ಪದ್ಯ ೪೫: ಪಾಂಡವರು ಜಯವಾಗಲು ಕಾರಣವೇನು?

ಬರುತ ಸಂಜಯ ದೂರದಲಿ ಕೃಪ
ಗುರುಸುತರ ಕೃತವರ್ಮಕನ ಕಂ
ಡರಿರಥಿಗಳಿವರಲ್ಲಲೇ ಶಿವಶಿವ ಮಹಾದೇವ
ಭರತಕುಲ ಮೊದಲೊಂದು ಬಳಿಕಾ
ಯ್ತೆರಡುಕವಲೊಬ್ಬರಿಗೆ ಜಯವಿ
ಸ್ತರಣ ಗದುಗಿನ ವೀರನಾರಾಯಣನ ಕರುಣದಲಿ (ಗದಾ ಪರ್ವ, ೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸಂಜಯನು ದೂರದಲ್ಲಿ ಕೃಪ, ಅಶ್ವತ್ಥಾಮ, ಕೃತವರ್ಮರನ್ನು ನೋಡಿ, ಇವರು ಶತ್ರುರಥಿಕರಾಗಿರಲಾರರು ಎಂದುಕೊಂಡನು. ಭರತಕುಲ ಒಂದಾಗಿದ್ದುದು ಬಳಿಕ ಎರಡಾಯ್ತು. ಒಂದು ಪಕ್ಷಕ್ಕೆ ಶ್ರೀಕೃಷ್ಣನ ದಯೆಯಿಂದ ಜಯವುಂಟಾಯಿತು ಎಂದು ಚಿಂತಿಸಿದನು.

ಅರ್ಥ:
ಬರುತ: ಆಗಮಿಸು; ದೂರ: ಅಂತರ; ಗುರು: ಆಚಾರ್ಯ; ಸುತ: ಮಗ; ಕಂಡು: ನೋಡಿ; ಅರಿ: ವೈರಿ; ರಥಿ: ರಥದಲ್ಲಿ ಕುಳಿತು ಯುದ್ಧ ಮಾಡುವವನು, ಪರಾಕ್ರಮ; ಕುಲ: ವಂಶ; ಬಳಿಕ: ನಂತರ; ಕವಲು: ವಂಶ ಯಾ ಕುಲದ ಶಾಖೆ; ಜಯ: ಗೆಲುವು; ವಿಸ್ತರಣ: ಹಬ್ಬುಗೆ, ವಿಸ್ತಾರ; ಕರುಣ: ದಯೆ;

ಪದವಿಂಗಡಣೆ:
ಬರುತ +ಸಂಜಯ +ದೂರದಲಿ +ಕೃಪ
ಗುರುಸುತರ +ಕೃತವರ್ಮಕನ +ಕಂಡ್
ಅರಿ+ರಥಿಗಳ್+ಇವರಲ್ಲಲೇ +ಶಿವಶಿವ +ಮಹಾದೇವ
ಭರತಕುಲ+ ಮೊದಲೊಂದು +ಬಳಿಕಾಯ್ತ್
ಎರಡು+ಕವಲ್+ಒಬ್ಬರಿಗೆ +ಜಯ+ವಿ
ಸ್ತರಣ +ಗದುಗಿನ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಆಶ್ಚರ್ಯವನ್ನು ಸೂಚಿಸುವ ಪರಿ – ಶಿವಶಿವ ಮಹಾದೇವ

ಪದ್ಯ ೪೪: ಸಂಜಯನು ಯಾರನ್ನು ನೆನೆಯುತ್ತಾ ಹಿಂದಿರುಗಿದನು?

ಕುರುಪತಿಯ ಬೀಳ್ಕೊಂಡು ಸಂಜಯ
ಮರಳಿದನು ತನಗಾದ ಹಿಂದಣ
ಪರಿಭವವ ನೆನೆದಡಿಗಡಿಗೆ ಕಂಪಿಸುತ ಮನದೊಳಗೆ
ಧುರದ ಮಧ್ಯದೊಳೊಬ್ಬನೇ ನಡೆ
ತರುತ ಭೂತಾವಳಿಯನೀಕ್ಷಿಸಿ
ಗುರುವ ನೆನೆದನು ಕೇಳು ಜನಮೇಜಯ ಮಹೀಪಾಲ (ಗದಾ ಪರ್ವ, ೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಂಜಯನು ಕೌರವನನ್ನು ಬೀಳ್ಕೊಂಡು, ಹಿಂದೆ ಯುದ್ಧಭೂಮಿಯಲ್ಲಿ ತನಗೊದಗಿದ್ದ ಅಪಾಯವನ್ನು ನೆನೆದು ಹೆಜ್ಜೆಹೆಜ್ಜೆಗೂ ನಡುಗುತ್ತಾ ಯುದ್ಧರಂಗದಲ್ಲಿ ಭೂತಗಳನ್ನು ನೋಡುತ್ತಾ ಏಕಾಂಗಿಯಾಗಿ ಗುರುಸ್ಮರಣೆ ಮಾಡುತ್ತಾ ಬಂದನು.

ಅರ್ಥ:
ಬೀಳ್ಕೊಂಡು: ತೆರಳು; ಮರಳು: ಹಿಂದಿರುಗು; ಹಿಂದಣ: ಹಿಂದೆ, ಭೂತ; ಪರಿಭವ: ಅನಾದರ, ತಿರಸ್ಕಾರ, ಸೋಲು; ನೆನೆದು: ಜ್ಞಾಪಿಸು; ಅಡಿಗಡಿ: ಹೆಜ್ಜೆ ಹೆಜ್ಜೆ; ಕಂಪಿಸು: ನಡುಗು; ಮನ: ಮನಸ್ಸು; ಧುರ: ಯುದ್ಧ, ಕಾಳಗ; ಮಧ್ಯ: ನಡುವೆ; ನಡೆ: ಚಲಿಸು; ಭೂತಾವಳಿ: ಭೂತ, ಪಿಶಾಚಿ; ಈಕ್ಷಿಸು: ನೋಡು; ಗುರು: ಆಚಾರ್ಯ; ನೆನೆ: ಜ್ಞಾಪಿಸು; ಮಹೀಪಾಲ: ರಾಜ;

ಪದವಿಂಗಡಣೆ:
ಕುರುಪತಿಯ +ಬೀಳ್ಕೊಂಡು +ಸಂಜಯ
ಮರಳಿದನು +ತನಗಾದ +ಹಿಂದಣ
ಪರಿಭವವ +ನೆನೆದ್+ಅಡಿಗಡಿಗೆ +ಕಂಪಿಸುತ +ಮನದೊಳಗೆ
ಧುರದ +ಮಧ್ಯದೊಳ್+ಒಬ್ಬನೇ +ನಡೆ
ತರುತ+ ಭೂತಾವಳಿಯನ್+ಈಕ್ಷಿಸಿ
ಗುರುವ +ನೆನೆದನು +ಕೇಳು+ ಜನಮೇಜಯ +ಮಹೀಪಾಲ

ಅಚ್ಚರಿ:
(೧) ಪರಿಭವವ ನೆನೆದಡಿಗಡಿಗೆ, ಗುರುವ ನೆನೆದನು – ನೆನೆದ ಪದದ ಬಳಕೆ

ಪದ್ಯ ೪೩: ದುರ್ಯೋಧನನು ಎಲ್ಲಿ ಮಲಗಿದನು?

ದ್ಯುಮಣಿ ಮೊದಲಾದಖಿಳ ಸುರರಿಗೆ
ನಮಿಸಿ ವರುಣಧ್ಯಾನವನು ಹೃ
ತ್ಕಮಲದಲಿ ನೆಲೆಗೊಳಿಸಿ ನಾಲುಕು ದೆಸೆಯನಾರೈದು
ಕುಮತಿಯಿಳಿದನು ಜಾನು ಕಟಿ ಹೃ
ತ್ಕಮಲಗಳ ಮುಖ ಮೂರ್ಧ ಪರಿಯಂ
ತಮರಿದುದು ಜಲ ಕೊಳನ ಮಧ್ಯದಲರಸ ಪವಡಿಸಿದ (ಗದಾ ಪರ್ವ, ೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಸೂರ್ಯನೇ ಮೊದಲಾದ ಸಮಸ್ತ ದೇವತೆಗಳಿಗೂ ನಮಸ್ಕರಿಸಿ, ಹೃದಯದಲ್ಲಿ ವರುಣನನ್ನು ಧ್ಯಾನಿಸುತ್ತಾ, ಸುತ್ತನಾಲ್ಕು ದಿಕ್ಕುಗಳನ್ನೂ ನೋಡಿ ಯಾರಿಗೂ ಕಾಣಿಸುತ್ತಿಲ್ಲವೆಂಬುದನ್ನು ನಿರ್ಧರಿಸಿಕೊಂಡು, ದುಷ್ಟಬುದ್ಧಿಯಾದ ಕೌರವನು ಪಾದ, ಮೊಣಕಾಲು, ಸೊಂಟ, ಹೃದಯ ಮುಖ ತಲೆಗಳ ಪರ್ಯಂತ ನೀರಲ್ಲಿ ಮುಳುಗಿ ಕೊಳದ ಮಧ್ಯದಲ್ಲಿ ಮಲಗಿದನು.

ಅರ್ಥ:
ದ್ಯುಮಣಿ: ಸೂರ್ಯ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಸುರರು: ದೇವತೆ; ನಮಿಸು: ವಂದಿಸು; ವರುಣ: ನೀರಿನ ಅಧಿದೇವತೆ; ಧ್ಯಾನ: ಮನನ; ಹೃತ್ಕಮಲ: ಹೃದಯ ಕಮಲ; ನೆಲೆಗೊಳಿಸು: ಸ್ಥಾಪಿಸು; ದೆಸೆ: ದಿಕ್ಕು; ಕುಮತಿ: ಕೆಟ್ಟ ಬುದ್ಧಿಯುಳ್ಳವ; ಇಳಿ: ಜಾರು; ಜಾನು: ಮಂಡಿ, ಮೊಳಕಾಲು; ಕಟಿ: ಸೊಂಟ, ನಡು; ಮುಖ: ಆನನ; ಮೂರ್ಧ: ತಲೆಯ ಮುಂಭಾಗ, ಮುಂದಲೆ; ಪರಿಯಂತ: ವರೆಗೆ, ತನಕ; ಜಲ: ನೀರು; ಕೊಳ: ಸರಸಿ; ಮಧ್ಯ: ನಡುವೆ; ಅರಸ: ರಾಜ; ಪವಡಿಸು: ಮಲಗು; ಅಮರಿ: ನೆಲತಂಗಡಿ;

ಪದವಿಂಗಡಣೆ:
ದ್ಯುಮಣಿ +ಮೊದಲಾದ್+ಅಖಿಳ+ ಸುರರಿಗೆ
ನಮಿಸಿ+ ವರುಣ+ಧ್ಯಾನವನು +ಹೃ
ತ್ಕಮಲದಲಿ +ನೆಲೆಗೊಳಿಸಿ+ ನಾಲುಕು +ದೆಸೆಯನ್+ಆರೈದು
ಕುಮತಿ+ಇಳಿದನು +ಜಾನು +ಕಟಿ +ಹೃ
ತ್ಕಮಲಗಳ +ಮುಖ +ಮೂರ್ಧ +ಪರಿಯಂತ್
ಅಮರಿದುದು +ಜಲ +ಕೊಳನ +ಮಧ್ಯದಲ್+ಅರಸ +ಪವಡಿಸಿದ

ಅಚ್ಚರಿ:
(೧) ಹೃತ್ಕಮಲ – ೩, ೫ ಸಾಲಿನ ಮೊದಲ ಪದ
(೨) ದುರ್ಯೋಧನನನ್ನು ಕುಮತಿ, ಅರಸ ಎಂದು ಕರೆದಿರುವುದು

ಪದ್ಯ ೪೨: ದುರ್ಯೋಧನನು ಜಲಸ್ತಂಭನಕ್ಕೆ ಹೇಗೆ ತಯಾರಾದನು?

ಚರಣವದನಕ್ಷಾಲನಾಂತಃ
ಕರಣಶುದ್ಧಿಯಲಾಚಮನವಿ
ಸ್ತರಣದಲಿ ಸತ್ಪ್ರಣವವಂಗನ್ಯಾಸವಿಧಿಗಳಲಿ
ವರುಣ ಮಂತ್ರಾಕ್ಷರದ ಜಪಪರಿ
ಕರಣದಲಿ ನಿರ್ಣಿಕ್ತ ಚೇತಃ
ಸ್ಫುರಣ ಸಲಿಲಸ್ತಂಭನವನವನೀಶ ಮಂತ್ರಿಸಿದ (ಗದಾ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕಾಲು, ಮುಖಗಳನ್ನು ತೊಳೆದು, ಶುದ್ಧಮನಸ್ಸಿನಿಂದ ಆಚಮನವನ್ನು ಮಾಡಿ, ಪ್ರಣವಪೂರ್ವಕವಾಗಿ ಅಂಗನ್ಯಾಸಾದಿಗಳನ್ನು ಮಾಡಿ ವರುಣ ಮಂತ್ರಾಕ್ಷರಗಳನ್ನು ಜಪಿಸಿ ಅಂತರಂಗದಲ್ಲಿ ಜಲಸ್ತಂಭ ಮಂತ್ರವನ್ನು ಜಪಿಸಿದನು.

ಅರ್ಥ:
ಚರಣ: ಪಾದ; ವದನ: ಮುಖ; ಅಂತಃಕರಣ: ಒಳಮನಸ್ಸು; ಶುದ್ಧಿ: ನಿರ್ಮಲ; ಆಚಮನ: ಅಂಗೈಯಲ್ಲಿ ನೀರನ್ನು ಹಾಕಿಕೊಂಡು ಮಂತ್ರಪೂರ‍್ವಕವಾಗಿ ಸೇವಿಸುವುದು; ವಿಸ್ತರಣ: ವಿಶಾಲ; ಪ್ರಣವ: ಓಂಕಾರ; ಅಂಗ: ದೇಹದ ಭಾಗ; ನ್ಯಾಸ: ಜಪ ಮತ್ತು ಪೂಜೆಯ ಕಾಲಗಳಲ್ಲಿ ಮಂತ್ರಪೂರ್ವಕವಾಗಿ ಅಂಗಗಳನ್ನು ಮುಟ್ಟಿಕೊಳ್ಳುವಿಕೆ; ವಿಧಿ: ನಿಯಮ; ವರುಣ: ನೀರಿನ ಅಧಿದೇವತೆ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಪರಿಕರಣ: ಸಲಕರಣೆ, ಸಾಮಗ್ರಿ; ನಿರ್ಣಿಕ್ತ: ಶುದ್ಧಗೊಳಿಸಲ್ಪಟ್ಟ; ಚೇತ: ಮನಸ್ಸು; ಸ್ಫುರಣ: ಹೊಳಪು; ಸಲಿಲ: ಜಲ; ಸ್ತಂಭ: ಸ್ಥಿರವಾಗಿರುವಿಕೆ, ನಿಶ್ಚಲತೆ; ಅವನೀಶ: ರಾಜ; ಮಂತ್ರಿಸು: ಉಚ್ಚರಿಸು;

ಪದವಿಂಗಡಣೆ:
ಚರಣ+ವದನಕ್ಷಾಲನ್+ಅಂತಃ
ಕರಣ+ಶುದ್ಧಿಯಲ್+ಆಚಮನ+ವಿ
ಸ್ತರಣದಲಿ +ಸತ್ಪ್ರಣವವ್+ಅಂಗನ್ಯಾಸ+ವಿಧಿಗಳಲಿ
ವರುಣ +ಮಂತ್ರಾಕ್ಷರದ+ ಜಪ+ಪರಿ
ಕರಣದಲಿ +ನಿರ್ಣಿಕ್ತ+ ಚೇತಃ
ಸ್ಫುರಣ +ಸಲಿಲ+ಸ್ತಂಭನವನ್+ಅವನೀಶ +ಮಂತ್ರಿಸಿದ

ಅಚ್ಚರಿ:
(೧) ಚರಣ, ವರುಣ, ವಿಸ್ತರಣ, ಸ್ಫುರಣ, ಪರಿಕರಣ, ಕರಣ – ಪ್ರಾಸ ಪದಗಳು

ಪದ್ಯ ೪೧: ದುರ್ಯೋಧನನು ಯಾವ ವಿದ್ಯೆಯನ್ನು ಸ್ಮರಿಸಿಕೊಂಡನು?

ಒರಲದಿರು ಸಂಜಯ ವಿರೋಧಿಗ
ಳರಿವರಾನಿದ್ದೆಡೆಯನಿಲ್ಲಿಯೆ
ಮರೆದು ಕಳೆ ಪಾಳೆಯವ ತೆಗಸಬುಜಾಕ್ಷಿಯರ ಕಳುಹು
ತೆರಹುಗೊಡು ನೀ ಹೋಗೆನುತ ಮುಂ
ಜೆರಗನಳವಡೆ ಸೆಕ್ಕಿ ಪೂರ್ವದ
ಲರಿದ ಸಲಿಲಸ್ತಂಭವಿದ್ಯೆಯನರಸ ಚಿಂತಿಸಿದ (ಗದಾ ಪರ್ವ, ೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಸಂಜಯನೊಂದಿಗೆ ಮಾತನಾಡುತ್ತಾ, ಸಂಜಯ ಜೋರಾಗಿ ಅಳಬೇಡ, ಶತ್ರುಗಳು ನಾನಿರುವ ಸ್ಥಳವನ್ನು ತಿಳಿದುಕೊಂಡುಬಿಡುತ್ತಾರೆ. ನನ್ನನ್ನು ಮರೆತು ಹಿಂದಿರುಗಿ ಹೋಗಿ ಪಾಳೆಯವನ್ನು ಎತ್ತಿಸು. ಸ್ತ್ರೀಯರನ್ನು ಗಜಪುರಕ್ಕೆ ಕಳಿಸು, ನನಗೆ ಜಾಗಬಿಡು, ಎನ್ನುತ್ತಾ ತನ್ನ ಮುಂಜೆರಗನ್ನು ಸರಿಯಾಗಿ ಕಟ್ಟಿಕೊಂಡು, ಹಿಂದೆ ತಾನು ಕಲಿತಿದ್ದ ಜಲಸ್ತಂಭವಿದ್ಯೆಯನ್ನು ಸ್ಮರಿಸಿಕೊಂಡನು.

ಅರ್ಥ:
ಒರಲು: ಅರಚು, ಕೂಗಿಕೊಳ್ಳು; ವಿರೋಧಿ: ವೈರಿ; ಅರಿ: ತಿಳಿ; ಮರೆ: ನೆನಪಿನಿಂದ ದೂರಮಾಡು; ಕಳೆ: ಬೀಡು, ತೊರೆ; ಪಾಳೆಯ: ಬೀಡು, ಶಿಬಿರ; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳ, ಸ್ತ್ರೀ; ಕಳುಹು: ಕಳುಹಿಸು; ತೆರಹು: ಎಡೆ, ಜಾಗ; ಹೋಗು: ತೆರಳು; ಮುಂಜೆರಗು: ಹೊದ್ದ ವಸ್ತ್ರದ ಅಂಚು, ಸೆರಗಿನ ತುದಿ; ಅಳವಡಿಸು: ಸರಿಮಾಡು; ಸೆಕ್ಕಿ: ಸಿಕ್ಕಿಸು; ಪೂರ್ವ: ಹಿಂದೆ; ಸಲಿಲ: ನೀರು; ಸ್ತಂಭ: ಸ್ಥಿರವಾಗಿರುವಿಕೆ, ನಿಶ್ಚಲತೆ; ವಿದ್ಯೆ: ಜ್ಞಾನ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಒರಲದಿರು +ಸಂಜಯ +ವಿರೋಧಿಗಳ್
ಅರಿವರ್+ಆನಿದ್ದೆಡೆಯನ್+ಇಲ್ಲಿಯೆ
ಮರೆದು +ಕಳೆ +ಪಾಳೆಯವ +ತೆಗಸ್+ಅಬುಜಾಕ್ಷಿಯರ+ ಕಳುಹು
ತೆರಹುಗೊಡು +ನೀ +ಹೋಗೆನುತ +ಮುಂ
ಜೆರಗನ್+ಅಳವಡೆ+ ಸೆಕ್ಕಿ+ ಪೂರ್ವದಲ್
ಅರಿದ +ಸಲಿಲಸ್ತಂಭ+ವಿದ್ಯೆಯನ್+ಅರಸ +ಚಿಂತಿಸಿದ

ಅಚ್ಚರಿ:
(೧) ಅರಿ – ೨, ೬ ಸಾಲಿನ ಮೊದಲ ಪದ
(೨) ಹೆಂಗಸು ಎಂದು ಹೇಳಲು ಅಬುಜಾಕ್ಷಿ ಪದದ ಬಳಕೆ

ಪದ್ಯ ೪೦: ಸಂಜಯನೇಕೆ ಹೊರಳಾಡಿದನು?

ಚಾರು ಚಂದ್ರೋಪಲದ ರಮ್ಯಾ
ಗಾರದಲಿ ಮಣಿಮಯದ ಬಹುವಿ
ಸ್ತಾರ ಭದ್ರೋಪರಿಯ ಭವನದ ಚಿತ್ರಶಾಲೆಯಲಿ
ಸಾರಮಣಿ ಪರಿಯಂಕ ಪರಿಸಂ
ಸ್ಕಾರದಲಿ ಮಲಗುವ ಮಹೀಪತಿ
ನೀರೊಳೊರಗುವನೆಂದು ಸಂಜಯನೊರಲಿದನು ಹೊರಳಿ (ಗದಾ ಪರ್ವ, ೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಸುಂದರವಾದ ಚಂದ್ರಕಾಂತ ಶಿಲೆಯ ರಮ್ಯಭವನದಲ್ಲಿ, ವಿಸ್ತಾರವಾದ ಭದ್ರಗೃಹದ ಚಿತ್ರಶಾಲೆಯಲ್ಲಿ ಮಣಿಮಂಚದಲ್ಲಿ ಮಲಗುವ ಅರಸನು ಈಗ ನೀರಿನಲ್ಲಿ ಮಲಗುವನೆಂದು ಸಂಜಯನು ಅಳುತ್ತಾ ನೆಲದ ಮೇಲೆ ಹೊರಳಿದನು.

ಅರ್ಥ:
ಚಾರು: ಚೆಲುವು, ಸುಂದರ; ಆಗರ: ಆಶ್ರಯ; ಚಂದ್ರ: ಶಶಿ; ಉಪಲ: ಕಲ್ಲು, ಶಿಲೆ; ರಮ್ಯ: ಮನೋಹರ; ಮಣಿ: ಬೆಲೆಬಾಳುವ ರತ್ನ; ಬಹು: ಬಹಳ; ವಿಸ್ತಾರ: ವಿಶಾಲ; ಭದ್ರ: ದೃಢ, ಉತ್ತಮವಾದ ಪೀಠ; ಭವನ: ಆಲಯ; ಚಿತ್ರ: ಪಟ; ಶಾಲೆ: ಆಲಯ; ಸಾರ: ಶ್ರೇಷ್ಠವಾದ; ಪರಿಯಂಕ: ಹಾಸುಗೆ; ಸಂಸ್ಕಾರ: ಸಂಸ್ಕೃತಿ, ಸ್ವಭಾವ; ಮಲಗು: ನಿದ್ರಿಸು; ಮಹೀಪತಿ: ರಾಜ; ನೀರು: ಜಲ; ಒರಗು: ಮಲಗು; ಒರಲು: ಅರಚು, ಕೂಗಿಕೊಳ್ಳು; ಹೊರಳು: ಉರುಳಾಡು;

ಪದವಿಂಗಡಣೆ:
ಚಾರು+ ಚಂದ್ರೋಪಲದ +ರಮ್ಯಾ
ಗಾರದಲಿ +ಮಣಿಮಯದ +ಬಹು+ವಿ
ಸ್ತಾರ +ಭದ್ರೋಪರಿಯ +ಭವನದ +ಚಿತ್ರ+ಶಾಲೆಯಲಿ
ಸಾರಮಣಿ +ಪರಿಯಂಕ +ಪರಿ+ಸಂ
ಸ್ಕಾರದಲಿ +ಮಲಗುವ +ಮಹೀಪತಿ
ನೀರೊಳ್+ಒರಗುವನೆಂದು +ಸಂಜಯನ್+ಒರಲಿದನು +ಹೊರಳಿ

ಅಚ್ಚರಿ:
(೧) ಜೋಡಿ ಪದಗಳು – ಚಾರು ಚಂದ್ರೋಪಲದ; ಬಹುವಿಸ್ತಾರ ಭದ್ರೋಪರಿಯ ಭವನದ, ಪರಿಯಂಕ ಪರಿಸಂಸ್ಕಾರದಲಿ, ಮಲಗುವ ಮಹೀಪತಿ

ಪದ್ಯ ೩೯: ದುರ್ಯೋಧನನು ಸಂಜಯನಿಗೆ ಏನು ತಿಳಿಸಲು ಹೇಳಿದನು?

ಬಂದು ತಡಿಯಲಿ ಸಂಜಯನ ಕರೆ
ದೆಂದನೀ ಸರಸಿಯಲಿ ತಾನಿಹೆ
ನಿಂದಿನೀ ದಿವಸವನು ಕಳೆವೆನು ಕೊಳನ ಮಧ್ಯದಲಿ
ಮುಂದೆ ಪಾಂಡವರೈವರನು ಗೆಲಿ
ದಂದು ಹೊಗುವೆನು ಗಜಪುರವನಿಂ
ತೆಂದು ಜನನಿಗೆ ಜನಕ ವಿದುರರಿಗರುಹು ನೀನೆಂದ (ಗದಾ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ಸರೋವರದ ದಡಕ್ಕೆ ಬಂದು, ದುರ್ಯೋಧನನು ಸಂಜಯನಿಗೆ, ಈ ಸರೋವರದಲ್ಲಿ ಮುಳುಗಿ ಈ ಒಂದು ದಿವಸವನ್ನು ಕಳೆಯುತ್ತೇನೆ. ಮುಂದೆ ಪಾಂಡವರನ್ನು ಗೆದ್ದಂದು ಹಸ್ತಿನಾಪುರಕ್ಕೆ ಬರುತ್ತೇನೆಂದು ನನ್ನ ತಾಯಿ, ತಂದೆ ಮತ್ತು ವಿದುರರಿಗೆ ತಿಳಿಸು ಎಂದು ಹೇಳಿದನು.

ಅರ್ಥ:
ಬಂದು: ಆಗಮಿಸು; ತಡಿ: ದಡ; ಕರೆ: ಬರೆಮಾಡು; ಸರಸಿ: ಸರೋವರ; ಇಹೆ: ಇರುವೆ; ದಿವಸ: ದಿನ; ಕಳೆ: ಹೋಗಲಾಡಿಸು; ಕೊಳ: ಸರೋವರ; ಮಧ್ಯ: ನಡುವೆ; ಮುಂದೆ: ಭವಿಷ್ಯ; ಗೆಲಿದು: ಜಯಿಸು; ಹೊಗು: ತೆರಳು; ಪುರ: ಊರು; ಜನನಿ: ತಾಯಿ; ಜನಕ: ತಂದೆ; ಅರುಹು: ಹೇಳು;

ಪದವಿಂಗಡಣೆ:
ಬಂದು +ತಡಿಯಲಿ +ಸಂಜಯನ +ಕರೆದ್
ಎಂದನ್+ಈ+ ಸರಸಿಯಲಿ +ತಾನಿಹೆನ್
ಇಂದಿನ್+ಈ+ ದಿವಸವನು +ಕಳೆವೆನು+ ಕೊಳನ +ಮಧ್ಯದಲಿ
ಮುಂದೆ +ಪಾಂಡವರ್+ಐವರನು +ಗೆಲಿ
ದಂದು +ಹೊಗುವೆನು +ಗಜಪುರವನ್
ಇಂತೆಂದು +ಜನನಿಗೆ +ಜನಕ +ವಿದುರರಿಗ್+ಅರುಹು +ನೀನೆಂದ

ಅಚ್ಚರಿ:
(೧) ಸರಸಿ, ಕೊಳ – ಸಮಾನಾರ್ಥಕ ಪದ
(೨) ಜೋಡಿ ಪದಗಳು – ಕಳೆವೆನು ಕೊಳನ, ಜನನಿಗೆ ಜನಕ, ಮಧ್ಯದಲಿ ಮುಂದೆ