ಪದ್ಯ ೩೦: ವಂದಿ ಮಾಗಧರು ಏನೆಂದು ಹೊಗಳಿದರು?

ಜೀಯ ಬುಧನ ಪುರೂರವನ ಸುತ
ನಾಯುವಿನ ನಹುಷನ ಯಯಾತಿಯ
ದಾಯಭಾಗದ ಭೋಗನಿಧಿಯವತರಿಸಿದೈ ಧರೆಗೆ
ಜೇಯನೆನಿಸಿದೆ ಜೂಜಿನಲಿ ರಣ
ಜೇಯನಹನೀ ಕೌರವನು ನಿ
ನ್ನಾಯತಿಯ ಸಂಭಾವಿಸೆಮ್ದುದು ವಂದಿಜನಜಲಧಿ (ಶಲ್ಯ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ವಂದಿಗಳು ನುಡಿಯುತ್ತಾ ಜೀಯಾ, ಬುಧ, ಪುರೂರವ ಅವನ ಮಗ ಆಯು, ನಹುಷ, ಯಯಾತಿಗಳು ಅನುಭವಿಸಿದ ರಾಜ್ಯಭೋಗವನ್ನು ಅನುಭವಿಸಲು ನೀನು ಭೂಮಿಯಲ್ಲಿ ಅವತರಿಸಿರುವೆ. ಜೂಜಿನಲ್ಲಿ ಸೋತೆ, ಯುದ್ಧದಲ್ಲಿ ಕೌರವನು ಸೋಲುತ್ತಾನೆ, ನಿನ್ನ ಘನತೆಯನ್ನು ಯುದ್ಧದಲ್ಲಿ ತೋರಿಸು ಎಂದು ವಂದಿ ಮಾಗಧರು ಹೊಗಳಿದರು.

ಅರ್ಥ:
ಜೀಯ: ಒಡೆಯ; ಸುತ: ಮಗ; ಭೋಗ: ಸುಖವನ್ನು ಅನುಭವಿಸುವುದು; ನಿಧಿ: ಐಶ್ವರ್ಯ; ಅವತರಿಸು: ಕಾಣಿಸು; ಧರೆ: ಭೂಮಿ; ಜೀಯ: ಒಡೆಯ; ಜೂಜು: ಜುಗಾರಿ, ಸಟ್ಟ; ರಣ: ಯುದ್ಧ; ಆಯತಿ: ವಿಸ್ತಾರ; ಸಂಭಾಸಿವು: ಯೋಚಿಸು, ಯೋಚಿಸು; ವಂದಿ: ಹೊಗಳುಭಟ್ಟ; ಜಲಧಿ: ಸಾಗರ; ಜನ: ಮನುಷ್ಯ; ಜೇಯ: ಗೆಲುವು;

ಪದವಿಂಗಡಣೆ:
ಜೀಯ +ಬುಧನ +ಪುರೂರವನ+ ಸುತನ್
ಆಯುವಿನ +ನಹುಷನ+ ಯಯಾತಿಯದ್
ಆಯಭಾಗದ+ ಭೋಗ+ನಿಧಿ+ಅವತರಿಸಿದೈ+ ಧರೆಗೆ
ಜೇಯನ್+ಎನಿಸಿದೆ +ಜೂಜಿನಲಿ +ರಣ
ಜೇಯನಹನ್+ಈ +ಕೌರವನು+ ನಿನ್ನ್
ಆಯತಿಯ +ಸಂಭಾವಿಸೆಂದುದು +ವಂದಿ+ಜನಜಲಧಿ

ಅಚ್ಚರಿ:
(೧) ಜೇಯ ಪದದ ಬಳಕೆ – ೪, ೫ ಸಾಲು
(೨) ಬಹಳ ಹೊಗಳುಭಟರು ಎಂದು ಹೇಳಲು – ವಂದಿಜನಜಲಧಿ ಪದದ ಬಳಕೆ

ಪದ್ಯ ೨೯: ಶಲ್ಯನೆದುರು ಯುದ್ಧ ಮಾಡಲು ಯಾರು ನಿಂತರು?

ಚೆಲ್ಲಿತದು ನಾನಾಮುಖಕೆ ನಿಂ
ದಲ್ಲಿ ನಿಲ್ಲದೆ ಸೃಂಜಯಾದ್ಯರ
ನಲ್ಲಿ ಕಾಣೆನು ಸೋಮಕರ ಪಾಂಚಾಲಮೋಹರವ
ಕೆಲ್ಲೆಯಲಿ ಭೀಮಾರ್ಜುನರು ಬಲು
ಬಿಲ್ಲನೊದರಿಸೆ ಕದನಚೌಪಟ
ಮಲ್ಲ ತಾನಿದಿರಾಗಿ ನಿಂದನು ಪಾಂಡವರ ರಾಯ (ಶಲ್ಯ ಪರ್ವ, ೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯದ ಸೋಮಕ ಪಾಂಚಾಲ ಸೃಂಜಯರ ಸೈನ್ಯವು ರಣರಂಗವನ್ನು ಬಿಟ್ಟುಹೋಯಿತು. ಅಕ್ಕ ಪಕ್ಕದಲ್ಲಿ ಭೀಮಾರ್ಜುನರು ಧನುಷ್ಠಂಕಾರವನ್ನು ಮಾಡುತ್ತಿರಲು, ಶತ್ರು ಸಂಹಾರಕನಾದ ಯುಧಿಷ್ಠಿರನು ಶಲ್ಯನಿಗೆ ಇದಿರಾಗಿ ನಿಂತನು.

ಅರ್ಥ:
ಚೆಲ್ಲು: ಹರಡು; ಮುಖ: ಆನನ; ನಿಂದು: ನಿಲ್ಲು; ಆದಿ: ಮುಂತಾದ; ಕಾಣು: ತೋರು; ಮೋಹರ: ಯುದ್ಧ; ಕೆಲ್ಲೆ: ಸಿಗುರು, ಸಿಬುರು; ಬಲು: ಹೆಚ್ಚು; ಬಿಲ್ಲು: ಚಾಪ; ಒದರು: ಕೊಡಹು, ಜಾಡಿಸು; ಕದನ: ಯುದ್ಧ; ಚೌಪಟಮಲ್ಲ: ನಾಲ್ಕು ದಿಕ್ಕಿನಲ್ಲಿಯೂ ಯುದ್ಧ ಮಾಡುವವನು, ವೀರ; ಇದಿರು: ಎದುರು; ನಿಂದನು: ನಿಲ್ಲು; ರಾಯ: ರಾಜ;

ಪದವಿಂಗಡಣೆ:
ಚೆಲ್ಲಿತದು+ ನಾನಾಮುಖಕೆ+ ನಿಂ
ದಲ್ಲಿ +ನಿಲ್ಲದೆ +ಸೃಂಜಯಾದ್ಯರನ್
ಅಲ್ಲಿ +ಕಾಣೆನು +ಸೋಮಕರ +ಪಾಂಚಾಲ+ಮೋಹರವ
ಕೆಲ್ಲೆಯಲಿ +ಭೀಮಾರ್ಜುನರು +ಬಲು
ಬಿಲ್ಲನ್+ಒದರಿಸೆ+ ಕದನ+ಚೌಪಟ
ಮಲ್ಲ +ತಾನ್+ಇದಿರಾಗಿ +ನಿಂದನು +ಪಾಂಡವರ +ರಾಯ

ಅಚ್ಚರಿ:
(೧) ಶಲ್ಯನನ್ನು ಕದನಚೌಪಟಮಲ್ಲ ನೆಂದು ಕರೆದಿರುವುದು

ಪದ್ಯ ೨೮: ಶಲ್ಯನು ಪಾಂಡವ ಸೇನೆಗೆ ಯಾರನ್ನು ಕರೆತರಲು ಹೇಳಿದನು?

ತಡೆದು ನಿಂದನು ಪರಬಲವ ನಿ
ಮ್ಮೊಡೆಯನಾವೆಡೆ ಸೇನೆ ಕದನವ
ಕೊಡಲಿ ಕೊಂಬವನಲ್ಲ ಕೈದುವ ಸೆಳೆಯೆನುಳಿದರಿಗೆ
ಪೊಡವಿಗೊಡೆಯನು ಕೌರವೇಶ್ವರ
ನೊಡನೆ ಸಲ್ಲದು ಗಡ ಶರಾಸನ
ವಿಡಿಯ ಹೇಳಾ ಧರ್ಮಜನನೆಂದುರುಬಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಶಲ್ಯನು ಪಾಂಡವ ಸೇನೆಯನ್ನು ತಡೆದು ನಿಲ್ಲಿಸಿ, ನಿಮ್ಮ ದೊರೆಯೆಲ್ಲಿ? ಅವನು ಯುದ್ಧಕ್ಕೆ ಬರಲಿ, ನೀವು ಯುದ್ಧ ಮಾಡಬಹುದು, ನಾನು ಅದನ್ನು ಸ್ವೀಕರಿಸುವುದಿಲ್ಲ. ಕೌರವನೊಡನೆ ಯುದ್ಧಮಾಡುವುದು ಧರ್ಮಜನಿಗೆ ಸಲ್ಲದು, ಧನುಸ್ಸನ್ನು ಹಿಡಿದು ನನ್ನೊಡನೆ ಯುದ್ಧಕ್ಕೆ ಬರಲಿ ಎಂದು ಘೋಷಿಸಿದನು.

ಅರ್ಥ:
ತಡೆ: ನಿಲ್ಲಿಸು; ನಿಂದು: ನಿಲ್ಲು; ಪರಬಲ: ವೈರಿಸೈನ್ಯ; ಒಡೆಯ: ನಾಯಕ; ಆವೆಡೆ: ಯಾವ ಕಡೆ; ಸೇನೆ: ಸೈನ್ಯ; ಕದನ: ಯುದ್ಧ; ಕೊಂಬು: ಸ್ವೀಕರಿಸು; ಕೈದು: ಆಯುಧ; ಸೆಳೆ: ಆಕರ್ಷಿಸು; ಉಳಿದ: ಮಿಕ್ಕ; ಪೊಡವಿ: ಭೂಮಿ; ಸಲ್ಲದು: ಸರಿಯಾದುದಲ್ಲ; ಗಡ: ಅಲ್ಲವೆ; ಶರಾಸನ: ಬಿಲ್ಲು; ಆಸನ: ಕೂರುವ ಸ್ಥಳ; ಶರ: ಬಾಣ; ವಿಡಿದು: ಹಿಡಿದು, ಗ್ರಹಿಸು; ಉರುಬು: ಅತಿಶಯವಾದ ವೇಗ;

ಪದವಿಂಗಡಣೆ:
ತಡೆದು +ನಿಂದನು +ಪರಬಲವ +ನಿಮ್ಮ್
ಒಡೆಯನ್+ಆವೆಡೆ+ ಸೇನೆ +ಕದನವ
ಕೊಡಲಿ +ಕೊಂಬವನಲ್ಲ+ ಕೈದುವ +ಸೆಳೆಯೆನ್+ಉಳಿದರಿಗೆ
ಪೊಡವಿಗ್+ಒಡೆಯನು +ಕೌರವೇಶ್ವರ
ನೊಡನೆ +ಸಲ್ಲದು +ಗಡ +ಶರಾಸನ+
ವಿಡಿಯ +ಹೇಳಾ +ಧರ್ಮಜನನೆಂದ್+ಉರುಬಿದನು +ಶಲ್ಯ

ಅಚ್ಚರಿ:
(೧) ಬಿಲ್ಲು ಎಂದು ಹೇಳಲು ಶರಾಸನ ಪದದ ಬಳಕೆ
(೨) ಕ ಕಾರದ ಸಾಲು ಪದ – ಕದನವ ಕೊಡಲಿ ಕೊಂಬವನಲ್ಲ ಕೈದುವ

ಪದ್ಯ ೨೭: ಶಲ್ಯನನ್ನು ಹೇಗೆ ಹೊಗಳಿದರು?

ಪೂತು ಮಝರೇ ಶಲ್ಯ ಹೊಕ್ಕನೆ
ಸೂತಜನ ಹರಿಬದಲಿ ವೀರ
ವ್ರಾತಗಣನೆಯೊಳೀತನೊಬ್ಬನೆ ಹಾ ಮಹಾದೇಅ
ಧಾತುವೊಳ್ಳಿತು ದಿಟ್ಟನೈ ನಿ
ರ್ಭೀತಗರ್ವಿತನಿವನೆನುತ ಭಟ
ರೀತನನು ಹೊಗಳಿದರು ಸಾತ್ಯಕಿ ಸೋಮಕಾದಿಗಳು (ಶಲ್ಯ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಸಾತ್ಯಕಿ ಸೋಮಕ ಮೊದಲಾದವರು, ಭಲೇ, ಕರ್ನನ ಸೇಡನ್ನು ತೀರಿಸಲು ಶಲ್ಯನು ಮುಂದಾದನೇ? ಇವನೇ ಸೇನಾಧಿಪತಿಯಾಗಲು ಅರ್ಹನಾದ ವೀರನು. ನಿಲುಮೆ, ಸತ್ವ, ನಿರ್ಭೀತಿ ದರ್ಪಗಳು ಇವನಲ್ಲಿ ಎದ್ದುಕಾಣುತ್ತಿದೆ ಎಂದು ಶಲ್ಯನನ್ನು ಹೊಗಳಿದರು.

ಅರ್ಥ:
ಪೂತು: ಭಲೇ; ಮಝ: ಕೊಂಡಾಟದ ಮಾತು; ಹೊಕ್ಕು: ಸೇರು; ಸೂತಜ: ಸೂತನ ಮಗ (ಕರ್ಣ); ಹರಿಬ: ಕೆಲಸ, ಕಾರ್ಯ; ವೀರ: ಶೂರ; ವ್ರಾತ: ಗುಂಪು; ಗಣನೆ: ಲೆಕ್ಕ; ಧಾತು: ಮೂಲ ವಸ್ತು, ತೇಜಸ್ಸು; ದಿಟ್ಟ: ನಿಜ; ನಿರ್ಭೀತ: ಭಯವಿಲ್ಲದ; ಗರ್ವಿತ: ಅಹಂಕಾರಿ; ಭಟ: ಸೈನಿಕ; ಹೊಗಳು: ಪ್ರಶಂಶಿಸು; ಆದಿ: ಮುಂತಾದ;

ಪದವಿಂಗಡಣೆ:
ಪೂತು +ಮಝರೇ +ಶಲ್ಯ+ ಹೊಕ್ಕನೆ
ಸೂತಜನ+ ಹರಿಬದಲಿ +ವೀರ
ವ್ರಾತ+ಗಣನೆಯೊಳ್+ಈತನೊಬ್ಬನೆ +ಹಾ +ಮಹಾದೇವ
ಧಾತುವೊಳ್ಳಿತು+ ದಿಟ್ಟನೈ +ನಿ
ರ್ಭೀತ+ಗರ್ವಿತನ್+ಇವನೆನುತ +ಭಟರ್
ಈತನನು +ಹೊಗಳಿದರು +ಸಾತ್ಯಕಿ +ಸೋಮಕಾದಿಗಳು

ಅಚ್ಚರಿ:
(೧) ಶಲ್ಯನನ್ನು ಹೊಗಳಿದ ಪರಿ – ಧಾತುವೊಳ್ಳಿತು, ದಿಟ್ಟ, ನಿರ್ಭೀತ, ಗರ್ವಿತ

ಪದ್ಯ ೨೬: ಕುರುಸೇನೆಯು ಶಲ್ಯನನ್ನು ಹೇಗೆ ಕೊಂಡಾಡಿತು?

ದಳಪತಿಯ ಸುಮ್ಮಾನಮುಖ ಬೆಳ
ಬೆಳಗುತದೆ ಗಂಗಾಕುಮಾರನ
ಕಳಶಜನ ರಾಧಾತನೂಜನ ರಂಗಭೂಮಿಯಿದು
ಕಳನನಿದನಾಕ್ರಮಿಸುವಡೆ ವೆ
ಗ್ಗಳೆಯ ಮಾದ್ರಮಹೀಶನಲ್ಲದೆ
ಕೆಲರಿಗೇನಹುದೆನುತ ಕೊಂಡಾಡಿತ್ತು ಕುರುಸೇನೆ (ಶಲ್ಯ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕುರುಸೇನೆಯು ಸೈನಿಕರು ಶಲ್ಯನನ್ನು ನೋಡಿ ಉತ್ಸಾಹಭರಿತರಾದರು. ಸೇನಾಧಿಪತಿಯ ಮುಖ ತೇಜಸ್ಸಿನಿಂದ ಹೊಳೆ ಹೊಳೆಯುತ್ತಿದೆ. ಭೀಷ್ಮ ದ್ರೋಣ ಕರ್ಣರು ಕಾದಿದ ರಣರಂಗವನ್ನಾಕ್ರಮಿಸಲು ಶಲ್ಯನಿಗಲ್ಲದೆ ಇನ್ನಾರಿಗೆ ಸಾಧ್ಯ ಎಂದು ಶಲ್ಯನನ್ನು ಕೊಂಡಾಡಿತು.

ಅರ್ಥ:
ದಳಪತಿ: ಸೇನಾಧಿಪತಿ; ಸುಮ್ಮಾನ: ಸಂತೋಷ, ಹಿಗ್ಗು; ಮುಖ: ಆನನ; ಬೆಳಗು: ಹೊಳಪು, ಕಾಂತಿ; ಕುಮಾರ: ಮುಗ; ಕಳಶಜ: ದ್ರೋಣ; ರಾಧಾತನೂಜ: ರಾಧೆಯ ಮಗ (ಕರ್ಣ); ಭೂಮಿ: ಇಳೆ; ಕಳ: ರಣರಂಗ; ಆಕ್ರಮಿಸು: ಮೇಲೆ ಬೀಳುವುದು; ವೆಗ್ಗಳೆ: ಶ್ರೇಷ್ಠ; ಮಹೀಶ: ರಾಜ; ಕೊಂಡಾಡು: ಹೊಗಳು

ಪದವಿಂಗಡಣೆ:
ದಳಪತಿಯ +ಸುಮ್ಮಾನ+ಮುಖ +ಬೆಳ
ಬೆಳಗುತದೆ+ ಗಂಗಾಕುಮಾರನ
ಕಳಶಜನ +ರಾಧಾ+ತನೂಜನ +ರಂಗ+ಭೂಮಿಯಿದು
ಕಳನನಿದನ್+ಆಕ್ರಮಿಸುವಡೆ +ವೆ
ಗ್ಗಳೆಯ +ಮಾದ್ರ+ಮಹೀಶನಲ್ಲದೆ
ಕೆಲರಿಗ್+ಏನಹುದೆನುತ +ಕೊಂಡಾಡಿತ್ತು +ಕುರುಸೇನೆ

ಅಚ್ಚರಿ:
(೧) ದ್ರೋಣರನ್ನು ಕಳಶಜ, ಕರ್ಣನನ್ನು ರಾಧಾತನೂಜ, ಭೀಷ್ಮರನ್ನು ಗಂಗಾಕುಮಾರ ಎಂದು ಕರೆದಿರುವುದು
(೨) ಕಳ, ರಂಗಭೂಮಿ – ರಣರಂಗವನ್ನು ಸೂಚಿಸುವ ಪದ

ಪದ್ಯ ೨೫: ರಣವಾದ್ಯಗಳ ಶಬ್ದವು ಹೇಗಿದ್ದವು?

ಬೆರಳ ತುಟಿಗಳ ಬೊಬ್ಬೆ ಮಿಗಲ
ಬ್ಬರಿಸಿದವು ನಿಸ್ಸಾಳತತಿ ಜ
ರ್ಝರ ಮೃದಂಗದ ಪಣಹ ಪಟಹದ ಗೌರುಗಹಳೆಗಳ
ಉರು ರಭಸವಳ್ಳಿರಿಯೆ ರಥಚೀ
ತ್ಕರಣೆ ರಥಹಯ ಹೇಷಿತದ ನಿ
ಷ್ಠುರ ನಿನಾದದಲೌಕಿ ಹೊಕ್ಕನು ಶಲ್ಯನಾಹವವ (ಶಲ್ಯ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ನಿಷ್ಠುರ ಗರ್ಜನೆಗಳು ಹಬ್ಬಿದವು. ಭೇರಿ, ಮೃದಂಗ, ತಮ್ಮಟೆ, ನಗಾರಿ, ರಣಕಹಳೆಯ ರಭಸವು ಕಿವಿಗಳನ್ನು ಕಿವುಡು ಮಾಡಿದವು. ರಥದ ಚೀತ್ಕಾರ, ಕುದುರೆಗಳ ಹೇಷಾರವದ ನಿಷ್ಠುರ ನಾದ ಮೊಳಗಲು ಶಲ್ಯನು ಯುದ್ಧಕ್ಕೆ ಮುಂದಾದನು.

ಅರ್ಥ:
ಬೆರಳು: ಅಂಗುಲಿ; ತುಟಿ: ಅಧರ; ಬೊಬ್ಬೆ: ಆರ್ಭಟ; ಮಿಗಲು: ಹೆಚ್ಚಾಗಲು; ಅಬ್ಬರ: ಜೋರಾದ ಶಬ್ದ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ತತಿ: ಗುಂಪು; ಜರ್ಝರ: ಭಗ್ನ; ಪಣಹ: ನಗಾರಿ; ಪಟಹ: ತಮಟೆ; ಗೌರು: ಕರ್ಕಶ ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಉರು: ವಿಶೇಷವಾದ; ರಭಸ: ವೇಗ; ಇರಿ: ಚುಚ್ಚು; ರಥ: ಬಂಡಿ; ಚೀತ್ಕರ: ಜೋರಾದ ಶಬ್ದ; ರಥ: ಬಂಡಿ; ಹಯ: ಕುದುರೆ; ಹೇಷಿತ: ಕುದುರೆಯ ಕೂಗು; ನಿಷ್ಠುರ: ಕಠಿಣವಾದುದು; ನಿನಾದ: ಶಬ್ದ; ಔಕು: ಒತ್ತು, ಹಿಚುಕು; ಹೊಕ್ಕು: ಸೇರು; ಆಹವ: ಯುದ್ಧ;

ಪದವಿಂಗಡಣೆ:
ಬೆರಳ +ತುಟಿಗಳ +ಬೊಬ್ಬೆ +ಮಿಗಲ್
ಅಬ್ಬರಿಸಿದವು +ನಿಸ್ಸಾಳ+ತತಿ+ ಜ
ರ್ಝರ +ಮೃದಂಗದ+ ಪಣಹ+ ಪಟಹದ+ ಗೌರು+ಕಹಳೆಗಳ
ಉರು +ರಭಸವಳ್ಳ್+ಇರಿಯೆ +ರಥ+ಚೀ
ತ್ಕರಣೆ+ ರಥಹಯ +ಹೇಷಿತದ +ನಿ
ಷ್ಠುರ +ನಿನಾದದಲ್+ಔಕಿ +ಹೊಕ್ಕನು +ಶಲ್ಯನ್+ಆಹವವ

ಅಚ್ಚರಿ:
(೧) ರಣವಾದ್ಯಗಳು – ನಿಸ್ಸಾಳ, ಮೃದಂಗ, ಪಣಹ, ಪಟಹ, ಕಹಳೆ
(೨) ಶಬ್ದವನ್ನು ವಿವರಿಸುವ ಪದ – ಬೊಬ್ಬೆ, ಅಬ್ಬರಿಸು, ಜರ್ಝರ, ಇರಿ, ಚೀತ್ಕರ, ಹೇಷಿತ, ನಿನಾದ