ಪದ್ಯ ೧೦: ಅಂತಃಪುರದಲ್ಲಿ ಯಾವ ಭೀತಿ ಹಬ್ಬಿತು?

ಅರಮನೆಗೆ ಬಂದಖಿಳ ಸಚಿವರ
ಕರಸಿದನು ಸರಹಸ್ಯವನು ವಿ
ಸ್ತರಿಸಿದನು ಸರ್ವಾಪಹಾರವ ನೃಪಪಲಾಯನವ
ಅರಸಿಯರಿದಳು ಭಾನುಮತಿ ಮಿ
ಕ್ಕರಸಿಯರಿಗರುಹಿಸಿದಳಂತಃ
ಪುರದೊಳಲ್ಲಿಂದಲ್ಲಿ ಹರೆದುದು ಕೂಡೆ ರಣಭೀತಿ (ಗದಾ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪಾಳೆಯದ ಅರಮನೆಗೆ ಸಂಜಯನು ಬಂದು, ಮಂತ್ರಿಗಳನ್ನು ಅಕ್ರೆಸಿ, ಕೌರವನ ಸರ್ವವೂ ಇಲ್ಲದಂತಾಗಿದೆ. ಅರಸನು ಓಡಿಹೋಗಿದ್ದಾನೆ ಎಂಬ ಗುಟ್ಟನ್ನು ಅವರಿಗೆ ತಿಳಿಸಿದನು. ಭಾನುಮತಿಗೆ ಇದು ತಿಳಿಯಿತು, ಅವಳು ಉಳಿದ ರಾಣಿಯರಿಗೆ ತಿಳಿಸಿದಳು. ಅಂತಃಪುರದಲ್ಲಿ ಯುದ್ಧದಲ್ಲಿ ಸೋಲಾದ ಭೀತಿ ಹಬ್ಬಿತು.

ಅರ್ಥ:
ಅರಮನೆ: ರಾಜರ ಆಲಯ; ಬಂದು: ಆಗಮಿಸು; ಅಖಿಳ: ಎಲ್ಲಾ; ಸಚಿವ: ಮಂತ್ರಿ; ಕರಸು: ಬರೆಮಾಡು; ರಹಸ್ಯ: ಗುಟ್ಟು; ವಿಸ್ತರಿಸು: ವಿಸ್ತಾರವಾಗಿ ತಿಳಿಸು; ಸರ್ವ: ಎಲ್ಲವೂ; ಅಪಹಾರ: ಕಿತ್ತುಕೊಳ್ಳುವುದು; ನೃಪ: ರಾಜ; ಪಲಾಯನ: ಓಡಿಹೋಗು; ಅರಸಿ: ರಾಣಿ; ಅರಿ: ತಿಳಿ; ಮಿಕ್ಕ: ಉಳಿದ; ಅರುಹು: ತಿಳಿಸು; ಅಂತಃಪುರ: ರಾಣಿಯರ ವಾಸಸ್ಥಾನ; ಹರೆದು: ವ್ಯಾಪಿಸು; ರಣ: ಯುದ್ಧ; ಭೀತಿ: ಭಯ;

ಪದವಿಂಗಡಣೆ:
ಅರಮನೆಗೆ +ಬಂದ್+ಅಖಿಳ +ಸಚಿವರ
ಕರಸಿದನು +ಸರಹಸ್ಯವನು +ವಿ
ಸ್ತರಿಸಿದನು +ಸರ್ವ+ಅಪಹಾರವ +ನೃಪ+ಪಲಾಯನವ
ಅರಸಿ+ಅರಿದಳು +ಭಾನುಮತಿ +ಮಿ
ಕ್ಕರಸಿಯರಿಗ್+ಅರುಹಿಸಿದಳ್+ಅಂತಃ
ಪುರದೊಳ್+ಅಲ್ಲಿಂದಲ್ಲಿ +ಹರೆದುದು +ಕೂಡೆ +ರಣಭೀತಿ

ಅಚ್ಚರಿ:
(೧) ಅರಸಿ, ಮಿಕ್ಕರಸಿ, ಕರಸಿ, ವಿಸ್ತರಿಸಿ – ಪ್ರಾಸ ಪದ

ಪದ್ಯ ೯: ಸಂಜಯನು ಎಲ್ಲಿಗೆ ಹಿಂದಿರುಗಿದನು?

ಅಳಲದಿರಿ ಗಜಪುರಿಗೆ ಸತಿಯರ
ಕಳುಹುವೆನು ನೀವವನಿಪಾಲನ
ತಿಳುಹಲಾಪಡೆ ಸಂಧಿಗೊಡಬಡಿಸುವದು ಕುರುಪತಿಯ
ಕೊಳನ ತಡಿಯಲಿ ಕಾಣದಂತಿರೆ
ಬಳಸಿ ನೀವೆಂದವರನತ್ತಲು
ಕಳುಹಿ ಸಂಜಯ ಬಂದು ಹೊಕ್ಕನು ನೃಪನ ಪಾಳೆಯವ (ಗದಾ ಪರ್ವ, ೪ ಸಂಧಿ, ೯ ಪದ್ಯ)

ತಾತ್ಪರ್ಯ:
ಸಂಜಯನು ಮಾತನಾಡುತ್ತಾ, ಅಶ್ವತ್ಥಾಮ ನೀವು ದುಃಖಿಸಬೇಡಿ, ಸ್ತ್ರೀಯರನ್ನು ಅರಮನೆಗೆ ಕಳುಹಿಸುವೆನು. ಕೊಳದ ಸುತ್ತಲೂ ಯಾರಿಗೂ ಕಾಣದಂತೆ ಕಾದುಕೊಂಡಿರಿ, ಸಾಧ್ಯವಾದರೆ ಕೌರವನನ್ನು ಸಂಧಿಗೆ ಒಪ್ಪಿಸಿರಿ ಎಂದು ಸಂಜಯನು ತಿಳಿಸಿ ಅವರನ್ನು ಬೀಳ್ಕೊಟ್ಟು ಹಸ್ತಿನಾಪುರಕ್ಕೆ ತೆರಳಿ ರಾಜನ ಅರಮನೆಯನ್ನು ಸೇರಿದನು.

ಅರ್ಥ:
ಅಳಲು: ದುಃಖಿಸು; ಗಜಪುರಿ: ಹಸ್ತಿನಾಪುರ; ಸತಿ: ಹೆಂಡರಿ, ಸ್ತ್ರಿ; ಕಳುಹು: ಬೀಳ್ಕೊಡು; ಅವನಿಪಾಲ: ರಾಜ; ತಿಳುಹು: ಹೇಳು; ಸಂಧಿ: ಸೇರಿಕೆ, ಸಂಯೋಗ; ಒಡಬಡಿಸು: ಹೊಂದಿಸು; ಕೊಳ: ಸರಸಿ; ತಡಿ: ದಡ; ಕಾಣು: ತೋರು; ಬಳಸು: ಆವರಿಸುವಿಕೆ, ಸುತ್ತುವರಿಯುವಿಕೆ; ಹೊಕ್ಕು: ಸೇರು; ನೃಪ: ರಾಜ; ಪಾಳೆಯ: ಬಿಡಾರ;

ಪದವಿಂಗಡಣೆ:
ಅಳಲದಿರಿ +ಗಜಪುರಿಗೆ +ಸತಿಯರ
ಕಳುಹುವೆನು +ನೀವ್+ಅವನಿಪಾಲನ
ತಿಳುಹಲಾಪಡೆ +ಸಂಧಿಗ್+ಒಡಬಡಿಸುವದು +ಕುರುಪತಿಯ
ಕೊಳನ +ತಡಿಯಲಿ +ಕಾಣದಂತಿರೆ
ಬಳಸಿ+ ನೀವೆಂದ್+ಅವರನ್+ಅತ್ತಲು
ಕಳುಹಿ +ಸಂಜಯ +ಬಂದು + ಹೊಕ್ಕನು +ನೃಪನ +ಪಾಳೆಯವ

ಅಚ್ಚರಿ:
(೧) ಅವನಿಪಾಲ, ಕುರುಪತಿ – ಕೌರವನನ್ನು ಕರೆದ ಪರಿ
(೨) ಅವನಿಪಾಲ, ನೃಪ – ಸಮಾನಾರ್ಥಕ ಪದ

ಪದ್ಯ ೮: ಅಶ್ವತ್ಥಾಮನು ಹೇಗೆ ದುಃಖಿಸಿದನು?

ಅವರು ಕಂಬನಿದುಂಬಿದರು ಕೌ
ರವ ಮಹಾವಂಶಾಭಿಚಾರ
ವ್ಯವಸಿತಕೆ ಫಲವಾಯ್ತಲಾ ಯಮನಂದನಾದಿಗಳ
ಶಿವಶಿವಾ ಪವಡಿಸಿತೆ ಚತುರ
ರ್ಣವ ವಿಪರೀಧಾನ ಪೃಥ್ವೀ
ಧವನ ಬಾಳಿಕೆ ನೀರೊಳೆಂದಳಲಿದನು ಗುರುಸೂನು (ಗದಾ ಪರ್ವ, ೪ ಸಂಧಿ, ೮ ಪದ್ಯ)

ತಾತ್ಪರ್ಯ:
ಕೃಪಚಾರ್ಯ, ಅಶ್ವತ್ಥಾಮ, ಕೃತವರ್ಮರು ಕಣ್ಣೀರಿಟ್ಟರು, ಕೌರವ ವಂಶವು ಮಾಡಿದ ಅಭಿಚಾರಕ್ಕೆ ಇಂದು ಫಲದೊರೆಯಿತಲಾ? ಇದು ಯುಧಿಷ್ಠಿರಾದಿಗಳಿಗೆ ಅನುಕೂಲವಾಯಿತು. ಚತುಸ್ಸಮುದ್ರ ಸೀಮಾಧಿಪತಿಯಾದ ದುರ್ಯೋಧನನ ಬಾಳು ನೀರಿನಲ್ಲಿ ಮುಳುಗಿತೇ ಎಂದು ದುಃಖಿತಪ್ತನಾಗಿ ಅಶ್ವತ್ಥಾಮನು ನುಡಿದನು.

ಅರ್ಥ:
ಕಂಬನಿ: ಕಣ್ಣೀರು; ತುಂಬು: ಭರ್ತಿಯಾಗು; ವಂಶ: ಕುಲ; ಅಭಿಚಾರ: ಮಾಟ; ಫಲ: ಪ್ರಯೋಜನ ಯಮನಂದನ: ಧರ್ಮಜ; ಆದಿ: ಮುಂತಾದ; ಪವಡಿಸು: ನಿದ್ರಿಸು; ಚತುರ್: ನಾಲ್ಕು; ಅರ್ಣವ: ಸಾಗರ; ವಿಪರೀಧಾನ: ; ಪೃಥ್ವಿ: ಭೂಮಿ; ಬಾಳು: ಜೀವನ; ನೀರು: ಜಲ; ಅಳಲು: ಗೋಳಿಡು, ದುಃಖಿಸು; ಸೂನು: ಮಗ;

ಪದವಿಂಗಡಣೆ:
ಅವರು +ಕಂಬನಿ+ತುಂಬಿದರು+ ಕೌ
ರವ +ಮಹಾ+ವಂಶ+ಅಭಿಚಾರ
ವ್ಯವಸಿತಕೆ+ ಫಲವಾಯ್ತಲಾ +ಯಮನಂದನ+ಆದಿಗಳ
ಶಿವಶಿವಾ +ಪವಡಿಸಿತೆ +ಚತುರ
ರ್ಣವ +ವಿಪರೀಧಾನ+ ಪೃಥ್ವೀ
ಧವನ +ಬಾಳಿಕೆ +ನೀರೊಳೆಂದ್+ಅಳಲಿದನು +ಗುರುಸೂನು

ಅಚ್ಚರಿ:
(೧) ದುರ್ಯೋಧನನ ಸ್ಥಿತಿಯನ್ನು ನೆನೆದ ಪರಿ – ಪವಡಿಸಿತೆ ಚತುರರ್ಣವ ವಿಪರೀಧಾನ ಪೃಥ್ವೀ
ಧವನ ಬಾಳಿಕೆ ನೀರೊಳ್

ಪದ್ಯ ೭: ಕೌರವನು ಎಲ್ಲಿ ಸೇರಿದನೆಂದು ಸಂಜಯನು ತಿಳಿಸಿದನು?

ಬಂದನೆನ್ನನು ಸಂತವಿಡುತಲ
ದೊಂದು ಸರಸಿಯ ತಡಿಯಲಳವಡೆ
ನಿಂದು ಸಂವರಿಸಿದನು ಗದೆಯನು ಬಾಹುಮೂಲದಲಿ
ತಂದೆಗರುಹೆಂದೆನಗೆ ಹೇಳಿದು
ಹಿಂದೆ ಮುಂದೆಡಬಲನನಾರೈ
ದಂದವಳಿಯದೆ ನೀರ ಹೊಕ್ಕನು ಕಾಣೆನವನಿಪನ (ಗದಾ ಪರ್ವ, ೪ ಸಂಧಿ, ೭ ಪದ್ಯ)

ತಾತ್ಪರ್ಯ:
ನನ್ನನ್ನು ಸಂತೈಸುತ್ತಾ ಒಂದು ಸರೋವರದ ತೀರಕ್ಕೆ ಕರೆದುಕೊಂಡು ಹೋಗಿ, ಗದೆಯನ್ನು ಕಂಕುಳಲ್ಲಿ ಇಟ್ಟುಕೊಂಡು, ತಂದೆಗೆ ಈ ವಿಷಯವನ್ನು ಹೇಳು ಎಂದು ನನಗೆ ತಿಳಿಸಿ, ಎಲ್ಲಾ ಕಡೆಯೂ ನೋಡಿ, ನೀರಿನಲ್ಲಿ ಮುಳುಗಿದನು. ಆನಂತರ ನನಗೆ ಮತ್ತೆ ಕಾಣಿಸಲಿಲ್ಲ ಎಂದು ಸಂಜಯನು ಕೃಪ ಅಶ್ವತ್ಥಾಮರಿಗೆ ತಿಳಿಸಿದನು.

ಅರ್ಥ:
ಬಂದು: ಆಗಮಿಸು; ಸಂತ: ಸೌಖ್ಯ, ಕ್ಷೇಮ; ಸರಸಿ: ಸರೋವರ; ತಡಿ: ದಡ; ಅಳವು: ಅಳತೆ, ನೆಲೆ; ನಿಂದು: ನಿಲ್ಲು; ಸಂವರಿಸು: ಸಜ್ಜು ಮಾಡು; ಗದೆ: ಮುದ್ಗರ; ಬಾಹು: ತೋಳು; ಬಾಹುಮೂಲ: ಕಂಕಳು; ತಂದೆ: ಜನಕ; ಅರುಹು: ತಿಳಿಸು, ಹೇಳು; ಹಿಂದೆ: ಭೂತ; ಮುಂದೆ: ಎದುರು; ಎಡಬಲ: ಅಕ್ಕ ಪಕ್ಕ; ನೀರು: ಜಲ; ಹೊಕ್ಕು: ಸೇರು; ಕಾಣೆ: ತೊರಾದಾಗು; ಅವನಿಪನ: ರಾಜ;

ಪದವಿಂಗಡಣೆ:
ಬಂದನ್+ಎನ್ನನು +ಸಂತವಿಡುತಲದ್
ಒಂದು +ಸರಸಿಯ +ತಡಿಯಲ್+ಅಳವಡೆ
ನಿಂದು +ಸಂವರಿಸಿದನು+ ಗದೆಯನು +ಬಾಹುಮೂಲದಲಿ
ತಂದೆಗ್+ಅರುಹೆಂದ್+ಎನಗೆ +ಹೇಳಿದು
ಹಿಂದೆ +ಮುಂದ್+ಎಡ+ಬಲನನಾರೈ
ದಂದವಳಿಯದೆ +ನೀರ+ ಹೊಕ್ಕನು +ಕಾಣೆನ್+ಅವನಿಪನ

ಅಚ್ಚರಿ:
(೧) ಎಲ್ಲಾ ದಿಕ್ಕುಗಳು ಎಂದು ಹೇಳುವ ಪರಿ – ಹಿಂದೆ ಮುಂದೆಡಬಲ
(೨) ಕಂಕಳು ಎಂದು ಹೇಳುವ ಪರಿ – ಬಾಹುಮೂಲ

ಪದ್ಯ ೬: ಕೌರವವನನ್ನು ಕಂಡ ಸಂಜಯನ ಸ್ಥಿತಿ ಹೇಗಿತ್ತು?

ಕಂಡೆನರಸನ ನಿಬ್ಬರವ ಬಳಿ
ಕಂಡಲೆದುದತಿಶೋಕಶಿಖಿ ಕೈ
ಗೊಂಡುದಿಲ್ಲರೆಘಳಿಗೆ ಬಳಿಕೆಚ್ಚತ್ತು ಕಂದೆರೆದು
ಖಂಡಿಸಿದನೆನ್ನುಬ್ಬೆಯನು ಹುರಿ
ಗೊಂಡುದಾತನ ಸತ್ವವಾತನ
ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ (ಗದಾ ಪರ್ವ, ೪ ಸಂಧಿ, ೬ ಪದ್ಯ)

ತಾತ್ಪರ್ಯ:
ಸಂಜಯನು ಮಾತನಾಡುತ್ತಾ, ನಾನು ರಾಜನ ಕಳವಳವನ್ನು ನೋಡಿದೆ, ಅತಿಶಯ ಶೋಕಜ್ವಾಲೆಯಲ್ಲಿ ಬೆಂದಿದ್ದೆ. ಒಂದು ನಿಮಿಷ ಮೂರ್ಛಿತನಾಗಿ, ನಂತರ ಎಚ್ಚೆತ್ತು, ಕಣ್ಣುತೆರೆದು ನನ್ನ ಶೋಕವನ್ನು ನಿಲ್ಲಿಸಿದನು. ಅವನ ಸತ್ವ ಹುರಿಗೊಂಡಿತು. ಅವನಿಗೆ ಸ್ವರ್ಗ, ಮರ್ತ್ಯ, ಪಾತಾಳ ಲೋಕಗಳಲ್ಲಿ ಸಮರಾರಿದ್ದಾರೆ?

ಅರ್ಥ:
ಕಂಡು: ನೋಡು; ಅರಸ: ರಾಜ; ನಿಬ್ಬರ: ಅತಿಶಯ, ಹೆಚ್ಚಳ; ಬಳಿ: ಹತ್ತಿರ; ಅತಿ: ಬಹಳ: ಶೋಕ: ದುಃಖ; ಶಿಖಿ: ಬೆಂಕಿ; ಕೈಗೊಂಡು: ಪಡೆದು; ಅರೆ: ಅರ್ಧ; ಘಳಿಗೆ: ಸಮಯ; ಬಳಿಕ: ನಂತರ; ಎಚ್ಚತ್ತು: ಎಚ್ಚರನಾಗಿ; ಕಂದೆರೆದು: ಕಣ್ಣುಬಿಟ್ಟು; ಖಂಡಿಸು: ಕಡಿ, ಕತ್ತರಿಸು; ಉಬ್ಬೆ: ಸೆಕೆ, ಕಾವು; ಹುರಿ: ಕಾಯಿಸು, ತಪ್ತಗೊಳಿಸು; ಸತ್ವ: ಸಾರ; ದಂಡಿ: ಶಕ್ತಿ, ಸಾಮರ್ಥ್ಯ; ಬಹರು: ಆಗಮಿಸು; ಸುರ: ದೇವತೆ; ನರ: ಮನುಷ್ಯ; ನಾಗಲೋಕ: ಪಾತಾಳ;

ಪದವಿಂಗಡಣೆ:
ಕಂಡೆನ್+ಅರಸನ +ನಿಬ್ಬರವ +ಬಳಿ
ಕಂಡಲೆದುದ್+ಅತಿ+ಶೋಕಶಿಖಿ+ ಕೈ
ಗೊಂಡುದಿಲ್ಲ್+ಅರೆ+ಘಳಿಗೆ +ಬಳಿಕ್+ಎಚ್ಚತ್ತು +ಕಂದೆರೆದು
ಖಂಡಿಸಿದನ್+ಎನ್ನ್+ಉಬ್ಬೆಯನು +ಹುರಿ
ಗೊಂಡುದಾತನ +ಸತ್ವವ್+ಆತನ
ದಂಡಿಯಲಿ +ಬಹರಾರು +ಸುರ+ ನರ+ ನಾಗಲೋಕದಲಿ

ಅಚ್ಚರಿ:
(೧) ದುರ್ಯೋಧನನ ಪರಾಕ್ರಮ – ಆತನ ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ

ಪದ್ಯ ೫: ಸಂಜಯನು ಯಾರನ್ನು ನೋಡಲು ಹೋದನು?

ಸೆಳೆದುಕೊಂಡನು ಮೃತ್ಯುವಿನ ಹೆಡ
ತಲೆಯನೊದೆದು ಕೃಪಾಳು ತನ್ನನು
ತಲೆಬಳಿಚಿ ಕಳುಹಿದರೆ ಬಂದೆನು ರಾಯನರಕೆಯಲಿ
ಬಳಲಿ ಬೀಳುತ್ತೇಳುತೊಬ್ಬನೆ
ತಲೆಮುಸುಕಿನಲಿ ನಡೆಯೆ ಕಂಡೆನು
ನೆಲನೊಡೆಯನಹುದಲ್ಲೆನುತ ಸುಳಿದೆನು ಸಮೀಪದಲಿ (ಗದಾ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಸಾತ್ಯಕಿಯು ನನ್ನ ಹೆಡತಲೆಗೆ ಹೂಡಿದ್ದ ಕತ್ತಿಯಿಂದ ಅವರು ನನ್ನನ್ನುಳಿಸಿ ಕಳಿಸಿದರು. ಕೌರವನನ್ನು ಹುಡುಕುತ್ತಾ ಬರುತ್ತಿರಲು ತಲೆಗೆ ಮುಸುಕು ಹಾಕಿಕೊಂಡು ಬೀಳುತ್ತಾ ಏಳುತ್ತಾ ಹೋಗುವವನನ್ನು ಕಂಡೆನು. ಇವನು ಅರಸನೋ ಅಲ್ಲವೋ ನೋಡಿ ಬಿಡೋಣವೆಂದು ಹತ್ತಿರಕ್ಕೆ ಹೋದೆನು.

ಅರ್ಥ:
ಸೆಳೆ: ಎಳೆತ, ಸೆಳೆತ; ಮೃತ್ಯು: ಸಾವು; ಹೆಡತಲೆ: ಹಿಂದಲೆ; ಒದೆ: ತಳ್ಳು; ಕೃಪೆ: ಕರುಣೆ; ತಲೆಬಳಿಚು: ತಲೆ ಕತ್ತರಿಸು; ಕಳಿಸು: ತೆರಳು; ಬಂದು: ಆಗಮಿಸು; ಅರಕೆ: ಕೊರತೆ, ನ್ಯೂನತೆ; ಬಳಲು: ಆಯಾಸ, ದಣಿವು; ಬೀಳು: ಎರಗು; ಏಳು: ಹತ್ತು; ತಲೆ: ಶಿರ; ಮುಸುಕು: ಹೊದಿಕೆ; ನಡೆ: ಚಲಿಸು; ಕಂಡು: ನೊಡು; ನೆಲ: ಭೂಮಿ; ಒಡೆಯ: ರಾಜ; ಸುಳಿ: ಬೀಸು, ತೀಡು; ಸಮೀಪ: ಹತ್ತಿರ;

ಪದವಿಂಗಡಣೆ:
ಸೆಳೆದುಕೊಂಡನು +ಮೃತ್ಯುವಿನ +ಹೆಡ
ತಲೆಯನ್+ಒದೆದು +ಕೃಪಾಳು +ತನ್ನನು
ತಲೆಬಳಿಚಿ +ಕಳುಹಿದರೆ +ಬಂದೆನು+ ರಾಯನ್+ಅರಕೆಯಲಿ
ಬಳಲಿ +ಬೀಳುತ್+ಏಳುತ್+ಒಬ್ಬನೆ
ತಲೆಮುಸುಕಿನಲಿ +ನಡೆಯೆ +ಕಂಡೆನು
ನೆಲನೊಡೆಯನ್+ಅಹುದಲ್ಲೆನುತ +ಸುಳಿದೆನು +ಸಮೀಪದಲಿ

ಅಚ್ಚರಿ:
(೧) ದುರ್ಯೋಧನನನ್ನು ನೆಲನೊಡೆಯ ಎಂದು ಕರೆದಿರುವುದು
(೨) ದುರ್ಯೋಧನನು ನಡೆಯುತ್ತಿದ್ದ ಪರಿ – ಬಳಲಿ ಬೀಳುತ್ತೇಳುತೊಬ್ಬನೆ ತಲೆಮುಸುಕಿನಲಿ ನಡೆಯೆ ಕಂಡೆನು