ಪದ್ಯ ೧೮: ಪಾಳೆಯದ ಐಶ್ವರ್ಯವು ಯಾವುದನ್ನು ಮೀರಿಸುವಂತಿತ್ತು?

ಪಾಳೆಯಕೆ ಗಜಪುರದ ವಂಕಕೆ
ಕೀಲಿಸಿತು ದಂಡಿಗೆಯ ಸಂದಣಿ
ಮೇಲುಸರಕಿನ ಬಂಡಿ ತಲೆವೊರೆಯೆತ್ತು ಕಂಬಿಗಳ
ಹೇಳಲೇನು ಸಮುದ್ರ ವಿಭವವ
ನೇಳಿಸುವ ಪಾಳೆಯದ ಸಿರಿ ಶೂ
ನ್ಯಾಲಯಕೆ ಜೋಡಿಸಿತಲೈ ಜನಮೇಜಯ ಕ್ಷಿತಿಪ (ಗದಾ ಪರ್ವ, ೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಪಾಳೆಯಕ್ಕೂ ಹಸ್ತಿನಾವತಿಯ ಮಹಾದ್ವಾರಕ್ಕೂ ಪಲ್ಲಕ್ಕಿ ಬಂಡಿ, ಹೊರೆಯೆತ್ತುಗಳು, ಕಂಬಿಗಳು ಸಂದಣಿಸಿದವು. ಏನು ಹೇಳಲಿ ರಾಜ ಜನಮೇಜಯ, ರತ್ನಾಕರವಾದ ಸಮುದ್ರದ ವೈಭವವನ್ನು ಮಿರಿಸುವ ಪಾಳೆಯದ ಐಶ್ವರ್ಯವು ಶೂನ್ಯವಾದ ಅರಮನೆಗೆ ಹೋಯಿತು.

ಅರ್ಥ:
ಪಾಳೆಯ: ಬಿಡಾರ; ಗಜಪುರ: ಹಸ್ತಿನಾಪುರ; ಅಂಕ: ಸ್ಪರ್ಧೆ, ಕಾಳಗ ಇತ್ಯಾದಿಗಳು ನಡೆಯುವ ಸ್ಥಳ; ಕೀಲಿಸು: ಜೋಡಿಸು; ದಂಡಿಗೆ: ಪಲ್ಲಕ್ಕಿ; ಸಂದಣಿ: ಗುಂಪು; ಸರಕು: ಸಾಮಾನು; ಬಂಡಿ: ರಥ; ತಲೆ: ಶಿರ; ಕಂಬಿ: ಲೋಹದ ತಂತಿ; ಹೇಳು: ತಿಳಿಸು; ಸಮುದ್ರ: ಸಾಗರ; ವಿಭವ: ಸಿರಿ, ಸಂಪತ್ತು; ಏಳು: ಹತ್ತು; ಸಿರಿ: ಐಶ್ವರ್ಯ; ಶೂನ್ಯ: ಬರಿದಾದುದು; ಆಲಯ: ಮನೆ; ಜೋಡಿಸು: ಕೂಡಿಸು; ಕ್ಷಿತಿಪ: ರಾಜ;

ಪದವಿಂಗಡಣೆ:
ಪಾಳೆಯಕೆ +ಗಜಪುರದವ್ +ಅಂಕಕೆ
ಕೀಲಿಸಿತು +ದಂಡಿಗೆಯ +ಸಂದಣಿ
ಮೇಲು+ಸರಕಿನ +ಬಂಡಿ +ತಲೆವೊರೆಯೆತ್ತು +ಕಂಬಿಗಳ
ಹೇಳಲೇನು +ಸಮುದ್ರ +ವಿಭವವನ್
ಏಳಿಸುವ +ಪಾಳೆಯದ +ಸಿರಿ +ಶೂ
ನ್ಯಾಲಯಕೆ +ಜೋಡಿಸಿತಲೈ +ಜನಮೇಜಯ +ಕ್ಷಿತಿಪ

ಅಚ್ಚರಿ:
(೧) ರೂಪಕದ ಪ್ರಯೋಗ – ಸಮುದ್ರ ವಿಭವವನೇಳಿಸುವ ಪಾಳೆಯದ ಸಿರಿ ಶೂನ್ಯಾಲಯಕೆ ಜೋಡಿಸಿತಲೈ

ಪದ್ಯ ೧೭: ಯಾವ ಆಲಯಗಳಿಂದ ಗಾಡಿಗಳನ್ನು ತುಂಬಿದರು?

ರಾಯನರಮನೆ ಮಂಡವಿಗೆ ಗುಡಿ
ಲಾಯ ಚವುಕಿಗೆ ನಿಖಿಳ ಭವನ ನಿ
ಕಾಯವನು ತೆಗೆದೊಟ್ಟಿದರು ಬಂಡಿಗಳ ಹಂತಿಯಲಿ
ರಾಯನನುಜರ ದ್ರೋಣ ಕೃಪ ರಾ
ಧೇಯ ಸೈಂಧವ ಶಕುನಿ ರಾಜಪ
ಸಾಯಿತರ ಗುಡಿಗೂಢಚಂಪಯವೇರಿದವು ರಥವ (ಗದಾ ಪರ್ವ, ೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ದೊರೆಯ ಅರಮನೆ, ಮಂಟಪ, ಧ್ವಜ, ಲಾಯ, ಚೌಕಿ, ಮನೆಗಳನ್ನೆಲ್ಲಾ ತೆಗೆದು ಬಂಡಿಗಳ ಸಾಲಿನಲ್ಲಿ ಒಟ್ಟಿದರು. ದೊರೆಯ ತಮ್ಮಂದಿರು, ದ್ರೋಣ, ಕೃಪ, ಕರ್ಣ, ಸೈಂಧವ, ಶಕುನಿ, ರಾಜರ ಆಪ್ತರ ಗುಡಿ ಗುಡಾರಗಳನ್ನು ಗಾಡಿಗಳಲ್ಲಿ ಒಟ್ಟಿದರು.

ಅರ್ಥ:
ರಾಯ: ರಾಜ; ಅರಮನೆ: ರಾಜರ ಆಲಯ; ಮಂಡವಿಗೆ: ಮಂಟಪ; ಗುಡಿ: ಕುಟೀರ, ಮನೆ; ಲಾಯ: ಅಶ್ವಶಾಲೆ; ಚವುಕಿ: ಪಡಸಾಲೆ, ಚೌಕಿ; ನಿಖಿಳ: ಎಲ್ಲಾ; ಭವನ: ಆಲಯ; ನಿಕಾಯ: ಗುಂಪು; ತೆಗೆ: ಹೊರತರು; ಒಟ್ಟು: ಸೇರಿಸು; ಬಂಡಿ: ರಥ; ಹಂತಿ: ಪಂಕ್ತಿ, ಸಾಲು; ರಾಯ: ರಾಜ; ಅನುಜ: ತಮ್ಮ; ಪಸಾಯಿತ: ಆಪ್ತರು; ಚಂಪೆಯ: ಡೇರ; ಏರು: ಹತ್ತು;

ಪದವಿಂಗಡಣೆ:
ರಾಯನ್+ಅರಮನೆ +ಮಂಡವಿಗೆ +ಗುಡಿ
ಲಾಯ +ಚವುಕಿಗೆ+ ನಿಖಿಳ +ಭವನ +ನಿ
ಕಾಯವನು +ತೆಗೆದ್+ಒಟ್ಟಿದರು +ಬಂಡಿಗಳ +ಹಂತಿಯಲಿ
ರಾಯನ್+ಅನುಜರ +ದ್ರೋಣ +ಕೃಪ +ರಾ
ಧೇಯ +ಸೈಂಧವ +ಶಕುನಿ +ರಾಜ+ಪ
ಸಾಯಿತರ +ಗುಡಿ+ಗೂಢ+ಚಂಪಯವ್+ಏರಿದವು +ರಥವ

ಅಚ್ಚರಿ:
(೧) ಜಾಗಗಳನ್ನು ಹೇಳುವ ಪರಿ – ಅರಮನೆ, ಮಂಡವಿಗೆ, ಗುಡಿ, ಲಾಯ, ಚವುಕಿ, ಭವನ

ಪದ್ಯ ೧೬: ಎಷ್ಟು ವಸ್ತುಗಳನ್ನು ಸಾಗಿಸಲು ಮುಂದಾದರು?

ಮೆರೆವ ಗಜ ಹಯಶಾಲೆಯಲಿ ಮೈ
ಮುರಿಕ ವೃದ್ಧ ವ್ಯಾಧಿತಾವಳ್
ಮರಿಗುದುರೆ ಮರಿಯಾನೆ ತೆಗೆದವು ಲಕ್ಕ ಸಂಖ್ಯೆಯಲಿ
ಉರುವ ಭಂಡಾರದ ಮಹಾರ್ಥದ
ನೆರವಣಿಗೆ ಗಾಢಿಸಿತು ಬೀದಿಯ
ತೆರಹು ಕೆತ್ತವು ಹೊತ್ತ ಸರಕಿನ ಬಹಳ ಬಂಡಿಗಳ (ಗದಾ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಗಜಶಾಲೆ, ಹಯಶಾಲೆಗಳಲ್ಲಿ ಮುದಿ, ರೋಗಗ್ರಸ್ತ, ಮರಿಕುದುರೆ ಲಕ್ಷಗಟ್ಟಲೆ ಮರಿಯಾನೆಗಳನ್ನು ಹೊರಡಿಸಿಕೊಂಡು ಬಂದರು. ಭಂಡಾರದಿಂದ ಬಹುಬೆಲೆಯ ವಸ್ತುಗಳನ್ನು ತಂದರು. ಸರಕಿನ ಬಂಡಿಗಳು ದಾರಿಯಲ್ಲಿ ಸ್ಥಳವಿಲ್ಲದಂತೆ ಕಿಕ್ಕಿರಿದವು.

ಅರ್ಥ:
ಮೆರೆ: ಹೊಳೆ, ಪ್ರಕಾಶಿಸು; ಗಜ: ಆನೆ; ಹಯ: ಕುದುರೆ; ಶಾಲೆ: ಆಲಯ; ಮೈ: ತನು; ಮುರಿ: ಬಾಗು, ತಿರುವು; ವೃದ್ಧ: ವಯಸ್ಸಾದ, ಮುದುಕ; ವ್ಯಾಧಿ: ರೋಗ, ಖಾಯಿಲೆ; ಆವಳಿ: ಸಾಲು; ಮರಿ: ಚಿಕ್ಕ; ಕುದುರೆ: ಅಶ್ವ; ಆನೆ: ಗಜ; ತೆಗೆ: ಹೊರತಉ; ಲಕ್ಕ: ಲಕ್ಷ; ಸಂಖ್ಯೆ: ಎಣಿಕೆ; ಉರು: ವಿಶೇಷವಾದ; ಭಂಡಾರ: ಬೊಕ್ಕಸ, ಖಜಾನೆ; ಮಹಾರ್ಥ: ಬಹುಬೆಲೆಯ; ಎರವು: ಸಾಲ, ದೂರವಾಗು; ಗಾಢಿಸು: ತುಂಬು; ಬೀದಿ: ದಾರಿ; ತೆರಹು: ಎಡೆ, ಜಾಗ; ಕೆತ್ತು: ನಡುಕ, ಸ್ಪಂದನ; ಹೊತ್ತ: ಹೇರು; ಸರಕು: ಸಾಮಗ್ರಿ; ಬಹಳ: ತುಂಬ; ಬಂಡಿ: ರಥ;

ಪದವಿಂಗಡಣೆ:
ಮೆರೆವ+ ಗಜ +ಹಯಶಾಲೆಯಲಿ +ಮೈ
ಮುರಿಕ +ವೃದ್ಧ +ವ್ಯಾಧಿತ+ಆವಳಿ
ಮರಿಗುದುರೆ +ಮರಿಯಾನೆ +ತೆಗೆದವು +ಲಕ್ಕ +ಸಂಖ್ಯೆಯಲಿ
ಉರುವ +ಭಂಡಾರದ +ಮಹಾರ್ಥದನ್
ಎರವಣಿಗೆ +ಗಾಢಿಸಿತು +ಬೀದಿಯ
ತೆರಹು +ಕೆತ್ತವು +ಹೊತ್ತ +ಸರಕಿನ +ಬಹಳ +ಬಂಡಿಗಳ

ಅಚ್ಚರಿ:
(೧) ೧-೩ ಸಾಲುಗಳು ಮ ಕಾರದಿಂದ ಪ್ರಾರಂಭ