ಪದ್ಯ ೭೬: ಶಿವನ ದರುಶನವನ್ನು ಯಾರು ಪಡೆದರು?

ಸನಕ ನಾರದ ಭೃಗು ಪರಾಶರ
ತನುಜ ಭಾರದ್ವಾಜ ಗೌತಮ
ಮುನಿ ವಸಿಷ್ಠ ಸನತ್ಕುಮಾರನು ಕಣ್ವನುಪಮನ್ಯು
ವನಕೆ ಬಂದರು ಪಾರ್ಥ ಕೇಳಿದು
ನಿನಗೆ ಸಿದ್ಧಿಗಡೆಮಗೆ ಲೇಸಾ
ಯ್ತೆನುತ ಮೈಯಿಕ್ಕಿದುದು ಹರನಂಘ್ರಿಯಲಿ ಮುನಿನಿಕರ (ಅರಣ್ಯ ಪರ್ವ, ೭ ಸಂಧಿ, ೭೬ ಪದ್ಯ)

ತಾತ್ಪರ್ಯ:
ಸನಕ, ನಾರದ, ಭೃಗು, ವೇದವ್ಯಾಸ, ಭಾರದ್ವಾಜ, ಗೌತಮ, ವಸಿಷ್ಠ, ಸನತ್ಕುಮಾರ, ಕಣ್ವ, ಉಪಮನ್ಯು ಮೊದಲಾದ ಋಷಿಗಳು ಇಂದ್ರಕೀಲ ವನಕ್ಕೆ ಬಂದು ಅರ್ಜುನನ ತಪಸ್ಸಿಗೆ ಮೆಚ್ಚಿ, ನಿನ್ನ ತಪಸ್ಸಿನ ಸಿದ್ಧಿಯಿಂದ ನಮಗೆಲ್ಲರಿಗೂ ಶಿವನ ದರುಶನವಾಗಿದೆ ಎಂದು ಹೇಳಿ, ಶಿವನ ಪಾದಗಳಿಗೆ ನಮಸ್ಕರಿಸಿದರು.

ಅರ್ಥ:
ತನುಜ: ಮಗ; ಮುನಿ: ಋಷಿ; ವನ: ಕಾಡು; ಬಂದು: ಆಗಮಿಸು; ಲೇಸು: ಒಳಿತು; ಮೈಯಿಕ್ಕು: ನಮಸ್ಕರಿಸು; ಹರ: ಶಿವ; ಅಂಘ್ರಿ: ಪಾದ; ನಿಕರ: ಗುಂಪು;

ಪದವಿಂಗಡಣೆ:
ಸನಕ +ನಾರದ +ಭೃಗು +ಪರಾಶರ
ತನುಜ +ಭಾರದ್ವಾಜ +ಗೌತಮ
ಮುನಿ +ವಸಿಷ್ಠ +ಸನತ್ಕುಮಾರನು +ಕಣ್ವನ್+ಉಪಮನ್ಯು
ವನಕೆ+ ಬಂದರು +ಪಾರ್ಥ +ಕೇಳ್+ಇದು
ನಿನಗೆ +ಸಿದ್ಧಿಗಡ್+ಎಮಗೆ +ಲೇಸಾ
ಯ್ತೆನುತ +ಮೈಯಿಕ್ಕಿದುದು +ಹರನ್+ಅಂಘ್ರಿಯಲಿ +ಮುನಿನಿಕರ

ಅಚ್ಚರಿ:
(೧) ಋಷಿಮುನಿಗಳ ಪರಿಚಯ – ಸನಕ, ನಾರದ, ಭೃಗು, ವೇದವ್ಯಾಸ, ಭಾರದ್ವಾಜ, ಗೌತಮ,
ವಸಿಷ್ಠ, ಸನತ್ಕುಮಾರ, ಕಣ್ವ, ಉಪಮನ್ಯು
(೨) ವೇದವ್ಯಾಸರನ್ನು ಪರಾಶರ ತನುಜ ಎಂದು ಕರೆದಿರುವುದು

ಪದ್ಯ ೧೭: ಸಹದೇವನು ಜಂಬೂಫಲದ ಬಗ್ಗೆ ಏನು ಹೇಳಿದನು?

ಎನಲು ಸಹದೇವನ ಯುಧಿಷ್ಠಿರ
ಜನಪ ಬೆಸಗೊಳುತಿರಲು ಬಿನ್ನಹ
ದನುಜರಿಪು ಹರ ಕಮಲಭವರಿಗೆ ಕೊಡುವ ಶಾಪವನು
ಅನುವ ಕಾಣೆನು ಕಣ್ವಮುನಿ ತಾ
ಮುನಿದನಾದರೆ ಶಪಿಸುವನು ಯೆಂ
ದನು ತ್ರಿಕಾಲ ಜ್ಞಾನಿ ಮಾದ್ರೀಸುತನು ಭೂಪತಿಗೆ (ಅರಣ್ಯ ಪರ್ವ, ೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ಧರ್ಮಜನು ಆ ಹಣ್ಣಿನ ಬಗ್ಗೆ ತ್ರಿಕಾಲ ಜ್ಞಾನಿಯಾದ ಸಹದೇವನನ್ನು ಕೇಳಿದನು. ಸಹದೇವನು, ಈ ಹಣ್ಣು ಕಣ್ವ ಮುನಿಗಳ ಆಶ್ರಮದ್ದು, ಇದನ್ನು ತರುವಂತದಲ್ಲ, ಈ ಹಣ್ಣ ಕಣ್ವ ಮುನಿಗಳಿಗೆ ಕಾಣದಿದ್ದರೆ ಅವರು ತ್ರಿಮೂರ್ತಿಗಳಿಗೂ ಶಾಪವನ್ನು ಕೊಡಬಲ್ಲ ಸಮರ್ಥರು, ಈ ಹಣ್ಣನ್ನು ನಾವಿಲ್ಲಿ ತಂದಿದ್ದರಿಂದ ನಮಗೆ ಅಪಾಯ ತಪ್ಪಿದ್ದಲ್ಲ ಎಂದನು.

ಅರ್ಥ:
ಜನಪ: ರಾಜ; ಬೆಸ: ವಿಚಾರಿಸುವುದು, ಪ್ರಶ್ನಿಸುವುದು; ಬಿನ್ನಹ: ಕೇಳು; ದನುಜರಿಪು: ರಾಕ್ಷಸರ ವೈರಿ (ವಿಷ್ಣು); ಹರ: ಶಿವ; ಕಮಲಭವ: ಕಮಲದಿಂದ ಹುಟ್ಟಿದವ (ಬ್ರಹ್ಮ); ಶಾಪ: ನಿಷ್ಠುರದ ನುಡಿ; ಕೊಡು: ನೀಡು; ಅನುವ: ಆಸ್ಪದ, ಅನುಕೂಲ; ಕಾಣೆ: ತೋರು; ಮುನಿ: ಋಷಿ; ಮುನಿ: ಕೋಪ; ತ್ರಿಕಾಲ: ಮೂರ ಕಾಲ; ಜ್ಞಾನಿ: ತಿಳಿದವ; ಸುತ: ಮಗ; ಭೂಪತಿ: ರಾಜ;

ಪದವಿಂಗಡಣೆ:
ಎನಲು +ಸಹದೇವನ+ ಯುಧಿಷ್ಠಿರ
ಜನಪ +ಬೆಸಗೊಳುತಿರಲು+ ಬಿನ್ನಹ
ದನುಜರಿಪು +ಹರ +ಕಮಲಭವರಿಗೆ +ಕೊಡುವ +ಶಾಪವನು
ಅನುವ +ಕಾಣೆನು +ಕಣ್ವಮುನಿ+ ತಾ
ಮುನಿದನಾದರೆ +ಶಪಿಸುವನು +ಯೆಂ
ದನು +ತ್ರಿಕಾಲ +ಜ್ಞಾನಿ +ಮಾದ್ರೀಸುತನು +ಭೂಪತಿಗೆ

ಅಚ್ಚರಿ:
(೧) ೧, ೬ ಸಾಲಿನ ಕೊನೆ ಪದ ಯುಧಿಷ್ಠಿರನನ್ನು ಕುರಿತಾಗಿರುವುದು
(೨) ಸಹದೇವನ ಗುಣವಾಚಕ ತ್ರಿಕಾಲ ಜ್ಞಾನಿ ಎಂದು ಬಳಸಿರುವುದು
(೩) ತ್ರಿಮೂರ್ತಿಗಳನ್ನು – ದನುಜರಿಪು ಹರ ಕಮಲಭವ ಎಂಬ ಪದ ಪ್ರಯೋಗ

ಪದ್ಯ ೪೩: ಯಾರನ್ನು ಹೊಗಳಲು ಶಿಶುಪಾಲನು ಭೀಷ್ಮರಿಗೆ ಹೇಳಿದನು?

ಪರಗುಣ ಸ್ತುತಿ ನಿಂದೆಗಳು ಹಿರಿ
ಯರಿಗೆ ಸಾಮ್ಯವೆ ನಿನ್ನ ಜಿಹ್ವೆಗೆ
ವರಗುಣಸ್ತವದಿಂದ ಮೇಲ್ಕಂಡೂತಿ ಹರವಹರೆ
ಹಿರಿಯರಿದೆಲಾ ಕಣ್ವ ಪೌಲಾಂ
ಗಿರಸ ಜೈಮಿನಿ ಯಾಜ್ಞವಲ್ಕ್ಯರು
ವರಸುಪೈಕದೊಳಧಿಕರಿದೆಲಾ ಭೀಷ್ಮ ಕೇಳೆಂದ (ಸಭಾ ಪರ್ವ, ೧೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಪರರಗುಣಗಳನ್ನು ಹೊಗಳುವುದೂ ನಿಂದಿಸುವುದೂ ಹಿರಿಯರಿಗೆ ಒಂದೇ ಆದೀತೇ? ಇನ್ನೊಬ್ಬರನ್ನು ಹೊಗಳುವುದರಿಂದ ನಿನ್ನ ನಾಲಿಗೆಯ ತೀಟೆ ತೀರುವ ಹಾಗಿದ್ದರೆ, ಕಣ್ವ, ಪುಲಸ್ತ್ಯ, ಅಂಗೀರಸ, ಜೈಮಿನಿ, ಯಾಜ್ಞವಲ್ಕ್ಯ ಮೊದಲಾದ ಹಿರಿಯ ಋಷಿ ಸಮೂಹದಲ್ಲಿ ಹೆಚ್ಚಿನವರಿರಲಿಲ್ಲವೇ ಎಂದು ಶಿಶುಪಾಲನು ಭೀಷ್ಮರನ್ನು ಕೇಳಿದನು.

ಅರ್ಥ:
ಪರ: ಬೇರೆ; ಗುಣ: ನಡತೆ, ಸ್ವಭಾವ; ಸ್ತುತಿ: ಹೊಗಳಿಕೆ; ನಿಂದೆ: ಬಯ್ಗುಳಗಳು; ಹಿರಿ: ದೊಡ್ಡವ; ಸಾಮ್ಯ: ಸಮಾನ, ಸರಿಸಮ; ಜಿಹ್ವೆ: ನಾಲಗೆ; ವರ: ಶ್ರೇಷ್ಠ; ಸ್ತವ: ಸ್ತುತಿಸುವುದು, ಕೊಂಡಾಡುವುದು; ಹರವಸ: ಪರವಶ; ಅಧಿಕ: ಹೆಚ್ಚು; ಪೈಕ: ಗುಂಪು; ಕೇಳು: ಆಲಿಸು;

ಪದವಿಂಗಡಣೆ:
ಪರಗುಣ +ಸ್ತುತಿ +ನಿಂದೆಗಳು +ಹಿರಿ
ಯರಿಗೆ +ಸಾಮ್ಯವೆ +ನಿನ್ನ +ಜಿಹ್ವೆಗೆ
ವರಗುಣಸ್ತವದಿಂದ+ ಮೇಲ್ಕಂಡೂತಿ +ಹರವಹರೆ
ಹಿರಿಯರಿದೆಲಾ +ಕಣ್ವ+ ಪೌಲ
ಅಂಗಿರಸ+ ಜೈಮಿನಿ +ಯಾಜ್ಞವಲ್ಕ್ಯರು
ವರ+ಸುಪೈಕದೊಳ್+ಅಧಿಕರಿದೆಲಾ +ಭೀಷ್ಮ +ಕೇಳೆಂದ

ಅಚ್ಚರಿ:
(೧) ಋಷಿಗಳನ್ನು ಹೆಸರಿಸಿರುವ ಪದ್ಯ – ಕಣ್ವ, ಪುಲಸ್ತ್ಯ, ಅಂಗೀರಸ, ಜೈಮಿನಿ, ಯಾಜ್ಞವಲ್ಕ್ಯ

ಪದ್ಯ ೧೧: ವಿಶ್ವಾಮಿತ್ರರ ಯಾರ ಬಳಿ ಯಾವ ರೀತಿ ಗುರುದಕ್ಷಿಣೆ ಕೇಳಿದರು?

ಅಹುದು ಕಣ್ವನ ಮಾತು ಕೃಷ್ಣನ
ಮಹಿಮೆ ಘನವಿದನರಿದುಗರ್ವ
ಗ್ರಹವಿಡಿದು ಮರುಳಾಗದಿರು ಮುನ್ನೋರ್ವಗಾಲವನು
ಬಹಳ ಗುರುದಕ್ಷಿಣೆಗೆ ತೊಳಲಿದು
ಮಹಿಯೊಳೆಲ್ಲಿಯು ಘಟಿಸದಿರಲವ
ನಹವ ಮುರಿದನು ಬಳಿಕ ವಿಶ್ವಾಮಿತ್ರ ಮುನಿಯಂದು (ಉದ್ಯೋಗ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕಣ್ವ ಮುನಿಗಳ ಮಾತು ನಿಜ. ಕೃಷ್ಣನ ಮಹಿಮೆ ಬಹಳ ಘನವಾದದ್ದು. ಹೆಚ್ಚಿನ ಗರ್ವವೆಂಬ ಗ್ರಹ ಹಿಡಿದು ಹುಚ್ಚಾಗಬೇಡ. ಹಿಂದೆ ಗಾಲವನು ವಿಶ್ವಾಮಿತ್ರರಲ್ಲಿ ವಿದ್ಯಾಭ್ಯಾಸ ಮಾಡಿ, ಗುರುವು ಬೇಡವೆಂದರೂ ಬಹಳವಾಗಿ ಪೀಡಿಸಿದನು. ಅವನ ಗರ್ವವನ್ನು ಮುರಿಯಲು ವಿಶ್ವಾಮಿತ್ರನು ಮೈಯಲ್ಲ ಬೆಳ್ಳಗೆ ಆದರೆ ಒಂದು ಕಿವಿ ಕಪ್ಪಗೆ ಇರುವ ಎಂಟುನೂರು ಕುದುರೆಗಳನ್ನು ತಂದುಕೊಡು ಎಂದನು. ಅಂತಹ ಕುದುರೆಗಳಿಗೆ ಗಾಲವನು ಪಟ್ಟ ಬವಣೆ ಯಾರಿಗೂ ಬೇಡ. ಹೀಗೆ ವಿಶ್ವಾಮಿತ್ರನು ಅಂದು ಗಾಲವನ ಗರ್ವವನು ಮುರಿದನು ಎಂದು ನಾರದರು ಹೇಳಿದರು.

ಅರ್ಥ:
ಅಹುದು: ಹೌದು; ಮಾತು: ನುಡಿ; ಮಹಿಮೆ: ಶ್ರೇಷ್ಠತೆ, ಔನ್ನತ್ಯ; ಘನ: ಶ್ರೇಷ್ಠ; ಅರಿ: ತಿಳಿ; ಗರ್ವ: ಅಹಂಕಾರ; ಮರುಳು:ಬುದ್ಧಿಭ್ರಮೆ, ಹುಚ್ಚು; ಮುನ್ನ: ಹಿಂದೆ; ಬಹಳ: ತುಂಬ; ಗುರು: ಆಚಾರ್ಯ; ದಕ್ಷಿಣೆ: ಕಾಣಿಕೆ, ಸಂಭಾವನೆ; ತೊಳಲು:ಬವಣೆ, ಸಂಕಟ; ಮಹಿ: ಭೂಮಿ; ಘಟಿಸು: ಸಂಭವಿಸು, ಉಂಟಾಗು; ಅಹ: ಅಹಂಕಾರ; ಮುರಿ: ಸೀಳು; ಬಳಿಕ: ನಂತರ;

ಪದವಿಂಗಡಣೆ:
ಅಹುದು+ ಕಣ್ವನ +ಮಾತು +ಕೃಷ್ಣನ
ಮಹಿಮೆ +ಘನ+ವಿದನ್+ಅರಿದು+ಗರ್ವ
ಗ್ರಹವಿಡಿದು +ಮರುಳಾಗದಿರು +ಮುನ್+ಓರ್ವ+ಗಾಲವನು
ಬಹಳ+ ಗುರುದಕ್ಷಿಣೆಗೆ+ ತೊಳಲಿದು
ಮಹಿಯೊಳ್+ಎಲ್ಲಿಯು +ಘಟಿಸದಿರಲ್+ಅವನ್
ಅಹವ +ಮುರಿದನು +ಬಳಿಕ +ವಿಶ್ವಾಮಿತ್ರ +ಮುನಿಯಂದು

ಅಚ್ಚರಿ:
(೧) ಮಹಿಮೆ, ಮಹಿ – ಮಹಿ ಪದದ ಬಳಕೆ
(೨) ಗಾಲ ಮತ್ತು ವಿಶ್ವಾಮಿತ್ರರ ಕಥೆಯನ್ನು ಸಂಕ್ಷಿಪ್ತದಲ್ಲಿ ಹೇಳುವ ಪದ್ಯ

ಪದ್ಯ ೧೦: ಕಣ್ವ ಮಹರ್ಷಿಗಳು ಏನೆಂದು ಉಪದೇಶಿಸಿದರು?

ತಪ್ಪಿನುಡಿಯನು ಪರಶುರಾಮನು
ದಪ್ಪವಿದು ಲೇಸಲ್ಲ ನೀ
ನೊಪ್ಪಿಸುವುದರ್ಧಾವನೀತಳವನು ಸರಾಗದೊಳು
ತಪ್ಪಿನುಡಿದೊಡೆ ಗರುಡದೇವನ
ದಪ್ಪವನು ಹರಿ ಸೆಳೆದು ಬಿಸುಡನೆ
ಒಪ್ಪಿ ತಾಗದಿರೆಂದು ನುಡಿದನು ಕಣ್ವನರಸಂಗೆ (ಉದ್ಯೋಗ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕಣ್ವ ಮಹರ್ಷಿಗಳು ದುರ್ಯೋಧನನನ್ನುದ್ದೇಶಿಸಿ, ಎಲೈ ದುರ್ಯೋಧನ ಪರಶುರಾಮರ ನುಡಿ ತಪ್ಪಾಗಲಾರದು. ಅಹಂಕಾರ, ದರ್ಪವು ಒಳಿತಲ್ಲ. ನೀನು ಪ್ರೀತಿಯಿಂದ ಅರ್ಧ ರಾಜ್ಯವನ್ನು ಪಾಂಡವರಿಗೆ ನೀಡುವುದು ಒಳಿತು. ಗರ್ವತೋರಿದ ಗರುಡನನ್ನು ವಿಷ್ಣುವು ಅವನ ದರ್ಪವನ್ನು ಅಡಗಿಸಲಿಲ್ಲವೇ? ಸಂಧಾನಕ್ಕೆ ಒಪ್ಪು ಯುದ್ಧ ಮಾಡಬೇಡ ಎಂದು ಹಿತವಚನ ನುಡಿದರು.

ಅರ್ಥ:
ತಪ್ಪು: ಸರಿಯಲ್ಲದ; ನುಡಿ: ಮಾತು; ದಪ್ಪ: ದರ್ಪ, ಗರ್ವ; ಲೇಸು: ಒಳಿತಲ್ಲ; ಒಪ್ಪು: ಸಮ್ಮತಿ; ಅವನೀತಳ: ಭೂಮಿ; ಸರಾಗ: ಪ್ರೀತಿ; ಹರಿ: ವಿಷ್ಣು; ಸೆಳೆ: ಜಗ್ಗು, ಎಳೆ; ಬಿಸುಡು: ಹೊರಹಾಕು, ಬಿಸಾಕು; ತಾಗು: ಹೊಡೆತ, ಪೆಟ್ಟು; ಅರಸ: ರಾಜ;

ಪದವಿಂಗಡಣೆ:
ತಪ್ಪಿನುಡಿಯನು +ಪರಶುರಾಮನು
ದಪ್ಪವಿದು +ಲೇಸಲ್ಲ +ನೀನ್
ಒಪ್ಪಿಸುವುದ್+ಅರ್ಧ+ಅವನೀತಳವನು+ ಸರಾಗದೊಳು
ತಪ್ಪಿನುಡಿದೊಡೆ +ಗರುಡದೇವನ
ದಪ್ಪವನು +ಹರಿ +ಸೆಳೆದು +ಬಿಸುಡನೆ
ಒಪ್ಪಿ +ತಾಗದಿರೆಂದು+ ನುಡಿದನು +ಕಣ್ವನ್+ಅರಸಂಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಪ್ಪಿನುಡಿದೊಡೆ ಗರುಡದೇವನ ದಪ್ಪವನು ಹರಿ ಸೆಳೆದು ಬಿಸುಡನೆ
(೨) ದಪ್ಪ – ೨, ೫; ಒಪ್ಪಿ – ೩, ೬; ತಪ್ಪಿ- ೧, ೪ ಸಾಲಿನ ಮೊದಲ ಪದ

ಪದ್ಯ ೧೪: ಕೃಷ್ಣನು ಯಾವ ಮುನಿಗಳನ್ನು ಕಂಡನು?

ಮರಳಿದಳು ತರಳಾಕ್ಷಿ ಮುರರಿಪು
ಬರುತಲಾ ಬಟ್ಟೆಯಲಿ ಕಂಡನು
ವರ ಭರದ್ವಾಜಾಖ್ಯ ಗೌತಮ ಕಣ್ವಮುನಿವರರ
ಉರಗಮಾಲಿ ಮತಂಗ ಗಾರ್ಗ್ಯಾಂ
ಗಿರಸ ನಾರದ ಶುಕ ಪರಾಶರ
ಪರಶುರಾಮ ಶ್ವೇತಕೇತು ಪ್ರಮುಖ ಮುನಿವರರ (ಉದ್ಯೋಗ ಪರ್ವ, ೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಚಂಚಲಕಣ್ಣುಳ್ಳವಳಾದ ದ್ರೌಪದಿಯು ಕೃಷ್ಣನ ಅಭಯವನ್ನು ಪಡೆದು ಮರಳಿದಳು. ಕೃಷ್ಣನು ತನ್ನ ಮಾರ್ಗದಲ್ಲಿ ಬರುತ್ತಾ ಶ್ರೇಷ್ಠರಾದ ಭರದ್ವಾಜ, ಗೌತಮ, ಕಣ್ವ, ಉರಗಮಾಲಿ, ಮತಂಗ, ಗಾರ್ಗ್ಯ, ಅಂಗಿರಸ, ನಾರದ, ಶುಕ, ಪರಾಶರ, ಪರಶುರಾಮ, ಶ್ವೇತಕೇತು ಮುನಿಗಳನ್ನು ಕಂಡನು.

ಅರ್ಥ:
ಮರಳು: ಹಿಂದಿರುಗು; ತರಳ:ಚಂಚಲವಾದ; ಅಕ್ಷಿ: ಕಣ್ಣು; ರಿಪು: ವೈರಿ; ಬಟ್ಟೆ: ಹಾದಿ, ಮಾರ್ಗ; ಬರುತ: ಆಗಮಿಸು; ಕಂಡನು: ನೋಡಿದನು; ಪ್ರಮುಖ: ಮುಖ್ಯ; ಮುನಿ: ಋಷಿ; ವರ: ಶ್ರೇಷ್ಠ; ಆಖ್ಯ: ಹೆಸರು

ಪದವಿಂಗಡಣೆ:
ಮರಳಿದಳು +ತರಳಾಕ್ಷಿ +ಮುರರಿಪು
ಬರುತಲಾ +ಬಟ್ಟೆಯಲಿ+ ಕಂಡನು
ವರ +ಭರದ್ವಾಜ+ಆಖ್ಯ+ ಗೌತಮ+ ಕಣ್ವಮುನಿವರರ
ಉರಗಮಾಲಿ +ಮತಂಗ +ಗಾರ್ಗ್ಯ+ಅಂ
ಗಿರಸ+ ನಾರದ +ಶುಕ +ಪರಾಶರ
ಪರಶುರಾಮ +ಶ್ವೇತಕೇತು+ ಪ್ರಮುಖ +ಮುನಿವರರ

ಅಚ್ಚರಿ:
(೧) ಮುನಿಗಳ ಹೆಸರುಳ್ಳ ಪದ್ಯ: ಭರದ್ವಾಜ, ಗೌತಮ, ಕಣ್ವ, ಉರಗಮಾಲಿ, ಮತಂಗ, ಗಾರ್ಗ್ಯ, ಅಂಗಿರಸ, ನಾರದ, ಶುಕ, ಪರಾಶರ, ಪರಶುರಾಮ, ಶ್ವೇತಕೇತು
(೨) ದ್ರೌಪದಿಯನ್ನು ತರಳಾಕ್ಷಿ ಎಂದು ಕರೆದಿರುವುದು

ಪದ್ಯ ೮: ಯಾವ ಮುನಿಗಳು ಯಾಗಕ್ಕೆ ಆಗಮಿಸಿದರು?

ಜನಪ ಕೇಳೀಚೆಯಲಿ ಬಂದುದು
ಮುನಿಗಳಾಂಗಿರ ಕಣ್ವ ಭೃಗು ಜೈ
ಮಿನಿ ಸುಮಂತ ವಸಿಷ್ಠ ಶೌನಕ ಗಾರ್ಗ್ಯ ಬೃಹದಶ್ವ
ಸನಕ ಶುಕ ಜಾಬಾಲಿ ತಿತ್ತಿರಿ
ವಿನುತ ಮಾರ್ಕಂಡೇಯ ಮುದ್ಗಲ
ತನಯ ರೋಮಶರೈಭ್ಯವತ್ಸನು ಶೈಬ್ಯ ನಾರದರು (ಸಭಾ ಪರ್ವ, ೮ ಸಂಧಿ, ೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ರಾಜಸೂಯ ಯಾಗಕ್ಕೆ ರಾಜರಲ್ಲದೆ ಶ್ರೇಷ್ಠ ಮುನಿವರ್ಗವು ಆಗಮಿಸಿದರು. ಅಂಗಿರಸ, ಕಣ್ವ, ಭೃಗು, ಜೈಮಿನಿ, ಸುಮಂತ, ವಸಿಷ್ಠ, ಶೌನಕ, ಗಾರ್ಗ್ಯ, ಬೃಹದಶ್ವ, ಸನಕ, ಶುಕ, ಜಾಬಾಲಿ, ತಿತ್ತಿರಿ, ಮಾರ್ಕಂಡೇಯ, ಮೌದ್ಗಲ್ಯ, ರೋಮಶ, ರೈಭ್ಯ, ಶ್ರೀವತ್ಸ, ಶೈಬ್ಯ, ನಾರದರೇ ಮೊದಲಾದ ಋಷಿಗ್ತಳು ಆಗಮಿಸಿದರು.

ಅರ್ಥ:
ಜನಪ: ರಾಜ (ಇಲ್ಲಿ ಜನಮೇಜಯ); ಕೇಳು: ಆಲಿಸು; ಈಚೆಯಲಿ: ಇತ್ತಕಡೆ; ಬಂದುದು: ಆಗಮಿಸಿದರು; ಮುನಿ: ಋಷಿ; ತನಯ: ಮಗ;

ಪದವಿಂಗಡಣೆ:
ಜನಪ +ಕೇಳ್+ಈಚೆಯಲಿ +ಬಂದುದು
ಮುನಿಗಳ್+ಆಂಗಿರ+ ಕಣ್ವ+ ಭೃಗು +ಜೈ
ಮಿನಿ +ಸುಮಂತ +ವಸಿಷ್ಠ +ಶೌನಕ+ ಗಾರ್ಗ್ಯ +ಬೃಹದಶ್ವ
ಸನಕ+ ಶುಕ +ಜಾಬಾಲಿ +ತಿತ್ತಿರಿ
ವಿನುತ +ಮಾರ್ಕಂಡೇಯ +ಮುದ್ಗಲ
ತನಯ +ರೋಮಶ+ರೈಭ್ಯ+ವತ್ಸನು+ ಶೈಬ್ಯ+ ನಾರದರು

ಅಚ್ಚರಿ:
(೧) ೨೦ ಋಷಿಗಳ ಹೆಸರನ್ನು ಹೊಂದಿರುವ ಪದ್ಯ