ಪದ್ಯ ೧೯: ಇಬ್ಬರು ಯೋಧರು ಆಯಾಸವನ್ನು ಹೇಗೆ ಕಳೆದುಕೊಂಡರು?

ತೊಲಗಿ ನಿಂದರು ಮತ್ತೆ ಭಾರಿಯ
ಬಲಲಿಕೆಯ ಬೇಳುವೆಯ ಚಿತ್ತ
ಸ್ಖಲಿತರಮ್ಗೀಕರಿಸಿದರು ಕರ್ಪುರದ ವೀಳೆಯವ
ಘಳಿಲನೆದ್ದರು ನಿಮಿಷಮಾತ್ರಕೆ
ಮಲೆತು ನಿಂದರು ಘಾಯಘಾತಿಯ
ಸುಳಿವನವಧಾನಿಸುತ ತೂಗಿದರಾಯುಧದ್ವಯವ (ಗದಾ ಪರ್ವ, ೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ಇಬ್ಬರೂ ಹಿಂದಕ್ಕೆ ಸರಿದು ಕರ್ಪೂರ ವೀಳೆಯನ್ನು ಕೊಂಡು ಬಲಲಿಕೆಯನ್ನು ಕಳೆದುಕೊಂಡರು. ಮತ್ತೆ ಎದ್ದು ಇದಿರಾಗಿ ವಿರೋಧಿಯನ್ನು ಹೇಗೆ ಹೊಡೆಯಬೇಕೆಂದು ಆಲೋಚಿಸುತ್ತಾ ಎರಡು ಗದೆಗಳನ್ನು ತೂಗಿದರು.

ಅರ್ಥ:
ತೊಲಗು: ದೂರ ಸರಿ; ನಿಂದು: ನಿಲ್ಲು; ಭಾರಿ: ಭಾರವಾದುದು; ಬಳಲಿಕೆ: ಆಯಾಸ; ಬೇಳು: ಸುಟ್ಟುಹಾಕು, ನಾಶಪಡಿಸು; ಚಿತ್ತ: ಮನಸ್ಸು; ಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ರಂಗು: ಬಣ್ಣ; ಕರ್ಪುರ: ಸುಗಂಧ ದ್ರವ್ಯ; ವೀಳೆ: ತಾಂಬೂಲ; ಘಳಿ: ನೆರಗೆ, ಮಡಿಸಿದ ಸೀರೆ; ಎದ್ದು: ಮೇಲೇಳು; ನಿಮಿಷ: ಕ್ಷಣ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ನಿಂದು: ನಿಲ್ಲು; ಘಾಯ: ಪೆಟ್ಟು; ಘಾತಿ: ಪೆಟ್ಟು; ಸುಳಿ: ಕಾಣಿಸಿಕೊಳ್ಳು; ಅವಧಾನ: ಸ್ಮರಣೆ, ಬುದ್ಧಿ; ತೂಗು: ಇಳಿಬಿಡು; ಆಯುಧ: ಶಸ್ತ್ರ; ಅದ್ವಯ: ಎರಡನೆಯದಿಲ್ಲದವನು;

ಪದವಿಂಗಡಣೆ:
ತೊಲಗಿ +ನಿಂದರು +ಮತ್ತೆ+ ಭಾರಿಯ
ಬಳಲಿಕೆಯ +ಬೇಳುವೆಯ +ಚಿತ್ತ
ಸ್ಖಲಿತರ್+ಅಂಗೀಕರಿಸಿದರು +ಕರ್ಪುರದ+ ವೀಳೆಯವ
ಘಳಿಲನೆದ್ದರು+ ನಿಮಿಷಮಾತ್ರಕೆ
ಮಲೆತು +ನಿಂದರು+ ಘಾಯಘಾತಿಯ
ಸುಳಿವನ್+ಅವಧಾನಿಸುತ +ತೂಗಿದರ್+ಆಯುಧ್+ಅದ್ವಯವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಭಾರಿಯ ಬಲಲಿಕೆಯ ಬೇಳುವೆಯ

ಪದ್ಯ ೧೭: ಭೀಮನು ಕೌರವನ ಯಾವ ಭಾಗಕ್ಕೆ ಹೊಡೆದನು?

ಧರಣಿಪತಿ ಕೇಳ್ ಭೀಮಸೇನನ
ಧರಧುರದ ಹೊಯ್ಲುಗಳ ಗದೆಯಲಿ
ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ
ಅರಸನೆರಗಿದಡನಿಲಸುತ ಪೈ
ಸರಿಸಿ ಕಳಚಿದನಾ ಕ್ಷಣದೊಳ
ಬ್ಬರಿಸಿ ಹೊಯ್ದನು ಭೀಮ ಕೌರವನೃಪನ ಕಂಧರವ (ಗದಾ ಪರ್ವ, ೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಾಜನೇ ಕೇಳು, ಭೀಮನು ಗದೆಯಂದ ಹೊಡೆದರೆ, ಅದರಿಂದುದುರುವ ಕಿಡಿಗಳು ಸೂರ್ಯಮಂಡಲವನ್ನು ಮುಸುಕುವುವು. ಕೌರವನು ಗದೆಯಿಂದ ಹೊಡೆಯಲು ಭೀಮನು ತಪ್ಪಿಸಿಕೊಂಡು, ಅಬ್ಬರಿಸಿ ಶತ್ರುವಿನ ಕೊರಳಿಗೆ ಹೊಡೆದನು.

ಅರ್ಥ:
ಧರಣಿಪತಿ: ರಾಜ; ಕೇಳು: ಆಲಿಸು; ಧರಧುರ: ಆರ್ಭಟ, ಕೋಲಾಹಲ; ಹೊಯ್ಲು: ಹೊಡೆತ; ಗದೆ: ಮುದ್ಗರ; ಹೊರಳು: ತಿರುಗು; ಕಿಡಿ: ಬೆಂಕಿ; ಝೊಂಪಿಸು: ಮೈಮರೆ, ಎಚ್ಚರತಪ್ಪು; ಉರು: ಹೆಚ್ಚಾದ, ಅತಿದೊಡ್ಡ; ಖದ್ಯೋತ: ಸೂರ್ಯ; ಮಂಡಲ: ವರ್ತುಲಾಕಾರ; ಅರಸ: ರಾಜ; ಎರಗು: ಬಾಗು; ಅನಿಲಸುತ: ಭೀಮ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಕಳಚು: ಸಡಲಿಸು; ಕ್ಷಣ: ಸಮಯದ ಪ್ರಮಾಣ; ಅಬ್ಬರಿಸು: ಗರ್ಜಿಸು; ಹೊಯ್ದು: ಹೊಡೆ; ನೃಪ: ರಾಜ; ಕಂಧರ: ಕೊರಳು;

ಪದವಿಂಗಡಣೆ:
ಧರಣಿಪತಿ +ಕೇಳ್ +ಭೀಮಸೇನನ
ಧರಧುರದ +ಹೊಯ್ಲುಗಳ +ಗದೆಯಲಿ
ಹೊರಳಿ+ಕಿಡಿ +ಝೊಂಪಿಸಿದುವ್+ಉರು +ಖದ್ಯೋತ +ಮಂಡಲವ
ಅರಸನ್+ಎರಗಿದಡ್+ಅನಿಲಸುತ +ಪೈ
ಸರಿಸಿ+ ಕಳಚಿದನಾ +ಕ್ಷಣದೊಳ್
ಅಬ್ಬರಿಸಿ+ ಹೊಯ್ದನು+ ಭೀಮ +ಕೌರವ+ನೃಪನ +ಕಂಧರವ

ಅಚ್ಚರಿ:
(೧) ರೂಪಕದ ಪ್ರಯೋಗ – ಗದೆಯಲಿ ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ

ಪದ್ಯ ೧೮: ಭೀಮ ದುರ್ಯೋಧನರು ಹೇಗೆ ಹೋರಾಡಿದರು?

ನೋಡಿದನು ದಂಡೆಯಲಿ ಲಾಗಿಸಿ
ಹೂಡಿದನು ನೃಪ ಭೀಮನಲಿ ಪಯ
ಪಾಡಿನಲಿ ಪಲ್ಲಟಿಸಿದನು ಪಡಿತಳಕೆ ಕುರುರಾಯ
ಘಾಡಿಸಿದನುಪ್ಪರದ ಘಾಯಕೆ
ಕೂಡೆ ತಗ್ಗಿದನನಿಲಸುತ ಖಯ
ಖೋಡಿಯಿಲ್ಲದೆ ಭಟರು ಹೊಯ್ದಾಡಿದರು ಖಾತಿಯಲಿ (ಗದಾ ಪರ್ವ, ೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕೌರವನು ದಂಡೆಯಿಂದ ಗುರಿಯಿಟ್ಟು ಪಾದಚಲನೆಯಿಂದ ಗದೆಯಿಂದ ಹೊಡೆಯಲು, ಆ ಏಟಿನಿಂದ ಭೀಮನು ನೊಂದನು. ಯಾವ ವಿಧವಾದ ಹಿಂಜರಿಕೆಯೂ ಇಲ್ಲದೆ ವೀರರಿಬ್ಬರೂ ಹೋರಾಡಿದರು.

ಅರ್ಥ:
ನೋಡು: ವೀಕ್ಷಿಸು; ದಂಡೆ: ತಟ, ಕೂಲ, ದಡ; ಲಾಗು: ನೆಗೆಯುವಿಕೆ, ಲಂಘನ; ಹೂಡು: ಅಣಿಗೊಳಿಸು; ನೃಪ: ರಾಜ; ಪಯ:ಹೆಜ್ಜೆ ಹಾಕುವ ಒಂದು ಕ್ರಮ; ಪಾಡಿ: ಪಡೆ, ಸೈನ್ಯ; ಪಲ್ಲಟ: ಬದಲಾವಣೆ, ಮಾರ್ಪಾಟು; ಪಡಿತಳ: ಮುನ್ನುಗ್ಗುವಿಕೆ, ಆಕ್ರಮಣ; ಘಾಡಿಸು: ವ್ಯಾಪಿಸು; ಉಪ್ಪರ: ಎತ್ತರ, ಉನ್ನತಿ; ಘಾಯ: ಪೆಟ್ಟು; ಕೂಡೆ: ಜೊತೆ; ತಗ್ಗು: ಬಾಗು, ಕಡಿಮೆಯಾಗು; ಅನಿಲಸುತ: ಭೀಮ; ಖಯ: ಜಂಬ, ಸೊಕ್ಕು; ಖೋಡಿ: ದುರುಳತನ, ನೀಚತನ; ಭಟ: ಸೈನಿಕ; ಹೊಯ್ದಾಡು: ಹೊಡೆದಾಡು; ಖಾತಿ: ಕೋಪ;

ಪದವಿಂಗಡಣೆ:
ನೋಡಿದನು +ದಂಡೆಯಲಿ +ಲಾಗಿಸಿ
ಹೂಡಿದನು +ನೃಪ +ಭೀಮನಲಿ +ಪಯ
ಪಾಡಿನಲಿ +ಪಲ್ಲಟಿಸಿದನು+ ಪಡಿತಳಕೆ +ಕುರುರಾಯ
ಘಾಡಿಸಿದನುಪ್ಪರದ +ಘಾಯಕೆ
ಕೂಡೆ +ತಗ್ಗಿದನ್+ಅನಿಲಸುತ +ಖಯ
ಖೋಡಿಯಿಲ್ಲದೆ+ ಭಟರು +ಹೊಯ್ದಾಡಿದರು+ ಖಾತಿಯಲಿ

ಅಚ್ಚರಿ:
(೧) ನೋಡಿ, ಹೂಡಿ, ಪಾಡಿ, ಘಾಡಿ, ಖೋಡಿ – ಪ್ರಾಸ ಪದಗಳು

ಪದ್ಯ ೧೬: ಭೀಮನನ್ನು ಕೌರವನು ಹೇಗೆ ಘಾತಿಸಿದನು?

ಉಬ್ಬಬೇಡೆಲೆ ಭೀಮ ಗದೆಯೋ
ಬೊಬ್ಬೆಯೋ ಬಲುಗೈದು ನಿನ್ನಯ
ಗರ್ಭಗಿರಿಗಿದೆ ಸಿಡಿಲೆನುತ ಹೊಯ್ದನು ವೃಕೋದರನ
ತುಬ್ಬಿದನು ಗದೆಯಿಂದ ಘಾಡಿಸಿ
ಹಬ್ಬಿದನು ಕೆಲಬಲಕೆ ಖತಿಯಲಿ
ಕೊಬ್ಬಿದರೆವೊಯ್ಲುಗಳ ದನಿ ಕಿವಿಗೆಡಿಸೆ ಮೂಜಗವ (ಗದಾ ಪರ್ವ, ೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕೌರವನು, ಎಲೈ ಭೀಮ ಉಬ್ಬಿ ಮಾತಾಡಬೇಡ. ನಿನ್ನ ಹೊಟ್ಟೆಯ ಬೆಟ್ಟಕೆ ನನ್ನ ಗದೆಯೇ ಸಿಡಿಲು, ಎಂದು ಭೀಮನನ್ನು ಹೊಡೆದನು ಗದೆ ಹಿಡಿದು ಆಚೀಚೆ ಸಿಡಿದು ಮತ್ತೆ ಮತ್ತೆ ಕಲ್ಲಿನ ಹೊಡೆತದಂತೆ ಸದ್ದಾಗಲು ಭೀಮನನ್ನು ಘಾತಿಸಿದನು.

ಅರ್ಥ:
ಉಬ್ಬು: ಹಿಗ್ಗು, ಗರ್ವಿಸು; ಗದೆ: ಮುದ್ಗರ; ಬೊಬ್ಬೆ: ಆರ್ಭಟ; ಗರ್ಭ: ಹೊಟ್ಟೆ; ಗಿರಿ: ಬೆಟ್ಟ; ಕೈದು: ಆಯುಧ; ಸಿಡಿಲು: ಅಶನಿ; ಹೊಯ್ದು: ಹೊಡೆ; ವೃಕೋದರ: ಭೀಮ; ತುಬ್ಬು: ಪತ್ತೆ ಮಾಡು, ಶೋಧಿಸು; ಘಾಡಿಸು: ಹೊಡೆ; ಹಬ್ಬು: ಹರಡು; ಕೆಲಬಲ: ಅಕ್ಕಪಕ್ಕ; ಖತಿ: ಕೋಪ; ಕೊಬ್ಬು: ಸೊಕ್ಕು, ಅಹಂಕಾರ; ದನಿ: ಶಬ್ದ; ಕಿವಿ: ಕರ್ಣ; ಕೆಡಸು: ಹಾಳು ಮಾಡು; ಮೂಜಗ: ಮೂರು ಪ್ರಪಂಚ;

ಪದವಿಂಗಡಣೆ:
ಉಬ್ಬಬೇಡ್+ಎಲೆ +ಭೀಮ +ಗದೆಯೋ
ಬೊಬ್ಬೆಯೋ +ಬಲುಗೈದು +ನಿನ್ನಯ
ಗರ್ಭ+ಗಿರಿಗಿದೆ+ ಸಿಡಿಲೆನುತ +ಹೊಯ್ದನು +ವೃಕೋದರನ
ತುಬ್ಬಿದನು+ ಗದೆಯಿಂದ +ಘಾಡಿಸಿ
ಹಬ್ಬಿದನು +ಕೆಲಬಲಕೆ +ಖತಿಯಲಿ
ಕೊಬ್ಬಿದರೆವೊಯ್ಲುಗಳ+ ದನಿ+ ಕಿವಿಗೆಡಿಸೆ +ಮೂಜಗವ

ಅಚ್ಚರಿ:
(೧) ರೂಪಕದ ಪ್ರಯೋಗ – ನಿನ್ನಯ ಗರ್ಭಗಿರಿಗಿದೆ ಸಿಡಿಲೆನುತ ಹೊಯ್ದನು ವೃಕೋದರನ

ಪದ್ಯ ೧೫: ಭೀಮನ ಗದೆ ಕೌರವನ ಕಿರುದೊಡೆಯನ್ನು ಮುರಿಯಲು ಎಂದು ಸಿದ್ಧವಾಗಿತ್ತು?

ಈಗಳನುವಾದೆನೆ ಧರಿತ್ರಿಯ
ಭಾಗವನು ಬೇಡಿದಡೆ ನೀ ಮುರಿ
ದಾಗಲನುವಾದುದು ಕಣಾ ಗದೆ ನಿನ್ನ ಕಿರುದೊಡೆಗೆ
ತಾಗಿ ನೋಡಿನ್ನೊಮ್ಮೆನುತ ಮೈ
ಲಾಗಿನಲಿ ಹೊಳೆಹೊಳೆದು ಕೈದುವ
ತೂಗಿ ತುಡುಕಿದನರಸನನು ಬೊಬ್ಬಿರಿದು ಕಲಿ ಭೀಮ (ಗದಾ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಮನು ಗರ್ಜಿಸುತ್ತಾ, ನಾನು ಈಗ ಸಿದ್ಧನಾಗಬೇಕಾಗಿಲ್ಲ, ನಮ್ಮ ಭಾಗದ ಭೂಮಿಯನ್ನು ಕೇಳಿದರೆ, ನೀನು ಸಾಧ್ಯವಿಲ್ಲ ಎಂದೆಯಲ್ಲಾ ಆಗಲೇ ಈ ಗದೆ ನಿನ್ನ ಕಿರುದೊಡೆಯನ್ನು ಮುರಿಯಲು ಸಿದ್ಧವಾಗಿತ್ತು. ಇನ್ನೊಮ್ಮೆ ನನ್ನನ್ನು ಹೊಡೆಯಲು ಬಂದು ನೋಡು, ಎನ್ನುತ್ತಾ ಭೀಮನು ಗದೆಯನ್ನು ತೂಗಿ ಗರ್ಜಿಸಿ ಕೌರವನನ್ನು ತುಡುಕಿದನು.

ಅರ್ಥ:
ಅನುವಾಗು: ಸಿದ್ಧನಾಗು; ಧರಿತ್ರಿ: ಭೂಮಿ; ಭಾಗ: ಅಂಶ, ಪಾಲು; ಬೇಡು: ಕೇಳು; ಮುರಿ: ಸೀಳು; ಗದೆ: ಮುದ್ಗರ; ಕಿರು: ಚಿಕ್ಕ; ತೊಡೆ: ಊರು; ತಾಗು: ಮುಟ್ತು; ನೋಡು: ವೀಕ್ಷಿಸು; ಮೈಲಾಗು: ದೇಹದ ಚುರುಕುತನ, ಚಳಕ; ಹೊಳೆ: ಪ್ರಕಾಶಿಸು; ಕೈದು: ಆಯುಧ; ತೂಗು: ಅಲ್ಲಾಡಿಸು; ತುಡುಕು: ಹೋರಾಡು, ಸೆಣಸು, ಮುಟ್ಟು; ಅರಸ: ರಾಜ; ಬೊಬ್ಬಿರಿ: ಗರ್ಜಿಸು; ಕಲಿ: ಶೂರ;

ಪದವಿಂಗಡಣೆ:
ಈಗಳ್+ಅನುವಾದೆನೆ +ಧರಿತ್ರಿಯ
ಭಾಗವನು +ಬೇಡಿದಡೆ+ ನೀ +ಮುರಿ
ದಾಗಲ್+ಅನುವಾದುದು +ಕಣಾ +ಗದೆ +ನಿನ್ನ+ ಕಿರುದೊಡೆಗೆ
ತಾಗಿ+ ನೋಡ್+ಇನ್ನೊಮ್ಮ್+ಎನುತ +ಮೈ
ಲಾಗಿನಲಿ +ಹೊಳೆಹೊಳೆದು +ಕೈದುವ
ತೂಗಿ +ತುಡುಕಿದನ್+ಅರಸನನು +ಬೊಬ್ಬಿರಿದು +ಕಲಿ +ಭೀಮ

ಅಚ್ಚರಿ:
(೧) ಭೀಮನ ಉತ್ತರ – ಧರಿತ್ರಿಯ ಭಾಗವನು ಬೇಡಿದಡೆ ನೀ ಮುರಿದಾಗಲನುವಾದುದು ಕಣಾ ಗದೆ ನಿನ್ನ ಕಿರುದೊಡೆಗೆ