ಪದ್ಯ ೩೫: ದುರ್ಯೋಧನು ಕೃಪಾದಿಗಳಿಗೆ ಏನೆಂದು ಹೇಳಿದನು?

ಒಪ್ಪದಿದು ಭೀಷ್ಮಾದಿಯವ್ವನ
ದರ್ಪದಲಿ ಜಾರಿದ ಜಯಾಂಗನೆ
ಮುಪ್ಪಿನಲಿ ನಮಗೊಲಿವುದರಿದೇಕಾಕಿಯಾದೆವಲೆ
ತಪ್ಪಿದುದನೀ ಸಲಿಲವಾಸದೊ
ಳೊಪ್ಪವಿಡುವೆನು ನಾಳೆ ನೀವ್ ತೊಲ
ಗಿಪ್ಪುದಿಂದಿನೊಳೆಂದನವನಿಪನಾ ಕೃಪಾದಿಗಳ (ಗದಾ ಪರ್ವ, ೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ದುರ್ಯೋಧನನು, ನೀವು ಹೇಳುವ ಮಾತು ಸರಿಯಲ್ಲ. ಭೀಷ್ಮಾದಿಗಳ ಪರಾಕ್ರಮ ಯೌವನಕಾಲದಲ್ಲಿಯೇ ನಮಗೆ ದೊರೆಯದ ಜಯವಧುವು ಅವರೆಲ್ಲ ಕಳೆದುಹೋದ ಮುಪ್ಪಿನಲ್ಲಿ ನಮಗೆ ಒಲಿಯುವಳೆಂಬುದು ಸುಳ್ಳು. ನಾವೀಗ ಏಕಾಕಿಯಾಗಿದ್ದೇವೆ. ನಾನು ಮಾಡಿದ ತಪ್ಪನ್ನು ನೀರಿನಲ್ಲಿ ಈ ದಿವಸ ಇದ್ದು ನಾಳೆ ಸರಿಪಡಿಸುತ್ತೇನೆ. ಈ ದಿವಸ ನೀವು ದೂರಕ್ಕೆ ಹೋಗಿ ಅಲ್ಲಿಯೇ ಇರಬೇಕು ಎಂದು ಕೃಪನೇ ಮೊದಲಾದವರಿಗೆ ಹೇಳಿದನು.

ಅರ್ಥ:
ಒಪ್ಪು: ಒಪ್ಪಿಗೆ, ಸಮ್ಮತಿ; ಆದಿ: ಮುಂತಾದ; ದರ್ಪ: ಹೆಮ್ಮೆ, ಗರ್ವ; ಜಾರು: ಬೀಳು; ಜಯಾಂಗನೆ: ವಿಜಯಲಕ್ಷ್ಮಿ; ಮುಪ್ಪು: ಮುದಿತನ, ವೃದ್ಧಾಪ್ಯ; ಒಲಿವು: ದೊರೆಯುವುದು; ಏಕಾಕಿ: ಏಕಾಂಗಿ; ಸಲಿಲ: ನೀರು; ವಾಸ: ಜೀವನ; ಒಪ್ಪು: ಒಪ್ಪಿಗೆ, ಸಮ್ಮತಿ; ತೊಲಗು: ಹೊರಡು; ಅವನಿಪ: ರಾಜ;

ಪದವಿಂಗಡಣೆ:
ಒಪ್ಪದಿದು+ ಭೀಷ್ಮಾದಿಯವ್ವನ
ದರ್ಪದಲಿ+ ಜಾರಿದ +ಜಯಾಂಗನೆ
ಮುಪ್ಪಿನಲಿ +ನಮಗ್+ಒಲಿವುದ್+ಅರಿದ್+ಏಕಾಕಿ+ಆದೆವಲೆ
ತಪ್ಪಿದುದನ್+ಈ+ ಸಲಿಲವಾಸದೊಳ್
ಒಪ್ಪವಿಡುವೆನು +ನಾಳೆ +ನೀವ್ +ತೊಲ
ಗಿಪ್ಪುದ್+ಇಂದಿನೊಳ್+ಎಂದನ್+ಅವನಿಪನ್+ಆ+ ಕೃಪಾದಿಗಳ

ಅಚ್ಚರಿ:
(೧) ಸೋಲು ಖಚಿತ ಎಂದು ಹೇಳುವ ಪರಿ – ಜಾರಿದ ಜಯಾಂಗನೆ ಮುಪ್ಪಿನಲಿ ನಮಗೊಲಿವುದರಿದೇಕಾಕಿಯಾದೆವಲೆ

ಪದ್ಯ ೩೪: ಕೃಪಾದಿ ಶೂರರು ಕೌರವನಿಗೆ ಏನು ಬೇಡಿದರು?

ಏಳು ಕುರುಪತಿ ಪಾಂಡುತನಯ
ವ್ಯಾಳಸೇನೆಗೆ ಸಿಂಹವಿದೆ ನಿ
ನ್ನಾಳ ಬಿಡು ನೀ ನೋಡುತಿರು ಕರ್ಣಾದಿ ಸುಭಟರಲಿ
ಜಾಳಿಸಿದ ಜಯಕಾಮಿನಿಯ ಜಂ
ಘಾಳತನವನು ನಿಲಿಸಿ ನಿನ್ನಯ
ತೋಳಿನಲಿ ತೋರುವೆವು ಮೈದೋರೆಂದರವನಿಪನ (ಗದಾ ಪರ್ವ, ೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಕುರುಪತಿಯೇ, ಏಳು. ಪಾಂಡವ ಸೇನೆಯೆಂಬ ಮದಿಸಿದ ಆನೆಗೆ ನಿನ್ನ ವೀರರೇ ಸಿಂಹಗಳು. ನಮ್ಮನ್ನು ಬಿಟ್ಟುನೋಡು, ಕರ್ಣಾದಿ ವೀರರ ಸಂಗ್ರಾಮದಲ್ಲಿ ಓಡಿಹೋದ ಜಯಲಕ್ಷ್ಮಿಯ ವೇಗವನ್ನು ತಡೆದು, ಅವಳು ನಿನ್ನನ್ನು ಅಪ್ಪಿಕೊಳ್ಳುವಂತೆ ಮಾಡುತ್ತೇವೆ, ಹೊರಕ್ಕೆ ಬಂದು ನಮ್ಮೆದುರು ಕಾಣಿಸಿಕೋ ಎಂದು ಕೃಪಾದಿಗಳು ಬೇಡಿದರು.

ಅರ್ಥ:
ತನಯ: ಮಗ; ವ್ಯಾಳ: ಮೋಸಗಾರ; ಸೇನೆ: ಸೈನ್ಯ; ಸಿಂಹ: ಕೇಸರಿ; ಬಿಡು: ತೊರೆ; ನೋಡು: ವೀಕ್ಷಿಸು; ಆದಿ: ಮುಂತಾದ; ಸುಭಟ: ಪರಾಕ್ರಮಿ; ಜಾಳು: ಕೈಲಾಗದವನು, ನಿಷ್ಪ್ರಯೋಜಕ; ಜಯಕಾಮಿನಿ: ವಿಜಯಲಕ್ಷ್ಮಿ; ಜಂಘೆ: ಕೆಳದೊಡೆ; ಆಳತನ: ಪರಾಕ್ರಮ; ನಿಲಿಸು: ತಡೆ; ತೋಳು: ಬಾಹು; ತೋರು: ಗೋಚರಿಸು; ಮೈದೋರು: ಕಾಣಿಸು, ತೋರು; ಅವನಿಪ: ರಾಜ;

ಪದವಿಂಗಡಣೆ:
ಏಳು +ಕುರುಪತಿ +ಪಾಂಡು+ತನಯ
ವ್ಯಾಳಸೇನೆಗೆ +ಸಿಂಹವಿದೆ +ನಿ
ನ್ನಾಳ +ಬಿಡು +ನೀ +ನೋಡುತಿರು+ ಕರ್ಣಾದಿ +ಸುಭಟರಲಿ
ಜಾಳಿಸಿದ +ಜಯಕಾಮಿನಿಯ +ಜಂ
ಘಾಳತನವನು +ನಿಲಿಸಿ +ನಿನ್ನಯ
ತೋಳಿನಲಿ +ತೋರುವೆವು +ಮೈದೋರೆಂದರ್+ಅವನಿಪನ

ಅಚ್ಚರಿ:
(೧) ಗೆಲಿಸು ಎಂದು ಹೇಳುವ ಪರಿ – ಜಾಳಿಸಿದ ಜಯಕಾಮಿನಿಯ ಜಂಘಾಳತನವನು ನಿಲಿಸಿ ನಿನ್ನಯ
ತೋಳಿನಲಿ ತೋರುವೆವು
(೨) ದುರ್ಯೋಧನನಿಗೆ ಶಕ್ತಿ ತುಂಬುವ ಪರಿ – ಪಾಂಡುತನಯ ವ್ಯಾಳಸೇನೆಗೆ ಸಿಂಹವಿದೆ

ಪದ್ಯ ೩೩: ಕೃಪ ಅಶ್ವತ್ಥಾಮರು ಕೌರವನಿಗೆ ಯಾವ ಅಭಯವನ್ನು ನೀಡಿದರು?

ಅರಸ ಹೊರವಡು ಭೀಮಪಾರ್ಥರ
ಕರುಳ ಬೀಯವ ಭೂತ ನಿಕರಕೆ
ಬರಿಸುವೆವು ನೀ ನೋಡಲೊಡ್ಡುವೆವಸ್ತ್ರಸಂತತಿಯ
ಗರುವರಿಹರೇ ನೀರೊಳಾ ಹಿಮ
ಕರ ಮಹಾನ್ವಯ ಕೀರ್ತಿ ಜಲದೊಳು
ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ (ಗದಾ ಪರ್ವ, ೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ಒಡೆಯ, ನೀರಿನಿಂದ ಹೊರಕ್ಕೆ ಬಾ, ನಿನ್ನೆದುರಿನಲ್ಲೇ ನಮ್ಮ ಅಸ್ತ್ರಗಳನ್ನೆಲ್ಲಾ ಒಡ್ಡಿ ಭೀಮಾರ್ಜುನರ ಕರುಳನ್ನು ಹೊರಗೆಳೆದು ಭೂತಗಳಿಗೆ ಬಡಿಸುತ್ತೇವೆ. ನಿನ್ನಂತಹ ಸ್ವಾಭಿಮಾನಿ ಶೂರರು ಎಲ್ಲಾದರೂ ನೀರಿನಲ್ಲಿ ಅಡಗಿಕೊಳ್ಳುವರೇ? ಚಂದ್ರವಂಶದ ಕೀರ್ತಿಯು ನಿನ್ನಿಂದಾಗಿ ನೀರಿನಲ್ಲಿ ಕರಗದಿರುವುದೇ?

ಅರ್ಥ:
ಅರಸ: ರಾಜ; ಹೊರವಡು: ಹೊರಗೆ ಬಾ; ಕರುಳು: ಪಚನಾಂಗ; ಬೀಯ: ಉಣಿಸು, ಆಹಾರ; ಭೂತ: ಬೇತಾಳ; ನಿಕರ: ಗುಂಪು; ಬರಿಸು: ತೃಪ್ತಿಪಡಿಸು; ನೋಡು: ವೀಕ್ಷಿಸು; ಒಡ್ಡು: ನೀಡು; ಅಸ್ತ್ರ: ಶಸ್ತ್ರ, ಆಯುಧ; ಸಂತತಿ: ಗುಂಪು; ಗರುವ: ಶ್ರೇಷ್ಠ, ಬಲಶಾಲಿ; ನೀರು: ಜಲ; ಹಿಮಕರ: ಚಂದ್ರ; ಮಹಾನ್ವಯ: ವಂಶ; ಕೀರ್ತಿ: ಯಶಸ್ಸು; ಜಲ: ನೀರು; ಕರಗು: ಮಾಯವಾಗು; ಕಷ್ಟ: ಕಠಿಣ; ವೃತ್ತಿ: ಸ್ಥಿತಿ; ಅವನಿಪ: ರಾಜ;

ಪದವಿಂಗಡಣೆ:
ಅರಸ+ ಹೊರವಡು +ಭೀಮ+ಪಾರ್ಥರ
ಕರುಳ +ಬೀಯವ +ಭೂತ +ನಿಕರಕೆ
ಬರಿಸುವೆವು +ನೀ +ನೋಡಲ್+ಒಡ್ಡುವೆವ್+ಅಸ್ತ್ರ+ಸಂತತಿಯ
ಗರುವರಿಹರೇ +ನೀರೊಳಾ +ಹಿಮ
ಕರ +ಮಹಾನ್ವಯ +ಕೀರ್ತಿ +ಜಲದೊಳು
ಕರಗದಿಹುದೇ +ಕಷ್ಟ+ವೃತ್ತಿಯದೆಂದರ್+ಅವನಿಪನ

ಅಚ್ಚರಿ:
(೧) ರೂಪಕದ ಪ್ರಯೋಗ – ಹಿಮಕರ ಮಹಾನ್ವಯ ಕೀರ್ತಿ ಜಲದೊಳು ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ
(೨) ಚಂದ್ರವಂಶ ಎಂದು ಕರೆಯುವ ಪರಿ – ಹಿಮಕರ ಮಹಾನ್ವಯ

ಪದ್ಯ ೩೨: ಕೌರವನ ಕೋಪಕ್ಕೆ ಉಳಿದವರು ಏನೆಂದು ಉತ್ತರಿಸಿದರು?

ಜೀಯ ಖತಿಯೇಕೆಮ್ಮೊಡನೆ ಚ
ಕ್ರಾಯುಧನ ಚಾತುರ್ಯದಲಿ ರಣ
ದಾಯತಪ್ಪಿತು ಭಟರು ಬೀತುದು ಹೇಳಲೇನದನು
ಕಾಯಿದರೊ ಕಾದಿದರೊ ಗುರು ಗಾಂ
ಗೇಯ ಸೈಂಧವ ಮಾದ್ರಪತಿ ರಾ
ಧೇಯರನುಗತವಾಗದಿಹುದಪರಾಧ ನಮಗೆಂದ (ಗದಾ ಪರ್ವ, ೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅದಕ್ಕವರು, ಒಡೆಯ ನಮ್ಮ ಮೇಲೇಕೆ ಕೋಪ? ಶ್ರೀಕೃಷ್ಣನ ಚಾತುರ್ಯದಿಂದ ಯುದ್ಧದಲ್ಲಿ ನಮ್ಮ ಲೆಕ್ಕಾಚಾರ ತಲೆಕೆಳಕಾಯ್ತು. ಭೀಷ್ಮ, ದ್ರೋಣ, ಸೈಂಧವ, ಕರ್ಣ, ಶಲ್ಯರು ನಿನ್ನನ್ನು ರಕ್ಷಿಸಲೆಂದೇ ಹೋರಾಡಲಿಲ್ಲವೇ? ಅವರಿಗಾದ ಗತಿ ನಮಗೂ ಅಗದಿದ್ದುದರಿಂದ ನಾವು ಬದುಕಿರುವುದೇ ಅಪರಾಧವೆಂದು ಒಪ್ಪಿಕೊಳ್ಳುತ್ತೇವೆ ಎಂದರು.

ಅರ್ಥ:
ಜೀಯ: ಒಡೆಯ; ಖತಿ: ಕೋಪ; ಆಯುಧ: ಶಸ್ತ್ರ; ಚಾತುರ್ಯ: ಜಾಣತನ; ಆಯ: ಪರಿಮಿತಿ; ತಪ್ಪು: ಸರಿಹೊಂದದಿರುವುದು; ಭಟ: ಸೈನಿಕ; ಬೀತು: ಕಳೆದು; ಹೇಳು: ತಿಳಿಸು; ಕಾಯು: ರಕ್ಷಿಸು; ಕಾದು: ಹೋರಾಡು; ಗುರು: ಆಚಾರ್ಯ; ಗಾಂಗೇಯ: ಭೀಷ್ಮ; ಸೈಂಧವ: ಜಯದ್ರಥ; ಮಾದ್ರಪತಿ: ಶಲ್ಯ; ರಾಧೇಯ: ಕರ್ಣ; ಅನುಗತ: ಜೊತೆಯಲ್ಲಿ ಬರುವವನು; ಅಪರಾಧ: ತಪ್ಪು;

ಪದವಿಂಗಡಣೆ:
ಜೀಯ +ಖತಿಯೇಕ್+ಎಮ್ಮೊಡನೆ +ಚ
ಕ್ರಾಯುಧನ +ಚಾತುರ್ಯದಲಿ+ ರಣದ್
ಆಯತಪ್ಪಿತು +ಭಟರು +ಬೀತುದು +ಹೇಳಲೇನದನು
ಕಾಯಿದರೊ +ಕಾದಿದರೊ +ಗುರು +ಗಾಂ
ಗೇಯ +ಸೈಂಧವ +ಮಾದ್ರಪತಿ+ ರಾ
ಧೇಯರ್+ಅನುಗತವಾಗದಿಹುದ್+ಅಪರಾಧ +ನಮಗೆಂದ

ಅಚ್ಚರಿ:
(೧) ಜೋಡಿ ಪದಗಳ ಬಳಕೆ – ಚಕ್ರಾಯುಧನ ಚಾತುರ್ಯದಲಿ; ಕಾಯಿದರೊ ಕಾದಿದರೊ

ಪದ್ಯ ೩೧: ಕೌರವನು ಕೋಪದಿಂದ ಏನು ಕೇಳಿದನು?

ಬದುಕಿ ಬಂದರೆ ಭೀಮ ನಿಮ್ಮನು
ಗದೆಯ ಸವಿಗಾಣಿಸನಲಾ ಸಾ
ಕಿದನ ಸಮಯಕೆ ಸುಳಿದಿರೈ ಸಾಹಿತ್ಯರೇಖೆಯಲಿ
ಕದನದಲಿ ಸೌಬಲ ಸುಶರ್ಮರ
ಹೊದರ ಹರೆಗಡಿವಲ್ಲಿ ನೀವ್ ಮಾ
ಡಿದ ಪರಾಕ್ರಮವಾವುದೆಂದನು ನೃಪತಿ ಖಾತಿಯಲಿ (ಗದಾ ಪರ್ವ, ೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕೌರವನು ಅದನ್ನು ಕೇಳಿ ಸಿಟ್ಟಿನಿಂದ, ಭೀಮನು ನಿಮಗೆ ಗದೆಯ ಸವಿಯನ್ನು ಉಣೀಸಲಿಲ್ಲವೇ? ಒಡೆಯನ ಕಷ್ಟಕಾಲದ ಸಮಯದಲ್ಲಿ ಜೊತೆಗ್ಯಾಗಿ ಬಂದೊದಗಿದಿರಲ್ಲವೇ? ಹೌದು ಶಕುನಿ ಸುಶರ್ಮರ ಸೈನ್ಯವನ್ನೂ ವೈರಿಗಳು ಸಂಹರಿಸಿದರಲ್ಲಾ ಆಗ ನೀವೇನು ಮಾಡುತ್ತಿದ್ದೀರಿ ಎಂದು ಕೇಳಿದನು.

ಅರ್ಥ:
ಬದುಕು: ಜೀವಿಸು; ಬಂದು: ಆಗಮಿಸು; ಗದೆ: ಮುದ್ಗರ; ಸವಿ: ಸಿಹಿ; ಕಾಣಿಸು: ತೋರು; ಸಾಕು: ಸಲಹು; ಸಮಯ: ಕಾಲ; ಸುಳಿ: ಕಾಣಿಸಿಕೊಳ್ಳು; ಸಾಹಿತ್ಯ: ಸಾಹಚರ್ಯ, ಸಂಬಂಧ; ರೇಖೆ: ಗೆರೆ, ಗೀಟು; ಕದನ: ಯುದ್ಧ; ಹೊದರು: ಗುಂಪು, ಸಮೂಹ; ಹರೆ: ಸೀಳು; ಪರಾಕ್ರಮ: ಶೌರ್ಯ; ನೃಪತಿ: ರಾಜ; ಖಾತಿ: ಕೋಪ, ಕ್ರೋಧ;

ಪದವಿಂಗಡಣೆ:
ಬದುಕಿ+ ಬಂದರೆ +ಭೀಮ +ನಿಮ್ಮನು
ಗದೆಯ +ಸವಿಗಾಣಿಸನಲ್+ಆ+ ಸಾ
ಕಿದನ +ಸಮಯಕೆ +ಸುಳಿದಿರೈ +ಸಾಹಿತ್ಯ+ರೇಖೆಯಲಿ
ಕದನದಲಿ +ಸೌಬಲ+ ಸುಶರ್ಮರ
ಹೊದರ +ಹರೆಗಡಿವಲ್ಲಿ +ನೀವ್ +ಮಾ
ಡಿದ +ಪರಾಕ್ರಮವಾವುದೆಂದನು +ನೃಪತಿ +ಖಾತಿಯಲಿ

ಅಚ್ಚರಿ:
(೧) ಸ ಕಾರದ ಸಾಲು ಪದಗಳು – ಸವಿಗಾಣಿಸನಲಾ ಸಾಕಿದನ ಸಮಯಕೆ ಸುಳಿದಿರೈ ಸಾಹಿತ್ಯರೇಖೆಯಲಿ