ಪದ್ಯ ೩೦: ಯುದ್ಧದ ಭೀಕರತೆ ಹೇಗಿತ್ತು?

ಬಾಲಸೂರ್ಯನವೊಲ್ ಪ್ರತಿಕ್ಷಣ
ದೇಳಿಗೆಯ ತೇಜದ ವಿಕಾರ ಚ
ಡಾಳಿಸಿತು ವಿಕ್ರಮದ ಝಳ ಜಗವಳುಕೆ ಝೊಂಪಿಸಿತು
ಹೇಳಲೇನರ್ಜುನನ ಭೀಮನ
ಸೋಲವದು ತಾ ಮೃತ್ಯುವೀ ಪರಿ
ಕಾಳೆಗವ ನಾನರಿಯೆನಮರಾಸುರರ ಥಟ್ಟಿನಲಿ (ದ್ರೋಣ ಪರ್ವ, ೧೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸಂಜಯನು ಹೇಳಿದನು, ದ್ರೋಣನ ತೇಜಸ್ಸು ಬಾಲ ಸೂರ್ಯನನಂತೆ ಪ್ರತಿಕ್ಷಣಕ್ಕೂ ಹೆಚ್ಚಾಗುತ್ತಿತ್ತು. ಅವನ ಗೆಲುವಿನ ಝಳಕ್ಕೆ ಜಗತ್ತು ಅಳುಕಿತು. ಅರ್ಜುನನೂ ಭೀಮನೂ ಒಟ್ಟಾಗಿ ಕಾದಿ ಸೋತು ಹೋದುದು ಮರಣಕ್ಕೆ ಸಮಾನವಾದಂತಿತ್ತು. ದೇವ ದಾನವರ ಸೈನ್ಯಗಳ ಕಾಳಗಗಳಲ್ಲೂ ಇಂತಹ ಕಾಳಗವನ್ನು ನಾನು ಕೇಳಿಲ್ಲ ಎಂದು ಯುದ್ಧದ ಭೀಕರತೆಯನ್ನು ವಿವರಿಸಿದನು.

ಅರ್ಥ:
ಬಾಲ: ಚಿಕ್ಕ; ಸೂರ್ಯ: ರವಿ, ಭಾನು; ಪ್ರತಿಕ್ಷಣ: ಕ್ಷಣ ಕ್ಷಣ; ಏಳಿಗೆ: ಹೆಚ್ಚು; ತೇಜ: ಪ್ರಕಾಶ; ವಿಕಾರ: ಬದಲಾವಣೆ; ಚಡಾಳಿಸು: ವೃದ್ಧಿಹೊಂದು; ಝಳ: ಪ್ರಕಾಶ; ಜಗ: ಪ್ರಪಂಚ; ಅಳುಕು: ಹೆದರು; ಝೊಂಪಿಸು: ಭಯಗೊಳ್ಳು; ಹೇಳು: ತಿಳಿಸು; ಸೋಲು: ಪರಾಭವ; ಮೃತ್ಯು: ಸಾವು; ಕಾಳೆಗ: ಯುದ್ಧ; ಅರಿ: ತಿಳಿ; ಅಮರ: ದೇವತೆ; ಅಸುರ: ರಾಕ್ಷಸ; ಥಟ್ಟು: ಗುಂಪು;

ಪದವಿಂಗಡಣೆ:
ಬಾಲಸೂರ್ಯನವೊಲ್ +ಪ್ರತಿಕ್ಷಣದ್
ಏಳಿಗೆಯ +ತೇಜದ +ವಿಕಾರ +ಚ
ಡಾಳಿಸಿತು +ವಿಕ್ರಮದ +ಝಳ +ಜಗವ್+ಅಳುಕೆ +ಝೊಂಪಿಸಿತು
ಹೇಳಲೇನ್+ಅರ್ಜುನನ +ಭೀಮನ
ಸೋಲವದು+ ತಾ +ಮೃತ್ಯುವ್+ಈ+ ಪರಿ
ಕಾಳೆಗವ+ ನಾನರಿಯೆನ್+ಅಮರ+ಅಸುರರ +ಥಟ್ಟಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಾಲಸೂರ್ಯನವೊಲ್ ಪ್ರತಿಕ್ಷಣದೇಳಿಗೆಯ ತೇಜದ ವಿಕಾರ ಚಡಾಳಿಸಿತು
(೨) ಉದ್ಧದ ತೀವ್ರತೆ – ಈ ಪರಿ ಕಾಳೆಗವ ನಾನರಿಯೆನಮರಾಸುರರ ಥಟ್ಟಿನಲಿ

ಪದ್ಯ ೪೫: ಘಟೋತ್ಕಚನು ಧರ್ಮಜನ ಬಳಿ ಏನು ಹೇಳಿದನು?

ಏನು ಧರ್ಮಜ ಕರಸಿದೈ ಕುರು
ಸೇನೆ ಮಲೆತುದೆ ಬಿಡು ಬಿಡಾ ತಡ
ವೇನು ತಾ ವೀಳೆಯವನೆನುತೆಡಗಯ್ಯನರಳಿಚುತ
ದಾನವಾಮರರೊಳಗೆ ನಿನ್ನಯ
ಸೂನುವಿಗೆ ಸರಿಯಿಲ್ಲೆನಿಸಿ ನಿಲ
ಲಾನು ಬಲ್ಲೆನು ನೋಡೆನುತ ಬಿದಿರಿದನು ಖಂಡೆಯವ (ದ್ರೋಣ ಪರ್ವ, ೧೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ, ನನ್ನನ್ನು ಏಕೆ ಕರೆಸಿದಿರಿ? ಕೌರವ ಸೈನ್ಯವು ಇದಿರಾಯಿತೇ? ತಡಮಾಡದೆ ನನ್ನನ್ನು ಬಿಡು, ದೇವ ದಾನವರಲ್ಲಿ ನಿನ್ನ ಮಗನಿಗೆ ಸರಿಯಾದವರೇ ಇಲ್ಲವೆನ್ನುವಮ್ತೆ ನಾನು ಯುದ್ಧಮಾಡಬಲ್ಲೆ. ನೋಡು, ತಡವೇಕೆ, ಮೊದಲು ವೀಳೆಯವನ್ನು ನೀಡು ಎಂದು ತನ್ನ ಕತ್ತಿಯನ್ನು ಹೊರತೆಗೆದು ಝಳಪಿಸುತ್ತಾ, ವೀಳೆಯನ್ನು ತೆಗೆದುಕೊಳ್ಳಲು ತನ್ನ ಎಡಗೈಯನ್ನು ಒಡ್ಡಿದನು.

ಅರ್ಥ:
ಕರಸು: ಬರೆಮಾಡು; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು, ಎದುರಿಸು; ಬಿಡು: ತೊರೆ; ತಡ: ನಿಧಾನ; ವೀಳೆ: ತಾಂಬೂಲ; ಕಯ್ಯ್: ಹಸ್ತ; ಅರಳಿಚು: ಬಿರಿಯುವಂತೆ ಮಾಡು; ದಾನವ: ರಾಕ್ಷಸ; ಅಮರ: ದೇವತೆ; ಸೂನು: ಮಗ; ನಿಲಲು: ಎದುರು ನಿಲ್ಲು; ಬಲ್ಲೆ: ತಿಳಿ; ನೋಡು: ವೀಕ್ಷಿಸು; ಬಿದಿರು: ಕೊಡಹು, ಒದರು; ಖಂಡೆಯ: ಕತ್ತಿ;

ಪದವಿಂಗಡಣೆ:
ಏನು+ ಧರ್ಮಜ+ ಕರಸಿದೈ+ ಕುರು
ಸೇನೆ +ಮಲೆತುದೆ+ ಬಿಡು +ಬಿಡಾ+ ತಡ
ವೇನು +ತಾ +ವೀಳೆಯವನ್+ಎನುತ್+ಎಡಗಯ್ಯನ್+ಅರಳಿಚುತ
ದಾನವ+ಅಮರರೊಳಗೆ +ನಿನ್ನಯ
ಸೂನುವಿಗೆ +ಸರಿಯಿಲ್ಲೆನಿಸಿ+ ನಿಲಲ್
ಆನು +ಬಲ್ಲೆನು +ನೋಡೆನುತ +ಬಿದಿರಿದನು +ಖಂಡೆಯವ

ಅಚ್ಚರಿ:
(೧) ಘಟೋತ್ಕಚನ ಧೈರ್ಯದ ನುಡಿ – ದಾನವಾಮರರೊಳಗೆ ನಿನ್ನಯಸೂನುವಿಗೆ ಸರಿಯಿಲ್ಲೆನಿಸಿ ನಿಲಲಾನು ಬಲ್ಲೆನು

ಪದ್ಯ ೪: ಸಾತ್ಯಕಿ ಭೂರಿಶ್ರವರ ಯುದ್ಧವನ್ನು ಯಾರು ಪ್ರಶಂಶಿಸಿದರು?

ಆದಡಿದ ಕೊಳ್ಳೆನುತ ಸಾತ್ಯಕಿ
ಕೋದನಭ್ರವನಂಬಿನಲಿ ಬಲು
ಹಾದನೈ ಮಝ ಎನುತ ಕಡಿದನು ಸೋಮದತ್ತಸುತ
ಕಾದುಕೊಳ್ಳೆನುತೆಚ್ಚನಂಬಿನ
ಬೀದಿವರಿ ಬಲುಹಾಯ್ತು ಖತಿಯಲಿ
ಕೈದುಕಾರರು ಮೆಚ್ಚಿಸಿದರಮರಾಸುರಾವಳಿಯ (ದ್ರೋಣ ಪರ್ವ, ೧೪ ಸಂಧಿ, ೪ ಪದ್ಯ)

ತಾತ್ಪರ್ಯ:
ಹಾಗಾದರೆ ಈ ಬಾಣಗಳ ರುಚಿಯನ್ನು ನೋಡು ಎನ್ನುತ್ತಾ ಸಾತ್ಯಕಿಯು ಆಕಾಶದ ತುಂಬ ಬಾಣಗಳನ್ನು ಬಿಟ್ಟನು. ಸೋಮದತ್ತನ ಮಗನಾದ ಭೂರಿಶ್ರವನು ಓಹೋ ಬಲಿತಿದ್ದಾನೆ, ಉಳಿದುಕೋ ಎನ್ನುತ್ತಾ ಬಾಣಗಲನ್ನು ಬಿಟ್ಟನು. ಬಾಣಗಳ ಓಡಾಟ ಹೆಚ್ಚಾಯಿತು. ಕೋಪದಿಂದ ಕಾದಾಡುತ್ತಿದ್ದ ಇಬ್ಬರ ಕಾಳಗವನ್ನು ದೇವ ದಾನವರಿಬ್ಬರ ಗುಂಪುಗಳು ಮೆಚ್ಚಿದವು.

ಅರ್ಥ:
ಕೊಳ್ಳು: ತೆಗೆದುಕೋ; ಅಭ್ರ: ಆಗಸ; ಕೋದು: ಸೇರಿಸು, ಪೋಣಿಸು; ಅಂಬು: ಬಾಣ; ಬಲು: ಬಹಳ; ಹಾಯ್ದು: ಮೇಲೆಬಿದ್ದು; ಮಝ: ಭಲೇ; ಕಡಿ: ಸೀಳು; ಸುತ: ಮಗ; ಕಾದು: ರಕ್ಷಣೆ; ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ಬೀದಿವರಿ: ಸುತ್ತಾಡು, ಅಲೆದಾಡು; ಬಲುಹು: ಬಹಳ; ಖತಿ: ಕೋಪ; ಕೈದು: ಆಯುಧ, ಶಸ್ತ್ರ; ಕೈದುಕಾರ: ಆಯುಧವನ್ನು ಧರಿಸಿದವ; ಮೆಚ್ಚಿಸು: ಪ್ರಶಂಶಿಸು; ಅಮರ: ದೇವತೆ: ಅಸುರ: ದಾನವ; ಆವಳಿ: ಗುಂಪು;

ಪದವಿಂಗಡಣೆ:
ಆದಡ್+ಇದ +ಕೊಳ್ಳೆನುತ +ಸಾತ್ಯಕಿ
ಕೋದನ್+ಅಭ್ರವನ್+ಅಂಬಿನಲಿ +ಬಲು
ಹಾದನೈ +ಮಝ +ಎನುತ +ಕಡಿದನು +ಸೋಮದತ್ತಸುತ
ಕಾದುಕೊಳ್ಳ್+ಎನುತ್+ಎಚ್ಚನ್+ಅಂಬಿನ
ಬೀದಿವರಿ +ಬಲುಹಾಯ್ತು +ಖತಿಯಲಿ
ಕೈದುಕಾರರು +ಮೆಚ್ಚಿಸಿದರ್+ಅಮರ+ಅಸುರ+ಆವಳಿಯ

ಅಚ್ಚರಿ:
(೧) ಭೂರಿಶ್ರವನ ಪರಿಚಯ – ಸೋಮದತ್ತಸುತ
(೨) ಅ ಕಾರದ ಪದಜೋಡಣೆ – ಮೆಚ್ಚಿಸಿದರಮರಾಸುರಾವಳಿಯ

ಪದ್ಯ ೩೮: ದ್ರೋಣನು ಯುಧಿಷ್ಠಿರನಿಗೆ ಏನು ಹೇಳಿದನು?

ಬಲದ ಬರಿಕೈದೆವು ಯುಧಿಷ್ಠಿರ
ಬಿಲುದುಡುಕು ಸಾಕೋಡಿ ಬದುಕುವ
ಹುಲು ಪರೆಯತನ ಹೆಮ್ಮೆಯೇ ಕ್ಷತ್ರಿಯರ ಮಕ್ಕಳಿಗೆ
ಅಳಿದರಮರರಿಗೊಡೆಯನಹೆ ಮೇ
ಣುಳಿದಡವನೀಪಾಲನಹೆ ಯೀ
ಕಲಹವಿಹಪರಕೊಳ್ಳಿತೆಂದುರವಣಿಸಿದನು ದ್ರೋಣ (ದ್ರೋಣ ಪರ್ವ, ೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಯುಧಿಷ್ಠಿರ, ನಿನ್ನ ಸೈನ್ಯವನ್ನು ನಿರ್ನಾಮ ಮಾಡಿದ್ದಾಯಿತು, ಇನ್ನು ನೀನು ಬಿಲ್ಲು ಹಿಡಿ, ಬದುಕಲು ಓಡಿಹೋಗುವ ಹೇಡಿತನ ಕ್ಷತ್ರಿಯರಿಗೆ ಹೆಮ್ಮೆಯನ್ನು ತರುವುದಿಲ್ಲ, ಗೆದ್ದರೆ ನೀನು ಭೂಮಿಯಲ್ಲಿ ರಾಜನಾಗುವೆ, ಸತ್ತರೆ ಸ್ವರ್ಗಾಧಿಪತಿಯಾಗುವೆ, ಯುದ್ಧ ಮಾಡುವುದು ಇಹಕ್ಕೂ ಪರಕ್ಕೂ ಒಳ್ಳೆಯದು ಎನ್ನುತ್ತಾ ದ್ರೋಣನು ಗರ್ಜಿಸಿದನು.

ಅರ್ಥ:
ಬಲ: ಶಕ್ತಿ, ಸೈನ್ಯ; ಬರಿಕೈ: ಏನು ಇಲ್ಲದ ಸ್ಥಿತಿ; ಕೈದು: ಆಯುಧ, ಶಸ್ತ್ರ; ಬಿಲು: ಬಿಲ್ಲು, ಚಾಪ; ಓಡು: ಪಲಾಯನ; ಬದುಕು: ಜೀವಿಸು; ಹುಲು: ಕ್ಷುಲ್ಲಕ; ಪರೆ: ಹರಡು, ವ್ಯಾಪಿಸು; ಹೆಮ್ಮೆ: ಅಭಿಮಾನ; ಮಕ್ಕಳು: ಸುತರು; ಅಳಿ: ನಾಶ; ಅಮರ: ದೇವತೆ; ಒಡೆಯ: ದೊರೆ; ಮೇಣ್: ಅಥವ; ಉಳಿ: ಜೀವಿಸು; ಅವನೀಪಾಲ: ರಾಜ; ಕಲಹ: ಯುದ್ಧ; ಇಹಪರಕೆ: ಈ ಲೋಕ ಮತ್ತು ಪರಲೋಕ; ಒಳ್ಳಿತು: ಒಳ್ಳೆಯದು; ಉರವಣಿಸು: ಉತ್ಸಾಹದಿಂದಿರು, ಆತುರಿಸು;

ಪದವಿಂಗಡಣೆ:
ಬಲದ +ಬರಿಕೈದೆವು+ ಯುಧಿಷ್ಠಿರ
ಬಿಲುದುಡುಕು +ಸಾಕ್+ಓಡಿ +ಬದುಕುವ
ಹುಲು +ಪರೆಯತನ+ ಹೆಮ್ಮೆಯೇ+ ಕ್ಷತ್ರಿಯರ +ಮಕ್ಕಳಿಗೆ
ಅಳಿದರ್+ಅಮರರಿಗ್+ಒಡೆಯನಹೆ +ಮೇಣ್
ಉಳಿದಡ್+ಅವನೀಪಾಲನಹೆ+ ಈ
ಕಲಹವ್+ಇಹಪರಕ್+ಒಳ್ಳಿತೆಂತ್+ಉರವಣಿಸಿದನು+ ದ್ರೋಣ

ಅಚ್ಚರಿ:
(೧) ಕ್ಷತ್ರಿಯರ ಹೆಮ್ಮೆ – ಸಾಕೋಡಿ ಬದುಕುವ ಹುಲು ಪರೆಯತನ ಹೆಮ್ಮೆಯೇ ಕ್ಷತ್ರಿಯರ ಮಕ್ಕಳಿಗೆ

ಪದ್ಯ ೨೯: ಕೌರವ ಸೈನ್ಯದವರು ಹೇಗೆ ಯುದ್ಧ ಮಾಡಿದರು?

ಏನ ಹೇಳುವೆನಿತ್ತಲಾದುದು
ದಾನವಾಮರರದುಭುತಾಹವ
ವಾ ನಿರಂತರ ವಿಕ್ರಮೋನ್ನತ ಭಟರ ಬವರದಲಿ
ಆನಲಾರಿಗೆ ನೂಕುವುದು ತವ
ಸೂನುವಿನ ಸುಭಟರು ಪರಾಕ್ರಮ
ಹೀನರೇ ಧೃತರಾಷ್ಟ್ರ ಕೇಳೈ ದ್ರೋಣ ಸಂಗರವ (ದ್ರೋಣ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ದ್ರೋಣನ ಯುದ್ಧದ ಪರಿಯನ್ನು ಕೇಳು, ದೇವತೆಗಳು ಮತ್ತು ದಾನವರ ನಡುವೆ ನಡೆದ ಯುದ್ಧದ ಪರಿ, ಅದ್ಭುತ ಯುದ್ಧವೇ ನಡೆಯಿತು. ನಿನ್ನ ಸೈನ್ಯದ ಸುಭಟರೇನು ಪರಾಕ್ರಮವಿಲ್ಲದವರೇ? ಅವರ ಆಕ್ರಮನವನ್ನು ತಡೆದುಕೊಳ್ಳಲು ಯಾರಿಗೆ ಸಾಧ್ಯ ಎಂದು ಕೇಳಿದನು.

ಅರ್ಥ:
ಹೇಳು: ತಿಳಿಸು; ದಾನವ: ರಾಕ್ಷಸ; ಅಮರ: ದೇವತೆ; ಅದುಭುತ: ಆಶ್ಚರ್ಯ; ಆಹವ: ಯುದ್ಧ; ನಿರಂತರ: ಸದಾ; ವಿಕ್ರಮ: ಪರಾಕ್ರಮ; ಉನ್ನತ: ಹೆಚ್ಚು; ಭಟ: ಸೈನಿಕ; ಬವರ: ಕಾಳಗ, ಯುದ್ಧ; ನೂಕು: ತಳ್ಳು; ಸೂನು: ಮಗ; ಸುಭಟ: ಪರಾಕ್ರಮಿ; ಪರಾಕ್ರಮ: ಶಕ್ತಿ; ಹೀನ: ತೊರೆದ, ತ್ಯಜಿಸು; ಕೇಳು: ಆಲಿಸು; ಸಂಗರ: ಯುದ್ಧ;

ಪದವಿಂಗಡಣೆ:
ಏನ +ಹೇಳುವೆನ್+ಇತ್ತಲ್+ಆದುದು
ದಾನವ+ಅಮರರ್+ಅದುಭುತ+ಆಹವವ್
ಆ+ ನಿರಂತರ +ವಿಕ್ರಮ+ಉನ್ನತ+ ಭಟರ +ಬವರದಲಿ
ಆನಲಾರಿಗೆ+ ನೂಕುವುದು +ತವ
ಸೂನುವಿನ +ಸುಭಟರು +ಪರಾಕ್ರಮ
ಹೀನರೇ +ಧೃತರಾಷ್ಟ್ರ +ಕೇಳೈ +ದ್ರೋಣ +ಸಂಗರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ದಾನವಾಮರರದುಭುತಾಹವವಾ ನಿರಂತರ ವಿಕ್ರಮೋನ್ನತ ಭಟರ ಬವರದಲಿ

ಪದ್ಯ ೫೦: ಯಾರಿಗೆ ಪಟ್ಟಕಟ್ಟಲು ದುರ್ಯೋಧನನು ಹೇಳಿದನು?

ದೂತನಮರರಿಗಟ್ಟುವೆನೆ ತಾ
ಬೂತು ಭೀಮಾರ್ಜುನರ ಕೂಡೆ ವಿ
ಘಾತಿ ಕೈಯೊಡನುಚಿತವೇ ಕೆಡೆನುಡಿವುದೀ ಲೋಕ
ಈ ತನುವನೀ ಪರಿಯಲೇ ನಿ
ರ್ಧೂತವನೆ ಮಾಡುವೆನು ನನ್ನನು
ಜಾತನಲಿ ಭೂವಧುವ ಸೇರಿಸಿ ಬದುಕಿ ನೀವೆಂದ (ಅರಣ್ಯ ಪರ್ವ, ೨೨ ಸಂಧಿ, ೫೦ ಪದ್ಯ)

ತಾತ್ಪರ್ಯ:
ಗಂಧರ್ವರ ಬಳಿಗೆ ದೂತರನ್ನು ಕಳಿಸುವುದು ಹಾಸ್ಯಾಸ್ಪದ. ಭೀಮಾರ್ಜುನರ ಜೊತೆ ಯುದ್ಧಕ್ಕೆ ಹೋದರೆ ಲೋಕನಿಂದೆಗೆ ಪಾತ್ರನಾಗುತ್ತೇನೆ. ಉಪವಾಸದಿಂದಲೇ ಈ ದೇಹವನ್ನು ಕೊಡವಿ ಬಿಡುತ್ತೇನೆ. ನನ್ನ ತಮ್ಮನಿಗೆ ಪಟ್ಟಕಟ್ಟಿ ನೀವು ಬಾಳಿರಿ ಎಂದು ದುರ್ಯೋಧನನು ಹೇಳಿದನು.

ಅರ್ಥ:
ದೂತ: ಸೇವಕ; ಅಮರ: ದೇವತೆ; ಬೂತು: ನಾಚಕೆಗೆಟ್ಟ ಮಾತು; ಕೂಡ: ಜೊತೆ; ವಿಘಾತ: ನಾಶ, ಧ್ವಂಸ; ಕೈಯೊಡು: ಕೈ ಕೈ ಜೊತೆಗೂಡು, ಯುದ್ಧ; ಅನುಚಿತ: ಸರಿಯಲ್ಲದ; ಕೆಡು: ಹಾಳಾಗು; ನುಡಿ: ಮಾತಾಡು; ಲೋಕ: ಜಗತ್ತು; ತನು: ದೇಹ; ಪರಿ: ರೀತಿ; ನಿರ್ಧೂತ: ತೊಡೆದು ಹಾಕುವುದು; ಅನುಜಾತ: ತಮ್ಮ; ಭೂವಧು: ಭೂದೇವಿ; ಸೇರಿಸು: ಜೋಡಿಸು; ಬದುಕು: ಜೀವಿಸು;

ಪದವಿಂಗಡಣೆ:
ದೂತನ್+ಅಮರರಿಗ್+ಅಟ್ಟುವೆನೆ +ತಾ
ಬೂತು +ಭೀಮಾರ್ಜುನರ +ಕೂಡೆ +ವಿ
ಘಾತಿ +ಕೈಯೊಡ್+ಅನುಚಿತವೇ +ಕೆಡೆನುಡಿವುದೀ +ಲೋಕ
ಈ+ ತನುವನ್+ಈ+ ಪರಿಯಲೇ+ ನಿ
ರ್ಧೂತವನೆ +ಮಾಡುವೆನು +ನನ್ನ್
ಅನುಜಾತನಲಿ+ ಭೂವಧುವ +ಸೇರಿಸಿ +ಬದುಕಿ +ನೀವೆಂದ

ಅಚ್ಚರಿ:
(೧) ತಮ್ಮನಿಗೆ ಪಟ್ಟವಕಟ್ಟಿ ಎಂದು ಹೇಳುವ ಪರಿ – ನನ್ನನುಜಾತನಲಿ ಭೂವಧುವ ಸೇರಿಸಿ

ಪದ್ಯ ೧೭: ದುರ್ಯೋಧನನು ಸಾಯುತ್ತೇನೆ ಎಂದು ಏಕೆ ಹೇಳಿದನು?

ಮಾವ ಕೇಳತಿಬಲರು ಫಲುಗುಣ
ಪಾವಮಾನಿಗಳೈವರಿಗೆ ತಾ
ಜೀವಸಖ ಗೋವಿಂದನನಿಬರ ಗೆಲುವು ಗೋಚರವೆ
ಸಾವುದಲ್ಲದೆ ತನಗೆ ಬೇರಿ
ನ್ನಾವ ಪರಿಯಲಿ ಸಮತೆ ಸೇರದು
ಜೀವಿತವ್ಯವನಮರ ನಿಕರದೊಳರಸಿಕೊಳ್ಳೆಂದ (ಸಭಾ ಪರ್ವ, ೧೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಶಕುನಿಯ ಬಳಿ ತನ್ನ ಅಳಲನ್ನು ತೋಡಿಕೊಳ್ಳುತ್ತಾ, ಮಾವ ಭೀಮಾರ್ಜುನರು ಅತಿ ಬಲವಂತರು, ಈ ಪಂಚಪಾಂಡವರಿಗೆ ಕೃಷ್ಣನು ಪರಮಾಪ್ತನು, ಅವರನ್ನು ನಾನು ಗೆಲ್ಲಲು ಅಸಾಧ್ಯ ಆದ್ದರಿಂದ ಸಾಯುವುದೊಂದೆ ನನಗೆ ಉಳಿದ ದಾರಿ, ಇನ್ನಾವ ರೀತಿಯಿಂದಲೂ ನನಗೆ ಸಮಾಧಾನ ಸಿಗದು. ನನ್ನ ಜೀವವನ್ನು ನೀನು ದೇವತೆಗಳ ನಡುವೆ ಹುಡುಕಿಕೋ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಮಾವ: ತಾಯಿಯ ಸಹೋದರ; ಬಲರು: ಪರಾಕ್ರಮಿಗಳು; ಪಾವಮಾನಿ: ಭೀಮ; ಸಖ: ಗೆಳೆಯ; ಗೋವಿಂದ: ಕೃಷ್ಣ; ಅನಿಬರು: ಅಷ್ಟು ಜನ; ಗೆಲುವು: ಜಯ; ಗೋಚರ: ತೋರು; ಸಾವು: ಮರಣ; ಬೇರೆ: ಅನ್ಯ; ಪರಿ: ರೀತಿ; ಸಮತೆ: ಸಾದೃಶ್ಯ, ಸಮಾನತೆಯ ಭಾವನೆ; ಸೇರದು: ತಲುಪು, ಮುಟ್ಟು; ಜೀವಿತ: ಬದುಕು;

ಪದವಿಂಗಡಣೆ:
ಮಾವ +ಕೇಳ್+ಅತಿಬಲರು+ ಫಲುಗುಣ
ಪಾವಮಾನಿಗಳ್+ಐವರಿಗೆ +ತಾ
ಜೀವ+ಸಖ +ಗೋವಿಂದನ್+ಅನಿಬರ +ಗೆಲುವು +ಗೋಚರವೆ
ಸಾವುದಲ್ಲದೆ+ ತನಗೆ +ಬೇರಿ
ನ್ನಾವ +ಪರಿಯಲಿ +ಸಮತೆ +ಸೇರದು
ಜೀವಿತವ್ಯವನ್+ಅಮರ +ನಿಕರದೊಳ್+ಅರಸಿಕೊಳ್ಳೆಂದ

ಅಚ್ಚರಿ:
(೧) ಸಾಯುತ್ತೇನೆ ಎಂದು ಹೇಳುವ ಪರಿ – ಜೀವಿತವ್ಯವನಮರ ನಿಕರದೊಳರಸಿಕೊಳ್ಳೆಂದ

ಪದ್ಯ ೨೬: ಇಂದ್ರನು ದೇವತೆಗಳನ್ನು ಹೇಗೆ ಹುರಿದುಂಬಿಸಿದನು?

ಹೊಗಲಿ ಸಮರಕೆ ಸ್ವಾಮಿದ್ರೋಹರು
ತೆಗೆಯಬೇಡೋ ಬೆನ್ನ ಲಾಂಕೆಗೆ
ಜಗದೊಡೆಯನೋ ಫಡಫಡಂಜದಿರೆನಲು ಸುರರಾಜ
ಉಗಿದ ಖಡುಗದ ತಿರುವಿನಂಬಿನ
ಬಿಗಿದ ಬಿಲ್ಲಿನ ಸುರಪನಿದಿರಿನೊ
ಳಗಣಿತಾಮರ ಭಟರು ಹೊಕ್ಕುದು ದೈತ್ಯಬಲದೊಳಗೆ (ಕರ್ಣ ಪರ್ವ, ೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ದೇವತೆಗಳು ಇಂದ್ರನನ್ನು ಬೈಯ್ಯುವುದನ್ನು ಕಂಡನಿಂದ್ರನು, ಎಲೋ ಸ್ವಾಮಿದ್ರೋಹಿಗಳೇ, ಯುದ್ಧಕ್ಕೆ ಮುನ್ನುಗ್ಗಿ, ನಮ್ಮ ಬೆಂಬಲಕ್ಕೆ ಜಗದೊಡೆಯನಾದ ಶಿವನೇ ಇದ್ದಾನೆ, ಹೆದರಬೇಡಿರಿ ಎಂದನು. ಆಗ ಖಡ್ಗಧಾರಿಗಳಾಗಿ, ಬಿಲ್ಲಿನ ತಿರುವಿನಲ್ಲಿ ಬಾಣವನ್ನು ಹೂಡಿ ದೇವತೆಗಳು ಸಮರಕ್ಕೆ ಮುನ್ನುಗ್ಗಿದರು.

ಅರ್ಥ:
ಹೊಗಲಿ: ನಡೆಯಿರಿ; ಸಮರ: ಯುದ್ಧ; ಸ್ವಾಮಿ: ಒಡೆಯ; ದ್ರೋಹ: ವಿಶ್ವಾಸಘಾತ, ವಂಚನೆ; ತೆಗೆ: ಹೊರಹಾಕು; ಬೆನ್ನ: ಹಿಂದೆ; ಲಾಂಕೆ: ಬೆಂಬಲ; ಜಗ: ಜಗತ್ತು; ಒಡೆಯ: ದೊರೆ, ನಾಯಕ; ಫಡಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಅಂಜದಿರಿ: ಹೆದರದಿರಿ; ಸುರರಾಜ: ದೇವತೆಗಳ ಒಡೆಯ (ಇಂದ್ರ); ಉಗಿ: ಹೊರಹಾಕು; ಖಡುಗ: ಕತ್ತಿ; ತಿರುವು: ಸುತ್ತು; ಅಂಬು: ಬಾಣ; ಬಿಗಿ: ಗಟ್ಟಿಯಾಗಿ ಕಟ್ಟು; ಬಿಲ್ಲು: ಧನಸ್ಸು; ಸುರಪ:ಇಂದ್ರ; ಇದಿರು: ಎದುರು; ಅಗಣಿತ: ಅಸಂಖ್ಯಾತ; ಅಮರ: ದೇವತೆಗಳು; ಭಟ: ಸೈನ್ಯ; ಹೊಕ್ಕು: ಸೇರು; ದೈತ್ಯ: ದಾನವ; ಬಲ: ಸೈನ್ಯ;

ಪದವಿಂಗಡಣೆ:
ಹೊಗಲಿ +ಸಮರಕೆ+ ಸ್ವಾಮಿದ್ರೋಹರು
ತೆಗೆಯಬೇಡೋ +ಬೆನ್ನ +ಲಾಂಕೆಗೆ
ಜಗದೊಡೆಯನೋ +ಫಡಫಡ್+ಅಂಜದಿರ್+ಎನಲು +ಸುರರಾಜ
ಉಗಿದ +ಖಡುಗದ +ತಿರುವಿನ್+ಅಂಬಿನ
ಬಿಗಿದ +ಬಿಲ್ಲಿನ +ಸುರಪನ್+ಇದಿರಿನೊಳ್
ಅಗಣಿತ+ಅಮರ +ಭಟರು +ಹೊಕ್ಕುದು +ದೈತ್ಯ+ಬಲದೊಳಗೆ

ಅಚ್ಚರಿ:
(೧) ಸುರರಾಜ, ಸುರಪ – ಇಂದ್ರನನ್ನು ಕರೆದ ಬಗೆ
(೨) ದೇವತೆಗಳು ಯುದ್ಧಕ್ಕೆ ಹೋದ ಪರಿ – ಉಗಿದ ಖಡುಗದ ತಿರುವಿನಂಬಿನ ಬಿಗಿದ ಬಿಲ್ಲಿನ

ಪದ್ಯ ೨೫: ದೇವತೆಗಳೇಕ ಅಳಲಿದರು?

ಹೊಯ್ದುದಮರರನಸುರರಗ್ಗದ
ಕೈದುಕಾರರು ಮತ್ತೆ ನೂಕಿತು
ಮೈದೆಗೆಯಲೊಡವೆರಸಿ ನೂಕಿತು ಬೇಹ ಬೇಹವರು
ಬೈದರಿಂದ್ರನನಿಂದುಮೌಳಿಗೆ
ನೆಯ್ದ ರಥ ನುಗ್ಗಾಯ್ತು ನಾಳವ
ಕೊಯ್ದರೋ ಹುಗ್ಗಿಗರೆನುತೊರಲಿದುದು ಸುರ ಸ್ತೋಮ (ಕರ್ಣ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ರಾಕ್ಷಸರು ದೇವತೆಗಳನ್ನು ಹೊಡೆದರು. ಮತ್ತೆ ದೇವತೆಗಳು ಮುಂದಾಗಿ ಬರಲು, ಅವರನ್ನು ಓಡುವಂತೆ ರಾಕ್ಷಸರು ಬಡಿದರು. ಸೋತ ದೇವತೆಗಳು ಇಂದ್ರನನ್ನು ಬೈದರು, ಶಿವನಿಗೆ ಜೋಡಿಸಿದ ರಥವೇ ಕುಸಿದು ಹೋಯಿತು, ನಮ್ಮ ಪಾಡೇನು? ನಮ್ಮ ಗಂಟಳ ನಾಳವನ್ನು ಕೊಯ್ದರು ಎಂದು ದೇವತೆಗಳು ಅಳಲಿದರು.

ಅರ್ಥ:
ಹೊಯ್ದು: ಹೊಡೆದು; ಅಮರ: ದೇವತೆ; ಅಸುರ: ದಾನವ; ಅಗ್ಗ: ಹೆಚ್ಚು; ಕೈದು: ಕತ್ತಿ; ಕೈದುಕಾರ: ಕತ್ತಿಹಿಡಿದ ಸೈನಿಕ; ಮತ್ತೆ: ಪುನಃ; ನೂಕು: ತಳ್ಳು; ಮೈದೆಗೆ: ಮುಂದೆ ಹೋಗು, ತೋರು; ಒಡವೆರೆಸು: ಜೊತೆಗೂಡು; ಬೇಹ: ಬೇಕಾದ; ಬೇಹವರು: ಗೂಢಚರ್ಯ; ಬೈದು: ಜರಿದು, ತೆಗಳು; ಇಂದ್ರ: ಸುರಪತಿ; ಇಂದುಮೌಳಿ: ಶಿವ, ಶಂಕರ; ಇಂದು: ಚಂದ್ರ; ಮೌಳಿ: ಶಿರ; ಎಯ್ದು:ಸೇರು; ರಥ: ಬಂಡಿ, ತೇರು; ನಾಳ:ಶ್ವಾಸನಾಳ, ಗಂಟಲು; ಕೊಯ್ದು: ಸೀಳು; ಹುಗ್ಗಿಗ: ಶ್ರೇಷ್ಠ; ಒರಲು: ಅರಚು, ಕೂಗಿಕೊಳ್ಳು; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ಹೊಯ್ದುದ್+ಅಮರರನ್+ಅಸುರರ್+ಅಗ್ಗದ
ಕೈದುಕಾರರು +ಮತ್ತೆ +ನೂಕಿತು
ಮೈದೆಗೆಯಲ್+ಒಡವೆರಸಿ +ನೂಕಿತು +ಬೇಹ +ಬೇಹವರು
ಬೈದರ್+ಇಂದ್ರನನ್+ಇಂದುಮೌಳಿಗೆ
ನೆಯ್ದ +ರಥ +ನುಗ್ಗಾಯ್ತು +ನಾಳವ
ಕೊಯ್ದರೋ +ಹುಗ್ಗಿಗರ್+ಎನುತ್+ಒರಲಿದುದು +ಸುರ +ಸ್ತೋಮ

ಅಚ್ಚರಿ:
(೧) ಅಮರರು ಅಸುರರು – ದೇವ ದಾನವ ಪದಗಳ ಬಳಕೆ
(೨) ಬೇಹ ಬೇಹವರು – ಬೇಹ ಪದದ ಬಳಕೆ
(೩) ನೂಕು, ನುಗ್ಗು ಪದಗಳ ಬಳಕೆ

ಪದ್ಯ ೩೫: ಹೇಮಕೂಟದ ಪರ್ವತದಲ್ಲಿ ಅರ್ಜುನನು ಯಾರನ್ನು ಸೋಲಿಸಿದನು?

ಹೇಮಕೂಟದ ಗಿರಿಯ ಗಂಧ
ರ್ವಾಮರರ ಝೋಂಪಿಸಿದನವರು
ದ್ದಾಮ ವಸ್ತುವ ಕೊಂಡನಿಳಿದನು ಬಳಿಕ ಪರ್ವತವ
ಆ ಮಹಾ ಹರಿ ವರುಷದಲ್ಲಿಯ
ಸೀಮೆ ಯೋಜನ ನವಸಹಸ್ರ ವಿ
ರಾಮಚದರೊಳಗಿಲ್ಲ ವಿವರಿಸಲರಿಯೆನಾನೆಂದ (ಸಭಾ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಹೇಮಕೂಟ ಪರ್ವತದಲ್ಲಿದ್ದ ದೇವತೆಗಳನ್ನೂ ಗಂಧರ್ವರನ್ನೂ ಜಯಿಸಿ ಅವರಿಂದ ಉತ್ತಮ ವಸ್ತುಗಳನ್ನು ತೆಗೆದುಕೊಂಡು ಕೆಳಕ್ಕಿಳಿಸಿದನು. ಹರಿವರ್ಷದ ಒಂಬತ್ತು ಸಾವಿರ ಯೋಜನದ ಸೀಮೆಯಲ್ಲೂ ದಾಳಿಮಾಡಿದನು. ಅದನ್ನು ವಿವರಿಸಲಾಗದು.

ಅರ್ಥ:
ಗಿರಿ: ಬೆಟ್ಟ; ಅಮರ: ದೇವತೆ; ಝೋಂಪಿಸು: ಅಲುಗಾಡಿಸು, ನಡುಗಿಸು; ಉದ್ದಾಮ: ಶ್ರೇಷ್ಠವಾದ; ವಸ್ತು: ಸಾಮಗ್ರಿ; ಕೊಂಡು: ತೆಗೆದುಕೊ; ಇಳಿ: ಕೆಳಕ್ಕೆ ಬಾ; ಬಳಿಕ: ನಂತರ; ಪರ್ವತ: ಬೆಟ್ಟ; ಸೀಮೆ: ಎಲ್ಲೆ, ಗಡಿ; ಯೋಜನ: ಅಳತೆಯ ಪ್ರಮಾಣ; ನವ: ಒಂಬತ್ತು; ಸಹಸ್ರ: ಸಾವಿರ; ವಿರಾಮ: ಅಂತ್ಯ, ಕೊನೆ; ವಿವರಿಸು: ವಿಸ್ತಾರವಾಗಿ ಹೇಳು;

ಪದವಿಂಗಡಣೆ:
ಹೇಮಕೂಟದ +ಗಿರಿಯ +ಗಂಧ
ರ್ವ+ಅಮರರ+ ಝೋಂಪಿಸಿದನ್+ಅವರ್
ಉದ್ದಾಮ +ವಸ್ತುವ +ಕೊಂಡನ್+ಇಳಿದನು+ ಬಳಿಕ+ ಪರ್ವತವ
ಆ +ಮಹಾ +ಹರಿ +ವರುಷದಲ್ಲಿಯ
ಸೀಮೆ+ ಯೋಜನ +ನವ+ಸಹಸ್ರ +ವಿ
ರಾಮ+ಚದರೊಳಗಿಲ್ಲ +ವಿವರಿಸಲ್+ಅರಿಯೆ+ನಾನೆಂದ

ಅಚ್ಚರಿ:
(೧) ಗಿರಿ, ಪರ್ವತ – ಸಮನಾರ್ಥಕ ಪದಗಳು
(೨) ೪,೫,೬ ಸಾಲಿನ ಕೊನೆಯ ಪದ “ವ” ಕಾರವಾಗಿರುವುದು – ವರುಷ, ವಿರಾಮ, ವಿವರಿಸ..