ಪದ್ಯ ೩: ಕೌರವರ ಸೈನ್ಯವು ಎಷ್ಟು ಕ್ಷೀಣಿಸಿತ್ತು?

ಸೂಳವಿಸಿದುವು ಸನ್ನೆಯಲಿ ನಿ
ಸ್ಸಾಳ ದಳಪತಿ ಕುರುಬಲದ ದೆ
ಖ್ಖಾಳವನು ನೋಡಿದನು ತೂಗಾಡಿದನು ಮಣಿಶಿರವ
ಆಳು ನೆರೆದಿರೆ ನಾಲ್ಕುದಿಕ್ಕಿನ
ಮೂಲೆ ನೆರೆಯದು ಮುನ್ನವೀಗಳು
ಪಾಳೆಯದ ಕಡೆವೀಡಿಗೈದದು ಶಿವಶಿವಾಯೆಂದ (ಶಲ್ಯ ಪರ್ವ, ೨ ಸಂಧಿ, ೩ ಪದ್ಯ)

ತಾತ್ಪರ್ಯ:
ಸನ್ನೆಯಾದೊಡನೆ ರಣಭೇರಿಗಳು ಬಡಿದವು. ಸೇನಾಧಿಪತಿಯು ತನ್ನ ಸೈನ್ಯವನ್ನು ನೋಡಿ ತಲೆದೂಗಿ, ಈ ಮೊದಲು ನಮ್ಮ ಸೈನ್ಯಕ್ಕೆ ನಾಲ್ಕು ದಿಕ್ಕಿನ ಮೂಲೆಗಳೂ ಸಾಲದಾಗಿದ್ದವು, ಈಗಲಾದರೋ ರಣಭೂಮಿಯಿಂದ ಪಾಳೆಯದ ವರೆಗಾಗುವಷ್ಟು ಯೋಧರಿಲ್ಲ, ಶಿವ ಶಿವಾ ಎಂದುಕೊಂಡನು.

ಅರ್ಥ:
ಸೂಳವಿಸು: ಧ್ವನಿಮಾಡು; ಸನ್ನೆ: ಗುರುತು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ದಳಪತಿ: ಸೇನಾಧಿಪತಿ; ದೆಖ್ಖಾಳ: ಗೊಂದಲ; ನೋಡು: ವೀಕ್ಷಿಸು; ತೂಗಾಡು: ಅಲ್ಲಾಡು; ಮಣಿಶಿರ: ಕಿರೀಟ; ಮಣಿ: ಬೆಲೆಬಾಳುವ ರತ್ನ; ಆಳು: ಸೇವಕ; ನೆರೆ: ಗುಂಪು; ದಿಕ್ಕು: ದಿಸೆ, ದೆಸೆ; ಮೂಲೆ: ಕೊನೆ; ನೆರೆ: ಪಕ್ಕ, ಪಾರ್ಶ್ವ; ಮುನ್ನ: ಮೊದಲು; ಪಾಳೆಯ: ಬೀಡು, ಶಿಬಿರ; ಕಡೆ: ಕೊನೆ, ಪಕ್ಕ; ಐದು: ಬಂದು ಸೇರು;

ಪದವಿಂಗಡಣೆ:
ಸೂಳವಿಸಿದುವು +ಸನ್ನೆಯಲಿ +ನಿ
ಸ್ಸಾಳ +ದಳಪತಿ +ಕುರುಬಲದ +ದೆ
ಖ್ಖಾಳವನು +ನೋಡಿದನು +ತೂಗಾಡಿದನು +ಮಣಿಶಿರವ
ಆಳು +ನೆರೆದಿರೆ+ ನಾಲ್ಕು+ದಿಕ್ಕಿನ
ಮೂಲೆ +ನೆರೆಯದು +ಮುನ್ನವ್+ಈಗಳು
ಪಾಳೆಯದ +ಕಡೆವೀಡಿಗ್+ಐದದು +ಶಿವಶಿವಾಯೆಂದ

ಅಚ್ಚರಿ:
(೧) ಸೂಳ, ನಿಸ್ಸಾಳ,ದೆಖ್ಖಾಳ – ಪ್ರಾಸ ಪದಗಳು
(೨) ಕೌರವ ಸೈನ್ಯದ ವಿಸ್ತಾರ – ಆಳು ನೆರೆದಿರೆ ನಾಲ್ಕುದಿಕ್ಕಿನ ಮೂಲೆ ನೆರೆಯದು

ಪದ್ಯ ೨: ಸೂರ್ಯನು ಯಾವ ಯೋಚನೆಯಲ್ಲಿ ಹುಟ್ಟಿದನು?

ನೆಗ್ಗಿದನು ಗಾಂಗೇಯನಮರರೊ
ಳೊಗ್ಗಿದನು ಕಲಿದ್ರೋಣನೆನ್ನವ
ನಗ್ಗಳಿಕೆಗೂಣೆಯವ ಬೆರೆಸಿದನೆನ್ನ ಬಿಂಬದಲಿ
ಉಗ್ಗಡದ ರಣವಿದಕೆ ಶಲ್ಯನ
ನಗ್ಗಿಸುವನೀ ಕೌರವೇಶ್ವರ
ನೆಗ್ಗ ನೋಡುವೆನೆಂಬವೊಲು ರವಿಯಡರ್ದನಂಬರವ (ಶಲ್ಯ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಭೀಷ್ಮನು ನೆಗ್ಗಿಹೋದ, ದ್ರೋಣನು ದೇವತೆಗಳೊಡನೆ ಸೇರಿದನು. ನನ್ನ ಮಗನಿಗೆ ನನ್ನ ಸಂಗತಿಯನ್ನೇ ಹೇಳಿ ದುರ್ಬಲಗೊಳಿಸಿದನು. ಇಂದಿನ ಮಹಾಸಮರದಲ್ಲಿ ಶಲ್ಯನನ್ನು ಕಳೆದುಕೊಳ್ಳುವ ರೀತಿಯನ್ನು ನೋಡುತ್ತೇನೆ ಎಂದುಕೊಂಡನೋ ಎಂಬಂತೆ, ಸೂರ್ಯನು ಹುಟ್ಟಿದನು.

ಅರ್ಥ:
ನೆಗ್ಗು: ಕುಗ್ಗು, ಕುಸಿ; ಗಾಂಗೇಯ: ಭೀಷ್ಮ; ಅಮರ: ದೇವ; ಒಗ್ಗು: ಸೇರು; ಕಲಿ: ಶೂರ; ಅಗ್ಗಳಿಕೆ: ಶ್ರೇಷ್ಠ; ಊಣೆ: ನ್ಯೂನತೆ, ಕುಂದು; ಬೆರೆಸು: ಸೇರಿಸು; ಬಿಂಬ: ಕಾಂತಿ; ಉಗ್ಗಡ: ಉತ್ಕಟತೆ, ಅತಿಶಯ; ರಣ: ಯುದ್ಧರಂಗ; ನಗ್ಗು: ಕುಗ್ಗು, ಕುಸಿ; ಎಗ್ಗು: ದಡ್ಡತನ; ನೋಡು: ವೀಕ್ಷಿಸು; ರವಿ: ಸೂರ್ಯ; ಅಡರು: ಹೊರಬಂದ, ಮೇಲಕ್ಕೇರು; ಅಂಬರ: ಆಗಸ;

ಪದವಿಂಗಡಣೆ:
ನೆಗ್ಗಿದನು +ಗಾಂಗೇಯನ್+ಅಮರರೊಳ್
ಒಗ್ಗಿದನು +ಕಲಿದ್ರೋಣನ್+ಎನ್ನವನ್
ಅಗ್ಗಳಿಕೆಗ್+ಊಣೆಯವ +ಬೆರೆಸಿದನ್+ಎನ್ನ +ಬಿಂಬದಲಿ
ಉಗ್ಗಡದ +ರಣವಿದಕೆ +ಶಲ್ಯನನ್
ಅಗ್ಗಿಸುವನ್+ಈ+ ಕೌರವೇಶ್ವರನ್
ಎಗ್ಗ +ನೋಡುವೆನ್+ಎಂಬವೊಲು +ರವಿ+ಅಡರ್ದನ್+ಅಂಬರವ

ಅಚ್ಚರಿ:
(೧) ಬೆಳಗಾಯಿತು ಎಂದು ಹೇಳಲು – ರವಿಯಡರ್ದನಂಬರವ ಪದಗುಚ್ಛದ ಬಳಕೆ

ನುಡಿಮುತ್ತುಗಳು: ಶಲ್ಯ ಪರ್ವ ೨ ಸಂಧಿ

  • ರವಿಯಡರ್ದನಂಬರವ – ಪದ್ಯ  
  • ಚತುರ್ಬಲ ಹೊರಗೆ ನಿಂದುದು ಹೊಗೆದೆಗೆದ ಕೇಸುರಿಯ ತಿರುಳಂತೆ – ಪದ್ಯ  
  • ಸಾಗರ ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ – ಪದ್ಯ  
  • ತಾಯಿಮಳಲನು ತರುಬಿದಬುಧಿಯ ದಾಯಿಗರು ತಾವಿವರೆನಲು – ಪದ್ಯ  ೧೩
  • ರಣವೋಕರಿಸಿತರುಣಾಂಬುವನು ಗಜಹಯದ ಮೈಗಳಲಿ – ಪದ್ಯ  ೨೦
  • ಲವಣಿಗಳ ಲಾವಣಿಗೆಗಳ ಲಂಬನದ ಲಂಘನದ – ಪದ್ಯ  ೨೧
  • ಜಡಿವ ನಿಸ್ಸಾಳದಲಿ ಜಗ ಕಿವಿಗೆಡೆ – ಪದ್ಯ  ೨೩
  • ಅಪ್ಪಿದುದು ಕೆಂಧೂಳಿನೊಡ್ಡಿನ ದರ್ಪಣದ ತನಿರಕ್ತವೆರಡರ ದರ್ಪವಡಗದು – ಪದ್ಯ  ೨೮
  • ಅಳುಕಲರಿವುದೆ ಸಿಡಿಲ ಹೊಯ್ಲಲಿ ಕುಲಕುಧರವೀ – ಪದ್ಯ  ೩೦
  • ಕುಪಿತ ಯಮನುಬ್ಬರದ ಕೋಪವೊ ಕಾಲರುದ್ರನ ಹಣೆಯ ಹೆಗ್ಗಿಡಿಯೊ – ಪದ್ಯ  ೩೧
  • ಶರವಳೆಗೆ ಹಿಡಿ ಕೊಡೆಯ – ಪದ್ಯ  ೩೪
  • ಪಾಂಡವ ಬಲವ ಕೆದರಿತು ಕಲ್ಪಮೇಘದ ಹೊಲಿಗೆ ಹರಿದವೊಲಾಯ್ತು – ಪದ್ಯ  ೩೭
  • ಸರಳುಗಳ ಬಳಿಸರಳು ಬೆಂಬಳಿ ಸರಳ ಹಿಂದಣ ಸರಳುಗಳ ಪಡಿ ಸರಳ – ಪದ್ಯ  ೩೮
  • ಹನುಮನ ಹಳವಿಗೆಯ ರಥಹೊಳೆಯುತದೆ – ಪದ್ಯ  ೩೮
  • ಪ್ರಳಯದಿನದಲಿ ಪಂಟಿಸುವ ಸಿಡಿಲಿಳಿದುದೆನೆ – ಪದ್ಯ  ೪೧
  • ರಾಯನ ಧುರದ ಧೀವಸಿಗಳು ನಿಹಾರದಲುರವಣಿಸಿದರು – ಪದ್ಯ  ೪೨
  • ರುಧಿರದಕಡಲೊಳದ್ದಿದನುದ್ದಿದನು ಮಾರ್ಬಲದ ಗರ್ವಿತರ – ಪದ್ಯ  ೪೫
  • ಪರಬಲಕೆ ಜಾರುವ ಜಯಸಿರಿಯ ಮುಂದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು – ಪದ್ಯ  ೫೧
  • ಬಾಣಸೃಷ್ಟಿ ಕೃತಾವಧಾನವ ತೋರೆನುತ – ಪದ್ಯ  ೫೫
  • ಬರಿಯ ಬೊಬ್ಬಾಟವೊ ಶರಾವಳಿಯಿರಿಗೆಲಸವೇನುಂಟೊ – ಪದ್ಯ  ೫೬
  • ಸಿರಿಮುಡಿಗೆ ನೀರೆರೆವ ಪಟ್ಟ – ಪದ್ಯ  ೫೬
  • ಕೈಗಡಿಯನಂಬಿನ ಧಾರೆ ದಳ್ಳಿಸಿ ಕಿಡಿಗೆದರಿದವು – ಪದ್ಯ  ೫೭
  • ದಳಪತಿಯನದ್ದಿದನು ಪರಿಭವಮಯ ಸಮುದ್ರದಲಿ – ಪದ್ಯ  ೫೮
  • ದಳದ ಪದಹತಿಧೂಳಿಯಲಿ ಕತ್ತಲಿಸೆ ದೆಸೆ – ಪದ್ಯ  ೫೯
  • ವಿವಿಧ ಶಸ್ತ್ರಾವಳಿಯ ಧಾರಾಸಾರದಲಿ ಹೊನಲೆದ್ದುದರುಣಜಲ – ಪದ್ಯ  ೬೧
  • ತೆತ್ತಸಿದನಂಬಿನಲಿ ಜೋಡಿನ ಹತ್ತರಿಕೆಯಲಿ ಚಿಪ್ಪನೊಡೆದೊಳು ನೆತ್ತರೋಕುಳಿಯಾಡಿದವು – ಪದ್ಯ  ೬೨
  • ಭಾನುವಿನ ತಮದೊದವಿದನುಸಂಧಾನದಂತಿರೆ – ಪದ್ಯ  ೬೩

ಪದ್ಯ ೧: ದುರ್ಯೋಧನನ ಸ್ಥಿತಿ ಹೇಗಿತ್ತು?

ಒಳಗೆ ಢಗೆ ನಗೆ ಹೊರಗೆ ಕಳವಳ
ವೊಳಗೆ ಹೊರಗೆ ನವಾಯಿ ಡಿಳ್ಳಸ
ವೊಳಗೆ ಹೊರಗೆ ಸಘಾಡಮದ ಬಲುಬೇಗೆಯೊಳಗೊಳಗೆ
ಬಲುಹು ಹೊರಗೆ ಪರಾಭವದ ಕಂ
ದೊಳಗೆ ಕಡುಹಿನ ಕಲಿತನದ ಹಳ
ಹಳಿಕೆ ಹೊರಗೆ ಮಹೀಶ ಹದನಿದು ನಿನ್ನ ನಂದನನ (ಶಲ್ಯ ಪರ್ವ, ೨ ಸಂಧಿ, ೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ನಿನ್ನ ಮಗನ ಸ್ಥಿತಿಯನ್ನು ಕೇಳು, ಮನಸ್ಸಿನಲ್ಲಿ ಕಳವಲ, ಹೊರಗೆ ನಗೆ, ಒಳಗೆ ನಡುಕ, ಹೊರಗೆ ದರ್ಪ. ಒಳಗೆ ಬೇಗೆ ಹೊರಗೆ ಮಹಾಗರ್ವ, ಸೋಲಿನ ಅಳುಕು ಒಳಗೆ ಮಹಾಪರಾಕ್ರಮದ ದರ್ಪ ಹೊರಗೆ ಎಂದು ಸಂಜಯನು ಹೇಳಿದನು.

ಅರ್ಥ:
ಒಳಗೆ: ಅಂತರ್ಯ; ಢಗೆ: ಕಾವು, ದಗೆ; ನಗೆ: ಸಂತಸ; ಹೊರಗೆ: ಆಚೆ; ಕಳವಳ: ಗೊಂದಲ; ನವಾಯಿ: ಠೀವಿ; ಡಿಳ್ಳ: ಅಂಜಿಕೆ; ಸಘಾಡ: ವೇಗ, ರಭಸ; ಮದ: ಅಹಂಕಾರ; ಬೇಗೆ: ಬೆಂಕಿ, ಕಿಚ್ಚು; ಪರಾಭವ: ಸೋಲು; ಕಂದು:ಕಳಾಹೀನ; ಕಡುಹು: ಸಾಹಸ, ಹುರುಪು; ಕಲಿ: ಶೂರ; ಹಳಹಳಿ: ರಭಸ, ತೀವ್ರತೆ; ಮಹೀಶ: ರಾಜ; ಹದ: ಸ್ಥಿತಿ; ನಂದನ: ಮಗ;

ಪದವಿಂಗಡಣೆ:
ಒಳಗೆ +ಢಗೆ +ನಗೆ +ಹೊರಗೆ+ ಕಳವಳವ್
ಒಳಗೆ +ಹೊರಗೆ +ನವಾಯಿ +ಡಿಳ್ಳಸವ್
ಒಳಗೆ +ಹೊರಗೆ +ಸಘಾಡ+ಮದ +ಬಲುಬೇಗೆ+ಒಳಗೊಳಗೆ
ಬಲುಹು +ಹೊರಗೆ +ಪರಾಭವದ+ ಕಂದ್
ಒಳಗೆ +ಕಡುಹಿನ +ಕಲಿತನದ +ಹಳ
ಹಳಿಕೆ +ಹೊರಗೆ +ಮಹೀಶ +ಹದನಿದು +ನಿನ್ನ +ನಂದನನ

ಅಚ್ಚರಿ:
(೧) ಒಳಗೆ ಹೊರಗೆ ಪದಗಳ ಬಳಕೆ
(೨) ಒಳಗೆ – ೧-೩, ೫ ಸಾಲಿನ ಮೊದಲ ಪದ