ಪದ್ಯ ೧೯: ದ್ರೋಣನು ಸೈನ್ಯವನ್ನು ಹೇಗೆ ಕಡಿದು ಹಾಕಿದನು?

ನುಡಿಗೆ ಮುಂಚುವ ಬಾಣ ಮಾರುತ
ನಡಸಿ ಬೀಸುವ ಲಾಗು ತಲೆಗಳ
ತೊಡಬೆಗಳಚುವ ಬೇಗವನು ಬಣ್ಣಿಸುವರೆನ್ನಳವೆ
ಕಡಲ ಕಡಹದಲುರಿವ ಗರಳವ
ನುಡುಗಿದವರಿವರೋ ಶಿವಾಯೆಂ
ದೊಡನೊಡನೆ ಪಡೆ ನಡುಗಲೊರಸಿದನಾ ಮಹಾರಥರ (ದ್ರೋಣ ಪರ್ವ, ೧೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಾತಿಗಿಂತ ಮೊದಲೇ ಹೋಗುವ ಬಾಣಗಳು, ಅವುಗಳಿಂದ ಬೀಸುವ ಗಾಳಿ, ತಲೆಗಳ ತೊಡಕನ್ನು ಕತ್ತರಿಸುವ ವೇಗಗಳನ್ನು ಹೇಳಲು ಅಸಾಧ್ಯ. ಸಮುದ್ರ ಮಥನದಲ್ಲಿ ಉದಿಸಿದ ವಿಷವನ್ನು ಕುಡಿದವನು ಇವನೋ ಶಿವನೋ ಎನ್ನುವಂತೆ ಮೇಲಿಂದ ಮೇಲೆ ಆ ಸೈನ್ಯವನ್ನು ಕಡಿದು ಹಾಕಿದನು.

ಅರ್ಥ:
ನುಡಿ: ಮಾತು; ಮುಂಚು: ಮುಂದೆ; ಬಾಣ: ಅಂಬು; ಮಾರುತ: ಗಾಳಿ; ಅಡಸು: ಬಿಗಿಯಾಗಿ ಒತ್ತು; ಬೀಸು: ತೂರು, ತೂಗಾದು; ಲಾಗು: ನೆಗೆಯುವಿಕೆ; ತಲೆ: ಶಿರ; ತೊಡಬೆಳಗಚು: ಆಯುಧಗಳ ಸಮೂಹವನ್ನು ಕಳಚು; ಬೇಗ: ಶೀಘ್ರ; ಬಣ್ಣಿಸು: ವಿವರಿಸು; ಅಳವು: ಶಕ್ತಿ; ಕಡಲು: ಸಾಗರ; ಕಡಹು:ಅಲ್ಲಾಡಿಸು; ಉರಿ: ಜ್ವಾಲೆ, ಸಂಕಟ; ಗರಳ: ವಿಷ; ಉಡುಗು: ಒಳಹೋಗು; ಶಿವ: ಶಂಕರ; ಪಡೆ: ಸೈನ್ಯ; ನಡುಗು: ಹೆದರು; ಒರಸು: ನಾಶ; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ನುಡಿಗೆ +ಮುಂಚುವ +ಬಾಣ +ಮಾರುತನ್
ಅಡಸಿ +ಬೀಸುವ +ಲಾಗು +ತಲೆಗಳ
ತೊಡಬೆಗಳಚುವ +ಬೇಗವನು +ಬಣ್ಣಿಸುವರೆನ್ನ್+ಅಳವೆ
ಕಡಲ +ಕಡಹದಲ್+ಉರಿವ +ಗರಳವನ್
ಉಡುಗಿದವರ್+ಇವರೋ +ಶಿವಾ+ಯೆಂ
ದೊಡನೊಡನೆ+ ಪಡೆ +ನಡುಗಲ್+ಒರಸಿದನಾ +ಮಹಾರಥರ

ಅಚ್ಚರಿ:
(೧) ರೂಪಕದ ಪ್ರಯೋಗ – ಕಡಲ ಕಡಹದಲುರಿವ ಗರಳವನುಡುಗಿದವರಿವರೋ ಶಿವಾ

ಪದ್ಯ ೪೭: ಕರ್ಣನೇಕೆ ದುಃಖಿಸಿದನು?

ಕಡಲ ಮೊರಹಿನ ಲಹರಿ ಲಘುವೀ
ಪಡೆಯನೊಡೆಯಲು ಯುಗಸಹಸ್ರದೊ
ಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ
ಒಡೆದು ಹೋಯಿತ್ತೊಡ್ಡು ಸೈಂಧವ
ನೊಡಲು ನೀಗಿತು ತಲೆಯನಕಟಾ
ತೆಡಗಿದೆವು ದೈವದಲಿ ಕಲಹವನೆಂದನಾ ಕರ್ಣ (ದ್ರೋಣ ಪರ್ವ, ೧೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಆರ್ಭಟಿಸುವ ಸಮುದ್ರದ ಬೆಟ್ಟದಮ್ತಹ ಅಲೆಗಳೂ, ದ್ರೋಣನು ರಚಿಸಿದ್ದ ವ್ಯೂಹ ಪರ್ವತದ ಮುಮ್ದೆ ಅಲ್ಲ, ದ್ರೋಣನು ರಚಿಸಿದ್ದ ವ್ಯೂಹ ಪರ್ವತವನ್ನು ಸಹಸ್ರಯುಗಗಳಾದರೂ ಒಡೆಯಲಾಗುತ್ತಿತ್ತೇ? ಕಟ್ಟೆ ಒಡೆದು ಹೋಯಿತು, ಸೈಂಧವನ ತಲೆ ದೇಹವನ್ನು ಬಿಟ್ಟು ಹೋಯಿತು ಅಯ್ಯೋ ನಾವು ದೈವದೊಡನೆ ಕಲಹಕ್ಕಿಳಿದೆವು ಎಂದು ಕರ್ಣನು ದುಃಖಿಸಿದನು.

ಅರ್ಥ:
ಕಡಲು: ಸಾಗರ; ಮೊರಹು: ಬಾಗು, ಕೋಪ; ಲಹರಿ: ಅಲೆ; ಲಘು: ಕ್ಷುಲ್ಲಕವಾದುದು; ಪಡೆ: ಸೈನ್ಯ; ಒಡೆ: ಚೂರಾಗು; ಯುಗ: ಕಾಲದ ಪ್ರಮಾಣ; ಸಹಸ್ರ: ಸಾವಿರ; ವ್ಯೂಹ: ಗುಂಪು, ಸೈನ್ಯ; ಪರ್ವತ: ಬೆಟ್ಟ; ಒಡ್ಡು: ಅಡ್ಡ ಗಟ್ಟೆ; ಒಡಲು: ದೇಹ; ನೀಗು: ನಿವಾರಿಸಿಕೊಳ್ಳು; ತಲೆ: ಶಿರ; ಅಕಟ: ಅಯ್ಯೋ; ದೈವ: ಭಗವಂತ; ಕಲಹ: ಯುದ್ಧ;

ಪದವಿಂಗಡಣೆ:
ಕಡಲ +ಮೊರಹಿನ +ಲಹರಿ +ಲಘುವೀ
ಪಡೆಯನ್+ಒಡೆಯಲು +ಯುಗ+ಸಹಸ್ರದೊಳ್
ಒಡೆಯಬಹುದೇ +ದ್ರೋಣ +ರಚಿಸಿದ +ವ್ಯೂಹ +ಪರ್ವತವ
ಒಡೆದು +ಹೋಯಿತ್+ಒಡ್ಡು +ಸೈಂಧವನ್
ಒಡಲು +ನೀಗಿತು +ತಲೆಯನ್+ಅಕಟಾ
ತೆಡಗಿದೆವು +ದೈವದಲಿ +ಕಲಹವನೆಂದನಾ +ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಲ ಮೊರಹಿನ ಲಹರಿ ಲಘುವೀಪಡೆಯನೊಡೆಯಲು
(೨) ದ್ರೋಣನ ವ್ಯೂಹದ ಶಕ್ತಿ – ಯುಗಸಹಸ್ರದೊಳೊಡೆಯಬಹುದೇ ದ್ರೋಣ ರಚಿಸಿದ ವ್ಯೂಹ ಪರ್ವತವ

ಪದ್ಯ ೩೧: ಕೌರವರು ಅರ್ಜುನನನ್ನು ಹೇಗೆ ಹಂಗಿಸಿದರು?

ಫಡಫಡರ್ಜುನ ಹೋಗು ಹೋಗಳ
ವಡದು ಸೈಂಧವನಳಿವು ಭಾಷೆಯ
ನಡಸಬಲ್ಲರೆ ಬೇಗ ಬೆಳಗಿಸು ಹವ್ಯವಾಹನನ
ಕಡಲ ಮಧ್ಯದ ಗಿರಿಗೆ ಸುರಪತಿ
ಕದುಗಿ ಮಾಡುವುದೇನೆನುತ ಕೈ
ಗಡಿಯ ಬಿಲ್ಲಾಳುಗಳು ಬಿಗಿದರು ಸರಳಲಂಬರವ (ದ್ರೋಣ ಪರ್ವ, ೧೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕೌರವ ವೀರರು, ಅರ್ಜುನ, ಸೈಂಧವನನ್ನು ಕೊಲ್ಲಲಾಗುವುದಿಲ್ಲ. ಪ್ರತಿಜ್ಞೆಯನ್ನು ಪೂರೈಸಬೇಕೆಂದಿದ್ದರೆ, ಬೇಗ ಬೆಂಕಿಯನ್ನು ಹೊತ್ತಿಸು, ಸಮುದ್ರದಲ್ಲಿ ಮುಳುಗಿರುವ ಪರ್ವತದ ಮೇಲೆ ಇಮ್ದ್ರನು ಸಿಟ್ಟಾಗಿ ಏನು ಮಾಡಬಲ್ಲ? ಎಂದು ಹಂಗಿಸುತ್ತಾ ಆಕಾಶವನ್ನು ಬಾಣಗಳಿಂದ ತುಂಬಿದರು.

ಅರ್ಥ:
ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಅಳವಡಿಸು: ಸರಿಮಾಡು; ಅಳಿವು: ನಾಶ; ಭಾಷೆ: ನುಡಿ; ಅಡಸು: ಆಕ್ರಮಿಸು, ಮುತ್ತು; ಬೇಗ: ತ್ವರಿತ; ಬೆಳಗು: ಹೊಳೆ; ಹವ್ಯವಾಹನ: ಅಗ್ನಿ; ಕಡಲು: ಸಾಗರ; ಮಧ್ಯ: ನಡುವೆ; ಗಿರಿ: ಬೆಟ್ಟ; ಸುರಪತಿ: ಇಂದ್ರ; ಕಡುಗು: ಶಕ್ತಿಗುಂದು; ಕೈಗಡಿಯ: ಶೂರ, ಪರಾಕ್ರಮ; ಬಿಲ್ಲಾಳು: ಬಿಲ್ಲುಗಾರ; ಬಿಗಿ: ಭದ್ರವಾಗಿರುವುದು; ಸರಳು: ಬಾಣ; ಅಂಬರ: ಆಗಸ;

ಪದವಿಂಗಡಣೆ:
ಫಡಫಡ್+ಅರ್ಜುನ +ಹೋಗು +ಹೋಗ್
ಅಳವಡದು +ಸೈಂಧವನ್+ಅಳಿವು +ಭಾಷೆಯನ್
ಅಡಸಬಲ್ಲರೆ+ ಬೇಗ +ಬೆಳಗಿಸು +ಹವ್ಯವಾಹನನ
ಕಡಲ +ಮಧ್ಯದ +ಗಿರಿಗೆ +ಸುರಪತಿ
ಕದುಗಿ +ಮಾಡುವುದೇನ್+ಎನುತ +ಕೈ
ಗಡಿಯ +ಬಿಲ್ಲಾಳುಗಳು +ಬಿಗಿದರು+ ಸರಳಲ್+ಅಂಬರವ

ಅಚ್ಚರಿ:
(೧) ರೂಪಕದ ಪ್ರಯೋಗ – ಕಡಲ ಮಧ್ಯದ ಗಿರಿಗೆ ಸುರಪತಿ ಕದುಗಿ ಮಾಡುವುದೇನ್

ಪದ್ಯ ೪೫: ದುರ್ಯೋಧನನ ಜೊತೆ ಯಾರು ಹೊರಟರು?

ಒಡನೊಡನೆ ಕರಿತುರಗವೇರಿದ
ರೊಡನೆ ಹುಟ್ಟಿದ ಶತಕುಮಾರರು
ಗಡಣದಾಪ್ತರು ಕರ್ಣ ಶಕುನಿ ಜಯದ್ರಥಾದಿಗಳು
ಅಡಸಿದವು ಸೀಗುರಿಗಳಭ್ರವ
ತುಡುಕಿದವು ಝಲ್ಲರಿಗಳಂತ್ಯದ
ಕಡಲವೊಲು ಪಡೆ ನಡೆಯೆ ಹಸ್ತಿನಪುರವ ಹೊರವಂಟ (ಭೀಷ್ಮ ಪರ್ವ, ೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಅವನೊಡನೆ ಧೃತರಾಷ್ಟ್ರನ ನೂರು ಮಕ್ಕಳು, ಕರ್ಣ, ಶಕುನಿ, ಜಯದ್ರಥ ಅವನ ಆಪ್ತರೂ ಆನೆ, ಕುದುರೆ ರಥಗಳನ್ನೇರಿ ಹೊರಟರು. ಛತ್ರ ಚಾಮರ ಧ್ವಜ ಝಲ್ಲರಿಗಳು ಮೇಲಕ್ಕೆತ್ತಿದವು. ಪ್ರಳಯಕಾಲದ ಸಮುದ್ರದಂತೆ ಅವನ ಸೈನ್ಯವು ಮುನ್ನಡೆಯಲು ದುರ್ಯೋಧನನು ಹಸ್ತಿನಪುರದಿಂದ ಹೊರಹೊಂಟನು.

ಅರ್ಥ:
ಒಡನೊಡನೆ: ಕೂಡಲೆ; ಕರಿ: ಆನೆ; ತುರಗ: ಅಶ್ವ; ಒಡನೆ: ಕೂಡಲೆ; ಹುಟ್ಟು: ಉದಯ; ಶತ: ನೂರು; ಕುಮಾರ: ಪುತ್ರ; ಗಡಣ: ಸಮೂಹ; ಆಪ್ತ: ಹತ್ತಿರದ; ಆದಿ: ಮುಂತಾದ; ಅಡಸು: ಮೇಲೆಬೀಳು; ಸೀಗುರಿ: ಚಾಮರ; ಅಭ್ರ: ಆಕಾಶ; ತುಡುಕು: ಹೋರಾಡು, ಸೆಣಸು; ಝಲ್ಲರಿ: ಕುಚ್ಚು; ಅಂತ್ಯ: ಕೊನೆ; ಕಡಲ: ಸಾಗರ; ಪಡೆ: ಸೈನ್ಯ; ನಡೆ: ಚಲಿಸು; ಹೊರವಂಟ: ತೆರಳು;

ಪದವಿಂಗಡಣೆ:
ಒಡನೊಡನೆ +ಕರಿ+ತುರಗವ್+ಏರಿದರ್
ಒಡನೆ +ಹುಟ್ಟಿದ +ಶತ+ಕುಮಾರರು
ಗಡಣದ್+ಆಪ್ತರು +ಕರ್ಣ +ಶಕುನಿ +ಜಯದ್ರಥಾದಿಗಳು
ಅಡಸಿದವು +ಸೀಗುರಿಗಳ್+ಅಭ್ರವ
ತುಡುಕಿದವು +ಝಲ್ಲರಿಗಳ್+ಅಂತ್ಯದ
ಕಡಲವೊಲು +ಪಡೆ +ನಡೆಯೆ +ಹಸ್ತಿನಪುರವ +ಹೊರವಂಟ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಡಸಿದವು ಸೀಗುರಿಗಳಭ್ರವ ತುಡುಕಿದವು ಝಲ್ಲರಿಗಳಂತ್ಯದ
ಕಡಲವೊಲು ಪಡೆ ನಡೆಯೆ ಹಸ್ತಿನಪುರವ ಹೊರವಂಟ

ಪದ್ಯ ೪೦: ಸೈನ್ಯದ ಆಗಮನವನ್ನು ಹೇಗೆ ಹೋಲಿಸಲಾಗಿದೆ?

ಪ್ರಳಯಜಲನಿಧಿಯಂತೆ ದಳ ಬರ
ಲಿಳೆ ಕುಸಿಯೆ ಕಮಠಗೆ ಮೇಲುಸು
ರುಲಿಯೆ ದಿಗುದಂತಿಗಳು ಮೊಣಕಾಲೂರಿ ಮನಗುಂದೆ
ಬಲಮಹಾಂಬುಧಿ ಬಲುಗಡಲ ಮು
ಕ್ಕುಳಿಸಿ ನಡೆದುದು ಕಡುಭರದ ಕಾ
ಲ್ದುಳಿಯ ಕದನಾಳಾಪಕರ ಕಾಹುರತೆ ಹೊಸತಾಯ್ತು (ಉದ್ಯೋಗ ಪರ್ವ, ೧೨ ಸಂದಿ, ೪೦ ಪದ್ಯ)

ತಾತ್ಪರ್ಯ:
ಆ ಸೈನ್ಯವು ಪ್ರಳಯಕಾಲದ ಸಮುದ್ರದಂತೆ ಬರಲು ಭೂಮಿ ಕುಸಿಯಿತು, ಕೂರ್ಮನಿಗೆ ಮೇಲುಸಿರು ಬಂದಿತು, ದಿಗ್ಗಜಗಳು ಮೊಳಕಾಲನ್ನೂರಿ ಖಿನ್ನಮನಸ್ಕವಾದವು. ಸೈನ್ಯವು ಸಮುದ್ರವನ್ನು ಮುಕ್ಕುಳಿಸುತ್ತಾ ನಡೆಯಿತು. ಯುದ್ದಕ್ಕೆ ಕಲುಕೆದರುತ್ತಾ ಹೋಗುವ ಆ ದಳದ ಕೋಪವು ಹೊಸದಾಗಿ ಕಾಣಿಸಿತು.

ಅರ್ಥ:
ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಜಲ: ನೀರು; ಜಲನಿಧಿ: ಸಮುದ್ರ; ದಳ: ಸೈನ್ಯ; ಬರಲು: ಆಗಮಿಸಲು; ಇಳೆ: ಭೂಮಿ; ಕುಸಿ: ಕೆಳಗೆ ಬೀಳು; ಕುಗ್ಗು, ಕುಂದು; ಕಮಠ:ಕೂರ್ಮ; ಮೇಲೆ: ಎತ್ತರ; ಉಸಿರು: ಶ್ವಾಸ, ವಾಯು; ಉಲಿ:ಧ್ವನಿ; ದಿಗು: ದಿಕ್ಕು; ದಂತಿ: ಆನೆ; ದಿಗುದಂತಿ: ದಿಗ್ಗಜ; ಮೊಣಕಾಲು: ಮಂಡಿ; ಊರು: ನೆಲೆಸು; ಮನ: ಮನಸ್ಸು; ಕುಂದು: ಕೊರತೆ, ನೂನ್ಯತೆ; ಬಲ: ಸೈನ್ಯ; ಮಹಾಂಬುಧಿ: ಮಹಾಸಾಗರ; ಬಲು: ಬಹಳ; ಕಡಲ: ಸಾಗರ, ಸಮುದ್ರ; ಮುಕ್ಕುಳಿಸು: ಎಡವು; ನಡೆ: ಚಲಿಸು; ಕಡು: ವಿಶೇಷ, ಅಧಿಕ; ಭರ: ವೇಗ; ಕಾಲ್ದುಳಿ: ಕಾಲಿನಿಂದ ತುಳಿ, ಅಪ್ಪಳಿಸು; ಕದನ: ಯುದ್ಧ; ಆಲಾಪ: ವಿಸ್ತಾರ; ಕಾಹುರ: ಕಾಲಿನಿಂದ ದಾಟುವ ಸಣ್ಣ ಹೊಳೆ; ಹೊಸ: ನವೀನ;

ಪದವಿಂಗಡಣೆ:
ಪ್ರಳಯ+ಜಲನಿಧಿಯಂತೆ +ದಳ+ ಬರಲ್
ಇಳೆ +ಕುಸಿಯೆ+ ಕಮಠಗೆ +ಮೇಲ್+ಉಸುರ್
ಉಲಿಯೆ +ದಿಗುದಂತಿಗಳು +ಮೊಣಕಾಲೂರಿ +ಮನಗುಂದೆ
ಬಲಮಹಾಂಬುಧಿ+ ಬಲುಗಡಲ+ ಮು
ಕ್ಕುಳಿಸಿ+ ನಡೆದುದು +ಕಡುಭರದ+ ಕಾ
ಲ್ದುಳಿಯ+ ಕದನ+ಆಳಾಪಕರ+ ಕಾಹುರತೆ+ ಹೊಸತಾಯ್ತು

ಅಚ್ಚರಿ:
(೧) ಉಪಮಾನದ ಪ್ರಯೋಗ – ಪ್ರಳಯಜಲನಿಧಿಯಂತೆ; ಇಳೆ ಕುಸಿಯೆ ಕಮಠಗೆ ಮೇಲುಸು
ರುಲಿಯೆ; ದಿಗುದಂತಿಗಳು ಮೊಣಕಾಲೂರಿ ಮನಗುಂದೆ; ಬಲಮಹಾಂಬುಧಿ ಬಲುಗಡಲ ಮು
ಕ್ಕುಳಿಸಿ
(೨) ‘ಕ’ಕಾರದ ಸಾಲು ಪದ – ಕಡುಭರದ ಕಾಲ್ದುಳಿಯ ಕದನಾಳಾಪಕರ ಕಾಹುರತೆ
(೩) ಜಲನಿಧಿ, ಅಂಬುಧಿ, ಕಡಲ – ಸಮುದ್ರದ ಸಮನಾರ್ಥಕ ಪದಗಳು