ಪದ್ಯ ೩೫: ಅರ್ಜುನನ ಮೇಲಿನ ಆಕ್ರಮಣ ಹೇಗಿತ್ತು?

ಮೋಹಿದವು ಭರಿಕೈಗಳನು ರಥ
ವಾಹತತಿಗಾನೆಗಳು ವಂಶ
ದ್ರೋಹಿ ಸಿಲುಕಿದನೆನುತ ತಡೆದರು ರಥಿಕರೆಡಬಲನ
ಗಾಹಿಸಿತು ದೂಹತ್ತಿ ಲೌಡೆಯ
ರಾಹುತರು ಕಟ್ಟಳವಿಯಲಿ ಕವಿ
ದೋಹಡಿಸದೌಂಕಿತು ಪದಾತಿ ಧನಂಜಯನ ರಥವ (ಗದಾ ಪರ್ವ, ೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಕುರುಸೇನೆಯ ಆನೆಗಳು ಸೊಂಡಿಲನ್ನು ಚಾಚಿ ಅರ್ಜುನನ ರಥದ ಕುದುರೆಗಳನ್ನು ಗುರಿಮಾಡಿಕೊಂಡು ಹೊಡೆದವು. ವಂಶದ್ರೋಹಿ ಸಿಕ್ಕುಬಿದ್ದ ಎಂದು ರಥಿಕರು ಎಡಬಲಗಳಲ್ಲಿ ಅರ್ಜುನನ ಮೇಲೆ ಕವಿದರು. ದೂಹತ್ತಿ ಲೌಡಿಗಳನ್ನು ಹಿಡಿದ ರಾಹುತರು ಅರ್ಜುನನ ಅತಿಸಮೀಪಕ್ಕೆ ಬಂದರು. ಪದಾತಿಗಳು ಅರ್ಜುನನ ಮೇಲೆ ಆಕ್ರಮಣ ಮಾಡಿದರು.

ಅರ್ಥ:
ಮೋಹು: ಒಡ್ಡು, ಹೊಡೆ; ಭರಿ: ಆನೆಯ ಸೊಂಡಿಲು; ರಥ: ಬಂಡಿ; ಕೈ: ಹಸ್ತ; ಆಹತಿ: ಹೊಡೆತ, ಪೆಟ್ಟು; ಆನೆ: ಗಜ; ವಂಶ: ಕುಲ; ದ್ರೋಹ: ಮೋಸ; ಸಿಲುಕು: ಬಂಧಿಸಲ್ಪಡು; ತಡೆ: ನಿಲ್ಲು; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಎಡಬಲ: ಅಕ್ಕ ಪಕ್ಕ; ಗಾಹು: ತಿಳುವಳಿಕೆ, ಮೋಸ; ದೂಹತ್ತಿ: ಎರಡೂ ಕಡೆ ಚೂಪಾದ ಕತ್ತಿ, ಆಯುಧ; ಲೌಡೆ: ಒಂದು ಬಗೆಯ ಕಬ್ಬಿಣದ ಆಯುಧ; ರಾಹುತ: ಕುದುರೆ ಸವಾರ; ಕಟ್ಟಳವಿ: ಘೋರ ಕಾಳಗ; ಕವಿ: ಆವರಿಸು; ಔಕು: ಹೊತ್ತು, ಹಿಚುಕು; ಪದಾತಿ: ಕಾಲಾಳು; ರಥ: ಬಂಡಿ;

ಪದವಿಂಗಡಣೆ:
ಮೋಹಿದವು +ಭರಿ+ಕೈಗಳನು+ ರಥವ್
ಆಹತತಿಗ್+ಆನೆಗಳು +ವಂಶ
ದ್ರೋಹಿ +ಸಿಲುಕಿದನೆನುತ +ತಡೆದರು +ರಥಿಕರ್ +ಎಡಬಲನ
ಗಾಹಿಸಿತು +ದೂಹತ್ತಿ +ಲೌಡೆಯ
ರಾಹುತರು +ಕಟ್ಟಳವಿಯಲಿ +ಕವಿದ್
ಓಹಡಿಸದ್+ಔಂಕಿತು +ಪದಾತಿ +ಧನಂಜಯನ +ರಥವ

ಅಚ್ಚರಿ:
(೧) ಆನೆಗಳು ಹೊಡೆತವನ್ನು ಚಿತ್ರಿಸುವ ಪರಿ – ಮೋಹಿದವು ಭರಿಕೈಗಳನು ರಥವಾಹತತಿಗಾನೆಗಳು

ಪದ್ಯ ೧೮: ದ್ರೋಣನ ಬಾಣಗಳು ಪಾಂಡವರ ಸೈನ್ಯವನ್ನು ಹೇಗೆ ಸಂಹಾರ ಮಾಡಿತು?

ಮುಟ್ಟಿ ಬಂದುದು ಸೇನೆ ಕವಿದುದು
ಕಟ್ಟಳವಿಯಲಿ ಕಲಿಗಳೆದು ಬಳಿ
ಕಟ್ಟಿ ತಿಂಬ ಮಹಾಂತಕಂಗೌತಣವ ಹೇಳ್ವಂತೆ
ಕಟ್ಟೆಯೊಡೆದಂಬುಧಿಯೊ ಮೇಣ್ ಜಗ
ಜಟ್ಟಿ ಸುರಿದಂಬುಗಳೊ ನಿಮಿಷಕೆ
ಕೆಟ್ಟುದಾಚೆಯ ಬಲದ ತರಹರವರಸ ಕೇಳೆಂದ (ದ್ರೋಣ ಪರ್ವ, ೧೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯವು ದ್ರೋಣನ ಹತ್ತಿರಕ್ಕೆ ಬಂದಿತು. ಯಮನಿಗೆ ಔತಣ ಆಹ್ವಾನ ಕೊಡುವಂತೆ ಮುತ್ತಿತು. ದ್ರೋಣನ ಬಾಣಗಳು ಕಟ್ಟೆಯೊಡೆದ ಸಮುದ್ರದಂತೆ ನುಗ್ಗಿ ನಿಮಿಷಮಾತ್ರದಲ್ಲಿ ಆ ಸೈನ್ಯವನ್ನು ಸಂಹರಿಸಿತು.

ಅರ್ಥ:
ಮುಟ್ಟು: ತಾಗು; ಸೇನೆ: ಸೈನ್ಯ; ಕವಿ: ಆವರಿಸು; ಅಳವಿ: ಶಕ್ತಿ; ಕಲಿ: ಶೂರ; ಕಳೆ: ಬೀಡು, ತೊರೆ; ಅಟ್ಟು: ಹಿಂಬಾಲಿಸು; ತಿಂಬ: ತಿನ್ನು; ಅಂತಕ: ಯಮ; ಔತಣ: ಊಟ; ಹೇಳು: ತಿಳಿಸು; ಕಟ್ಟೆ: ಜಗಲಿ; ಒಡೆ: ಸೀಳು; ಅಂಬುಧಿ: ಸಾಗರ; ಮೇಣ್: ಅಥವ; ಜಗಜಟ್ಟಿ: ಪರಾಕ್ರಮಿ; ಸುರಿ: ಹರಿಸು; ಅಂಬು: ಬಾಣ; ನಿಮಿಷ: ಕ್ಷಣ; ಕೆಟ್ಟು: ಕೆಡುಕು; ಆಚೆಯ: ಬೇರೆಯ; ಬಲ: ಶಕ್ತಿ, ಸೈನ್ಯ; ತರಹರ: ನಿಲ್ಲುವಿಕೆ, ಸೈರಣೆ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುಟ್ಟಿ+ ಬಂದುದು +ಸೇನೆ +ಕವಿದುದು
ಕಟ್ಟಳವಿಯಲಿ +ಕಲಿಗಳೆದು +ಬಳಿಕ್
ಅಟ್ಟಿ+ ತಿಂಬ +ಮಹಾಂತಕಂಗ್+ಔತಣವ +ಹೇಳ್ವಂತೆ
ಕಟ್ಟೆಯೊಡೆದ್+ಅಂಬುಧಿಯೊ +ಮೇಣ್ +ಜಗ
ಜಟ್ಟಿ +ಸುರಿದ್+ಅಂಬುಗಳೊ +ನಿಮಿಷಕೆ
ಕೆಟ್ಟುದ್+ಆಚೆಯ +ಬಲದ +ತರಹರವ್+ಅರಸ +ಕೇಳೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕವಿದುದು ಕಟ್ಟಳವಿಯಲಿ ಕಲಿಗಳೆದು
(೨) ರೂಪಕದ ಪ್ರಯೋಗ – ಬಳಿಕಟ್ಟಿ ತಿಂಬ ಮಹಾಂತಕಂಗೌತಣವ ಹೇಳ್ವಂತೆ; ಕಟ್ಟೆಯೊಡೆದಂಬುಧಿಯೊ

ಪದ್ಯ ೫೯: ಭೀಮನು ಕರ್ಣನ ಮೇಲೆ ಏನನ್ನು ಹಾರಿಸಿದನು?

ಮಡಿದ ಕರಿಗಳ ಕಾಯವನು ನಿ
ಟ್ಟೊಡಲ ತುರಗಂಗಳನು ಮುಗ್ಗಿದ
ಕೆಡೆದ ತೇರಿನ ಗಾಲಿಗಳ ಕೊಂಡಿಟ್ಟನಾ ಭೀಮ
ಎಡೆಯಲಾ ಕರಿಯೊಡಲನಾ ಹಯ
ದೊಡಲನಾ ರಥ ಚಕ್ರವನು ಕಡಿ
ಕಡಿದು ಬಿಸುಟನು ಹೊದ್ದಿದನು ಕಟ್ಟಳವಿಯಲಿ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಆಗ ಭೀಮನು ಅಲ್ಲಿ ಸತ್ತು ಬಿದ್ದಿದ್ದ ಆನೆ, ಕುದುರೆಗಳನ್ನು, ರಥಗಳ ಗಾಲಿಗಳನ್ನು, ಹಿಡಿದೆತ್ತಿ ಕರ್ಣನ ಮೇಲೆಸೆದನು. ಕರ್ಣನು ಆ ಆನೆಯ ದೇಹವನ್ನು, ಕುದುರೆಯ ಅಂಗವನ್ನು, ರಥದ ಚಕ್ರವನ್ನು ಮಧ್ಯದಲ್ಲೇ ಕತ್ತರಿಸಿ ಬಿಸಾಡಿದನು.

ಅರ್ಥ:
ಮಡಿ: ಸಾವು; ಕರಿ: ಆನೆ; ಕಾಯ: ದೇಹ; ಒಡಲು: ದೇಹ; ತುರಗ: ದೇಹ; ಅಂಗ: ದೇಹದ ಭಾಗ; ಮುಗ್ಗು: ಬಾಗು, ಮಣಿ; ಕೆಡೆ: ಬೀಳು, ಕುಸಿ; ತೇರು: ಬಂಡಿ, ರಥ; ಗಾಲಿ: ಚಕ್ರ; ಕೊಂಡು: ಬರೆಮಾಡು; ಎಡೆ: ಸುಲಿ, ತೆಗೆ; ಕರಿ: ಆನೆ; ಹಯ: ಕುದುರೆ; ಕಡಿ: ಕತ್ತರಿಸು; ಬಿಸುಟು: ಹೊರಹಾಕು; ಹೊದ್ದು: ಆವರಿಸು, ಮುಸುಕು; ಅಳವಿ: ಯುದ್ಧ;

ಪದವಿಂಗಡಣೆ:
ಮಡಿದ +ಕರಿಗಳ +ಕಾಯವನು +ನಿ
ಟ್ಟೊಡಲ +ತುರಗ್+ಅಂಗಳನು +ಮುಗ್ಗಿದ
ಕೆಡೆದ +ತೇರಿನ +ಗಾಲಿಗಳ+ ಕೊಂಡಿಟ್ಟನಾ +ಭೀಮ
ಎಡೆಯಲ್+ಆ+ ಕರಿ+ಒಡಲನ್+ಆ+ ಹಯದ್
ಒಡಲನ್+ಆ+ ರಥ +ಚಕ್ರವನು +ಕಡಿ
ಕಡಿದು +ಬಿಸುಟನು +ಹೊದ್ದಿದನು +ಕಟ್ಟಳವಿಯಲಿ +ಕರ್ಣ

ಅಚ್ಚರಿ:
(೧) ಕಾಯ, ಒಡಲು; ತುರಗ, ಹಯ; ಗಾಲಿ, ಚಕ್ರ – ಸಮಾನಾರ್ಥಕ ಪದ

ಪದ್ಯ ೧೨: ಭೀಮನು ದ್ರೋಣರ ಮೇಲೆ ಹೇಗೆ ನುಗ್ಗಿದನು?

ಮಳೆಗೆ ತೆರಳದೆ ಕೋಡ ಬಾಗಿಸಿ
ಕಲಿ ವೃಷಭ ಹೊಗುವಂತೆ ದ್ರೋಣನ
ಬಲುಸರಳ ಸರಿವಳೆಗೆ ದಂಡೆಯನೊಡ್ಡಿ ದಳವುಳಿಸಿ
ಅಳವಿದಪ್ಪದೆ ಕೆಲದ ಖಡ್ಗವ
ಸೆಳೆದು ಗುರುವಪ್ಪಳಿಸೆ ಕೈಯಲಿ
ಕಳೆದು ಕಟ್ಟಳವಿಯಲಿ ಹೊಕ್ಕನು ಭೀಮ ಬೊಬ್ಬಿರಿದು (ದ್ರೋಣ ಪರ್ವ, ೧೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಜೋರಾಗಿ ಮಳೆಯು ಬರುವಾಗ ಗೂಳಿಯು ಕೋಡು ಬಾಗಿಸಿ ಮುಂದಕ್ಕೆ ನುಗ್ಗುವಂತೆ, ದ್ರೋಣನ ಬಾಣಗಳ ಸುರಿಮಳೆಗೆ ಅಡ್ಡವಾಗಿ ಕೈಹಿಡಿದು, ಉತ್ಸಾಹಿಸಿ ಭೀಮನು ನೇರವಾಗಿ ನುಗ್ಗಿದನು. ಆಗ ದ್ರೋಣನು ಬಿಲ್ಲನ್ನು ಬಿಟ್ಟು ಕತ್ತಿಯನ್ನೆಳೆದು ಅಪ್ಪಳಿಸಿದನು. ಭೀಮನು ಅದನ್ನು ಕೈಯಿಂದ ತಪ್ಪಿಸಿಕೊಂಡು ಜೋರಾಗಿ ಕೂಗುತ್ತಾ ದ್ರೋಣನ ರಥದ ಅತಿಸಮೀಪಕ್ಕೆ ಬಂದನು.

ಅರ್ಥ:
ಮಳೆ: ವರ್ಷ; ತೆರಳು: ಹಿಂದಿರುಗು; ಕೋಡು: ಕೊಂಬು; ಬಾಗಿಸು: ಎರಗಿಸು; ಕಲಿ: ಶೂರ; ವೃಷಭ: ಗೂಳಿ, ನಂದಿ; ಹೊಗು: ಚಲಿಸು; ಬಲು: ಬಹಳ; ಸರಳು: ಬಾಣ; ದಂಡೆ: ಬಿಲ್ಲನ್ನು ಹಿಡಿಯುವ ಒಂದು ವರಸೆ; ಒಡ್ಡು: ಅಡ್ಡ ಗಟ್ಟೆ; ದಳ: ಸೈನ್ಯ; ಅಳವು: ಶಕ್ತಿ; ಕೆಲ: ಪಕ್ಕ, ಮಗ್ಗುಲು; ಖಡ್ಗ: ಕತ್ತಿ; ಸೆಳೆ: ಆಕರ್ಷಿಸು; ಗುರು: ಆಚಾರ್ಯ; ಅಪ್ಪಳಿಸು: ತಟ್ಟು, ತಾಗು; ಕಳೆ: ಬೀಡು, ತೊರೆ; ಅಳವಿ: ಯುದ್ಧ; ಹೊಕ್ಕು: ಸೇರು; ಬೊಬ್ಬಿರಿ: ಆರ್ಭಟಿಸು;

ಪದವಿಂಗಡಣೆ:
ಮಳೆಗೆ +ತೆರಳದೆ +ಕೋಡ +ಬಾಗಿಸಿ
ಕಲಿ +ವೃಷಭ +ಹೊಗುವಂತೆ +ದ್ರೋಣನ
ಬಲುಸರಳ +ಸರಿವಳೆಗೆ +ದಂಡೆಯನೊಡ್ಡಿ +ದಳವುಳಿಸಿ
ಅಳವಿದ್+ಅಪ್ಪದೆ +ಕೆಲದ +ಖಡ್ಗವ
ಸೆಳೆದು +ಗುರುವ್+ಅಪ್ಪಳಿಸೆ +ಕೈಯಲಿ
ಕಳೆದು+ ಕಟ್ಟಳವಿಯಲಿ +ಹೊಕ್ಕನು +ಭೀಮ +ಬೊಬ್ಬಿರಿದು

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೈಯಲಿ ಕಳೆದು ಕಟ್ಟಳವಿಯಲಿ
(೨) ಉಪಮಾನದ ಪ್ರಯೋಗ – ಮಳೆಗೆ ತೆರಳದೆ ಕೋಡ ಬಾಗಿಸಿ ಕಲಿ ವೃಷಭ ಹೊಗುವಂತೆ

ಪದ್ಯ ೬೧: ಕೃಷ್ಣನು ಯಾವ ನಾದವನ್ನು ಮೊಳಗಿಸಿದನು?

ಅರಿಭಟರು ಕಟ್ಟಳವಿಯಲಿ ಮು
ಕ್ಕುರುಕೆ ಮುರರಿಪು ಪಾಂಚಜನ್ಯವ
ನಿರದೆ ಮೊಳಗಿದ ಹನುಮ ಗರ್ಜಿಸಿದನು ಪತಾಕೆಯಲಿ
ಸುರರ ದೈತ್ಯರ ಸಮರಸಿರಿ ವಿ
ಸ್ತರಿಸಿತಿತ್ತಲು ದ್ರೋಣನತ್ತಲು
ತೆರಳಿಚಿದನೈ ಪಾಂಡುಪುತ್ರರ ಸೈನ್ಯಸಾಗರವ (ದ್ರೋಣ ಪರ್ವ, ೧೦ ಸಂಧಿ, ೬೧ ಪದ್ಯ)

ತಾತ್ಪರ್ಯ:
ಶತ್ರುವೀರರು ಅತಿಸಮೀಪಕ್ಕೆ ಬಂದು ಮುತ್ತಲು, ಶ್ರೀಕೃಷ್ಣನು ಪಾಂಚಜನ್ಯವನ್ನೂದಿದನು. ಧ್ವಜದಲ್ಲಿದ್ದ ಹನುಮಂತನು ಗರ್ಜಿಸಿದನು. ದೇವತೆಗಳು ಅಸುರರ ಕಾಳಗದಂತೆ ಇತ್ತ ಘೋರ ಕದನವಾಗುತ್ತಿರಲು, ಅತ್ತ ದ್ರೋಣನು ಪಾಂಡವ ಸೈನ್ಯಸಮುದ್ರವನ್ನು ಕಠೋರನಾಗಿ ಮುತ್ತಿದನು.

ಅರ್ಥ:
ಅರಿ: ವೈರಿ; ಭಟ: ಸೈನಿಕ; ಅಳವಿ: ಯುದ್ಧ; ಮುಕ್ಕುರ: ಆವರಿಸು; ಮುರರಿಪು: ಕೃಷ್ಣ; ಮೊಳಗು: ಕೂಗು; ಗರ್ಜಿಸು: ಕೂಗು; ಪತಾಕೆ: ಬಾವುಟ; ಸುರ: ದೇವತೆ; ದೈತ್ಯ: ರಾಕ್ಷಸ; ಸಮರ: ಯುದ್ಧ; ಸಿರಿ: ಐಶ್ವರ್ಯ; ವಿಸ್ತರಿಸು: ಹರಡು; ತೆರಳು: ಹೊರಡು; ಪುತ್ರ: ಸುತ; ಸೈನ್ಯ: ದಳ; ಸಾಗರ: ಸಮುದ್ರ;

ಪದವಿಂಗಡಣೆ:
ಅರಿಭಟರು+ ಕಟ್ಟಳವಿಯಲಿ +ಮು
ಕ್ಕುರುಕೆ +ಮುರರಿಪು +ಪಾಂಚಜನ್ಯವನ್
ಇರದೆ+ ಮೊಳಗಿದ +ಹನುಮ +ಗರ್ಜಿಸಿದನು +ಪತಾಕೆಯಲಿ
ಸುರರ +ದೈತ್ಯರ +ಸಮರಸಿರಿ +ವಿ
ಸ್ತರಿಸಿತ್+ಇತ್ತಲು +ದ್ರೋಣನ್+ಅತ್ತಲು
ತೆರಳಿಚಿದನೈ +ಪಾಂಡುಪುತ್ರರ +ಸೈನ್ಯ+ಸಾಗರವ

ಅಚ್ಚರಿ:
(೧) ಯುದ್ಧವನ್ನು ಹೋಲಿಸುವ ಪರಿ – ಸುರರ ದೈತ್ಯರ ಸಮರಸಿರಿ ವಿಸ್ತರಿಸಿತ್
(೨) ಸೈನ್ಯದ ಅಗಾಧತೆಯನ್ನು ಹೇಳುವ ಪರಿ – ಸೈನ್ಯಸಾಗರ

ಪದ್ಯ ೬೨: ಧರ್ಮಜನನ್ನು ದ್ರೋಣರು ಹೇಗೆ ಶ್ಲಾಘಿಸಿದರು?

ಶಿವಶಿವಾ ಬೆಳುದಿಂಗಳಲಿ ಮೈ
ಬೆವರುವುದೆ ಕಲಿ ಧರ್ಮಪುತ್ರನ
ಬವರದಲಿ ಬೆಂಡಹರೆ ವೀರರು ಕಂಡೆವಧುಭುತವ
ನಿವಗಿದೆತ್ತಣ ಕೈಮೆ ಕೋಲ್ಗಳ
ಕವಿಸುವಂದವಿದೊಳ್ಳಿತಿದಲೇ
ನವಗಭೀಷ್ಟವೆನುತ್ತ ಕಟ್ಟಳವಿಯಲಿ ಕೈಕೊಂಡ (ದ್ರೋಣ ಪರ್ವ, ೧ ಸಂಧಿ, ೬೨ ಪದ್ಯ)

ತಾತ್ಪರ್ಯ:
ಶಿವಶಿವಾ ಬೆಳುದಿಂಗಳಿಗೆ ಮೈಬೆವರುತ್ತದೆಯೇ? ಧರ್ಮರಾಯನ ಯುದ್ಧದಲ್ಲಿ ಶತ್ರುಗಳು ಬೆಂಡಾಗುತ್ತಾರೆಯೇ? ರಾಜನು ಯುದ್ಧಮಾಡುವ ಅದ್ಭುತವನ್ನು ನೋಡಿದ ಹಾಗಾಯಿತು. ನಿಮಗೆ ಎಲ್ಲಿಂದ ಈ ಕೈಚಳಕ ಬಂದಿತು, ನೀವು ಬಾಣ ಬಿಡುವ ರೀತಿ ನಮಗೆ ಬಹಳ ಇಷ್ಟವಾಯಿತು ಎನ್ನುತ್ತಾ ಧರ್ಮಜನ ರಥದೆದುರಿಗೆ ಬಂದು ದ್ರೋಣರು ನಿಂತರು.

ಅರ್ಥ:
ಬೆಳುದಿಂಗಳು: ಪೂರ್ಣಚಂದ್ರನ ರಾತ್ರಿ; ಮೈ: ತನು, ದೇಹ; ಬೆವರು: ಸ್ವೇದಜಲ; ಕಲಿ: ಶೂರ; ಪುತ್ರ: ಮಗ; ಬವರ: ಯುದ್ಧ; ಬೆಂಡು: ತಿರುಳಿಲ್ಲದುದು, ಪೊಳ್ಳು; ವೀರ: ಶೂರ; ಅದುಭುತ: ಆಶ್ಚರ್ಯ; ಕೈಮೆ: ನೈಪುಣ್ಯ; ಕೋಲು: ಬಾಣ; ಕವಿಸು: ಆವರಿಸು, ಮುತ್ತು; ಒಳ್ಳಿತು: ಸರಿಯಾದುದು; ಅಭೀಷ್ಟ: ಇಷ್ಟವಾದುದು; ಅಳವಿ: ಶಕ್ತಿ, ಯುದ್ಧ; ಕೈಕೊಂಡು: ನಡೆಸು, ಧರಿಸು;

ಪದವಿಂಗಡಣೆ:
ಶಿವಶಿವಾ +ಬೆಳುದಿಂಗಳಲಿ +ಮೈ
ಬೆವರುವುದೆ +ಕಲಿ+ ಧರ್ಮಪುತ್ರನ
ಬವರದಲಿ +ಬೆಂಡಹರೆ+ ವೀರರು +ಕಂಡೆವ್+ಅಧುಭುತವ
ನಿವಗಿದ್+ಎತ್ತಣ +ಕೈಮೆ +ಕೋಲ್ಗಳ
ಕವಿಸುವಂದವಿದ್+ಒಳ್ಳಿತಿದಲ್+ಏನ್
ಅವಗ್+ಅಭೀಷ್ಟವ್+ಎನುತ್ತ+ ಕಟ್ಟಳವಿಯಲಿ +ಕೈಕೊಂಡ

ಅಚ್ಚರಿ:
(೧) ರೂಪಕದ ಪ್ರಯೋಗ – ಬೆಳುದಿಂಗಳಲಿ ಮೈಬೆವರುವುದೆ
(೨) ಧರ್ಮಜನನ್ನು ಹೊಗಳುವ ಪರಿ – ಕಲಿ ಧರ್ಮಪುತ್ರನ ಬವರದಲಿ ಬೆಂಡಹರೆ

ಪದ್ಯ ೨೪: ಭೀಷ್ಮನು ಯಾರ ಹಣೆಗೆ ಬಾಣವನ್ನು ಬಿಟ್ಟನು?

ಮತ್ತೆ ರಥವನು ಹರಿಸಿ ಭೀಷ್ಮನ
ಹತ್ತೆ ಬರೆ ಕಟ್ಟಳವಿಯಲಿ ಹಾ
ಮುತ್ತಯನು ಸಿಲುಕಿದನು ಶಿವಶಿವಯೆನುತ ಬಲ ಬೆದರೆ
ಹತ್ತು ಶರದಲಿ ಕೃಷ್ಣರಾಯನ
ಮತ್ತೆ ಮುಸುಕಿದ ಬಹಳ ಭಾರ್ಗವ
ದತ್ತ ಬಾಣವ ತೊಡಚಿ ದೇವನ ನೊಸಲ ಕೀಲಿಸಿದ (ಭೀಷ್ಮ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮತ್ತೆ ರಥವನ್ನು ನಡೆಸಿ ಭೀಷ್ಮನ ಎದುರಿನಲ್ಲೇ ಮುಖಾಮುಖಿ ತಂದು ನಿಲ್ಲಿಸಲು, ಪಿತಾಮಹನು ಅರ್ಜುನನಿಗೆ ಸೆರೆ ಸಿಕ್ಕನೆಂದು ಕೌರವ ಸೈನ್ಯವು ಬೆದರಿ ಉದ್ಗರಿಸಿತು. ಆಗ ಭೀಷ್ಮನು ಹತ್ತು ಬಾಣಗಳಿಂದ ಶ್ರೀಕೃಷ್ಣನನ್ನು ಹೊಡೆದು ಪರಶುರಾಮರು ಕೊಟ್ಟಿದ್ದ ಬಾಣವನ್ನು ಶ್ರೀಕೃಷ್ಣನ ಹಣೆಗೆ ಗುರಿಯಿಟ್ಟು ಬಿಟ್ಟನು.

ಅರ್ಥ:
ರಥ: ಬಂಡಿ; ಹರಿಸು: ಓಡಾಡು; ಹತ್ತೆ: ಹತ್ತಿರ, ಸಮೀಪ; ಬರೆ: ಆಗಮಿಸು; ಅಳವಿ: ಶಕ್ತಿ, ಯುದ್ಧ; ಮುತ್ತಯ: ಮುತ್ತಾತ; ಸಿಲುಕು: ಬಂಧನಕ್ಕೊಳಗಾಗು; ಬಲ: ಶಕ್ತಿ; ಬೆದರು: ಹೆದರು; ಶರ: ಬಾಣ; ಮುಸುಕು: ಹೊದಿಕೆ; ಭಾರ್ಗವ: ಪರಶುರಾಮ; ತೊಡಚು: ಕಟ್ಟು, ಬಂಧಿಸು; ನೊಸಲು: ಹಣೆ; ಕೀಲಿಸು: ಜೋಡಿಸು, ನಾಟು; ದತ್ತ: ನೀಡಿದ;

ಪದವಿಂಗಡಣೆ:
ಮತ್ತೆ +ರಥವನು +ಹರಿಸಿ +ಭೀಷ್ಮನ
ಹತ್ತೆ +ಬರೆ +ಕಟ್ಟಳವಿಯಲಿ +ಹಾ
ಮುತ್ತಯನು +ಸಿಲುಕಿದನು+ ಶಿವಶಿವಯೆನುತ+ ಬಲ+ ಬೆದರೆ
ಹತ್ತು +ಶರದಲಿ +ಕೃಷ್ಣರಾಯನ
ಮತ್ತೆ +ಮುಸುಕಿದ+ ಬಹಳ +ಭಾರ್ಗವ
ದತ್ತ +ಬಾಣವ +ತೊಡಚಿ +ದೇವನ+ ನೊಸಲ+ ಕೀಲಿಸಿದ

ಅಚ್ಚರಿ:
(೧) ಮತ್ತೆ, ಹತ್ತೆ; ಮುತ್ತ, ದತ್ತ – ಪ್ರಾಸ ಪದಗಳು
(೨) ಬ ಕಾರದ ತ್ರಿವಳಿ ಪದ – ಬಹಳ ಭಾರ್ಗವದತ್ತ ಬಾಣವ