ಪದ್ಯ ೫೦: ನಾರಾಯಣಾಸ್ತ್ರವು ಯಾರ ಪಾದವನ್ನು ಸೇರಿತು?

ಮುರಿಮುರಿದು ಕಬ್ಬೊಗೆಯ ಹೊದರಿನ
ಹೊರಳಿ ಹರೆದುದು ಸೂಸುಗಿಡಿಗಳ
ನೆರವಿ ನಸಿದುದು ನಿಮಿರ್ದ ಹೊಂಗರಿಯಂಬು ಹೊಳೆ ಹೊಳೆದು
ಮುರಹರನ ಪಾದಾರವಿಂದದ
ಹೊರೆಯೊಳಡಗಿತು ಹೋಯ್ತು ಭಯವು
ಬ್ಬರದೊಳಗೆ ಬೊಬ್ಬಿರಿದವುರು ನಿಸ್ಸಾಳಕೋಟಿಗಳು (ದ್ರೋಣ ಪರ್ವ, ೧೯ ಸಂಧಿ, ೫೦ ಪದ್ಯ)

ತಾತ್ಪರ್ಯ:
ಕರಿದಾದ ಹೊಗೆಯ ಹೊರಳಿಗಳು ಇಲ್ಲವಾದವು. ಸಿಡಿಯುವ ಕಿಡಿಗಳು ಕಾಣಲಿಲ್ಲ. ಬಂಗಾರದ ಗರಿಯ ನಾರಾಯಣಾಸ್ತ್ರವು ಹೊಳೆಯುತ್ತಾ ಬಂದು ಶ್ರೀಕೃಷ್ಣನ ಪಾದಾರವಿಂದಗಳಲ್ಲಡಗಿತು. ಭಯ ಹೋಗಿತು. ಪಾಂಡವ ಸೈನ್ಯದಲ್ಲಿ ಅಸಂಖ್ಯಾತ ನಿಸ್ಸಾಳಗಳು ಮೊರೆದವು.

ಅರ್ಥ:
ಮುರಿ: ಸೀಳು; ಕಬ್ಬೊಗೆ: ದಟ್ಟವಾದ ಹೊಗೆ; ಹೊದರು: ತೊಡಕು, ತೊಂದರೆ; ಹೊರಳು: ತಿರುವು, ಬಾಗು; ಹರೆ: ವ್ಯಾಪಿಸು; ಸೂಸು: ಎರಚು, ಚಲ್ಲು; ಕಿಡಿ: ಬೆಂಕಿ; ನೆರವಿ: ಗುಂಪು, ಸಮೂಹ; ನಸಿ: ಹಾಳಾಗು, ನಾಶವಾಗು; ಹೊಂಗರಿ: ಚಿನ್ನದ ಬಣ್ಣವನ್ನು ಹೋಲುವ ಬಾಣದ ಹಿಂಭಾಗ; ಹೊಳೆ: ಪ್ರಕಾಶ; ಮುರಹರ: ಕೃಷ್ಣ; ಪಾದಾರವಿಂದ: ಚರಣ ಕಮಲ; ಹೊರೆ: ರಕ್ಷಣೆ, ಆಶ್ರಯ; ಅಡಗು: ಅವಿತುಕೊಳ್ಳು; ಹೋಯ್ತು: ತೆರಳು; ಭಯ: ಅಂಜಿಕೆ; ಉಬ್ಬರ: ಅತಿಶಯ; ಬೊಬ್ಬಿರಿ: ಗರ್ಜಿಸು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ;

ಪದವಿಂಗಡಣೆ:
ಮುರಿಮುರಿದು+ ಕಬ್ಬೊಗೆಯ +ಹೊದರಿನ
ಹೊರಳಿ +ಹರೆದುದು+ ಸೂಸು+ಕಿಡಿಗಳ
ನೆರವಿ+ ನಸಿದುದು +ನಿಮಿರ್ದ +ಹೊಂಗರಿ+ಅಂಬು +ಹೊಳೆ +ಹೊಳೆದು
ಮುರಹರನ +ಪಾದಾರವಿಂದದ
ಹೊರೆಯೊಳ್+ಅಡಗಿತು+ ಹೋಯ್ತು +ಭಯವ್
ಉಬ್ಬರದೊಳಗೆ +ಬೊಬ್ಬಿರಿದವ್+ಉರು + ನಿಸ್ಸಾಳ+ಕೋಟಿಗಳು

ಅಚ್ಚರಿ:
(೧) ಮುರಿಮುರಿ, ಹೊಳೆ ಹೊಳೆ – ಜೋಡಿ ಪದಗಳು
(೨) ಹ ಕಾರದ ತ್ರಿವಳಿ ಪದ – ಹೊದರಿನ ಹೊರಳಿ ಹರೆದುದು; ಹೊಂಗರಿಯಂಬು ಹೊಳೆ ಹೊಳೆದು
(೩) ನ ಕಾರದ ತ್ರಿವಳಿ ಪದ – ನೆರವಿ ನಸಿದುದು ನಿಮಿರ್ದ

ಪದ್ಯ ೩೧: ಕೃಷ್ಣನು ಗಜಬಜವನ್ನು ಹೇಗೆ ನಿಲಿಸಿದನು?

ಬೇರೆ ತಮಗೊಂದಾಳುತನವುರಿ
ಸೂರೆಗೊಳುತಿದೆ ಜಗವನಿತ್ತಲು
ಕೌರಿಡುವ ಕಾಲಾಗ್ನಿಯಿದೆ ಕಬ್ಬೊಗೆಯ ಕವಚದಲಿ
ತೋರಲಾಪರೆ ಬಾಹು ಸತ್ವವ
ತೋರಿರೈ ದಿಟ ಪಂಥದೋಲೆಯ
ಕಾರರಹಿರೆನುತಸುರರಿಪು ಗಜಬಜವ ನಿಲಿಸಿದನು (ದ್ರೋಣ ಪರ್ವ, ೧೯ ಸಂಧಿ, ೩೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮಾತನಾಡುತ್ತಾ, ನಿಮ್ಮ ಪ್ರತಿಷ್ಠೆ ಈಗಲ್ಲ. ನಾರಾಯಣಾಸ್ತ್ರದ ಉರಿ ಜಗತ್ತನ್ನೂ ನಮ್ಮನ್ನೂ ಸುಟ್ಟು ಸೂರೆಗೊಳ್ಳಲು ಮುನ್ನುಗ್ಗುತ್ತಿದೆ. ಅದರ ಸುತ್ತಲೂ ಕರಿಹೊಗೆಯ ಕವಚವಿದೆ. ನಿಮ್ಮ ತೋಳ್ಬಲವನ್ನು ಅಸ್ತ್ರದೆದುರು ತೋರಿಸಿರಿ. ಪಂಥಕಟ್ಟುವ ಯೋಧರೇನೋ ನೀವು ನಿಜ ಆದರೆ ಅದನ್ನು ಅಸ್ತ್ರದೆದುರು ತೋರಿಸಿರಿ ಎಂದು ಗೊಂದಲವನ್ನು ನಿಲ್ಲಿಸಿದನು.

ಅರ್ಥ:
ಬೇರೆ: ಅನ್ಯ; ಆಳುತನ: ಪರಾಕ್ರಮ; ಉರಿ: ಬೆಂಕಿ; ಸೂರೆ: ಕೊಳ್ಳೆ; ಜಗ: ಪ್ರಪಂಚ; ಕೌರು: ಸುಟ್ಟವಾಸನೆ, ಕೆಟ್ಟ ನಾತ; ಕಾಲಾಗ್ನಿ:ಪ್ರಳಯಕಾಲದ ಬೆಂಕಿ; ಕಬ್ಬೊಗೆ: ದಟ್ಟವಾದ ಹೊಗೆ; ಕವಚ: ಹೊದಿಕೆ; ತೋರು: ಗೋಚರಿಸು; ಬಾಹು: ಭುಜ; ಸತ್ವ: ಶಕ್ತಿ, ಸಾರ; ದಿಟ: ಸತ್ಯ; ಪಂಥ: ಪ್ರತಿಜ್ಞೆ, ಶಪಥ; ಓಲೆಯಕಾರ: ಸೇವಕ; ಅಸುರರಿಪು: ಕೃಷ್ಣ; ಗಜಬಜ: ಗೊಂದಲ; ನಿಲಿಸು: ತಡೆ;

ಪದವಿಂಗಡಣೆ:
ಬೇರೆ +ತಮಗೊಂದ್+ ಆಳುತನವ್+ಉರಿ
ಸೂರೆಗೊಳುತಿದೆ+ ಜಗವನ್+ಇತ್ತಲು
ಕೌರಿಡುವ +ಕಾಲಾಗ್ನಿಯಿದೆ +ಕಬ್ಬೊಗೆಯ +ಕವಚದಲಿ
ತೋರಲಾಪರೆ +ಬಾಹು +ಸತ್ವವ
ತೋರಿರೈ +ದಿಟ +ಪಂಥದ್+ಓಲೆಯ
ಕಾರರಹಿರ್+ಎನುತ್+ಅಸುರರಿಪು +ಗಜಬಜವ +ನಿಲಿಸಿದನು

ಅಚ್ಚರಿ:
(೧) ಕ ಕಾರದ ಸಾಲು ಪದ – ಕೌರಿಡುವ ಕಾಲಾಗ್ನಿಯಿದೆ ಕಬ್ಬೊಗೆಯ ಕವಚದಲಿ

ಪದ್ಯ ೪೪: ನರಸಿಂಹನು ಹಿರಣ್ಯಕಶಿಪುವನ್ನು ಹೇಗೆ ಸಂಹರಿಸಿದನು?

ಉಗುರೊಳಸುರನ ಕರುಳ ದಂಡೆಯ
ನುಗಿದು ಕೊರಳಲಿ ಹಾಯ್ಕಿ ದೈತ್ಯನ
ಮಗನ ಪತಿಕರಿಸಿದನು ತತ್ರೋಧಾಗ್ನಿ ಪಲ್ಲವಿಸಿ
ಭುಗಿ ಭುಗಿಲ್ ಭುಗಿಲೆಂದು ಕಬ್ಬೊಗೆ
ನೆಗೆಯಲುರಿ ಹೊಡೆದಬುಜಜಾಂಡದ
ಬಗರಗೆಯ ಭೇದಿಸಿತು ಈತನ ಕೆಣಕಬೇಡೆಂದ (ಸಭಾ ಪರ್ವ, ೧೦ ಸಂಧಿ, ೪೪ ಪದ್ಯ)

ತಾತ್ಪರ್ಯ:
ನರಸಿಂಹನು ತನ್ನ ಉಗುರುಗಳಿಂದ ಹಿರಣ್ಯಕಶಿಪುವಿನ ಕರುಳ ದಂಡೆಯನ್ನು ಕಿತ್ತು ಕೊರಳಲ್ಲಿ ಹಾಕಿಕೊಂಡನು. ಅವನ ಮಗನಾದ ಪ್ರಹ್ಲಾದನನ್ನು ಕೃಪೆದೋರಿ ಸಲಹಿದನು. ಅವನ ಕೋಪಾಗ್ನಿಯು ಭುಗಿಲೆಂದು ಕಪ್ಪು ಹೊಗೆಯೂ ಉರಿಯೂ ಎದ್ದು ಬ್ರಹ್ಮಾಂಡವನ್ನೇ ಒಂದು ಕಿಕ್ಕಕುಳಿಯಾಗಿಸಿ ಭೇದಿಸಿತು, ಎಲೆ ಶಿಶುಪಾಲ ಶ್ರೀಕೃಷ್ಣನನ್ನು ಕೆಣಕಬೇಡ ಎಂದು ಭೀಷ್ಮರು ಹೇಳಿದರು.

ಅರ್ಥ:
ಉಗುರು: ನಖ; ಅಸುರ: ರಾಕ್ಷಸ; ಕರುಳು: ಪಚನಾಂಗ; ದಂಡೆ: ಹಾರ, ಸರ; ಉಗಿ: ಹೊರಹಾಕು; ಕೊರಳು: ಕುತ್ತಿಗೆ; ಹಾಯ್ಕಿ: ಹಾಕು, ತೊಡು; ದೈತ್ಯ: ರಾಕ್ಷಸ; ಮಗ: ಸುತ; ಪತಿಕರಿಸು: ದಯೆತೋರು, ಅನುಗ್ರಹಿಸು; ಅಗ್ನಿ: ಬೆಂಕಿ; ಪಲ್ಲವಿಸು: ವಿಕಸಿಸು; ಭುಗಿ: ಬೆಂಕಿಯು ಉರಿಯುವ ಬಗೆ; ಕಬ್ಬೊಗೆ: ಕರಿಯಾದ ಹೊಗೆ; ನೆಗೆ: ಚಿಮ್ಮು; ಉರಿ: ಬೆಂಕಿ; ಹೊಡೆ: ಏಟು, ಹೊಡೆತ; ಅಬುಜ: ಕಮಲ; ಅಬುಜಜಾಂಡ: ಬ್ರಹ್ಮಾಂಡ; ಬಗರು: ಕೆರೆ, ಗೆಬರು; ಭೇದಿಸು: ಸೀಳು; ಕೆಣಕು: ರೇಗಿಸು, ಪ್ರಚೋದಿಸು;

ಪದವಿಂಗಡಣೆ:
ಉಗುರೊಳ್+ಅಸುರನ +ಕರುಳ +ದಂಡೆಯನ್
ಉಗಿದು +ಕೊರಳಲಿ +ಹಾಯ್ಕಿ +ದೈತ್ಯನ
ಮಗನ+ ಪತಿಕರಿಸಿದನು+ ತತ್ರೋಧಾಗ್ನಿ+ ಪಲ್ಲವಿಸಿ
ಭುಗಿ +ಭುಗಿಲ್+ ಭುಗಿಲೆಂದು+ ಕಬ್ಬೊಗೆ
ನೆಗೆಯಲ್+ಉರಿ +ಹೊಡೆದ್+ಅಬುಜಜಾಂಡದ
ಬಗರಗೆಯ+ ಭೇದಿಸಿತು+ ಈತನ +ಕೆಣಕಬೇಡೆಂದ

ಅಚ್ಚರಿ:
(೧) ಬೆಂಕಿಯ ವರ್ಣನೆ – ಭುಗಿ ಭುಗಿಲ್ ಭುಗಿಲೆಂದು ಕಬ್ಬೊಗೆ ನೆಗೆಯಲುರಿಹೊ ಡೆದಬುಜಜಾಂಡದ ಬಗರಗೆಯ ಭೇದಿಸಿತು
(೨) ದೈತ್ಯ, ಅಸುರ – ಸಮನಾರ್ಥಕ ಪದ

ಪದ್ಯ ೧೮: ಸರ್ಪಾಸ್ತ್ರವು ಹೇಗೆ ಮುನ್ನುಗ್ಗಿತು?

ಏನಹೇಳುವೆ ಬಳಿಕ ಭುವನ
ಗ್ಲಾನಿಯನು ತೆಗೆದೊಡಿದರು ವೈ
ಮಾನಿಕರು ವೆಂಠಣಿಸಿತುರಿಯಪ್ಪಳಿಸಿತಂಬರವ
ಕಾನಿಡುವ ಕಬ್ಬೊಗೆಯ ಚೂರಿಸು
ವಾನನದ ಕಟವಾಯ ಲೋಳೆಯ
ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ (ಕರ್ಣ ಪರ್ವ, ೨೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕರ್ಣನು ಸರ್ಪಾಸ್ತ್ರವನ್ನು ಬಿಟ್ಟ ನಂತರ ಲೋಕದ ಕ್ಷೋಭೆಯನ್ನು ಏನೆಂದು ಹೇಳಲಿ? ದೇವತೆಗಳು ಆಕಾಶದಲ್ಲಿ ದೂರಕ್ಕೋಡಿದರು, ಅಸ್ತ್ರಾ ಉರಿಯು ಎಲ್ಲಾ ದಿಕ್ಕುಗಳನ್ನ್ನು ಆವರಿಸಿತು, ಹೇಡೆಯನ್ನು ಚಾಚಿ ಜೇನಿನ ಗೂಡಿನಿಂದ ಜಿನುಗುವ ಜೇನುತುಪ್ಪದಂತೆ ಸರ್ಪಾಸ್ತ್ರವು ವಿಷವನ್ನು ಸುರಿಸುತ್ತಾ ಮುನ್ನುಗ್ಗಿತು.

ಅರ್ಥ:
ಬಳಿಕ: ನಂತರ; ಭುವನ: ಜಗತ್ತು; ಗ್ಲಾನಿ: ಅವನತಿ, ನಾಶ; ಓಡು: ಪಲಾಯನ; ವೈಮಾನಿಕ: ದೇವತೆ; ವಂಠಣ: ಮುತ್ತಿಗೆಹಾಕು, ಸುತ್ತುವರಿ; ಉರಿ: ಬೆಂಕಿಯ ಕಿಡಿ; ಅಪ್ಪಳಿಸು: ತಟ್ಟು, ತಾಗು; ಅಂಬರ: ಆಗಸ; ಕಾನಿಡು: ದಟ್ಟವಾಗು, ಸಾಂದ್ರವಾಗು; ಕಬ್ಬೊಗೆ: ಕರಿಯಾದ ಹೊಗೆ; ಚೂರಿಸು: ಕತ್ತರಿಸು; ಆನನ: ಮುಖ; ಕಟವಾಯಿ: ಬಾಯಿ ಕೊನೆ; ಲೋಳೆ: ಅ೦ಟುಅ೦ಟಾಗಿರುವ ದ್ರವ್ಯ; ಜೇನು: ದುಂಬಿ; ಹುಟ್ಟಿ: ಜೇನಿನ ಗೂಡು; ಬಸಿ:ಜಿನುಗು ; ವಿಷ: ನಂಜು; ಉರಗಾಸ್ತ್ರ: ಸರ್ಪಾಸ್ತ್ರ;

ಪದವಿಂಗಡಣೆ:
ಏನಹೇಳುವೆ+ ಬಳಿಕ+ ಭುವನ
ಗ್ಲಾನಿಯನು +ತೆಗೆದ್+ಓಡಿದರು +ವೈ
ಮಾನಿಕರು+ ವೆಂಠಣಿಸಿತ್+ಉರಿ +ಅಪ್ಪಳಿಸಿತ್+ಅಂಬರವ
ಕಾನಿಡುವ +ಕಬ್ಬೊಗೆಯ +ಚೂರಿಸುವ್
ಆನನದ +ಕಟವಾಯ +ಲೋಳೆಯ
ಜೇನಹುಟ್ಟಿಯ +ಬಸಿವ+ ವಿಷದಲಿ+ ಬಂದುದ್+ಉರಗಾಸ್ತ್ರ

ಅಚ್ಚರಿ:
(೧) ವಿಷವು ಹೊರಹೊಮ್ಮುತ್ತಿತ್ತು ಎಂದು ಹೇಳಲು ಜೇನಿನ ಉಪಮಾನವನ್ನು ಬಳಸಿದ ಪರಿ
(೨) ಉಪಮಾನದ ಪ್ರಯೋಗ – ಕಾನಿಡುವ ಕಬ್ಬೊಗೆಯ ಚೂರಿಸುವಾನನದ ಕಟವಾಯ ಲೋಳೆಯ ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ
(೩) ದೇವತೆಗಳನ್ನು ವೈಮಾನಿಕರು ಎಂದು ಕರೆದಿರುವುದು