ಪದ್ಯ ೫೧: ಗಾಂಧಾರಿಯು ವ್ಯಾಸರಿಗೆ ಏನು ಹೇಳಿದಳು?

ರಾಯನನು ಕಾಣಿಸಿದಿರೇ ಪ್ರ
ಜ್ಞಾಯತಾಕ್ಷನ ತಿಳಿಹಿ ಬಂದಿರೆ
ತಾಯಿಗಳು ನಾವೈಸಲೇ ಬಲುಹುಂಟೆ ನಮಗಿನ್ನು
ಸಾಯೆ ಸಾವೆನು ಕುರುಕುಲಾಗ್ರಣಿ
ನೋಯೆ ನೋವೆನು ತನಗೆ ದುರಭಿ
ಪ್ರಾಯವುಂಟೇ ಮಾವ ಎಂದಳು ಮುನಿಗೆ ಗಾಂಧಾರಿ (ಗದಾ ಪರ್ವ, ೧೧ ಸಂಧಿ, ೫೧ ಪದ್ಯ)

ತಾತ್ಪರ್ಯ:
ಗಾಂಧಾರಿಯು ವ್ಯಾಸ ಮುನಿಗಳಿಗೆ ಉತ್ತರಿಸುತ್ತಾ, ಮಾವ ಅರಸನನ್ನು ನೋಡಿ ಸಮಾಧಾನ ಪಡಿಸಿದಿರಾ, ಪ್ರಜ್ಞೆಯೇ ಕಣ್ಣಾಗಿರುವ ನನ್ನನ್ನು ಸಮಾಧಾನ ಪಡಿಸಲು ಬಂದಿರುವಿರಾ? ನಾನು ಎಷ್ಟಾಗಲೀ ಕೌರವರ ತಾಯಿ. ನಮಗೇನು ಸತ್ವವಿರುತ್ತದೆ? ಧೃತರಾಷ್ಟ್ರನಿಗೆ ನೋವಾದರೆ ನನಗೆ ನೋವು, ಸಾವಾದರೆ ಸಾವು, ನನ್ನಲ್ಲಿ ಯಾವ ದುರಭಿಪ್ರಾಯವೂ ಇಲ್ಲ ಎಂದು ಗಾಂಧಾರಿ ನುಡಿದಳು.

ಅರ್ಥ:
ರಾಯ: ರಾಜ; ಕಾಣಿಸು: ತೋರು; ಪ್ರಜ್ಞೆ: ಎಚ್ಚರವಿರುವ ಸ್ಥಿತಿ; ಆಯತಾಕ್ಷ: ಅಗಲವಾದ ಕಣ್ಣು; ತಿಳಿಹು: ಗೊತ್ತುಪಡಿಸು; ಬಂದು: ಆಗಮಿಸು; ತಾಯಿ: ಮಾತೆ; ಐಸಲೇ: ಅಲ್ಲವೇ; ಬಲುಹು: ಶಕ್ತಿ; ಸಾಯೆ: ಮರಣ ಹೊಂದು; ಕುಲ: ವಂಶ; ಅಗ್ರಣಿ: ಶ್ರೇಷ್ಠ; ದುರಭಿಪ್ರಾಯ: ಕೆಟ್ಟ ವಿಚಾರ; ಮಾವ: ಗಂಡನ ತಂದೆ; ಮುನಿ: ಋಷಿ;

ಪದವಿಂಗಡಣೆ:
ರಾಯನನು +ಕಾಣಿಸಿದಿರೇ +ಪ್ರ
ಜ್ಞಾಯತಾಕ್ಷನ+ ತಿಳಿಹಿ +ಬಂದಿರೆ
ತಾಯಿಗಳು +ನಾವ್+ಐಸಲೇ +ಬಲುಹುಂಟೆ +ನಮಗಿನ್ನು
ಸಾಯೆ +ಸಾವೆನು +ಕುರುಕುಲಾಗ್ರಣಿ
ನೋಯೆ +ನೋವೆನು +ತನಗೆ +ದುರಭಿ
ಪ್ರಾಯವುಂಟೇ +ಮಾವ +ಎಂದಳು +ಮುನಿಗೆ +ಗಾಂಧಾರಿ

ಅಚ್ಚರಿ:
(೧) ಗಾಂಧಾರಿಯು ತನ್ನ ಕಣ್ಣಿನ ಬಗ್ಗೆ ಹೇಳುವ ಪರಿ – ಪ್ರಜ್ಞಾಯತಾಕ್ಷನ ತಿಳಿಹಿ ಬಂದಿರೆ
(೨) ಸಾಯೆ, ನೋಯೆ – ಪ್ರಾಸ ಪದಗಳು

ಪದ್ಯ ೬೩: ಪಾಂಡವರಿಗಾವುದು ಬೇಡವೆಂದು ದ್ರೌಪದಿ ದುಃಖಿಸಿದಳು?

ಧರೆಯ ಭಂಡಾರವನು ರಥವನು
ಕರಿತುರಗರಥಪಾಯದಳವನು
ಕುರುಕುಲಾಗ್ರಣಿ ಸೆಳೆದುಕೊಂಡನು ನಿಮ್ಮ ಹೊರವಡಿಸಿ
ದುರುಳ ಕೀಚಕಗೆನ್ನ ಕೊಟ್ಟಿರಿ
ಪರಿಮಿತದಲಿರವಾಯ್ತು ನಿಮ್ಮೈ
ವರಿಗೆ ಲೇಸಾಯ್ತಕಟಯೆಂದಬುಜಾಕ್ಷಿ ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಭೂಮಿ, ಕೋಶ, ಚತುರಂಗ ಸೈನ್ಯ, ಇವೆಲ್ಲವೂ ದುರ್ಯೋಧನನು ನಿಮ್ಮಿಂದ ಕಿತ್ತುಕೊಂಡು ಹೊರಯಟ್ಟಿದನು, ಉಳಿದವಳು ನಾನು, ನನ್ನನ್ನು ಈಗ ಕೀಚಕನಿಗೆ ಕೊಟ್ಟಿರಿ, ಐವರೇ ಇರಲು ನಿಮಗೆ ಅನುಕೂಲವಾಯ್ತು, ರಾಜ್ಯವಾಗಲೀ, ಹೆಂಡತಿಯಾಗಲೀ ನಿಮಗೆ ಭೂಷಣವಲ್ಲ ಅಯ್ಯೋ ಎಂದು ದ್ರೌಪದಿಯು ದುಃಖಿಸಿದಳು.

ಅರ್ಥ:
ಧರೆ: ಭೂಮಿ; ಭಂಡಾರ: ಬೊಕ್ಕಸ, ಖಜಾನೆ; ರಥ: ತೇರು; ಕರಿ: ಆನೆ; ತುರಗ: ಕುದುರೆ; ಪಾಯದಳ: ಸೈನಿಕರು; ಕುಲ: ವಂಶ; ಅಗ್ರಣಿ: ಶ್ರೇಷ್ಠ, ಮೊದಲಿಗ; ಸೆಳೆ: ವಶಪಡಿಸಿಕೊಳ್ಳು; ಹೊರವಡಿಸು: ದೂರವಿಟ್ಟನು; ದುರುಳ: ದುಷ್ಟ; ಕೊಟ್ಟು: ನೀಡು; ಪರಿಮಿತ: ಮಿತ, ಸ್ವಲ್ಪವಾದ; ಇರವು: ಜೀವಿಸು, ಇರು; ಲೇಸು: ಒಳಿತು; ಅಕಟ: ಅಯ್ಯೋ; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು; ಹಲುಬು: ದುಃಖಿಸು;

ಪದವಿಂಗಡಣೆ:
ಧರೆಯ +ಭಂಡಾರವನು +ರಥವನು
ಕರಿ+ತುರಗ+ರಥ+ಪಾಯದಳವನು
ಕುರುಕುಲಾಗ್ರಣಿ +ಸೆಳೆದುಕೊಂಡನು +ನಿಮ್ಮ +ಹೊರವಡಿಸಿ
ದುರುಳ +ಕೀಚಕಗ್+ಎನ್ನ +ಕೊಟ್ಟಿರಿ
ಪರಿಮಿತದಲ್+ಇರವಾಯ್ತು +ನಿಮ್ಮೈ
ವರಿಗೆ +ಲೇಸಾಯ್ತ್+ಅಕಟ+ಎಂದ್+ಅಬುಜಾಕ್ಷಿ +ಹಲುಬಿದಳು

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ಪರಿಮಿತದಲಿರವಾಯ್ತು ನಿಮ್ಮೈವರಿಗೆ

ಪದ್ಯ ೪: ದ್ರೌಪದಿಯು ಯಾರನ್ನು ನೆನೆದಳು?

ಹರಿ ಹರಿ ಶ್ರೀಕಾಂತ ದಾನವ
ಹರ ಮುಕುಂದ ಮುರಾರಿ ಗತಿ ಶೂ
ನ್ಯರಿಗೆ ನೀನೇ ಗತಿಯಲಾ ಗರುವಾಯಿಗೆಟ್ಟೆನಲೈ
ಕುರುಕುಲಾಗ್ರಣಿ ಸೆಳೆದ ವಸ್ತ್ರಾ
ಕರುಷಣದ ಭಯ ಮತ್ತೆ ಬಂದಿದೆ
ಕರುಣಿ ನೀನೇ ಬಲ್ಲೆಯೆನುತಡಿಯಿಟ್ಟಳಬುಜಾಕ್ಷಿ (ವಿರಾಟ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ದ್ರೌಪದಿಯು ಹರಿ, ಹರಿ, ಶ್ರೀಕೃಷ್ಣ, ರಾಕ್ಷಸಾಂತಕ, ಮುಕುಂದ, ಮುರಾರಿ, ಗತಿಯಿಲ್ಲದವರಿಗೆ ನೀನೇ ಗರಿ, ನನ್ನ ಮಾನ ಕೆಡುವ ಹೊತ್ತು ಮತ್ತೆ ಬಂದಿದೆ, ಕೌರವನು ವಸ್ತ್ರಾಪಹರಣ ಮಾಡುವಾಗ ಬಂದ ಗತಿ ಈಗ ಮತ್ತೆ ಬಂದಿದೆ, ಸ್ವಾಮಿ ಕರುಣಾಸಾಗರ್ನೇ, ಇದೇನೆಂದು ನೀನೇ ಬಲ್ಲೆ, ಎಂದು ಮನಸ್ಸಿನಲ್ಲೇ ಕಳವಳಗೊಂಡು ಹೆಜ್ಜೆಯಿಟ್ಟಳು.

ಅರ್ಥ:
ಹರಿ: ವಿಷ್ಣು; ಕಾಂತ: ಪ್ರಿಯತಮ; ದಾನವ: ರಾಕ್ಷಸ, ದುಷ್ಟ; ಹರ: ಸಂಹರಿಸುವ; ಗತಿ: ಸ್ಥಿತಿ, ಅವಸ್ಥೆ; ಶೂನ್ಯ: ಏನು ಇಲ್ಲದ; ಗರುವ: ಶ್ರೇಷ್ಠ; ಕುಲ: ವಂಶ; ಅಗ್ರಣಿ: ಮೊದಲಿಗ; ಸೆಳೆ: ಜಗ್ಗು, ಎಳೆ; ವಸ್ತ್ರ: ಬಟ್ಟೆ; ಕರುಷ: ಆಕರ್ಷಕ; ಭಯ: ಅಂಜಿಕೆ; ಬಂದಿದೆ: ಆಗಮಿಸಿದೆ; ಕರುಣೆ: ದಯೆ; ಬಲ್ಲೆ: ತಿಳಿದಿರುವೆ; ಅಡಿಯಿಡು: ಹೆಜ್ಜೆಯಿಡು, ಚಲಿಸು; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ಹರಿ +ಹರಿ +ಶ್ರೀಕಾಂತ +ದಾನವ
ಹರ+ ಮುಕುಂದ +ಮುರಾರಿ+ ಗತಿ +ಶೂ
ನ್ಯರಿಗೆ +ನೀನೇ +ಗತಿಯಲಾ +ಗರುವಾಯಿಗೆಟ್ಟೆನಲೈ
ಕುರುಕುಲಾಗ್ರಣಿ +ಸೆಳೆದ +ವಸ್ತ್ರಾ
ಕರುಷಣದ +ಭಯ +ಮತ್ತೆ +ಬಂದಿದೆ
ಕರುಣಿ +ನೀನೇ +ಬಲ್ಲೆ+ಎನುತ್+ಅಡಿಯಿಟ್ಟಳ್+ಅಬುಜಾಕ್ಷಿ

ಅಚ್ಚರಿ:
(೧) ಕೃಷ್ಣನನ್ನು ಹೊಗಳುವ ಪರಿ – ಗತಿ ಶೂನ್ಯರಿಗೆ ನೀನೇ ಗತಿಯಲಾ

ಪದ್ಯ ೨೨: ಪಾಂಡವರೇಕೆ ಬರುವುದಿಲ್ಲವೆಂದು ಕೌರವನು ಹೇಳಿದನು?

ಕರೆಸಿದರೆ ದಿಟ ಬಾರರವರಾ
ಧರಣಿಯನು ಕೈಕೊಂಡು ನಿಲುವರು
ವರುಷ ಹದಿಮೂರಾದಡಲ್ಲದೆ ಮೆಟ್ಟರೀ ನೆಲವ
ಅರಿಗಳುಪಟಲದಿಂದ ತಪ್ಪಿಸಿ
ಮರಳಿಚಿದ ಜೀವೋಪಕಾರಕೆ
ಕುರುಕುಲಾಗ್ರಣಿ ಲೇಸುಮಾಡಿದನೆಂಬುದೀ ಲೋಕ (ಅರಣ್ಯ ಪರ್ವ, ೨೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭಾನುಮತಿಯ ಮಾತಿಗೆ ಉತ್ತರಿಸುತ್ತಾ, ನಾನು ಪಾಂಡವರನ್ನು ಕರೆಸಿದರೆ ಅವರು ಬರುವುದಿಲ್ಲ, ಆ ಕಾಡಿನಲ್ಲೇ ಇರುತ್ತಾರೆ, ಹದಿಮೂರು ವರ್ಷಗಳಾಗದೆ ಅವರು ನಗರವನ್ನು ಪ್ರವೇಶಿಸುವುದಿಲ್ಲ. ಶತ್ರುಗಳನ್ನು ಸೋಲಿಸಿ ಜೀವವುಳಿಸಿದ ಉಪಕಾರಕ್ಕಾಗಿ ಕೌರವನು ಅವರನ್ನು ಕರೆಸಿ ರಾಜ್ಯವನ್ನು ಕೊಟ್ಟನೆಂದು ಜಗವು ಆಡಿಕೊಳ್ಳುತ್ತದೆ ಎಂದನು.

ಅರ್ಥ:
ಕರೆಸು: ಬರೆಮಾಡು; ದಿಟ: ಸತ್ಯ; ಬಾ: ಆಗಮಿಸು; ಧರಣಿ: ಭೂಮಿ; ಕೈಕೊಂಡು: ತೆಗೆದುಕೋ; ನಿಲು: ನಿಲ್ಲು; ವರುಷ: ಸಂವತ್ಸರ; ಮೆಟ್ಟು: ನಿಲ್ಲು; ನೆಲ: ಭೂಮಿ; ಅರಿ: ವೈರಿ; ಉಪಟಳ: ಪರಾಭವ; ತಪ್ಪು: ದ್ರೋಹ; ಮರಳಿಸು: ಹಿಂದಿರುಗು; ಜೀವ: ಪ್ರಾಣ; ಉಪಕಾರ: ಸಹಾಯ; ಕುಲಾಗ್ರಣಿ: ವಂಶದ ಶ್ರೇಷ್ಠ ವ್ಯಕ್ತಿ; ಲೇಸು: ಒಳಿತು; ಲೋಕ: ಜಗತ್ತು;

ಪದವಿಂಗಡಣೆ:
ಕರೆಸಿದರೆ+ ದಿಟ+ ಬಾರರ್+ ಅವರ್
ಆ+ಧರಣಿಯನು +ಕೈಕೊಂಡು +ನಿಲುವರು
ವರುಷ +ಹದಿಮೂರಾದಡ್+ಅಲ್ಲದೆ +ಮೆಟ್ಟರೀ+ ನೆಲವ
ಅರಿಗಳ್+ಉಪಟಲದಿಂದ +ತಪ್ಪಿಸಿ
ಮರಳಿಚಿದ +ಜೀವ್+ಉಪಕಾರಕೆ
ಕುರುಕುಲಾಗ್ರಣಿ +ಲೇಸುಮಾಡಿದನ್+ಎಂಬುದೀ +ಲೋಕ

ಅಚ್ಚರಿ:
(೧) ಕೌರವನನ್ನು ಕುರುಕುಲಾಗ್ರಣಿ ಎಂದು ಕರೆದಿರುವುದು

ಪದ್ಯ ೭: ದುರ್ಯೋಧನನು ಯಾವ ವರವನ್ನು ಬೇಡಿದನು?

ಅರಸ ಕೇಳೈ ಹಸ್ತದಲ್ಲಿಹ
ಪರುಷವನು ಕಲ್ಲೆಂದು ಟೆಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರಂದದಲಿ
ಕುರುಕುಲಾಗ್ರಣಿ ನುಡಿದನಿನಿಬರು
ವೆರಸಿ ಪಾಂಡವರರಸಿಯುಣಲೊಡ
ನಿರದೆ ಗ್ರಾಸವ ಬೇಡಿ ನೀವ್ ನಮಗಿತ್ತ ವರವೆಂದ (ಅರಣ್ಯ ಪರ್ವ, ೧೭ ಸಂಧಿ, ೭ ಪದ್ಯ)

ತಾತ್ಪರ್ಯ:
ಕೈಯಲ್ಲಿರುವ ಸ್ಪರ್ಶಮಣಿಯನ್ನು ಕಲ್ಲೆಂದು ತಿರಸ್ಕರಿಸಿ, ಗಾಜಿನ ಹರಳನ್ನು ಕಂಡು ಸಂತೋಷಪಡುವ ಮೂಢರಂತೆ ಕೌರವನು, ನಿಮ್ಮ ಪರಿವಾರದಲ್ಲಿರುವ ಎಲ್ಲರೊಡನೆ ಹೋಗಿ ದ್ರೌಪದಿಯ ಊಟವಾದ ಮೇಲೆ ಭೋಜನವನ್ನು ಬೇಡಿರಿ ಎಂದು ಕೌರವನು ಬೇಡಿದನು.

ಅರ್ಥ:
ಅರಸ: ರಾಜ; ಕೇಳ್: ಆಲಿಸು; ಹಸ್ತ: ಕೈ; ಪರುಷ: ಸ್ಪರ್ಷಮಣಿ; ಕಲ್ಲು: ಶಿಲೆ; ಟೆಕ್ಕೆ: ಬಾವುಟ, ಧ್ವಜ; ಹರಳು: ಕಲ್ಲಿನ ಚೂರು, ನೊರಜು; ಟೆಕ್ಕೆಯಹರಳು: ಗಾಜಿನ ಮಣಿ; ಹರುಷ: ಸಂತಸ; ಮೂಢ: ತಿಳಿಗೇಡಿ, ಮೂರ್ಖ; ಮನುಷ್ಯ: ಮಾನವ; ಕುಲ: ವಂಶ; ಅಗ್ರಣಿ: ಶ್ರೇಷ್ಠ; ನುಡಿ: ಮಾತಾಡು; ಇನಿಬರು: ಇಷ್ಟುಜನ;
ಅರಸಿ: ರಾಣಿ; ಉಣು: ಊಟ; ಗ್ರಾಸ: ತುತ್ತು, ಕಬಳ; ಬೇಡಿ: ಕೇಳಿ; ವರ: ಆಶೀರ್ವಾದ;

ಪದವಿಂಗಡಣೆ:
ಅರಸ +ಕೇಳೈ +ಹಸ್ತದಲ್ಲಿಹ
ಪರುಷವನು +ಕಲ್ಲೆಂದು +ಟೆಕ್ಕೆಯ
ಹರಳಿನಲಿ +ಹರುಷಿಸುವ +ಮೂಢ +ಮನುಷ್ಯರಂದದಲಿ
ಕುರುಕುಲಾಗ್ರಣಿ+ ನುಡಿದನ್+ಇನಿಬರು
ವೆರಸಿ+ ಪಾಂಡವರ್+ಅರಸಿ+ಉಣಲೊಡ
ನಿರದೆ +ಗ್ರಾಸವ +ಬೇಡಿ +ನೀವ್ +ನಮಗಿತ್ತ +ವರವೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಸ್ತದಲ್ಲಿಹ ಪರುಷವನು ಕಲ್ಲೆಂದು ಟೆಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರಂದದಲಿ

ಪದ್ಯ ೬೦: ದುರ್ಯೋಧನನು ತನ್ನ ಪಾದಕ್ಕೆ ಬಿದ್ದುದನ್ನು ನೋಡಿ ಕೃಷ್ಣನು ಏನು ಹೇಳಿದನು?

ಧರಣಿಪತಿ ಸಿಂಹಾಸನದ ಮೇ
ಲಿರದೆ ಬಹರೇ ನಾವು ಬಂದೇ
ಹರಸುವೆವು ತಪ್ಪಾವುದೆನುತೆತ್ತಿದನು ಮಸ್ತಕವ
ಸುರನದೀಸುತ ಕೈಗುಡಲು ಕೇ
ಸರಿಯ ಪೀಠಕೆ ದೇವ ಬಂದನು
ಕುರುಕುಲಾಗ್ರಣಿಗಳ ಸುಸನ್ಮಾನವನು ಕೈಕೊಳುತ (ಉದ್ಯೋಗ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ಭೂಮಿಯನ್ನಾಳುವ ರಾಜನು ಸಿಂಹಾಸನದ ಮೇಲಿರದೆ ಹೀಗೆ ನನ್ನ ಕಾಲ ಬಳಿ ಎರಗುವುದು ಸರಿಯೇ, ಅಯ್ಯೋ ತಾಪ್ಪಾಯಿತಲ್ಲ, ನಾವೆ ನಿಮ್ಮ ಬಳಿ ಬಂದು ಆಶೀರ್ವದಿಸುತ್ತಿದ್ದೆವು ಎಂದು ಹೇಳುತ್ತಾ ದುರ್ಯೋಧನನ ತಲೆಯನ್ನು ಸವರಿಸುತ್ತಾ ಮೇಲೇಳಿಸಿದನು. ಭೀಷ್ಮರು ತಮ್ಮ ಹಸ್ತವನ್ನು ಚಾಚಿ ಕೃಷ್ಣನ ಆಸನವನ್ನು ತೋರಲು, ಕೃಷ್ಣನು ತನ್ನ ಸಿಂಹಾಸನಕ್ಕೆ ಬರಲು ಕುರುಕುಲದ ಶ್ರೇಷ್ಠರಿಂದ ಸನ್ಮಾನವನ್ನು ಸ್ವೀಕರಿಸಿದನು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಸಿಂಹಾಸನ: ರಾಜರು ಕುಳಿತುಕೊಳ್ಳುವ ಆಸನ; ಮೇಲೆ: ಅಗ್ರಭಾಗ; ಬಹರು: ಬರುವುದು; ಹರಸು: ಆಶೀರ್ವದಿಸು; ತಪ್ಪು: ಸರಿಯಾಗದ; ಎತ್ತು: ಮೇಲೇಳಿಸು; ಮಸ್ತಕ: ಶಿರ, ತಲೆ; ಸುರನದಿ: ಗಂಗೆ; ಸುತ: ಮಗ; ಸುರನದೀಸುತ: ಭೀಷ್ಮ; ಕೈ: ಹಸ್ತ; ಕೈಗುಡಲು: ಹಸ್ತವನ್ನು ನೀಡಲು; ಕೇಸರಿ: ಸಿಂಹ; ಪೀಠ: ಆಸನ; ದೇವ: ಭಗವಂತ; ಬಂದು: ಆಗಮಿಸು; ಅಗ್ರಣಿ: ಶ್ರೇಷ್ಠರು; ಕುಲ: ವಂಶ; ಸನ್ಮಾನ: ಗೌರವ; ಕೈಕೊಳುತ: ಸ್ವೀಕರಿಸು;

ಪದವಿಂಗಡಣೆ:
ಧರಣಿಪತಿ +ಸಿಂಹಾಸನದ+ ಮೇ
ಲಿರದೆ +ಬಹರೇ +ನಾವು +ಬಂದೇ
ಹರಸುವೆವು +ತಪ್ಪಾವುದ್+ಎನುತ್+ಎತ್ತಿದನು +ಮಸ್ತಕವ
ಸುರನದೀಸುತ +ಕೈಗುಡಲು +ಕೇ
ಸರಿಯ +ಪೀಠಕೆ +ದೇವ +ಬಂದನು
ಕುರುಕುಲ+ಅಗ್ರಣಿಗಳ+ ಸುಸನ್ಮಾನವನು +ಕೈಕೊಳುತ

ಅಚ್ಚರಿ:
(೧) ಸಿಂಹಾಸನ, ಕೇಸರಿಯ ಪೀಠ – ಸಮನಾರ್ಥಕ ಪದ

ಪದ್ಯ ೬೧: ಏತಕ್ಕೆ ಮರವನ್ನು ಮುರಿಯಬೇಡ ಎಂದು ಯುಧಿಷ್ಠಿರನು ಎಚ್ಚರಿಸಿದನು?

ಮರನ ಮುರಿದೊಡೆ ನಮ್ಮನರಿವನು
ಕುರುಕುಲಾಗ್ರಣಿಯೀಯಮಾನುಷ
ಪರಮ ಸಾಹಸ ಭೀಮಸೇನಂಗಲ್ಲದಿಲ್ಲೆಂದು
ಅರಿಕೆಯಹುದೆನೆ ಭೀಮನೆಂದನು
ಕುರುಕುಲಾಗ್ರಣಿ ಸಹಿತಿದೆಲ್ಲವ
ನೊರೆಸಿ ಕಳೆದೊಡೆ ಬಳಿಕ ನಮಗಾರುಂಟು ಮುನಿವವರು (ವಿರಾಟ ಪರ್ವ, ೫ ಸಂಧಿ, ೬೧ ಪದ್ಯ)

ತಾತ್ಪರ್ಯ:
ಭೀಮ, ನೀನು ಮರಾವನ್ನು ಮುರಿದೊಡೆ ನಾವು ಯಾರೆಂದು ಕೌರವರಿಗೆ ತಿಳಿಯುತ್ತದೆ, ಏಕೆಂದರೆ, ಈ ಅಮಾನುಷ ಸಾಹಸ ಭೀಮನಿಗಲ್ಲದೆ ಬೇರೆಯವರಿಗಿರುವುದಿಲ್ಲ. ಅದಕ್ಕೆ ಭೀಮನು ಆ ಸೈನ್ಯದೊಡನೆ ಕೌರವರನ್ನೇ ಸಂಹರಿಸಿದರೆ ನಮ್ಮನ್ನು ಕಂಡು ಹಿಡಿಯಲು ಹೇಗೆ ಸಾಧ್ಯವೆಂದು ಮರುತ್ತರವನ್ನು ನೀಡಿದನು.

ಅರ್ಥ:
ಮರ: ವೃಕ್ಷ; ಮುರಿ: ಸೀಳು; ಅರಿ: ತಿಳಿ; ಅಗ್ರಣಿ: ಶ್ರೇಷ್ಠ, ಮುಂದಾಳು; ಅಮಾನುಷ: ಕ್ರೂರವಾದ; ಪರಮ: ಶ್ರೇಷ್ಠ; ಸಾಹಸ: ಶೌರ್ಯ; ಅರಿಕೆ:ವಿಜ್ಞಾಪನೆ; ಸಹಿತ: ಜೊತೆ; ಒರೆಸಿ: ಸಾಯಿಸು, ಕೊನೆಗಾಣು; ಬಳಿಕ: ನಂತರ; ಮುನಿ: ಕೋಪಿಸು;

ಪದವಿಂಗಡಣೆ:
ಮರನ +ಮುರಿದೊಡೆ +ನಮ್ಮನ್+ಅರಿವನು
ಕುರುಕುಲ+ಅಗ್ರಣಿ+ಈ+ಅಮಾನುಷ
ಪರಮ+ ಸಾಹಸ+ ಭೀಮಸೇನಂಗಲ್ಲದ್+ಇಲ್ಲೆಂದು
ಅರಿಕೆ+ಅಹುದೆನೆ+ ಭೀಮನೆಂದನು
ಕುರುಕುಲಾಗ್ರಣಿ +ಸಹಿತಿದ್+ಎಲ್ಲವನ್
ಒರೆಸಿ +ಕಳೆದೊಡೆ +ಬಳಿಕ +ನಮಗಾರುಂಟು +ಮುನಿವವರು

ಅಚ್ಚರಿ:
(೧) ಕುರುಕುಲಾಗ್ರಣಿ – ೨, ೫ ಸಾಲಿನ ಮೊದಲ ಪದ