ಪದ್ಯ ೧೬: ಕೌರವ ಸೈನ್ಯದವರು ಏನೆಂದು ಕೂಗಿದರು?

ಕೊಲುವುದನುಚಿತವೆಂದು ಗಗನ
ಸ್ಥಳಕೆ ರಥವನು ಬಿಸುಡೆ ಯೋಜನ
ದಳವಿಯಲಿ ಲಂಘಿಸಿತು ಹಯತತಿ ಸೂತಜರು ಸಹಿತ
ಎಲೆಲೆ ಕಟಕಾಚಾರ್ಯನಕಟಾ
ಕೊಳುಗುಳದೊಳಪದೆಸೆಯ ಕಂಡನೊ
ಗೆಲಿದನೋ ರಿಪುವೆಂದುಲಿಯೆ ನಿಜಪಾಯದಳವಂದು (ದ್ರೋಣ ಪರ್ವ, ೧೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಗುರುವನ್ನು ಕೊಲ್ಲುವುದು ಉಚಿತವಲ್ಲೆಂದು ಬಗೆದ ಭೀಮನು ದ್ರೋಣನ ಹೊಸ ರಥವನ್ನು ಹಿಡಿದು ಮತ್ತೆ ಆಕಾಶಕ್ಕೆಸೆದನು. ಸೂತ, ಕುದುರೆ, ದ್ರೋಣರೊಡನೆ ಅದು ಯೋಜನ ದೂರಕ್ಕೆ ಹೋಗಿ ಬಿದ್ದಿತು. ಸೇನಾಪತಿಯು ಯುದ್ಧದಲ್ಲಿ ದುರ್ಗತೀಗೀಡಾದನು, ಶತ್ರುವು ಜಯಿಸಿದನು ಎಂದು ಕೌರವ ಸೈನ್ಯದ ಕಾಲಾಳುಗಳು ಕೂಗಿಕೊಂಡರು.

ಅರ್ಥ:
ಕೊಲು: ಸಾಯಿಸು; ಅನುಚಿತ: ಸರಿಯಿಲ್ಲದು; ಗಗನ: ಆಗಸ; ಸ್ಥಳ: ಜಾಗ; ರಥ: ಬಂಡಿ; ಬಿಸುಡು: ಹೊರಹಾಕು; ಯೋಜನ: ದೂರದ ಅಳತೆಯ ಒಂದು ಪ್ರಮಾಣ, ಹನ್ನೆರಡು ಮೈಲು; ಅಳವು:ಅಳತೆ; ಲಂಘಿಸು: ಹಾರು; ಹಯ: ಕುದುರೆ; ತತಿ: ಗುಂಪು; ಸೂತ: ರಥವನ್ನು ನಡೆಸುವವನು, ಸಾರ; ಸಹಿತ: ಜೊತೆ; ಕಟಕ: ಸೈನ್ಯ; ಆಚಾರ್ಯ: ಗುರು; ಅಕಟ: ಅಯ್ಯೋ; ಕೊಳುಗುಳ: ರಣರಂಗ; ಅಪದೆಸೆ: ಅಪಯಶಸ್ಸು; ಕಂಡು: ನೋಡು; ಗೆಲಿ: ಜಯಿಸು; ರಿಪು: ವೈರಿ; ಉಲಿ: ಕೂಗು; ಪಾಯದಳ: ಸೈನಿಕ;

ಪದವಿಂಗಡಣೆ:
ಕೊಲುವುದ್+ಅನುಚಿತವೆಂದು +ಗಗನ
ಸ್ಥಳಕೆ +ರಥವನು +ಬಿಸುಡೆ +ಯೋಜನದ್
ಅಳವಿಯಲಿ +ಲಂಘಿಸಿತು +ಹಯತತಿ +ಸೂತಜರು +ಸಹಿತ
ಎಲೆಲೆ +ಕಟಕಾಚಾರ್ಯನ್+ಅಕಟಾ
ಕೊಳುಗುಳದೊಳ್+ಅಪದೆಸೆಯ +ಕಂಡನೊ
ಗೆಲಿದನೋ +ರಿಪುವೆಂದ್+ಉಲಿಯೆ +ನಿಜ+ಪಾಯದಳವಂದು

ಅಚ್ಚರಿ:
(೧) ಭೀಮನು ರಥವನ್ನು ಎಸೆದ ಕಾರಣ – ಕೊಲುವುದನುಚಿತವೆಂದು ಗಗನ ಸ್ಥಳಕೆ ರಥವನು ಬಿಸುಡೆ
(೨) ಕಟಕ, ಅಕಟ – ಪ್ರಾಸ ಪದಗಳು

ಪದ್ಯ ೨: ಸೈನ್ಯದ ಅಗಾಧತೆ ಹೇಗಿತ್ತು?

ನೂಕಿತರಿಚತುರಂಗಬಲ ನೆಲ
ನೋಕರಿಸಿತೋ ಪ್ರಳಯಜಲಧಿಯ
ನೂಕು ತೆರೆಗಳ ಲಹರಿಯೋ ನಿಲುವಾತನಾರಿದಕೆ
ನಾಕು ಕಡೆಯಲಿ ಕವಿದುದಳವಿಗೆ
ನೂಕುನೂಕಾಯಿತ್ತು ನರನ
ವ್ಯಾಕುಳತೆಯಲಿ ಸವರ ತೊಡಗಿದನಹಿತಬಲ ವನವ (ದ್ರೋಣ ಪರ್ವ, ೧೦ ಸಂಧಿ, ೨ ಪದ್ಯ)

ತಾತ್ಪರ್ಯ:
ಭೂಮಿಯು ಈ ಸೈನ್ಯವನ್ನು ಓಕರಿಸಿತೋ, ಪ್ರಳಯ ಸಮುದ್ರದ ನೂಕು ತೆರೆಗಳ ಪ್ರವಾಹವೋ, ಎನ್ನುವಂತೆ ಸೈನ್ಯವು ನಾಲ್ಕೂ ದಿಕ್ಕುಗಳಿಂದ ಅರ್ಜುನನನ್ನು ಆವರಿಸಿತು. ಆ ಸೈನ್ಯವನ್ನು ಎದುರಿಸಿ ನಿಲ್ಲುವವರಾರು ಎಂಬಂತೆ ನೂಕು ನುಗ್ಗಲಾಯಿತು. ಅರ್ಜುನನು ಸೈನ್ಯವನ್ನು ಸವರಲಾರಂಭಿಸಿತು.

ಅರ್ಥ:
ನೂಕು: ತಳ್ಳು; ಅರಿ: ವೈರಿ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ನೆಲ: ಭೂಮಿ; ಓಕರ: ವಾಂತಿ, ವಮನ; ಪ್ರಳಯ: ನಾಶ; ಜಲಧಿ: ಸಾಗರ; ನೂಕು: ತಳ್ಳು; ತೆರೆ: ಅಲೆ; ಲಹರಿ: ರಭಸ, ಆವೇಗ; ನಿಲುವು: ಇರುವಿಕೆ; ನಾಕು: ನಾಲ್ಕು; ಕಡೆ: ದಿಕ್ಕು; ಕವಿ: ಆವರಿಸು; ಅಳವಿ: ಯುದ್ಧ; ನರ: ಅರ್ಜುನ; ವ್ಯಾಕುಲ: ದುಃಖ, ವ್ಯಥೆ; ಸವರು: ನಾಶಗೊಳಿಸು; ತೊಡಗು: ಸೆಣಸು, ಹೋರಾಡು; ಅಹಿತ: ವೈರಿ; ಬಲ: ಸೈನ್ಯ; ವನ: ಕಾಡು;

ಪದವಿಂಗಡಣೆ:
ನೂಕಿತ್+ಅರಿ+ಚತುರಂಗಬಲ +ನೆಲನ್
ಓಕರಿಸಿತೋ +ಪ್ರಳಯ+ಜಲಧಿಯ
ನೂಕು +ತೆರೆಗಳ+ ಲಹರಿಯೋ +ನಿಲುವಾತನ್+ಆರಿದಕೆ
ನಾಕು +ಕಡೆಯಲಿ +ಕವಿದುದ್+ಅಳವಿಗೆ
ನೂಕುನೂಕಾಯಿತ್ತು +ನರನ
ವ್ಯಾಕುಳತೆಯಲಿ +ಸವರ+ ತೊಡಗಿದನ್+ಅಹಿತಬಲ +ವನವ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೆಲನೋಕರಿಸಿತೋ ಪ್ರಳಯಜಲಧಿಯನೂಕು ತೆರೆಗಳ ಲಹರಿಯೋ
(೨) ಚತುರಂಗಬಲ, ಅಹಿತಬಲ – ಪದಗಳ ಪ್ರಯೋಗ

ಪದ್ಯ ೩೯: ಸೈನ್ಯವು ಅಭಿಮನ್ಯುವನ್ನು ಹೇಗೆ ಮುತ್ತಿತು?

ತುಡುಕಿದವು ತೇಜಿಗಳು ವಾಘೆಯ
ಗಡಣದಲಿ ತೂಳಿದವು ದಂತಿಗ
ಳೆಡಬಲದ ಬವರಿಯಲಿ ಮುತ್ತಿತು ಮತ್ತೆ ರಿಪುನಿಕರ
ಕಡುಮನದ ಕಾಲಾಳು ಕರೆದುದು
ಖಡುಗ ಧಾರೆಯನೀತನಳವಿಯ
ಕೆಡಿಸಿ ತಲೆಯೊತ್ತಿದರು ಭೂಪನ ಮೊನೆಯ ನಾಯಕರು (ದ್ರೋಣ ಪರ್ವ, ೬ ಸಂಧಿ, ೩೯ ಪದ್ಯ)

ತಾತ್ಪರ್ಯ:
ಕುದುರೆಗಳು ಮೇಲೆ ಬಿದ್ದವು. ಆನೆಗಳು ನುಗ್ಗಿದವು. ಎಡಬಲಗಲಲ್ಲಿ ಶತ್ರುಸಮೂಹ ಮುತ್ತಿತು. ಕಾಲಾಳುಗಳು ಕಠೋರ ಮನಸ್ಸಿನಿಂದ ಖಡ್ಗಗಳನ್ನೆತ್ತಿ ಬಂದರು. ಕೌರವನ ಶ್ರೇಷ್ಠರಾದ ಸೈನ್ಯದ ನಾಯಕರು ತಲೆಯೊತ್ತಿ ಅಭಿಮನ್ಯುವಿನೊಡನೆ ಕಾಳಗಕ್ಕೆ ಬಂದರು.

ಅರ್ಥ:
ತುಡುಕು: ಹೋರಾಡು, ಸೆಣಸು; ತೇಜಿ: ಕುದುರೆ; ವಾಘೆ: ಲಗಾಮು; ಗಡಣ: ಕೂಡಿಸುವಿಕೆ, ಸೇರಿಸುವಿಕೆ; ತೂಳು: ಆವೇಶ, ಉನ್ಮಾದ; ದಂತಿ: ಆನೆ; ಎಡಬಲ: ಅಕ್ಕಪಕ್ಕ; ಬವರಿ: ತಿರುಗುವುದು; ಮುತ್ತು: ಆವರಿಸು; ಮತ್ತೆ: ಪುನಃ; ರಿಪು: ವೈರಿ; ನಿಕರ: ಗುಂಪು; ಕಡು: ವಿಶೇಷ, ಅಧಿಕ; ಮನ: ಮನಸ್ಸು; ಕಾಲಾಳು: ಸೈನಿಕ; ಕರೆ: ಬರೆಮಾಡು; ಖಡುಗ: ಕತ್ತಿ; ಧಾರೆ: ವರ್ಷ; ಅಳವಿ: ಯುದ್ಧ; ಕೆಡಿಸು: ಹಾಳುಮಾಡು; ತಲೆ: ಶಿರ; ಒತ್ತು: ಅಮುಕು; ಭೂಪ: ರಾಜ; ಮೊನೆ: ತುದಿ, ಕೊನೆ; ನಾಯಕ: ಒಡೆಯ;

ಪದವಿಂಗಡಣೆ:
ತುಡುಕಿದವು +ತೇಜಿಗಳು +ವಾಘೆಯ
ಗಡಣದಲಿ +ತೂಳಿದವು +ದಂತಿಗಳ್
ಎಡಬಲದ +ಬವರಿಯಲಿ +ಮುತ್ತಿತು +ಮತ್ತೆ +ರಿಪುನಿಕರ
ಕಡುಮನದ +ಕಾಲಾಳು +ಕರೆದುದು
ಖಡುಗ+ ಧಾರೆಯನೀತನ್+ಅಳವಿಯ
ಕೆಡಿಸಿ +ತಲೆಯೊತ್ತಿದರು+ ಭೂಪನ +ಮೊನೆಯ +ನಾಯಕರು

ಅಚ್ಚರಿ:
(೧) ಕ ಕಾರದ ಸಾಲು ಪದ – ಕಡುಮನದ ಕಾಲಾಳು ಕರೆದುದು ಖಡುಗ
(೨) ತುಡುಕಿದವು, ತೂಳಿದವು – ಪದಗಳ ಬಳಕೆ

ಪದ್ಯ ೩: ಯುದ್ಧವು ಮತ್ತೆ ಹೇಗೆ ಶುರುವಾಯಿತು?

ಅಳವಿಗೊಟ್ಟುದು ಮತ್ತೆ ಕೌರವ
ಬಲಪಯೋನಿಧಿ ವೈರಿ ಬಡಬನ
ಬಿಲು ಸರಳು ಬಿರುಗಿಡಿಯಲೌಕಿತು ಚಾತುರಂಗದಲಿ
ಎಲೆಲೆ ಬೆಂಗಾಹಿನಲಿ ನೂಕುವ
ಬಲ ಸಮರ್ಥರ ಜೋಕೆಯಲಿ ಕುರು
ಬಲಕೆ ಕದನಾಳಾಪವಾಯ್ತೆನುತೆಚ್ಚನಭಿಮನ್ಯು (ದ್ರೋಣ ಪರ್ವ, ೬ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವ ಸೈನ್ಯ ಸಮುದ್ರವು ಮತ್ತೆ ಯುದ್ಧವನ್ನಾರಂಭಿಸಿತು. ಶತ್ರು ವಡಬಾಗ್ನಿಯ ಬಿಲ್ಲಿನಿಂದ ಬಾಣಗಳು ಹೊರಟು ಕೌರವ ಸೈನ್ಯದಲ್ಲಿ ಕಿಡಿಗಳನ್ನು ಹಬ್ಬಿಸಿದವು. ಬೆಂಬಲ ಕೊಡುವ ಸಮರ್ಥರ ರಕ್ಷಣೆಯಲ್ಲಿ ಕೌರವ ಸೈನ್ಯದ ಕದನ ಆರಂಭವಾಯಿತೆಂದು ತಿಳಿದು ಅಭಿಮನ್ಯುವು ಶತ್ರುಗಳನ್ನು ಬಾಣಗಳಿಂದ ಹೊಡೆದನು.

ಅರ್ಥ:
ಅಳವಿ: ಯುದ್ಧ; ಒಟ್ಟು: ಕೂಡು, ಸೇರು; ಮತ್ತೆ: ಪುನಃ; ಬಲ: ಶಕ್ತಿ, ಸೈನ್ಯ; ಪಯೋನಿಧಿ: ಸಾಗರ; ವೈರಿ: ಶತ್ರು; ಬಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ಬಿಲು: ಬಿಲ್ಲು, ಚಾಪ; ಸರಳು: ಬಾಣ; ಬಿರು: ಗಟ್ಟಿಯಾದುದು, ಬಿರುಸು; ಔಕು: ತಳ್ಳು; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬೆಂಗಾಹು: ಬೆನ್ನುಕಾವಲು; ನೂಕು: ತಳ್ಳು; ಸಮರ್ಥ: ಶಕ್ತಿ; ಜೋಕೆ: ಎಚ್ಚರಿಕೆ; ಕದನ: ಯುದ್ಧ; ಆಳಾಪ: ಪ್ರಾರಂಭ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಅಳವಿ+ಕೊಟ್ಟುದು +ಮತ್ತೆ +ಕೌರವ
ಬಲ+ಪಯೋನಿಧಿ +ವೈರಿ +ಬಡಬನ
ಬಿಲು +ಸರಳು +ಬಿರು+ಕಿಡಿಯಲ್+ಔಕಿತು +ಚಾತುರಂಗದಲಿ
ಎಲೆಲೆ +ಬೆಂಗಾಹಿನಲಿ +ನೂಕುವ
ಬಲ +ಸಮರ್ಥರ +ಜೋಕೆಯಲಿ +ಕುರು
ಬಲಕೆ +ಕದನ+ಆಳಾಪವಾಯ್ತ್+ಎನುತ್+ಎಚ್ಚನ್+ಅಭಿಮನ್ಯು

ಅಚ್ಚರಿ:
(೧) ಕೌರವ ಸೈನ್ಯದ ವಿಶಾಲತೆಯನ್ನು ತಿಳಿಸುವ ಪರಿ – ಕೌರವ ಬಲಪಯೋನಿಧಿ
(೨) ಬಲ ಪದದ ಬಳಕೆ – ಕೌರವ ಬಲ, ಬಲ ಸಮರ್ಥರ, ಕುರುಬಲ

ಪದ್ಯ ೧೫: ಪದ್ಮವ್ಯೂಹದ ಮೊದಲ ಸಾಲು ಏನಾಯಿತು?

ಎಸಳ ಮೊನೆ ಮೋಹರದ ಸಂದಣಿ
ಯುಸಿರನುಳಿದುದು ಕೇಸರಾಕೃತಿ
ಯಸಮ ವೀರರು ಪಥಿಕರಾದರು ಗಗನಮಾರ್ಗದಲಿ
ನುಸುಳಿದರು ಕರ್ಣಿಕೆಯ ಕಾಹಿನ
ವಸುಮತೀಶರು ರಾಯನರನೆಲೆ
ದೆಸೆಗೆಸಲು ಮೊಳಗಿದನು ಪಾರ್ಥಕುಮಾರನಳವಿಯಲಿ (ದ್ರೋಣ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪದ್ಮವ್ಯೂಹದ ತುದಿಯ ದಳದ ಸೈನ್ಯವು ನಾಶವಾಯಿತು. ಕೇಸರಾಕೃತಿಯಲ್ಲಿ ನಿಂತ ವೀರರು ಆಕಾಶಮಾರ್ಗದಲ್ಲಿ ನಡೆದರು. ಕರ್ಣಿಕೆಯನ್ನು ಕಾದುಕೊಳ್ಳುವ ರಾಜರು ಇಲ್ಲವಾದರು ದುರ್ಯೋಧನನ ನೆಲೆಯ ಮೇಲೆ ಅಭಿಮನ್ಯುವು ಗರ್ಜಿಸುತ್ತಾ ನುಗ್ಗಿದನು.

ಅರ್ಥ:
ಎಸಳು: ಹೂವಿನ ದಳ; ಮೊನೆ: ತುದಿ; ಮೋಹರ: ಯುದ್ಧ; ಸಂದಣಿ: ಗುಂಪು; ಉಸಿರು: ಗಾಳಿ; ಉಳಿ: ಮಿಕ್ಕ; ಕೇಸರಾಕೃತಿ: ಸಿಂಹದ ರೂಪ; ಆಕೃತಿ: ರೂಪ; ಅಸಮ: ಸಮವಲ್ಲದ; ವೀರ: ಶೂರ; ಪಥಿಕ: ದಾರಿಗ, ಪ್ರಯಾಣಿಕ; ಗಗನ: ಆಗಸ; ಮಾರ್ಗ: ದಾರಿ; ನುಸುಳು: ನುಣುಚಿಕೊಳ್ಳುವಿಕೆ; ಕರ್ಣಿಕೆ: ಕಮಲದ ಮಧ್ಯ ಭಾಗ, ಬೀಜಕೋಶ; ಕಾಹು: ಕಾಪಾಡು; ವಸುಮತೀಶ: ರಾಜ; ರಾಯ: ರಾಜ; ನೆಲೆ: ಭೂಮಿ; ಎಸಗು: ಕೆಲಸ, ಉದ್ಯೋಗ; ಮೊಳಗು: ಧ್ವನಿ, ಸದ್ದು; ಕುಮಾರ: ಪುತ್ರ; ಅಳವಿ: ಯುದ್ಧ;

ಪದವಿಂಗಡಣೆ:
ಎಸಳ+ ಮೊನೆ +ಮೋಹರದ +ಸಂದಣಿ
ಉಸಿರನ್+ಉಳಿದುದು +ಕೇಸರಾಕೃತಿ
ಅಸಮ +ವೀರರು +ಪಥಿಕರಾದರು+ ಗಗನಮಾರ್ಗದಲಿ
ನುಸುಳಿದರು +ಕರ್ಣಿಕೆಯ +ಕಾಹಿನ
ವಸುಮತೀಶರು+ ರಾಯನರನ್+ಎಲೆ
ದೆಸೆಗೆಸಲು +ಮೊಳಗಿದನು +ಪಾರ್ಥಕುಮಾರನ್+ಅಳವಿಯಲಿ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಕೇಸರಾಕೃತಿಯಸಮ ವೀರರು ಪಥಿಕರಾದರು ಗಗನಮಾರ್ಗದಲಿ

ಪದ್ಯ ೧೪: ವೈರಿಗಳು ಹೇಗೆ ಶರಣಾದರು?

ಅಳವಿಗೆಡೆ ಧುಮ್ಮಿಕ್ಕಿ ರಥದವ
ರಿಳಿಯ ಬಿದ್ದರು ಭಯದಿ ತೇಜಿಯ
ನಿಳಿದು ರಾವ್ತರು ಕರವ ಮುಗಿದರು ಕೊರಳ ಸಲಹೆನುತ
ಗುಳವ ಸಡಿಲಿಸಿ ಹಾಯ್ಕಿ ಜೋದಾ
ವಳಿಗಳಿಳಿದುದು ಕೈಯ ಕೈದುವ
ನಿಳುಹಿ ಬಾಯಲಿ ಬೆರಳಿನಿಟ್ಟುದು ವೈರಿ ಪಾಯದಳ (ದ್ರೋಣ ಪರ್ವ, ೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಯುದ್ಧದಲ್ಲಿ ರಥಿಕರು ಕೆಟ್ಟು ರಥದಿಂದಿಳಿದು ಬಿದ್ದರು. ರಾವುತರು ಭಯಗೊಂಡು ಕುದುರೆಯಿಂದಿಳಿದು ಕೈಮುಗಿದು ಕತ್ತನ್ನು ಕಾಪಾಡು ಎಂದು ಬೇಡಿಕೊಂಡರು. ಆನೆಯ ಗುಳವನ್ನು ಸಡಿಲಿಸಿ ಜೋದರು ಕೆಳಗಿಳಿದರು. ಕೈಯಲ್ಲಿದ್ದ ಶಸ್ತ್ರಗಳನ್ನು ಕೆಳಗೆಸೆದು ಬಾಯಲ್ಲಿ ಬೆರಳಿಟ್ಟು ಕಾಲಾಳುಗಳು ಶರಣಾಗತರಾದರು.

ಅರ್ಥ:
ಅಳವಿ: ಶಕ್ತಿ; ಕೆಡೆ: ಬೀಳು; ಧುಮ್ಮಿಕ್ಕು: ಬೀಳು; ರಥ: ತೇರು; ಇಳಿ: ಕೆಳಕ್ಕೆ ಬಾ; ಭಯ: ಅಂಜಿಕೆ; ತೇಜಿ: ಕುದುರೆ; ರಾವ್ತರು: ಕುದುರೆ ಸವಾರ, ಅಶ್ವಾರೋಹಿ; ಕರ: ಹಸ್ತ; ಕರಮುಗಿ: ನಮಸ್ಕರಿಸು; ಕೊರಳು: ಗಂಟಲು; ಸಲಹು: ಕಾಪಾಡು; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಸಡಲಿಸು: ಬಿಡಿಸು; ಹಾಯ್ಕು: ಇಡು, ಇರಿಸು; ಜೋದ: ಆನೆಮೇಲೆ ಕೂತು ಯುದ್ಧಮಾಡುವವ; ಆವಳಿ: ಸಾಲು; ಕೈದು: ಶತ್ರ; ಬೆರಳು: ಅಂಗುಲಿ; ಇಟ್ಟು: ಇಡು; ವೈರಿ: ಶತ್ರು; ಪಾಯದಳ: ಸೈನಿಕರು;

ಪದವಿಂಗಡಣೆ:
ಅಳವಿ+ಕೆಡೆ +ಧುಮ್ಮಿಕ್ಕಿ +ರಥದವರ್
ಇಳಿಯ +ಬಿದ್ದರು +ಭಯದಿ +ತೇಜಿಯನ್
ಇಳಿದು +ರಾವ್ತರು +ಕರವ +ಮುಗಿದರು +ಕೊರಳ +ಸಲಹೆನುತ
ಗುಳವ +ಸಡಿಲಿಸಿ +ಹಾಯ್ಕಿ +ಜೋದಾ
ವಳಿಗಳ್+ಇಳಿದುದು +ಕೈಯ +ಕೈದುವನ್
ಇಳುಹಿ +ಬಾಯಲಿ +ಬೆರಳನಿಟ್ಟುದು +ವೈರಿ +ಪಾಯದಳ

ಅಚ್ಚರಿ:
(೧) ಪ್ರಾಣವನ್ನು ಉಳಿಸು ಎಂದು ಕೇಳುವ ಪರಿ – ತೇಜಿಯನಿಳಿದು ರಾವ್ತರು ಕರವ ಮುಗಿದರು ಕೊರಳ ಸಲಹೆನುತ

ಪದ್ಯ ೩: ಅಭಿಮನ್ಯುವಿನ ಮಕ್ಕಳಾಟ ಹೇಗಿತ್ತು?

ಮಿಕ್ಕು ನೂಕುವ ಕುದುರೆಕಾರರು
ತೆಕ್ಕೆಗೆಡೆದರು ಸಂದಣಿಸಿ ಕೈ
ಯಿಕ್ಕಿದಾನೆಯನೇನನೆಂಬೆನು ಕಾಣೆನಳವಿಯಲಿ
ಹೊಕ್ಕು ಹರಿಸುವ ರಥ ಪದಾತಿಯ
ನೊಕ್ಕಲಿಕ್ಕಿದನಮಮ ಮಗುವಿನ
ಮಕ್ಕಳಾಟಿಕೆ ಮಾರಿಯಾಯಿತು ವೈರಿರಾಯರಿಗೆ (ದ್ರೋಣ ಪರ್ವ, ೫ ಸಂಧಿ, ೩ ಪದ್ಯ)

ತಾತ್ಪರ್ಯ:
ದಾಳಿಯಿಟ್ಟ ರಾವುತರು ತೆಕ್ಕೆ ತೆಕ್ಕೆಯಾಗಿ ಸತ್ತುಬಿದ್ದರು. ಯುದ್ಧಕ್ಕೆ ಬಂದ ಆನೆಗಳು ಕಾಣಿಸಲೇ ಇಲ್ಲ. ವೇಗವಾಗಿ ಬಂದ ರಥಗಳನ್ನು ಹೊಡೆದೋಡಿಸಿದನು. ಬಾಲಕ ಅಭಿಮನ್ಯುವಿನ ಮಕ್ಕಳಾಟ ಶತ್ರುರಾಜರಿಗೆ ಮಾರಿಯಾಯಿತು.

ಅರ್ಥ:
ಮಿಕ್ಕು: ಉಳಿದ; ನೂಕು: ತಳ್ಳು; ಕುದುರೆ: ಅಶ್ವ; ಕುದುರೆಕಾರ: ರಾವುತ; ತೆಕ್ಕೆ: ಸುತ್ತಿಕೊಂಡಿರುವಿಕೆ; ಕೆಡೆ: ಬೀಳು, ಕುಸಿ; ಸಂದಣಿಸು: ಗುಂಪುಗೂಡು; ಆನೆ: ಗಜ; ಕಾಣು: ತೋರು; ಅಳವಿ: ಯುದ್ಧ; ಹೊಕ್ಕು: ಸೇರು; ಹರಿಸು: ಚಲಿಸು; ರಥ: ಬಂಡಿ; ಪದಾತಿ: ಕಾಲಾಳು; ಒಕ್ಕಲಿಕ್ಕು: ಬಡಿ, ಹೊಡೆ; ಅಮಮ: ಆಶ್ಚರ್ಯ ಸೂಚಕ ಪದ; ಮಗು: ಚಿಕ್ಕವ, ಕುಮಾರ; ಮಕ್ಕಳಾಟಿಕೆ: ಮಕ್ಕಳು ಆಟವಾಡುವ ವಸ್ತು; ಮಾರಿ: ಕ್ಷುದ್ರದೇವತೆ; ವೈರಿ: ಶತ್ರು; ರಾಯ: ರಾಜ;

ಪದವಿಂಗಡಣೆ:
ಮಿಕ್ಕು +ನೂಕುವ +ಕುದುರೆಕಾರರು
ತೆಕ್ಕೆ+ಕೆಡೆದರು +ಸಂದಣಿಸಿ+ ಕೈ
ಯಿಕ್ಕಿದ್+ಆನೆಯನೇನನ್+ಎಂಬೆನು +ಕಾಣೆನ್+ಅಳವಿಯಲಿ
ಹೊಕ್ಕು +ಹರಿಸುವ +ರಥ +ಪದಾತಿಯನ್
ಒಕ್ಕಲಿಕ್ಕಿದನ್+ಅಮಮ +ಮಗುವಿನ
ಮಕ್ಕಳಾಟಿಕೆ +ಮಾರಿಯಾಯಿತು +ವೈರಿ+ರಾಯರಿಗೆ

ಅಚ್ಚರಿ:
(೧) ಅಭಿಮನ್ಯುವಿನ ಸಾಹಸ – ಮಗುವಿನ ಮಕ್ಕಳಾಟಿಕೆ ಮಾರಿಯಾಯಿತು ವೈರಿರಾಯರಿಗೆ

ಪದ್ಯ ೭೫: ದುರ್ಯೋಧನನ ಸಹಾಯಕ್ಕೆ ಯಾರು ಬಂದರು?

ತೋಳನಳವಿಗೆ ಸಿಕ್ಕಿತೋ ಮೃಗ
ಜಾಲ ಶಿವಶಿವ ದಿವಿಜ ವಧುಗಳ
ತೋಳ ತೆಕ್ಕೆಗೆ ಒಡಲನಿತ್ತನು ರಾಯನಕಟೆನುತ
ಆಳು ಮಿಗೆ ಕಳವಳಿಸೆ ಕುರುಭೂ
ಪಾಲಕನ ಹಿಂದಿಕ್ಕಿ ಕಿವಿಗಡಿ
ಗೋಲ ತೆಗಹಿನೊಳೊದಗಿದರು ದುಶ್ಯಾಸನಾದಿಗಳು (ದ್ರೋಣ ಪರ್ವ, ೨ ಸಂಧಿ, ೭೫ ಪದ್ಯ
)

ತಾತ್ಪರ್ಯ:
ತೋಳನ ಬಾಯಿಗೆ ಮೃಗಗಳು ಸಿಕ್ಕಹಾಗಾಯಿತು, ದೊರೆಯು ಅಪ್ಸರೆಯರ ಆಲಿಂಗನ ಮಾಡುವ ಹಾಗಾಯಿತು, ಎಂದು ಸೈನ್ಯವು ಕಳವಳಿಸಿತು. ಆಗ ದುಶ್ಯಾಸನನೇ ಮೊದಲಾದವರು ಕೌರವರನ್ನು ಹಿಂದಿಟ್ಟು ಕಿವಿಯವರೆಗೆ ಹೆದೆಯನ್ನು ಸೆಳೆದು ಬಾಣಗಳನ್ನು ಬಿಟ್ಟರು.

ಅರ್ಥ:
ತೋಳು: ಭುಜ; ಅಳವಿ: ಯುದ್ಧ; ಸಿಕ್ಕು: ಬಂಧನಕ್ಕೊಳಗಾಗು, ಸೆರೆಯಾಗು; ಜಾಲ: ಗುಂಪು; ಮೃಗ: ಜಿಂಕೆ; ದಿವಿಜ: ದೈವ; ವಧು: ಹೆಣ್ಣು; ತೆಕ್ಕೆ: ಅಪ್ಪುಗೆ, ಆಲಿಂಗನ; ಒಡಲು: ದೇಹ; ರಾಯ: ರಾಜ; ಅಕಟ: ಅಯ್ಯೋ; ಆಳು: ಸೇವಕ; ಮಿಗೆ: ಅಧಿಕ; ಕಳವಳ: ಗೊಂದಲ; ಭೂಪಾಲಕ: ರಾಜ; ಹಿಂದಿಕ್ಕು: ಹಿಂಭಾಗ; ಕಿವಿ: ಕರ್ಣ; ತೆಗಹು: ಹಿಂದಕ್ಕೆ – ತೆಗೆಯುವಿಕೆ; ಒದಗು: ಲಭ್ಯ, ದೊರೆತುದು; ಆದಿ: ಮುಂತಾದ; ಕೋಲು: ಬಾಣ;

ಪದವಿಂಗಡಣೆ:
ತೋಳನ್+ಅಳವಿಗೆ +ಸಿಕ್ಕಿತೋ +ಮೃಗ
ಜಾಲ +ಶಿವಶಿವ+ ದಿವಿಜ+ ವಧುಗಳ
ತೋಳ +ತೆಕ್ಕೆಗೆ+ ಒಡಲನ್+ಇತ್ತನು+ ರಾಯನ್+ಅಕಟೆನುತ
ಆಳು +ಮಿಗೆ +ಕಳವಳಿಸೆ +ಕುರು+ಭೂ
ಪಾಲಕನ +ಹಿಂದಿಕ್ಕಿ +ಕಿವಿಗ್+ಅಡಿ
ಕೋಲ +ತೆಗಹಿನೊಳ್+ಒದಗಿದರು +ದುಶ್ಯಾಸನ್+ಆದಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ತೋಳನಳವಿಗೆ ಸಿಕ್ಕಿತೋ ಮೃಗಜಾಲ; ದಿವಿಜ ವಧುಗಳ
ತೋಳ ತೆಕ್ಕೆಗೆ ಒಡಲನಿತ್ತನು ರಾಯನಕಟೆನುತ

ಪದ್ಯ ೭೪: ದುರ್ಯೋಧನನ ರಥವನ್ನು ಹೇಗೆ ಅಪ್ಪಳಿಸಿದನು?

ಸಿಲುಕಿದನು ತಿವಿ ಸ್ವಾಮಿದ್ರೋಹನ
ಗಳದ ರಕುತಕೆ ಬಾಯನೊಡ್ಡೆನು
ತಳವಿಯಲಿ ಹೊಕ್ಕೊಕ್ಕಲಿಕ್ಕಿದನಾನೆ ಕುದುರೆಗಳ
ಎಲೆ ದುರಾತ್ಮ ದ್ಯೂತಕೇಳೀ
ಕಲಹಲಂಪಟ ನಿಲ್ಲು ನಿಲ್ಲೆನು
ತೊಳಗುವರಿದಪ್ಪಳಿಸಿದನು ದುರ್ಯೋಧನನ ರಥವ (ದ್ರೋಣ ಪರ್ವ, ೨ ಸಂಧಿ, ೭೪ ಪದ್ಯ)

ತಾತ್ಪರ್ಯ:
ಸ್ವಾಮಿದ್ರೋಹಿ ಸಿಕ್ಕಿದನು. ಅವನ ಕತ್ತನ್ನು ಕಡೆದು ರಕ್ತವನ್ನು ಕುಡಿಯಲು ಬಾಯನ್ನೊಡ್ಡು ಎನ್ನುತ್ತಾ ಎದುರಿನಲ್ಲಿದ್ದ ಆನೆ, ಕುದುರೆಗಳನ್ನು ಬಡಿದುಕೊಂಡು ಎಲವೋ ದುರಾತ್ಮ, ಮೋಸದ ಜೂಜಿನ ಲಂಪಟ, ನಿಲ್ಲು ನಿಲ್ಲು ಎನ್ನುತ್ತಾ ಒಳಹೊಕ್ಕು ದುರ್ಯೋಧನನ ರಥವನ್ನಪ್ಪಳಿಸಿದನು.

ಅರ್ಥ:
ಸಿಲುಕು: ಹಿಡಿ; ತಿವಿ: ಚುಚ್ಚು; ಸ್ವಾಮಿ: ಒಡೆಯ; ದ್ರೋಹ: ಮೋಸ; ಗಳ: ಕತ್ತು; ರಕುತ: ನೆತ್ತರು; ಒಡ್ಡು: ಅರ್ಪಿಸು, ಈಡುಮಾಡು; ಅಳವಿ: ಯುದ್ಧ; ಹೊಕ್ಕು: ಸೇರು; ಒಕ್ಕಲು: ನೆಲೆನಿಲ್ಲು; ಆನೆ: ಗಜ; ಕುದುರೆ: ಅಶ್ವ; ದುರಾತ್ಮ: ದುಷ್ಟ; ದ್ಯೂತ: ಜೂಜು, ಪಗಡೆಯಾಟ; ಕೇಳಿ: ಕ್ರೀಡೆ, ವಿನೋದ; ಕಲಹ: ಯುದ್ಧ; ಲಂಪಟ: ವಿಷಯಾಸಕ್ತ, ಕಾಮುಕ; ನಿಲ್ಲು: ತಡೆ; ಅರಿ: ಕತ್ತರಿಸು; ಅಪ್ಪಳಿಸು: ತಟ್ಟು, ತಾಗು; ರಥ: ಬಂಡಿ;

ಪದವಿಂಗಡಣೆ:
ಸಿಲುಕಿದನು +ತಿವಿ +ಸ್ವಾಮಿ+ದ್ರೋಹನ
ಗಳದ +ರಕುತಕೆ +ಬಾಯನ್+ಒಡ್ಡೆನುತ್
ಅಳವಿಯಲಿ +ಹೊಕ್ಕ್+ಒಕ್ಕಲಿಕ್ಕಿದನ್+ಆನೆ +ಕುದುರೆಗಳ
ಎಲೆ +ದುರಾತ್ಮ + ದ್ಯೂತ+ಕೇಳೀ
ಕಲಹ+ಲಂಪಟ +ನಿಲ್ಲು +ನಿಲ್ಲೆನುತ್
ಒಳಗುವರಿದ್+ಅಪ್ಪಳಿಸಿದನು +ದುರ್ಯೋಧನನ +ರಥವ

ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ದುರಾತ್ಮ, ದ್ಯೂತಕೇಳೀ ಕಲಹಲಂಪಟ, ಸ್ವಾಮಿದ್ರೋಹ

ಪದ್ಯ ೪೩: ದ್ರೋಣನನ್ನು ಎದುರಿಸಲು ಯಾರು ಮುಂದೆ ಬಂದರು?

ಎಲೆ ಯುಧಿಷ್ಠಿರ ಬಿಲ್ಲ ಹಿಡಿ ನರ
ಹುಳುಗಳಿವದಿರ ಕವಿಸಿ ಕಾಲವ
ಕೊಲುವುದೇ ಸಾಕಿನ್ನು ಕೈವಶವಾದೆ ನಿಲೆನುತ
ಅಳವಿಗಿಟ್ಟಣಿಸಲು ಶರಾಳಿಯ
ತುಳುಕಿ ಹೊಕ್ಕನು ಸತ್ಯಜಿತು ದಳ
ವುಳಿಸಿದರು ಚಿತ್ರಕ ಶತಾನೀಕಾದಿ ನಾಯಕರು (ದ್ರೋಣ ಪರ್ವ, ೨ ಸಂಧಿ, ೪೩ ಪದ್ಯ)

ತಾತ್ಪರ್ಯ:
ದ್ರೋಣನು ಗರ್ಜಿಸುತ್ತಾ, ಎಲೇ ಯುಧಿಷ್ಠಿರ, ಬಿಲ್ಲನ್ನು ಹಿಡಿದು ಯುದ್ಧಕ್ಕೆ ಬಾ, ಈ ನರಹುಳುಗಲನ್ನು ನನ್ನ ಮೇಲೆ ಬಿಟ್ಟು ಕಾಲವನ್ನು ವ್ಯಯಮಾಡ ಬೇಡ. ಇನ್ನು ಸಾಕು, ನೀನು ನನಗೆ ಸೆರೆಸಿಕ್ಕೆ ನಿಲ್ಲು ಎನ್ನುತ್ತಾ ಯುದ್ಧಕ್ಕೆ ಬರಲು, ಸತ್ಯಜಿತು, ಚಿತ್ರಕ, ಶತಾನೀಕ ಮೊದಲಾದ ಯೋಧರು ದೋಣನನ್ನು ಇದಿರಿಸಿದರು.

ಅರ್ಥ:
ಬಿಲ್ಲು: ಚಾಪ; ಹಿಡಿ: ಗ್ರಹಿಸು; ನರ: ಮನುಷ್ಯ; ಹುಳು: ಕ್ಷುಲ್ಲಕ; ಇವದಿರು: ಇಷ್ಟುಜನ; ಕವಿಸು: ಮುಸುಕು, ದಟ್ಟವಾಗಿಸು; ಕಾಲ: ಸಮಯ; ಕೊಲು: ಸಾಯಿಸು, ಹಾಳುಮಾಡು; ಸಾಕು: ನಿಲ್ಲಿಸು; ಕೈವಶ: ಬಂಧನ; ನಿಲ್ಲು: ತಡೆ; ಅಳವಿ: ಶಕ್ತಿ, ಯುದ್ಧ; ಇಟ್ಟಣಿಸು: ದಟ್ಟವಾಗು, ಒತ್ತಾಗು; ಶರಾಳಿ: ಬಾಣಗಳ ಗುಂಪು; ತುಳುಕು: ಹೊರ ಚೆಲ್ಲು, ಕದಡು; ಹೊಕ್ಕು: ಸೇರು; ದಳ: ಗುಂಪು; ಉಳಿ: ಬಿಡು, ತೊರೆ; ಆದಿ: ಮೊದಲಾದ; ನಾಯಕ: ಒಡೆಯ;

ಪದವಿಂಗಡಣೆ:
ಎಲೆ +ಯುಧಿಷ್ಠಿರ +ಬಿಲ್ಲ +ಹಿಡಿ +ನರ
ಹುಳುಗಳ್+ಇವದಿರ +ಕವಿಸಿ +ಕಾಲವ
ಕೊಲುವುದೇ +ಸಾಕಿನ್ನು+ ಕೈವಶವಾದೆ +ನಿಲೆನುತ
ಅಳವಿಗ್+ಇಟ್ಟಣಿಸಲು +ಶರಾಳಿಯ
ತುಳುಕಿ +ಹೊಕ್ಕನು +ಸತ್ಯಜಿತು +ದಳ
ವುಳಿಸಿದರು +ಚಿತ್ರಕ +ಶತಾನೀಕಾದಿ +ನಾಯಕರು

ಅಚ್ಚರಿ:
(೧) ಯುಧಿಷ್ಠಿರನನ್ನು ಹಂಗಿಸುವ ಪರಿ – ಎಲೆ ಯುಧಿಷ್ಠಿರ ಬಿಲ್ಲ ಹಿಡಿ ನರಹುಳುಗಳಿವದಿರ ಕವಿಸಿ ಕಾಲವ
ಕೊಲುವುದೇ