ಪದ್ಯ ೩೪: ಕುರುಪತಿಯು ಯಾರ ಮೇಲೆ ಮತ್ತೆ ಯುದ್ಧಮಾಡಲು ಮುಂದಾದನು?

ಓಡಿದವರಲ್ಲಲ್ಲಿ ಧೈರ್ಯವ
ಮಾಡಿ ಹರಿಹಂಚಾದ ಸುಭಟರು
ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ
ಓಡಲೇಕಿನ್ನೊಂದು ಹಲಗೆಯ
ನಾಡಿ ನೋಡುವೆನೆಂಬವೊಲು ಕೈ
ಮಾಡಿದನು ಕುರುರಾಯನಾ ಸಹದೇವನಿದಿರಿನಲಿ (ಗದಾ ಪರ್ವ, ೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ಶಕುನಿಯ ದಳದಲ್ಲಿ ಓಡಿಹೋಗಿ ಬದುಕಿದವರು, ಧೈರ್ಯವನ್ನು ಮಾಡಿ ಒಂದುಗೂಡಿ ನೂರು ಆನೆಗಳೊಡನೆ ಕೌರವನನ್ನು ಕೂಡಿಕೊಂಡಿತು. ಕೌರವನು ಏಕೆ ಓಡಿಹೋಗಲಿ, ಇನ್ನೊಂದು ಹಲಗೆ ಆಟವಾಡೋಣ ಎನ್ನುವಂತೆ ಸಹದೇವನ ಮೇಲೆ ಆಕ್ರಮಣ ಮಾಡಿದನು.

ಅರ್ಥ:
ಓಡು: ಧಾವಿಸು; ಧೈರ್ಯ: ಎದೆಗಾರಿಕೆ, ಕೆಚ್ಚು; ಹರಿಹಂಚು: ಚದುರಿದ; ಸುಭಟ: ಸೈನಿಕ; ಕೂಡು: ಜೊತೆಯಾಗು, ಸೇರು; ನೂರು: ಶತ; ಮದದಾನೆ: ಮತ್ತಿನಿಂದ ಕೂಡಿದ ಗಜ; ಹಲಗೆ: ಪಲಗೆ, ಮರ, ಜೂಜಿನ ಒಂದು ಆಟ; ನೋಡು: ವೀಕ್ಷಿಸು; ಕೈಮಾಡು: ಹೋರಾಡು; ಇದಿರು: ಎದುರು;

ಪದವಿಂಗಡಣೆ:
ಓಡಿದವರ್+ಅಲ್ಲಲ್ಲಿ +ಧೈರ್ಯವ
ಮಾಡಿ +ಹರಿಹಂಚಾದ +ಸುಭಟರು
ಕೂಡಿಕೊಂಡುದು +ನೂರು +ಮದದಾನೆಯಲಿ +ಕುರುಪತಿಯ
ಓಡಲೇಕಿನ್ನೊಂದು +ಹಲಗೆಯನ್
ಆಡಿ +ನೋಡುವೆನೆಂಬವೊಲು +ಕೈ
ಮಾಡಿದನು +ಕುರುರಾಯನ್+ಆ+ ಸಹದೇವನ್+ ಇದಿರಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಓಡಲೇಕಿನ್ನೊಂದು ಹಲಗೆಯನಾಡಿ ನೋಡುವೆನೆಂಬವೊಲು ಕೈ ಮಾಡಿದನು ಕುರುರಾಯ
(೨) ಕುರುಪತಿ, ಕುರುರಾಯ – ದುರ್ಯೋಧನನನ್ನು ಕರೆದ ಪರಿ

ಪದ್ಯ ೫೭: ಧರ್ಮಜ ಮತ್ತು ಶಲ್ಯನ ಯುದ್ಧವು ಹೇಗಿತ್ತು?

ಕಡಿದು ಬಿಸುಟನು ಶಲ್ಯನಸ್ತ್ರವ
ನೆಡೆಗೊಡದೆ ಕೂರಂಬುಗಳನಳ
ವಡಿಸಿದನು ನೃಪವರನ ಶರಸಂತತಿಯ ಸಂತೈಸಿ
ಒಡನೊಡನೆ ಕೈಮಾಡಿದನು ಕೈ
ಗಡಿಯನಂಬಿನ ಧಾರೆ ದಳ್ಳಿಸಿ
ಕಿಡಿಗೆದರಿದವು ನೃಪನ ರಥ ಸಾರಥಿ ಹಯಾಳಿಯಲಿ (ಶಲ್ಯ ಪರ್ವ, ೨ ಸಂಧಿ, ೫೭ ಪದ್ಯ)

ತಾತ್ಪರ್ಯ:
ಧರ್ಮಜನು ಬಿಟ್ಟ ಬಾಣಗಳನ್ನು ಶಲ್ಯನು ಕಡಿದು ಹಾಕಿದನು. ಧರ್ಮಜನ ಬಾಣಗಳನ್ನು ಕತ್ತರಿಸುತ್ತಾ, ವೀರಶಲ್ಯನು ವಿರೋಧಿಯ ಮೇಲೆ ಬಾಣಗಳನ್ನು ಬಿಡಲು, ಬಾಣಗಳು ಕಿಡಿಯುಗುಳುತ್ತಾ ಧರ್ಮಜನ ರಥ ಸಾರಥಿ ಕುದುರೆಗಳನ್ನು ಮುಸುಕಿದವು.

ಅರ್ಥ:
ಕಡಿ: ಸೀಳು; ಬಿಸುಟು: ಹೊರಹಾಕು; ಅಸ್ತ್ರ: ಶಸ್ತ್ರ, ಆಯುಧ; ಎಡೆಗೊಡು: ಲೆಕ್ಕಿಸು; ಕೂರಂಬು: ಹರಿತವಾದ ಬಾಣ; ಅಳವಡಿಸು: ಸಿದ್ಧಗೊಳಿಸು; ನೃಪ: ರಾಜ; ಶರ: ಬಾಣ; ಸಂತತಿ: ಗುಂಪು; ಸಂತೈಸು: ತಾಳು; ಒಡನೊಡನೆ: ಕೂಡಲೆ; ಕೈಮಾಡು: ಹೋರಾಡು; ಕೈಗಡಿಯ: ಶೂರ; ಅಂಬು: ಬಾಣ; ಧಾರೆ: ಮಳೆ; ದಳ್ಳಿಸು: ಧಗ್ ಎಂದು ಉರಿ; ಕಿಡಿ: ಬೆಂಕಿ; ಕೆದರು: ಹರಡು; ನೃಪ: ರಾಜ; ರಥ: ಬಂಡಿ; ಸಾರಥಿ: ಸೂತ; ಹಯಾಳಿ: ಕುದುರೆಯ ಸಾಲು;

ಪದವಿಂಗಡಣೆ:
ಕಡಿದು+ ಬಿಸುಟನು +ಶಲ್ಯನ್+ಅಸ್ತ್ರವನ್
ಎಡೆಗೊಡದೆ +ಕೂರಂಬುಗಳನ್+ಅಳ
ವಡಿಸಿದನು +ನೃಪವರನ +ಶರಸಂತತಿಯ +ಸಂತೈಸಿ
ಒಡನೊಡನೆ +ಕೈಮಾಡಿದನು +ಕೈ
ಗಡಿಯನ್+ಅಂಬಿನ +ಧಾರೆ +ದಳ್ಳಿಸಿ
ಕಿಡಿ+ಕೆದರಿದವು +ನೃಪನ +ರಥ +ಸಾರಥಿ+ ಹಯಾಳಿಯಲಿ

ಅಚ್ಚರಿ:
(೧) ಅಂಬು, ಶರ – ಸಮಾನಾರ್ಥಕ ಪದ
(೨) ಬಾಣಗಳನ್ನು ಬಿಟ್ಟ ಪರಿ – ಕೈಗಡಿಯನಂಬಿನ ಧಾರೆ ದಳ್ಳಿಸಿ ಕಿಡಿಗೆದರಿದವು

ಪದ್ಯ ೧೩: ಅಭಿಮನ್ಯು ಮಹಾರಥಿಕರ ಜೊತೆ ಹೇಗೆ ಹೋರಾಡಿದನು?

ಕೋಡಿದನೆ ಕೊಂಕಿದನೆ ನಾಯಕ
ವಾಡಿಗಳು ಹಲರೆಂದು ಬೆಂಗೊ
ಟ್ಟೋಡಿದನೆ ಕೈಗಾಯದೆಚ್ಚನು ನಚ್ಚಿದಂಬಿನಲಿ
ತೋಡು ಬೀಡಿನ ಹವಣನಾತನ
ಮಾಡಿದಾತನೆ ಬಲ್ಲನೆನೆ ಕೈ
ಮಾಡಿ ಸುರಿದನು ಸರಳ ಮಳೆಯ ಮಹಾರಥರ ಮೇಲೆ (ದ್ರೋಣ ಪರ್ವ, ೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಒಬ್ಬನೇ, ಅವನ ಮೇಲೆ ಬಾಣಬಿಡುವ ವೀರರು ಆರು ಪರಾಕ್ರಮಿಗಳು, ಆದರೂ ಅವನು ಬೆದರಿದನೇ, ಹಿಂಜರಿದನೇ? ಬಹಳ ಮಂದಿಯೆಂದು ಯುದ್ಧದಿಂದ ಓಡಿಹೋದನೇ? ಅವನು ಶತ್ರುಗಳ ಬಾಣಗಳನ್ನು ಕತ್ತರಿಸಿ, ಹೊಡೆಯುವ ಬಗೆಯನ್ನು ಅವನನ್ನು ಸೃಷ್ಟಿಸಿದವನೇ ಬಲ್ಲ. ಅವರೆಲ್ಲರ ಮೇಲೆ ಅವನು ಬಾಣಗಳ ಮಳೆಗೆರೆದನು.

ಅರ್ಥ:
ಕೋಡು: ತಣ್ಣಗಾಗು, ತಂಪಾಗು; ಕೊಂಕು: ಡೊಂಕು, ವಕ್ರತೆ; ನಾಯಕ: ಒಡೆಯ; ವಾಡಿ: ವಾಸಸ್ಥಳ; ಹಲರು: ಬಹಳ; ಬೆಂಗೊಟ್ಟು: ಬೆನ್ನು ತೋರು; ಓಡು: ಧಾವಿಸು; ಕಾಯು: ಕಾಪಾಡು; ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ತೋಡು: ಅಗೆ, ಹಳ್ಳ ಮಾಡು; ಬೀಡು: ತಂಗುದಾಣ, ಬಿಡಾರ; ಹವಣ: ಮಿತಿ, ಅಳತೆ; ಬಲ್ಲ: ತಿಳಿ; ಸುರಿ: ಸುರಿಸು, ಸೋರಿಸು; ಸರಳ: ಬಾಣ; ಮಳೆ: ವರ್ಷ; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಕೋಡಿದನೆ +ಕೊಂಕಿದನೆ +ನಾಯಕ
ವಾಡಿಗಳು +ಹಲರೆಂದು +ಬೆಂಗೊಟ್
ಓಡಿದನೆ +ಕೈಗಾಯದ್+ಎಚ್ಚನು +ನಚ್ಚಿದ್+ಅಂಬಿನಲಿ
ತೋಡು +ಬೀಡಿನ +ಹವಣನ್+ಆತನ
ಮಾಡಿದಾತನೆ +ಬಲ್ಲನ್+ಎನೆ +ಕೈ
ಮಾಡಿ +ಸುರಿದನು +ಸರಳ +ಮಳೆಯ +ಮಹಾರಥರ +ಮೇಲೆ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮಳೆಯ ಮಹಾರಥರ ಮೇಲೆ

ಪದ್ಯ ೫೨: ಯುದ್ಧದಲ್ಲಿ ಸೈನಿಕರ ಸ್ಥಿತಿ ಹೇಗಿತ್ತು?

ಏರುವಡೆದರು ಹೊಕ್ಕವರು ಕೈ
ದೋರಿ ಕಳಕಳಕಾರರಸುಗಳ
ಕಾರಿದರು ಕೈಮಾಡಿಕೊಂಡರು ಸುರರ ಕೋಟೆಗಳ
ತಾರು ಥಟ್ಟಿನೊಳಟ್ಟಿ ಮೈಮಸೆ
ಸೂರೆಕಾರರು ಮಿದುಳ ಜೊಂಡಿನ
ಜೋರುಗಳ ಬೀರಿದವು ಬೇತಾಳರಿಗೆ ಭಟನಿಕರ (ದ್ರೋಣ ಪರ್ವ, ೧ ಸಂಧಿ, ೫೨ ಪದ್ಯ)

ತಾತ್ಪರ್ಯ:
ಯುದ್ಧಕ್ಕೆ ಹೊಕ್ಕವರು ಅಬ್ಬರದಿಂದ ಕಾದಾಡುತ್ತಾ ಸ್ವರ್ಗ ಲೋಕಕ್ಕೆ ಹೋದರು. ಭಟರು ಕರುಣೆಯಿಲ್ಲದೆ ಹೊಕ್ಕಿರಿದು ಗಾಯಗೊಂಡು ಶತ್ರುಗಳ ತಲೆಗಳನ್ನೊಡೆದು ಮಿದುಳ ಜೋಂಡುಗಳನ್ನು ಬೇತಾಳಗಳಿಗೆ ಕೊಟ್ಟರು.

ಅರ್ಥ:
ಏರು: ಹತ್ತು; ಅಡೆ: ಹೊಂದು, ಒದಗು; ಹೊಕ್ಕು: ಸೇರು; ಕೈ:ಹಸ್ತ; ದೋರು: ತೋರಿಸು; ಕಳಕಳ: ವ್ಯಥೆ; ಅಸು: ಪ್ರಾಣ; ಸುರರು: ದೇವತೆ; ಕೋಟೆ: ಊರಿನ ರಕ್ಷಣೆಗಾಗಿ ಕಟ್ಟಿದ ಗೋಡೆ; ತಾರು: ಒಣಗು, ಸೊರಗು; ಥಟ್ಟು: ಗುಂಪು, ಸೈನ್ಯ; ಅಟ್ಟು: ಬೆನ್ನಟ್ಟುವಿಕೆ, ಓಡಿಸು; ಮೈ: ತನು; ಮಸೆ: ಹರಿತಗೊಳಿಸು; ಸೂರೆ: ಕೊಳ್ಳೆ, ಲೂಟಿ; ಮಿದುಳು:ಮಸ್ತಿಷ್ಕ; ಜೊಂಡು: ತಲೆಯ ಹೊಟ್ಟು; ಜೋರು: ವೇಗ; ಬೀರು: ಒಗೆ, ಎಸೆ, ತೂರು; ಬೇತಾಳ: ಭೂತ; ಭಟ: ಸೈನಿಕ; ನಿಕರ: ಗುಂಪು;

ಪದವಿಂಗಡಣೆ:
ಏರುವಡೆದರು +ಹೊಕ್ಕವರು+ ಕೈ
ದೋರಿ +ಕಳಕಳಕಾರರ್+ಅಸುಗಳ
ಕಾರಿದರು+ ಕೈಮಾಡಿಕೊಂಡರು+ ಸುರರ+ ಕೋಟೆಗಳ
ತಾರು+ ಥಟ್ಟಿನೊಳ್+ಅಟ್ಟಿ +ಮೈಮಸೆ
ಸೂರೆಕಾರರು+ ಮಿದುಳ +ಜೊಂಡಿನ
ಜೋರುಗಳ +ಬೀರಿದವು +ಬೇತಾಳರಿಗೆ+ ಭಟ+ನಿಕರ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಕಳಕಳಕಾರರಸುಗಳಕಾರಿದರು ಕೈಮಾಡಿಕೊಂಡರು ಸುರರ ಕೋಟೆಗಳ

ಪದ್ಯ ೧೮: ಭೀಷ್ಮನೆದುರು ಯಾರು ಪುನಃ ಬಂದು ನಿಲ್ಲುತ್ತಿದ್ದರು?

ಕಡಿದು ಬಿಸುಟನು ತುರಗ ದಳವನು
ಕೆಡಹಿದನು ಹೇರಾನೆಗಳ ತಡೆ
ಗಡಿದನೊಗ್ಗಿನ ರಥವನುರೆ ಕೊಚ್ಚಿದನು ಕಾಲಾಳ
ಹೊಡಕರಿಸಿ ಹೊದರೆದ್ದು ಮುಂದಕೆ
ನಡೆನಡೆದು ಕೈಮಾಡಿ ಕಾಯದ
ತೊಡಕನೊಲ್ಲದೆ ತೆಕ್ಕೆಗೆಟ್ಟಿತು ಭಟರು ನಾಕದಲಿ (ಭೀಷ್ಮ ಪರ್ವ, ೯ ಸಂಧಿ, ೧೮ ಪದ್ಯ)

ತಾತ್ಪರ್ಯ:
ಭೀಷ್ಮನು ಕುದುರೆಗಳ ಸೈನ್ಯವನ್ನು ಕಡಿದು ಹಾಕಿದರು. ಹೇರಾನೆಗಳನ್ನು ಕೆಡವಿದರು. ರಥಗಳನ್ನು ಕಡಿದು ಕಾಲಾಳುಗಳನ್ನು ಕೊಚ್ಚಿದನು. ಆದರೂ ದೇಹದ ಮೇಲಿನ ಮೋಹವನ್ನು ಬಿಟ್ಟು ಪಾಂಡವ ದಳವು ಮತ್ತೆ ಮತ್ತೆ ಗರ್ಜಿಸಿ ಭೀಷ್ಮನೆದುರಿಗೆ ಬಂದು ನಿಲ್ಲುತ್ತಿತ್ತು.

ಅರ್ಥ:
ಕಡಿ: ಸೀಳು; ಬಿಸುಟು: ಹೊರಹಾಕು; ತುರಗ: ಕುದುರೆ; ದಳ: ಸೈನ್ಯ; ಕೆಡಹು: ನಾಶಮಾಡು; ಹೇರಾನೆ: ದೊಡ್ಡದಾದ ಆನೆ; ತಡೆ: ನಿಲ್ಲಿಸು; ಕಡಿ: ಕತ್ತರಿಸು; ಒಗ್ಗು: ಗುಂಪು; ರಥ: ಬಂಡಿ; ಉರೆ: ಹೆಚ್ಚು; ಕೊಚ್ಚು: ಕತ್ತರಿಸು; ಕಾಲಾಳು: ಸೈನಿಕರು; ಹೊಡಕರಿಸು: ಕಾಣಿಸು; ಹೊದರು: ಗುಂಪು; ಮುಂದಕೆ: ಎದುರು; ನಡೆ: ಚಲಿಸು; ಕೈಮಾಡು: ಹೋರಾಡು; ಕಾಯ: ದೇಹ; ತೊಡಕು: ಸಿಕ್ಕು, ಗೋಜು; ತೆಕ್ಕೆ: ಗುಂಪು; ಕಟ್ಟು: ಬಂಧಿಸು; ಭಟ: ಸೈನಿಕ; ನಾಕ: ಸ್ವರ್ಗ;

ಪದವಿಂಗಡಣೆ:
ಕಡಿದು +ಬಿಸುಟನು +ತುರಗ +ದಳವನು
ಕೆಡಹಿದನು +ಹೇರಾನೆಗಳ +ತಡೆ
ಗಡಿದನ್+ಒಗ್ಗಿನ +ರಥವನ್+ಉರೆ +ಕೊಚ್ಚಿದನು +ಕಾಲಾಳ
ಹೊಡಕರಿಸಿ+ ಹೊದರೆದ್ದು +ಮುಂದಕೆ
ನಡೆನಡೆದು+ ಕೈಮಾಡಿ +ಕಾಯದ
ತೊಡಕನೊಲ್ಲದೆ +ತೆಕ್ಕೆಗೆಟ್ಟಿತು +ಭಟರು +ನಾಕದಲಿ

ಅಚ್ಚರಿ:
(೧) ಭಟರ ಛಲವನ್ನು ವಿವರಿಸುವ ಪರಿ – ಕಾಯದತೊಡಕನೊಲ್ಲದೆ ತೆಕ್ಕೆಗೆಟ್ಟಿತು ಭಟರು ನಾಕದಲಿ

ಪದ್ಯ ೨೪: ಸುರಗಿಯ ವೀರರು ಹೇಗೆ ಕಾದಾಡಿದರು?

ಅಣೆದರೌಕುವ ಸೋಂಕಿ ತಿವಿದರೆ
ಹೆಣನ ತೋರುವ ಹಜ್ಜೆದೆಗೆದರೆ
ಜುಣಗಲೀಯದೆ ಮೇಲೆ ಕವಿಸುವ ಮೀರಿ ಕೈಮಾಡಿ
ಕೆಣಕಿದರೆ ಝಂಕಿಸುವ ನಿಟ್ಟಿಸಿ
ಹಣುಗಿ ಮೊನೆಗೊಡೆ ದಂಡೆಯೊಳು ಖಣಿ
ಖಣಿಲುರವವೆಸೆಯಲ್ಕೆ ಕಾದಿತು ಸುರಗಿಯತಿಬಲರು (ಬೀಷ್ಮ ಪರ್ವ, ೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ತಿವಿದರೆ ಮೇಲೆ ನುಗ್ಗುವ, ಹತ್ತಿರ ಬಂದು ಇರಿದರೆ ಸತ್ತು ಬೀಳುವ, ಪಕ್ಷಕ್ಕೆ ಸರಿದರೆ, ಜಾರಲು ಬಿಡದೆ ಮೇಲೆ ಬೀಳುವ ಕೆಣಕಿದರೆ ಅಬ್ಬರಿಸುವ, ಕಣ್ಣೆಚ್ಚು ನೋಡಿ ತಿವಿದರೆ, ಮಂಡಿಯೂರಿ ಅಲಗಿಗೆ ಅಲಗನ್ನೊಡ್ಡಿ ಖಣಿ ಖಣಿಲು ಸದ್ದು ಮಾಡುವ, ಸುರಗಿಯ ವೀರರು ಕಾದಾಡಿದರು.

ಅರ್ಥ:
ಅಣೆ: ತಿವಿ, ಹೊಡೆ; ಔಕು: ಒತ್ತು, ಹಿಚುಕು; ಸೋಂಕು: ತಾಗು, ಮುಟ್ಟು; ತಿವಿ: ಚುಚ್ಚು; ಹೆಣ: ಜೀವವಿಲ್ಲದ ಶರೀರ; ತೋರು: ಪ್ರದರ್ಶಿಸು; ಹಜ್ಜೆ: ನಡಗೆಯಲ್ಲಿ; ತೆಗೆ: ಹೊರತರು; ಜುಣಗು: ಜಾರು; ಕವಿಸು: ಆವರಿಸು; ಮೀರು: ಉಲ್ಲಂಘಿಸು; ಕೈಮಾಡು: ತೋರು; ಕೆಣಕು: ಪ್ರಚೋದಿಸು; ಝಂಕಿಸು: ತಿರಸ್ಕರಿಸು; ನಿಟ್ಟಿಸು: ನೋಡು, ಕಾಣು; ಹಣಗು: ಹಿಂಜರಿ; ಮೊನೆ: ಚೂಪಾದ; ದಂಡೆ: ಗುರಾಣಿ; ಖಣಿ: ಶಬ್ದವನ್ನು ವಿವರಿಸುವ ಪದ; ಉರವಣೆ: ಆತುರ; ಕಾದು: ಹೋರಾಡು; ಸುರಗಿ: ಕತ್ತಿ; ಅತಿಬಲರು: ಪರಾಕ್ರಮಿ;

ಪದವಿಂಗಡಣೆ:
ಅಣೆದರ್+ಔಕುವ +ಸೋಂಕಿ +ತಿವಿದರೆ
ಹೆಣನ+ ತೋರುವ +ಹಜ್ಜೆದ್+ಎಗೆದರೆ
ಜುಣಗಲ್+ಈಯದೆ +ಮೇಲೆ +ಕವಿಸುವ +ಮೀರಿ +ಕೈಮಾಡಿ
ಕೆಣಕಿದರೆ +ಝಂಕಿಸುವ +ನಿಟ್ಟಿಸಿ
ಹಣುಗಿ+ ಮೊನೆಗೊಡೆ +ದಂಡೆಯೊಳು +ಖಣಿ
ಖಣಿಲ್+ಉರವವ್+ಎಸೆಯಲ್ಕೆ +ಕಾದಿತು +ಸುರಗಿ+ಅತಿಬಲರು

ಅಚ್ಚರಿ:
(೧) ಶಬ್ದವನ್ನು ವಿವರಿಸುವ ಪರಿ – ಖಣಿಖಣಿಲುರವವೆಸೆಯಲ್ಕೆ ಕಾದಿತು ಸುರಗಿಯತಿಬಲರು

ಪದ್ಯ ೨೪: ಭೀಮನು ಕರ್ಣನನ್ನು ಹೇಗೆ ಎದುರಿಸಿದನು?

ಎಲವೊ ಸೂತನ ಮಗನೆ ರಾಯನ
ನಳಲಿಸಿದೆಲಾ ನಿನ್ನ ರಕುತವ
ತುಳುಕುವೆನು ಹಿಂದಿಕ್ಕಿಕೊಂಬನ ತೋರು ತೋರೆನುತ
ಬಲುಸರಿಯ ನಾರಾಚದಲಿ ಕ
ತ್ತಲಿಸೆ ದೆಸೆ ಕೈಮಾಡಿದನು ಕೈ
ಚಳಕದೆಸುಗೆಯ ಕೇಣದಳತೆಯನರಿಯೆ ನಾನೆಂದ (ಕರ್ಣ ಪರ್ವ, ೧೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ವಿವರವನ್ನು ತಿಳಿಸುತ್ತಾ,ಭೀಮನು ಕರ್ಣನೆದುರು ಬಂದು ಎಲವೋ ಸೂತನ ಮಗನೇ, ದೊರೆಯನ್ನು ನೀನು ನೋಯಿಸಿದೆಯೆಲಾ, ನಿನ್ನ ರಕ್ತವನ್ನು ಚೆಲ್ಲುತ್ತೇನೆ. ನಿನ್ನನ್ನು ಹಿಂದಿಟ್ಟುಕೊಂಡು ರಕ್ಷಿಸುವವನನ್ನು ತೋರಿಸು ಎನ್ನುತ್ತಾ ಭೀಮನು ಬಾಣಗಳ ಮಳೆಗೆರೆಯಲು, ದಿಕ್ಕುಗಳು ಕತ್ತಲುಗೂಡಿಸಿದವು, ಭೀಮನ ಕೈಚಳಕಕ್ಕೆ ಮಿತಿಯೇ ಇರಲಿಲ್ಲ ಅವನ ಕೋಪದಮಿತಿಯನ್ನು ನಾನರಿಯೆ ಎಂದು ಸಂಜಯನು ವಿವರಿಸುತ್ತಿದ್ದನು.

ಅರ್ಥ:
ಸೂತ: ರಥವನ್ನು ಓಡಿಸುವವ; ಮಗ: ಪುತ್ರ; ರಾಯ: ರಾಜ; ಅಳಲು: ದುಃಖಿಸು; ರಕುತ: ರಕ್ತ, ನೆತ್ತರು; ತುಳುಕು: ಅಲ್ಲಾಡಿಸು; ಹಿಂದೆ: ಹಿಂಭಾಗ; ತೋರು: ಪ್ರದರ್ಶಿಸು; ಬಲು: ಬಹಳ; ನಾರಾಚ: ಬಾಣ, ಸರಳು; ಕತ್ತಲು: ಅಂಧಕಾರ; ದೆಸೆ: ದಿಕ್ಕು; ಕೈಮಾಡು: ಆಡಿಸು, ಕೈಹಾಕು; ಚಳಕ: ಚಾತುರ್ಯ; ಎಸು: ಹೊಡೆ, ಬಾಣ ಪ್ರಯೋಗ; ಕೇಣ:ಕೋಪ; ಅಳತೆ: ಪ್ರಮಾಣ; ಅರಿ: ತಿಳಿ;

ಪದವಿಂಗಡಣೆ:
ಎಲವೊ+ ಸೂತನ +ಮಗನೆ +ರಾಯನನ್
ಅಳಲಿಸಿದೆಲಾ+ ನಿನ್ನ +ರಕುತವ
ತುಳುಕುವೆನು+ ಹಿಂದಿಕ್ಕಿಕೊಂಬನ+ ತೋರು +ತೋರೆನುತ
ಬಲುಸರಿಯ+ ನಾರಾಚದಲಿ+ ಕ
ತ್ತಲಿಸೆ+ ದೆಸೆ+ ಕೈಮಾಡಿದನು+ ಕೈ
ಚಳಕದ್+ಎಸುಗೆಯ +ಕೇಣದ್+ಅಳತೆಯನ್+ಅರಿಯೆ +ನಾನೆಂದ

ಅಚ್ಚರಿ:
(೧) ಕೋಪದ ನುಡಿಗಳು: ಎಲವೋ ಸೂತನ ಮಗನೆ, ತೋರು ತೋರೆನುತ, ರಕುತವ ತುಳುಕುವೆನು
(೨) ಕ ಕಾರದ ಪದಗಳು – ಕತ್ತಲಿಸೆದೆಸೆ ಕೈಮಾಡಿದನು ಕೈಚಳಕದೆಸುಗೆಯ ಕೇಣದಳತೆಯನರಿಯೆ