ಪದ್ಯ ೨೨: ಊರಿನ ಜನರು ಬ್ರಹ್ಮನನ್ನೇಕೆ ಬಯ್ದರು?

ಗಣಿಕೆಯರನೇಕಾದಶಾಕ್ಷೊ
ಹಿಣಿಯ ನೃಪರಾಣಿಯರನಾ ಪ
ಟ್ಟಣ ಜನದ ಪರಿಜನದ ಬಹುಕಾಂತಾ ಕದಂಬಕವ
ರಣಮಹೀದರುಶನಕೆ ಬಹು ಸಂ
ದಣಿಯ ಕಂಡರು ಧರ್ಮಸುತನಿ
ನ್ನುಣಲಿ ಧರಣಿಯನೆಂದು ಸುಯ್ದರು ಬಯ್ದು ಕಮಲಜನ (ಗದಾ ಪರ್ವ, ೧೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಏಕಾದಶಾಕ್ಷೋಣಿಯ ಸೈನ್ಯದಲ್ಲಿದ್ದ ರಾಜರೆಲ್ಲರ ರಾಣಿಯರು, ಪಟ್ಟಣದ ಸ್ತ್ರೀಗಳ ಗುಂಪು, ಗಣಿಕೆಯರು ಇವರೆಲ್ಲರೂ ರಣರಮ್ಗಕ್ಕೆ ಬರುವುದನ್ನು ಅವರು ಕಂಡು, ಇನ್ನು ಧರ್ಮಜನೇ ಈ ಭೂಮಿಯನ್ನು ಅನುಭವಿಸಲಿ, ಎಂದು ಉದ್ಗರಿಸಿ, ನಿಟ್ಟುಸಿರು ಬಿಟ್ಟು ಹಣೆಯ ಬರಹವನ್ನು ಬರೆದ ಚತುರ್ಮುಖ ಬ್ರಹ್ಮನನ್ನು ಬೈದರು.

ಅರ್ಥ:
ಗಣಿಕೆ: ವೇಶ್ಯೆ; ಏಕಾದಶ: ಹನ್ನೊಂದು ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನೃಪ: ರಾಜ; ರಾಣಿ: ರಸೈ; ಪಟ್ಟಣ: ಊರು; ಜನ: ಮನುಷ್ಯರ ಗುಂಪು; ಪರಿಜನ: ಬಂಧುಜನ; ಬಹು: ಬಹಳ; ಕಾಂತಾ: ಹೆಣ್ಣು; ಕದಂಬ: ಗುಂಪು; ರಣ: ಯುದ್ಧ; ರಣಮಹೀ: ರಣಭೂಮಿ; ; ದರುಶನ: ನೋಟ; ಸಂದಣಿ: ಗುಂಪು; ಕಂಡು: ನೋಡು; ಸುತ: ಮಗ; ಉಣು: ಊಟಮಾಡು; ಧರಣಿ: ಭೂಮಿ; ಸುಯ್ದು: ನಿಟ್ಟುಸಿರು; ಬಯ್ದು: ಜರಿ, ಹಂಗಿಸು; ಕಮಲಜ: ಬ್ರಹ್ಮ ;

ಪದವಿಂಗಡಣೆ:
ಗಣಿಕೆಯರನ್+ಏಕಾದಶ+ಅಕ್ಷೊ
ಹಿಣಿಯ +ನೃಪ+ರಾಣಿಯರನ್ +ಆ+ ಪ
ಟ್ಟಣ +ಜನದ +ಪರಿಜನದ +ಬಹು+ಕಾಂತಾ +ಕದಂಬಕವ
ರಣಮಹೀ+ದರುಶನಕೆ +ಬಹು +ಸಂ
ದಣಿಯ+ ಕಂಡರು +ಧರ್ಮಸುತನಿನ್
ಉಣಲಿ +ಧರಣಿಯನೆಂದು +ಸುಯ್ದರು +ಬಯ್ದು +ಕಮಲಜನ

ಅಚ್ಚರಿ:
(೧) ಸುಯ್ದರು, ಬಯ್ದು – ಪದಗಳ ಬಳಕೆ
(೨) ಜನ, ಪರಿಜನ – ಜನ ಪದದ ಬಳಕೆ

ಪದ್ಯ ೯೩: ಅರ್ಜುನನು ಕೃಷ್ಣನಿಗೆ ಹೇಗೆ ಉತ್ತರಿಸಿದನು?

ನೆನೆದಡಜಕೋಟಿಗಳು ನಿಮ್ಮಯ
ಮನದೊಳಗೆ ಜನಿಸುವರುಪೇಕ್ಷೆಯೊ
ಳನಿತು ಕಮಲಜರಳಿವರೆಂದರೆ ನಿಮ್ಮ ಮಹಿಮೆಯನು
ನೆನೆಯಲಳವೇ ಜೀಯ ಸಾಕಿ
ನ್ನನುವರದೊಳೆನಗೇನ ಬೆಸಸಿದ
ರನಿತ ತಾ ಮುಖದಿರುಹಿದರೆ ಡಿಂಗರಿಗನಲ್ಲೆಂದ (ಭೀಷ್ಮ ಪರ್ವ, ೩ ಸಂಧಿ, ೯೩ ಪದ್ಯ)

ತಾತ್ಪರ್ಯ:
ನೀವು ನೆನೆಸಿದರೆ ಲೆಕ್ಕವಿಲ್ಲದಷ್ಟು ಬ್ರಹ್ಮರು ಹುಟ್ಟುತ್ತಾರೆ, ನೀವು ತಾತ್ಸಾರ ಮಾಡಿದರೆ ಅವರು ಅಳಿದು ಹೋಗುತ್ತಾರೆ, ಪ್ರಭು ನಿನ್ನ ಮಹಿಮೆ ಎಷ್ಟೆಂದು ಹೇಳಲು ಸಾಧ್ಯ! ಯುದ್ಧದಲ್ಲಿ ಹೇಳಿದಂತೆ ನಡೆಯದಿದ್ದರೆ ನಾನು ನಿನ್ನ ಸೇವಕನಲ್ಲ ಎಂದು ಹೇಳಿದನು.

ಅರ್ಥ:
ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಅಜ: ಬ್ರಹ್ಮ; ಕೋಟಿ: ಅಸಂಖ್ಯಾತ; ಮನ: ಮನಸ್ಸು; ಜನಿಸು: ಹುಟ್ಟು; ಉಪೇಕ್ಷೆ: ಅಲಕ್ಷ್ಯ; ಅನಿತು: ಅಷ್ಟು; ಕಮಲಜ: ಬ್ರಹ್ಮ; ಅಳಿ: ನಾಶ; ಮಹಿಮೆ: ಹಿರಿಮೆ, ಶ್ರೇಷ್ಠತೆ; ನೆನೆ: ಜ್ಞಾಪಿಸಿಕೋ; ಅಳವು: ಶಕ್ತಿ; ಜೀಯ: ಒಡೆಯ; ಸಾಕು: ನಿಲ್ಲಿಸು; ಅನುವರ: ಯುದ್ಧ; ಬೆಸಸು: ಹೇಳು; ಮುಖ: ಆನನ; ತಿರುಹು: ತಿರುಗಿಸು; ಡಿಂಗರಿಗ: ಭಕ್ತ;

ಪದವಿಂಗಡಣೆ:
ನೆನೆದಡ್+ಅಜ+ಕೋಟಿಗಳು+ ನಿಮ್ಮಯ
ಮನದೊಳಗೆ +ಜನಿಸುವರ್+ಉಪೇಕ್ಷೆಯೊಳ್
ಅನಿತು+ ಕಮಲಜರ್+ಅಳಿವರ್+ಎಂದರೆ +ನಿಮ್ಮ +ಮಹಿಮೆಯನು
ನೆನೆಯಲ್+ಅಳವೇ+ ಜೀಯ +ಸಾಕಿನ್
ಅನುವರದೊಳ್+ಎನಗೇನ+ ಬೆಸಸಿದರ್
ಅನಿತ+ ತಾ +ಮುಖದ್+ಇರುಹಿದರೆ +ಡಿಂಗರಿಗನ್+ಅಲ್ಲೆಂದ

ಅಚ್ಚರಿ:
(೧) ಅಜ, ಕಮಲಜ – ಬ್ರಹ್ಮನನ್ನು ಕರೆದ ಪರಿ

ಪದ್ಯ ೩೧: ನೀರು ಭೀಷ್ಮನ ತಲೆಯ ಮೇಲಿಂದ ಹೇಗೆ ಇಳಿಯಿತು?

ಕಮಲಜನ ಹೋಲುವೆಯ ಧಾರುಣಿ
ಯಮರಕರದಲಿ ನಿಗಮಪೂತೋ
ತ್ತಮ ಸುವಾರಿಗಳಿಳಿದವಜಸನ್ನಿಭನ ಮಸ್ತಕಕೆ
ಕಮಲಜನ ಕರದಿಂದ ಗಂಗಾ
ವಿಮಲನದಿಯಿಳಿತಂದು ಸಾರ್ದುದೊ
ಹಿಮಗಿರಿಯನೆಂಬಂತಿರಿಳಿದುದು ಪಟ್ಟದಭಿಷೇಕ (ಭೀಷ್ಮ ಪರ್ವ, ೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ಬ್ರಹ್ಮ ಸಮಾನರಾದ ಬ್ರಾಹ್ಮಣರ ಕೈಯಿಂದ ವೇದಮಂತ್ರಗಳಿಂದ ಪಾವನವಾದ ನೀರಿನ ಧಾರೆ, ಬ್ರಹ್ಮನಂತೆ ಉನ್ನತವಾದ ಭೀಷ್ಮನ ತಲೆಯ ಮೇಲಿಳಿಯಿತು. ಬ್ರಹ್ಮನ ಕೈಯಿಂದ ಗಂಗಾನದಿಯು ಇಳಿದು ಹಿಮಾಚಲದ ಮೇಲೆ ಬೀಳುತ್ತಿದೆಯೋ ಎಂಬಂತೆ ಭೀಷ್ಮನ ತಲೆಯ ಮೇಲೆ ಸೆನಾಧಿಪತ್ಯದ ಪಟ್ಟದ ನೀರು ಧಾರೆಯಾಗಿ ಇಳಿಯಿತು.

ಅರ್ಥ:
ಕಮಲಜ: ಬ್ರಹ್ಮ; ಹೋಲು: ಸದೃಶವಾಗು; ಧಾರುಣಿ: ಭೂಮಿ; ಅಮರ: ದೇವತೆ; ಕರ: ಹಸ್ತ; ನಿಗಮ: ವೇದ; ಪೂತ:ಪವಿತ್ರ; ಉತ್ತಮ: ಶ್ರೇಷ್ಠ; ಸುವಾರಿ: ಶುದ್ಧವಾದ ನೀರು; ಇಳಿ: ಕೆಳಗೆ ಬೀಳು; ಅಜ: ಹುಟ್ಟು ಇಲ್ಲದ, ಬ್ರಹ್ಮ; ಸನ್ನಿಭ: ಸದೃಶ; ಮಸ್ತಕ: ಶಿರ; ಕರ: ಕೈ, ಹಸ್ತ; ವಿಮಲ: ನಿರ್ಮಲ; ಸಾರ್ದು: ಹತ್ತಿರಕ್ಕೆ ಬಂದು; ಹಿಮಗಿರಿ: ಹಿಮಾಲಯ; ಪಟ್ಟ: ಸ್ಥಾನ; ಅಭಿಷೇಕ: ಮಂಗಳಸ್ನಾನ;

ಪದವಿಂಗಡಣೆ:
ಕಮಲಜನ +ಹೋಲುವೆಯ +ಧಾರುಣಿ
ಅಮರ+ಕರದಲಿ +ನಿಗಮ+ಪೂತ
ಉತ್ತಮ+ ಸುವಾರಿಗಳ್+ಇಳಿದವ್+ಅಜಸನ್ನಿಭನ +ಮಸ್ತಕಕೆ
ಕಮಲಜನ +ಕರದಿಂದ +ಗಂಗಾ
ವಿಮಲನದಿ+ಇಳಿ+ತಂದು +ಸಾರ್ದುದೊ
ಹಿಮಗಿರಿಯನೆಂಬಂತಿರ್+ಇಳಿದುದು +ಪಟ್ಟದಭಿಷೇಕ

ಅಚ್ಚರಿ:
(೧)ಕಮಲಜ, ಅಜ – ಸಮನಾರ್ಥಕ ಪದ
(೨) ಬ್ರಾಹ್ಮಣ ಎಂದು ಹೇಳಲು – ಧಾರುಣಿಯಮರ ಪದದ ಬಳಕೆ
(೩) ಉಪಮಾನದ ಪ್ರಯೋಗ – ಕಮಲಜನ ಕರದಿಂದ ಗಂಗಾವಿಮಲನದಿಯಿಳಿತಂದು ಸಾರ್ದುದೊ
ಹಿಮಗಿರಿಯನೆಂಬಂತಿರಿಳಿದುದು ಪಟ್ಟದಭಿಷೇಕ

ಪದ್ಯ ೫೩: ಕೀಚಕನು ಬ್ರಹ್ಮನನ್ನೇಕೆ ಬಯ್ದನು?

ಖಳನ ವಿರಹದ ತಾಪದುರಿ ವೆ
ಗ್ಗಳಿಸೆ ತನ್ನರಮನೆಗೆ ಬಂದನು
ಕಳವಳಿಗ ಹಾಯೆನುತ ಕೆಡೆದನು ತಳಿರ ಹಾಸಿನಲಿ
ನಳಿನ ವೈರಿಯ ಸುಳಿವು ತನ್ನಯ
ಕೊಲೆಗೆ ಬಂದುದು ಪಾಪಿ ಕಮಲಜ
ಚಲವಿಲೋಚನೆಗೇಕೆ ಮಾಡಿದನಿನಿತು ಚೆಲುವಿಕೆಯ (ವಿರಾಟ ಪರ್ವ, ೨ ಸಂಧಿ, ೫೩ ಪದ್ಯ)

ತಾತ್ಪರ್ಯ:
ಕೀಚಕನಿಗೆ ವಿರಹತಾಪವು ಹೆಚ್ಚಲು, ತನ್ನ ಅರಮನೆಗೆ ಬಂದು ತಣ್ಣನೆಯ ಹಾಸಿಗೆಯಲ್ಲಿ ಹಾ ಎಂದು ಕಳವಳಿಸುತ್ತಾ ಬಿದ್ದು ಬಿಟ್ಟನು. ತನ್ನನ್ನು ಕೊಲ್ಲಲೆಂದೇ ಚಂದ್ರೋದಯವಾಗಿದೆ. ಪಾಪಿಯಾದ ಆ ಬ್ರಹ್ಮನು ಚಂಚಲಾಕ್ಷಿಯಾದ ಸೈರಂಧ್ರಿಗೆ ಇಷ್ಟೊಂದು ಚೆಲುವಿಕೆಯನ್ನೇಕೆ ಕೊಟ್ಟಿರುವನೋ ಎಂದು ಚಿಂತಿಸಿದನು.

ಅರ್ಥ:
ಖಳ: ದುಷ್ಟ; ವಿರಹ: ಅಗಲಿಕೆ, ವಿಯೋಗ; ತಾಪ: ಬಿಸಿ, ಶಾಖ; ವೆಗ್ಗಳ: ಹಿರಿಮೆ; ಅರಮನೆ: ರಾಜರ ಆಲಯ; ಬಂದು: ಆಗಮ್ಸಿಉ; ಕಳವಳ: ಚಿಂತೆ; ಕೆಡೆ: ಮಲಗು; ತಳಿರ: ಚಿಗುರು, ತಂಪು; ಹಾಸು: ಹಾಸಿಗೆ; ನಳಿನ: ಕಮಲ; ವೈರಿ: ಶತ್ರು; ಸುಳಿವು: ಗುರುತು, ಕುರುಹು; ಕೊಲೆ: ಸಾವು; ಬಂದು: ಆಗಮಿಸು; ಪಾಪಿ: ದುಷ್ಟ; ಕಮಲಜ: ಬ್ರಹ್ಮ; ಚಲ: ಚಲಿಸುವ; ಲೋಚನ: ಕಣ್ಣು; ಇನಿತು: ಇಷ್ಟು; ಚೆಲುವಿಕೆ: ಅಂದ;

ಪದವಿಂಗಡಣೆ:
ಖಳನ +ವಿರಹದ +ತಾಪದುರಿ+ ವೆ
ಗ್ಗಳಿಸೆ +ತನ್ನರಮನೆಗೆ +ಬಂದನು
ಕಳವಳಿಗ +ಹಾಯೆನುತ+ ಕೆಡೆದನು +ತಳಿರ +ಹಾಸಿನಲಿ
ನಳಿನ +ವೈರಿಯ +ಸುಳಿವು +ತನ್ನಯ
ಕೊಲೆಗೆ+ ಬಂದುದು +ಪಾಪಿ +ಕಮಲಜ
ಚಲವಿಲೋಚನೆಗ್+ಏಕೆ +ಮಾಡಿದನ್+ಇನಿತು +ಚೆಲುವಿಕೆಯ

ಅಚ್ಚರಿ:
(೧) ಬ್ರಹ್ಮನನ್ನು ಬಯ್ಯುವ ಪರಿ – ಪಾಪಿ ಕಮಲಜಚಲವಿಲೋಚನೆಗೇಕೆ ಮಾಡಿದನಿನಿತು ಚೆಲುವಿಕೆಯ

ಪದ್ಯ ೨೮: ಬ್ರಹ್ಮನು ಯಾರ ಹೊಟ್ಟೆಯೊಳಗೆ ಇಳಿದನು?

ಆದುದೇ ನಿನ್ನುದರದಲಿ ಜಗ
ವಾದೊಡೀಕ್ಷಿಪೆನೆನುತಲೀ ಕಮ
ಲೋದರನು ಕಮಲಜನ ಜಠರವ ಹೊಕ್ಕು ಹೊರವಂಟು
ಭೇದಿಸಿದೆ ನಾನೆನ್ನ ಜಠರದೊ
ಳಾದ ಲೋಕವನೆಣಿಸಿ ಬಾಯೆನ
ಲಾ ದುರಾಗ್ರಹಿಯಿಳಿದನಸುರಾಂತಕನ ಜಠರದಲಿ (ಅರಣ್ಯ ಪರ್ವ, ೧೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ನಿನ್ನ ಹೊಟ್ಟೆಯಲ್ಲಿ ಜಗತ್ತು ಇರುವುದೇ? ಹಾಗಾದರೆ ಅದನ್ನು ನೋಡುತ್ತೇನೆ ಎಂದು ಶ್ರೀಹರಿಯು ಬ್ರಹ್ಮನ ಜಠರವನ್ನು ಹೊಕ್ಕು ಹೊರಬಂದು, ನಿನ್ನ ಜಠರದಲ್ಲಿರುವ ಲೋಕವನ್ನು ಪರೀಕ್ಷಿಸಿದೆ, ನನ್ನ ಜಠರದಲ್ಲಿ ಎಷ್ಟು ಲೋಕಗಳಿವೆಯೋ ಎಣಿಸಿಕೊಂಡು ಬಾ ಎಂದನು, ಆಗ ಬ್ರಹ್ಮನು ದುರಾಗ್ರಹದಿಂದ ವಿಷ್ಣುವಿನ ಹೊಟ್ಟೆಯೊಳಕ್ಕೆ ಇಳಿದನು.

ಅರ್ಥ:
ಉದರ: ಹೊಟ್ಟೆ; ಜಗ: ಜಗತ್ತು; ಈಕ್ಷಿಪೆ: ನೋಡುವೆ; ಕಮಲೋದರ: ವಿಷ್ಣು; ಕಮಲಜ: ಬ್ರಹ್ಮ; ಕಮಲ: ತಾವರೆ; ಉದರ: ಹೊಟ್ಟೆ; ಜಠರ: ಹೊಟ್ಟೆ; ಹೊಕ್ಕು: ಸೇರು; ಹೊರವಂಟು: ಹೊರಬಂದು; ಭೇದಿಸು: ಸೀಲು; ಲೋಕ: ಜಗತ್ತು; ಎಣಿಸು: ಲೆಕ್ಕ ಮಾಡು; ಬಾ: ಆಗಮಿಸು; ದುರಾಗ್ರಹ: ಮೊಂಡ; ಅಸುರಾಂತಕ: ಕೃಷ್ಣ;

ಪದವಿಂಗಡಣೆ:
ಆದುದೇ +ನಿನ್+ಉದರದಲಿ+ ಜಗವ್
ಆದೊಡ್+ಈಕ್ಷಿಪೆನ್+ಎನುತಲ್+ಈ+ ಕಮ
ಲೋದರನು +ಕಮಲಜನ +ಜಠರವ+ ಹೊಕ್ಕು +ಹೊರವಂಟು
ಭೇದಿಸಿದೆ +ನಾನ್+ಎನ್ನ +ಜಠರದೊ
ಳಾದ +ಲೋಕವನ್+ಎಣಿಸಿ+ ಬಾ+ಎನಲ್
ಆ+ ದುರಾಗ್ರಹಿ+ಇಳಿದನ್+ಅಸುರಾಂತಕನ+ ಜಠರದಲಿ

ಅಚ್ಚರಿ:
(೧) ಜಠರ, ಉದರ – ಸಮನಾರ್ಥಕ ಪದ
(೨) ಕಮಲೋದರ, ಕಮಲಜ – ಕಮಲ ಪದಗಳ ಬಳಕೆ
(೩) ಅಸುರಾಂತಕ, ಕಮಲೋದರ – ವಿಷ್ಣುವನ್ನು ಕರೆದ ಪರಿ

ಪದ್ಯ ೨೧: ಊರ್ವಶಿಯು ಬ್ರಹ್ಮನನ್ನು ಜರೆದುದೇಕೆ?

ಏಕೆ ನುಡಿದನೊ ಚಿತ್ರಸೇನನ
ದೇಕೆ ನಾ ಕೈಗೊಂಡೆನೆತ್ತಣ
ಕಾಕು ಮೂಳಗೆ ಕೋಳುವೋದೆನೊ ಕಾಮನೆಂಬುವಗೆ
ಲೋಕವರ್ತಕನಲ್ಲದಿವನನ
ದೇಕೆ ವಿಧಿ ನಿರ್ಮಿಸಿದನೋ ನಾ
ನೇಕೆ ನರನೇಕೆನುತ ಸುಯ್ದಳು ಬೈದು ಕಮಲಜನ (ಅರಣ್ಯ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಚಿತ್ರಸೇನನು ಏಕಾದರೂ ನನಗೆ ಈ ಕೆಲಸವನ್ನು ಹೇಳಿದನೋ, ನಾನೇಕೆ ಇದಕ್ಕೆ ಒಪ್ಪಿಕೊಂಡೆನೋ, ಅರಿವಿಲ್ಲದ ನೀಚನಾದ ಕಾಮನೆನ್ನುವವನಿಗೆ ನಾನೇಕೆ ವಶಳಾದೆನೋ, ಲೋಕದಲ್ಲಿ ಎಲ್ಲರಂತೆ ವರ್ತಿಸದಿರುವ ಇವನನ್ನು ಬ್ರಹ್ಮನು ಏಕೆ ಹುಟ್ಟಿಸಿದನೋ, ನಾನೇಕೆ ಅರ್ಜುನನೇಕೆ ಎಂದು ಊರ್ವಶಿಯು ವಿಧಿಯನ್ನು ಬೈದು ನಿಟ್ಟುಸಿರಿಟ್ಟಳು.

ಅರ್ಥ:
ನುಡಿ: ಮಾತು; ಕೈಗೊಳ್ಳು: ಸ್ವೀಕರಿಸು; ಕಾಕು: ವ್ಯಂಗ್ಯ; ಮೂಳ: ತಿಳಿಗೇಡಿ, ಮೂಢ; ಕೋಳು:ಹೊಡೆತ, ಕೈಸೆರೆ; ಕಾಮ: ಮನ್ಮಥ; ಲೋಕ: ಜಗತ್ತು; ವರ್ತಕ: ವ್ಯಾಪಾರಿ; ವಿಧಿ: ಆಜ್ಞೆ, ಆದೇಶ, ನಿಯಮ; ನಿರ್ಮಿಸು: ರಚಿಸು; ನರ: ಅರ್ಜುನ; ಸುಯ್ದು: ನಿಟ್ಟುಸಿರು; ಬೈದು: ಜರೆ; ಕಮಲಜ: ಬ್ರಹ್ಮ;

ಪದವಿಂಗಡಣೆ:
ಏಕೆ +ನುಡಿದನೊ +ಚಿತ್ರಸೇನನದ್
ಏಕೆ +ನಾ +ಕೈಗೊಂಡೆನ್+ಎತ್ತಣ
ಕಾಕು +ಮೂಳಗೆ +ಕೋಳುವೋದೆನೊ+ ಕಾಮನೆಂಬುವಗೆ
ಲೋಕ+ವರ್ತಕನಲ್ಲದ್+ಇವನನ್
ಅದೇಕೆ +ವಿಧಿ +ನಿರ್ಮಿಸಿದನೋ +ನಾ
ನೇಕೆ +ನರನೇಕ್+ಎನುತ +ಸುಯ್ದಳು +ಬೈದು +ಕಮಲಜನ

ಅಚ್ಚರಿ:
(೧) ಏಕೆ, ನಾನೇಕೆ, ಅದೇಕೆ – ಪ್ರಶ್ನೆಗಳನ್ನು ಸೂಚಿಸುವ ಪದಗಳ ಬಳಕೆ
(೨) ಅರ್ಜುನನನ್ನು ಜರೆಯುವ ಪರಿ – ಲೋಕವರ್ತಕನಲ್ಲದಿವನನದೇಕೆ ವಿಧಿ ನಿರ್ಮಿಸಿದನೋ

ಪದ್ಯ ೪೫: ವಾಮನಾವತಾರದಲ್ಲಿ ಶ್ರೀಕೃಷ್ಣನ ಮಹಿಮೆ ಎಂತಹುದು?

ತ್ರೇತೆಯಲಿ ಬಲಿರಾಜ್ಯ ಭುವನ
ಖ್ಯಾತವಾಯ್ತು ತದಶ್ವಮೇಧರೊ’
ಳೀತ ವಾಮನನಾಗಿ ಯಾಚಿಸಿದನು ಪದತ್ರಯವ
ಭೂತಳವನಲ್ಲಿಂದ ಬಳಿಕ
ಪ್ರೀತಿಯಲಿ ಕಮಲಜ ಕಟಾಹೋ
ದ್ಭೂತ ಚರಣದೊಳಳೆಯಲಾದುದು ಧರಣಿ ಪದಯುಗಕೆ (ಸಭಾ ಪರ್ವ, ೧೦ ಸಂಧಿ, ೪೫ ಪದ್ಯ)

ತಾತ್ಪರ್ಯ:
ತ್ರೇತಾಯುಗದಲ್ಲಿ ಪ್ರಹ್ಲಾದನ ಮೊಮ್ಮಗನಾದ ಬಲಿಯ ಸಾಮ್ರಾಜ್ಯವು ಲೋಕ ಪ್ರಸಿದ್ಧವಾಯಿತು. ಶ್ರೀಕೃಷ್ಣನೇ ವಾಮನನಾಗಿ ಹೋಗಿ ಬಲಿ ಚಕ್ರವರ್ತಿಯು ಮಾಡುತ್ತಿದ್ದ ಅಶ್ವಮೇಧಯಾಗದಲ್ಲಿ ಮೂರು ಹೆಜ್ಜೆ ಭೂಮಿಯನ್ನು ಬೇಡಿದನು. ಬಲಿ ಚಕ್ರವರ್ತಿಯು ಪ್ರೀತಿಯಿಂದ ದಾನವನ್ನು ಕೊಟ್ಟನು. ವಾಮನನು ತ್ರಿವಿಕ್ರಮನಾಗಿ ಒಂದು ಹೆಜ್ಜೆಯಿಂದ ಭೂಮಿಯನ್ನು ಇನ್ನೊಂದರಿಂಬ ಬ್ರಹ್ಮಾಂಡವನ್ನು ಅಳೆದನು.

ಅರ್ಥ:
ತ್ರೇತ: ಯುಗದ ಹೆಸರು; ರಾಜ್ಯ: ರಾಷ್ಟ್ರ; ಭುವನ: ಭೂಮಿ; ಖ್ಯಾತ: ಪ್ರಸಿದ್ಧ; ಅಶ್ವಮೇಧ: ಯಾಗದ ಹೆಸರು; ಅಶ್ವ: ಕುದುರೆ; ಯಾಚಿಸು: ಬೇಡು; ಪದ: ಪಾದ, ಚರಣ; ತ್ರಯ: ಮೂರು; ಭೂತಳ: ಭೂಮಿ; ಬಳಿಕ: ನಂತರ; ಪ್ರೀತಿ: ಒಲುಮೆ; ಕಮಲಜ: ಬ್ರಹ್ಮ; ಕಟಾಹ: ಆಕಾಶ; ಚರಣ: ಪಾದ; ಅಳೆ: ಅಳತೆ ಮಾಡು; ಧರಣಿ: ಭೂಮಿ; ಪದಯುಗ: ಎರಡು ಪಾದ;

ಪದವಿಂಗಡಣೆ:
ತ್ರೇತೆಯಲಿ+ ಬಲಿರಾಜ್ಯ +ಭುವನ
ಖ್ಯಾತವಾಯ್ತು +ತದ್+ಅಶ್ವಮೇಧರೊಳ್
ಈತ +ವಾಮನನಾಗಿ +ಯಾಚಿಸಿದನು +ಪದ+ತ್ರಯವ
ಭೂತಳವನ್+ಅಲ್ಲಿಂದ +ಬಳಿಕ
ಪ್ರೀತಿಯಲಿ +ಕಮಲಜ+ ಕಟಾಹೋ
ದ್ಭೂತ +ಚರಣದೊಳ್+ಅಳೆಯಲ್+ಆದುದು +ಧರಣಿ+ ಪದಯುಗಕೆ

ಅಚ್ಚರಿ:
(೧) ಭೂತಳ, ಧರಣಿ; ಚರಣ, ಪದ -ಸಮನಾರ್ಥಕ ಪದ

ಪದ್ಯ ೧೩: ದೇವತೆಗಳ ಅಳಲುವೇನು?

ತಾರಕನ ಮಕ್ಕಳುಗಳೇ ಹಿಂ
ದಾರ ಗೆಲಿದರು ತಪವ ಮಾದಿ ವಿ
ಕಾರಿಗಳು ಬ್ರಹಂಗೆ ಬಂದಿಯನಿಕ್ಕಿದರು ಬಳಿಕ
ವಾರಿಜೋದ್ಭವ ಮೇಲನರಿಯ ಕು
ಠಾರ ನಾಯ್ಗಳ ಹೆಚ್ಚಿಸಿದನಿದ
ನಾರಿಗರುಪುವೆವೆಂದು ಸುಯ್ದರು ಬಯ್ದು ಕಮಲಜನ (ಕರ್ಣ ಪರ್ವ, ೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ದೇವತೆಗಳೆಲ್ಲಾ ಸೇರಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾ, ಈ ಹಿಂದೆ ತಾರಕನ ಮಕ್ಕಳು ಯಾರೊಡನೆಯೂ ಹೋರಾಡಿ ಗೆದ್ದಿಲ್ಲ, ಈ ದುಷ್ಟರು ಬ್ರಹ್ಮನನ್ನು ಆರಾಧಿಸಿ ತಪವ ಮಾಡಿ ಅವನನ್ನು ಒಲಿಸಿ ಅವನ ಕೈ ಕಟ್ಟಿದರು. ಬ್ರಹ್ಮನಾದರೋ ಮುಂದೇನಾಗುವುದೆಂಬ ಆಲೋಚನೆಯಿಲ್ಲದೆ, ಲೋಕಕ್ಕೆ ಕೊಡಲಿಯಾಗಿರುವೆ ಈ ನಾಯಿಗಳನ್ನು ಹೆಚ್ಚಿಸಿಬಿಟ್ಟ. ಈಗ ನಾವು ಯಾರ ಬಳಿ ದೂರನ್ನು ಒಯ್ಯೋಣ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಅರ್ಥ:
ಮಕ್ಕಳು: ಸುತರು; ಹಿಂದೆ: ಪರೋಕ್ಷ; ಗೆಲಿದರು: ಗೆದ್ದರು; ತಪ: ತಪಸ್ಸು, ಧ್ಯಾನ; ವಿಕಾರಿ: ಕುರೂಪ, ದುಷ್ಟ; ಬ್ರಹ್ಮ: ಅಜ; ಬಂದಿ: ಬಂಧನ; ಬಳಿಕ: ನಂತರ; ವಾರಿಜೋದ್ಭವ: ಕಮಲದಲ್ಲಿ ಜನಿಸಿದ (ಬ್ರಹ್ಮ); ಮೇಲೆ: ಮುಂದಿನದು, ಮುಂದಕ್ಕೆ; ಅರಿ: ತಿಳಿ; ಕುಠಾರ: ಒರಟು ವ್ಯಕ್ತಿ, ಕ್ರೂರಿ; ನಾಯಿ: ಶ್ವಾನ; ಹೆಚ್ಚಿಸು: ಅಧಿಕಮಾಡು; ಅರುಪು: ತಿಳಿಸು; ಸುಯ್ದರು: ನಿಟ್ಟುಸಿರುಬಿಟ್ಟು; ಬಯ್ದು: ಜರಿದು; ಕಮಲಜ: ಬ್ರಹ್ಮ;

ಪದವಿಂಗಡಣೆ:
ತಾರಕನ +ಮಕ್ಕಳುಗಳೇ +ಹಿಂ
ದಾರ +ಗೆಲಿದರು +ತಪವ +ಮಾಡಿ+ ವಿ
ಕಾರಿಗಳು +ಬ್ರಹ್ಮಂಗೆ+ ಬಂದಿಯನಿಕ್ಕಿದರು +ಬಳಿಕ
ವಾರಿಜೋದ್ಭವ +ಮೇಲನ್+ಅರಿಯ +ಕು
ಠಾರ +ನಾಯ್ಗಳ +ಹೆಚ್ಚಿಸಿದನ್+ಇದನ್
ಆರಿಗ್+ಅರುಪುವೆವ್+ಎಂದು +ಸುಯ್ದರು +ಬಯ್ದು +ಕಮಲಜನ

ಅಚ್ಚರಿ:
(೧) ಬ್ರಹ್ಮ, ಕಮಲಜ, ವಾರಿಜೋದ್ಭವ – ಬ್ರಹ್ಮನನ್ನು ಕರೆದಿರುವ ರೀತಿ
(೨) ವಿಕಾರಿ, ಕುಠಾರ, ನಾಯಿ – ತಾಕರನ ಮಕ್ಕಳನ್ನು ಬಯ್ದಿರುವ ಬಗೆ

ಪದ್ಯ ೩: ತಾರಕಾಸುರನ ಮಕ್ಕಳ ತಪಸ್ಸಿಗೆ ಯಾರು ಮೆಚ್ಚಿದರು?

ಬಂದು ಕಮಲಜನಿವದಿರಿದಿರಲಿ
ನಿಂದನೆಲೆ ಋಷಿಗಳಿರ ಸಾಕಿ
ನ್ನೆಂದು ಪರಿಯಂತೀ ತಪೋನುಷ್ಠಾನದಾಯಾಸ
ನಿಂದು ಬೇಡುವುದೊಲಿದುದನು ನಾ
ವಿಂದು ಸಲಿಸುವೆವೆನಲು ನಿಮಿಷಕೆ
ಕಂದೆರೆದು ಕಮಳಾಸನಂಗೆರಗಿದರು ಭಕ್ತಿಯಲಿ (ಕರ್ಣ ಪರ್ವ, ೬ ಸಂಧಿ, ೩ ಪದ್ಯ)

ತಾತ್ಪರ್ಯ:
ತಾರಕಾಸುರನ ಮಕ್ಕಳ ಬಹುಯುಗದ ತಪಸ್ಸನ್ನು ಮೆಚ್ಚಿ ಬ್ರಹ್ಮನು ಅವರೆದುರಿಗೆ ಬಂದನು. ತಪಸ್ವಿಗಳೇ ನೀವು ಬಹಳ ಕಾಲದ ತಪೋನುಷ್ಠಾನದ ಆಯಾಸವನ್ನು ಅನುಭವಿಸಿದ್ದೀರಿ. ನಿಮಗೆ ಬೇಕಾದುದನ್ನು ನೀವು ಬೇಡಿರಿ ಅದನ್ನು ನಾನು ನೀಡುತ್ತೇನೆ ಎಂದು ಬ್ರಹ್ಮನು ಹೇಳಲು, ಆ ಮೂವರು ಕಣ್ಣನ್ನು ತೆರೆದು ಬ್ರಹ್ಮನನ್ನು ನೋಡಿ ಅವನ ಪಾದಗಳಿಗೆರಗಿದರು.

ಅರ್ಥ:
ಬಂದು: ಆಗಮಿಸು; ಕಮಲಜ: ಬ್ರಹ್ಮ; ಇದಿರು: ಎದುರು; ನಿಂದು: ನಿಲ್ಲು; ಋಷಿ: ತಪಸ್ವಿ; ಸಾಕು: ನಿಲ್ಲಿಸು; ಪರಿ: ರೀತಿ; ತಪಸ್ಸು: ಧ್ಯಾನ; ಅನುಷ್ಠಾನ: ಆಚರಣೆ; ಆಯಾಸ: ಬಳಲಿಕೆ, ಶ್ರಮ; ಬೇಡು: ಕೇಳು; ಒಲಿ: ಒಪ್ಪು, ಸಮ್ಮತಿಸು; ಸಲಿಸು: ಪೂರೈಸು; ನಿಮಿಷ: ಕ್ಷಣ; ಕಂದೆರೆ: ನೋಡು; ಕಮಳಾಸನ: ಬ್ರಹ್ಮ; ಎರಗು: ನಮಸ್ಕರಿಸು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ;

ಪದವಿಂಗಡಣೆ:
ಬಂದು +ಕಮಲಜನ್+ಇವದಿರ್+ಇದಿರಲಿ
ನಿಂದನ್+ಎಲೆ +ಋಷಿಗಳಿರ+ ಸಾಕಿನ್
ಎಂದು +ಪರಿಯಂತೀ +ತಪೋನುಷ್ಠಾನದ್+ಆಯಾಸ
ನಿಂದು +ಬೇಡುವುದ್+ಒಲಿದುದನು +ನಾವ್
ಇಂದು +ಸಲಿಸುವೆವ್+ಎನಲು +ನಿಮಿಷಕೆ
ಕಂದೆರೆದು +ಕಮಳಾಸನಂಗ್+ಎರಗಿದರು +ಭಕ್ತಿಯಲಿ

ಅಚ್ಚರಿ:
(೧) ಬಂದು, ಎಂದು, ನಿಂದು, ಇಂದು – ಪ್ರಾಸ ಪದಗಳು
(೨) ಕಮಲಜ, ಕಮಳಾಸನ – ಬ್ರಹ್ಮನನ್ನು ಕರೆದಿರುವ ಪರಿ

ಪದ್ಯ ೨೯: ಕೃಷ್ಣನು ದುರ್ಯೋಧನನಿಗೆ ಏನು ಸಲಹೆ ನೀಡಿದನು?

ನಾಡಿಗೋಸುಗ ಸೋದರರು ಹೊ
ಯ್ದಾಡಿ ಹರಿಹಂಚಾದರೆಂಬುದ
ನಾಡದಿಹುದೇ ಲೋಕ ಕಮಲಜನುಸಿರಿಹನ್ನೆ ಬರ
ಬೇಡಕಟ ನಿಮ್ಮೊಳಗೆ ನೀವ್ ಕೈ
ಗೂಡಿ ಬದುಕುವುದೊಳ್ಳಿತಾವ್ ನೆರೆ
ನೋಡಿ ಸಂತಸಬಡುವೆನೆಂದನು ದಾನವಧ್ವಂಸಿ (ಉದ್ಯೋಗ ಪರ್ವ, ೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ದುರ್ಯೋಧನನು ದಾಯಾದಿಗಳು ಭೂಮಿಗೋಸುಗ ಯುದ್ಧಕ್ಕೆ ಸಿದ್ಧರಾಗುವ ಸಾಧ್ಯತೆಗಳಿವೆ ಎಂದಾಗ, ಕೃಷ್ಣನು ಪಾಂಡವರು ಕೌರವರು ನಾಡಿಗಾಗಿ ಯುದ್ಧಮಾಡಿ ಛಿದ್ರವಾಗಿ ಹೋದರು ಎಂಬ ಮಾತು ಬ್ರಹ್ಮನಿರುವವರೆಗೂ ಉಳಿದು ಬಿಡುತ್ತದೆ. ಅಯ್ಯೋ ಈ ಯುದ್ಧ ಬೇಡ, ನೀವಿಬ್ಬರು ಕೈಗೂಡಿಸಿ ಬಾಳಿರಿ. ನಾವು ನೋಡಿ ಸಂತೋಷಪಡುತ್ತೇವೆ ಎಂದು ಶ್ರೀಕೃಷ್ಣನು ಹೇಳಿದನು.

ಅರ್ಥ:
ನಾಡು: ರಾಷ್ಟ್ರ; ಓಸುಗ: ಓಸ್ಕರ, ಕಾರಣ; ಸೋದರ: ಬಂಧುಗಳು, ಅಣ್ಣ ತಮ್ಮಂದಿರು; ಹೊಯ್ದಾಡು: ಕಾದಾಡು; ಹರಿಹಂಚು: ಬೇರೆಯಾಗು, ಛಿದ್ರವಾಗು; ಆಡು: ಮಾತಾಡು, ತೆಗಳು; ಲೋಕ: ಜಗತ್ತು; ಕಮಲಜ: ಬ್ರಹ್ಮ; ಉಸಿರು: ಪ್ರಾಣವಾಯು; ಬರ: ಅಭಾವ, ಅನುಗ್ರಹ; ಬೇಡ: ಸಲ್ಲದು; ಕೈಗೂಡಿ: ಜೊತೆಯಾಗಿ; ಒಳ್ಳಿತು: ಸರಿಯಾದುದು, ಕ್ಷೇಮ; ನೆರೆ: ಗುಂಪು; ನೋಡಿ: ವೀಕ್ಷಿಸಿ; ಸಂತಸ: ಸಂತೋಷ; ದಾನವ: ರಾಕ್ಷಸ; ಧ್ವಂಸಿ: ನಾಶಮಾಡಿದವ; ಅಕಟ: ಅಯ್ಯೋ;

ಪದವಿಂಗಡಣೆ:
ನಾಡಿಗ್+ಓಸುಗ +ಸೋದರರು +ಹೊ
ಯ್ದಾಡಿ +ಹರಿ+ಹಂಚಾದರ್+ಎಂಬುದನ್
ಆಡದಿಹುದೇ+ ಲೋಕ +ಕಮಲಜನ್+ಉಸಿರ್+ಇಹನ್ನೆ+ ಬರ
ಬೇಡ್+ಅಕಟ+ ನಿಮ್ಮೊಳಗೆ +ನೀವ್ +ಕೈ
ಗೂಡಿ +ಬದುಕುವುದ್+ಒಳ್ಳಿತಾವ್ +ನೆರೆ
ನೋಡಿ +ಸಂತಸಬಡುವೆ+ನೆಂದನು+ ದಾನವಧ್ವಂಸಿ

ಅಚ್ಚರಿ:
(೧) ನೋಡಿ, ಗೂಡಿ – ಪ್ರಾಸ ಪದ
(೨) ಬ್ರಹ್ಮನನ್ನು ಕಮಲಜ ಎಂದು ಕರೆದಿರುವುದು
(೩) ಕೃಷ್ಣನ ಕಾಳಜಿ – ಬೇಡ ಅಕಟ ನಿಮ್ಮೊಳಗೆ ನೀವ್ ಕೈಗೂಡಿ ಬದುಕುವುದೊಳ್ಳಿತು