಹೊತ್ತನ್+ಅರಸನನ್+ಅರಸನ್+ಅನುಜರನ್
ಎತ್ತಿದನು +ನೃಪನ್+ಅರಸಿಯನು +ಬಳಿಕ್
ಎತ್ತಿ+ ಕೈವೀಸಿದನು +ಭಟರಿಗೆ +ತೋರಿ +ಪರಿಜನವ
ಹೊತ್ತರ್+ಅನಿಬರನ್+ಅಸುರ +ಭಟರ್
ಒತ್ತೊತ್ತೆಯಾದುದು +ಬೆನ್ನಿನಲಿ +ಬಿಗಿ
ದೆತ್ತಿಹಾಯ್ದರು ಮುಗಿಲ ಥಟ್ಟಿನ ಪರಿಯ ಜೋಡಿನಲಿ

ಅಚ್ಚರಿ:
(೧) ಮೊದಲನೇ ಸಾಲು ಒಂದೇ ಪದವಾಗಿರುವುದು – ಹೊತ್ತನರಸನನರಸನನುಜರ

ಪದ್ಯ ೫೭: ಶಿಶುಪಾಲನು ಯುದ್ಧಕ್ಕೆ ಹೇಗೆ ಮುಂದೆ ಹೋದನು?

ಎಂದು ಚಾಪವ ತರಿಸಿ ಚಪ್ಪರ
ದಿಂದ ಹೊರವಡುತವನಿಪಾಲಕ
ವೃಂದವನು ಕೈವೀಸಿದನು ಕರೆ ಗೋಕುಲೇಶ್ವರನ
ಇಂದಲೇ ರಿಪುರುಧಿರ ಪಾನಾ
ನಂದಕೃತ ಮದಶಾಕಿನೀ ಸ್ವ
ಚ್ಛಂದ ಲೀಲಾ ನೃತ್ಯದರ್ಶನವೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೫೭ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ ಶಿಶುಪಾಲನು ಬಿಲ್ಲನ್ನು ತರಿಸಿ, ಚಪ್ಪರವನ್ನು ಬಿಟ್ಟು ಹೊರಕ್ಕೆ ಹೋಗುತ್ತಾ ಉಳಿದ ರಾಜರನ್ನು ಕೈಬೀಸಿ ಕರೆದು, ಗೋಕುಲದ ಒಡೆಯನನ್ನು ಕರೆಯಿರಿ, ಈ ದಿವಿಸ ಶಾಕಿನಿ ಡಾಕಿನಿಯರು ನನ್ನ ಶತ್ರುವಿನ ರಕ್ತವನ್ನು ಕುಡಿದು ಮನಬಂದಂತೆ ಕುಣಿದಾಡುವುದನ್ನು ನೋಡಬಹುದು ಎಂದು ಗರ್ಜಿಸಿದನು.

ಅರ್ಥ:
ಚಾಪ: ಬಿಲ್ಲು; ತರಿಸು: ಬರೆಮಾಡು; ಚಪ್ಪರ: ದರ್ಬಾರು, ಓಲಗ; ಹೊರವಡು: ಹೊರನಡೆದು; ಅವನಿಪಾಲ: ರಾಜ; ವೃಂದ: ಗುಂಪು; ಕೈವೀಸು: ಕೈಬೀಸು; ಕರೆ: ಕೂಗು, ಆಹ್ವಾನ ಮಾಡು; ಗೋಕುಲೇಶ್ವರ: ಕೃಷ್ಣ; ರಿಪು: ವೈರಿ; ರುಧಿರ: ರಕ್ತ; ಪಾನ: ಕುಡಿ; ಆನಂದ: ಸಂತೋಷ; ಕೃತ: ಕೆಲಸ; ಮದ: ಮತ್ತು, ಅಮಲು; ಶಾಕಿನಿ: ಒಂದು ಕ್ಷುದ್ರ ದೇವತೆ; ಸ್ವಚ್ಛಂದ: ಕಟ್ಟುಪಾಡಿಲ್ಲದಿರುವಿಕೆ, ಮನಸ್ಸು ಬಂದಂತೆ ನಡೆದುಕೊಳ್ಳುವಿಕೆ; ಲೀಲೆ: ಆನಂದ, ಸಂತೋಷ; ನೃತ್ಯ: ಕುಣಿತ; ದರ್ಶನ: ವೀಕ್ಷಣೆ; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಎಂದು+ ಚಾಪವ +ತರಿಸಿ +ಚಪ್ಪರ
ದಿಂದ +ಹೊರವಡುತ್+ಅವನಿಪಾಲಕ
ವೃಂದವನು +ಕೈವೀಸಿದನು +ಕರೆ +ಗೋಕುಲೇಶ್ವರನ
ಇಂದಲೇ +ರಿಪುರುಧಿರ+ ಪಾನಾ
ನಂದ+ಕೃತ +ಮದಶಾಕಿನೀ +ಸ್ವ
ಚ್ಛಂದ +ಲೀಲಾ +ನೃತ್ಯ+ದರ್ಶನವ್+ಎಂದನಾ +ಚೈದ್ಯ

ಅಚ್ಚರಿ:
(೧) ಶಿಶುಪಾಲನು ಯುದ್ಧವನ್ನು ವೀಕ್ಷಿಸಿದ ಪರಿ – ರಿಪುರುಧಿರ ಪಾನಾನಂದಕೃತ ಮದಶಾಕಿನೀ ಸ್ವಚ್ಛಂದ ಲೀಲಾ ನೃತ್ಯದರ್ಶನವೆಂದನಾ ಚೈದ್ಯ

ಪದ್ಯ ೪: ಸಾತ್ಯಕಿಯ ಉಪಾಯವೇನು?

ಆಳು ಕುದುರೆಯ ಬಾಗಿಲಿಗೆ ಬರ
ಹೇಳು ಕೈದುವ ಕೊಂಡು ವೀರಭ
ಟಾಳಿ ಹತ್ತಿರೆ ನಿಲಲಿ ಕೈವೀಸಿದೊಡೆ ಕವಿಕವಿದು
ಬೀಳ ಹೊಯ್ವದು ಹೊಕ್ಕು ಗಂಡಿನ
ಮೇಲೆ ಗಂಡನು ಕಡಿದು ಕುರು ಭೂ
ಪಾಲಕನ ನೊರೆ ನೆತ್ತರೊಳು ನಾದುವುದು ಮೇದಿನಿಯ (ಉದ್ಯೋಗ ಪರ್ವ, ೧೦ ಸಂಧಿ, ೪ ಪದ್ಯ)

ತಾತ್ಪರ್ಯ:
ಸಾತ್ಯಕಿಯು ಕೃತವರ್ಮನನ್ನು ಕರೆದು, “ಕೃತವರ್ಮ, ಸೈನಿಕರನ್ನು, ಕುದುರೆಗಳನ್ನು ಅರಮನೆಯ ಬಾಗಿಲ ಬಳಿ ಬಂದು ನಿಲ್ಲಲು ಹೇಳು. ನಾನು ಕೈಬೀಸಿ ಸನ್ನೆ ಮಾಡಿದೊಡನೆಯೇ, ಹತ್ತಿರ ಬಂದು ನಿಂತಿದ್ದ ವೀರರು ಒಳಹೊಕ್ಕು ಕವಿದು ಶತ್ರುಗಳ ಸೈನ್ಯದ ವೀರರನ್ನು ಕಡಿದು ಕೌರವರನ್ನು ಸಂಹರಿಸಿ ಅವನ ರಕ್ತದಿಂದ ಭೂಮಿಯನ್ನು ನೆನಸಲಿ ಎಂದು ಹೇಳಿದನು.

ಅರ್ಥ:
ಆಳು: ದಾಸ, ಸೇವಕ; ಕುದುರೆ: ಶ್ವಾನ; ಬಾಗಿಲು: ಕದ; ಬರಹೇಳು: ಆಗಮಿಸು; ಕೈದು: ಆಯುಧ; ಕೊಂಡು: ತೆಗೆದು; ವೀರ: ಶೂರ; ಆಳಿ: ಗುಂಪು; ಹತ್ತಿರ: ಸಮೀಪ; ನಿಲಲಿ: ಇರಲಿ, ನಿಂತಿರಲಿ; ಕೈ: ಕರ; ವೀಸು: ಬೀಸು; ಕವಿ:ದಾಳಿಮಾಡು, ದಟ್ಟವಾಗು; ಬೀಳು: ಕೆಳಕ್ಕೆ ಕುಸಿ;
ಹೊಕ್ಕು: ಸೇರು; ಗಂಡು: ವೀರರು; ಕಡಿ: ಸೀಳು; ಭೂಪಾಲ: ರಾಜ; ನೊರೆ: ಬುರುಗು; ನೆತ್ತರ: ರಕ್ತ; ಮೇದಿನಿ: ಭೂಮಿ; ನಾದು: ಕಲಸು;

ಪದವಿಂಗಡಣೆ:
ಆಳು +ಕುದುರೆಯ +ಬಾಗಿಲಿಗೆ +ಬರ
ಹೇಳು +ಕೈದುವ +ಕೊಂಡು +ವೀರಭ
ಟಾಳಿ +ಹತ್ತಿರೆ +ನಿಲಲಿ +ಕೈವೀಸಿದೊಡೆ +ಕವಿಕವಿದು
ಬೀಳ +ಹೊಯ್ವದು +ಹೊಕ್ಕು +ಗಂಡಿನ
ಮೇಲೆ +ಗಂಡನು +ಕಡಿದು +ಕುರು +ಭೂ
ಪಾಲಕನ+ ನೊರೆ +ನೆತ್ತರೊಳು +ನಾದುವುದು +ಮೇದಿನಿಯ

ಅಚ್ಚರಿ:
(೧) ಗಂಡಿನ ಮೇಲೆ ಗಂಡನು ಕಡಿದು – ಹೋರಾಡುವ ದೃಶ್ಯದ ಚಿತ್ರಣ
(೨) ಸಾಯಲಿ ಎಂದು ಸೂಚಿಸಲು – ನೆತ್ತರೊಳು ನಾದುವುದು ಮೇದಿನಿಯ