ಪದ್ಯ ೨೪: ಪಾಂಡವಸೇನೆಯು ಏಕೆ ತಲೆ ತಗ್ಗಿಸಿತು?

ಎಡದ ದಂಡೆಯೊಳೊತ್ತಿ ಹೊಯುಳ
ಕದುಹ ತಪ್ಪಿಸಿ ಕೌರವೇಂದ್ರನ
ಮುಡುಹ ಹೊಯ್ದನು ಭೀಮ ಮಝ ಭಾಪೆನೆ ಸುರಸ್ತೋಮ
ತಡೆದನಾ ಘಾಯವನು ಗದೆಯಲಿ
ನಡುವನಪ್ಪಳಿಸಿದನು ಭೀಮನ
ಮಿಡುಕು ನಿಂದುದು ನಗುವ ಪಾಂಡವ ಬಲದ ತಲೆ ಮಣಿಯೆ (ಗದಾ ಪರ್ವ, ೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಡದಂಡೆಯಿಂದೊತ್ತಿ, ಹೊಡೆತದ ಭರವನ್ನು ತಪ್ಪಿಸಿ ಭೀಮನು ಕೌರವನ ಮುಡುಹನ್ನು ಹೊಡೆದನು. ದೇವತೆಗಳು ಭಲೇ ಎಂದು ಹೊಗಳಿದರು. ಕೌರವನು ಆ ಪೆಟ್ಟನ್ನು ಗದೆಯಿಂದ ತಪ್ಪಿಸಿ ಭೀಮನ ಸೊಂಟಕ್ಕೆ ಹೊಡೆದನು. ಭೀಮನ ಚಲನೆ ನಿಂತಿತು. ನಗುತ್ತಿದ್ದ ಪಾಂಡವಸೇನೆಯು ನಾಚಿ ತಲೆ ತಗ್ಗಿಸಿತು.

ಅರ್ಥ:
ಎಡ: ವಾಮಭಾಗ; ದಂಡೆ: ಹತ್ತಿರ, ಸಮೀಪ, ದಡ; ಒತ್ತು: ನೂಕು; ಹೊಯ್: ಹೊಡೆ; ಕಡುಹು: ಸಾಹಸ, ಹುರುಪು, ಉತ್ಸಾಹ; ಮುಡುಹು: ಕೊಲ್ಲು, ಸಾಯುವಂತೆ ಮಾಡು; ಮಝ: ಭಲೇ; ಭಾಪು: ಭಲೇ; ಸುರ: ಅಮರ, ದೇವತೆ; ಸ್ತೋಮ: ಗುಂಪು; ತಡೆ: ನಿಲ್ಲಿಸು; ಘಾಯ: ಪೆಟ್ಟು; ಗದೆ: ಮುದ್ಗರ; ನಡು: ಮಧ್ಯ; ಅಪ್ಪಳಿಸು: ಹೊಡೆ; ಮಿಡುಕು: ಅಲುಗಾಟ, ಚಲನೆ; ನಗು: ಹರ್ಷ; ಬಲ: ಸೈನ್ಯ; ತಲೆ: ಶಿರ; ಮಣಿ: ಬಾಗು, ಬಗ್ಗು;

ಪದವಿಂಗಡಣೆ:
ಎಡದ +ದಂಡೆಯೊಳ್+ಒತ್ತಿ +ಹೊಯ್ಗುಳ
ಕಡುಹ +ತಪ್ಪಿಸಿ +ಕೌರವೇಂದ್ರನ
ಮುಡುಹ +ಹೊಯ್ದನು +ಭೀಮ +ಮಝ +ಭಾಪೆನೆ +ಸುರಸ್ತೋಮ
ತಡೆದನಾ +ಘಾಯವನು +ಗದೆಯಲಿ
ನಡುವನ್+ಅಪ್ಪಳಿಸಿದನು+ ಭೀಮನ
ಮಿಡುಕು +ನಿಂದುದು +ನಗುವ +ಪಾಂಡವ +ಬಲದ +ತಲೆ +ಮಣಿಯೆ

ಅಚ್ಚರಿ:
(೧) ಬಿದ್ದನು ಎಂದು ಹೇಳುವ ಪರಿ – ಭೀಮನ ಮಿಡುಕು ನಿಂದುದು ನಗುವ ಪಾಂಡವ ಬಲದ ತಲೆ ಮಣಿಯೆ

ಪದ್ಯ ೧೦: ಪಾಂಡವರೇಕೆ ಹಾ ಎಂದು ಉದ್ಗರಿಸಿದರು?

ಬಾಯೊಳೊಕ್ಕುದು ರುಧಿರ ಕಂಗಳ
ದಾಯ ತಪ್ಪಿತು ಡೆಂಢಣಿಸಿ ಕಲಿ
ವಾಯುಸುತನಪ್ಪಳಿಸಿ ಬಿದ್ದನು ಕಯ್ಯ ಗದೆ ಕಳಚಿ
ಹಾಯೆನುತ ತನ್ನವರು ಭಯದಲಿ
ಬಾಯ ಬಿಡೆ ನಿಮಿಷಾರ್ಧದಲಿ ನಿರ
ಪಾಯನೆದ್ದನು ನೋಡಿದನು ಚೇತರಿಸಿ ಕೆಲಬಲನ (ಗದಾ ಪರ್ವ, ೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಮನ ಬಾಯಲ್ಲಿ ರಕ್ತ ಬಂದಿತು. ಕಣ್ಣುಗುಡ್ಡೆ ಬೆಳ್ಳಗಾದವು. ತಲೆತಿರುಗಿ ಅವನು ಕೆಳಕ್ಕೆ ಬಿದ್ದನು. ಪಾಂಡವರು ಭಯದಿಂದ ಹಾ ಎಂದು ಬಾಯಿ ಬಿಡುತ್ತಿರಲು, ಯಾವ ಅಪಾಯವೂ ಆಗದೆ ಭೀಮನು ಎಚ್ಚತ್ತು ಸುತ್ತಲೂ ನೋಡಿದನು.

ಅರ್ಥ:
ಹೊಕ್ಕು: ಸೇರು; ರುಧಿರ: ರಕ್ತ, ನೆತ್ತರು; ಕಂಗಳು: ನಯನ, ಕಣ್ಣು; ಆಯ: ಪ್ರಮಾಣ; ತಪ್ಪಿತು: ಸರಿಯಿಲ್ಲದಾಗು; ಡೆಂಢಣಿಸು: ಕಂಪಿಸು, ಕೊರಗು; ಕಲಿ: ಶೂರ; ವಾಯುಸುತ: ಭೀಮ; ಅಪ್ಪಳಿಸು: ತಟ್ಟು, ತಾಗು; ಬಿದ್ದು: ಎರಗು; ಕಯ್ಯ: ಹಸ್ತ; ಗದೆ: ಮುದ್ಗರ; ಕಳಚು: ಬೇರ್ಪಡಿಸು, ಬೇರೆಮಾಡು; ತನ್ನವರು: ಸಂಬಂಧಿಕರು; ಭಯ: ದಿಗಿಲು; ಬಿಡೆ: ತೊರೆ; ನಿಮಿಷಾರ್ಧ: ಕೂಡಲೆ; ನಿರಪಾಯ: ಅಪಾಯವಿಲ್ಲದೆ; ನೋಡು: ವೀಕ್ಷಿಸು; ಚೇತರಿಸು: ಎಚ್ಚರಗೊಳ್ಳು; ಕೆಲಬಲ: ಅಕ್ಕಪಕ್ಕ;

ಪದವಿಂಗಡಣೆ:
ಬಾಯೊಳ್+ಒಕ್ಕುದು +ರುಧಿರ +ಕಂಗಳದ್
ಆಯ +ತಪ್ಪಿತು +ಡೆಂಢಣಿಸಿ +ಕಲಿ
ವಾಯುಸುತನ್+ಅಪ್ಪಳಿಸಿ+ ಬಿದ್ದನು+ ಕಯ್ಯ +ಗದೆ +ಕಳಚಿ
ಹಾ+ಎನುತ +ತನ್ನವರು +ಭಯದಲಿ
ಬಾಯ +ಬಿಡೆ +ನಿಮಿಷಾರ್ಧದಲಿ +ನಿರ
ಪಾಯನ್+ಎದ್ದನು+ ನೋಡಿದನು +ಚೇತರಿಸಿ +ಕೆಲಬಲನ

ಅಚ್ಚರಿ:
(೧) ಭೀಮನ ಸ್ಥಿತಿ – ಬಾಯೊಳೊಕ್ಕುದು ರುಧಿರ ಕಂಗಳದಾಯ ತಪ್ಪಿತು ಡೆಂಢಣಿಸಿ ಕಲಿ ವಾಯುಸುತನಪ್ಪಳಿಸಿ ಬಿದ್ದನು

ಪದ್ಯ ೩೧: ಪಾಂಡವ ಸೇನೆಯು ಏಕೆ ಝೋಂಪಿಸಿತು?

ವಿಲಸದಪಸವ್ಯದಲಿ ರಿಪು ಮಂ
ಡಳಿಸಿ ಹೊಯ್ದನು ಸವ್ಯಮಂಡಲ
ವಲಯದಿಂದಾ ಭೀಮಸೇನನ ಹೊಯ್ಲ ಹೊರಬೀಸಿ
ಒಳಬಗಿದು ಕಿಬ್ಬರಿಯ ಕಂಡ
ಪ್ಪಳಿಸಿದನು ನಿನ್ನಾತನಾಚೆಯ
ದಳದ ಭಟತತಿ ಹಾಯೆನಲು ಝೋಂಪಿಸಿದನಾ ಭೀಮ (ಗದಾ ಪರ್ವ, ೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅಪ್ರದಕ್ಷಿಣೆ ಮಾಡುತ್ತಾ ಭೀಮನು ಕೌರವನನ್ನು ಹೊಡೆದನು. ಕೌರವನು ಪ್ರದಕ್ಷಿಣೆ ಗತಿಯಿಂದ ಭೀಮನ ಹೊಡೆತವನ್ನು ನಿವಾರಿಸಿ, ಒಳನುಗ್ಗಿ, ಹೊಟ್ಟೆಯ ಕೆಲಭಾಗಕ್ಕೆ ಹೊಯ್ಯಲು ಭೀಮನು ಓಲಿ ಬೀಳುವುದನ್ನು ಕಂಡು ಪಾಂಡವ ಸೇನೆ ಹಾ ಎಂದು ಕೂಗಿತು.

ಅರ್ಥ:
ಅಪಸವ್ಯ: ಬಲಗಡೆ, ಕಾಳಗದಲ್ಲಿ ಒಂದು ಸಂಚಾರಕ್ರಮ; ವಿಲಸ: ಕ್ರೀಡೆ, ಬೆಡಗು; ರಿಪು: ವೈರಿ; ಮಂಡಲ: ವರ್ತುಲಾಕಾರ; ಹೊಯ್ದು: ಹೋರಾಡು; ಸವ್ಯ: ಪ್ರದಕ್ಷಿಣೆಯ ಕ್ರಮ; ವಲಯ: ವಿಭಾಗ, ಪ್ರದೇಶ; ಹೊಯ್ಲ: ಹೊಡೆ; ಬೀಸು: ತೂಗುವಿಕೆ; ಬಗಿ: ಹೋಳು, ಭಾಗ; ಕಿಬ್ಬರಿ: ಪಕ್ಕೆಯ ಕೆಳ ಭಾಗ; ಕಂಡು: ತೋರು; ಅಪ್ಪಳಿಸು: ತಟ್ಟು, ತಾಗು; ದಳ: ಸೈನ್ಯ; ಭಟ: ಸೈನಿಕ; ತತಿ: ಗುಂಪು; ಎನಲು: ಹೇಳಲು; ಝೋಂಪಿಸು: ಮೈಮರೆ, ಎಚ್ಚರ ತಪ್ಪು;

ಪದವಿಂಗಡಣೆ:
ವಿಲಸದ್+ಅಪಸವ್ಯದಲಿ +ರಿಪು +ಮಂ
ಡಳಿಸಿ +ಹೊಯ್ದನು +ಸವ್ಯ+ಮಂಡಲ
ವಲಯದಿಂದಾ +ಭೀಮಸೇನನ +ಹೊಯ್ಲ+ ಹೊರಬೀಸಿ
ಒಳಬಗಿದು +ಕಿಬ್ಬರಿಯ +ಕಂಡ್
ಅಪ್ಪಳಿಸಿದನು +ನಿನ್ನಾತನ್+ಆಚೆಯ
ದಳದ +ಭಟ+ತತಿ +ಹಾಯೆನಲು +ಝೋಂಪಿಸಿದನಾ +ಭೀಮ

ಅಚ್ಚರಿ:
(೧) ಸವ್ಯ, ಅಪಸವ್ಯ – ವಿರುದ್ಧ ಪದಗಳು
(೨) ಹೊಯ್ದ, ಹೊಯ್ಲ – ಸಮಾನಾರ್ಥಕ ಪದ

ಪದ್ಯ ೫೭: ಶಲ್ಯನನ್ನು ಎದುರಿಸಲು ಯಾರು ಮುಂದೆ ಬಂದರು?

ಮಲೆತ ಧೃಷ್ಟದ್ಯುಮ್ನನನು ಭಯ
ಗೊಳಿಸಿ ಸೋಮಕ ಸೃಂಜಯರನ
ಪ್ಪಳಿಸಿದನು ಸಾತ್ಯಕಿ ಯುಧಾಮನ್ಯೂತ್ತಮೌಂಜಸರ
ದಳದೊಳೋಡಿಸಿ ಮುರಿದು ಚಾತು
ರ್ಬಲವ ಸವರಿ ಶಿಖಂಡಿ ನಕುಲರ
ಹೊಲಬುಗೆಡಿಸಿ ಮಹೀಪತಿಯ ಪಡಿಮುಖಕೆ ಮಾರಾಂತ (ಶಲ್ಯ ಪರ್ವ, ೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ಎದುರು ನಿಂತ ಧೃಷ್ಟದ್ಯುಮ್ನನನ್ನು ಬೆದರಿಸಿ ಸಾತ್ಯಕಿ, ಸೋಮಕ, ಸೃಂಜಯರನ್ನು ಯುಧಾಮನ್ಯು, ಉತ್ತಮೌಜಸರನ್ನು ಓಡಿಸಿ, ಚತುರಂಗ ಸೈನ್ಯವನ್ನು ಸವರಿ ಶಿಖಂಡಿ ನಕುಲರನ್ನು ದಾರಿತಪ್ಪಿಸಿ ಮತ್ತೆ ಧರ್ಮಜನ ಮುಂದೆ ಬಂದು ಹೋರಾಡಲು ಸಿದ್ಧನಾದನು.

ಅರ್ಥ:
ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಭಯ: ಅಂಜಿಕೆ; ಅಪ್ಪಳಿಸು: ತಟ್ಟು, ತಾಗು; ದಳ: ಸೈನ್ಯ; ಓಡು: ಧಾವಿಸು; ಮುರಿ: ಸೀಳು; ಚಾತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಸವರು: ನಾಶಮಾಡು; ಹೊಲಬು: ರೀತಿ, ಮಾರ್ಗ; ಮಹೀಪತಿ: ರಾಜ; ಪಡಿಮುಖ: ಎದುರು, ಮುಂಭಾಗ; ಮಾರಂತು: ಯುದ್ಧಕ್ಕಾಗಿ ನಿಂತು;

ಪದವಿಂಗಡಣೆ:
ಮಲೆತ +ಧೃಷ್ಟದ್ಯುಮ್ನನನು +ಭಯ
ಗೊಳಿಸಿ +ಸೋಮಕ +ಸೃಂಜಯರನ್
ಅಪ್ಪಳಿಸಿದನು +ಸಾತ್ಯಕಿ +ಯುಧಾಮನ್ಯು+ಉತ್ತಮೌಂಜಸರ
ದಳದೊಳ್+ಓಡಿಸಿ+ ಮುರಿದು +ಚಾತು
ರ್ಬಲವ +ಸವರಿ +ಶಿಖಂಡಿ +ನಕುಲರ
ಹೊಲಬುಗೆಡಿಸಿ+ ಮಹೀಪತಿಯ+ ಪಡಿಮುಖಕೆ +ಮಾರಾಂತ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸೋಮಕ ಸೃಂಜಯರನಪ್ಪಳಿಸಿದನು ಸಾತ್ಯಕಿ

ಪದ್ಯ ೫೦: ಅಭಿಮನ್ಯುವಿನ ಕತ್ತಿಯನ್ನು ಯಾರು ತುಂಡು ಮಾಡಿದರು?

ಎಳೆಯ ರವಿ ರಶ್ಮಿಗಳು ರಕ್ತೋ
ತ್ಪಲದೊಳಗೆ ಹೊಳೆವಂತೆ ಹೊನ್ನರೆ
ಬಳೆದ ಹಿಳುಕನೆ ಕಾಣಲಾದುದು ಭಟನ ಕಾಯದಲಿ
ಒಲೆದು ಕೇಸರಿ ಹೊಯ್ವವೋಲ
ವ್ವಳಿಸಿ ಕರ್ಣನ ಹಯ ರಥವನ
ಪ್ಪಳಿಸಿ ಮರಳುವ ಲಾಗಿನಲಿ ಖಂಡೆಯವ ಖಂಡಿಸಿದ (ದ್ರೋಣ ಪರ್ವ, ೬ ಸಂಧಿ, ೫೦ ಪದ್ಯ)

ತಾತ್ಪರ್ಯ:
ಕೆಂದಾವರೆಯಲ್ಲಿ ಉದಯಸೂರ್ಯನ ಕಿರಣಗಳು ಹೊಳೆಯುವಂತೆ ಚಿನ್ನದಿಂದ ಅರ್ಧಲೇಪಿಸಿದ ಬಾಣಗಳೇ ಅಭಿಮನ್ಯುವಿನ ಮೈಯಲ್ಲಿ ಕಾಣಿಸಿದವು. ಅಭಿಮನ್ಯುವು ಸಿಂಹದಂತೆ ಹಾರಿ, ಕೂಗಿ ಕರ್ಣನ ಕುದುರೆ ರಥಗಳನ್ನು ಅಪ್ಪಳಿಸಿ ಹಿಂದಿರುವುಗಾವ ಅಭಿಮನ್ಯುವಿನ ಖಡ್ಗವನ್ನು ಕರ್ಣನು ತುಂಡು ಮಾಡಿದನು.

ಅರ್ಥ:
ಎಳೆಯ: ಚಿಕ್ಕ; ರವಿ: ಸೂರ್ಯ; ರಶ್ಮಿ: ಕಿರಣ; ರಕ್ತ: ನೆತ್ತರು; ಉತ್ಪಲ: ಕನ್ನೈದಿಲೆ; ಹೊಳೆ: ಪ್ರಕಾಶ; ಹೊನ್ನ: ಚಿನ್ನ; ಅರೆ: ಅರ್ಧ; ಬಳಿ: ಲೇಪನ; ಹಿಳುಕು: ಬಾಣದ ಗರಿ; ಕಾಣು: ತೋರು; ಭಟ: ಸೈನಿಕ; ಕಾಯ: ದೇಹ; ಒಲೆ: ತೂಗಾಡು; ಕೇಸರಿ: ಸಿಂಹ; ಹೊಯ್ವು: ಹಾರು; ಅವ್ವಳಿಸು: ಅಪ್ಪಳಿಸು; ಹಯ: ಕುದುರೆ; ರಥ: ಬಂಡಿ; ಅಪ್ಪಳಿಸು: ತಟ್ಟು, ತಾಗು; ಮರಳು: ಹಿಂದಿರುಗು; ಲಾಗು: ನೆಗೆಯುವಿಕೆ; ಖಂಡೆಯ: ಕತ್ತಿ; ಖಂಡ: ತುಂಡು;

ಪದವಿಂಗಡಣೆ:
ಎಳೆಯ +ರವಿ +ರಶ್ಮಿಗಳು +ರಕ್ತ
ಉತ್ಪಲದೊಳಗೆ +ಹೊಳೆವಂತೆ +ಹೊನ್ನ್+ಅರೆ
ಬಳೆದ +ಹಿಳುಕನೆ+ ಕಾಣಲಾದುದು +ಭಟನ +ಕಾಯದಲಿ
ಒಲೆದು +ಕೇಸರಿ +ಹೊಯ್ವವೋಲ್
ಅವ್ವಳಿಸಿ +ಕರ್ಣನ +ಹಯ +ರಥವನ್
ಅಪ್ಪಳಿಸಿ +ಮರಳುವ +ಲಾಗಿನಲಿ +ಖಂಡೆಯವ +ಖಂಡಿಸಿದ

ಅಚ್ಚರಿ:
(೧) ಖ ಕಾರದ ಜೋಡಿ ಪದ – ಖಂಡೆಯವ ಖಂಡಿಸಿದ
(೨) ಉಪಮಾನದ ಪ್ರಯೋಗ – ಎಳೆಯ ರವಿ ರಶ್ಮಿಗಳು ರಕ್ತೋತ್ಪಲದೊಳಗೆ ಹೊಳೆವಂತೆ
(೩) ಅವ್ವಳಿಸಿ, ಅಪ್ಪಳಿಸಿ – ಪ್ರಾಸ ಪದಗಳು

ಪದ್ಯ ೮೧: ಎರಡು ಕಡೆಯ ಆನೆಯ ಸೈನ್ಯವು ಹೇಗೆ ಯುದ್ಧ ಮಾಡಿದವು?

ಮೆಟ್ಟಿ ಸೀಳಿದುಹಾಯ್ಕಿ ದಾಡೆಯ
ಕೊಟ್ಟು ಮೋರೆಯನೊಲೆದು ಹರಿದರೆ
ಯಟ್ಟಿ ಹಿಡಿದಪ್ಪಳಿಸಿ ಜೋದರನಂಘ್ರಿಯಿಂದರೆದು
ಇಟ್ಟು ಕೆಡಹಲು ಹೆಣನ ಲೊಟ್ಟಾ
ಲೊಟ್ಟಿ ಮಸಗಿತು ತುರಗ ನರ ರಥ
ವಿಟ್ಟಣಿಸೆ ಸವರಿದವು ದಂತಿವ್ರಾತವುಭಯದೊಳು (ಭೀಷ್ಮ ಪರ್ವ, ೪ ಸಂಧಿ, ೮೧ ಪದ್ಯ)

ತಾತ್ಪರ್ಯ:
ಶತ್ರು ಸೈನಿಕರನ್ನು ಕಾಲಲ್ಲಿ ತುಳಿದು, ಸೊಂಡಿಲಿನಿಂದ ಸೀಳಿಹಾಕಿ, ದಂತಗಳನ್ನು ಮುಂದೆ ಮಾದಿ, ಮುಖವನ್ನು ಆಚೆ ಈಚೆ ತೂಗಿ ಎದುರಿದ್ದ ಆನೆಯು ಓಡಿಹೋದರೆ, ಅಟ್ಟಿಸಿಕೊಂಡು ಹೋಗಿ, ಯೋಧರನ್ನು ಹಿಡಿದು ಅಪ್ಪಳಿಸಿ ಕೆಡವಲು ಹೆಣಗಳ ತಂಡವೇ ಕಾಣಿಸಿತು. ಆನೆ, ರಥ ಕಾಲಾಳುಗಲನ್ನು ಎರಡು ಸೈನ್ಯಗಳ ಆನೆಗಳೂ ಸವರಿದವು.

ಅರ್ಥ:
ಮೆಟ್ಟು: ತುಳಿ; ಸೀಳು: ಕತ್ತರಿಸು; ಹಾಯ್ಕು: ಹೊಡೆ; ದಾಡೆ:ದವಡೆ, ಒಸಡು; ಕೊಟ್ಟು: ನೀಡು; ಮೋರೆ: ಮುಖ; ಒಲೆ: ತೂಗಾಡು; ಹರಿ: ಸೀಳು; ಅಟ್ಟು: ಹಿಂಬಾಲಿಸು; ಹಿಡಿ: ಬಂಧಿಸು; ಅಪ್ಪಳಿಸು: ತಟ್ಟು, ತಾಗು;
ಜೋದ: ಯೋಧ; ಅಂಘ್ರಿ: ಪಾದ; ಅರೆ: ನುಣ್ಣಗೆ ಮಾಡು; ಇಟ್ಟು: ಇಡು; ಕೆಡಹು: ನಾಶಮಾಡು; ಹೆಣ: ಜೀವವಿಲ್ಲದ ಶರೀರ; ಲೊಟ್ಟಾಲೊಟ್ಟಿ: ಲಟಲಟ ಶಬ್ದ; ಮಸಗು: ಹರಡು; ಕೆರಳು; ತುರಗ: ಕುದರೆ; ನರ: ಮನುಷ್ಯ; ರಥ: ಬಂಡಿ; ಇಟ್ಟಣ: ಹಿಂಸೆ, ಆಘಾತ; ಸವರು: ನಾಶಮಾಡು; ದಂತಿ: ಆನೆ; ವ್ರಾತ: ಗುಂಪು; ಉಭಯ: ಎರಡು;

ಪದವಿಂಗಡಣೆ:
ಮೆಟ್ಟಿ+ ಸೀಳಿದು+ಹಾಯ್ಕಿ +ದಾಡೆಯ
ಕೊಟ್ಟು +ಮೋರೆಯನ್+ಒಲೆದು +ಹರಿದರೆ
ಅಟ್ಟಿ +ಹಿಡಿದಪ್ಪಳಿಸಿ+ ಜೋದರನ್+ಅಂಘ್ರಿಯಿಂದ್+ಅರೆದು
ಇಟ್ಟು+ ಕೆಡಹಲು +ಹೆಣನ +ಲೊಟ್ಟಾ
ಲೊಟ್ಟಿ +ಮಸಗಿತು+ ತುರಗ+ ನರ+ ರಥವ್
ಇಟ್ಟಣಿಸೆ +ಸವರಿದವು +ದಂತಿ+ವ್ರಾತವ್+ಉಭಯದೊಳು

ಅಚ್ಚರಿ:
(೧) ಮೆಟ್ಟು, ಸೀಳು, ಹಾಯ್ಕು, ಒಲೆ, ಹರಿ, ಅಟ್ಟಿ, ಅಪ್ಪಳಿಸಿ, ಇಟ್ಟಣಿಸಿ, ಕೆಡಹು, ಸವರು – ಹೋರಟವನ್ನು ವಿವರಿಸುವ ಪದಗಳು

ಪದ್ಯ ೧೮: ಸರ್ಪಾಸ್ತ್ರವು ಹೇಗೆ ಮುನ್ನುಗ್ಗಿತು?

ಏನಹೇಳುವೆ ಬಳಿಕ ಭುವನ
ಗ್ಲಾನಿಯನು ತೆಗೆದೊಡಿದರು ವೈ
ಮಾನಿಕರು ವೆಂಠಣಿಸಿತುರಿಯಪ್ಪಳಿಸಿತಂಬರವ
ಕಾನಿಡುವ ಕಬ್ಬೊಗೆಯ ಚೂರಿಸು
ವಾನನದ ಕಟವಾಯ ಲೋಳೆಯ
ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ (ಕರ್ಣ ಪರ್ವ, ೨೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕರ್ಣನು ಸರ್ಪಾಸ್ತ್ರವನ್ನು ಬಿಟ್ಟ ನಂತರ ಲೋಕದ ಕ್ಷೋಭೆಯನ್ನು ಏನೆಂದು ಹೇಳಲಿ? ದೇವತೆಗಳು ಆಕಾಶದಲ್ಲಿ ದೂರಕ್ಕೋಡಿದರು, ಅಸ್ತ್ರಾ ಉರಿಯು ಎಲ್ಲಾ ದಿಕ್ಕುಗಳನ್ನ್ನು ಆವರಿಸಿತು, ಹೇಡೆಯನ್ನು ಚಾಚಿ ಜೇನಿನ ಗೂಡಿನಿಂದ ಜಿನುಗುವ ಜೇನುತುಪ್ಪದಂತೆ ಸರ್ಪಾಸ್ತ್ರವು ವಿಷವನ್ನು ಸುರಿಸುತ್ತಾ ಮುನ್ನುಗ್ಗಿತು.

ಅರ್ಥ:
ಬಳಿಕ: ನಂತರ; ಭುವನ: ಜಗತ್ತು; ಗ್ಲಾನಿ: ಅವನತಿ, ನಾಶ; ಓಡು: ಪಲಾಯನ; ವೈಮಾನಿಕ: ದೇವತೆ; ವಂಠಣ: ಮುತ್ತಿಗೆಹಾಕು, ಸುತ್ತುವರಿ; ಉರಿ: ಬೆಂಕಿಯ ಕಿಡಿ; ಅಪ್ಪಳಿಸು: ತಟ್ಟು, ತಾಗು; ಅಂಬರ: ಆಗಸ; ಕಾನಿಡು: ದಟ್ಟವಾಗು, ಸಾಂದ್ರವಾಗು; ಕಬ್ಬೊಗೆ: ಕರಿಯಾದ ಹೊಗೆ; ಚೂರಿಸು: ಕತ್ತರಿಸು; ಆನನ: ಮುಖ; ಕಟವಾಯಿ: ಬಾಯಿ ಕೊನೆ; ಲೋಳೆ: ಅ೦ಟುಅ೦ಟಾಗಿರುವ ದ್ರವ್ಯ; ಜೇನು: ದುಂಬಿ; ಹುಟ್ಟಿ: ಜೇನಿನ ಗೂಡು; ಬಸಿ:ಜಿನುಗು ; ವಿಷ: ನಂಜು; ಉರಗಾಸ್ತ್ರ: ಸರ್ಪಾಸ್ತ್ರ;

ಪದವಿಂಗಡಣೆ:
ಏನಹೇಳುವೆ+ ಬಳಿಕ+ ಭುವನ
ಗ್ಲಾನಿಯನು +ತೆಗೆದ್+ಓಡಿದರು +ವೈ
ಮಾನಿಕರು+ ವೆಂಠಣಿಸಿತ್+ಉರಿ +ಅಪ್ಪಳಿಸಿತ್+ಅಂಬರವ
ಕಾನಿಡುವ +ಕಬ್ಬೊಗೆಯ +ಚೂರಿಸುವ್
ಆನನದ +ಕಟವಾಯ +ಲೋಳೆಯ
ಜೇನಹುಟ್ಟಿಯ +ಬಸಿವ+ ವಿಷದಲಿ+ ಬಂದುದ್+ಉರಗಾಸ್ತ್ರ

ಅಚ್ಚರಿ:
(೧) ವಿಷವು ಹೊರಹೊಮ್ಮುತ್ತಿತ್ತು ಎಂದು ಹೇಳಲು ಜೇನಿನ ಉಪಮಾನವನ್ನು ಬಳಸಿದ ಪರಿ
(೨) ಉಪಮಾನದ ಪ್ರಯೋಗ – ಕಾನಿಡುವ ಕಬ್ಬೊಗೆಯ ಚೂರಿಸುವಾನನದ ಕಟವಾಯ ಲೋಳೆಯ ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ
(೩) ದೇವತೆಗಳನ್ನು ವೈಮಾನಿಕರು ಎಂದು ಕರೆದಿರುವುದು