ಪದ್ಯ ೪೧: ಪಾಂಡವರ ಸೈನ್ಯದಲ್ಲಿ ಯಾರು ಉಳಿದಿದ್ದರು?

ಉಳಿದುದೇಳಕ್ಷೋಹಿಣೀದಳ
ದೊಳಗೆ ನಾರೀನಿಕರ ವಿಪ್ರಾ
ವಳಿ ಕುಶೀಲವ ಸೂತ ಮಾಗಧ ವಂದಿಸಂದೋಹ
ಸುಳಿವ ಕಾಣೆನು ಕೈದುವಿಡಿದರ
ನುಳಿದು ಜೀವಿಸಿದಾನೆ ಕುದುರೆಗ
ಳೊಳಗೆ ಜವಿಯಿಲ್ಲೇನನೆಂಬೆನು ಜನಪ ಕೇಳೆಂದ (ಗದಾ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಏಳು ಅಕ್ಷೋಹಿಣೀ ಸೈನ್ಯದಲ್ಲಿ ಈಗ ಉಳಿದಿದ್ದ ಸೇನೆ ನಾಶವಾಯಿತು. ಬ್ರಾಹ್ಮಣರು, ಸೂತರು, ಮಾಗಧರು, ವಂದಿಗಳು ಮಾತ್ರ ಉಳಿದಿದ್ದರು. ಆಯುಧಧಾರಿಗಳೆಲ್ಲ ಹೋದ ಮೇಲೆ ಆನೆ ಕುದುರೆಗಳಿದ್ದೇನು ಪ್ರಯೋಜನ?

ಅರ್ಥ:
ಉಳಿದ: ಮಿಕ್ಕ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ದಳ: ಸೈನ್ಯ; ನಾರಿ: ಸ್ತ್ರೀ; ನಿಕರ: ಗುಂಪು; ವಿಪ್ರ: ಬ್ರಾಹ್ಮಣ; ಆವಳಿ: ಗುಂಪು; ಕುಶೀಲ: ; ಸೂತ: ಸಾರಥಿ; ಮಾಗಧ: ಹೊಗಳುಭಟ್ಟ; ವಂದಿ: ಸ್ತುತಿಪಾಠಕ; ಸಂದೋಹ: ಗುಂಪು, ಸಮೂಹ; ಸುಳಿ: ಕಾಣಿಸಿಕೊಳ್ಳು; ಕಾಣು: ತೋರು; ಕೈದು: ಆಯುಧ; ಜೀವಿಸು: ಪ್ರಾಣವಿರುವ; ಆನೆ: ಗಜ; ಕುದುರೆ: ಅಶ್ವ; ಜವಿ: ಕೂದಲು, ಕೇಶ; ಜನಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಉಳಿದುದ್+ಏಳ್+ಅಕ್ಷೋಹಿಣೀ+ದಳ
ದೊಳಗೆ +ನಾರೀ+ನಿಕರ +ವಿಪ್ರಾ
ವಳಿ +ಕುಶೀಲವ +ಸೂತ +ಮಾಗಧ +ವಂದಿ+ಸಂದೋಹ
ಸುಳಿವ+ ಕಾಣೆನು +ಕೈದುವಿಡಿದರನ್
ಉಳಿದು +ಜೀವಿಸಿದ್+ಆನೆ +ಕುದುರೆಗಳ್
ಒಳಗೆ +ಜವಿಯಿಲ್ಲೇನನೆಂಬೆನು +ಜನಪ +ಕೇಳೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಉಳಿದು ಜೀವಿಸಿದಾನೆ ಕುದುರೆಗಳೊಳಗೆ ಜವಿಯಿಲ್ಲೇನನೆಂಬೆನು

ಪದ್ಯ ೨೩: ದುರ್ಯೋಧನನನ್ನು ಧರ್ಮಜನು ಹೇಗೆ ಹಂಗಿಸಿದನು?

ಕೊಳನ ಬಿಡು ಕಾದೇಳು ಹಿಂದಣ
ಹಳಿವ ತೊಳೆ ಹೇರಾಳ ಬಾಂಧವ
ಬಳಗ ಭೂಮೀಶ್ವರರ ಬಹಳಾಕ್ಷೋಹಿಣೀದಳವ
ಅಳಿದ ಕೀರ್ತಿಯ ಕೆಸರ ತೊಳೆ ಭೂ
ವಳಯಮಾನ್ಯನು ದೈನ್ಯವೃತ್ತಿಯ
ಬಳಸುವರೆ ಸುಡು ಮರುಳೆ ಕುರುಪತಿ ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ದುರ್ಯೋಧನ, ಕೊಳದಿಂದ ಮೇಲೆದ್ದು ಯುದ್ಧಮಾಡಲು ಬಾ, ಹಿಂದಿನ ದುಷ್ಕೀರ್ತಿಯನ್ನು ಕಳೆದುಕೋ, ಲೆಕ್ಕವಿಲ್ಲದಷ್ಟು ಬಂಧು ಬಾಂಧವರು ಅನೇಕ ಅಕ್ಷೋಹಿಣೀ ಸೈನ್ಯಗಳನ್ನು ಕೊಂದ ಅಪಕೀರ್ತಿಯ ಕೆಸರನ್ನು ತೊಳೆದುಕೋ, ಲೋಕದಲ್ಲಿ ಮಾನ್ಯನಾದವನು ದೀನನಾಗಬಾರದು, ಹುಚ್ಚಾ, ಆಯುಧವನ್ನು ಹಿಡಿ ಎಂದು ಕೌರವನನ್ನು ಧರ್ಮಜನು ಹಂಗಿಸಿದನು.

ಅರ್ಥ:
ಕೊಳ: ಸರಸಿ, ಸರೋವರ; ಬಿಡು: ತೊರೆ; ಕಾದು: ಹೋರಾಡು; ಹಿಂದಣ: ಹಿಂದೆ ನಡೆದ; ಹಳಿ: ದೂಷಿಸು, ನಿಂದಿಸು; ತೊಳೆ: ಸ್ವಚ್ಛಮಾಡು, ಶುದ್ಧಗೊಳಿಸು; ಹೇರಾಳ: ಬಹಳ; ಬಾಂಧವ: ಬಂಧುಜನ; ಬಳಗ: ಗುಂಪು; ಭೂಮೀಶ್ವರ: ರಾಜ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ದಳ: ಸೈನ್ಯ; ಅಳಿ: ಸಾವು; ಕೀರ್ತಿ: ಯಶಸ್ಸು; ಕೆಸರು: ರಾಡಿ; ಭೂವಳಯ: ಭೂಮಿ; ಮಾನ್ಯ: ಪ್ರಸಿದ್ಧ; ದೈನ್ಯ: ದೀನತೆ, ಹೀನಸ್ಥಿತಿ; ವೃತ್ತಿ: ಕೆಲಸ; ಬಳಸು: ಸುತ್ತುವರಿ, ಸುತ್ತುಗಟ್ಟು; ಮರುಳ: ತಿಳಿಗೇಡಿ, ದಡ್ಡ; ಕೈದು: ಆಯುಧ;

ಪದವಿಂಗಡಣೆ:
ಕೊಳನ +ಬಿಡು +ಕಾದೇಳು +ಹಿಂದಣ
ಹಳಿವ +ತೊಳೆ +ಹೇರಾಳ +ಬಾಂಧವ
ಬಳಗ+ ಭೂಮೀಶ್ವರರ +ಬಹಳ+ಅಕ್ಷೋಹಿಣೀ+ದಳವ
ಅಳಿದ+ ಕೀರ್ತಿಯ +ಕೆಸರ +ತೊಳೆ +ಭೂ
ವಳಯ+ಮಾನ್ಯನು +ದೈನ್ಯ+ವೃತ್ತಿಯ
ಬಳಸುವರೆ +ಸುಡು +ಮರುಳೆ +ಕುರುಪತಿ +ಕೈದುಗೊಳ್ಳೆಂದ

ಅಚ್ಚರಿ:
(೧) ಹಿಂದಣ ಹಳಿವ ತೊಳೆ, ಅಳಿದ ಕೀರ್ತಿಯ ಕೆಸರ ತೊಳೆ – ತೊಳೆ ಪದದ ಬಳಕೆ
(೨) ಲೋಕ ನೀತಿ – ಭೂವಳಯಮಾನ್ಯನು ದೈನ್ಯವೃತ್ತಿಯ ಬಳಸುವರೆ

ಪದ್ಯ ೪: ಭೀಮಾರ್ಜುನರನ್ನು ಕೃಷ್ಣನು ಹೇಗೆ ಪತಿಕರಿಸಿದನು?

ತೆಗೆಸು ದಳವನು ಸಾಕು ಬರಿದೇ
ಹೊಗಳುತಿಹೆ ನೀ ನಮ್ಮನೀ ಕಾ
ಳೆಗದೊಳಳಿದುದು ಹಗೆಯೊಳೇಳಕ್ಷೋಹಿಣೀ ಸೇನೆ
ಬಗೆಯದಿರಿದರು ಭೀಮಪಾರ್ಥರು
ಜಗದೊಳದ್ಭುತ ವೀರರಿವರೆಂ
ದಗಧರನು ಪತಿಕರಿಸಿದನು ಪವನಜನ ಫಲುಗುಣನ (ದ್ರೋಣ ಪರ್ವ, ೧೫ ಸಂಧಿ, ೪ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ ನಿನ್ನ ಸೈನ್ಯವನ್ನು ಪಾಳೆಯಕ್ಕೆ ಕಳಿಸು, ನಮ್ಮನ್ನು ಸುಮ್ಮನೆ ಹೊಗಳುತ್ತಿರುವೆ, ಇಂದಿನ ಕಾಳಗದಲ್ಲಿ ಕೌರವರ ಏಳು ಅಕ್ಷೋಹಿಣಿ ಸೇನೆ ಮಡಿಯಿತು. ಭೀಮಾರ್ಜುನರು ಶತ್ರುಗಳನ್ನು ಲೆಕ್ಕಿಸದೆ ಸಂಹರಿಸಿದರು. ಲೋಕದಲ್ಲಿ ಇವರು ಅದ್ಭುತ ವೀರರು ಎಂದು ಭೀಮಾರ್ಜುನರನ್ನು ಹೊಗಳಿ ಅನುಗ್ರಹಿಸಿದನು.

ಅರ್ಥ:
ತೆಗೆ: ಹೊರತರು, ಕಳಿಸು; ದಳ: ಸೈನ್ಯ; ಸಾಕು: ನಿಲ್ಲಿಸು; ಬರಿ: ಕೇವಲ; ಹೊಗಳು: ಪ್ರಶಂಶಿಸು; ಕಾಳೆಗ: ಯುದ್ಧ; ಇಳಿ: ಕೆಳಕ್ಕೆ ಬಾ; ಹಗೆ: ವೈರಿ; ಅಳಿ: ನಾಶ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಸೇನೆ: ಸೈನ್ಯ; ಬಗೆ: ತಿಳಿ; ಇರಿ: ಚುಚ್ಚು; ಜಗ: ಪ್ರಪಂಚ; ಅದ್ಭುತ: ಆಶ್ಚರ್ಯ; ವೀರ: ಪರಾಕ್ರಮಿ; ಅಗಧರ: ಬೆಟ್ಟವನ್ನು ಹೊತ್ತವ (ಕೃಷ್ಣ); ಪತಿಕರಿಸು: ಅನುಗ್ರಹಿಸು; ಪವನಜ: ವಾಯುಪುತ್ರ (ಭೀಮ);

ಪದವಿಂಗಡಣೆ:
ತೆಗೆಸು +ದಳವನು +ಸಾಕು +ಬರಿದೇ
ಹೊಗಳುತಿಹೆ +ನೀ +ನಮ್ಮನ್+ಈ+ ಕಾ
ಳೆಗದೊಳ್+ಅಳಿದುದು +ಹಗೆಯೊಳ್+ಏಳ್+ಅಕ್ಷೋಹಿಣೀ +ಸೇನೆ
ಬಗೆಯದ್+ಇರಿದರು +ಭೀಮ+ಪಾರ್ಥರು
ಜಗದೊಳ್+ಅದ್ಭುತ +ವೀರರ್+ಇವರೆಂದ್
ಅಗಧರನು +ಪತಿಕರಿಸಿದನು +ಪವನಜನ +ಫಲುಗುಣನ

ಅಚ್ಚರಿ:
(೧) ಭೀಮಾರ್ಜುನರನ್ನು ಹೊಗಳುವ ಪರಿ – ಭೀಮಪಾರ್ಥರು ಜಗದೊಳದ್ಭುತ ವೀರರಿವರೆಂ
ದಗಧರನು ಪತಿಕರಿಸಿದನು
(೨) ಭೀಮ ಪಾರ್ಥ, ಪವನಜ ಫಲುಗುಣ – ಭೀಮಾರ್ಜುನರನ್ನು ಕರೆದ ಪರಿ

ಪದ್ಯ ೨೧: ಯಾವ ಆಕಾರದಲ್ಲಿ ಸೈನ್ಯವನ್ನು ನಿಲ್ಲಿಸಲಾಯಿತು?

ಗರುಡನಾಕಾರದಲಿ ಬಲವನು
ಸರಿಸ ಮಿಗೆ ಮೋಹಿದನು ವಿಹಗನ
ಶಿರಕೆ ಕೃಪ ಕುರುರಾಯ ದುಶ್ಯಾಸನರ ನಿಲಿಸಿದನು
ಕರೆದು ಭೂರಿಶ್ರವನ ಮಾದ್ರೇ
ಶ್ವರನ ಭಗದತ್ತನ ಸುಬಾಹುವ
ನಿರಿಸಿದನು ಬಲದೆರಕೆಯೊಳಗಕ್ಷೋಹಿಣೀಬಲವ (ದ್ರೋಣ ಪರ್ವ, ೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ಸೈನ್ಯವನ್ನು ಗರುಡವ್ಯೂಹದಲ್ಲಿ ನಿಲ್ಲಿಸಿ, ಗರುಡನ ತಲೆಯ ಭಾಗದಲ್ಲಿ (ಅಗ್ರಭಾಗ) ಕೃಪ, ಕೌರವ, ದುಶ್ಯಾಸನರನ್ನು ನಿಲ್ಲಿಸಿದನು. ಗರುಡನ ಬಲದ ರೆಕ್ಕೆಯಲ್ಲಿ ಭೂರಿಶ್ರವ, ಶಲ್ಯ, ಭಗದತ್ತ, ಸುಬಾಹುಗಳನ್ನು ಅಕ್ಷೋಹಿಣೀ ಬಲದೊಡನೆ ನಿಲ್ಲಿಸಿದನು.

ಅರ್ಥ:
ಗರುಡ: ವಿಷ್ಣುವಿನ ವಾಹನ; ಆಕಾರ: ರೂಪ; ಬಲ: ಸೈನ್ಯ; ಸರಿಸ: ರೀತಿ, ಕ್ರಮ; ಮಿಗೆ: ಮತ್ತು; ಮೋಹಿದ: ಆಡಿಸಿದ; ವಿಹಗ: ಪಕ್ಷಿ, ಮೋಡ; ಶಿರ: ತಲೆ; ರಾಯ: ರಾಜ; ಕರೆದು: ಬರೆಮಾಡು; ಎರಕೆ: ಬೇಡಿಕೆ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ;

ಪದವಿಂಗಡಣೆ:
ಗರುಡನ್+ಆಕಾರದಲಿ +ಬಲವನು
ಸರಿಸ +ಮಿಗೆ +ಮೋಹಿದನು +ವಿಹಗನ
ಶಿರಕೆ +ಕೃಪ +ಕುರುರಾಯ +ದುಶ್ಯಾಸನರ+ ನಿಲಿಸಿದನು
ಕರೆದು +ಭೂರಿಶ್ರವನ+ ಮಾದ್ರೇ
ಶ್ವರನ +ಭಗದತ್ತನ +ಸುಬಾಹುವನ್
ಇರಿಸಿದನು +ಬಲದ್+ಎರಕೆಯೊಳಗ್+ಅಕ್ಷೋಹಿಣೀ+ಬಲವ

ಅಚ್ಚರಿ:
(೧) ಬಲ – ೧, ೬ ಸಾಲಿನ ಕೊನೆ ಪದ

ಪದ್ಯ ೧೮: ಭೀಷ್ಮನನ್ನು ಯಾರು ತಡೆದರು?

ಮೇಲೆ ಹೇಳಿಕೆಯಾಯ್ತು ವರ ಪಾಂ
ಚಾಲರಿಗೆ ಚೈದ್ಯರಿಗೆ ಮತ್ಸ್ಯ ನೃ
ಪಾಲ ಸೃಂಜಯರಾದಿಯಾದಕ್ಷೋಹಿಣೀ ದಳಕೆ
ಸೂಳು ಮಿಗೆ ಗರ್ಜಿಸುವ ಘನ ನಿ
ಸ್ಸಾಳ ಕೋಟಿಯ ಗಡಣದೊಳು ಕೆಂ
ಗೋಲ ಮಳೆಗರೆಯುತ್ತ ಗಂಗಾಸುತನ ಕೆಣಕಿದರು (ಭೀಷ್ಮ ಪರ್ವ, ೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕೂಡಲೇ ಪಾಂಡವ ಸೈನ್ಯದಲ್ಲಿ ಪಾಂಚಾಲ, ಚೈದ್ಯ, ವಿರಾಟ ಸೃಂಜಯ ಮೊದಲಾದವರ ಅಕ್ಷೋಹಿಣೀ ಸೈನ್ಯಗಳಿಗೆ ಭೀಷ್ಮನನ್ನೆದುರಿಸಲು ಆಜ್ಞೆಯಾಯಿತು. ರಣಕಹಳೆ ರಣಭೇರಿಗಳು ಮೊರೆಯಲು, ಅವರೆಲ್ಲರೂ ಕೆಂಪಾದ ಬಾಣಗಳ ಮಳೆ ಸುರಿಸುತ್ತಾ ಭೀಷ್ಮನನ್ನು ತಡೆದರು.

ಅರ್ಥ:
ಹೇಳು: ತಿಳಿಸು; ವರ: ಶ್ರೇಷ್ಠ; ನೃಪಾಲ: ರಾಜ; ಆದಿ: ಮುಂತಾದ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ದಳ: ಸೈನ್ಯ; ಸೂಳು: ಆವೃತ್ತಿ, ಬಾರಿ; ಗರ್ಜಿಸು: ಆರ್ಭಟಿಸು; ಘನ: ಶ್ರೇಷ್ಠ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಕೋಟಿ: ಅಸಂಖ್ಯಾತ; ಗಡಣ: ಗುಂಪು; ಕೆಂಗೋಲು: ಕೆಂಪಾದ ಬಾಣ; ಮಳೆ: ವರ್ಷ; ಸುತ: ಮಗ; ಕೆಣಕು: ರೇಗಿಸು, ಪ್ರಚೋದಿಸು;

ಪದವಿಂಗಡಣೆ:
ಮೇಲೆ +ಹೇಳಿಕೆಯಾಯ್ತು +ವರ +ಪಾಂ
ಚಾಲರಿಗೆ +ಚೈದ್ಯರಿಗೆ+ ಮತ್ಸ್ಯ +ನೃ
ಪಾಲ +ಸೃಂಜಯರಾದಿಯಾದ್+ ಅಕ್ಷೋಹಿಣೀ +ದಳಕೆ
ಸೂಳು +ಮಿಗೆ +ಗರ್ಜಿಸುವ +ಘನ +ನಿ
ಸ್ಸಾಳ +ಕೋಟಿಯ +ಗಡಣದೊಳು +ಕೆಂ
ಗೋಲ +ಮಳೆಗರೆಯುತ್ತ +ಗಂಗಾಸುತನ +ಕೆಣಕಿದರು

ಅಚ್ಚರಿ:
(೧) ಯುದ್ಧದ ವಿವರಣೆ – ಸೂಳು ಮಿಗೆ ಗರ್ಜಿಸುವ ಘನ ನಿಸ್ಸಾಳ ಕೋಟಿಯ ಗಡಣದೊಳು ಕೆಂಗೋಲ ಮಳೆಗರೆಯುತ್ತ