ಪದ್ಯ ೪೧: ಭೀಮನು ನಡುಗಿಕೊಂಡು ಯಾರ ಪಾದಗಳ ಮೇಲೆ ಬಿದ್ದನು?

ತ್ರಾಣವಿಮ್ಮಡಿಸಿತ್ತು ಕೋಪದ
ಕೇಣವೆಚ್ಚರಿಸಿದಡೆ ನೃಪ ಸ
ತ್ರಾಣದಲಿ ತನಿಬಿಗಿಯೆ ನುಗ್ಗಾಯ್ತಾಯಸ ಪ್ರತಿಮೆ
ಮಾಣು ಭಯವನು ಭೀಮ ಭೂಪನ
ಕಾಣು ಹೋಗೆನೆ ನಡುಗಿ ಭುವನ
ಪ್ರಾಣನಾತ್ಮಜ ಬಿದ್ದನಾ ಧೃತರಾಷ್ಟ್ರನಂಘ್ರಿಯಲಿ (ಗದಾ ಪರ್ವ, ೧೧ ಸಂಧಿ, ೪೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಶಕ್ತಿಯು ಇಮ್ಮಡಿಯಾಯಿತು. ಕೋಪ ಮತ್ಸರಗಳಿಂದ ಅವನು ಜೋರಾಗಿ ಬಿಗಿದಪ್ಪಿಕೊಳ್ಳಲು ಉಕ್ಕಿನ ಪ್ರತಿಮೆ ಪುಡಿಪುಡಿಯಾಯಿತು. ಆಗ ಕೃಷ್ಣನು, ಭೀಮ ಭಯವನ್ನು ಬಿಡು, ಧೃತರಾಷ್ಟ್ರನನ್ನು ನೋಡುಹೋಗು, ಎನ್ನಲು ಭೀಮನು ನಡುಗಿ ಧೃತರಾಷ್ಟ್ರನ ಪಾದಗಳ ಮೇಲೆ ಬಿದ್ದನು.

ಅರ್ಥ:
ತ್ರಾಣ: ಕಾಪು, ರಕ್ಷಣೆ, ಶಕ್ತಿ; ಇಮ್ಮಡಿಸು: ಹೆಚ್ಚಾಗು; ಕೋಪ: ರೋಷ; ಕೇಣ: ಹೊಟ್ಟೆಕಿಚ್ಚು, ಮತ್ಸರ; ಎಚ್ಚರಿಸು: ಏಳು; ನೃಪ: ರಾಜ; ತನಿ: ಹೆಚ್ಚಾಗು, ಅತಿಶಯವಾಗು; ಬಿಗಿ: ಗಟ್ಟಿ; ನುಗ್ಗು: ನೂಕಾಟ, ನೂಕುನುಗ್ಗಲು; ಆಯಸ: ಕಬ್ಬಿಣದ ಆಯುಧ; ಪ್ರತಿಮೆ: ವಿಗ್ರಹ, ಬೊಂಬೆ; ಮಾಣು: ನಿಲ್ಲಿಸು; ಭಯ: ಅಂಜಿಕೆ; ಭೂಪ: ರಾಜ; ಕಾಣು: ತೋರು; ನಡುಗು: ಕಂಪನ, ಹೆದರು; ಭುವನ: ಜಗತ್ತು, ಪ್ರಪಂಚ; ಪ್ರಾಣ: ಜೀವ; ಆತ್ಮಜ: ಮಗ; ಬಿದ್ದು: ಎರಗು; ಅಂಘ್ರಿ: ಪಾದ;

ಪದವಿಂಗಡಣೆ:
ತ್ರಾಣವ್+ಇಮ್ಮಡಿಸಿತ್ತು +ಕೋಪದ
ಕೇಣವ್+ಎಚ್ಚರಿಸಿದಡೆ +ನೃಪ +ಸ
ತ್ರಾಣದಲಿ +ತನಿಬಿಗಿಯೆ +ನುಗ್ಗಾಯ್ತ +ಆಯಸ +ಪ್ರತಿಮೆ
ಮಾಣು +ಭಯವನು +ಭೀಮ +ಭೂಪನ
ಕಾಣು +ಹೋಗ್+ ಎನೆ +ನಡುಗಿ +ಭುವನ
ಪ್ರಾಣನ್+ಆತ್ಮಜ+ ಬಿದ್ದನಾ +ಧೃತರಾಷ್ಟ್ರನ್+ಅಂಘ್ರಿಯಲಿ

ಅಚ್ಚರಿ:
(೧) ಭೀಮನನ್ನು ಭುವನಪ್ರಾಣನಾತ್ಮಜ ಎಂದು ಕರೆದಿರುವುದು
(೨) ತ್ರಾಣ, ಕೇಣ, ಸತ್ರಾಣ, ಪ್ರಾಣ – ಪ್ರಾಸ ಪದಗಳು

ಪದ್ಯ ೩೦: ಭೀಮ ದುರ್ಯೋಧನರ ಯುದ್ಧ ಕೌಶಲ್ಯ ಹೇಗಿತ್ತು?

ಜಾಣು ಜಗುಳಿತು ಹೊಯ್ಲ ಮೊನೆ ಮುಂ
ಗಾಣಿಕೆಗೆ ಲಟಕಟಿಸಿದುದು ಬರಿ
ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
ತ್ರಾಣ ತಲವೆಳಗಾಯ್ತು ಶ್ರವ ಬಿ
ನ್ನಾಣ ಮೇಲಾಯಿತ್ತು ಕುಶಲದ
ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ (ಗದಾ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅವರ ಜಾಣತನ ಕೆಲಸಕ್ಕೆ ಬಾರದೆ ಹೋಯಿತು. ಹೊಡೆತದ ತೀಕ್ಷ್ಣತೆಯು ನೋಡುತ್ತಿದ್ದಂತೆ ವ್ಯರ್ಥವಾಯಿತು. ಕಾಲಿನ ಗತಿಯ ವಿನ್ಯಾಸ ಕಣದಲ್ಲಿ ಧೂಳನ್ನೆಬ್ಬಿಸಿತೇ ಹೊರತು ವಿರೋಧಿಯನ್ನು ಬಾಗಿಸಲಿಲ್ಲ. ಶಕ್ತಿಯು ಕುಂದಿತು. ಆಯಾಸ ಹೆಚ್ಚಾಯಿತು. ಗದೆಗಳು ತಾಕಿ ಕಿಡಿಯೆದ್ದವು. ಅವರ ಕೌಶಲ್ಯ ಅತ್ಯುತ್ತತವಾಗಿತ್ತು.

ಅರ್ಥ:
ಜಾಣು: ಜಾಣತನ, ಬುದ್ಧಿವಂತ; ಜಗುಳು: ಜಾರು; ಹೊಯ್ಲು: ಹೊಡೆ; ಮೊನೆ: ಮುಖ; ಮುಂಗಾಣಿಕೆ: ಮುಂದಿನ ನೋಟ; ಲಟಕಟ: ಉದ್ರೇಕಗೊಳ್ಳು; ಬರಿ: ಕೇವಲ; ರೇಣು: ಧೂಳು, ಹುಡಿ; ಜಾಡ್ಯ: ಚಳಿ, ಸೋಮಾರಿತನ; ಪಡಪು: ಹೊಂದು, ಪಡೆ; ಪಯ: ಪಾದ; ಗತಿ: ಚಲನೆ, ವೇಗ; ತ್ರಾಣ: ಕಾಪು, ರಕ್ಷಣೆ, ಶಕ್ತಿ, ಬಲ; ತಳವೆಳ: ಬೆರಗು, ಆಶ್ಚರ್ಯ; ಶ್ರವ: ಧ್ವನಿ; ಬಿನ್ನಾಣ: ಕೌಶಲ್ಯ; ಮೇಲೆ: ಹೆಚ್ಚು; ಕುಶಲ: ಚಾತುರ್ಯ; ಕೇಣ: ಹೊಟ್ಟೆಕಿಚ್ಚು, ಮತ್ಸರ; ಕಾದು: ಹೋರಾದು; ಗದೆ: ಮುದ್ಗರ; ಕಿಡಿ: ಬೆಂಕಿ; ತಿವಿ: ಚುಚ್ಚು;

ಪದವಿಂಗಡಣೆ:
ಜಾಣು +ಜಗುಳಿತು +ಹೊಯ್ಲ +ಮೊನೆ +ಮುಂ
ಗಾಣಿಕೆಗೆ+ ಲಟಕಟಿಸಿದುದು +ಬರಿ
ರೇಣುಜನನದ +ಜಾಡ್ಯವೇ+ ಪಡಪಾಯ್ತು+ ಪಯಗತಿಗೆ
ತ್ರಾಣ+ ತಲವೆಳಗಾಯ್ತು+ ಶ್ರವ+ ಬಿ
ನ್ನಾಣ +ಮೇಲಾಯಿತ್ತು+ ಕುಶಲದ
ಕೇಣದಲಿ +ಕಾದಿದರು +ಗದೆಗಳ +ಕಿಡಿಯ +ಕಿಡಿ +ತಿವಿಯೆ

ಅಚ್ಚರಿ:
(೧) ಧೂಳೇ ಹೆಚ್ಚಿತ್ತು ಎಂದು ಹೇಳಲು – ಬರಿ ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
(೨) ಕ ವರ್ಗದ ಪದಗಳ ಸಾಲು – ಕುಶಲದ ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ

ಪದ್ಯ ೫: ಸಾತ್ಯಕಿಯು ಹೇಗೆ ಉತ್ತರಿಸಿದನು?

ದ್ರೋಣಸುತ ಕುರುಪತಿಯ ಸಮರಕೆ
ಹೂಣಿಗನಲೇ ಬಲ್ಲೆವಿದರಲಿ
ಬಾಣವಿದ್ಯೆಯ ಬೀರಿ ಬಿಡಿಸುವರಿವರು ಸಂಜಯನ
ಕಾಣಲಹುದಂತಿರಲಿ ನಿಮಗೀ
ಕೇಣದಲಿ ಫಲವಿಲ್ಲ ಕೃಪ ತ
ನ್ನಾಣೆ ನೀ ಮರಳೆಂದು ಸಾತ್ಯಕಿ ಸುರಿದನಂಬುಗಳ (ಗದಾ ಪರ್ವ, ೨ ಸಂಧಿ, ೫ ಪದ್ಯ)

ತಾತ್ಪರ್ಯ:
ಸಾತ್ಯಕಿಯು ನುಡಿಯುತ್ತಾ, ಅಶ್ವತ್ಥಾಮ ನೀನು ಕೌರವನ ಪಕ್ಷದಲ್ಲಿ ಛಲದಿಂದ ಯುದ್ಧಮಾಡುವವನಲ್ಲವೇ? ನಿಮ್ಮ ಬಿಲ್ವಿದ್ಯೆಯನ್ನು ಮೆರೆದು ಸಂಜಯನನ್ನು ಬಿಡಿಸುವವರಲ್ಲವೇ? ಅದನ್ನು ನೋಡಿಕೊಳ್ಳೋಣ, ಕೋಪಮಾಡಿದರೆ ಅದು ಫಲಿಸದು, ಕೃಪ ನನ್ನಾಣೆ, ನೀನು ಹಿಂದಿರುಗು ಎಂದು ಬಾಣಗಳ ಮಳೆಗೆರೆದನು.

ಅರ್ಥ:
ಸುತ: ಮಗ; ಸಮರ: ಯುದ್ಧ; ಹೂಣಿಗ: ಬಿಲ್ಲುಗಾರ, ಸಾಹಸಿ; ಬಲ್ಲೆ: ತಿಳಿದಿರುವೆ; ಬಾಣ: ಸರಳ; ವಿದ್ಯೆ: ಜ್ಞಾನ; ಬೀರು: ಹರಡು; ಬಿಡಿಸು: ಕಳಚು, ಸಡಿಲಿಸು; ಕಾಣು: ತೋರು; ಕೇಣ: ಹೊಟ್ಟೆಕಿಚ್ಚು, ಮತ್ಸರ, ಕೋಪ; ಫಲ: ಪ್ರಯೋಜನ; ಆಣೆ: ಮಾತು, ಭಾಷೆ; ಮರಳು: ಹಿಂದಿರುಗು; ಸುರಿ: ವರ್ಷಿಸು; ಅಂಬು: ಬಾಣ;

ಪದವಿಂಗಡಣೆ:
ದ್ರೋಣಸುತ +ಕುರುಪತಿಯ +ಸಮರಕೆ
ಹೂಣಿಗನಲೇ +ಬಲ್ಲೆವ್+ಇದರಲಿ
ಬಾಣ+ವಿದ್ಯೆಯ +ಬೀರಿ +ಬಿಡಿಸುವರ್+ ಇವರು +ಸಂಜಯನ
ಕಾಣಲಹುದಂತಿರಲಿ+ ನಿಮಗೀ
ಕೇಣದಲಿ +ಫಲವಿಲ್ಲ +ಕೃಪ+ ತ
ನ್ನಾಣೆ +ನೀ +ಮರಳೆಂದು +ಸಾತ್ಯಕಿ+ ಸುರಿದನ್+ಅಂಬುಗಳ

ಅಚ್ಚರಿ:
(೧) ಅಶ್ವತ್ಥಾಮನನ್ನು ಹೂಣಿಗ ಎಂದು ಕರೆದಿರುವುದು
(೨) ಬಾಣ, ಅಂಬು – ಸಮಾನಾರ್ಥಕ ಪದ

ಪದ್ಯ ೨೮: ದ್ರೋಣನ ಕೋಪವೇಕೆ ಹೆಚ್ಚಿತು?

ದಿಟ್ಟಿ ಮುಷ್ಟಿಯ ಸರಿಸದಲಿ ತಲೆ
ಮಟ್ಟು ಕವಿದರು ಭೀಮ ಫಲುಗುಣ
ರಿಟ್ಟ ತೊಡರಿನೊಳಾರು ಸಿಲುಕರು ದಿವಿಜ ದನುಜರಲಿ
ನೆಟ್ಟನೈದುವ ಹಿಳುಕುಗಳ ತರಿ
ದೊಟ್ಟಿದನು ದೆಖ್ಖಾಯಿಯಲಿ ಗರಿ
ಗಟ್ಟಿತೀತನ ಖಾತಿ ಮೆರೆದುದು ಕೇಣವಿಲ್ಲೆನಿಸಿ (ದ್ರೋಣ ಪರ್ವ, ೧೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ದ್ರೋಣರನ್ನು ದಿಟ್ಟಿಸಿ, ಅಂಗೈಯನ್ನು ಗಟ್ಟಿಗೊಳಿಸಿ ದ್ರೋಣನ ತಲೆಗೆ ಗುರಿಯಿಟ್ಟು ಬಾಣಗಳನ್ನು ಬಿಟ್ಟರು. ದೇವ ದಾನವರಲ್ಲಿ ಯಾರು ಇದನ್ನು ಎದುರಿಸಬಲ್ಲರು? ಆ ಬಾಣಗಳನ್ನು ದ್ರೋಣನು ಕಡಿದು ಹಾಕಿದನು. ದ್ರೋಣನ ಸಿಟ್ಟು ಹೆಚ್ಚಾಗಿ ಗರಿಗಟ್ಟಿ ದಾಕ್ಷಿಣ್ಯವಿಲ್ಲದೆ ವಿಜೃಂಭಿಸಿತು.

ಅರ್ಥ:
ದಿಟ್ಟಿಸು: ನೋಡು; ಮುಷ್ಟಿ: ಮುಚ್ಚಿದ ಅಂಗೈ, ಮುಟ್ಟಿಗೆ; ಸರಿಸ: ಮುಂಭಾಗ, ಸಮ್ಮುಖ; ತಲೆ: ಶಿರ; ಮಟ್ಟು: ಮುಷ್ಟಿಯಿಂದ ಹೊಡೆ, ಗುದ್ದು; ಕವಿ: ಆವರಿಸು; ತೊಡರು: ಸಂಕೋಲೆ; ಸಿಲುಕು: ಬಂಧಿಸು; ದನುಜ: ರಾಕ್ಷಸ; ದಿವಿಜ: ಅಮರ; ನೆಟ್ಟು: ನಾತಿದ; ಐದು: ಬಂದು ಸೇರು; ಹಿಳುಕು: ಬಾಣದ ಹಿಂಭಾಗ; ತರಿ: ಕಡಿ, ಕತ್ತರಿಸು; ಒಟ್ಟು: ಜೋಡಿಸು; ದೆಖ್ಖಾಯಿ: ಪರಾಕ್ರಮ, ಶೌರ್ಯ; ಗರಿಗಟ್ಟು: ಶಕ್ತಿಶಾಲಿಯಾಗು; ಖಾತಿ: ಕೋಪ, ಕ್ರೋಧ; ಮೆರೆ: ಹೊಳೆ, ಪ್ರಕಾಶಿಸು; ಕೇಣ: ಹೊಟ್ಟೆಕಿಚ್ಚು;

ಪದವಿಂಗಡಣೆ:
ದಿಟ್ಟಿ +ಮುಷ್ಟಿಯ +ಸರಿಸದಲಿ +ತಲೆ
ಮಟ್ಟು +ಕವಿದರು +ಭೀಮ +ಫಲುಗುಣರ್
ಇಟ್ಟ +ತೊಡರಿನೊಳ್+ಆರು +ಸಿಲುಕರು +ದಿವಿಜ +ದನುಜರಲಿ
ನೆಟ್ಟನ್+ಐದುವ +ಹಿಳುಕುಗಳ +ತರಿದ್
ಒಟ್ಟಿದನು +ದೆಖ್ಖಾಯಿಯಲಿ +ಗರಿ
ಗಟ್ಟಿತ್+ಈತನ +ಖಾತಿ +ಮೆರೆದುದು +ಕೇಣವ್+ಇಲ್ಲೆನಿಸಿ

ಅಚ್ಚರಿ:
(೧) ಪರಾಕ್ರಮವನ್ನು ವಿವರಿಸುವ ಪರಿ – ಇಟ್ಟ ತೊಡರಿನೊಳಾರು ಸಿಲುಕರು ದಿವಿಜ ದನುಜರಲಿ
(೨) ದಿಟ್ಟಿ, ಗಟ್ಟಿ, ಒಟ್ಟಿ – ಪ್ರಾಸ ಪದಗಳು

ಪದ್ಯ ೩೩: ದ್ರೋಣನೇಕೆ ಕೋಪಗೊಂಡನು?

ಕೆಡೆದದನುಜರು ಕೇಣವಿಲ್ಲದೆ
ತೊಡಗಿದಾಹವದೊಳಗೆ ಕೊಂದವ
ಕೊಡನಮಗನೋ ದೂರುಹೊತ್ತುದು ಬರಿದೆ ಹಗೆಗಳಿಗೆ
ನುಡಿದ ಫಲವೇನಿನ್ನು ಭೀಮನ
ಬಿಡದೆ ಸುಭಟರು ನೂಕಿಯೆಂಬೀ
ನುಡಿಯ ಕೇಳಿದು ಖಾತಿಗೊಂಡನು ಮತ್ತೆ ಕಲಿ ದ್ರೋಣ (ದ್ರೋಣ ಪರ್ವ, ೧೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ನನ್ನ ತಮ್ಮಂದಿರು ದಾಕ್ಷಿಣ್ಯರಹಿತನಾದ ಭೀಮನಿಂದ ಮಡಿದರು. ಅವರನ್ನು ಕೊಂದವನು ಭೀಮನೋ? ಭೀಮನನ್ನು ವ್ಯೂಹದೊಳಗೆ ಬಿಟ್ಟವನು ದ್ರೋಣನೋ? ಏನು ಹೇಳಿ ಏನು ಪ್ರಯೋಜನ, ಭೀಮನನ್ನು ಆಚೆಗೋಡಿಸಿರಿ ಎಂದು ದುರ್ಯೋಧನನು ಆಡಿದ ಮಾತನ್ನು ಕೇಳಿ ದ್ರೋಣನು ಕೋಪಗೊಂಡನು.

ಅರ್ಥ:
ಕೆಡೆ: ಬೀಳು, ಕುಸಿ; ಅನುಜ: ತಮ್ಮ; ಕೇಣ: ಹೊಟ್ಟೆಕಿಚ್ಚು, ಕೋಪ; ತೊಡಗು: ಅಡ್ಡಿ, ಅಡಚಣೆ; ಆಹವ: ಯುದ್ಧ; ಕೊಂದು: ಸಾಯಿಸು; ಕೊಡ: ಕಳಶ; ಮಗ: ಪುತ್ರ; ದೂರು: ಮೊರೆ; ಹೊತ್ತು: ಹತ್ತಿಕೊಳ್ಳು; ಬರಿ: ಪಕ್ಕ, ಬದಿ; ಹಗೆ: ವೈರಿ; ನುಡಿ: ಮಾತು; ಫಲ: ಪ್ರಯೋಜನ; ಬಿಡು: ತೊರೆ; ಸುಭಟ: ಯೋಧ; ನೂಕು: ತಳ್ಳು; ನುಡಿ: ಮಾತು; ಕೇಳು: ಆಲಿಸು; ಖಾತಿ: ಕೋಪ; ಮತ್ತೆ: ಪುನಃ; ಕಲಿ: ಶೂರ;

ಪದವಿಂಗಡಣೆ:
ಕೆಡೆದದ್+ಅನುಜರು +ಕೇಣ+ವಿಲ್ಲದೆ
ತೊಡಗಿದ್+ಆಹವದೊಳಗೆ +ಕೊಂದವ
ಕೊಡನಮಗನೋ +ದೂರುಹೊತ್ತುದು+ ಬರಿದೆ+ ಹಗೆಗಳಿಗೆ
ನುಡಿದ+ ಫಲವೇನ್+ಇನ್ನು +ಭೀಮನ
ಬಿಡದೆ+ ಸುಭಟರು +ನೂಕಿ+ಯೆಂಬೀ
ನುಡಿಯ +ಕೇಳಿದು +ಖಾತಿಗೊಂಡನು +ಮತ್ತೆ +ಕಲಿ +ದ್ರೋಣ

ಅಚ್ಚರಿ:
(೧) ದ್ರೋಣರನ್ನು ಕೊಡನಮಗ ಎಂದು ಕರೆದಿರುವುದು

ಪದ್ಯ ೧೩: ಜಲಸಂಧನನ್ನು ಯಾರು ಕೊಂದರು?

ಎಡಬಲಕೆ ತೂಳುವ ಮದೇಭವ
ಕಡಿದು ಹರಹಿದನೌಕಿ ಚೂರಿಸಿ
ಗಡಣಿಸುವ ಭೂಪರಿಗೆ ಮಾಡಿದನಮರಪದವಿಯನು
ಕಡಿದು ಬಿಸುಟನು ಕೇಣವಿಲ್ಲದೆ
ಕಡುಗಲಿಗಲನು ವೈರಿಸೇನೆಯ
ನಡಗುದರಿದನು ಕೆಡಹಿದನು ಜಲಸಂಧಭೂಪತಿಯ (ದ್ರೋಣ ಪರ್ವ, ೧೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಎಡಬಲಗಳಲ್ಲಿ ಬಂದ ಮದಗಜಗಳನ್ನು ಕಡಿದು ಹರಡಿದನು. ಚೂರಿಹಿಡಿದು ಬಂದ ರಾಜರಿಗೆ ದೇವ ಪದವಿಯನ್ನಿತ್ತನು. ಯಾವ ಮಿತಿಯೂ ಇಲ್ಲದೆ ವೀರರನ್ನು ಸಂಹರಿಸಿ, ಕಡಿಖಂಡ ಮಾಡಿದನು. ಜಲಸಂಧನೆಂಬ ರಾಜನನ್ನು ಕೊಂದನು.

ಅರ್ಥ:
ಎಡಬಲ: ಅಕ್ಕಪಕ್ಕ; ತೂಳು: ಬೆನ್ನಟ್ಟು, ಹಿಂಬಾಲಿಸು; ಮದ: ಅಮಲು; ಇಭ: ಆನೆ; ಕಡಿ: ಸೀಳು; ಹರಹು: ವಿಸ್ತಾರ, ವೈಶಾಲ್ಯ; ಔಕು: ನೂಕು; ಚೂರಿಸು: ಕತ್ತರಿಸು; ಗಡಣ: ಗುಂಪು; ಭೂಪ: ರಾಜ; ಅಮರ: ದೇವತೆ; ಪದವಿ: ಅಂತಸ್ತು, ಸ್ಥಾನ; ಕಡಿ: ಸೀಳು; ಬಿಸುಟು: ಹೊರಹಾಕು; ಕೇಣ: ಹೊಟ್ಟೆಕಿಚ್ಚು, ಮತ್ಸರ; ಕಡುಗಲಿ: ಪರಾಕ್ರಮಿ; ವೈರಿ: ಶತ್ರು; ಸೇನೆ: ಸೈನ್ಯ; ಅಡಗು: ಅವಿತುಕೊಳ್ಳು; ಅರಿ: ಸೀಳು; ಕೆಡಹು: ಬೀಳಿಸು; ಭೂಪತಿ: ರಾಜ;

ಪದವಿಂಗಡಣೆ:
ಎಡಬಲಕೆ +ತೂಳುವ +ಮದ+ಇಭವ
ಕಡಿದು +ಹರಹಿದನ್+ಔಕಿ +ಚೂರಿಸಿ
ಗಡಣಿಸುವ +ಭೂಪರಿಗೆ +ಮಾಡಿದನ್+ಅಮರ+ಪದವಿಯನು
ಕಡಿದು +ಬಿಸುಟನು +ಕೇಣವಿಲ್ಲದೆ
ಕಡುಗಲಿಗಲನು+ ವೈರಿ+ಸೇನೆಯ
ನಡಗುದ್+ಅರಿದನು +ಕೆಡಹಿದನು +ಜಲಸಂಧ+ಭೂಪತಿಯ

ಅಚ್ಚರಿ:
(೧) ಸಾಯಿಸಿದ ಎಂದು ಹೇಳಲು – ಗಡಣಿಸುವ ಭೂಪರಿಗೆ ಮಾಡಿದನಮರಪದವಿಯನು

ಪದ್ಯ ೫೮: ಪಾಂಡವ ಸೈನ್ಯದ ಸ್ಥಿತಿ ಹೇಗಿತ್ತು?

ಕೂಡೆ ತಳಪಟವಾಯ್ತು ಸುಭಟರ
ಜೋಡಿ ಜರಿದುದು ಕೌರವೇಂದ್ರಗೆ
ಖೋಡಿಯುಂಟೇ ದ್ರೋಣ ಕೇಣವ ಬಿಟ್ಟು ಕಾದುವರೆ
ಖೇಡತನ ಬಿಗುಹಾಯ್ತು ಮೆಯ್ಯಲಿ
ಮೂಡಿದವು ಹೊಗರಂಬುಗಳು ತೆಗೆ
ದೋಡಿದವು ತೆಕ್ಕೆಯಲಿ ಪಾಂಡವ ನೃಪ ಮಹಾರಥರು (ದ್ರೋಣ ಪರ್ವ, ೨ ಸಂಧಿ, ೫೮ ಪದ್ಯ
)

ತಾತ್ಪರ್ಯ:
ಇದ್ದಕ್ಕಿದ್ದಹಾಗೆ ರಣರಂಗವು ಸಮತಟ್ಟಾಯಿತು. ವೀರರು ಜಾರಿಹೋದರು. ದ್ರೋಣನು ನಿರ್ದಾಕ್ಷಿಣ್ಯದಿಂದ ಯುದ್ಧಮಾಡಿದರೆ, ಕೌರವನಿಗೆ ಕೇಡುಂಟಾದೀತೇ? ಪಾಂಡವ ವೀರರು ಬೆದರಿದರು. ಅವರ ಮೈಯಲ್ಲಿ ಬಾಣಗಳು ಒಟ್ಟೊಟ್ಟಾಗಿ ನಾಟಿದವು. ಪಾಂಡವ ಸೈನ್ಯದ ಮಹಾರಥರು ಯುದ್ಧವನ್ನು ಬಿಟ್ಟು ಓಡಿದರು.

ಅರ್ಥ:
ಕೂಡು: ಸೇರು; ತಳಪಟ: ಸೋಲು, ಅಂಗಾತ ಬೀಳು; ಸುಭಟ: ಪರಾಕ್ರಮಿ; ಖೋಡಿ: ದುರುಳ, ಕೊರತೆ; ಕೇಣ: ಹೊಟ್ಟೆಕಿಚ್ಚು, ಮತ್ಸರ; ಕಾದು: ಹೋರಾಡು; ಖೇಡ: ಹೆದರಿದವನು, ಭಯಗ್ರಸ್ತ; ಬಿಗು: ಗಟ್ಟಿ; ಮೈಯ್ಯು: ತನು, ದೇಹ; ಮೂಡು: ಉದಯಿಸು; ಹೊಗರು: ಕಾಂತಿ, ಪ್ರಕಾಶ; ಅಂಬು: ಬಾಣ; ತೆಗೆ: ಹೊರತರು; ಓಡು: ಧಾವಿಸು; ತೆಕ್ಕೆ: ಅಪ್ಪುಗೆ, ಆಲಿಂಗನ; ನೃಪ: ರಾಜ; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಕೂಡೆ +ತಳಪಟವಾಯ್ತು +ಸುಭಟರ
ಜೋಡಿ +ಜರಿದುದು +ಕೌರವೇಂದ್ರಗೆ
ಖೋಡಿಯುಂಟೇ +ದ್ರೋಣ +ಕೇಣವ+ ಬಿಟ್ಟು +ಕಾದುವರೆ
ಖೇಡತನ+ ಬಿಗುಹಾಯ್ತು +ಮೆಯ್ಯಲಿ
ಮೂಡಿದವು +ಹೊಗರ್+ಅಂಬುಗಳು+ ತೆಗೆದ್
ಓಡಿದವು +ತೆಕ್ಕೆಯಲಿ +ಪಾಂಡವ +ನೃಪ +ಮಹಾರಥರು

ಅಚ್ಚರಿ:
(೧) ದ್ರೋಣನ ಹಿರಿಮೆ – ಕೌರವೇಂದ್ರಗೆ ಖೋಡಿಯುಂಟೇ ದ್ರೋಣ ಕೇಣವ ಬಿಟ್ಟು ಕಾದುವರೆ

ಪದ್ಯ ೧೨: ಭೀಷ್ಮನ ಬಾಣಗಳಿಗೆ ಯಾವುದು ಪುಡಿಯಾದವು?

ಹೊಡೆಗೆಡೆದವಾನೆಗಳು ಥಟ್ಟಿಗೆ
ಕೆಡೆದವಗ್ಗದ ತುರಗದಳ ಮೈ
ಗಡಿತದಲಿ ಮುಂಕೊಂಡು ಹೊರಳಿತು ಕೂಡೆ ಪಾಯದಳ
ಮಡ ಮುರಿದು ನುಗ್ಗಾಯ್ತು ರಥ ಬೆಳು
ಗೊಡೆ ಪತಾಕಾದಂಡ ಚಮರಿಗ
ಳುಡಿದು ಬಿದ್ದವು ಕೇಣವಿಲ್ಲದೆ ತರಿದನರಿಬಲವ (ಭೀಷ್ಮ ಪರ್ವ, ೯ ಸಂಧಿ, ೧೨ ಪದ್ಯ)

ತಾತ್ಪರ್ಯ:
ಭೀಷ್ಮನು ದಾಕ್ಷಿಣ್ಯವಿಲ್ಲದೆ ಶತ್ರು ಸೈನ್ಯವನ್ನು ಸಂಹರಿಸಿದನು. ಆನೆಗಳು ಬಿದ್ದವು. ಕುದುರೆಗಳು ಕೆಡೆದವು. ರಥಗಳು ಮುರಿದು ಪುಡಿಯಾದವು. ಶ್ವೇತಚ್ಛತ್ರ, ಧ್ವಜಕಂಬ, ಚಾಮರಗಳು ಮುರಿದು ಬಿದ್ದವು.

ಅರ್ಥ:
ಹೊಡೆ: ಏಟು, ಹೊಡೆತ; ಕೆಡೆ: ಬೀಳು, ಕುಸಿ; ಆನೆ: ಕರಿ; ಥಟ್ಟು: ಗುಂಪು; ಅಗ್ಗ: ಶ್ರೇಷ್ಠ; ತುರಗ: ಅಶ್ವ; ದಳ: ಸೈನ್ಯ; ಮೈಗಡಿತ: ದೇಹದ ತುರಿಕೆ; ಹೊರಳು: ತಿರುವು, ಬಾಗು; ಕೂಡು: ಜೊತೆಯಾಗು; ಪಾಯದಳ: ಸೈನಿಕರು; ಮಡ: ಪಾದದ ಹಿಂಭಾಗ, ಹಿಮ್ಮಡಿ; ಮುರಿ: ಸೀಳು; ನುಗ್ಗು: ನೂಕಾಟ; ರಥ: ಬಂಡಿ; ಬೆಳುಗೊಡೆ: ಬಿಳಿಯ ಛತ್ರ; ಪತಾಕ: ಧ್ವಜ; ದಂಡ: ಕೋಲು; ಚಮರಿ: ಚಾಮರ; ಉಡಿ: ಮುರಿ, ತುಂಡು; ಬಿದ್ದು: ಬೀಳು; ಕೇಣ: ಕೋಪ, ಮತ್ಸರ, ದಾಕ್ಷಿಣ್ಯ; ತರಿ: ಕಡಿ, ಕತ್ತರಿಸು; ಅರಿ: ವೈರಿ; ಬಲ: ಸೈನ್ಯ;

ಪದವಿಂಗಡಣೆ:
ಹೊಡೆಗೆಡೆದವ್+ಆನೆಗಳು +ಥಟ್ಟಿಗೆ
ಕೆಡೆದವ್+ಅಗ್ಗದ +ತುರಗದಳ +ಮೈ
ಕಡಿತದಲಿ +ಮುಂಕೊಂಡು +ಹೊರಳಿತು +ಕೂಡೆ +ಪಾಯದಳ
ಮಡ +ಮುರಿದು +ನುಗ್ಗಾಯ್ತು +ರಥ +ಬೆಳು
ಗೊಡೆ +ಪತಾಕಾದಂಡ +ಚಮರಿಗಳ್
ಉಡಿದು+ ಬಿದ್ದವು+ ಕೇಣವಿಲ್ಲದೆ +ತರಿದನ್+ಅರಿ+ಬಲವ

ಅಚ್ಚರಿ:
(೧) ಭೀಷ್ಮನ ಯುದ್ಧದ ವೈಖರಿ – ಕೇಣವಿಲ್ಲದೆ ತರಿದನರಿಬಲವ

ಪದ್ಯ ೨೬: ಗಗನವಾಣಿ ಭೀಮನಿಗೆ ಏನು ಹೇಳಿತು?

ಮಾಣುಮಾಣುತ್ತರವ ಕೊಡು ಮುಂ
ಗಾಣಬೇಹುದು ತಂದೆ ತನಗೀ
ಕ್ಷೋಣಿಯಲಿ ಪೂರ್ವದ ಪರಿಗ್ರಹವೀ ಸರೋವರವು
ಜಾಣನಾದೊಡೆ ಜಾರಬಿಡು ಬಿಡು
ಕೇಣವನು ನೀನೆನಲು ಗಗನದ
ವಾಣಿಯನು ಮನ್ನಿಸದೆ ಮಾರುತಿಯೀಂಟಿದನು ಜಲವ (ಅರಣ್ಯ ಪರ್ವ, ೨೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ಆಗ ಆಕಾಶವಾಣಿಯು, ಅಪ್ಪ ತಂದೆ ಭೀಮ, ಬೇಡ ಬೇಡ, ಮುಂದಿನ ಪರಿಣಾಮವನ್ನು ತಿಳಿದುಕೊಂಡು ಬೊಗಸೆಯಲ್ಲಿರುವ ನೀರನ್ನು ಕೆಳಕ್ಕೆ ಚೆಲ್ಲು, ಈ ಭೂಮಿಯಲ್ಲಿ ಈ ಸರೋವರವನ್ನು ಹಿಂದೆಯೇ ನನಗೆ ಕೊಟ್ಟಿದ್ದಾರೆ, ಜಾಣನಾದರೆ ನೀರಿನ ಮೇಲಿನ ಅತ್ಯಾಶೆಯನ್ನು ಬಿಡು, ಎಂದು ಹೇಳಲು, ಭೀಮನು ಅದನ್ನು ಕಡೆಗಣಿಸಿ ನೀರನ್ನು ಕುಡಿದನು.

ಅರ್ಥ:
ಮಾಣು: ನಿಲ್ಲು; ಮಾಣುತ್ತರ: ಪ್ರತ್ಯುತ್ತರ; ಕೊಡು: ನೀಡು; ಮುಂಗಾಣ: ಮುಂದಿನ ಪರಿಣಾಮ; ತಂದೆ: ಅಪ್ಪ; ಕ್ಷೋಣಿ: ನೆಲ, ಭೂಮಿ; ಪೂರ್ವ: ಹಿಂದಿನ; ಪರಿಗ್ರಹ: ಸ್ವೀಕರಿಸುವುದು; ಸರೋವರ:ಸರಸಿ; ಜಾಣ: ಬುದ್ಧಿವಂತ; ಜಾರ: ಅತೀವ ಆಸೆ; ಬಿಡು: ತೊರೆ; ಕೇಣ: ಕೋಪ, ಅತಿಯಾಸೆ; ಗಗನ: ಆಗಸ; ವಾಣಿ: ಮಾತು; ಮನ್ನಿಸು: ಒಪ್ಪು; ಮಾರುತಿ: ಭೀಮ; ಈಂಟು: ಪಾನಮಾಡು; ಜಲ: ನೀರು;

ಪದವಿಂಗಡಣೆ:
ಮಾಣು+ಮಾಣುತ್ತರವ+ ಕೊಡು+ ಮುಂ
ಗಾಣ+ಬೇಹುದು +ತಂದೆ +ತನಗ್+ಈ+
ಕ್ಷೋಣಿಯಲಿ +ಪೂರ್ವದ +ಪರಿಗ್ರಹವ್+ಈ+ ಸರೋವರವು
ಜಾಣನಾದೊಡೆ +ಜಾರಬಿಡು +ಬಿಡು
ಕೇಣವನು +ನೀನೆನಲು +ಗಗನದ
ವಾಣಿಯನು +ಮನ್ನಿಸದೆ +ಮಾರುತಿ+ಈಂಟಿದನು +ಜಲವ

ಅಚ್ಚರಿ:
(೧) ಜೋಡಿ ಪದಗಳು – ಮಾಣುಮಾಣುತ್ತರವ, ಜಾರಬಿಡು ಬಿಡು ಕೇಣವನು

ಪದ್ಯ ೩೬: ಕರ್ಣನು ಯುಧಿಷ್ಠಿರನನ್ನು ಹೇಗೆ ಮಾತಿನಿಂದ ಇರಿದನು?

ದ್ರೋಣ ಬರಸಿದ ಭಾಷೆಯೆಂದೇ
ಕ್ಷೋಣಿಪತಿ ಬಗೆಯದಿರು ತನ್ನನು
ವಾಣಿಯದ ವಿವರದಲಿ ಸಲಹನು ಕೌರವರ ರಾಯ
ಪ್ರಾಣದಾಸೆಯ ಮರೆದು ತನ್ನೊಳು
ಕೇಣವಿಲ್ಲದೆ ಕಾದೆನುತ ನಿ
ತ್ರಾಣನನು ನಿಬ್ಬರದ ನುಡಿಗಳಲಿರಿದನಾ ಕರ್ಣ (ಕರ್ಣ ಪರ್ವ, ೧೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ದ್ರೋಣನಂತೆ ನನ್ನ ಮಾತು ಎಂದು ನೀನು ತಿಳಿಯದಿರು, ನನ್ನನ್ನು ವ್ಯವ್ಯಹಾರಕ್ಕನುಗುಣವಾಗಿ ಕೌರವನು ಸಾಕಲಿಲ್ಲ. ಇನ್ನು ನಿನ್ನ ಪ್ರಾಣದಾಶೆಯನ್ನು ಬಿಡು, ಯಾವ ಸಂಕೋಚವೂ ಇಲ್ಲದೆ ನಿನ್ನ ಸಂಪೂರ್ಣ ಶಕ್ತಿಯಿಂದ ಯುದ್ಧಮಾಡು ಎಂದು ಕರ್ಣನು ನಿಶ್ಯಕ್ತನಾಗಿದ್ದ ಯುಧಿಷ್ಠಿರನನ್ನು ಮಾತಿನಿಂದ ಇರಿದನು.

ಅರ್ಥ:
ಬರಸು: ತುಂಬು; ಭಾಷೆ: ಮಾತು; ಕ್ಷೋಣಿಪತಿ: ರಾಜ; ಬಗೆ: ಆಲೋಚನೆ, ಯೋಚನೆ; ವಾಣಿ: ಮಾತು; ವಿವರ: ವಿಸ್ತಾರ; ಸಲಹು: ಕಾಪಾಡು; ರಾಯ: ರಾಜ; ಪ್ರಾಣ; ಜೀವ; ಆಸೆ: ಬಯಕೆ; ಮರೆ: ನೆನಪಿನಿಂದ ದೂರ ಮಾಡು; ಕೇಣ: ಹೊಟ್ಟೆಕಿಚ್ಚು, ಮತ್ಸರ ; ಕಾದು: ಯುದ್ಧಮಾಡು; ನಿತ್ರಾಣ: ಶಕ್ತಿಹೀನತೆ; ನಿಬ್ಬರ: ಕಠೋರತೆ; ನುಡಿ: ಮಾತು; ಇರಿ: ಚುಚ್ಚು;

ಪದವಿಂಗಡಣೆ:
ದ್ರೋಣ +ಬರಸಿದ +ಭಾಷೆಯೆಂದೇ
ಕ್ಷೋಣಿಪತಿ +ಬಗೆಯದಿರು +ತನ್ನನು
ವಾಣಿಯದ +ವಿವರದಲಿ +ಸಲಹನು +ಕೌರವರ+ ರಾಯ
ಪ್ರಾಣದಾಸೆಯ+ ಮರೆದು +ತನ್ನೊಳು
ಕೇಣವಿಲ್ಲದೆ +ಕಾದೆನುತ+ ನಿ
ತ್ರಾಣನನು +ನಿಬ್ಬರದ +ನುಡಿಗಳಲ್+ಇರಿದನಾ +ಕರ್ಣ

ಅಚ್ಚರಿ:
(೧) ನ ಕಾರದ ಪದ – ನಿತ್ರಾಣನನು ನಿಬ್ಬರದ ನುಡಿಗಳಲಿರಿದನಾ
(೨) ಕ್ಷೋಣಿಪತಿ, ರಾಯ; ವಾಣಿ, ನುಡಿ – ಸಮನಾರ್ಥಕ ಪದ