ಪದ್ಯ ೧೬: ಕೃಷ್ಣನು ಯಾವ ವಿದ್ಯೆಯಲ್ಲಿ ನಿಸ್ಸೀಮನೆಂದು ಭೂರಿಶ್ರವನು ಹೇಳಿದನು?

ಅರಿದರೀ ವಿದ್ಯವನು ಕೃಷ್ಣನೊ
ಳರಿದೆಯಾಗಲು ಬೇಕು ಕಪಟದ
ನೆರೆವಣಿಗೆಗಳನು ಅರಿಯರಿಂದ್ರ ದ್ರೋಣ ಶಂಕರರು
ಮರೆ ಮರೆಯಲಿರಿಗಾರನಸುರರ
ಮುರಿದನೆಂಬರು ಕುಹಕತಂತ್ರದ
ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟರಕಟೆಂದ (ದ್ರೋಣ ಪರ್ವ, ೧೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ನೀನು ಈ ವಿದ್ಯೆಯನು ಅರಿತದ್ದು ಕೃಷ್ಣನಿಂದಲೇ ಇರಬೇಕು. ಕಪಟ ವಿದ್ಯೆಗಳನ್ನು ಇಂದ್ರ, ದ್ರೋಣ, ಶಿವರು ಅರಿಯರು, ಕೃಷ್ಣನು ಮರೆಯಿರಿಗಾರ, ಮೋಸದ ತಂತ್ರಗಳನ್ನು ಮಾಡುವ ಇವನ ಸಂಗದಿಂದ ನೀವು ಅಯ್ಯೋ ಹಾಳಾದಿರಿ ಎಂದು ಭೂರಿಶ್ರವನು ಹೇಳಿದನು.

ಅರ್ಥ:
ಅರಿ: ತಿಳಿ; ವಿದ್ಯ: ಜ್ಞಾನ; ಕಪಟ: ಮೋಸ; ನೆರವಣಿಗೆ: ಪರಿಪೂರ್ಣತೆ, ಒಳ್ತನ; ಶಂಕರ: ಶಿವ; ಮರೆ: ಗುಟ್ಟು, ನೆನಪಿನಿಂದ ದೂರ ಮಾಡು; ಇರಿ: ಕರೆ, ಜಿನುಗು; ಅಸುರರ: ರಾಕ್ಷಸ; ಮುರಿ: ಸೀಳು; ಕುಹಕ: ಮೋಸ; ತಂತ್ರ: ಉಪಾಯ; ಹೊರಿಗೆ: ಹೊಣೆಗಾರಿಕೆ, ಭಾರ; ಸಂಗ: ಜೊತೆ; ಕೆಡು: ಹಾಳು; ಅಕಟ: ಅಯ್ಯೋ;

ಪದವಿಂಗಡಣೆ:
ಅರಿದರ್+ಈ+ ವಿದ್ಯವನು+ ಕೃಷ್ಣನೊಳ್
ಅರಿದೆಯಾಗಲು+ ಬೇಕು +ಕಪಟದ
ನೆರೆವಣಿಗೆಗಳನು +ಅರಿಯರ್+ಇಂದ್ರ +ದ್ರೋಣ +ಶಂಕರರು
ಮರೆ +ಮರೆಯಲಿರಿಗಾರನ್+ಅಸುರರ
ಮುರಿದನೆಂಬರು +ಕುಹಕ+ತಂತ್ರದ
ಹೊರಿಗೆವಾಳನ +ಸಂಗದಲಿ+ ನೀವ್+ ಕೆಟ್ಟರ್+ಅಕಟೆಂದ

ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಕುಹಕತಂತ್ರದ ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟರಕಟೆಂದ

ಪದ್ಯ ೮: ಕರ್ಣನನ್ನು ಇಂದ್ರನು ಹೇಗೆ ಕೊಂಡಾಡಿದನು?

ದೇವ ದಾನವ ಯಕ್ಷ ಗಂಧ
ರ್ವಾವಳಿಯ ಸುಭಟರಲಿ ಬಳಿಕಿ
ನ್ನಾವ ಸಾಹಸಿ ಧೀರನೆಂಬುದನರಿದುದಿಲ್ಲವಲ
ಭಾವಿಸಲು ಸರ್ವಾಂಗ ರಕ್ತದ
ಪೂವಲಿಯ ಮಾಡಿರುವ ವೀರರ
ದೇವ ನೀನೆಂದಿಂದ್ರ ಕೊಂಡಾಡಿದನು ಭಾನುಜನ (ಅರಣ್ಯ ಪರ್ವ, ೨೩ ಸಂಧಿ, ೮ ಪದ್ಯ)

ತಾತ್ಪರ್ಯ:
ದೇವತೆಗಳು, ದಾನವರು, ಯಕ್ಷರು, ಗಂಧರ್ವರು ಇವರಲ್ಲಿ ನಿನ್ನಂತಹ ಸಾಹಸಿಯೂ ಧೀರನೂ ಇಲ್ಲವೆಂಬುದು ನನಗೆ ಗೊತ್ತಿರಲಿಲ್ಲ. ದೇಹಕ್ಕೆ ರಕ್ತದ ಹೂಮಾಲೆಯ ಅಲಂಕಾರವನ್ನೇ ಮಾಡಿರುವ ವೀರ ನೀನೆಂದು ಇಂದ್ರನು ಕರ್ಣನನ್ನು ಕೊಂಡಾಡಿದನು.

ಅರ್ಥ:
ದೇವ: ಸುರರು; ದಾನವ: ರಾಕ್ಷಸ; ಗಂಧರ್ವ: ಖಚರು; ಆವಳಿ: ಗುಂಪು; ಸುಭಟ: ವೀರ, ಶ್ರೇಷ್ಠನಾದ ಸೈನಿಕ; ಬಳಿಕ: ನಂತರ; ಸಾಹಸಿ: ಶೂರ; ಧೀರ: ಧೈರ್ಯವಂತ; ಅರಿ: ತಿಳಿ; ಭಾವಿಸು: ತಿಳಿ, ಗೊತ್ತುಪಡಿಸು; ಸರ್ವಾಂಗ: ಎಲ್ಲಾ ಅಂಗಗಳು; ರಕ್ತ: ನೆತ್ತರು; ಪೂ: ಹೂವು; ಪೂವಲಿ: ಹೂವಿನ ಅಲೆ; ವೀರ: ಶೂರ; ಕೊಂಡಾಡು: ಹೊಗಲು; ಭಾನುಜ: ಸೂರ್ಯನ ಮಗ;

ಪದವಿಂಗಡಣೆ:
ದೇವ +ದಾನವ +ಯಕ್ಷ +ಗಂಧ
ರ್ವ+ಆವಳಿಯ +ಸುಭಟರಲಿ+ ಬಳಿಕಿ
ನ್ನಾವ +ಸಾಹಸಿ +ಧೀರನೆಂಬುದನ್+ಅರಿದುದಿಲ್ಲವಲ
ಭಾವಿಸಲು +ಸರ್ವಾಂಗ +ರಕ್ತದ
ಪೂವಲಿಯ +ಮಾಡಿರುವ +ವೀರರ
ದೇವ +ನೀನೆಂದ್+ಇಂದ್ರ +ಕೊಂಡಾಡಿದನು +ಭಾನುಜನ

ಅಚ್ಚರಿ:
(೧) ಕರ್ಣನ ದೇಹದ ಸ್ಥಿತಿಯನ್ನು ವರ್ಣಿಸುವ ಪರಿ – ಭಾವಿಸಲು ಸರ್ವಾಂಗ ರಕ್ತದಪೂವಲಿಯ ಮಾಡಿರುವ ವೀರರ ದೇವ

ಪದ್ಯ ೩೭: ಕೌರವನನ್ನು ಯಾರ ಆಜ್ಞೆಯ ಮೇಲೆ ಬಂಧಿಸಲಾಗಿತ್ತು?

ಕೋಲ ಬರಿದೇ ಬೀಯ ಮಾಡದಿ
ರೇಳು ಫಲುಗುಣ ಮರಳು ನೀ ದಿಟ
ಕೇಳುವರೆ ನಾವಿವನ ಕಟ್ಟಿದೆವಿಂದ್ರನಾಜ್ಞೆಯಲಿ
ಪಾಲಿಸಾ ನಿಮ್ಮಯ್ಯ ಬೆಸಸಿದ
ನೇಳಿಸದೆ ಕೇಳೆನಲು ಕೆಂಗರಿ
ಗೋಲ ತೂಗುತ ಪಾರ್ಥನುಡಿದನು ಚಿತ್ರಸೇನಂಗೆ (ಅರಣ್ಯ ಪರ್ವ, ೨೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ವ್ಯರ್ಥವಾಗಿ ನೀನು ಬಾಣಗಳನ್ನು ನಷ್ಟಮಾಡಿಕೊಳ್ಳ ಬೇಡ. ನೀನು ಹಿಂದಿರುಗು, ನಿಮ್ಮ ತಂದೆಯಾದ ಇಂದ್ರನ ಆಜ್ಞೆಯ ಮೇಲೆ ನಾವಿವನನ್ನು ಬಂಧಿಸಿದ್ದೇವೆ. ನಿಮ್ಮ ತಂದೆಯ ಆಜ್ಞೆಯನ್ನು ಕೇಳು ಎಂದು ಚಿತ್ರಸೇನನು ಹೇಳಲು, ಅರ್ಜುನನು ಕೆಂಪಾದ ಬಾಣವನ್ನು ತೆಗೆದು ಕೈಯಲ್ಲಿ ತೂಗುತ್ತಾ ಅವನಿಗೆ ಹೀಗೆಂದನು.

ಅರ್ಥ:
ಕೋಲ: ಬಾಣ; ಬರಿದು: ವ್ಯರ್ಥ; ಬೀಯ: ನಷ್ಟ, ಹಾಳು; ಮರಳು: ಹಿಂದಿರುಗು; ದಿಟ: ಸತ್ಯ; ಕೇಳು: ಆಲಿಸು; ಕಟ್ಟು: ಬಂಧಿಸು; ಇಂದ್ರ: ಶಕ್ರ; ಆಜ್ಞೆ: ಅಪ್ಪಣೆ; ಪಾಲಿಸು: ರಕ್ಷಿಸು, ಕಾಪಾಡು; ಅಯ್ಯ: ತಂದೆ; ಬೆಸ: ಕೆಲಸ, ಕಾರ್ಯ; ಕೆಂಗರಿಕೋಲು: ಕೆಂಪಾದ ಬಾಣ; ತೂಗು: ಅಲ್ಲಾಡಿಸು; ನುಡಿ: ಮಾತಾಡು;

ಪದವಿಂಗಡಣೆ:
ಕೋಲ +ಬರಿದೇ +ಬೀಯ +ಮಾಡದಿರ್
ಏಳು+ ಫಲುಗುಣ+ ಮರಳು+ ನೀ +ದಿಟ
ಕೇಳುವರೆ +ನಾವಿವನ +ಕಟ್ಟಿದೆವ್+ಇಂದ್ರನಾಜ್ಞೆಯಲಿ
ಪಾಲಿಸಾ +ನಿಮ್ಮಯ್ಯ +ಬೆಸಸಿದನ್
ಏಳಿಸದೆ +ಕೇಳ್+ಎನಲು +ಕೆಂಗರಿ
ಕೋಲ +ತೂಗುತ +ಪಾರ್ಥ+ನುಡಿದನು +ಚಿತ್ರಸೇನಂಗೆ

ಅಚ್ಚರಿ:
(೧) ಕೋಲ – ೧, ೬ ಸಾಲಿನ ಮೊದಲ ಪದ
(೨) ಫಲುಗುಣ, ಪಾರ್ಥ – ಅರ್ಜುನನನ್ನು ಕರೆದ ಪರಿ

ಪದ್ಯ ೬೩: ನಹುಷನು ಇಂದ್ರಪದವಿಯನ್ನು ಹೇಗೆ ಪಡೆದನು?

ಮಾಡಿದೆನು ಶತಮಖವನದು ಹೋ
ಗಾಡಿ ತಿಂದ್ರನನಲ್ಲಿ ತನಗೆಡೆ
ಮಾಡಿತರಮನೆ ಕಂಡುದಾ ತೆತ್ತೀಸಕೋಟಿಗಳು
ನಾಡು ಬೀಡೆನಗಾಯ್ತು ವಶ ಖಯ
ಖೋಡಿಯಿಲ್ಲದೆ ಶಕ್ರಪದದಲಿ
ರೂಢಿಸಿದೆನದನೇನ ಹೇಳುವೆನೆನುತ ಬಿಸುಸುಯ್ದ (ಅರಣ್ಯ ಪರ್ವ, ೧೪ ಸಂಧಿ, ೬೩ ಪದ್ಯ)

ತಾತ್ಪರ್ಯ:
ನಹುಷನು ತನ್ನ ಮಾತನ್ನು ಮುಂದುವರೆಸುತ್ತಾ, ನೂರು ಯಾಗಗಳನ್ನು ನಾನು ಮಾಡಿದೆ, ಆದುದರಿಂದ ನಾನೇ ಇಂದ್ರನಾದೆ. ಮೂವತ್ತು ಮೂರುಕೋಟಿ ದೇವತೆಗಳು ಬಂದು ನನ್ನನ್ನು ಕಂಡರು. ಸ್ವರ್ಗ ರಾಜ್ಯ ಅಮರಾವತಿ ನಗರಗಳು ನನ್ನದಾದವು, ಹಿಂಜರಿಯದೇ ನನ್ನ ಅಧಿಕಾರವನ್ನು ಸಮರ್ಥವಾಗಿ ನಡೆಸಿದೆ.

ಅರ್ಥ:
ಮಾಡು: ಆಚರಿಸು; ಶತ: ನೂರು; ಮಖ: ಯಜ್ಞ; ಹೋಗಾಡು: ಹಾಳುಮಾಡಿಕೊಳ್ಳು; ಇಂದ್ರ: ದೇವೇಂದ್ರ, ಶಕ್ರ; ಎಡೆ: ಸ್ಥಾನ, ಅವಕಾಶ; ಅರಮನೆ: ರಾಜರ ಆಲಯ; ಕಂಡು: ನೋಡು; ತೆತ್ತು: ನೀಡು; ಕೋಟಿ: ಅಸಂಖ್ಯಾತ; ನಾಡು: ನೆಲ; ಬೀಡು: ವಾಸಸ್ಥಾನ; ವಶ: ಅಧೀನ; ಖಯಖೋಡಿ: ಅಳುಕು, ಅಂಜಿಕೆ; ಶಕ್ರ: ಇಂದ್ರ; ಪದ: ಪದವಿ; ರೂಢಿ: ಪ್ರಸಿದ್ಧ, ಜಗತ್ತು; ಬಿಸುಸುಯ್: ನಿಟ್ಟುಸಿರುಬಿಡು;

ಪದವಿಂಗಡಣೆ:
ಮಾಡಿದೆನು +ಶತ+ಮಖವನ್+ಅದು +ಹೋ
ಗಾಡಿತ್+ಇಂದ್ರನನ್+ಅಲ್ಲಿ+ ತನಗೆಡೆ
ಮಾಡಿತ್+ಅರಮನೆ+ ಕಂಡುದಾ +ತೆತ್ತೀಸ+ಕೋಟಿಗಳು
ನಾಡು +ಬೀಡೆನಗಾಯ್ತು +ವಶ +ಖಯ
ಖೋಡಿ+ಯಿಲ್ಲದೆ +ಶಕ್ರ+ಪದದಲಿ
ರೂಢಿಸಿದೆನ್+ಅದನೇನ+ ಹೇಳುವೆನೆನುತ +ಬಿಸುಸುಯ್ದ

ಅಚ್ಚರಿ:
(೧) ಇಂದ್ರ, ಶಕ್ರ – ಸಮನಾರ್ಥಕ ಪದ

ಪದ್ಯ ೩೫: ಬೃಹಸ್ಪತಿಯು ಇಂದ್ರನಿಗೆ ಯಾವ ಉಪದೇಶವ ನೀಡಿದನು?

ಧರಣಿಪತಿ ಚಿತ್ತವಿಸು ಸ್ವರ್ಗದ
ಲೊರೆದನಿಂದ್ರಂಗಮರ ಗುರು ದೇ
ವರಲಿ ಸಂಕಲ್ಪವನು ಕೃತ ವಿದ್ಯರಲಿ ವಿನಯವನು
ಹಿರಿಯರಲಿ ಸಂಭಾವನೆಯ ಸಂ
ಹರಣಪದವನು ಪಾಪ ಕಾರ್ಯದೊ
ಳಿರದೆ ಮಾಡುವುದೆಂಬ ನಾಲ್ಕನು ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ವಿದುರನು ನಾಲ್ಕು ಮುಖ್ಯವಾದ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು, ಇದನ್ನು ದೇವಗುರು ಬೃಹಸ್ಪತಿಯೇ ಇಂದ್ರನಿಗೆ ಹೇಳಿದ್ದಾನೆ, ಅವು: ದೇವರ ಆರಾಧನೆಯನ್ನು ಸಂಕಲ್ಪ ಪೂರ್ವಕವಾಗಿ ಮಾಡಬೇಕು, ಗುರುಗಳಲ್ಲಿ ವಿನಯವನ್ನು ಪ್ರದರ್ಶಿಸಬೇಕು, ಹಿರಿಯರನ್ನು ಗೌರವಿಸಬೇಕು ಮತ್ತು ಪಾಪಕಾರ್ಯವನ್ನು ಮಾಡಬಾರದು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಚಿತ್ತ: ಮನಸ್ಸು; ಸ್ವರ್ಗ: ನಾಕ; ಒರೆ: ಶೋಧಿಸಿ ನೋಡು, ಹೇಳು, ನಿರೂಪಿಸು; ಅಮರ: ದೇವತೆ; ಗುರು: ಆಚಾರ್ಯ; ದೇವ: ಈಶ್ವರ; ಸಂಕಲ್ಪ: ನಿರ್ಧಾರ, ನಿರ್ಣಯ; ಕೃತ: ಪುಣ್ಯವಂತ; ವಿದ್ಯ: ಜ್ಞಾನ; ವಿನಯ: ಒಳ್ಳೆಯತನ, ಸೌಜನ್ಯ; ಹಿರಿಯ: ದೊಡ್ಡವರು; ಸಂಭಾವನೆ: ಮನ್ನಣೆ; ಸಂಹರಣ: ಪ್ರಳಯ, ಅಳಿವು; ಪದ: ನಿಲುವು;

ಪದವಿಂಗಡಣೆ:
ಧರಣಿಪತಿ +ಚಿತ್ತವಿಸು +ಸ್ವರ್ಗದಲ್
ಒರೆದನ್+ಇಂದ್ರಗ್+ಅಮರ +ಗುರು +ದೇ
ವರಲಿ +ಸಂಕಲ್ಪವನು +ಕೃತ ವಿದ್ಯರಲಿ+ ವಿನಯವನು
ಹಿರಿಯರಲಿ +ಸಂಭಾವನೆಯ +ಸಂ
ಹರಣಪದವನು +ಪಾಪ +ಕಾರ್ಯದೊಳ್
ಇರದೆ +ಮಾಡುವುದೆಂಬ+ ನಾಲ್ಕನು +ರಾಯ +ಕೇಳೆಂದ

ಅಚ್ಚರಿ:
(೧) ಧರಣಿಪತಿ, ರಾಯ – ಸಮನಾರ್ಥಕ ಪದ
(೨) ಬೃಹಸ್ಪತಿಯನ್ನು ಅಮರಗುರು ಎಂದು ಕರೆದಿರುವುದು

ಪದ್ಯ ೨೮: ಧರ್ಮರಾಯನ ಆಸ್ಥಾನದ ವೈಭವ ಹೇಗಿತ್ತು?

ಸಾಲ ಮಕುಟದ ರತ್ನ ರಶ್ಮಿಯ
ದಾಳಿ ಗೆಲಿದುದು ತಮವನಿನ್ನಾ
ಮೇಲು ಪೋಗಿನ ಕಿತ್ತ ಖಡ್ಗಕೆ ಪ್ರಭೆಯ ಹಂಗೇಕೆ
ಮೇಲೆ ಕೈ ದೀವಿಗೆಗಳಧಿಕ
ಜ್ವಾಲೆಯದು ಪುನರುಕ್ತವೆನೆ ಭೂ
ಪಾಲನೋಲಗವೆಸೆದುದಿಂದ್ರನ ಸಭೆಗೆ ವೆಗ್ಗಳಿಸಿ (ಉದ್ಯೋಗ ಪರ್ವ, ೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ಆಸ್ಥಾನದಲ್ಲಿ ರಾಜರ ಮತ್ತುಳಿದವರ ಸಾಲು ಸಾಲು ಕಿರೀಟಗಳ ರತ್ನದ ಪ್ರಭೆಯು ಕತ್ತಲನ್ನು ಗೆದ್ದಿತು. ಇನ್ನು ಒರೆಯಿಂದ ಹಿರಿದ ಖಡ್ಗಗಳಿಗೆ ಬೆಳಕಿನ ಹಂಗೇಕೆ? ಇಷ್ಟರ ಮೇಲೆ ಆಸ್ಥಾನದಲ್ಲಿದ್ದ ಕೈ ದೀವಿಗೆಗಳ ಬೆಳಕು ಅನವಶ್ಯಕ ವೆನಿಸುವಂತಿತ್ತು. ಇಂದ್ರನ ಸಭೆಯ ವೈಭವವನ್ನು ಯುಧಿಷ್ಠಿರನ ಆಸ್ಥಾನದ ವೈಭವವು ಮೀರಿಸಿತ್ತು.

ಅರ್ಥ:
ಸಾಲ: ಸಾಲು, ಆವಳಿ; ಮಕುಟ: ಕಿರೀಟ; ರತ್ನ: ಬೆಲೆಬಾಳುವ ಹವಳ; ರಶ್ಮಿ: ಕಾಂತಿ; ದಾಳಿ: ಮುತ್ತಿಗೆ; ಗೆಲಿದು: ಜಯ; ತಮ: ಕತ್ತಲೆ; ಮೇಲು: ಮುಂದೆ; ಪೋಗು: ಹೋಗು; ಪೋಗಾಡು: ನೀಗು, ನಷ್ಟಮಾಡಿಕೊಳ್ಳು; ಕಿತ್ತ: ತೆಗೆದು ಹಾಕಿದ; ಖಡ್ಗ: ಕತ್ತಿ; ಪ್ರಭೆ: ಕಾಂತಿ; ಹಂಗು:ದಾಕ್ಷಿಣ್ಯ; ದೀವಿಗೆ:ದೀಪಿಕೆ, ಸೊಡರು; ಅಧಿಕ: ಹೆಚ್ಚಳ; ಜ್ವಾಲೆ: ಬೆಂಕಿ; ಪುನರುಕ್ತ: ಮತ್ತೆ ಹೇಳು; ಭೂಪಾಲ: ರಾಜ; ಓಲಗ: ಸಭೆ; ವೆಗ್ಗಳ: ಶ್ರೇಷ್ಠ;

ಪದವಿಂಗಡಣೆ:
ಸಾಲ +ಮಕುಟದ +ರತ್ನ +ರಶ್ಮಿಯ
ದಾಳಿ +ಗೆಲಿದುದು +ತಮವನ್+ಇನ್ನಾ
ಮೇಲು +ಪೋಗಿನ +ಕಿತ್ತ +ಖಡ್ಗಕೆ +ಪ್ರಭೆಯ+ ಹಂಗೇಕೆ
ಮೇಲೆ +ಕೈ +ದೀವಿಗೆಗಳಧಿಕ
ಜ್ವಾಲೆಯದು +ಪುನರುಕ್ತವ್+ಎನೆ+ ಭೂ
ಪಾಲನ್+ಓಲಗವ್+ಎಸೆದುದ್+ಇಂದ್ರನ +ಸಭೆಗೆ+ ವೆಗ್ಗಳಿಸಿ

ಅಚ್ಚರಿ:
(೧) ಮಕುಟದ ಪ್ರಭೆಯ ವರ್ಣನೆ – ಮಕುಟದ ರತ್ನ ರಶ್ಮಿಯ ದಾಳಿ ಗೆಲಿದುದು ತಮವ

ಪದ್ಯ ೧೫: ಶಲ್ಯನು ಯಾರ ಕಥೆಯನ್ನು ಹೇಳಿದನು?

ಆದೊಡೇನೆಲೆ ಕಂದ ತಪ್ಪದು
ಮೇದಿನಿಯ ಸಿರಿ ನಿನಗೆ ಸತ್ಯವ
ಕಾದು ಹದಿಮೂರಬುದ ನವೆದಿರಿ ಮುಂದೆ ಲೇಸಹುದು
ಕಾದಿ ವೃತ್ರಾಸುರನ ಮುರಿದಪ
ವಾದದೊಳು ಸಿರಿ ಹೋಗಿ ದುಃಖಿತ
ನಾದನಿಂದ್ರನು ಮತ್ತೆ ಬದುಕಿದ ಶಚಿಯ ದೆಸೆಯಿಂದ (ಉದ್ಯೋಗ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶಲ್ಯನು ಪಾಂಡವರೊಡನೆ ಮಾತನಾಡುತ್ತಾ, ಕಂದಾ ನಿನಗೆ ಭೂಮಿಯ ದೊರೆತನ ಸಿಕ್ಕೇ ಸಿಕ್ಕುತ್ತದೆ. ಕೊಟ್ಟ ಮಾತಿನಂತೆ ಹದಿಮೂರು ವರ್ಷ ಕಷ್ಟಪಟ್ಟಿರಿ. ಮುಂದೆ ಒಳ್ಳೆಯದಾತುತ್ತದೆ. ಇದಕ್ಕೆ ಒಂದು ದೃಷ್ಟಾಂತವಿದೆ. ವೃತ್ರಾಸುರನನ್ನು ಸಂಹರಿಸಿದುದರಿಂದ ದೇವೇಂದ್ರನು ಇಂದ್ರ ಪದವಿಯನ್ನು ಕಳೆದುಕೊಂಡು, ದುಃಖಿತನಾದನು. ಶಚಿಯ ಪಾತಿವ್ರತ್ಯದಿಂದ ಅವನಿಗೆ ಮತ್ತೆ ಸುದಿನಗಳು ಬಂದವು.

ಅರ್ಥ:
ಕಂದ: ಮಗು; ತಪ್ಪದು: ಬಿಡದು; ಮೇದಿನಿ: ಭೂಮಿ; ಸಿರಿ: ಐಶ್ವರ್ಯ; ಸತ್ಯ: ನಿಜ; ಕಾದು: ತಾಳು; ನವೆದು: ಸವೆದು, ತಳ್ಳು; ಲೇಸು: ಒಳ್ಳೆಯ; ಕಾದಿ: ಜಗಳ; ಅಸುರ: ರಾಕ್ಷಸ; ವಾದ: ಮಾತು, ಸಂಭಾಷಣೆ; ದುಃಖ: ಖೇದ; ಬದುಕು: ಜೀವ; ದೆಸೆ: ಕಾರಣ;ಅಪವಾದ: ನಿಂದೆ, ಆರೋಪ;

ಪದವಿಂಗಡಣೆ:
ಆದೊಡೇನ್+ಎಲೆ +ಕಂದ +ತಪ್ಪದು
ಮೇದಿನಿಯ +ಸಿರಿ +ನಿನಗೆ+ ಸತ್ಯವ
ಕಾದು +ಹದಿಮೂರಬುದ+ ನವೆದಿರಿ+ ಮುಂದೆ +ಲೇಸಹುದು
ಕಾದಿ +ವೃತ್ರಾಸುರನ+ ಮುರಿದ್+ಅಪ
ವಾದದೊಳು+ ಸಿರಿ+ ಹೋಗಿ +ದುಃಖಿತ
ನಾದನ್+ಇಂದ್ರನು +ಮತ್ತೆ +ಬದುಕಿದ +ಶಚಿಯ +ದೆಸೆಯಿಂದ

ಅಚ್ಚರಿ:
(೧) ಕಾದು ಕಾದಿ – ಪದಗಳ ಬಳಕೆ
(೨) ಸಿರಿ – ೨, ೫ ಸಾಲಿನ ಎರಡನೆ ಪದ

ಪದ್ಯ ೩೯: ಕೌರವ ಸೈನ್ಯದ ಬಲ ಎಂತಹುದು?

ಪ್ರಳಯಪಟು ಜಲರಾಶಿ ಜರಿದುದೊ
ತಳಿತ ಸಂದಣಿಗಿಲ್ಲ ಕಡೆಯೀ
ದಳಕೆ ಮಾರ್ಮಲೆತಾರು ನಿಲುವವರಿಂದ್ರ ಯಮರೊಳಗೆ
ಹುಲು ನೃಪರಿಗೀಯೊಡ್ಡು ಗಡ ಈ
ಬಲುಹು ಹೊದರಿನ ಹೊರಳೀ ಯೀ ಕಳ
ಕಳಿಕೆ ಯೇಕೆನೆ ನೂಕಿದುದು ಕುರುಸೇನೆ ದಟ್ಟೈಸಿ (ವಿರಾಟ ಪರ್ವ, ೫ ಸಂಧಿ, ೩೯ ಪದ್ಯ)

ತಾತ್ಪರ್ಯ:
ಕುರುಸೈನ್ಯವು ಮುನ್ನುಗ್ಗಲು, ಪ್ರಳಯ ಕಾಲದ ಜಲರಾಶಿ ಬಂದಿತೋ ಎಂಬಂತೆ ತೋರುತ್ತಿತ್ತು, ಸೇನು ಸಾಲುಗಳಿಗೆ ಕೊನೆಯೇ ಇಲ್ಲವೇನೋ ಎಂಬಂತ್ತಿತ್ತು, ಇಂದ್ರ, ಯಮ ರಾದರೂ ಈ ಸೈನ್ಯವನ್ನು ಎದುರಿಸಬಹುದೇ? ಇನ್ನು ಸಾಮಾನ್ಯ ರಾಜರು ಇದರ ಮುಂದೆ ನಿಲ್ಲಬಹುದೆ ಎನ್ನುವಂತೆ ಕುರುಸೈನ್ಯ ಮುನ್ನುಗ್ಗುತ್ತಿತ್ತು.

ಅರ್ಥ:
ಪ್ರಳಯ: ನಾಶ, ಅಳಿವು; ಜಲ: ನೀರು; ರಾಶಿ: ಹೆಚ್ಚಿನದ್ದು; ಜರಿ:ಅಳುಕು, ಹಿಂಜರಿ, ಪತನವಾಗು; ತಳಿತ: ಚಿಗುರಿದ; ಸಂದಣಿ: ಗುಂಪು; ದಳ: ಸೈನ್ಯ; ಮಾರ್ಮಾಲೆ: ಗರ್ವದಿಂದ ಬೀಳು, ಎದುರಿಸು; ನಿಲು: ಎದುರು ನಿಲ್ಲು; ಇಂದ್ರ: ಶಕ್ರ; ಯಮ: ಜವ; ಹುಲು:ಅಲ್ಪ; ನೃಪ: ರಾಜ; ಗಡ: ಅಲ್ಲವೆ; ತ್ವರಿತವಾಗಿ; ಬಲುಹು: ಶಕ್ತಿ; ಹೊದರು: ಪೊದೆ, ಹಿಂಡಲು; ಹೊರಳು: ತಿರುವು, ಬಾಗು; ಕಳಕಳಿ: ಉತ್ಸಾಹ, ಆಸ್ಥೆ; ನೂಕು: ತಳ್ಳು; ದಟ್ಟ: ಒತ್ತಾದ, ಸಾಂದ್ರ;

ಪದವಿಂಗಡಣೆ:
ಪ್ರಳಯ+ಪಟು +ಜಲರಾಶಿ+ ಜರಿದುದೊ
ತಳಿತ +ಸಂದಣಿಗಿಲ್ಲ +ಕಡೆ+ಯೀ
ದಳಕೆ +ಮಾರ್ಮಲೆತ್ +ಆರು+ ನಿಲುವವರ್+ಇಂದ್ರ +ಯಮರೊಳಗೆ
ಹುಲು +ನೃಪರಿಗ್+ಈ+ ಯೊಡ್ಡು +ಗಡ +ಈ
ಬಲುಹು +ಹೊದರಿನ+ ಹೊರಳೀ+ ಯೀ +ಕಳ
ಕಳಿಕೆ +ಯೇಕೆನೆ+ ನೂಕಿದುದು +ಕುರುಸೇನೆ +ದಟ್ಟೈಸಿ

ಅಚ್ಚರಿ:
(೧) ಈ ಕಾರದ ಪದ ೫ ಬಾರಿ ಪ್ರಯೋಗ
(೨) ಜೋಡಿ ಪದಗಳು – ಪ್ರಳಯ ಪಟು, ಜಲರಾಶಿ ಜರಿದುದು, ಹೊದರಿನ ಹೊರಳಿ

ಪದ್ಯ ೨: ಜಗತ್ತಿನಲ್ಲಿ ಯಾರು ಮಾನ್ಯರೆಂದು ಭೀಷ್ಮರು ಹೇಳಿದರು?

ಆರು ತಾರಾಗ್ರಹದ ಮಧ್ಯದೊ
ಳಾರು ದಿನಕರನುಳಿಯೆ ಬಳಿಕಾ
ರಾರು ಸುರನಿಕರದಲಿ ಸೇವ್ಯರು ಶೂಲಧರನುಳಿಯೆ
ಆರು ನಿರ್ಜರ ನಿವಹದಲಿ ಜಂ
ಭಾರಿಯಲ್ಲದೆ ಮಾನನೀಯರ
ದಾರು ಜಗದಲಿ ಕೃಷ್ಣನಲ್ಲದೆ ಪೂಜ್ಯತಮರೆಂದ (ಸಭಾ ಪರ್ವ, ೯ ಸಂಧಿ, ೨ ಪದ್ಯ)

ತಾತ್ಪರ್ಯ:
ನಕ್ಷತ್ರ, ಗ್ರಹಗಳ ಸಮೂಹದಲ್ಲಿ ಸೂರ್ಯನಲ್ಲದೆ ಮತ್ಯಾರು ಮಾನ್ಯರು? ಎಲ್ಲಾ ದೇವತೆಗಳ ಗುಂಪಿನಲ್ಲಿ ಶಿವನನ್ನು ಬಿಟ್ಟು ಇನ್ಯಾರು ಸೇವಾಪಾತ್ರರು? ಸ್ವರ್ಗವಾಸಿಗಳಾದ ದೇವತೆಗಳಲ್ಲಿ ಇಂದ್ರನನ್ನು ಬಿಟ್ಟು ಇನಾರು ಮನ್ನಣೆಗೆ ಪಾತ್ರರು? ಹಾಗೆಯೆ ಈ ಜಗತ್ತಿನಲ್ಲಿ ಅತ್ಯಂತ ಪೂಜ್ಯನಾದವನು ಕೃಷ್ಣನಲ್ಲದೆ ಬೇರಾರು? ಎಂದು ಭೀಷ್ಮರು ಹೇಳಿದರು.

ಅರ್ಥ:
ತಾರ: ನಕ್ಷತ್ರ; ಗ್ರಹ: ಆಕಾಶಚರಗಳು; ಮಧ್ಯ: ನಡುವೆ; ದಿನಕರ: ಸೂರ್ಯ; ಉಳಿಯೆ: ಬಿಟ್ಟು; ಬಳಿಕ: ನಂತರ; ಸುರ: ದೇವತೆ; ನಿಕರ: ಗುಂಪು; ಸೇವ್ಯರು: ಮಾನ್ಯರು; ಶೂಲಧರ: ಶಿವ; ನಿರ್ಜರ: ದೇವತೆ, ಮುಪ್ಪಿಲ್ಲದವ; ನಿವಹ:ಗುಂಪು; ಜಂಭಾರಿ: ಇಂದ್ರ, ಜಂಭಾಸುರನ ವೈರಿ; ಮಾನನೀಯ: ಮಾನ್ಯರು; ಜಗ: ವಿಶ್ವ;

ಪದವಿಂಗಡಣೆ:
ಆರು +ತಾರಾಗ್ರಹದ+ ಮಧ್ಯದೊಳ್
ಆರು +ದಿನಕರನ್+ಉಳಿಯೆ+ ಬಳಿಕಾರ್
ಆರು +ಸುರ+ನಿಕರದಲಿ+ ಸೇವ್ಯರು +ಶೂಲಧರನುಳಿಯೆ
ಆರು +ನಿರ್ಜರ +ನಿವಹದಲಿ +ಜಂ
ಭಾರಿಯಲ್ಲದೆ +ಮಾನನೀಯರದ್
ಆರು +ಜಗದಲಿ +ಕೃಷ್ಣನಲ್ಲದೆ+ ಪೂಜ್ಯತಮರೆಂದ

ಅಚ್ಚರಿ:
(೧) ಆರು – ೫ ಸಾಲು ಬಿಟ್ಟು ಉಳಿದೆಲ್ಲಾ ಸಾಲಿನ ಮೊದಲ ಪದ
(೨) ನಿಕರ, ನಿವಹ – ಸಮನಾರ್ಥಕ ಪದ
(೩) “ನಿ” ಕಾರದ ಜೋಡಿ ಪದ – ನಿರ್ಜರ ನಿವಹದಲಿ
(೩) ಸೂರ್ಯ, ಶಿವ, ಇಂದ್ರ ರನ್ನು ಹೋಲಿಸಿ ಉಪಮಾನಗಳನ್ನು ಹೇಳಿರುವುದು

ಪದ್ಯ ೮೯: ಯುಧಿಷ್ಠಿರನು ನಾರದರಿಗೆ ಯಾವ ಪ್ರಶ್ನೆ ಕೇಳಿದನು?

ಮುನಿಯೆ ಬಿನ್ನಹವಿಂದು ನೀವಿಂ
ದ್ರನ ವಿರಿಂಚಿಯ ಯಮನ ವರುಣನ
ಧನಪತಿಯ ಶೇಷನ ಸಭಾಮಧ್ಯದಲಿ ಸುಳಿವಿರಲೆ
ಇನಿತು ರಚನೆಗೆ ಸರಿಯೊ ಮಿಗಿಲೋ
ಮನುಜಯೋಗ್ಯಸ್ಥಾನವೋ ಮೇ
ಣೆನಲು ನಗುತೆಂದನು ಮುನೀಶ್ವರನಾ ಯುಧಿಷ್ಠಿರಗೆ (ಸಭಾ ಪರ್ವ, ೧ ಸಂಧಿ, ೮೯ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ನಾರದರ ಹಿರಿಮೆಯನ್ನು ಹೇಳುತ್ತಾ, “ಎಲೈ ಮುನೀಂದ್ರ, ನಿಮ್ಮಲ್ಲಿ ನನ್ನದೊಂದು ಪ್ರಾರ್ಥನೆ, ನೀವು ಇಂದ್ರನ, ಬ್ರಹ್ಮನ, ಯಮನ, ವರುಣನ, ಕುಬೇರನ, ಆದಿಶೇಷನ ಸಭೆಗಳಲ್ಲಿ ನಡೆದಾಡಿದವರು, ಈ ನನ್ನ ಆಸ್ಥಾನಭವನವು ಅವರ ಆಸ್ಥಾನ ಭವನಗಳಿಗೆ ಸರಿಯೋ, ಹೆಚ್ಚೋ, ಅಥವ ಮನುಷ್ಯರಿಗೆ ತಕ್ಕದ್ದೋ ಹೇಳಿ”, ಎಂದು ಕೇಳಿದನು.

ಅರ್ಥ:
ಮುನಿ: ಋಷಿ; ಬಿನ್ನಹ:ಅರಿಕೆ, ವಿಜ್ಞಾಪನೆ; ಇಂದ್ರ: ಶಕ್ರ; ವಿರಿಂಚಿ: ಬ್ರಹ್ಮ; ಯಮ: ಕಾಲ; ವರುಣ: ನೀರಿನ ಅಧಿದೇವತೆ; ಧನಪತಿ: ಕುಬೇರ; ಶೇಷ: ಆದಿಶೇಷ; ಸಭ: ಆಸ್ಥಾನ; ಮಧ್ಯ: ನಡು; ಸುಳಿ: ನಡೆದಾಡು; ಇನಿತು: ಸ್ವಲ್ಪ; ರಚನೆ: ಕಟ್ಟು; ಸರಿ: ಸಮ; ಮೇಣ್: ಅಥವ; ಯೋಗ್ಯ: ಅರ್ಹತೆ; ಮನುಜ: ಮಾನವ; ನಗು: ಹರ್ಷ;

ಪದವಿಂಗಡಣೆ:
ಮುನಿಯೆ+ ಬಿನ್ನಹವ್+ಇಂದು +ನೀವ್
ಇಂದ್ರನ +ವಿರಿಂಚಿಯ +ಯಮನ +ವರುಣನ
ಧನಪತಿಯ+ ಶೇಷನ+ ಸಭಾ+ಮಧ್ಯದಲಿ+ ಸುಳಿವಿರಲೆ
ಇನಿತು+ ರಚನೆಗೆ +ಸರಿಯೊ +ಮಿಗಿಲೋ
ಮನುಜ+ಯೋಗ್ಯ+ಸ್ಥಾನವೋ +ಮೇಣ್
ಎನಲು +ನಗುತ+ಎಂದನು +ಮುನೀಶ್ವರನ್+ಆ+ ಯುಧಿಷ್ಠಿರಗೆ

ಅಚ್ಚರಿ:
(೧) ೩,೪,೫ ಸಾಲಿನ ಮೂರನೆ ಪದ “ಸ” ಕಾರದಿಂದ ಪ್ರಾರಂಭ: ಸಭಾಮಧ್ಯ, ಸರಿಯೊ, ಸ್ಥಾನವೊ
(೨) ೬ ದೇವತೆಗಳ ಹೆಸರನ್ನು ತಿಳಿಸಿರುವುದು