ಪದ್ಯ ೪೭: ಶಲ್ಯನ ಸಾಮರ್ಥ್ಯವೆಂತಹದು?

ಸುರನದೀಸುತನೆಸುಗೆ ದ್ರೋಣನ
ಶರಚಮತ್ಕೃತಿ ಕರ್ಣನಂಬಿನ
ಹರಹು ಹೇರಿತು ದಳಪತಿಯ ಶರಸೋನೆ ಸಾರವಲಾ
ದೊರೆಯ ಸುಯ್ದಾನದಲಿ ಸಾತ್ಯಕಿ
ಯಿರಲಿ ಧೃಷ್ಟದ್ಯುಮ್ನ ಭೀಮಾ
ದ್ಯರ ನಿರೀಕ್ಷಿಸ ಹೇಳೆನುತ ತಾಗಿದನು ಕಲಿಪಾರ್ಥ (ಶಲ್ಯ ಪರ್ವ, ೨ ಸಂಧಿ, ೪೭ ಪದ್ಯ)

ತಾತ್ಪರ್ಯ:
ಭೀಷ್ಮನ ಬಾಣ ಪ್ರಯೋಗದ ಚಾತುರ್ಯ, ದ್ರೋಣನ ಶರಚಮತ್ಕಾರ, ಕರ್ಣನ ಎಸುಗೆಯ ವಿಸ್ತಾರ ಇವೆಲ್ಲವುಗಳ ಸಾರವು ಶಲ್ಯನಲ್ಲಿದೆ. ಅರಸನನ್ನು ರಕ್ಷಿಸಲು ಸಾತ್ಯಕಿ ನಿಲ್ಲಲಿ ಭೀಮ ಧೃಷ್ಟದ್ಯುಮ್ನರು ನೋಡುತ್ತಿರಲಿ ಎಂದು ಹೇಳಿ ಅರ್ಜುನನು ಶಲ್ಯನನ್ನಿದಿರಿಸಿದನು.

ಅರ್ಥ:
ಸುರನದೀಸುತ: ಭೀಷ್ಮ; ಶರ: ಬಾಣ; ಚಮತ್ಕೃತಿ: ಚಮತ್ಕಾರ, ಸೋಜಿಗ, ವಿಸ್ಮಯ; ಅಂಬು: ಬಾಣ; ಹರಹು: ವಿಸ್ತಾರ, ವೈಶಾಲ್ಯ; ಹೇರು: ಹೊರೆ, ಭಾರ; ದಳಪತಿ: ಸೇನಾಧಿಪತಿ; ಸೋನೆ: ಮಳೆ, ವೃಷ್ಟಿ; ಶರಸೋನೆ: ಬಾಣಗಳ ಮಳೆ; ಸಾರ: ತಿರುಳು, ಗುಣ; ದೊರೆ: ರಾಜ; ಸುಯ್ದಾನ: ರಕ್ಷಣೆ, ಕಾಪು; ಆದಿ: ಮುಂತಾದ; ನಿರೀಕ್ಷಿಸು: ತಾಳು; ತಾಗು: ಮುಟ್ಟು; ಕಲಿ: ಶೂರ; ಎಸು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಸುರನದೀಸುತನ್+ಎಸುಗೆ +ದ್ರೋಣನ
ಶರಚಮತ್ಕೃತಿ +ಕರ್ಣನಂಬಿನ
ಹರಹು +ಹೇರಿತು +ದಳಪತಿಯ +ಶರಸೋನೆ +ಸಾರವಲಾ
ದೊರೆಯ +ಸುಯ್ದಾನದಲಿ +ಸಾತ್ಯಕಿ
ಯಿರಲಿ +ಧೃಷ್ಟದ್ಯುಮ್ನ +ಭೀಮಾ
ದ್ಯರ +ನಿರೀಕ್ಷಿಸ +ಹೇಳೆನುತ+ ತಾಗಿದನು+ ಕಲಿ+ಪಾರ್ಥ

ಅಚ್ಚರಿ:
(೧) ಶಲ್ಯನ ಶಕ್ತಿ – ಸುರನದೀಸುತನೆಸುಗೆ ದ್ರೋಣನ ಶರಚಮತ್ಕೃತಿ ಕರ್ಣನಂಬಿನ ಹರಹು ಹೇರಿತು ದಳಪತಿಯ

ಪದ್ಯ ೪೬: ಶಲ್ಯನು ಧರ್ಮಜನಿಗೆ ಏನು ಹೇಳಿದ?

ಮುರಿದುದೈ ಚತುರಂಗಬಲ ನಿ
ನ್ನಿರಿತವಾವೆಡೆ ಧರ್ಮಸುತ ಕೈ
ಮರೆದಲಾ ಕಲಿಭೀಮಪಾರ್ಥರ ಬಿಂಕ ಬೀತುದಲಾ
ಮೆರೆಯಿ ಮದವನು ಮಾವತನವದು
ಹೊರಗಿರಲಿ ಸಹದೇವ ನಕುಲರ
ನರಿಯಬಹುದಿನ್ನೆನುತ ಹೊಕ್ಕನು ಶಲ್ಯ ಪರಬಲವ (ಶಲ್ಯ ಪರ್ವ, ೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧರ್ಮಜ, ನಿನ್ನ ಚತುರಂಗ ಬಲವು ಮುರಿದು ಹೋಯಿತು. ಇನ್ನು ನಿನ್ನ ಇರಿತದ ಚಾತುರ್ಯವೆಲ್ಲಿದೆ ತೋರಿಸು? ಭೀಮಾರ್ಜುನರ ಬಿಂಕ ಹಾರಿಹೋಯಿತು. ವೀರರೆಂಬ ಮದವನ್ನು ಬಿಟ್ಟು ಬಿಡು. ಸಹದೇವ ನಕುಲರು ನನ್ನ ಸೋದರವಾಮತ

ಅರ್ಥ:
ಮುರಿ: ಸೀಳು; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಇರಿತ: ತಿವಿ, ಚುಚ್ಚು; ಸುತ: ಮಗ; ಕೈ: ಹಸ್ತ; ಮರೆ: ನೆನಪಿನಿಂದ ದೂರ ಸರಿ; ಕಲಿ: ಶೂರ; ಬಿಂಕ: ಗರ್ವ, ಜಂಬ; ಬೀತುದು: ಮುಗಿಯಿತು, ಕ್ಷಯವಾಯಿತು; ಮೆರೆ: ಹೊಳೆ; ಮದ: ಗರ್ವ; ಮಾವ: ತಾಯಿಯ ತಮ್ಮ; ಹೊರಗೆ: ಆಚೆ; ಅರಿ: ತಿಳಿ; ಹೊಕ್ಕು: ಸೇರು; ಪರಬಲ: ವೈರಿ ಸೈನ್ಯ;

ಪದವಿಂಗಡಣೆ:
ಮುರಿದುದೈ+ ಚತುರಂಗ+ಬಲ +ನಿನ್
ಇರಿತವಾವೆಡೆ+ ಧರ್ಮಸುತ +ಕೈ
ಮರೆದಲಾ +ಕಲಿ+ಭೀಮ+ಪಾರ್ಥರ +ಬಿಂಕ +ಬೀತುದಲಾ
ಮೆರೆಯಿ +ಮದವನು +ಮಾವತನವದು
ಹೊರಗಿರಲಿ +ಸಹದೇವ +ನಕುಲರನ್
ಅರಿಯಬಹುದಿನ್ನೆನುತ +ಹೊಕ್ಕನು +ಶಲ್ಯ +ಪರಬಲವ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮೆರೆಯಿ ಮದವನು ಮಾವತನವದು

ಪದ್ಯ ೪೫: ಶಲ್ಯನು ವೈರಿಸೈನ್ಯವನ್ನು ಹೇಗೆ ನಾಶಮಾಡಿದನು?

ಕಡಿದು ಬಿಸುಟನು ತಲೆವರಿಗೆಗಳ
ಲಡಸಿದಾ ಪಯದಳವನೊಗ್ಗಿನ
ತುಡುಕುಗುದುರೆಯ ಖುರವ ತರಿದನು ನಗದ ನಾಟಕದ
ಗಡಣದಾನೆಯ ಥಟ್ಟನುಪ್ಪರ
ಗುಡಿಯ ರಥವಾಜಿಗಳ ರುಧಿರದ
ಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ (ಶಲ್ಯ ಪರ್ವ, ೨ ಸಂಧಿ, ೪೫ ಪದ್ಯ)

ತಾತ್ಪರ್ಯ:
ತಲೆವರಿಗೆ ಹಿಡಿದ ಪದಾತಿದಳವನ್ನು ಶಲ್ಯನು ಕಡಿದು ಬಿಸುಟನು. ಮುತ್ತಿದ ಕುದುರೆಗಳ ಕಾಲ್ಗೊರಸುಗಳನ್ನು ಕತ್ತರಿಸಿದನು. ಬೆಟ್ಟದಂತಹ ಆನೆಗಳನ್ನೂ, ರಥದ ಕುದುರೆಗಳನ್ನೂ, ಶತ್ರುಸೈನಿಕರನ್ನು ರಕ್ತದ ಕಡಲಿನಲ್ಲಿ ಮುಳುಗಿಸು ನಾಶಮಾಡಿದನು.

ಅರ್ಥ:
ಕಡಿ: ಸೀಳು; ಬಿಸುಟು: ಹೊರಹಾಕು; ತಲೆವರಿಗೆ: ಗುರಾಣಿ; ಅಡಸು: ಬಿಗಿಯಾಗಿ ಒತ್ತು, ಚುಚ್ಚು; ಪಯದಳ: ಕಾಲಾಳು; ಒಗ್ಗು: ಗುಂಪು, ಸಮೂಹ; ತುಡುಕು: ಹೋರಾಡು, ಸೆಣಸು; ಕುದುರೆ: ಅಶ್ವ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ತರಿ: ಕಡಿ, ಕತ್ತರಿಸು; ನಗ: ಬೆಟ್ಟ; ನಾಟಕ: ತೋರಿಕೆ; ಗಡಣ: ಕೂಡಿಸುವಿಕೆ, ಸೇರಿಸುವಿಕೆ; ಆನೆ: ಕರಿ; ಥಟ್ಟು: ಗುಂಪು; ಉಪ್ಪರ: ಅತಿಶಯ; ಕುಡಿ: ತುದಿ, ಕೊನೆ; ರಥ: ಬಂಡಿ; ವಾಜಿ: ಕುದುರೆ; ರುಧಿರ: ರಕ್ತ; ಕಡಲು: ಸಾಗರ; ಅದ್ದು: ತೋಯು; ಉದ್ದು: ಒರಸು, ಅಳಿಸು; ಮಾರ್ಬಲ: ಶತ್ರು ಸೈನ್ಯ; ಗರ್ವಿತ: ಸೊಕ್ಕಿದ;

ಪದವಿಂಗಡಣೆ:
ಕಡಿದು+ ಬಿಸುಟನು +ತಲೆವರಿಗೆಗಳಲ್
ಅಡಸಿದಾ +ಪಯದಳವನ್+ಒಗ್ಗಿನ
ತುಡುಕು+ಕುದುರೆಯ +ಖುರವ +ತರಿದನು +ನಗದ +ನಾಟಕದ
ಗಡಣದ್+ಆನೆಯ +ಥಟ್ಟನ್+ಉಪ್ಪರ
ಕುಡಿಯ +ರಥವಾಜಿಗಳ +ರುಧಿರದ
ಕಡಲೊಳ್+ಅದ್ದಿದನ್+ಉದ್ದಿದನು +ಮಾರ್ಬಲದ +ಗರ್ವಿತರ

ಅಚ್ಚರಿ:
(೧) ರಣರಂಗದ ಚಿತ್ರಣ – ರುಧಿರದಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ

ಪದ್ಯ ೪೪: ಶಲ್ಯನ ಮೇಲಿನ ಆಕ್ರಮಣ ಹೇಗಿತ್ತು?

ಚೂರಿಸುವ ಮೊಗಸೂನಿಗೆಯ ಕೊ
ಲ್ಲಾರಿಗಳ ಶರಬಂಡಿಗಳ ಹೊಂ
ದೇರು ಕವಿದುವು ಕೋಲಕೋಲಾಹಲದ ತೋಹಿನಲಿ
ವೀರರುಬ್ಬಿನ ಬೊಬ್ಬೆಗಳು ಜ
ಜ್ಝಾರರೇರಿತು ಸರಳ ಧಾರಾ
ಸರದಲಿ ದಕ್ಕಡರು ಬಿಲ್ಲವರಾಂತರರಿಭಟನ (ಶಲ್ಯ ಪರ್ವ, ೨ ಸಂಧಿ, ೪೪ ಪದ್ಯ)

ತಾತ್ಪರ್ಯ:
ಚುಚ್ಚುವ ಮುಖಸೂನಿಗೆಗಳನ್ನು ಕಟ್ಟಿದ ಕಮಾನುಗಳನ್ನುಳ್ಳ ಬಂಡಿಗಳು ಕೋಲಾಹಲಮಾಡುತ್ತಾ ಶಲ್ಯನನ್ನು ಮುತ್ತಿದವು. ವೀರರು ಬೊಬ್ಬೆಯಿಟ್ಟು ಮುಂದೆ ನುಗ್ಗಿದರು ಧೀರರಾದ ಬಿಲ್ಲುಗಾರರು ಶಲ್ಯನನ್ನು ಬಾಣಗಳಿಂದ ಹೊಡೆದರು.

ಅರ್ಥ:
ಚೂರಿಸು: ಚುಚ್ಚು; ಮೊಗ: ಮುಖ; ಸೂನಿಗೆ: ಒಂದು ಬಗೆಯ ಆಯುಧ; ಕೊಲ್ಲಾರಿ: ಬಂಡಿಯ ಬಿದಿರಿನ ಕಮಾನು; ಶರ: ಬಾಣ; ಬಂಡಿ: ರಥ; ಹೊಂದೇರು: ಚಿನ್ನದ ತೇರು; ಕವಿ: ಆವರಿಸು; ಕೋಲ: ಬಾಣ; ಕೋಲಾಹಲ: ಅವಾಂತರ; ತೋಹು: ಕಪಟ, ಮೋಸ; ಉಬ್ಬು: ಅಧಿಕ್ಯ; ಬೊಬ್ಬೆ: ಸುಟ್ಟ ಗಾಯ, ಗುಳ್ಳೆ; ಜಜ್ಝಾರ: ಪರಾಕ್ರಮಿ; ಸರಳ: ಬಾಣ; ಧಾರಾ: ವರ್ಷ; ದಕ್ಕಡ: ಸಮರ್ಥ, ಬಲಶಾಲಿ; ಬಿಲ್ಲು: ಚಾಪ; ಅರಿಭಟ: ವೈರಿಯ ಸೈನಿಕ;

ಪದವಿಂಗಡಣೆ:
ಚೂರಿಸುವ +ಮೊಗ+ಸೂನಿಗೆಯ +ಕೊ
ಲ್ಲಾರಿಗಳ +ಶರ+ಬಂಡಿಗಳ+ ಹೊಂ
ದೇರು +ಕವಿದುವು +ಕೋಲಕೋಲಾಹಲದ+ ತೋಹಿನಲಿ
ವೀರರ್+ಉಬ್ಬಿನ +ಬೊಬ್ಬೆಗಳು +ಜ
ಜ್ಝಾರರ್+ಏರಿತು +ಸರಳ +ಧಾರಾ
ಸರದಲಿ +ದಕ್ಕಡರು +ಬಿಲ್ಲವರಾಂತರ್+ಅರಿಭಟನ

ಅಚ್ಚರಿ:
(೧) ಕೋಲಕೋಲಾಹಲದ ತೋಹಿನಲಿ – ಕೋಲ ಪದದ ಬಳಕೆ

ಪದ್ಯ ೪೩: ಶಲ್ಯನ ಮೇಲೆ ಯಾರು ನುಗ್ಗಿದರು?

ತರಹರಿಸಿದುದು ಪಾಯದಳ ತಲೆ
ವರಿಗೆಯಲಿ ಮೊಗದಡ್ಡವರಿಗೆಯ
ಲರರೆ ರಾವುತೆನುತ್ತ ನೂಕಿತು ಬಿಟ್ಟ ಸೂಠಿಯಲಿ
ತುರಗದಳ ಮೊಗರಂಬದಲಿ ಮೊಗ
ವರಿಗೆಗಲಲಾರೋಹಕರು ಚ
ಪ್ಪರಿಸಿ ಚಾಚಿದರಾನೆಗಲನಾ ಶಲ್ಯನಿದಿರಿನಲಿ (ಶಲ್ಯ ಪರ್ವ, ೨ ಸಂಧಿ, ೪೩ ಪದ್ಯ)

ತಾತ್ಪರ್ಯ:
ತಲೆಗೆ ಗುರಾಣಿಯನ್ನು ಹಿಡಿದ ಕಾಲುದಳದವರೂ, ಮುಖಕ್ಕೆ ಅಡ್ಡಹಿಡಿದ ರಾವುತರೂ, ಪರಸ್ಪರ ಪ್ರೋತ್ಸಾಹಿಸುತ್ತಾ, ಅತಿವೇಗದಿಂದ ಮುಂದುವರೆದರು. ಮೊಗರಂಬ (ಮುಖದ ಅಲಂಕಾರ) ಹೊತ್ತ ಕುದುರೆಗಲು, ಆನೆಗಳು, ತಮ್ಮ ಸವಾರರು ಅಪ್ಪರಿಸಲು ಶಲ್ಯನ ಮೇಲೆ ನುಗ್ಗಿದವು.

ಅರ್ಥ:
ತರಹರಿಸು:ತಡಮಾಡು; ಕಳವಳಿಸು; ಪಾಯದಳ: ಸೈನಿಕ; ತಲೆವರಿಗೆ: ಗುರಾಣಿ; ಮೊಗ: ಮುಖ; ಅಡ್ಡ: ನಡುವೆ; ರಾವುತ: ಕುದುರೆ ಸವಾರ, ಅಶ್ವಾರೋಹಿ; ನೂಕು: ತಳ್ಳು; ಸೂಠಿ: ವೇಗ; ತುರಗದಳ: ಕುದುರೆಯ ಸೈನ್ಯ; ಅಂಬು: ಬಾಣ; ಆರೋಹ: ಸವಾರ, ಹತ್ತುವವ; ಚಪ್ಪರಿಸು: ಸವಿ, ರುಚಿನೋಡು; ಚಾಚು: ಹರಡು; ಆನೆ: ಕರಿ; ಇದಿರು: ಎದುರು;

ಪದವಿಂಗಡಣೆ:
ತರಹರಿಸಿದುದು +ಪಾಯದಳ +ತಲೆ
ವರಿಗೆಯಲಿ +ಮೊಗದ್+ಅಡ್ಡವರಿಗೆಯಲ್
ಅರರೆ +ರಾವುತ್+ಎನುತ್ತ+ ನೂಕಿತು +ಬಿಟ್ಟ +ಸೂಠಿಯಲಿ
ತುರಗದಳ +ಮೊಗರ್+ಅಂಬದಲಿ +ಮೊಗ
ವರಿಗೆಗಲಲ್+ಆರೋಹಕರು +ಚ
ಪ್ಪರಿಸಿ +ಚಾಚಿದರ್+ಆನೆಗಳನ್+ಆ +ಶಲ್ಯನ್+ಇದಿರಿನಲಿ

ಅಚ್ಚರಿ:
(೧) ತಲೆವರಿಗೆ, ಮೊಗವರಿಗೆ – ಪದಗಳ ಬಳಕೆ

ಪದ್ಯ ೪೨: ಯುದ್ಧದಲ್ಲಿ ಯಾವ ರೀತಿಯ ಮಂಜು ಆವರಿಸಿತು?

ಧರಣಿಪತಿ ಕೇಳ್ ಭೀಮಸೇನನ
ಕರಿಘಟೆಗಳಿಟ್ಟಣಿಸಿದವು ಮೋ
ಹರಿಸಿದವು ಸಾತ್ಯಕಿಯ ರಥವಾ ದ್ರೌಪದೀಸುತರ
ಬಿರುದ ಭಟರೌಕಿದರು ರಾಯನ
ಧುರದ ಧೀವಸಿಗಳು ನಿಹಾರದ
ಲುರವಣಿಸಿದರು ಶಲ್ಯನಂಬಿನ ಮಳೆಯ ಮನ್ನಿಸದೆ (ಶಲ್ಯ ಪರ್ವ, ೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಶಲ್ಯನ ಬಾಣಗಳನ್ನು ಲೆಕ್ಕಿಸದೆ ಭೀಮನ ದಳದ ಆನೆಗಳು ಮುಮ್ದಾದವು. ಸಾತ್ಯಕಿ ಉಪಪಾಂಡವರು ಮೊದಲಾದ ಯುದ್ಧ ನಿಪುಣರೂ ಪ್ರಖ್ಯಾತರೂ ಆದ ವೀರರು ಯುದ್ಧಕ್ಕೆ ಬರಲು ಧೂಳಿನ ಮಂಜು ಕವಿಯಿತು.

ಅರ್ಥ:
ಧರಣಿಪತಿ: ರಾಜ; ಕರಿಘಟೆ: ಆನೆಗಳ ಗುಂಪು; ಇಟ್ಟಣಿಸು: ದಟ್ಟವಾಗು, ಒತ್ತಾಗು; ಮೋಹರ: ಯುದ್ಧ; ರಥ: ಬಂಡಿ; ಸುತ: ಮಗ; ಬಿರುದು: ಗೌರವ ಸೂಚಕ ಹೆಸರು; ಭಟ: ಸೈನಿಕ; ಔಕು: ನೂಕು; ರಾಯ: ರಾಜ; ಧುರ: ಯುದ್ಧ, ಕಾಳಗ; ಧೀವಸಿ: ಸಾಹಸ, ವೀರ; ನಿಹಾರ: ಮಂಜು; ಉರವಣೆ: ಆತುರ, ಆಧಿಕ್ಯ; ಅಂಬು: ಬಾಣ; ಮಳೆ: ವರ್ಷ; ಮನ್ನಿಸು: ಅಂಗೀಕರಿಸು, ಒಪ್ಪು;

ಪದವಿಂಗಡಣೆ:
ಧರಣಿಪತಿ +ಕೇಳ್ +ಭೀಮಸೇನನ
ಕರಿಘಟೆಗಳ್+ಇಟ್ಟಣಿಸಿದವು +ಮೋ
ಹರಿಸಿದವು+ ಸಾತ್ಯಕಿಯ +ರಥವಾ +ದ್ರೌಪದೀ+ಸುತರ
ಬಿರುದ +ಭಟರ್+ಔಕಿದರು +ರಾಯನ
ಧುರದ +ಧೀವಸಿಗಳು +ನಿಹಾರದಲ್
ಉರವಣಿಸಿದರು +ಶಲ್ಯನ್+ಅಂಬಿನ +ಮಳೆಯ +ಮನ್ನಿಸದೆ

ಅಚ್ಚರಿ:
(೧) ರೂಪಕದ ಪ್ರಯೋಗ – ರಾಯನ ಧುರದ ಧೀವಸಿಗಳು ನಿಹಾರದಲುರವಣಿಸಿದರು