ಪದ್ಯ ೨೭: ಭೀಮನು ಕೌರವನನ್ನು ಹೇಗೆ ಅಪ್ಪಳಿಸಿದನು?

ಕಾದುಕೊಳು ಕೌರವ ಗದಾಸಂ
ಭೇದದಭ್ಯಾಸಿಗಳಿಗಿದೆ ದು
ರ್ಭೇದ ನೋಡಾ ಹೊಯ್ಲಿಗಿದು ಮರೆವೊಗು ಮಹೇಶ್ವರನ
ಹೋದೆ ಹೋಗಿನ್ನೆನುತ ಜಡಿದು ವಿ
ಷಾದಭರದಲಿ ಮುಂದುಗಾಣದೆ
ಕೈದಣಿಯಲಪ್ಪಳಿಸಿದನು ಕಲಿಭೀಮ ಕುರುಪತಿಯ (ಗದಾ ಪರ್ವ, ೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಕೌರವ, ಗದಾಯುದ್ಧವನ್ನು ಅಭ್ಯಾಸ ಮಾಡಿದವರಿಗೆ ನಾನೀಗ ಹೊಡೆಯುವ ಹೊಡೆತವನ್ನು ತಪ್ಪಿಸಿಕೊಳ್ಳುವುದು ಅಸಾಧ್ಯ. ನಿನ್ನನ್ನು ನೀನು ಕಾಪಾಡಿಕೊಳ್ಳಲು ಶಿವನ ರಕ್ಷಣೆಯನ್ನು ಬೇಡು, ನೀನಾದರೋ ಒಬ್ಬ ಅಲ್ಪ ಹೋಗು ಎನ್ನುತ್ತಾ ಭೀಮನು ವಿಷಾದ ಭರದಿಂದ ತನ್ನ ಕೈಯ ಶಕ್ತಿಯನ್ನೆಲ್ಲಾಬಿಟ್ಟು ಕೌರವನನ್ನು ಅಪ್ಪಳಿಸಿದನು.

ಅರ್ಥ:
ಕಾದುಕೋ: ರಕ್ಷಿಸು; ಭೇದ: ಸೀಳು, ಬಿರುಕು, ಛಿದ್ರ; ಸಂಭೇದ: ಸೀಳುವ; ಗದೆ: ಮುದ್ಗರ; ಅಭ್ಯಾಸಿ: ವಿದ್ಯಾರ್ಥಿ; ದುರ್ಭೇದ: ಕಷ್ಟಕರವಾದ; ನೋಡು: ವೀಕ್ಷಿಸು; ಹೊಯ್ಲು: ಹೊಡೆತ; ಮರೆ: ರಕ್ಷಣೆ; ಮಹೇಶ್ವರ: ಈಶ್ವರ; ಹೋದೆ: ಚಿಕ್ಕ ಗಿಡ, ಪೊದೆ; ಜಡಿ: ಗದರಿಸು, ಬೆದರಿಸು; ವಿಷಾದ: ದುಃಖ; ಭರ: ವೇಗ; ಕಾಣು: ತೋರು; ಕೈದಣಿ: ಕೈ ಆಯಾಸಗೊಳ್ಳು; ಅಪ್ಪಳಿಸು: ತಟ್ಟು, ತಾಗು; ಕಲಿ: ಶೂರ;

ಪದವಿಂಗಡಣೆ:
ಕಾದುಕೊಳು +ಕೌರವ +ಗದಾ+ಸಂ
ಭೇದದ್+ಅಭ್ಯಾಸಿಗಳಿಗಿದೆ +ದು
ರ್ಭೇದ +ನೋಡಾ +ಹೊಯ್ಲಿಗಿದು +ಮರೆವೊಗು +ಮಹೇಶ್ವರನ
ಹೋದೆ +ಹೋಗಿನ್ನೆನುತ +ಜಡಿದು +ವಿ
ಷಾದ+ಭರದಲಿ +ಮುಂದುಗಾಣದೆ
ಕೈದಣಿಯಲ್+ಅಪ್ಪಳಿಸಿದನು +ಕಲಿಭೀಮ +ಕುರುಪತಿಯ

ಅಚ್ಚರಿ:
(೧) ಸಂಭೇದ, ದುರ್ಭೇದ – ಪದಗಳ ಬಳಕೆ
(೨) ಕೌರವನನ್ನು ಹಂಗಿಸುವ ಪರಿ – ಹೋದೆ ಹೋಗಿನ್ನೆನುತ
(೩) ಕ ಕಾರದ ತ್ರಿವಳಿ ಪದ – ಕೈದಣಿಯಲಪ್ಪಳಿಸಿದನು ಕಲಿಭೀಮ ಕುರುಪತಿಯ

ಪದ್ಯ ೫: ಧೃತರಾಷ್ಟ್ರನು ಯಾವುದರಲ್ಲಿ ಚತುರ ಎಂದು ಸಂಜಯನು ಹೇಳಿದನು?

ಮಲಗಿಸಿದನೊರವೇಳ್ವ ನಯನ
ಸ್ಥಳವ ನೇವರಿಸಿದನು ಶೋಕಾ
ನಲನ ತಾಪಕೆ ತಂಪನೆರೆದನು ನೀತಿಮಯರಸದ
ಅಳಲ ಶ್ರಮಮಾಡಿದೆ ನದೀಸುತ
ನಳಿವಿನಲಿ ಗುರು ಕರ್ಣ ಶಲ್ಯರ
ಕಳಿವಿನಲಿ ಕಟ್ಟಳಲ ಬಹಳಾಭ್ಯಾಸಿ ನೀನೆಂದ (ಶಲ್ಯ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನನ್ನು ಮಲಗಿಸಿ ಕಂಬನಿಯನ್ನೊರಸಿ, ನೀತಿ ಬೋಧೆಯಿಂದ ಶೋಕಾಗ್ನಿಯ ತಾಪವನ್ನು ತಂಪುಗೊಳಿಸಿದನು. ಭೀಷ್ಮ, ದ್ರೋಣ, ಕರ್ಣ ಶಲ್ಯರ ಮರಣವನ್ನು ಕೇಳಿ ಕಣ್ಣೀರು ಸುರಿಸುವ ಅಭ್ಯಾಸವನ್ನು ಚೆನ್ನಾಗಿ ಮಾಡಿರುವೆ. ಅಳಲಿನ ಅಭ್ಯಾಸದಲ್ಲಿ ನೀನು ಬಹುಚತುರ ಎಂದನು.

ಅರ್ಥ:
ಮಲಗು: ನಿದ್ರಿಸು; ಒರೆ: ಬಳಿ, ಸವರು; ಏಳು: ಎಚ್ಚರಗೊಳ್ಳು; ನಯನ: ಕಣ್ಣು; ಸ್ಥಳ: ಜಾಗ; ನೇವರಿಸು: ಮೃದುವಾಗಿ ಸವರು; ಶೋಕ: ದುಃಖ; ಅನಲ: ಬೆಂಕಿ; ತಾಪ: ಬಿಸಿ, ಸೆಕೆ; ತಂಪು: ತಣಿವು, ಶೈತ್ಯ; ಎರೆ: ಸುರಿ, ಹೊಯ್ಯು; ನೀತಿ: ಧರ್ಮ, ನ್ಯಾಯ; ರಸ: ಸಾರ; ಅಳಲು: ಶೋಕ; ಶ್ರಮ: ದಣಿವು, ಆಯಾಸ; ನದೀಸುತ: ಭೀಷ್ಮ; ಸುತ: ಮಗ; ಅಳಿವು: ಸಾವು; ಕಳಿವು: ಸಾವು, ನಾಶ; ಕಟ್ಟಳಲು: ಅತೀವ ದುಃಖ; ಬಹಳ: ತುಂಬ; ಅಭ್ಯಾಸ: ವ್ಯಾಸಂಗ;

ಪದವಿಂಗಡಣೆ:
ಮಲಗಿಸಿದನ್+ಒರವೇಳ್ವ+ ನಯನ
ಸ್ಥಳವ +ನೇವರಿಸಿದನು +ಶೋಕಾ
ನಲನ +ತಾಪಕೆ +ತಂಪನ್+ಎರೆದನು +ನೀತಿಮಯ+ರಸದ
ಅಳಲ +ಶ್ರಮಮಾಡಿದೆ+ ನದೀಸುತನ್
ಅಳಿವಿನಲಿ +ಗುರು +ಕರ್ಣ +ಶಲ್ಯರ
ಕಳಿವಿನಲಿ +ಕಟ್ಟಳಲ +ಬಹಳ+ಅಭ್ಯಾಸಿ +ನೀನೆಂದ

ಅಚ್ಚರಿ:
(೧) ಧೃತರಾಷ್ಟ್ರನನ್ನು ಹಂಗಿಸುವ ಪರಿ – ಕಟ್ಟಳಲ ಬಹಳಾಭ್ಯಾಸಿ ನೀನೆಂದ
(೨) ಸಮಾಧಾನ ಪಡಿಸುವ ಪರಿ – ಶೋಕಾನಲನ ತಾಪಕೆ ತಂಪನೆರೆದನು ನೀತಿಮಯರಸದ

ಪದ್ಯ ೧೪: ಉಭಯ ಬಲದವರು ಭೀಮನನ್ನು ಹೇಗೆ ಹೊಗಳಿದರು?

ಗಗನದಲಿ ರಥ ಯೋಜನಾಂತಕೆ
ಚಿಗಿದು ಧರಣಿಯ ಮೇಲೆ ಬೀಳಲು
ನಗುತ ಕರಣವ ಹಾಯ್ಕಿ ಮಂಡಿಯೊಳಿರ್ದನಾ ದ್ರೋಣ
ಜಗದೊಳಾವಭ್ಯಾಸಿಯೋ ತಾ
ಳಿಗೆಯ ತಲ್ಲಣದೊಳಗೆ ನೆಗಹಿನ
ಸುಗಮ ಸಾಹಸನರರೆ ಮಝ ಭಾಪೆಂದುದುಭಯ ಬಲ (ದ್ರೋಣ ಪರ್ವ, ೧೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನು ಎಸೆದ ದ್ರೋಣನ ರಥವು ಒಮ್ದು ಯೋಜನದ ವರೆಗೆ ಹೋಗಿ ಭೂಮಿಯ ಮೇಲೆ ಬಿದ್ದಿತು. ದ್ರೋಣನು ಮಂಡಿ ಹಚ್ಚಿ ನಗುತ್ತಾ ಕುಳಿತಿದ್ದನು. ಉಭಯ ಬಲದವರೂ ಅದಾವ ಅಭ್ಯಾಸದಿಮ್ದ ರಥವನ್ನೆತ್ತಿ ಎಸೆಯುವ ಸಾಹಸ ಬಂದಿತೋ, ಭೀಮ ಭಲೇ ಎಂದು ಹೊಗಳಿದರು.

ಅರ್ಥ:
ಗಗನ: ಬಾನು, ಆಗಸ; ರಥ: ಬಂಡಿ; ಯೋಜನ: ಅಂತ: ಕೊನೆ; ಚಿಗಿ: ಬೆರಳುಗಳಿಂದ ಚಿಮ್ಮಿಸು; ಧರಣಿ: ಭೂಮಿ; ಬೀಳು: ಕುಸಿ; ನಗು: ಹರ್ಷ; ಕರಣ: ಕೆಲಸ; ಹಾಯ್ಕು: ಧರಿಸು, ತೊಡು; ಮಂಡಿ: ಮೊಳಕಾಲು, ಜಾನು; ಜಗ: ಪ್ರಪಂಚ; ಅಭ್ಯಾಸ: ವ್ಯಾಸಂಗ; ತಾಳಿಗೆ: ಗಂಟಲು; ತಲ್ಲಣ: ಅಂಜಿಕೆ, ಭಯ; ನೆಗಹು: ಮೇಲೆತ್ತು; ಸುಗಮ: ನಿರಾಯಾಸ; ಸಾಹಸ: ಪರಾಕ್ರಮ; ಅರರೆ: ಅಬ್ಬಾ; ಮಝ: ಭಲೇ; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಗಗನದಲಿ +ರಥ +ಯೋಜನಾಂತಕೆ
ಚಿಗಿದು +ಧರಣಿಯ +ಮೇಲೆ +ಬೀಳಲು
ನಗುತ +ಕರಣವ +ಹಾಯ್ಕಿ +ಮಂಡಿಯೊಳ್+ಇರ್ದನಾ +ದ್ರೋಣ
ಜಗದೊಳಾವ್+ಅಭ್ಯಾಸಿಯೋ +ತಾ
ಳಿಗೆಯ +ತಲ್ಲಣದೊಳಗೆ +ನೆಗಹಿನ
ಸುಗಮ +ಸಾಹಸನ್+ಅರರೆ +ಮಝ +ಭಾಪೆಂದುದ್+ಉಭಯ +ಬಲ

ಅಚ್ಚರಿ:
(೧)ಭೀಮನನ್ನು ಹೊಗಳಿದ ಪರಿ – ಜಗದೊಳಾವಭ್ಯಾಸಿಯೋ ತಾಳಿಗೆಯ ತಲ್ಲಣದೊಳಗೆ ನೆಗಹಿನ
ಸುಗಮ ಸಾಹಸನರರೆ ಮಝ