ಪದ್ಯ ೪: ಸಂಜಯನ ಗುರುವರ್ಯರಾರು?

ಬಳಿಕ ಭೀಮನ ಗದೆಯಲಿಭ ಶತ
ವಳಿದರೊಬ್ಬನೆ ತಿರುಗಿ ಹಾಯ್ದನು
ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ
ತಲೆಗೆ ಬಂದುದು ತನಗೆಯಾಖ್ಷನ
ಸುಳಿದರೆಮ್ಮಾರಾಧ್ಯ ವರ ಮುನಿ
ತಿಲಕ ವೇದವ್ಯಾಸದೇವರು ಕೃಪೆಯ ಭಾರದಲಿ (ಗದಾ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಬಳಿಕ ಭೀಮನು ತನ್ನ ಗದೆಯಿಂದ ನೂರಾನೆಗಳನ್ನು ಕೊಲ್ಲಲು ಅರಸನು ಹಿಮ್ಮೆಟ್ತಿ ರಣರಂಗದ ಕೋಲಾಹಲದ ನಡುವೆ ಕೆಸರ್ನ್ನು ತುಳಿಯುತ್ತಾ ಹೋದನು. ಅವನು ಕಾಣದಿರಲು ಹುಡುಕುತ್ತಾ ನಾನು ಬಂದೆ. ಆಗ ನನ್ನ ತಲೆಗೆ ಆಪತ್ತು ಬರಲು, ನಮ್ಮ ಆರಾಧ್ಯಗುರುಗಳಾದ ವೇದವ್ಯಾಸರು ಕರುಣೆಯಿಂದ ಅಲ್ಲಿಗೆ ಬಂದರು.

ಅರ್ಥ:
ಬಳಿಕ: ನಂತರ; ಗದೆ: ಮುದ್ಗರ; ಇಭ: ಆನೆ; ಶತ: ನೂರು; ಅಳಿ: ಸಾವು; ತಿರುಗು: ಓಡಾಡು; ಹಾಯ್ದು: ಹೊಡೆ; ಕೊಳುಗುಳ: ಯುದ್ಧ; ಕೋಳ್ಗುದಿ: ತಕ ತಕ ಕುದಿ, ಅತಿ ಸಂತಾಪ; ಕೋಲಾಹಲ: ಗೊಂದಲ; ಕೆಸರು: ರಾಡಿ; ತಲೆ: ಶಿರ; ಕ್ಷಣ: ಸಮಯ; ಸುಳಿ: ಕಾಣಿಸಿಕೊಳ್ಳು; ಆರಾಧ್ಯ: ಪೂಜನೀಯ; ವರ: ಶ್ರೇಷ್ಠ; ಮುನಿ: ಋಷಿ; ತಿಲಕ: ಶ್ರೇಷ್ಠ; ಕೃಪೆ: ದಯೆ; ಭಾರ: ಹೊರೆ;

ಪದವಿಂಗಡಣೆ:
ಬಳಿಕ +ಭೀಮನ +ಗದೆಯಲ್+ಇಭ +ಶತವ್
ಅಳಿದರ್+ಒಬ್ಬನೆ +ತಿರುಗಿ +ಹಾಯ್ದನು
ಕೊಳುಗುಳದ +ಕೋಳ್ಗುದಿಯ +ಕೋಲಾಹಲದ +ಕೆಸರಿನಲಿ
ತಲೆಗೆ +ಬಂದುದು +ತನಗೆ+ಆ+ಕ್ಷಣ
ಸುಳಿದರ್+ಎಮ್ಮಾರಾಧ್ಯ +ವರ+ ಮುನಿ
ತಿಲಕ +ವೇದವ್ಯಾಸ+ದೇವರು +ಕೃಪೆಯ +ಭಾರದಲಿ

ಅಚ್ಚರಿ:
(೧) ಕ ಕಾರದ ಸಾಲು ಪದ – ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ

ನುಡಿಮುತ್ತುಗಳು: ಗದಾ ಪರ್ವ ೪ ಸಂಧಿ

  • ಕೊಳುಗುಳದ ಕೋಳ್ಗುದಿಯ ಕೋಲಾಹಲದ ಕೆಸರಿನಲಿ –  ಪದ್ಯ  
  • ಆತನ ದಂಡಿಯಲಿ ಬಹರಾರು ಸುರ ನರ ನಾಗಲೋಕದಲಿ – ಪದ್ಯ  
  • ಪವಡಿಸಿತೆ ಚತುರರ್ಣವ ವಿಪರೀಧಾನ ಪೃಥ್ವೀಧವನ ಬಾಳಿಕೆ ನೀರೊಳ್ – ಪದ್ಯ  
  • ಅರಸನ ಮಾನಿನಿಯರು ಸಹಸ್ರಸಂಖ್ಯೆಯೊಳಾನನೇಂದುಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ – ಪದ್ಯ  ೧೨
  • ಸಮುದ್ರ ವಿಭವವನೇಳಿಸುವ ಪಾಳೆಯದ ಸಿರಿ ಶೂನ್ಯಾಲಯಕೆ ಜೋಡಿಸಿತಲೈ – ಪದ್ಯ  ೧೮
  • ತುಂಬಿತಿದು ಗಜಪುರವನಲ್ಲಿಯಕಂಬನಿಯ ಕಾಲುವೆ – ಪದ್ಯ  ೧೯
  • ಲಂಬಿಸಿತು ಭಯತಿಮಿರ ಶೋಕಾಡಂಬರದ ಡಾವರ ವಿವೇಕವ ಚುಂಬಿಸಿತು – ಪದ್ಯ  ೧೯
  • ಕೌರವೇಂದ್ರನನೀಗಿದಳೆ ಜಯಲಕ್ಷ್ಮಿ – ಪದ್ಯ  ೨೧
  • ಸಮಸಪ್ತಕರು ಪಾರ್ಥನ ಶರದಲಮರೀನಿಕರವನು ಸೇರಿದರು – ಪದ್ಯ  ೨೨
  • ಭೀಮಸೇನನ ಚಲಗತಿಯ ಚಾತುರ ಚಪೇಟ ಪದಪ್ರಹಾರದಲಿ – ಪದ್ಯ  ೨೩
  • ಬಿಡುಸುವವಲೇ ಪ್ರತಿಫಲಿತ ಪೂರ್ವಾದತ್ತ ಪುಣ್ಯಾವಳಿಗಳ್ – ಪದ್ಯ  ೨೫
  • ಸಾಲ ಹೆಣನೊಟ್ಟಿಲ ಕಬಂಧದ ರುಧಿರಪೂರದಲಿ – ಪದ್ಯ  ೨೭
  • ಹಿಮಕರ ಮಹಾನ್ವಯ ಕೀರ್ತಿ ಜಲದೊಳು ಕರಗದಿಹುದೇ ಕಷ್ಟವೃತ್ತಿಯದೆಂದರವನಿಪನ – ಪದ್ಯ  ೩೩
  • ಜಾಳಿಸಿದ ಜಯಕಾಮಿನಿಯ ಜಂಘಾಳತನವನು ನಿಲಿಸಿ ನಿನ್ನಯ ತೋಳಿನಲಿ ತೋರುವೆವು – ಪದ್ಯ  ೩೪
  • ಜಾರಿದ ಜಯಾಂಗನೆ ಮುಪ್ಪಿನಲಿ ನಮಗೊಲಿವುದರಿದೇಕಾಕಿಯಾದೆವಲೆ – ಪದ್ಯ  ೩೫
  • ದೈವದೊಲಹಿನ ಪೈಸರಕೆ ನೀವೇನ ಮಾಡುವಿರೆಂದನಾ – ಪದ್ಯ  ೩೭
  • ಸುಕೃತದೊಳರಗೆಲಸಿಗಳು ನಾವೆ ನಿಮ್ಮಲಿ ಕೊರತೆಯಿಲ್ಲೆಂದ – ಪದ್ಯ  ೩೯
  • ಅಳುಕಿ ಕದನದೊಳೋಡಿ ನಗರಿಯ ಲಲನೆಯರ ಮರೆಗೊಂಬೆನೇ – ಪದ್ಯ  ೪೧
  • ದೈವಯೋಗವ ಪರಿಹರಿಸಲಾರಳವು – ಪದ್ಯ  ೪೨
  • ಕಾಯಿದಿರು ಕಂಡೌ ಸರೋಜದ ತಾಯಿ ಸರಸಿಯೆನುತ್ತ – ಪದ್ಯ  ೪೪
  • ಹಸ್ತಿನಪುರದ ಸಿರಿ ಜಾರಿದಳು – ಪದ್ಯ  ೪೬
  • ಇರುಳು ಬೇಗೆಯ ಚಕ್ರವಾಕಕೆ ತರಣಿ ತಲೆದೋರಿದವೊಲ – ಪದ್ಯ  ೪೮
  • ಇಂದಿನೀ ಸಂಗ್ರಾಮಜಯದಲಿ ಬಂದ ಜಾಡ್ಯವಿದೇನು – ಪದ್ಯ  ೪೯
  • ಹರಿ ಸವರ್ಗತನಹುದೆಂದನಾ ದ್ರೌಣಿ – ಪದ್ಯ  ೫೬
  • ಕೌರವನ ಸಿರಿ ಪಣ್ಯಾಂಗನಾವಿಭ್ರಮವ ವರಿಸಿತಲಾ – ಪದ್ಯ  ೬೦

ಪದ್ಯ ೩: ಸಂಜಯನು ಕೌರವನ ಯುದ್ಧವನ್ನು ಹೇಗೆ ವರ್ಣಿಸಿದನು?

ಅರಿದುದಿಲ್ಲಾ ಕೌರವೇಂದ್ರನ
ನರಸಿ ಶಕುನಿಯ ದಳವ ಮುತ್ತಿದ
ರಿರಿದರವರ ತ್ರಿಗರ್ತರನು ಸೌಬಲ ಸುಶರ್ಮಕರ
ಮುರಿದ ಬವರವ ಬಲಿದು ಗಜ ನೂ
ರರಲಿ ಹೊಕ್ಕನು ರಾಯನಹಿತರ
ಜರಿದು ಝಾಡಿಸಿ ಬೀದಿವರಿದನು ರಾಯದಳದೊಳಗೆ (ಗದಾ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ಸಂಜಯನು ತನ್ನ ಮಾತನ್ನು ಮುಂದುವರೆಸುತ್ತಾ, ನಿಮಗೆ ಇದು ತಿಳಿಯದೇ? ಪಾಂಡವರು ಕೌರವರನನ್ನು ಹುಡುಕುತ್ತಾ ಹೋಗಿ ಶಕುನಿಯ ಸೇನೆಯನ್ನು ಮುತ್ತಿದರು. ಸುಶರ್ಮ ಶಕುನಿಗಳನ್ನು ಕೊಂದರು. ಹೀಗೆ ಸೋತ ಮೇಲೆ ದೊರೆಯು ನೂರಾನೆಗಳೊಡನೆ ಪಾಂಡವರ ಸೇನೆಯನ್ನು ಸಂಹರಿಸುತ್ತಾ ನುಗ್ಗಿದನು.

ಅರ್ಥ:
ಅರಿ: ತಿಳಿ; ಅರಸು: ಹುಡುಕು; ದಳ: ಸೈನ್ಯ; ಮುತ್ತು: ಆವರಿಸು; ಇರಿ: ಚುಚ್ಚು; ಮುರಿ: ಸೀಳು; ಬವರ: ಕಾಳಗ, ಯುದ್ಧ; ಬಲಿ: ಗಟ್ಟಿಯಾಗು; ಗಜ: ಆನೆ; ನೂರು: ಶತ; ಹೊಕ್ಕು: ಸೇರು; ಅಹಿತ: ವೈರಿ; ಜರಿ: ಬಯ್ಯು; ಝಾಡಿಸು: ಒದರು; ಬೀದಿ: ವಿಸ್ತಾರ, ವ್ಯಾಪ್ತಿ; ರಾಯ: ರಾಜ; ದಳ: ಸೈನ್ಯ;

ಪದವಿಂಗಡಣೆ:
ಅರಿದುದಿಲ್ಲಾ +ಕೌರವೇಂದ್ರನನ್
ಅರಸಿ +ಶಕುನಿಯ+ ದಳವ +ಮುತ್ತಿದರ್
ಇರಿದರ್+ಅವರ +ತ್ರಿಗರ್ತರನು +ಸೌಬಲ +ಸುಶರ್ಮಕರ
ಮುರಿದ+ ಬವರವ +ಬಲಿದು +ಗಜ+ ನೂ
ರರಲಿ+ ಹೊಕ್ಕನು +ರಾಯನ್+ಅಹಿತರ
ಜರಿದು+ ಝಾಡಿಸಿ +ಬೀದಿವರಿದನು +ರಾಯದಳದೊಳಗೆ

ಅಚ್ಚರಿ:
(೧) ಕೌರವನ ಯುದ್ಧದ ವರ್ಣನೆ – ಮುರಿದ ಬವರವ ಬಲಿದು ಗಜ ನೂರರಲಿ ಹೊಕ್ಕನು ರಾಯನಹಿತರ
ಜರಿದು ಝಾಡಿಸಿ ಬೀದಿವರಿದನು
(೨) ಅರಿ, ಇರಿ, ಮುರಿ, ಜರಿ – ಪ್ರಾಸ ಪದಗಳು

ಪದ್ಯ ೨: ಸಂಜಯನನ್ನು ಯಾರು ಪ್ರಶ್ನಿಸಿದರು?

ಇಳಿದು ರಥವನು ಸಂಜಯನ ಬರ
ಸೆಳೆದು ತಕ್ಕೈಸಿದರು ಹಗೆಯಲಿ
ಸಿಲುಕಿ ಬಂದೈ ಭಾಗ್ಯದಲಿ ಧೃತರಾಷ್ಟ್ರ ಭೂಪತಿಯ
ಕಲಹಗತಿಯೇನಾಯ್ತು ಶಕುನಿಯ
ದಳದೊಳಿದ್ದನು ಕೌರವೇಶ್ವರ
ಸುಳಿದನೇ ಹದನಾವುದೆಂದರು ಭಟರು ಸಂಜಯನ (ಗದಾ ಪರ್ವ, ೪ ಸಂಧಿ, ೨ ಪದ್ಯ)

ತಾತ್ಪರ್ಯ:
ಕೃಪ ಅಶ್ವತ್ಥಾಮ ಕೃತವರ್ಮರು ರಥವನ್ನಿಳಿದು ಸಂಜಯನನ್ನು ಬರಸೆಳೆದು ಅಪ್ಪಿಕೊಂಡರು. ಧೃತರಾಷ್ಟ್ರನ ಪುಣ್ಯದಿಂದ ಶತ್ರುಗಳಿಗೆ ಸಿಕ್ಕು ಉಳಿದು ಬಂದೆ. ಯುದ್ಧದ ಪರಿಣಾಮವೇನು? ಕೌರವೇಶ್ವರನು ಶಕುನಿಯ ದಳದಲ್ಲಿದ್ದುದು ನಮಗೆ ಗೊತ್ತು ಎಂದು ಕೇಳಿದರು.

ಅರ್ಥ:
ಇಳಿ: ಜಾರು; ರಥ: ಬಂಡಿ; ಸೆಳೆ: ಎಳೆತ, ಸೆಳೆತ; ತಕ್ಕೈಸು: ಆಲಿಂಗಿಸು; ಹಗೆ: ವೈರಿ; ಸಿಲುಕು: ಬಂಧನ; ಬಂದು: ಆಗಮಿಸು; ಭಾಗ್ಯ: ಶುಭ, ಅದೃಷ್ಟ; ಭೂಪತಿ: ರಾಜ; ಕಲಹ: ಜಗಳ; ಗತಿ: ವೇಗ; ದಳ: ಸೈನ್ಯ; ಸುಳಿ: ಕಾಣಿಸಿಕೊಳ್ಳು; ಹದ: ಸ್ಥಿತಿ; ಭಟ: ಸೈನಿಕ;

ಪದವಿಂಗಡಣೆ:
ಇಳಿದು +ರಥವನು +ಸಂಜಯನ +ಬರ
ಸೆಳೆದು +ತಕ್ಕೈಸಿದರು +ಹಗೆಯಲಿ
ಸಿಲುಕಿ +ಬಂದೈ +ಭಾಗ್ಯದಲಿ +ಧೃತರಾಷ್ಟ್ರ +ಭೂಪತಿಯ
ಕಲಹಗತಿ+ಏನಾಯ್ತು +ಶಕುನಿಯ
ದಳದೊಳ್+ಇದ್ದನು +ಕೌರವೇಶ್ವರ
ಸುಳಿದನೇ +ಹದನಾವುದೆಂದರು +ಭಟರು +ಸಂಜಯನ

ಅಚ್ಚರಿ:
(೧) ಸಂಜಯನು ಉಳಿದ ಕಾರಣ – ಹಗೆಯಲಿ ಸಿಲುಕಿ ಬಂದೈ ಭಾಗ್ಯದಲಿ ಧೃತರಾಷ್ಟ್ರ ಭೂಪತಿಯ

ಪದ್ಯ ೧: ಸಂಜಯನು ಯಾವ ಮೂರು ರಥಗಳನ್ನು ನೋಡಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬರುತ ಕುರುಭೂ
ಪಾಲನರಕೆಯ ಭೀಮನವರಿವರಲ್ಲಲೇ ಎನುತ
ಮೇಲೆ ಹತ್ತಿರ ಬರಬರಲು ಸಮ
ಪಾಳಿಯಲಿ ರಥ ಮೂರರಲಿ ಕೃಪ
ಕೋಲ ಗುರುವಿನ ಮಗನಲಾ ಎನುತಲ್ಲಿಗೈತಂದ (ಗದಾ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಕೃಪಚಾರ್ಯ ಮುಂತಾದವರುಗಳನ್ನು ನೋಡಿ ಇವರು ಭೀಮನ ಕಡೆಯವರಲ್ಲವಲ್ಲ ಎಂದು ಬೆದರುತ್ತಾ ಹತ್ತಿರಕ್ಕೆ ಬಂದು ಮೂರೂ ರಥಗಳು ಒಂದೇ ಗತಿಯಲ್ಲಿ ಬರುವುದನ್ನೂ ಅದರಲ್ಲಿ ಕೃಪ ಅಶ್ವತ್ಥಾಮರಿರುವುದನ್ನು ಕಂಡು ಹತ್ತಿರಕ್ಕೆ ಬಂದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಬರುತ: ಆಗಮಿಸು; ಭೂಪಾಲ: ರಾಜ; ಅರಕೆ: ಕೊರತೆ, ನ್ಯೂನತೆ; ಹತ್ತಿರ: ಸಮೀಪ; ಸಮಪಾಳಿ: ಒಂದೇ ಗತಿ; ರಥ: ಬಂಡಿ; ಕೋಲ: ಬಾಣ; ಗುರು: ಆಚಾರ್ಯ; ಮಗ: ಸುತ; ಐತಂದ: ಬಂದುಸೇರು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಂಜಯ +ಬರುತ +ಕುರು+ಭೂ
ಪಾಲನ್+ಅರಕೆಯ +ಭೀಮನವರಿವರಲ್ಲಲೇ+ ಎನುತ
ಮೇಲೆ +ಹತ್ತಿರ +ಬರಬರಲು +ಸಮ
ಪಾಳಿಯಲಿ +ರಥ +ಮೂರರಲಿ +ಕೃಪ
ಕೋಲ +ಗುರುವಿನ +ಮಗನಲಾ +ಎನುತ್+ಅಲ್ಲಿಗ್+ಐತಂದ

ಅಚ್ಚರಿ:
(೧) ಧರಿತ್ರೀಪಾಲ, ಭೂಪಾಲ – ಸಮಾನಾರ್ಥಕ ಪದ