ಪದ್ಯ ೪: ಸಂಜಯನ ಗುರುವರ್ಯರಾರು?

ಬಳಿಕ ಭೀಮನ ಗದೆಯಲಿಭ ಶತ
ವಳಿದರೊಬ್ಬನೆ ತಿರುಗಿ ಹಾಯ್ದನು
ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ
ತಲೆಗೆ ಬಂದುದು ತನಗೆಯಾಖ್ಷನ
ಸುಳಿದರೆಮ್ಮಾರಾಧ್ಯ ವರ ಮುನಿ
ತಿಲಕ ವೇದವ್ಯಾಸದೇವರು ಕೃಪೆಯ ಭಾರದಲಿ (ಗದಾ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಬಳಿಕ ಭೀಮನು ತನ್ನ ಗದೆಯಿಂದ ನೂರಾನೆಗಳನ್ನು ಕೊಲ್ಲಲು ಅರಸನು ಹಿಮ್ಮೆಟ್ತಿ ರಣರಂಗದ ಕೋಲಾಹಲದ ನಡುವೆ ಕೆಸರ್ನ್ನು ತುಳಿಯುತ್ತಾ ಹೋದನು. ಅವನು ಕಾಣದಿರಲು ಹುಡುಕುತ್ತಾ ನಾನು ಬಂದೆ. ಆಗ ನನ್ನ ತಲೆಗೆ ಆಪತ್ತು ಬರಲು, ನಮ್ಮ ಆರಾಧ್ಯಗುರುಗಳಾದ ವೇದವ್ಯಾಸರು ಕರುಣೆಯಿಂದ ಅಲ್ಲಿಗೆ ಬಂದರು.

ಅರ್ಥ:
ಬಳಿಕ: ನಂತರ; ಗದೆ: ಮುದ್ಗರ; ಇಭ: ಆನೆ; ಶತ: ನೂರು; ಅಳಿ: ಸಾವು; ತಿರುಗು: ಓಡಾಡು; ಹಾಯ್ದು: ಹೊಡೆ; ಕೊಳುಗುಳ: ಯುದ್ಧ; ಕೋಳ್ಗುದಿ: ತಕ ತಕ ಕುದಿ, ಅತಿ ಸಂತಾಪ; ಕೋಲಾಹಲ: ಗೊಂದಲ; ಕೆಸರು: ರಾಡಿ; ತಲೆ: ಶಿರ; ಕ್ಷಣ: ಸಮಯ; ಸುಳಿ: ಕಾಣಿಸಿಕೊಳ್ಳು; ಆರಾಧ್ಯ: ಪೂಜನೀಯ; ವರ: ಶ್ರೇಷ್ಠ; ಮುನಿ: ಋಷಿ; ತಿಲಕ: ಶ್ರೇಷ್ಠ; ಕೃಪೆ: ದಯೆ; ಭಾರ: ಹೊರೆ;

ಪದವಿಂಗಡಣೆ:
ಬಳಿಕ +ಭೀಮನ +ಗದೆಯಲ್+ಇಭ +ಶತವ್
ಅಳಿದರ್+ಒಬ್ಬನೆ +ತಿರುಗಿ +ಹಾಯ್ದನು
ಕೊಳುಗುಳದ +ಕೋಳ್ಗುದಿಯ +ಕೋಲಾಹಲದ +ಕೆಸರಿನಲಿ
ತಲೆಗೆ +ಬಂದುದು +ತನಗೆ+ಆ+ಕ್ಷಣ
ಸುಳಿದರ್+ಎಮ್ಮಾರಾಧ್ಯ +ವರ+ ಮುನಿ
ತಿಲಕ +ವೇದವ್ಯಾಸ+ದೇವರು +ಕೃಪೆಯ +ಭಾರದಲಿ

ಅಚ್ಚರಿ:
(೧) ಕ ಕಾರದ ಸಾಲು ಪದ – ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ

ಪದ್ಯ ೭: ಅಭಿಮನ್ಯುವಿನ ಯುದ್ಧವು ಹೇಗೆ ನಡೆಯಿತು?

ಎಡದಲೌಕುವ ರಾವುತರ ವಂ
ಗಡವನೆಚ್ಚನು ಸಮ್ಮುಖದೊಳವ
ಗಡಿಸುವಿಭ ಕೋಟಿಗಳ ಕೊಂದನು ಸರಳ ಸಾರದಲಿ
ಕಡುಗಿ ಬಲದಲಿ ಕವಿವ ರಥಿಕರ
ಕೆಡಹಿದನು ಕಾಲಾಳು ತೇರಿನ
ಗಡಣ ಹುಡಿಹುಡಿಯಾಯ್ತೆನಲು ಸವರಿದನು ಪರಬಲವ (ದ್ರೋಣ ಪರ್ವ, ೫ ಸಂಧಿ, ೭ ಪದ್ಯ)

ತಾತ್ಪರ್ಯ:
ಎಡದಲ್ಲಿ ನುಗ್ಗಿದ ರಾವುತರ ಗುಂಪನ್ನು ಹೊಡೆದನು. ಇದಿರಿಗೆ ಬರುವ ಲೆಕ್ಕವಿಲ್ಲದಷ್ಟು ಆನೆಗಳನ್ನು ಬಾಣಗಳಿಂದ ಕೊಂದನು. ರಥಿಕರನ್ನು ಕಾಲಾಳುಗಳನ್ನು ತೇರುಗಳನ್ನು ಪುಡಿಪುಡಿ ಮಾಡಿದನು.

ಅರ್ಥ:
ಎಡ: ವಾಮಭಾಗ; ಔಕು: ನೂಕು, ತಳ್ಳು; ರಾವುತ: ಕುದುರೆ ಸವಾರ, ಅಶ್ವಾರೋಹಿ; ವಂಗಡ: ಗುಂಪು, ಸಮೂಹ; ಎಚ್ಚು: ಬಾಣ ಪ್ರಯೋಗ ಮಾಡು; ಸಮ್ಮುಖ: ಎದುರು; ಅವಗಡಿಸು: ಕಡೆಗಣಿಸು; ಇಭ: ಆನೆ; ಕೋಟಿ: ಅಸಂಖ್ಯವಾದುದು; ಕೊಂದು: ಸಾಯಿಸು; ಸರಳ: ಬಾಣ; ಸಾರ: ರಥವನ್ನು ನಡೆಸುವವನು; ಕಡುಗು: ಶಕ್ತಿಗುಂದು; ಬಲ: ಶಕ್ತಿ; ಕವಿ: ಆವರಿಸು; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಕೆಡಹು: ನಾಶಮಾಡು; ಕಾಲಾಳು: ಸೈನಿಕರು; ತೇರು: ಬಂಡಿ; ಗಡಣ: ಕೂಡಿಸುವಿಕೆ; ಹುಡಿ: ಪುಡಿ; ಸವರು: ನಾಶಮಾಡು; ಪರಬಲ: ವೈರಿಸೈನ್ಯ;

ಪದವಿಂಗಡಣೆ:
ಎಡದಲ್+ಔಕುವ +ರಾವುತರ +ವಂ
ಗಡವನ್+ಎಚ್ಚನು +ಸಮ್ಮುಖದೊಳ್+ಅವ
ಗಡಿಸುವ್+ಇಭ +ಕೋಟಿಗಳ+ ಕೊಂದನು +ಸರಳ+ ಸಾರದಲಿ
ಕಡುಗಿ +ಬಲದಲಿ+ ಕವಿವ +ರಥಿಕರ
ಕೆಡಹಿದನು +ಕಾಲಾಳು +ತೇರಿನ
ಗಡಣ+ ಹುಡಿಹುಡಿಯಾಯ್ತ್+ಎನಲು +ಸವರಿದನು +ಪರಬಲವ

ಅಚ್ಚರಿ:
(೧) ಕೊಂದನು, ಕೆಡಹು, ಅವಗಡಿಸು, ಹುಡಿ, ಸವರು – ಸಾಮ್ಯಾರ್ಥ ಪದಗಳು
(೨) ಆನೆಯನ್ನು ಕೊಂದ ಪರಿ – ಇಭ ಕೋಟಿಗಳ ಕೊಂದನು ಸರಳ ಸಾರದಲಿ

ಪದ್ಯ ೫೩: ಸುಪ್ರತೀಕವು ಏಕೆ ಆಯಾಸಗೊಂಡಿತು?

ಮತ್ತೆ ಖಾತಿಯೊಳಂಕುಶದಿನೊಡೆ
ಯೊತ್ತಿ ಬಿಟ್ಟನು ಗಜವನರ್ಜುನ
ನತ್ತಲಿಭ ತೂಳಿದಡೆ ತಿರುಹಿದನಸುರರಿಪು ರಥವ
ಇತ್ತ ಬಲದಲಿ ಬಲಕೆ ಮೊಗವಿಡ
ಲತ್ತ ಲೆಡದಲಿ ಮರಳಲಲ್ಲಿಂ
ದತ್ತ ತಿರುಗಿಸಿ ಬಳಲಿಸಿದನಸುರಾರಿ ದಿಗ್ಗಜವ (ದ್ರೋಣ ಪರ್ವ, ೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ಭಗದತ್ತನು ಕೋಪಗೊಂಡು ಅಂಕುಶದಿಂದ ಆನೆಯನ್ನು ಮತ್ತೆ ತಿವಿದು ಅರ್ಜುನನ ರಥದ ಮೇಲೆ ಬಿಟ್ಟನು. ಆಗ ಕೃಷ್ಣನು ಆನೆಯು ಮೇಲೆ ಬಾರದಂತೆ ರಥವನ್ನು ತಿರುಗಿಸಿದನು. ಆನೆಯನ್ನು ಬಲಕ್ಕೆ ಬಿಟ್ಟಾಗ ಏಡಕ್ಕೂ, ಎಡಕ್ಕೆ ಮುಖಮಾಡಿದರೆ ಬಲಕ್ಕೂ ರಥವನ್ನು ತಿರುಗಿಸಿ ಸುಪ್ರತೀಕವನ್ನು ಆಯಾಸ ಗೊಳಿಸಿದನು.

ಅರ್ಥ:
ಖಾತಿ: ಕೋಪ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಒಡೆ: ಬಿರಿ; ಒತ್ತು: ತಿವಿ; ಗಜ: ಆನೆ; ಇಭ: ಆನೆ; ತೂಳು: ಬೆನ್ನಟ್ಟು, ಹಿಂಬಾಲಿಸು; ತಿರುಹು: ತಿರುಗಿಸು; ಅಸುರರಿಪು: ಕೃಷ್ಣ; ರಥ: ಬಂಡಿ; ಬಲ: ಶಕ್ತಿ; ಮೊಗ: ಮುಖ; ಮರಳು: ಹಿಂದಿರುಗಿಸು; ತಿರುಗು: ವೃತ್ತಾಕಾರವಾಗಿ ಚಲಿಸು; ಬಳಲು: ಆಯಾಸ, ದಣಿವು; ದಿಗ್ಗಜ: ದಿಕ್ಕರಿ, ಭೂಭಾಗವನ್ನು ಹೊತ್ತಿರುವ ಎಂಟು ದಿಕ್ಕಿನ ಆನೆಗಳು;

ಪದವಿಂಗಡಣೆ:
ಮತ್ತೆ +ಖಾತಿಯೊಳ್+ಅಂಕುಶದಿನ್+ಒಡೆ
ಒತ್ತಿ +ಬಿಟ್ಟನು +ಗಜವನ್+ಅರ್ಜುನನ್
ಅತ್ತಲ್+ಇಭ +ತೂಳಿದಡೆ +ತಿರುಹಿದನ್+ಅಸುರರಿಪು+ ರಥವ
ಇತ್ತ +ಬಲದಲಿ +ಬಲಕೆ +ಮೊಗವಿಡಲ್
ಅತ್ತಲ್+ಎಡದಲಿ +ಮರಳಲ್+ಅಲ್ಲಿಂ
ದತ್ತ+ ತಿರುಗಿಸಿ +ಬಳಲಿಸಿದನ್+ಅಸುರಾರಿ +ದಿಗ್ಗಜವ

ಅಚ್ಚರಿ:
(೧) ಗಜ, ಇಭ – ಸಮಾನಾರ್ಥಕ ಪದ