ಪದ್ಯ ೫: ಜಗತ್ತು ಪಾಂಡುರಾಜನ ಆಳ್ವಿಕೆಯಲ್ಲಿ ಹೇಗೆ ತೋರಿತು?

ಪಸರಿಸಿದ ಪರಿಧೌತಕೀರ್ತಿ
ಪ್ರಸರದಲಿ ಬೆಳುಪಾಯ್ತು ಜನ ನಿ
ಪ್ಪಸರದಲಿ ಝಳಪಿಸುವ ಖಂಡೆಯ ಸಿರಿಯ ಸೊಂಪಿನಲಿ
ಮಸಗಿತಗ್ಗದ ಕೆಂಪು ಪರಬಲ
ವಿಸರ ದಳನ ಕ್ರೋಧಮಯ ತಾ
ಮಸದಿನಸಿತಾಭಾಸಮಾದುದು ಭುವನವಿಸ್ತಾರ (ಆದಿ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಪಾಂಡುರಾಜನ ಶುದ್ಧವಾದ ಕಿರ್ತಿಯು ಹರಡಿ ಜಗತ್ತು ಬಿಳುಪಾಯಿತು. ನಿಷ್ಠುರತೆಯಿಂದ ಅವನು ಝಳಪಿಸುವ ಕತ್ತಿಯ ದೆಸೆಯಿಂದ ಜಗತ್ತು ಕೆಂಪಾಯಿತು. ಶತ್ರುಸೈನ್ಯವನ್ನು ಬಗ್ಗುಬಡಿಯುವ ಅವನ ಕೋಪದಿಂದ ಜಗತ್ತು ಕಪ್ಪಾಗಿ ಕಾಣಿಸುತ್ತಿತ್ತು.

ಅರ್ಥ:
ಪಸರಿಸು: ಹರಡು; ಧೌತ: ಬಿಳಿ, ಶುಭ್ರ; ಕೀರ್ತಿ: ಖ್ಯಾತಿ; ಬಿಳುಪು: ಬಿಳಿಯ ಬಣ್ಣ; ಜನ: ಮನುಷ್ಯರು; ನಿಪ್ಪಸರ: ಅತಿಶಯ, ಹೆಚ್ಚಳ; ಝಳಪಿಸು: ಬೀಸು, ಹೆದರಿಸು; ಖಂಡೆಯ: ಕತ್ತಿ; ಸಿರಿ: ಐಶ್ವರ್ಯ; ಸೊಂಪು: ಸೊಗಸು, ಚೆಲುವು; ಮಸಗು: ಹರಡು; ಅಗ್ಗ: ಶ್ರೇಷ್ಠ; ಪರಬಲ: ವೈರಿ; ವಿಸರ: ವಿಸ್ತಾರ, ವ್ಯಾಪ್ತಿ; ದಳ: ಸೈನ್ಯ; ಕ್ರೋಧ: ಕೋಪ; ತಾಮಸ: ಕತ್ತಲೆ, ಅಂಧಕಾರ, ನಿಧಾನ; ಅಸಿತ: ಕಪ್ಪಾದುದು; ಭಾಸ: ಕಾಣು; ಭುವನ: ಜಗತ್ತು; ವಿಸ್ತಾರ: ಹರಡು; ಆಭಾಸ: ಕಾಂತಿ, ಪ್ರಕಾಶ;

ಪದವಿಂಗಡಣೆ:
ಪಸರಿಸಿದ +ಪರಿಧೌತ+ಕೀರ್ತಿ
ಪ್ರಸರದಲಿ +ಬೆಳುಪಾಯ್ತು +ಜನ +ನಿ
ಪ್ಪಸರದಲಿ +ಝಳಪಿಸುವ +ಖಂಡೆಯ +ಸಿರಿಯ +ಸೊಂಪಿನಲಿ
ಮಸಗಿತ್+ಅಗ್ಗದ+ ಕೆಂಪು +ಪರಬಲ
ವಿಸರ+ ದಳನ +ಕ್ರೋಧಮಯ +ತಾ
ಮಸದಿನ್+ಅಸಿತ್+ಆಭಾಸಮಾದುದು +ಭುವನ+ವಿಸ್ತಾರ

ಅಚ್ಚರಿ:
(೧) ಪಸರಿಸಿ, ಪ್ರಸರ, ನಿಪ್ಪಸರ – ಪದಗಳ ಬಳಕೆ
(೨) ಬೆಳುಪು, ಕೆಂಪು, ಅಸಿತ – ಬಣ್ಣಗಳ ಬಳಕೆ
(೩) ರೂಪಕದ ಪ್ರಯೋಗ – ಪರಬಲ ವಿಸರ ದಳನ ಕ್ರೋಧಮಯ ತಾಮಸದಿನಸಿತಾಭಾಸಮಾದುದು

ಪದ್ಯ ೨೩: ದುರ್ಯೋಧನನನ್ನು ಧರ್ಮಜನು ಹೇಗೆ ಹಂಗಿಸಿದನು?

ಕೊಳನ ಬಿಡು ಕಾದೇಳು ಹಿಂದಣ
ಹಳಿವ ತೊಳೆ ಹೇರಾಳ ಬಾಂಧವ
ಬಳಗ ಭೂಮೀಶ್ವರರ ಬಹಳಾಕ್ಷೋಹಿಣೀದಳವ
ಅಳಿದ ಕೀರ್ತಿಯ ಕೆಸರ ತೊಳೆ ಭೂ
ವಳಯಮಾನ್ಯನು ದೈನ್ಯವೃತ್ತಿಯ
ಬಳಸುವರೆ ಸುಡು ಮರುಳೆ ಕುರುಪತಿ ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ದುರ್ಯೋಧನ, ಕೊಳದಿಂದ ಮೇಲೆದ್ದು ಯುದ್ಧಮಾಡಲು ಬಾ, ಹಿಂದಿನ ದುಷ್ಕೀರ್ತಿಯನ್ನು ಕಳೆದುಕೋ, ಲೆಕ್ಕವಿಲ್ಲದಷ್ಟು ಬಂಧು ಬಾಂಧವರು ಅನೇಕ ಅಕ್ಷೋಹಿಣೀ ಸೈನ್ಯಗಳನ್ನು ಕೊಂದ ಅಪಕೀರ್ತಿಯ ಕೆಸರನ್ನು ತೊಳೆದುಕೋ, ಲೋಕದಲ್ಲಿ ಮಾನ್ಯನಾದವನು ದೀನನಾಗಬಾರದು, ಹುಚ್ಚಾ, ಆಯುಧವನ್ನು ಹಿಡಿ ಎಂದು ಕೌರವನನ್ನು ಧರ್ಮಜನು ಹಂಗಿಸಿದನು.

ಅರ್ಥ:
ಕೊಳ: ಸರಸಿ, ಸರೋವರ; ಬಿಡು: ತೊರೆ; ಕಾದು: ಹೋರಾಡು; ಹಿಂದಣ: ಹಿಂದೆ ನಡೆದ; ಹಳಿ: ದೂಷಿಸು, ನಿಂದಿಸು; ತೊಳೆ: ಸ್ವಚ್ಛಮಾಡು, ಶುದ್ಧಗೊಳಿಸು; ಹೇರಾಳ: ಬಹಳ; ಬಾಂಧವ: ಬಂಧುಜನ; ಬಳಗ: ಗುಂಪು; ಭೂಮೀಶ್ವರ: ರಾಜ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ದಳ: ಸೈನ್ಯ; ಅಳಿ: ಸಾವು; ಕೀರ್ತಿ: ಯಶಸ್ಸು; ಕೆಸರು: ರಾಡಿ; ಭೂವಳಯ: ಭೂಮಿ; ಮಾನ್ಯ: ಪ್ರಸಿದ್ಧ; ದೈನ್ಯ: ದೀನತೆ, ಹೀನಸ್ಥಿತಿ; ವೃತ್ತಿ: ಕೆಲಸ; ಬಳಸು: ಸುತ್ತುವರಿ, ಸುತ್ತುಗಟ್ಟು; ಮರುಳ: ತಿಳಿಗೇಡಿ, ದಡ್ಡ; ಕೈದು: ಆಯುಧ;

ಪದವಿಂಗಡಣೆ:
ಕೊಳನ +ಬಿಡು +ಕಾದೇಳು +ಹಿಂದಣ
ಹಳಿವ +ತೊಳೆ +ಹೇರಾಳ +ಬಾಂಧವ
ಬಳಗ+ ಭೂಮೀಶ್ವರರ +ಬಹಳ+ಅಕ್ಷೋಹಿಣೀ+ದಳವ
ಅಳಿದ+ ಕೀರ್ತಿಯ +ಕೆಸರ +ತೊಳೆ +ಭೂ
ವಳಯ+ಮಾನ್ಯನು +ದೈನ್ಯ+ವೃತ್ತಿಯ
ಬಳಸುವರೆ +ಸುಡು +ಮರುಳೆ +ಕುರುಪತಿ +ಕೈದುಗೊಳ್ಳೆಂದ

ಅಚ್ಚರಿ:
(೧) ಹಿಂದಣ ಹಳಿವ ತೊಳೆ, ಅಳಿದ ಕೀರ್ತಿಯ ಕೆಸರ ತೊಳೆ – ತೊಳೆ ಪದದ ಬಳಕೆ
(೨) ಲೋಕ ನೀತಿ – ಭೂವಳಯಮಾನ್ಯನು ದೈನ್ಯವೃತ್ತಿಯ ಬಳಸುವರೆ

ಪದ್ಯ ೧೫: ದುರ್ಯೋಧನನು ಯಾವ ಪ್ರಶ್ನೆಯನ್ನು ಕೇಳಿದನು?

ಹಿಮದ ಹೊಯ್ಲಲಿ ಸೀದು ಸಿಕ್ಕಿದ
ಕಮಲವನದಂದದಲಿ ಹತವಿ
ಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ
ಸುಮುಖತಾ ವಿಚ್ಛೇದ ಕಲುಷ
ಸ್ತಿಮಿತರಿರವನು ಕಂಡು ನಾಳಿನ
ಸಮರಕೇನುದ್ಯೋಗವೆಂದನು ಕೃಪನ ಗುರುಸುತನ (ಶಲ್ಯ ಪರ್ವ, ೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮಂಜಿನ ಹೊಡೆತಕ್ಕೆ ಸಿಕ್ಕು ಸೀದ ಕಮಲವನದಮ್ತೆ ತಮ್ಮ ಮಹಾಪರಾಕ್ರಮದ ಕಿರ್ತಿಯು ಭಂಗೊಂದಲಾಗಿ ಆ ನೋವಿನಿಂದ ಕುಸಿದು ವಿವರ್ಣವಾದ ಮುಖಗಳನ್ನು ಹೊತ್ತು ಸಂತೋಷವನ್ನು ತೊರೆದು ಶೋಕದಿಂದ ತಪ್ತರಾದ ತನ್ನ ವೀರರನ್ನು ಕಂಡು ದುರ್ಯೋಧನನು ಕೃಪಾಚಾರ್ಯ, ಅಶ್ವತ್ಥಾಮ, ನಾಳಿನ ಯುದ್ಧದ ಬಗೆಯೇನು ಎಂದು ಕೇಳಿದನು.

ಅರ್ಥ:
ಹಿಮ: ಮಂಜಿನಗಡ್ಡೆ; ಹೊಯ್ಲು: ಏಟು, ಹೊಡೆತ; ಸೀದು: ಕರಕಲಾಗು; ಕಮಲ: ತಾವರೆ; ವನ: ಕಾಡು; ಹತ: ಸಾವು; ವಿಕ್ರಮ: ಪರಾಕ್ರಮ; ಕೀರ್ತಿ: ಯಶಸ್ಸು; ಬಹಳ: ತುಂಬ; ಭಾರ: ಹೊರೆ, ತೂಕ; ಬಳುಕು: ನಡುಕ, ಕಂಪನ; ಆನನ: ಮುಖ; ಸುಮುಖ: ಸುಂದರವಾದ ಮುಖ; ವಿಚ್ಛೇದ: ತುಂಡು ಮಾಡುವಿಕೆ; ಕಲುಷ: ಕಳಂಕ; ಸ್ತಿಮಿತ: ಭದ್ರವಾದ ನೆಲೆ, ಸ್ಥಿರತೆ; ಕಂಡು: ನೋಡು; ಸಮರ: ಯುದ್ಧ; ಉದ್ಯೋಗ: ಕೆಲಸ; ಸುತ: ಪುತ್ರ;

ಪದವಿಂಗಡಣೆ:
ಹಿಮದ+ ಹೊಯ್ಲಲಿ +ಸೀದು +ಸಿಕ್ಕಿದ
ಕಮಲವನದಂದದಲಿ+ ಹತ+ವಿ
ಕ್ರಮದ +ಕೀರ್ತಿಯ +ಬಹಳ+ಭಾರಕೆ+ ಬಳುಕಿದ್+ಆನನದ
ಸುಮುಖತಾ +ವಿಚ್ಛೇದ +ಕಲುಷ
ಸ್ತಿಮಿತರಿರವನು +ಕಂಡು +ನಾಳಿನ
ಸಮರಕೇನ್+ಉದ್ಯೋಗವೆಂದನು +ಕೃಪನ +ಗುರುಸುತನ

ಅಚ್ಚರಿ:
(೧) ಉಪಮಾನದ ಪ್ರಯೋಗ: ಹಿಮದ ಹೊಯ್ಲಲಿ ಸೀದು ಸಿಕ್ಕಿದ ಕಮಲವನದಂದದಲಿ
(೨) ಕೌರವನ ಸ್ಥಿತಿ – ಹತವಿಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ

ಪದ್ಯ ೪೩: ಭೀಮನ ಪರಾಕ್ರಮದ ಮಾತುಗಳು ಹೇಗಿದ್ದವು?

ದೇಹ ಕೀರ್ತಿಗಳೊಳಗೆ ನಿಲುವುದು
ದೇಹವೋ ಕೀರ್ತಿಯೊ ಮುರಾಂತಕ
ಬೇಹುದನು ಬೆಸಸಿದಡೆ ಮಾಡೆನು ಬಲ್ಲಿರೆನ್ನನುವ
ಗಾಹುಗತಕದಲುಳಿವ ಧರ್ಮ
ದ್ರೋಹಿ ತಾನಲ್ಲಿನ್ನು ನೋಡಾ
ಸಾಹಸವನೆನುತಿತ್ತ ಮುರಿದನು ಸರಳ ಸಮ್ಮುಖಕೆ (ದ್ರೋಣ ಪರ್ವ, ೧೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೀಮನು ನುಡಿಯುತ್ತಾ, ದೇಹ ಕೀರ್ತಿಗಳಲ್ಲಿ ನಿಲ್ಲುವುದು ದೇಹವೋ ಕೀರ್ತಿಯೋ? ನಿನಗ ಬೇಕಾದುದನ್ನು ಹೇಳಿಕೊಂಡರೆ ನಾನು ಕೇಳುವವನಲ್ಲ. ನನ್ನ ರೀತಿ ನಿಮಗೆ ಗೊತ್ತಿದೆ, ಮೋಸದಿಂದ ಬದುಕಲು ಬಯಸುವ ಧರ್ಮದ್ರೋಹಿ ನಾನಲ್ಲ. ನನ್ನ ಸಾಹಸವನ್ನು ನೋಡು ಎಂದು ಭೀಮನು ಅಸ್ತ್ರವನ್ನಿದಿರಿಸಿದನು.

ಅರ್ಥ:
ದೇಹ: ಒಡಲು, ಶರೀರ; ಕೀರ್ತಿ: ಯಶಸ್ಸು; ನಿಲುವು: ನಿಂತುಕೊಳ್ಳು; ಮುರಾಂತಕ: ಕೃಷ್ಣ; ಬೇಹುದು: ಬೇಕಾದುದು; ಬೆಸಸು: ಹೇಳು, ಆಜ್ಞಾಪಿಸು; ಬಲ್ಲಿರಿ: ತಿಳಿದ; ಗಾಹು: ಮೋಸ; ಉಳಿವ: ಮಿಕ್ಕ; ಧರ್ಮ: ಧಾರಣೆ ಮಾಡಿದುದು; ದ್ರೋಹ: ಮೋಸ; ಸಾಹಸ: ಪರಾಕ್ರಮ; ಮುರಿ: ಸೀಳು; ಸರಳ: ಬಾಣ; ಸಮ್ಮುಖ: ಎದುರು; ಅನುವು: ರೀತಿ;

ಪದವಿಂಗಡಣೆ:
ದೇಹ +ಕೀರ್ತಿಗಳೊಳಗೆ +ನಿಲುವುದು
ದೇಹವೋ +ಕೀರ್ತಿಯೊ +ಮುರಾಂತಕ
ಬೇಹುದನು+ ಬೆಸಸಿದಡೆ+ ಮಾಡೆನು +ಬಲ್ಲಿರ್+ಎನ್ನ್+ಅನುವ
ಗಾಹುಗತಕದಲ್+ಉಳಿವ +ಧರ್ಮ
ದ್ರೋಹಿ +ತಾನಲ್ಲ್+ಇನ್ನು +ನೋಡಾ
ಸಾಹಸವನ್+ಎನುತ್+ಇತ್ತ +ಮುರಿದನು +ಸರಳ +ಸಮ್ಮುಖಕೆ

ಅಚ್ಚರಿ:
(೧) ಭೀಮನ ಸಾಹಸದ ನುಡಿ – ದೇಹ ಕೀರ್ತಿಗಳೊಳಗೆ ನಿಲುವುದು ದೇಹವೋ ಕೀರ್ತಿಯೊ

ಪದ್ಯ ೩೫: ದ್ರೋಣರು ಸೈನ್ಯಕ್ಕೆ ಏನು ಹೇಳಿದರು?

ತಿಮಿರವಡಗಿತು ಮನದ ರೋಷದ
ತಿಮಿರವಡಗದ ಮುನ್ನ ಭುಜವಿ
ಕ್ರಮದ ವಿವರಣೆಯುಳ್ಳಡವಸರವಿದು ನೃಪಾಲರಿಗೆ
ನಿಮನಿಮಗೆ ಮುಂಕೊಂಡು ವಂಶ
ಕ್ರಮ ಸಮಾಗತ ಕೀರ್ತಿ ಸತಿಯಲಿ
ಮಮತೆಗಳ ನೆರೆ ಮಾಡಿಯೆಂದನು ದ್ರೋಣ ನಿಜಬಲಕೆ (ದ್ರೋಣ ಪರ್ವ, ೧೫ ಸಂಧಿ, ೩೫ ಪದ್ಯ)

ತಾತ್ಪರ್ಯ:
ಹೊರಗಿನ ಕತ್ತಲೆ ಈಗ ಅಡಗಿದೆ, ಆದರೆ ಮನಸ್ಸಿನಲ್ಲಿರುವ ತೋಷದ ಕತ್ತಲು ಇಳಿಯುವ ಮುನ್ನವೇ ಯುದ್ಧ ಮಾಡಿ ಗೆಲ್ಲಿರಿ, ರಾಜರು ಬಾಹುಬಲವನು ತೋರಿಸುವ ಸಮಯಬಂದಿದೆ. ವಂಶ ಪರಂಪರೆಯಿಂದ ಕ್ರಮವಾಗಿ ಬಂದಿರುವ ಕೀರ್ತಿ ಕಾಂತೆಯಲ್ಲಿ ಮಮತೆಯನ್ನು ಮಾಡಿ ಎಂದು ದ್ರೋಣನು ತನ್ನ ಸೈನ್ಯಕ್ಕೆ ಹೇಳಿದನು.

ಅರ್ಥ:
ತಿಮಿರ: ಅಂಧಕಾರ; ಅಡಗು: ಕಡಿಮೆಯಾಗು, ಮರೆಯಾಗು; ಮನ: ಮನಸ್ಸು; ರೋಷ: ಕೋಪ; ಮುನ್ನ: ಮೊದಲು; ಭುಜ: ಬಾಹು; ವಿಕ್ರಮ: ಶೂರ, ಸಾಹಸ; ವಿವರಣೆ: ವಿಸ್ತಾರ;

ಪದವಿಂಗಡನೆ:
ತಿಮಿರವ್+ಅಡಗಿತು +ಮನದ +ರೋಷದ
ತಿಮಿರವ್+ಅಡಗದ +ಮುನ್ನ +ಭುಜ+ವಿ
ಕ್ರಮದ +ವಿವರಣೆಯುಳ್ಳಡ್+ಅವಸರವಿದು +ನೃಪಾಲರಿಗೆ
ನಿಮನಿಮಗೆ+ ಮುಂಕೊಂಡು +ವಂಶ
ಕ್ರಮ +ಸಮಾಗತ+ ಕೀರ್ತಿ +ಸತಿಯಲಿ
ಮಮತೆಗಳ+ ನೆರೆ+ ಮಾಡಿಯೆಂದನು+ ದ್ರೋಣ +ನಿಜಬಲಕೆ

ಅಚ್ಚರಿ:
(೧) ತಿಮಿರ – ಪದದ ಬಳಕೆ – ೧,೨ ಸಾಲಿನ ಮೊದಲ ಪದ
(೨) ತಿಮಿರವಡಗಿತು ಮನದ ರೋಷದ ತಿಮಿರವಡಗದ ಮುನ್ನ ಭುಜವಿ ಕ್ರಮದ ವಿವರಣೆಯುಳ್ಳಡವಸರವಿದು

ಪದ್ಯ ೩೦: ಭೀಷ್ಮನು ಅರ್ಜುನನಿಗೇನೆಂದು ಹೇಳಿದನು?

ನಿಲ್ಲು ಫಲುಗುಣ ಕೇಳು ಹೊಲ್ಲೆಹ
ವಲ್ಲ ಸಕಲ ಕ್ಷತ್ರಧ್ರಮವ
ಬಲ್ಲೆ ನೀನೆಮಗಹಿತನೇ ನೃಪನೀತಿಬಾಹಿರನೆ
ಎಲ್ಲಿಯಪಕೀರ್ತಿಗಳು ಕೀರ್ತಿಗ
ಳೆಲ್ಲ ವಿಧಯವು ನಿನ್ನ ಕಾರಣ
ವಲ್ಲ ನೀ ಕೊಲಲೈಸರವನೈ ಪಾರ್ಥ ಕೇಳೆಂದ (ಭೀಷ್ಮ ಪರ್ವ, ೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಆಗ ಭೀಷ್ಮನು ಅರ್ಜುನನಿಗೆ ಮಾತನಾಡುತ್ತಾ, ಅರ್ಜುನ ಸ್ವಲ್ಪ ನಿಲ್ಲು, ಇದು ತ್ಯಾಗವಲ್ಲ, ನೀನು ಕ್ಷತ್ರಿಯಧರ್ಮವನ್ನು ಬಲ್ಲೆ, ನೀನು ನಮಗೆ ಶತ್ರುವೇ? ಕ್ಷತ್ರಧರ್ಮಕ್ಕೆ ಬಾಹಿರನಾದವನೇ! ಕೀರ್ತಿ ಅಪಕೀರ್ತಿಗಳು ಎಲ್ಲಿಯವು, ಅವು ವಿಧಿಯ ದೆಸೆಯಿಂದ ಬರುತ್ತವೆ, ಯಾರನ್ನಾದರೂ ಕೊಲ್ಲಲು ನೀನು ಎಷ್ಟರವನು ಹೇಳು ಎಂದು ಕೇಳಿದನು.

ಅರ್ಥ:
ನಿಲ್ಲು: ತಡೆ; ಹೊಲ್ಲೆಹ: ದೋಷ; ಸಕಲ: ಎಲ್ಲಾ; ಕ್ಷತ್ರ: ಕ್ಷಾತ್ರಧರ್ಮ; ಬಲ್ಲೆ: ತಿಳಿ; ಅಹಿತ: ವೈರಿ; ನೃಪ: ರಾಜ; ಬಾಹಿರ: ಹೊರಗಿನವ; ಅಪಕೀರ್ತಿ: ಅಪಯಶಸ್ಸು; ಕೀರ್ತಿ: ಖ್ಯಾತಿ; ವಿಧಿ: ಆಜ್ಞೆ, ಆದೇಶ; ಕಾರಣ: ನಿಮಿತ್ತ, ಹೇತು; ಕೊಲು: ಸಾಯಿಸು; ಐಸರವ: ಎಷ್ಟರವ; ಕೇಳು: ಆಲಿಸು;

ಪದವಿಂಗಡಣೆ:
ನಿಲ್ಲು +ಫಲುಗುಣ +ಕೇಳು +ಹೊಲ್ಲೆಹ
ವಲ್ಲ +ಸಕಲ +ಕ್ಷತ್ರಧರ್ಮವ
ಬಲ್ಲೆ+ ನೀನ್+ಎಮಗ್+ಅಹಿತನೇ +ನೃಪ+ ನೀತಿ+ಬಾಹಿರನೆ
ಎಲ್ಲಿ+ಅಪಕೀರ್ತಿಗಳು +ಕೀರ್ತಿಗಳ್
ಎಲ್ಲ +ವಿಧಯವು +ನಿನ್ನ +ಕಾರಣ
ವಲ್ಲ+ ನೀ +ಕೊಲಲ್+ಐಸರವನೈ+ ಪಾರ್ಥ +ಕೇಳೆಂದ

ಅಚ್ಚರಿ:
(೧) ಅಪಕೀರ್ತಿ, ಕೀರ್ತಿ – ವಿರುದ್ಧ ಪದಗಳು

ಪದ್ಯ ೨೯: ಅರ್ಜುನನಿಗೆ ಕೀರ್ತಿಗಳಿಸಲು ಏಕೆ ಇಚ್ಛೆಯಿರಲಿಲ್ಲ?

ಈತನನು ನಾವ್ ಕೊಲಲು ಭುವನ
ಖ್ಯಾತರಹವೈ ಸುಡಲಿ ಬಯಸುವ
ಭೂತಳವನೀ ಬೊಡ್ಡಿಗೋಸುಗ ಸುಟ್ಟು ಸುಕೃತವನು
ಘಾತಕರು ಪಾತಕರು ತೆಗೆ ತೆಗೆ
ಏತರವದಿರು ಪಾಂಡುತನಯರ
ಮಾತನಾಡದಿರೆಂಬ ಕೀರ್ತಿಗೆ ನೋತುದಿಲ್ಲೆಂದ (ಭೀಷ್ಮ ಪರ್ವ, ೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಷ್ಮನನ್ನು ಸಂಹರಿಸಿದರೆ ಲೋಕದಲ್ಲಿ ಪ್ರಖ್ಯಾತರಾಗುವುದು ಖಂಡಿತ. ಭೂಮಿಯನ್ನು ಈ ನಡತೆಗೆಟ್ಟವಳನ್ನು ಬಯಸಿ, ಪುಣ್ಯವನ್ನು ಸುಟ್ಟು ಮುಂದೆ ಎಂದೆಂದೂ ಪಾಂಡವರು ಪಾಪಿಗಳು ಘಾತಕರು, ತೆಗೆ ತೆಗೆ ಅವರ ಮಾತನ್ನೇ ಆಡಬೇಡ, ಎಂಬ ಕೀರ್ತಿಯನ್ನು ಗಳಿಸಲು ನನಗೆ ಇಷ್ಟವಿಲ್ಲ.

ಅರ್ಥ:
ಕೊಲು: ಸಾಯಿಸು; ಭುವನ: ಜಗತ್ತು, ಪ್ರಪಂಚ; ಖ್ಯಾತ: ಪ್ರಸಿದ್ಧ; ಸುಡು: ದಹಿಸು; ಬಯಸು: ಇಚ್ಛಿಸು; ಭೂತಳ: ಭೂಮಿ; ಬೊಡ್ಡಿ: ವೇಶ್ಯೆ; ಸುಕೃತ: ಪುಣ್ಯ; ಘಾತಕ: ನೀಚ, ಕೊಲೆಗೊಡುಕ; ಪಾತಕ: ಬೀಳುವಂತೆ ಮಾಡುವುದು; ತೆಗೆ: ಹೊರತರು; ತನಯ: ಮಗ; ಮಾತು: ನುಡಿ; ಕೀರ್ತಿ: ಖ್ಯಾತಿ;

ಪದವಿಂಗಡಣೆ:
ಈತನನು +ನಾವ್ +ಕೊಲಲು +ಭುವನ
ಖ್ಯಾತರಹವೈ+ ಸುಡಲಿ +ಬಯಸುವ
ಭೂತಳವನೀ +ಬೊಡ್ಡಿಗ್+ಓಸುಗ +ಸುಟ್ಟು +ಸುಕೃತವನು
ಘಾತಕರು +ಪಾತಕರು+ ತೆಗೆ +ತೆಗೆ
ಏತರವದಿರು +ಪಾಂಡು+ತನಯರ
ಮಾತನಾಡದಿರೆಂಬ+ ಕೀರ್ತಿಗೆ +ನೋತುದಿಲ್ಲೆಂದ

ಅಚ್ಚರಿ:
(೧) ಭುವನ, ಭೂತಳ – ಸಾಮ್ಯಾರ್ಥ ಪದ

ಪದ್ಯ ೬೦: ಧರ್ಮಜನೇಕೆ ಚಿಂತಾಸಕ್ತನಾದನು?

ಕೇಳಿದನು ಯಮಸೂನು ದುಗುಡವ
ತಾಳಿದನು ನಳನಹುಷ ಭರತ ನೃ
ಪಾಲ ಪಾರಂಪರೆಯಲುದಿಸಿದ ಸೋಮವಂಶದಲಿ
ಕೋಳುವೋದುದೆ ಕೀರ್ತಿಯೆಮ್ಮೀ
ಬಾಳಿಕೆಯ ಸುಡಲೆನುತ ಚಿಂತಾ
ಲೋಲನಿದ್ದನು ವೀರ ನಾರಾಯಣನ ನೆನೆಯುತ್ತ (ಅರಣ್ಯ ಪರ್ವ, ೨೦ ಸಂಧಿ, ೬೦ ಪದ್ಯ)

ತಾತ್ಪರ್ಯ:
ಧರ್ಮಜನು ಕೌರವರ ಸೋಲಿನ ಸ್ಥಿತಿಯನ್ನು ಕೇಳಿದನು, ನಳ ನಹುಷ, ಭರತರಂತಹ ಚಕ್ರವರ್ತಿಗಳ ಪರಂಪರೆಯುಳ್ಳ ಚಂದ್ರವಂಶದ ಕೀರ್ತಿಯು ಹಾಳಾಯಿತೇ, ನಾವು ಬದುಕಿದ್ದೇನು ಪ್ರಯೋಜನ, ನಮ್ಮ ಬಾಳಿಕೆ ಸುಡಲಿ ಎಂದು ಯೋಚಿಸುತ್ತಾ ಚಿಂತೆಯಲ್ಲಿ ಮುಳುಗಿ ಶ್ರೀಕೃಷ್ಣನನ್ನು ಸ್ಮರಿಸಿದನು.

ಅರ್ಥ:
ಕೇಳು: ಆಲಿಸು; ಸೂನು: ಮಗ; ದುಗುಡ: ದುಃಖ; ತಾಳು: ಹೊಂದು, ಪಡೆ; ನೃಪಾಲ: ರಾಜ; ಪಾರಂಪರೆ: ವಂಶ, ಪೀಳಿಗೆ; ಉದಿಸು: ಹುಟ್ತು; ಸೋಮ: ಚಂದ್ರ; ವಂಶ: ಕುಲ; ಕೋಳು: ಪೆಟ್ಟು; ಕೀರ್ತಿ: ಯಶಸ್ಸು; ಬಾಳಿಕೆ: ಬದುಕು; ಸುಡು: ದಹಿಸು; ಚಿಂತೆ: ಯೋಚನೆ; ಲೋಲ: ಆಸಕ್ತ; ನೆನೆ: ಜ್ಞಾಪಿಸಿಕೋ;

ಪದವಿಂಗಡಣೆ:
ಕೇಳಿದನು +ಯಮಸೂನು +ದುಗುಡವ
ತಾಳಿದನು +ನಳ+ನಹುಷ +ಭರತ+ ನೃ
ಪಾಲ +ಪಾರಂಪರೆಯಲ್+ಉದಿಸಿದ +ಸೋಮ+ವಂಶದಲಿ
ಕೋಳುವೋದುದೆ +ಕೀರ್ತಿ+ಎಮ್ಮೀ
ಬಾಳಿಕೆಯ +ಸುಡಲ್+ಎನುತ +ಚಿಂತಾ
ಲೋಲನಿದ್ದನು +ವೀರ +ನಾರಾಯಣನ +ನೆನೆಯುತ್ತ

ಅಚ್ಚರಿ:
(೧) ಚಿಂತಿತನಾದನು ಎಂದು ಹೇಳಲು – ಚಿಂತಾಲೋಲನಿದ್ದನು
(೨) ಚಂದ್ರವಂಶದ ಕಾಳಜಿಯನ್ನು ತೋರುವ ಪರಿ – ಕೋಳುವೋದುದೆ ಕೀರ್ತಿಯೆಮ್ಮೀ
ಬಾಳಿಕೆಯ ಸುಡಲ್

ಪದ್ಯ ೧೫: ಕರ್ಣನು ಮನಸ್ಸಿನಲ್ಲಿ ನಸುನಗಲು ಕಾರಣವೇನು?

ತ್ಯಾಗಿ ಜಗದೊಳಗೆಂಬ ಕೀರ್ತಿಯ
ಲೋಗರಿಂದವೆ ಕೇಳ್ದು ಬಂದೆನು
ಮೇಗಾತಿಶಯ ಪದವನೊಲಿವಡೆ ಮನದ ಬಯಕೆಗಳ
ಈಗಳೀವುದು ನಮ್ಮಭೀಷ್ಟ
ಶ್ರೀಗೆ ಮಂಗಳವೆಂದು ಹರಸಿದ
ಡಾಗಳರಿದಾ ಕರ್ಣ ನಸುನಗುತಿರ್ದ ಮನದೊಳಗೆ (ಕರ್ಣ ಪರ್ವ, ೨೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಕಪಟವೇಷದ ಬ್ರಾಹ್ಮಣನ ರೂಪದಲ್ಲಿ ಕರ್ಣನ ಬಳಿ ಬಂದು, ನೀನು ಮಹಾದಾನಿಯೆಂಬ ಕೀರ್ತಿ ಜನಜನಿತವಾಗಿದೆ. ಅದನ್ನು ಕೇಳಿ ನಿನ್ನ ಬಳಿಗೆ ಬಂದಿದ್ದೇನೆ, ಅತಿಶಯವಾದ ಸದ್ಗತಿಯನ್ನು ನೀನು ಬಯಸುವುದಾದರೆ, ನನ್ನ ಮನಸ್ಸಿನ ಬಯಕೆಯನ್ನು ಸಲ್ಲಿಸು ನಿನಗೆ ಮಂಗಳವಾಗುತ್ತದೆ ಎಂದು ಆಶೀರ್ವದಿಸಲು, ಕೃಷ್ಣನ ಆ ಕಪತವೇಷವನ್ನು ಅರಿತ ಕರ್ಣನು ಮನದೊಳಗೆ ನಸುನಕ್ಕನು.

ಅರ್ಥ:
ತ್ಯಾಗಿ: ದಾನಿ; ಜಗ: ಪ್ರಪಂಚ; ಕೀರ್ತಿ: ಖ್ಯಾತಿ, ಯಶಸ್ಸು; ಲೋಗ: ಜನರು; ಕೇಳು: ಆಲಿಸು; ಬಂದೆ: ಆಗಮಿಸು; ಅತಿಶಯ: ಹೆಚ್ಚು; ಪದ: ಪದವಿ; ಒಲಿ: ಅಪೇಕ್ಷಿಸು; ಮನ: ಮನಸ್ಸು; ಬಯಕೆ: ಆಸೆ; ಈವುದು: ನೀಡುವುದು; ಅಭೀಷ್ಟ: ಬಯಕೆ; ಮಂಗಳ: ಶುಭ; ಹರಸು: ಆಶೀರ್ವದಿಸು; ಅರಿ: ತಿಳಿ; ನಸುನಗು: ಮಂದಸ್ಮಿತ; ಮನ: ಮನಸ್ಸು;

ಪದವಿಂಗಡಣೆ:
ತ್ಯಾಗಿ +ಜಗದೊಳಗೆಂಬ +ಕೀರ್ತಿಯ
ಲೋಗರಿಂದವೆ +ಕೇಳ್ದು +ಬಂದೆನು
ಮೇಗಾತಿಶಯ+ ಪದವನ್+ಒಲಿವಡೆ+ ಮನದ +ಬಯಕೆಗಳ
ಈಗಳ್+ಈವುದು +ನಮ್ಮ್+ಅಭೀಷ್ಟ
ಶ್ರೀಗೆ +ಮಂಗಳವೆಂದು +ಹರಸಿದಡ್
ಆಗಳ್+ಅರಿದ್+ಆ+ ಕರ್ಣ+ ನಸುನಗುತಿರ್ದ+ ಮನದೊಳಗೆ

ಅಚ್ಚರಿ:
(೧) ಕರ್ಣನನ್ನು ಹೊಗಳುವ ಬಗೆ – ತ್ಯಾಗಿ ಜಗದೊಳಗೆಂಬ ಕೀರ್ತಿಯ ಲೋಗರಿಂದವೆ ಕೇಳ್ದು ಬಂದೆನು

ಪದ್ಯ ೪: ಪರಿವಾರದವರು ಸಂಕಟಪಡಲು ಕಾರಣವೇನು?

ಬಯ್ವ ಹೆಂಡಿರ ಚಿಂತೆಯಿಲ್ಲದೆ
ಹೊಯ್ವ ಕೀರ್ತಿಯ ಹಂಬಲಿಲ್ಲದೆ
ಒಯ್ವ ನರಕದ ನೆನಹದಿಲ್ಲದೆ ಪತಿಯ ಸಮಯದಲಿ
ಕಾಯ್ವರಾವಲ್ಲೆಂದು ಕೆಲದಲಿ
ಬಯ್ವರಿಗೆ ಮೈಗೊಟ್ಟು ಬದುಕುವ
ದೈವದೂರರು ನಾವೆನುತ ಮರುಗಿತ್ತು ಪರಿವಾರ (ಕರ್ಣ ಪರ್ವ, ೧೩ ಸಂಧಿ, ೪ ಪದ್ಯ)

ತಾತ್ಪರ್ಯ:
ಹೆಂಡತಿಯರು ಬಯ್ಯುತ್ತಾರೆೆಂಬ ಚಿಂತೆಯಿಲ್ಲದೆ, ಚೆಲ್ಲಿ ಹಾಳಾದ ಕೀರ್ತಿ ಬೇಕೆಂಬ ಹಂಬಲಿಲ್ಲದೆ, ನರಕಕ್ಕೆ ಹೋದೇವೆಂಬ ಭೀತಿಯಿಲ್ಲದೆ, ಆಪತ್ಕಾಲದಲ್ಲಿ ಒಡೆಯನನ್ನು ಕಾವುವವರು ನೀವಲ್ಲ ಎಂಬ ಬೈಗುಳನ್ನು ಲೆಕ್ಕಿಸದೆ ನಾಚಿಕೆಗೆಟ್ಟು ಬದುಕುವ ದೇವರಿಂದ ದೂರವಾದ ಪಾಪಿಗಳಾದೆವಲ್ಲಾ ಎಂದು ಪರಿವಾರದವರು ಮರುಗಿದರು.

ಅರ್ಥ:
ಬಯ್ವ: ಜರಿ; ಹೆಂಡಿರ: ಮಡದಿ; ಚಿಂತೆ: ಯೋಚನೆ; ಹೊಯ್ವ: ಹೊಡೆ; ಕೀರ್ತಿ: ಖ್ಯಾತಿ; ಹಂಬಲ: ಆಸೆ; ಒಯ್ವ: ಹೋಗು; ನರಕ: ಪಾತಾಳಲೋಕ; ನೆನಹು: ನೆನಪು; ಪತಿ: ಒಡೆಯ; ಸಮಯ: ಕಾಲ; ಕಾಯ್ವ: ಕಾಪಾಡು, ರಕ್ಷಿಸು; ಕೆಲ: ಪಕ್ಕ; ಬಯ್ವ: ಜರಿ; ಮೈಗೊಟ್ಟು: ನಾಚಿಕೆ ಯಿಲ್ಲದೆ; ಬದುಕು: ಜೀವಿಸು; ದೈವದೂರ: ದೇವರಿಗೆ ದೂರನಾದವ, ಪಾಪಿ; ಮರುಗು: ಸಂಕಟ; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ಬಯ್ವ +ಹೆಂಡಿರ +ಚಿಂತೆಯಿಲ್ಲದೆ
ಹೊಯ್ವ +ಕೀರ್ತಿಯ +ಹಂಬಲಿಲ್ಲದೆ
ಒಯ್ವ +ನರಕದ+ ನೆನಹದಿಲ್ಲದೆ+ ಪತಿಯ +ಸಮಯದಲಿ
ಕಾಯ್ವರಾವಲ್ಲೆಂದು +ಕೆಲದಲಿ
ಬಯ್ವರಿಗೆ+ ಮೈಗೊಟ್ಟು +ಬದುಕುವ
ದೈವದೂರರು+ ನಾವೆನುತ+ ಮರುಗಿತ್ತು +ಪರಿವಾರ

ಅಚ್ಚರಿ:
(೧) ಲಜ್ಜೆಯಿಲ್ಲದೆ ಎಂದು ಹೇಳಲು – ಬಯ್ವರಿಗೆ ಮೈಗೊಟ್ಟು ಬದುಕುವ ದೈವದೂರರು