ಪದ್ಯ ೨೩: ದುರ್ಯೊಧನನು ಹೇಗೆ ಪಲಾಯನ ಮಾಡಿದನು?

ಬಳಿಕ ನೂರಾನೆಯಲಿ ನಿನ್ನವ
ನಳವಿಗೊಟ್ಟನು ಭೀಮಸೇನನ
ಚಲಗತಿಯ ಚಾತುರ ಚಪೇಟ ಪದಪ್ರಹಾರದಲಿ
ಕಳನೊಳಗೆ ಕೋಡೂರಿ ಮಗ್ಗುಲ
ನೆಲಕೆ ಕೀಲಿಸಲಾನೆಯಿಂದಿಳೆ
ಗಿಳಿದು ಹಾಯ್ದನು ಭಯದಿನೇಕಾಂಗದಲಿ ಕುರುರಾಯ (ಗದಾ ಪರ್ವ, ೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಬಳಿಕ ನಿನ್ನ ಮಗನು ನೂರು ಆನೆಗಳೊಡನೆ ಭೀಮನೊಡನೆ ಕಾಳಗಕ್ಕಿಳಿದನು. ಭೀಮನ ಅತಿ ವೇಗದ ಆತುರ್ಯ, ಪದಗಳ ಹೊಡೆತದಿಂದ ಅವನು ಹತ್ತಿದ್ದ ಆನೆಯು ದಂತವನ್ನು ಮಗ್ಗುಲಾಗಿ ನೆಲಕ್ಕೆ ಮಲಗಲು, ಆನೆಯಿಂದಿಳಿದು ಭಯದಿಂದ ಏಕಾಂಗಿಯಾಗಿ ಪಲಾಯನ ಮಾಡಿದನು.

ಅರ್ಥ:
ಬಳಿಕ: ನಂತರ; ನೂರು: ಶತ; ಆನೆ: ಗಜ; ಅಳವಿ: ಶಕ್ತಿ; ಚಲಗತಿ: ಅತಿವೇಗ; ಚಾತುರ: ನಿಪುಣತೆ; ಚಪೇಟ: ಅಭಯಹಸ್ತ; ಪದ: ಪಾದ, ಚರಣ; ಪ್ರಹಾರ: ಹೊಡೆತ, ಪೆಟ್ಟು; ಕಳ: ರಣರಂಗ; ಕೋಡೂರು: ದಂತವನ್ನು ನೆಲಕ್ಕೆ ಊರು; ಮಗ್ಗಲು: ಪಕ್ಕ, ಬದಿ; ನೆಲ: ಭೂಮಿ; ಕೀಲಿಸು: ಜೋಡಿಸು, ಚುಚ್ಚು; ಆನೆ: ಗಜ; ಇಳೆ: ಭೂಮಿ; ಇಳಿ: ಕೆಳಕ್ಕೆ ಬಾ; ಹಾಯ್ದು: ಹೊಡೆ; ಭಯ: ಅಂಜಿಕೆ; ಏಕಾಂಗ: ಒಬ್ಬನೆ; ರಾಯ: ರಾಜ;

ಪದವಿಂಗಡಣೆ:
ಬಳಿಕ +ನೂರಾನೆಯಲಿ+ ನಿನ್ನವನ್
ಅಳವಿಗೊಟ್ಟನು +ಭೀಮಸೇನನ
ಚಲಗತಿಯ +ಚಾತುರ +ಚಪೇಟ +ಪದ+ಪ್ರಹಾರದಲಿ
ಕಳನೊಳಗೆ +ಕೋಡೂರಿ+ ಮಗ್ಗುಲ
ನೆಲಕೆ+ ಕೀಲಿಸಲ್+ಆನೆಯಿಂದ್+ಇಳೆ
ಗಿಳಿದು+ ಹಾಯ್ದನು +ಭಯದಿನ್+ಏಕಾಂಗದಲಿ +ಕುರುರಾಯ

ಅಚ್ಚರಿ:
(೧) ಚ ಕಾರದ ತ್ರಿವಳಿ ಪದ – ಚಲಗತಿಯ ಚಾತುರ ಚಪೇಟ

ಪದ್ಯ ೨೨: ಸಂಜಯನು ರಣರಸವನ್ನು ಹೇಗೆ ವಿವರಿಸಿದನು?

ಶಕುನಿ ಬಿದ್ದನು ಜೀಯ ಸಹದೇ
ವಕನ ಕೈಯಲುಳೂಕ ಮಡಿದನು
ನಕುಲನಂಬಿನಲಾ ತ್ರಿಗರ್ತ ಸುಶರ್ಮಕಾದಿಗಳು
ಸಕಲ ಗಜಹಯಸೇನೆ ಸಮಸ
ಪ್ತಕರು ಪಾರ್ಥನ ಶರದಲಮರೀ
ನಿಕರವನು ಸೇರಿದರು ಹೇಳುವುದೇನು ರಣರಸವ (ಗದಾ ಪರ್ವ, ೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನ ಪ್ರಶ್ನೆಯನ್ನು ವಿವರಿಸುತ್ತಾ, ಎಲೈ ರಾಜನೇ ಯುದ್ಧರಂಗದ ಸಾರವನ್ನು ಹೇಳುತ್ತೇನೆ ಕೇಳು. ಸಹದೇವನ ಕೈಯಲ್ಲಿ ಶಕುನಿಯು ಇಹಲೋಕವನ್ನು ತ್ಯಜಿಸಿದನು. ನಕುಲನ ಬಾಣಗಳಿಂದ ಉಲೂಕನು ಮಡಿದನು. ಅರ್ಜುನನ ಬಾಣಗಳಿಂದ ತಮ್ಮ ಸಮಸ್ತ ಸೇನೆಯೊಂದಿಗೆ ತ್ರಿಗರ್ತ ದೇಶಾಧಿಪತಿಗಳಾದ ಸುಶರ್ಮನೇ ಮೊದಲಾದ ಪರಾಕ್ರಮಿಗಳು ಅಪ್ಸರೆಯರ ಗುಂಪನ್ನು ಸೇರಿದರು ಎಂದು ಸಂಜಯನು ವಿವರಿಸಿದನು.

ಅರ್ಥ:
ಬಿದ್ದು: ಬೀಳು, ಕುಸಿ; ಜೀಯ: ಒಡೆಯ; ಮಡಿ: ಸಾಯಿ, ಸಾವನಪ್ಪು; ಅಂಬು: ಬಾಣ; ಆದಿ: ಮುಂತಾದ; ಸಕಲ: ಎಲ್ಲಾ; ಗಜ: ಆನೆ; ಹಯ: ಕುದುರೆ; ಸೇನೆ: ಸೈನ್ಯ; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಶರ: ಬಾಣ; ಅಮರಿ: ಅಪ್ಸರೆ; ನಿಕರ: ಗುಂಪು; ಸೇರು: ಜೊತೆಗೂಡು; ಹೇಳು: ತಿಳಿಸು; ರಣ: ಯುದ್ಧ; ರಸ: ಸಾರ;

ಪದವಿಂಗಡಣೆ:
ಶಕುನಿ +ಬಿದ್ದನು +ಜೀಯ +ಸಹದೇ
ವಕನ +ಕೈಯಲ್+ಉಳೂಕ+ ಮಡಿದನು
ನಕುಲನ್+ಅಂಬಿನಲ್+ಆ ತ್ರಿಗರ್ತ+ ಸುಶರ್ಮಕ+ಆದಿಗಳು
ಸಕಲ+ ಗಜ+ಹಯ+ಸೇನೆ +ಸಮಸ
ಪ್ತಕರು +ಪಾರ್ಥನ +ಶರದಲ್+ಅಮರೀ
ನಿಕರವನು+ ಸೇರಿದರು +ಹೇಳುವುದೇನು+ ರಣರಸವ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಬಿದ್ದನು, ಮಡಿದನು, ಅಮರೀನಿಕರ ಸೇರಿದನು

ಪದ್ಯ ೨೧: ಧೃತರಾಷ್ಟ್ರನು ಸಂಜಯನಿಗೆ ಯಾವ ಪ್ರಶ್ನೆಗಳನ್ನಿಟ್ಟನು?

ಹೋಗಿ ತಳುವಿದೆ ಕೌರವೇಂದ್ರನ
ನೀಗಿದಳೆ ಜಯಲಕ್ಷ್ಮಿ ಪಾಂಡವ
ರಾಗುಹೋಗೇನಾಯ್ತು ಶಕುನಿಯ ಹಯದ ಮೋಹರವ
ತಾಗಿ ಮುರಿದನೆ ಭೀಮನೀ ಮೇ
ಲ್ಪೋಗಿನಾಹವವೇನು ರಾಯನ
ತಾಗು ಥಟ್ಟೇನಾಯ್ತು ಸಂಜಯ ತಿಳಿಯಹೇಳೆಂದ (ಗದಾ ಪರ್ವ, ೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮಾತನಾಡುತ್ತಾ, ಸಂಜಯ ಹೋದವನು ಬಹಳ ತಡವಾಗಿ ಬಂದೆ. ಜಯಲಕ್ಷ್ಮಿಯು ಕೌರವನನ್ನು ತ್ಯಜಿಸಿ ಹೋದಳೇ? ಪಾಂಡವರ ಆಗುಹೋಗುಗಳೇನು? ಶಕುನಿಯ ಕುದುರೆಗಳ ದಳವನ್ನು ಭೀಮನು ಆಕ್ರಮಿಸಿ ಮುರಿದನೇ? ಕೌರವನ ಗತಿಯೇನು ಎಂದು ಪ್ರಶ್ನಿಸಿದನು.

ಅರ್ಥ:
ಹೋಗು: ತೆರಳು; ತಳುವು: ನಿಧಾನಿಸು; ನೀಗು: ನಿವಾರಿಸಿಕೊಳ್ಳು, ಪರಿಹರಿಸು; ಜಯಲಕ್ಷ್ಮಿ: ವಿಜಯಲಕ್ಷ್ಮಿ; ಆಗುಹೋಗು: ವಿಚಾರ; ಹಯ: ಕುದುರೆ; ಮೋಹರ: ಯುದ್ಧ; ತಾಗು: ಮುಟ್ಟು; ಮುರಿ: ಸೀಳು; ಆಹವ: ಯುದ್ಧ; ರಾಯ: ರಾಜ; ಥಟ್ಟು: ಗುಂಪು; ಹೇಳು: ಗೊತ್ತುಮಾಡು;

ಪದವಿಂಗಡಣೆ:
ಹೋಗಿ+ ತಳುವಿದೆ +ಕೌರವೇಂದ್ರನ
ನೀಗಿದಳೆ +ಜಯಲಕ್ಷ್ಮಿ+ ಪಾಂಡವರ್
ಆಗುಹೋಗೇನಾಯ್ತು +ಶಕುನಿಯ +ಹಯದ +ಮೋಹರವ
ತಾಗಿ +ಮುರಿದನೆ +ಭೀಮನೀ +ಮೇ
ಲ್ಪೋಗಿನ್+ಆಹವವೇನು +ರಾಯನ
ತಾಗು +ಥಟ್ಟೇನಾಯ್ತು +ಸಂಜಯ +ತಿಳಿಯ+ಹೇಳೆಂದ

ಅಚ್ಚರಿ:
(೧) ಧೃತರಾಷ್ಟ್ರನು ಕೌರವನು ಜಯಿಸನು ಎಂದು ಯೋಚಿಸಿದ ಎಂದು ಹೇಳುವ ಪರಿ – ಕೌರವೇಂದ್ರನ
ನೀಗಿದಳೆ ಜಯಲಕ್ಷ್ಮಿ
(೨) ಮೋಹರ, ಆಹವ – ಸಮಾನಾರ್ಥಕ ಪದ

ಪದ್ಯ ೨೦: ಧೃತರಾಷ್ಟ್ರನು ಯಾರ ತಲೆಯನ್ನು ನೇವರಿಸಿದನು?

ಬಂದು ಸಂಜಯನಂಧನೃಪತಿಯ
ಮಂದಿರವ ಹೊಕ್ಕಖಿಳ ನಾರೀ
ವೃಂದವನು ಕಳುಹಿದನು ದಂಡಿಗೆಗಳಲಿ ಮನೆಮನೆಗೆ
ಬಂದರಾರೆನೆ ಸಂಜಯನು ಜೀ
ಯೆಂದಡುತ್ಸಾಹದಲಿ ಬಂದೈ
ತಂದೆ ಸಂಜಯ ಬಾಯೆನುತ ತಡವಿದನು ಬೋಳೈಸಿ (ಗದಾ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನರಮನೆಯನ್ನು ಹೊಕ್ಕು, ಸ್ತ್ರೀಯರನ್ನು ಪಲ್ಲಕ್ಕಿಗಳಲ್ಲಿ ಅವರವರ ಮನೆಗೆ ಕಳುಹಿಸಿದನು. ಧೃತರಾಷ್ಟ್ರನು ಬಂದವರಾರು ಎಂದು ಉತ್ಸಾಹದಿಂದ ಕೇಳಲು ಸಂಜಯನು ಒಡೆಯಾ ನಾನು ಎಂದು ಹೇಳಲು, ಧೃತರಾಷ್ಟ್ರನು ಉತ್ಸಾಹದಿಂದ ಅಪ್ಪಾ ಸಂಜಯ ಬಾ ಬಾ ಎಂದು ಆತನ ತಲೆಯನ್ನು ನೇವರಿಸಿದನು.

ಅರ್ಥ:
ಬಂದು: ಆಗಮಿಸು; ಅಂಧ: ಕುರುಡ; ನೃಪ: ರಾಜ; ಮಂದಿರ: ಆಲಯ; ಹೊಕ್ಕು: ಸೇರು; ಅಖಿಳ: ಎಲ್ಲಾ; ನಾರಿ: ಹೆಂಗಸು; ವೃಂದ: ಗುಂಪು; ಕಳುಹಿದ: ತೆರಳು, ಹೊರಗಡೆ ಅಟ್ಟು; ದಂಡಿಗೆ: ಪಲ್ಲಕ್ಕಿ; ಮನೆ: ಆಲಯ, ಗೃಹ; ಜೀಯ: ಒಡೆಯ; ಉತ್ಸಾಹ: ಸಂಭ್ರಮ; ತಡವು: ನೇವರಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು;

ಪದವಿಂಗಡಣೆ:
ಬಂದು +ಸಂಜಯನ್+ಅಂಧ+ನೃಪತಿಯ
ಮಂದಿರವ+ ಹೊಕ್ಕ್+ಅಖಿಳ +ನಾರೀ
ವೃಂದವನು +ಕಳುಹಿದನು +ದಂಡಿಗೆಗಳಲಿ+ ಮನೆಮನೆಗೆ
ಬಂದರಾರ್+ಎನೆ +ಸಂಜಯನು +ಜೀಯ್
ಎಂದಡ್+ಉತ್ಸಾಹದಲಿ +ಬಂದೈ
ತಂದೆ +ಸಂಜಯ +ಬಾಯೆನುತ +ತಡವಿದನು +ಬೋಳೈಸಿ

ಅಚ್ಚರಿ:
(೧) ಧೃತರಾಷ್ಟ್ರನನ್ನು ಕರೆದ ಪರಿ – ಅಂಧ ನೃಪತಿ, ಜೀಯ
(೨) ಅಕ್ಕರೆಯನ್ನು ತೋರುವ ಪರಿ – ಬಾಯೆನುತ ತಡವಿದನು ಬೋಳೈಸಿ

ಪದ್ಯ ೧೯: ಹಸ್ತಿನಾಪುರದ ಸ್ಥಿತಿ ಹೇಗಿತ್ತು?

ತುಂಬಿತಿದು ಗಜಪುರವನಲ್ಲಿಯ
ಕಂಬನಿಯ ಕಾಲುವೆಯನದನೇ
ನೆಂಬೆನೈ ಗಜಬಜಿಕೆ ಮೊಳೆತುದು ಕೇರಿಕೇರಿಯಲಿ
ಲಂಬಿಸಿತು ಭಯತಿಮಿರ ಶೋಕಾ
ಡಂಬರದ ಡಾವರ ವಿವೇಕವ
ಚುಂಬಿಸಿತು ಧೃತರಾಷ್ಟ್ರ ವಿದುರರ ಪೌರ ಪರಿಜನದ (ಗದಾ ಪರ್ವ, ೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಪಾಳೆಯದಿಂದ ಹೋದ ಗಾಡಿ, ರಥ, ಕಂಬಿಗಳು ಗಜಪುರವನ್ನು ತಲುಪಲು ಕಣ್ಣಿರಿನ ಕಾಲುವೆಯೇ ಹರಿಯಿತು. ಕೇರಿಕೇರಿಗಳಲ್ಲಿ ಗೊಂದಲವಾಯಿತು. ಕರಾಳದ ಭಯದ ಕತ್ತಲೆ ಕವಿದು, ಧೃತರಾಷ್ಟ್ರ ವಿದುರ ಪುರಜನರೆಲ್ಲರ ವಿವೇಕವನ್ನು ಚುಂಬಿಸಿತು.

ಅರ್ಥ:
ತುಂಬು: ಭರ್ತಿಯಾಗು; ಗಜಪುರ: ಹಸ್ತಿನಾಪುರ; ಕಂಬನಿ: ಕಣ್ಣೀರು; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಗಜಬಜ: ಕೋಲಾಹಲ; ಮೊಳೆತು: ಚಿಗುರು, ಅಂಕುರಿಸು; ಕೇರಿ: ದಾರಿ, ಮಾರ್ಗ; ಲಂಬ: ಉದ್ದ; ಭಯ: ಅಂಜಿಕೆ; ತಿಮಿರ: ಕತ್ತಲೆ; ಶೋಕ: ದುಃಖ; ಆಡಂಬರ: ತೋರಿಕೆ, ಢಂಭ; ಡಾವರ: ಹಿಂಸೆ, ಕೋಟಲೆ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಚುಂಬಿಸು: ಮುತ್ತಿಡು; ಪೌರ: ಊರು; ಪರಿಜನ: ಸಂಬಂಧಿಕ;

ಪದವಿಂಗಡಣೆ:
ತುಂಬಿತಿದು +ಗಜಪುರವನ್+ಅಲ್ಲಿಯ
ಕಂಬನಿಯ +ಕಾಲುವೆಯನ್+ಅದನೇನ್
ಎಂಬೆನೈ +ಗಜಬಜಿಕೆ+ ಮೊಳೆತುದು +ಕೇರಿಕೇರಿಯಲಿ
ಲಂಬಿಸಿತು +ಭಯ+ತಿಮಿರ +ಶೋಕ
ಆಡಂಬರದ +ಡಾವರ +ವಿವೇಕವ
ಚುಂಬಿಸಿತು +ಧೃತರಾಷ್ಟ್ರ +ವಿದುರರ+ ಪೌರ +ಪರಿಜನದ

ಅಚ್ಚರಿ:
(೧) ದುಃಖದ ತೀವ್ರತೆಯನ್ನು ವಿವರಿಸುವ ಪರಿ – ತುಂಬಿತಿದು ಗಜಪುರವನಲ್ಲಿಯಕಂಬನಿಯ ಕಾಲುವೆ
(೨) ಭಯದ ತೀವ್ರತೆ – ಲಂಬಿಸಿತು ಭಯತಿಮಿರ ಶೋಕಾಡಂಬರದ ಡಾವರ ವಿವೇಕವ ಚುಂಬಿಸಿತು