ಪದ್ಯ ೧೮: ಪಾಳೆಯದ ಐಶ್ವರ್ಯವು ಯಾವುದನ್ನು ಮೀರಿಸುವಂತಿತ್ತು?

ಪಾಳೆಯಕೆ ಗಜಪುರದ ವಂಕಕೆ
ಕೀಲಿಸಿತು ದಂಡಿಗೆಯ ಸಂದಣಿ
ಮೇಲುಸರಕಿನ ಬಂಡಿ ತಲೆವೊರೆಯೆತ್ತು ಕಂಬಿಗಳ
ಹೇಳಲೇನು ಸಮುದ್ರ ವಿಭವವ
ನೇಳಿಸುವ ಪಾಳೆಯದ ಸಿರಿ ಶೂ
ನ್ಯಾಲಯಕೆ ಜೋಡಿಸಿತಲೈ ಜನಮೇಜಯ ಕ್ಷಿತಿಪ (ಗದಾ ಪರ್ವ, ೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಪಾಳೆಯಕ್ಕೂ ಹಸ್ತಿನಾವತಿಯ ಮಹಾದ್ವಾರಕ್ಕೂ ಪಲ್ಲಕ್ಕಿ ಬಂಡಿ, ಹೊರೆಯೆತ್ತುಗಳು, ಕಂಬಿಗಳು ಸಂದಣಿಸಿದವು. ಏನು ಹೇಳಲಿ ರಾಜ ಜನಮೇಜಯ, ರತ್ನಾಕರವಾದ ಸಮುದ್ರದ ವೈಭವವನ್ನು ಮಿರಿಸುವ ಪಾಳೆಯದ ಐಶ್ವರ್ಯವು ಶೂನ್ಯವಾದ ಅರಮನೆಗೆ ಹೋಯಿತು.

ಅರ್ಥ:
ಪಾಳೆಯ: ಬಿಡಾರ; ಗಜಪುರ: ಹಸ್ತಿನಾಪುರ; ಅಂಕ: ಸ್ಪರ್ಧೆ, ಕಾಳಗ ಇತ್ಯಾದಿಗಳು ನಡೆಯುವ ಸ್ಥಳ; ಕೀಲಿಸು: ಜೋಡಿಸು; ದಂಡಿಗೆ: ಪಲ್ಲಕ್ಕಿ; ಸಂದಣಿ: ಗುಂಪು; ಸರಕು: ಸಾಮಾನು; ಬಂಡಿ: ರಥ; ತಲೆ: ಶಿರ; ಕಂಬಿ: ಲೋಹದ ತಂತಿ; ಹೇಳು: ತಿಳಿಸು; ಸಮುದ್ರ: ಸಾಗರ; ವಿಭವ: ಸಿರಿ, ಸಂಪತ್ತು; ಏಳು: ಹತ್ತು; ಸಿರಿ: ಐಶ್ವರ್ಯ; ಶೂನ್ಯ: ಬರಿದಾದುದು; ಆಲಯ: ಮನೆ; ಜೋಡಿಸು: ಕೂಡಿಸು; ಕ್ಷಿತಿಪ: ರಾಜ;

ಪದವಿಂಗಡಣೆ:
ಪಾಳೆಯಕೆ +ಗಜಪುರದವ್ +ಅಂಕಕೆ
ಕೀಲಿಸಿತು +ದಂಡಿಗೆಯ +ಸಂದಣಿ
ಮೇಲು+ಸರಕಿನ +ಬಂಡಿ +ತಲೆವೊರೆಯೆತ್ತು +ಕಂಬಿಗಳ
ಹೇಳಲೇನು +ಸಮುದ್ರ +ವಿಭವವನ್
ಏಳಿಸುವ +ಪಾಳೆಯದ +ಸಿರಿ +ಶೂ
ನ್ಯಾಲಯಕೆ +ಜೋಡಿಸಿತಲೈ +ಜನಮೇಜಯ +ಕ್ಷಿತಿಪ

ಅಚ್ಚರಿ:
(೧) ರೂಪಕದ ಪ್ರಯೋಗ – ಸಮುದ್ರ ವಿಭವವನೇಳಿಸುವ ಪಾಳೆಯದ ಸಿರಿ ಶೂನ್ಯಾಲಯಕೆ ಜೋಡಿಸಿತಲೈ

ಪದ್ಯ ೪೨: ಕೌರವನು ಯಾರ ಬಳಿ ತೆರಳಿ ಬಿನ್ನಹ ಮಾಡಿದನು?

ತಳಿತುದರನೆಲೆ ರಾಯ ಥಟ್ಟಿನ
ಕಳವಳಿಗರುರವಣಿಸಿದರು ಮುರಿ
ದೊಳಸರಿವ ಮನ್ನೆಯರ ಹೊಯ್ದರು ಮುಂದೆ ಕಂಬಿಯಲಿ
ಉಲಿವ ಪಾಠಕರೋದುಗಳ ಕಳ
ಕಳಿಕೆಯಲಿ ನೃಪ ಬಂದು ಗುರುವಿನ
ದಳವ ಹೊಕ್ಕನು ನಮಿಸಿ ಬಿನ್ನಹಮಾಡಿದನು ನಗುತ (ದ್ರೋಣ ಪರ್ವ, ೧೦ ಸಂಧಿ, ೪೨ ಪದ್ಯ)

ತಾತ್ಪರ್ಯ:
ದೊರೆಯ ಬೀಡಿನಲ್ಲಿ ಅಬ್ಬರವಾಯಿತು ಸೈನ್ಯದ ನಾಯಕರು ಮುನ್ನುಗ್ಗಿ ಹಿಮ್ಮೆಟ್ಟುತ್ತಿದ್ದ ಪಾಳೆಯಗಾರರನ್ನು ಅಡ್ಡಗಟ್ಟಿ ಕಂಬಿಯಿಂದ ಹೊಡೆದು ನಿಲ್ಲಿಸಿದರು. ಇತ್ತ ಕೌರವನು ಹೊಗಳುಭಟ್ಟರ ಗಲಬಿಲಿಯ ನಡುವೆ ದ್ರೋಣನ ಸೈನ್ಯವನ್ನು ಹೊಕ್ಕು ಗುರುವಿಗೆ ನಮಸ್ಕರಿಸಿ ಬಿನ್ನಹ ಮಾಡಿಕೊಂಡನು.

ಅರ್ಥ:
ತಳಿತ: ಚಿಗುರಿದ; ನೆಲೆ: ಭೂಮಿ; ರಾಯ: ರಾಜ; ಥಟ್ಟು: ಗುಂಪು; ಕಳವಳ: ಗೊಂದಲ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಮುರಿ: ಸೀಳು; ಮನ್ನೆಯ: ಮೆಚ್ಚಿನ; ಹೊಯ್ದು: ಹೊಡೆದು; ಕಂಬಿ: ಲೋಹದ ತಂತಿ; ಉಲಿ: ಶಬ್ದ; ಪಾಠಕ: ಓದುವವನು, ವಾಚಕ; ಓದು: ಹೇಳು, ಹಾಡು; ಕಳಕಳ: ಗೊಂದಲ; ನೃಪ: ರಾಜ; ಗುರು: ಆಚಾರ್ಯ; ದಳ: ಸೈನ್ಯ; ಹೊಕ್ಕು: ಸೇರು; ನಮಿಸು: ನಮಸ್ಕರಿಸು; ಬಿನ್ನಹ: ಕೋರಿಕೆ; ನಗು: ಸಂತಸ;

ಪದವಿಂಗಡಣೆ:
ತಳಿತುದರ+ನೆಲೆ +ರಾಯ +ಥಟ್ಟಿನ
ಕಳವಳಿಗರ್+ಉರವಣಿಸಿದರು +ಮುರಿದ್
ಒಳಸರಿವ +ಮನ್ನೆಯರ +ಹೊಯ್ದರು +ಮುಂದೆ +ಕಂಬಿಯಲಿ
ಉಲಿವ+ ಪಾಠಕರ್+ಓದುಗಳ +ಕಳ
ಕಳಿಕೆಯಲಿ +ನೃಪ +ಬಂದು +ಗುರುವಿನ
ದಳವ +ಹೊಕ್ಕನು +ನಮಿಸಿ +ಬಿನ್ನಹ+ಮಾಡಿದನು +ನಗುತ

ಅಚ್ಚರಿ:
(೧) ಕಳವಳ, ಕಳಕಳಿ – ಪದಗಳ ಬಳಕೆ

ಪದ್ಯ ೫೧: ಕುದುರೆಗಳನ್ನು ಯುದ್ಧಕ್ಕೆ ಹೇಗೆ ಸಿದ್ಧಪಡಿಸಲಾಯಿತು?

ಬರಿಗಡಗ ಕೀಳ್ಕಂಬಿ ದುಕ್ಕುಡಿ
ಯುರುಗುಗಡಿಯಣ ಮೊಗವಡಂಗಳು
ತುರಗವದನದಲೊಪ್ಪಿರಲು ತಾ ಪಣೆಯನಳವಡಿಸಿ
ಕೊರಳ ಕೊಡಕೆಯ ಪಾರ್ಶ್ವಪೇಚಕ
ದೆರಡು ಕಡೆಯಲಿ ಸುತ್ತು ಝಲ್ಲಿಯ
ಪರಿಪರಿಯ ಹಕ್ಕರಿಯಲಿ ಬೀಸಿದರು ಚೌರಿಗಳ (ಭೀಷ್ಮ ಪರ್ವ, ೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ಪಕ್ಕದ ಕಡಗ, ಬಾಯಲ್ಲಿಟ್ಟ ಕಂಬಿ, ಎರಡೂ ಕಡೆಯ ಕಡಿವಾಣ, ಮುಖವಾಡಗಲನ್ನು ಕುದುರೆಗಳಿಗೆ ಕಟ್ಟಿದರು. ಕೊರಳಿನ ಹಗ್ಗ, ಬಾಲದ ಕೆಳಗೆ ಕಟ್ಟಿದ ಹಗ್ಗಗಳಿಗೆ ಗೊಂಡೆಗಳನ್ನು ಕಟ್ಟಿದ್ದರು. ದೇಹರಕ್ಷಣೆಗಾಗಿ ಎರಡೂ ಕಡೆಗೆ ಕವಚಗಲನ್ನು ಕಟ್ಟಿದರು. ಅವುಗಳನ್ನು ಚೌರಿಯಿಂದ ಅಲಂಕರಿಸಿದರು.

ಅರ್ಥ:
ಬರಿ: ಪಕ್ಕ, ಬದಿ; ಕಡಗ: ಕೈಗೆ ಅಥವಾ ಕಾಲಿಗೆ ಹಾಕಿಕೊಳ್ಳುವ ಬಳೆ; ಕಂಬಿ: ಲೋಹದ ತಂತಿ; ದುಕ್ಕುಡಿ: ಕಡಿವಾಣ; ಉರುಗು: ಬಾಗು, ಓರೆಯಾಗು; ಕಡಿಯಣ: ಕುದುರೆಬಾಯಿಗೆ ಹಾಕುವ ಕಬ್ಬಿಣದ ಬಳೆಗೆ ಕಡಿವಾಣ ಎಂದು ಹೆಸರು; ಮೊಗ: ಮುಖ; ತುರಗ: ಅಶ್ವ; ವದನ: ಮುಖ; ಒಪ್ಪು: ಒಪ್ಪಿಗೆ, ಸಮ್ಮತಿ; ಪಣೆ:ಹಣೆ, ನೊಸಲು; ಅಳವಡಿಸು: ಜೋಡಿಸು; ಕೊರಳು: ಗಂಟಲು; ಕೊಡಕೆ: ಕಿವಿ; ಪಾರ್ಶ್ವ: ಪಕ್ಕ, ಮಗ್ಗುಲು; ಪೇಚಕ: ಬಾಲದ ಬುಡ; ಕಡೆ: ಬದಿ; ಸುತ್ತು: ಬಳಸು, ತಿರುಗು; ಝಲ್ಲಿ: ಗೊಂಚಲು, ಕುಚ್ಚು; ಪರಿಪರಿ: ಬಹಳ ರೀತಿ; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಬೀಸು: ಹರಹು; ಚೌರಿ: ಚಮರ;

ಪದವಿಂಗಡಣೆ:
ಬರಿ+ಕಡಗ +ಕೀಳ್+ಕಂಬಿ +ದುಕ್ಕುಡಿ
ಉರುಗು+ಕಡಿಯಣ+ ಮೊಗವಡಂಗಳು
ತುರಗ+ವದನದಲ್+ಒಪ್ಪಿರಲು +ತಾ +ಪಣೆಯನ್+ಅಳವಡಿಸಿ
ಕೊರಳ +ಕೊಡಕೆಯ +ಪಾರ್ಶ್ವ+ಪೇಚಕದ್
ಎರಡು +ಕಡೆಯಲಿ +ಸುತ್ತು +ಝಲ್ಲಿಯ
ಪರಿಪರಿಯ +ಹಕ್ಕರಿಯಲಿ +ಬೀಸಿದರು +ಚೌರಿಗಳ

ಅಚ್ಚರಿ:
(೧) ಕುದುರೆಯನ್ನು ಸಿದ್ಧಪಡಿಸಲು ವಿವರಿಸಲು ಬಳಸಿದ ಪದಗಳು: ಕಡಗ, ಕಂಬಿ, ದುಕ್ಕುಡಿ, ಕಡಿಯಣ, ಕೊಡಕೆ, ಪೇಚಕ, ಹಕ್ಕರಿ

ಪದ್ಯ ೧೭: ಭೀಷ್ಮರು ದುರ್ಯೋಧನನನ್ನು ಹೇಗೆ ಬರೆಮಾಡಿಕೊಂಡರು?

ಮುಂದೆ ಹರಿದರು ಕೈಯ ಕಂಬಿಯ
ಸಂದಣಿಯ ಪಡೆವಳರು ಗಂಗಾ
ನಂದನಂಗೀ ಹದನನರುಹಲು ಬಂದನಿದಿರಾಗಿ
ಕಂದು ಮೋರೆಯ ರಾಯನನು ತೆಗೆ
ದಂದಣದೊಳಾಲಿಂಗಿಸುತ ನಲ
ವಿಂದ ಮನ್ನಿಸಿ ತಂದನರಮನೆಗುಚಿತ ವಚನದಲಿ (ಭೀಷ್ಮ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕಂಬಿಹಿಡಿದ ದೂತರು ರಾಜನ ಆಗಮನವನ್ನು ಮೊದಲೇ ಭೀಷ್ಮನಿಗೆ ತಿಳಿಸಲು, ಭೀಷ್ಮನು ಎದುರುಬಂದು ಕಳಾಹೀನನಾಗಿದ್ದ ದುರ್ಯೋಧನನ ಮುಖವನ್ನು ನೋಡಿ, ಆತನನ್ನು ಆಲಂಗಿಸಿ ಉಚಿತವಾದ ಹಿತನುಡಿಗಳಿಂದ ಮಾತನಾಡಿಸಿ ಅರಮನೆಯೊಳಗೆ ಕರೆತಂದನು.

ಅರ್ಥ:
ಮುಂದೆ: ಅಗ್ರಭಾಗ; ಹರಿ: ಚಲಿಸು; ಕೈ: ಹಸ್ತ; ಕಂಬಿ: ಉಕ್ಕಿನ ಸಲಾಕಿ; ಸಂದಣಿ: ಗುಂಪು; ಪಡೆ: ಸೈನ್ಯ, ಬಲ, ಗುಂಪು; ನಂದನ: ಮಗ; ಹದ: ಸ್ಥಿತಿ; ಅರುಹು: ತಿಳಿಸು; ಇದಿರು: ಎದುರು; ಕಂದು: ಕಳಾಹೀನ, ಮಸಕಾಗು; ಮೋರೆ: ಮುಖ; ರಾಯ: ರಾಜ; ತೆಗೆ: ಸೆಳೆ; ಅಂದಣ:ಪಲ್ಲಕ್ಕಿ, ಮೇನೆ; ಆಲಿಂಗಿಸು: ಅಪ್ಪಿಕೋ; ನಲವು: ಸಂತೋಷ; ಮನ್ನಿಸು: ಗೌರವಿಸು; ಅರಮನೆ: ರಾಜರ ಆಲಯ; ಉಚಿತ: ಸರಿಯಾದ; ವಚನ: ಮಾತು;

ಪದವಿಂಗಡಣೆ:
ಮುಂದೆ +ಹರಿದರು +ಕೈಯ +ಕಂಬಿಯ
ಸಂದಣಿಯ +ಪಡೆವಳರು +ಗಂಗಾ
ನಂದನಂಗ್+ಈ+ ಹದನನ್+ಅರುಹಲು +ಬಂದನ್+ಇದಿರಾಗಿ
ಕಂದು +ಮೋರೆಯ +ರಾಯನನು+ ತೆಗೆದ್
ಅಂದಣದೊಳ್+ಆಲಿಂಗಿಸುತ+ ನಲ
ವಿಂದ +ಮನ್ನಿಸಿ +ತಂದನ್+ಅರಮನೆಗ್+ಉಚಿತ +ವಚನದಲಿ

ಅಚ್ಚರಿ:
(೧) ದುರ್ಯೋಧನನ ಚಿತ್ರಣ – ಕಂದು ಮೋರೆಯ ರಾಯ