ಪದ್ಯ ೧೧: ಬಲರಾಮನು ಯಾವ ತೀರ್ಥಕ್ಷೇತ್ರಗಳನ್ನು ಸಂಚರಿಸಿದನು?

ಗಂಗೆ ಮೊದಲಾದಮಳತರ ತೀ
ರ್ಥಂಗಳಲಿ ತದ್ವಾರಣಾಖ್ಯಾ
ನಂಗಳಲಿ ತತ್ತದ್ವಿಶೇಷವಿಧಾನ ದಾನದಲಿ
ತುಂಗವಿಕ್ರಮನೀ ಸಮಸ್ತ ಜ
ನಂಗಳೊಡನೆ ಸುತೀರ್ಥಯಾತ್ರಾ
ಸಂಗತಿಯಲೇ ಬಳಸಿದನು ಭೂಮಿಪ್ರದಕ್ಷಿಣವ (ಗದಾ ಪರ್ವ, ೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಂಗೆಯೇ ಮೊದಲಾದ ನದಿಗಳು ಹರಿಯುವ ತಿರ್ಥಕ್ಷೇತ್ರಗಳಲ್ಲಿ ಆಯಾ ಕ್ಷೇತ್ರದ ವಿಧಿಗಳಂತೆ ನಡೆದು, ತನ್ನ ಜೊತೆಗೆ ಬಂದವರೊಡನೆ ತೀರ್ಥಯಾತ್ರೆ ಮಾಡುತ್ತಾ ಭೂಪ್ರದಕ್ಷಿಣೆ ಮಾಡಿದನು.

ಅರ್ಥ:
ಗಂಗೆ: ಸುರನಧಿ; ಮೊದಲಾದ: ಮುಂತಾದ; ಅಮಳ: ನಿರ್ಮಲ; ತೀರ್ಥ: ಪವಿತ್ರ ಕ್ಷೇತ್ರ; ವಾರಣ: ಆನೆ; ವಿಶೇಷ: ಅತಿಶಯತೆ, ವೈಶಿಷ್ಟ್ಯ; ವಿಧಾನ: ರೀತಿ; ತುಂಗ: ಶ್ರೇಷ್ಠ; ವಿಕ್ರಮ: ಶೂರ; ಸಮಸ್ತ: ಎಲ್ಲಾ; ಜನ: ಮನುಷ್ಯ; ಯಾತ್ರಾ: ಪ್ರಯಾಣ; ಸಂಗತಿ: ವಿಷಯ, ವಿವರ; ಬಳಸು: ಉಪಯೋಗಿಸು; ಭೂಮಿ: ಅವನಿ; ಪ್ರದಕ್ಷಿಣೆ: ಸುತ್ತುವರಿ;

ಪದವಿಂಗಡಣೆ:
ಗಂಗೆ +ಮೊದಲಾದ್+ಅಮಳತರ +ತೀ
ರ್ಥಂಗಳಲಿ +ತದ್+ವಾರಣಾಖ್ಯಾನ್
ಅಂಗಳಲಿ +ತತ್ತದ್+ವಿಶೇಷ+ವಿಧಾನ +ದಾನದಲಿ
ತುಂಗವಿಕ್ರಮನ್+ಈ+ ಸಮಸ್ತ+ ಜ
ನಂಗಳೊಡನೆ +ಸುತೀರ್ಥ+ಯಾತ್ರಾ
ಸಂಗತಿಯಲೇ+ ಬಳಸಿದನು +ಭೂಮಿ+ಪ್ರದಕ್ಷಿಣವ

ಅಚ್ಚರಿ:
(೧) ತೀರ್ಥಂಗಳಲಿ, ವಾರಣಾಖ್ಯಾನಂಗಳಲಿ, ದಾನದಲಿ – ಪದಗಳ ಬಳಕೆ

ಪದ್ಯ ೧೦: ಬಲರಾಮನು ಎಲ್ಲಿ ಏನನ್ನು ದಾನ ಮಾಡಿದನು?

ರಾಮ ಕಳುಹಿಸಿಕೊಂಡು ವಿಪ್ರ
ಸ್ತೋಮಸಹಿತ ಸಮಸ್ತ ಋಷಿಗಳು
ರಾಮಣಿಯದವಸ್ತು ದಾನವ್ಯಯದ ವೈಭವಕೆ
ಸೌಮನಸ್ಯನು ರಾಗಹರದ ಮ
ಹಾಮಹಿಮ ತೀರ್ಥಾಭಿರತಿಯಲಿ
ಗೋ ಮಹಿಷ ಧನ ವಸ್ತ್ರದಿಂ ದ್ವಿಜವರರನರ್ಚಿಸಿದ (ಗದಾ ಪರ್ವ, ೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ರಾಮನು ಶ್ರೀಕೃಷ್ಣನಿಂದ ಬೀಳ್ಕೊಂಡು ಬ್ರಾಹ್ಮಣರು, ಋಷಿಗಳೊಡನೆ ಮನಸ್ಸಿನ ಇಂದ್ರಿಯಾಸಕ್ತಿಗಳನ್ನು ನಾಶಮಾಡುವ ಮಹಾತೀರ್ಥಕ್ಷೇತ್ರಗಳಲ್ಲಿ ಬ್ರಾಹ್ಮಣರನ್ನರ್ಚಿಸಿ ಗೋವುಗಳು, ಎಮ್ಮೆಗಳು, ಧನ, ವಸ್ತ್ರಗಲನ್ನು ದಾನಮಾಡಿದನು.

ಅರ್ಥ:
ಕಳುಹಿಸು: ಹೊರಡು, ಬೀಳ್ಕೊಡು; ವಿಪ್ರಸ್ತೋಮ: ಬ್ರಾಹ್ಮಣ; ಸ್ತೋಮ: ಗುಂಪು; ಸಹಿತ: ಜೊತೆ; ಸಮಸ್ತ: ಎಲ್ಲಾ; ಋಷಿ: ಮುನಿ; ರಾಮಣೀಯಕ: ಸುಂದರ; ದಾನ: ಚತುರೋಪಾಯಗಳಲ್ಲಿ ಒಂದು; ವ್ಯಯ: ನಷ್ಟ, ನಾಶ; ವೈಭವ: ಶಕ್ತಿ, ಸಾಮರ್ಥ್ಯ; ಮನ: ಮನಸ್ಸು; ಸೌಮನ: ಒಳ್ಳೆಯ ಮನಸ್ಸು; ರಾಗ: ಒಲಮೆ, ಪ್ರೀತಿ; ಮಹಾಮಹಿಮ: ಶ್ರೇಷ್ಠ; ತೀರ್ಥ: ಪವಿತ್ರಕ್ಷೇತ್ರ; ಗೋ: ಹಸು; ಮಹಿಷ: ಎಮ್ಮೆ; ಧನ: ಸಿರಿ, ಸಂಪತ್ತು; ವಸ್ತ್ರ: ಬಟ್ಟೆ; ದ್ವಿಜ: ಬ್ರಾಹ್ಮಣ; ಅರ್ಚಿಸು: ಪೂಜಿಸು; ವರ: ಶ್ರೇಷ್ಠ;

ಪದವಿಂಗಡಣೆ:
ರಾಮ +ಕಳುಹಿಸಿಕೊಂಡು +ವಿಪ್ರ
ಸ್ತೋಮ+ಸಹಿತ +ಸಮಸ್ತ+ ಋಷಿಗಳು
ರಾಮಣಿಯದ+ವಸ್ತು+ ದಾನವ್ಯಯದ +ವೈಭವಕೆ
ಸೌಮನಸ್ಯನು+ ರಾಗಹರದ +ಮ
ಹಾಮಹಿಮ +ತೀರ್ಥಾಭಿರತಿಯಲಿ
ಗೋ +ಮಹಿಷ +ಧನ +ವಸ್ತ್ರದಿಂ+ ದ್ವಿಜವರರನ್+ಅರ್ಚಿಸಿದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸ್ತೋಮ ಸಹಿತ ಸಮಸ್ತ
(೨) ವಿಪ್ರ, ದ್ವಿಜ – ಸಮಾನಾರ್ಥಕ ಪದ

ಪದ್ಯ ೯: ಬಲರಾಮನು ತೀರ್ಥಯಾತ್ರೆಗೇಕೆ ಹೊರಟನು?

ಎವಗೆ ಸರಿಯಿತ್ತಂಡ ನೀ ಕೌ
ರವನ ಮುರಿವೆ ಯುಧಿಷ್ಠಿರನನಾ
ಹವವ ಗೆಲಿಸುವೆ ಸಾಕು ನೃಪರಿಬ್ಬರಲಿ ಸಂವಾದ
ಎವಗೆ ತೀರ್ಥಕ್ಷೇತ್ರ ಯಾತ್ರಾ
ವ್ಯವಸಿತಕೆ ಮನವಾದುದೆಂದು
ತ್ಸವದಿನಸುರಾರಿಯನುಪಪ್ಲವ್ಯದಲಿ ಬೀಳ್ಕೊಂಡ (ಗದಾ ಪರ್ವ, ೬ ಸಂಧಿ, ೯ ಪದ್ಯ)

ತಾತ್ಪರ್ಯ:
ಬಲರಾಮನು ಶ್ರೀಕೃಷ್ಣನಿಗೆ, ನನಗೇನೋ ಎರಡು ಪಕ್ಷದವರೂ ಒಂದೇ, ನೀನು ಯುಧಿಷ್ಠಿರನನ್ನು ಯುದ್ಧದಲ್ಲಿ ಗೆಲ್ಲಿಸಿ ಕೌರವರನ್ನು ಸೋಲಿಸುತ್ತಿಯ. ಆದುದರಿಂದ ನಾನು ತೀರ್ಥಯಾತ್ರೆಗೆ ಹೋಗುತ್ತೇನೆ ಎಂದು ಹೇಳಿ ಉಪಪ್ಲಾವ್ಯ ನಗರದಲ್ಲಿ ಶ್ರೀಕೃಷ್ಣನ ಒಪ್ಪಿಗೆ ಪಡೆದು ತೀರ್ಥಯಾತ್ರೆಗೆ ಹೊರಟನು.

ಅರ್ಥ:
ಎವಗೆ: ನನಗೆ; ಸರಿ: ಸಮಾನ; ತಂಡ: ಗುಂಪು; ಮುರಿ: ಸೀಳು; ಆಹವ: ಯುದ್ಧ; ಗೆಲಿಸು: ಜಯಗೊಳಿಸು; ಸಾಕು: ತಡೆ; ನೃಪ: ರಾಜ; ಸಂವಾದ: ಮಾತುಕತೆ; ತೀರ್ಥಕ್ಷೇತ್ರ: ಪುಣ್ಯಸ್ಥಳ; ಯಾತ್ರೆ: ಪ್ರಯಾಣ; ವ್ಯವಸಿತ: ಸಿದ್ಧಗೊಳಿಸಿದ; ಮನ: ಮನಸ್ಸು; ಉತ್ಸವ: ಸಮಾರಂಭ; ಅಸುರಾರಿ: ಕೃಷ್ಣ; ಬೀಳ್ಕೊಡು: ತೆರಳು;

ಪದವಿಂಗಡಣೆ:
ಎವಗೆ +ಸರಿಯಿತ್ತಂಡ+ ನೀ +ಕೌ
ರವನ+ ಮುರಿವೆ+ ಯುಧಿಷ್ಠಿರನನ್
ಆಹವವ +ಗೆಲಿಸುವೆ +ಸಾಕು +ನೃಪರಿಬ್ಬರಲಿ +ಸಂವಾದ
ಎವಗೆ+ ತೀರ್ಥಕ್ಷೇತ್ರ+ ಯಾತ್ರಾ
ವ್ಯವಸಿತಕೆ +ಮನವಾದುದ್+ಎಂದ್
ಉತ್ಸವದಿನ್+ಅಸುರಾರಿಯನ್+ಉಪಪ್ಲವ್ಯದಲಿ+ ಬೀಳ್ಕೊಂಡ

ಅಚ್ಚರಿ:
(೧) ಎವಗೆ – ೧, ೪ ಸಾಲಿನ ಮೊದಲ ಪದ
(೨) ಪಲಾಯನ ಮಾಡುವ ಪರಿ – ಎವಗೆ ತೀರ್ಥಕ್ಷೇತ್ರ ಯಾತ್ರಾವ್ಯವಸಿತಕೆ ಮನವಾದುದೆಂದ್

ಪದ್ಯ ೮: ಬಲರಾಮನು ಏನೆಂದು ಯೋಚಿಸಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಸಂಧಿಯ ಮುರಿದು ಲಕ್ಷ್ಮೀ
ಲೋಲ ಬಿಜಯಂಗೈಯನೇ ಕುರುಪತಿಯನವಗಡಿಸಿ
ತಾಳಹಳವಿಗೆಯವನು ಯಾದವ
ಜಾಲ ಸಹಿತೈತಂದು ಕಾರ್ಯದ
ಮೇಲುದಾಗಿನ ಹದನನರಿದನು ಕೃಷ್ಣನಭಿಮತವ (ಗದಾ ಪರ್ವ, ೬ ಸಂಧಿ, ೮ ಪದ್ಯ)

ತಾತ್ಪರ್ಯ:
ವೈಶಂಪಾಯನ ಮುನಿಗಳು ಜನಮೇಜಯನಿಗೆ ಉತ್ತರಿಸುತ್ತಾ, ರಾಜನೇ ಕೇಳು, ಶ್ರೀಕೃಷ್ಣನು ಸಂಧಿಯನ್ನು ಮುರಿದು, ದುರ್ಯೋಧನನನ್ನು ತಿರಸ್ಕರಿಸಿ ಹಿಂದಿರುಗಿದನು. ತಾಳಧ್ವಜನಾದ ಬಲರಾಮನು ಯಾದವ ಸೈನ್ಯದೊಡನೆ ಬಂದು ಮುಂದಿನ ಕಾರ್ಯವನ್ನು ಚಿಂತಿಸಿ ಶ್ರೀಕೃಷ್ಣನ ಅಭಿಪ್ರಾಯವನ್ನು ಊಹಿಸಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಸಂಧಿ: ಸೇರಿಕೆ, ಸಂಯೋಗ; ಮುರಿ: ಸೀಳು; ಲೋಲ: ಪ್ರೀತಿ, ಅಕ್ಕರೆ; ಬಿಜಯಂಗೈ: ದಯಮಾಡಿಸು, ತೆರಳು; ಅವಗಡ: ಅಸಡ್ಡೆ; ಅಳವಿ: ಶಕ್ತಿ; ಹಳವಿಗೆ: ಬಾವುಟ; ಜಾಲ: ಗುಂಪು; ಸಹಿತ: ಜೊತೆ; ಐತಂದು: ಬರೆಮಾಡು; ಕಾರ್ಯ: ಕೆಲಸ; ಹದ: ಸ್ಥಿತಿ; ಅರಿ: ತಿಳಿ; ಅಭಿಮತ: ಅಭಿಪ್ರಾಯ;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ +ಸಂಧಿಯ +ಮುರಿದು +ಲಕ್ಷ್ಮೀ
ಲೋಲ +ಬಿಜಯಂಗೈಯನೇ+ ಕುರುಪತಿಯನ್+ಅವಗಡಿಸಿ
ತಾಳಹಳವಿಗೆಯವನು +ಯಾದವ
ಜಾಲ +ಸಹಿತೈತಂದು+ ಕಾರ್ಯದ
ಮೇಲುದಾಗಿನ +ಹದನನ್+ಅರಿದನು +ಕೃಷ್ಣನ್+ಅಭಿಮತವ

ಅಚ್ಚರಿ:
(೧) ಬಲರಾಮನನ್ನು ತಾಳಹಳವಿಗೆಯವನು ಎಂದು ಕರೆದಿರುವುದು

ಪದ್ಯ ೭: ಜನಮೇಜಯ ರಾಜನಿಗೆ ಯಾವ ಪ್ರಶ್ನೆ ಕಾಡಿತು?

ಎಲೆಮುನೀಶ್ವರ ಪೂರ್ವದಲಿ ಯದು
ಬಲ ವಿಭಾಗದಲಿವರ ದೆಸೆಯಲಿ
ಹಲಧರನು ಕೃತವರ್ಮನಾ ಪಾಂಡವರಿಗಸುರಾರಿ
ಬಳಿಕ ಸಾತ್ಯಕಿಯೀ ಹಸುಗೆಯ
ಸ್ಖಲಿತವಿದರಲಿ ರಾಮನೀ ಕುರು
ಬಲವ ಬಿಟ್ಟನದೇಕೆನುತ ಜನಮೇಜಯನು ನುಡಿದ (ಗದಾ ಪರ್ವ, ೬ ಸಂಧಿ, ೭ ಪದ್ಯ)

ತಾತ್ಪರ್ಯ:
ಆಗ ಜನಮೇಜಯನು ವೈಶಂಪಾಯನ ಮುನೀಶ್ವರನೇ, ಈ ಹಿಂದೆ ಯಾದವ ಬಲವನ್ನು ಭಾಗಮಾಡಿದಾಗ ಪಾಂಡವರ ಕಡೆಗೆ ಶ್ರೀಕೃಷ್ಣನೂ ಸಾತ್ಯಕಿಯೂ ಬಂದರು. ಕೌರವನ ಕಡೆಗೆ ಬಲರಾಮನೂ, ಕೃತವರ್ಮನೂ ಹೋದರು. ಹೀಗಿದ್ದು ಬಲರಾಮನು ಕೌರವನ ಕಡೆಗೆ ನಿಂತು ಯುದ್ಧವನ್ನು ಮಾಡಲಿಲ್ಲವೇಕೆ ಎಂದು ಕೇಳಿದನು.

ಅರ್ಥ:
ಮುನಿ: ಋಷಿ; ಪೂರ್ವ: ಹಿಂದೆ; ಬಲ: ಸೈನ್ಯ, ಶಕ್ತಿ; ವಿಭಾಗ: ಪಾಲು; ದೆಸೆ: ದಿಕ್ಕು; ಹಲಧರ: ಬಲರಾಮ; ಅಸುರಾರಿ: ಕೃಷ್ಣ; ಬಳಿಕ: ನಂತರ; ಹಸುಗೆ: ವಿಭಾಗ; ಸ್ಖಲಿತ: ಜಾರಿಬಿದ್ದ; ಬಿಡು: ತೊರೆ; ನುಡಿ: ಮಾತಾಡು;

ಪದವಿಂಗಡಣೆ:
ಎಲೆ+ಮುನೀಶ್ವರ+ ಪೂರ್ವದಲಿ +ಯದು
ಬಲ +ವಿಭಾಗದಲ್+ಇವರ +ದೆಸೆಯಲಿ
ಹಲಧರನು +ಕೃತವರ್ಮನ್+ಆ+ ಪಾಂಡವರಿಗ್+ಅಸುರಾರಿ
ಬಳಿಕ +ಸಾತ್ಯಕಿ+ ಈ+ ಹಸುಗೆಯ
ಸ್ಖಲಿತವ್+ಇದರಲಿ +ರಾಮನ್+ಈ+ ಕುರು
ಬಲವ +ಬಿಟ್ಟನದೇಕ್+ಎನುತ +ಜನಮೇಜಯನು +ನುಡಿದ

ಅಚ್ಚರಿ:
(೧) ಕೃಷ್ಣನನ್ನು ಅಸುರಾರಿ, ಬಲರಾಮನನ್ನು ಹಲಧರ, ರಾಮ ಎಂದು ಕರೆದಿರುವುದು